ಹವ್ಯಕರ ಸಮ್ಮೇಳನ: ಅಪಾಯಕಾರಿ ಹೊರಳು

Date:

Advertisements
"ಆರ್‌ಎಸ್‌ಎಸ್ ಏನು ಹೇಳುತ್ತಿದೆಯೋ ಅದನ್ನು ಬೆಂಬಲಿಸುವ ಮಠಾಧೀಶರ ಮಾತುಗಳನ್ನು ಹವ್ಯಕ ಸಮುದಾಯವು ಬೆಂಬಲಿಸಬಾರದು.."

ಇದೇ ಮುಗಿದ ಡಿಸೆಂಬರ್ 27, 28, ಮತ್ತು 29- ಈ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕರ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ವಿದಿತವಾಗಿರುವಂಥದೇ. ಸಾಮಾನ್ಯವಾಗಿ ಈಚಿನ ದಿನಗಳಲ್ಲಿ ಜಾತಿ ಪ್ರಜ್ಞೆ ಹೆಚ್ಚಾಗುತ್ತಿದ್ದಂತೆ ಎಲ್ಲ ಜಾತಿ ಸಮುದಾಯದವರೂ ಒಂದಲ್ಲ ಒಂದು ರೀತಿಯ ಸಮ್ಮೇಳನಗಳನ್ನು ಮಾಡುವುದು ಕೂಡ ಸಾಮಾನ್ಯ ಸಂಗತಿಯೇ. ಜಾತಿ ಸಮ್ಮೇಳನಗಳು ಸರಿಯೋ ತಪ್ಪೋ ಈ ಚರ್ಚೆ ಈಚೆಗೆ ಅಪ್ರಸ್ತುತವಾಗಿಬಿಟ್ಟಿದೆ. ಒಂದಿಷ್ಟು ಪ್ರಗತಿಪರರು ಈ ಕುರಿತು ತಮ್ಮತಮ್ಮೊಳಗೇ ಮಾತಾಡಿಕೊಳ್ಳುತ್ತ ಜಾತ್ಯಸ್ಥರ ಸಮೂಹದಲ್ಲಿ ಅಸ್ಪೃಶ್ಯರಾಗುತ್ತಾ ಇರುವುದನ್ನು ಕೂಡ ಕಾಣಬಹುದಾಗಿದೆ. ಹೆಚ್ಚು ಹೆಚ್ಚು ಆಧುನಿಕರಾಗುತ್ತಲೇ ದೇಶದ ಆರ್ಥಿಕತೆ ಬಲಗೊಳ್ಳುತ್ತಿರುವಾಗಲೇ ದೇಶದ ಸಂಪತ್ತಿನಲ್ಲಿ ಸೌಲಭ್ಯದಲ್ಲಿ ತಮ್ಮತಮ್ಮ ಪಾಲನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮತ್ತು ರಾಜಕೀಯವಾಗಿ ತಾವು ಪ್ರಬಲರಾಗುವುದಕ್ಕಾಗಿಯೂ ಇಂತಹ ಜಾತಿ ಸಮ್ಮೇಳನಗಳು ನಡೆಯುತ್ತವೆ ಎಂದು ನನಗೆ ಅನ್ನಿಸುತ್ತದೆ. ಇಂತಹ ಜಾತಿ ಸಮ್ಮೇಳನಗಳಿಂದ ಸಮುದಾಯಗಳ ನಡುವಿನ ಸೌಹಾರ್ದಕ್ಕೆ ಆತಂಕ ಬರುವುದನ್ನು ಅಲ್ಲಗಳೆಯುವುದಕ್ಕೆ ಆಗುವುದಿಲ್ಲ. ಹೌದು, ಬೇರೆ ಜಾತಿಗಳ ಕುರಿತು ಬಹಿರಂಗವಾಗಿ ಉದಾರ ಧೋರಣೆ ತಾಳುತ್ತಲೇ ಒಳಗೊಳಗೇ ತಮ್ಮ ಜಾತಿಯ ಹಿತಕ್ಕಾಗಿ ಕಠೋರ ನೀತಿ ಅನುಸರಿಸುವುದೂ ಸುಳ್ಳಲ್ಲ. ಮೀಸಲಾತಿಯನ್ನು ಬೆಂಬಲಿಸದವರು ಅದರ ಸೌಲಭ್ಯ ಪಡೆದುಕೊಳ್ಳುವ ಸಮುದಾಯವನ್ನು ಹೊಟ್ಟೆಕಿಚ್ಚಿನಿಂದ ನೋಡುವುದು ಗುಟ್ಟೇನೂ ಅಲ್ಲ.

ಹವ್ಯಕರು ನಿಜವಾಗಿ ಒಂದು ಪೂರ್ಣ ಜಾತಿಯಲ್ಲ; ಬ್ರಾಹ್ಮಣ ಜಾತಿಯಲ್ಲಿ ತಮ್ಮದೇ ಆದ ಪ್ರತ್ಯೇಕ ಸಂಸ್ಕೃತಿಯನ್ನು (ಭಾಷೆ, ಆಚರಣೆ, ದೈವ, ಗುರುಮಠ) ಅನುಸರಿಸಿಕೊಂಡು ಬರುತ್ತಿರುವ ಒಂದು ಉಪ ಜಾತಿ ಎಂದೇ ಕರೆಯುತ್ತಾರೆ. ಹಾಗೆ ನೋಡಿದರೆ ಇವರು ಕಟುವಾದ ಮಡಿವಂತರಲ್ಲ. ಬೇರೆ ಉಪಜಾತಿ ಬ್ರಾಹ್ಮಣರು ಈ ಹಿಂದೆಲ್ಲ ನಾಯಿ ಸಾಕುತ್ತಿರಲಿಲ್ಲವಂತೆ, ನೇಗಿಲು ಹಿಡಿದು ಉಳುಮೆ ಮಾಡುತ್ತಿರಲಿಲ್ಲವಂತೆ, ಕೊಟ್ಟಿಗೆಯ ಸೆಗಣಿ ಬಾಚುತ್ತಿರಲಿಲ್ಲವಂತೆ (ಅದು ಅವರಲ್ಲಿ ನಿಷೇಧವಾಗಿತ್ತಂತೆ); ಆದರೆ ಹವ್ಯಕರು ಇದಕ್ಕೆಲ್ಲ ಅಪವಾದವೆಂಬಂತೆ ಇದನ್ನೆಲ್ಲ ಮಾಡುತ್ತಿದ್ದರು ಮತ್ತು ಈಗಲೂ ಮಾಡುತ್ತಾರೆ (ಪೂರ್ಣಚಂದ್ರ ತೇಜಸ್ವಿಯವರು ಒಮ್ಮೆ ನಮ್ಮೊಂದಿಗಿನ ಖಾಸಗಿ ಮಾತುಕತೆಯಲ್ಲಿ ಈ ವಿಚಾರವಾಗಿ ಮೆಚ್ಚುಗೆಯ ಮಾತನ್ನೇ ಆಡಿದ್ದರು). ಹೆಚ್ಚಿನವರು ಕೃಷಿಕರಾಗಿದ್ದರು. ನನ್ನ ತಂದೆ ಹೇಳುತ್ತಿದ್ದರು, (ನಾನು 70+ ) ಮಡಿವಂತ ಬ್ರಾಹ್ಮಣರ ಮನೆಗಳಲ್ಲಿ ಊಟ ಮಾಡಿದರೆ ಊಟದ ಎಂಜಲು ಬಾಳೆ ತೆಗೆಯಬೇಕಾಗಿತ್ತಂತೆ. ಹಾಗೆ ನೋಡಿದರೆ ಇತರ ಉಪಜಾತಿಯವರು ಇವರನ್ನು ಪರಿಶುದ್ಧರಲ್ಲ ಎಂಬುದಕ್ಕಾಗಿ ಬ್ರಾಹ್ಮಣರು ಎಂದೇ ಗಣ ಮಾಡುತ್ತಿರಲಿಲ್ಲವಂತೆ. ಹೆಚ್ಚು ಮಡಿವಂತರಾಗಿರದಿದ್ದ ಹವ್ಯಕರು ಬರುಬರುತ್ತ ಹೆಚ್ಚು ಪ್ರಗತಿಶೀಲರಾಗಿದ್ದರು ಎಂದು ಹೇಳಲಾಗುತ್ತಿತ್ತು. ಈ ಸಮುದಾಯದಲ್ಲಿ ಸಮಾಜವಾದವನ್ನು ಬೆಂಬಲಿಸುವ ಅನೇಕ ಯುವಕರು ಈ ಹಿಂದೆಯೇ ಇದ್ದರು.

ಇದನ್ನೂ ಓದಿರಿ: ಮನಮೋಹನ್ ಸಿಂಗ್ ಎಂಬ ‘ಕುರಿಮರಿ’ಯ ಮುಂದೆ ಸೋತಿದ್ದ ‘ಉಕ್ಕಿನ ಮನುಷ್ಯ’ ಆಡ್ವಾಣಿ

Advertisements

ಅಷ್ಟೇನೂ ಸಿರಿವಂತರಾಗಿರದಿದ್ದ ಇವರು ತಮ್ಮ ಸಣ್ಣ ಕೃಷಿ ಕ್ಷೇತ್ರದಲ್ಲಿ (ಮುಖ್ಯವಾಗಿ ಅಡಕೆ) ಅಚ್ಚುಕಟ್ಟಾಗಿ ಬದುಕುತ್ತಿದ್ದವರಿಗೆ ಆರ್ಥಿಕ ಉದಾರೀಕರಣವು ಇದ್ದಕ್ಕಿದ್ದಂತೆ ಈ ಸಮುದಾಯಕ್ಕೆ ಸಂಪತ್ತಿನ ಹೆಬ್ಬಾಗಿಲೇ ತೆರೆದಂತೆ ಆಯಿತು ಎಂದರೆ ತಪ್ಪಲ್ಲ. ವಿದ್ಯಾವಂತರಾಗುತ್ತ ಹೋದರು, ಉದ್ಯೋಗಗಳು ಹೆಚ್ಚಾಗುತ್ತ ಹೋಗಿ ಇವರು ದೇಶ ವಿದೇಶಗಳಲ್ಲಿ ತಮ್ಮ ಜೀವನವನ್ನು ವಿಸ್ತರಿಸಿಕೊಳ್ಳುತ್ತ ಬಂದರು. ಹಾಗೆಯೇ ಮುಕ್ತ ಮಾರುಕಟ್ಟೆಯ ವಿಸ್ತರಣೆಯ ಕಾರಣದಿಂದ ತಾವು ಬೆಳೆಯುವ ಅಡಕೆಯ ಬೆಲೆ ಹೆಚ್ಚುತ್ತಾ ಹೋಯಿತು. ಸ್ವಾರಸ್ಯದ ವಿಚಾರವೇನೆಂದರೆ ಯಾರ ಕಾರಣದಿಂದ ಇವರಿಗೆ ಈ ವಿಸ್ತರಣೆ ಸಾಧ್ಯವಾಯಿತೋ ಆ ಮನಮೋಹನ ಸಿಂಗರನ್ನು ಇವರು ತಿರಸ್ಕರಿಸತೊಡಗಿಬಿಟ್ಟರು. ಒಂದು ಕಾಲದಲ್ಲಿ ಕಾಂಗ್ರೆಸ್ಸಿಗರಾಗಿದ್ದ ಈ ಸಮುದಾಯದ ಹೆಚ್ಚಿನವರು ಕೇಸರಿಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳತೊಡಗಿದರು. ನಡುವೆ ಒಂದಿಷ್ಟು ಕಾಲ ರಾಮಕೃಷ್ಣ ಹೆಗಡೆಯವರ ಕಾರಣದಿಂದ ಜನತಾ ಪಕ್ಷವನ್ನು ಬೆಂಬಲಿಸುತ್ತಿದ್ದರು. ಮನಮೋಹನ ಸಿಂಗರ ವಿರುದ್ಧ ನಡೆದ ಭ್ರಷ್ಟಾಚಾರದ ಆರೋಪದ ಸಂಚಿಗೆ (ಈ ಆರೋಪಗಳು ಯಾವುದೂ ನ್ಯಾಯಾಲಯದಲ್ಲಿ ಸಾಬೀತಾಗಲಿಲ್ಲ) ಅವರಿಂದ ಲಾಭ ಪಡೆದವರೇ ಹೆಚ್ಚಿನವರು ಭಾಗವಾಗಿಬಿಟ್ಟರು (ವಿನಾಯಿತಿಗಳು ಎಲ್ಲ ಕಡೆಯೂ ಇರುತ್ತದೆ).

ಇದೆಲ್ಲ ಎಲ್ಲಿಗೆ ಬಂದು ನಿಂತಿದೆ ಎಂದರೆ ಈಗ ಆರ್‌ಎಸ್‌ಎಸ್ ಏನು ಹೇಳತೊಡಗಿದೆಯೋ ಅದಕ್ಕೆ ಧ್ವನಿ ಕೊಡತೊಡಗಿದ್ದಾರೆ. ಸಂವಿಧಾನ ಶಿಲ್ಪಿ ಎಂದು ಗೌರವಿಸುವ ಅಂಬೇಡ್ಕರ್ ಕುರಿತು ಆದರವಿಲ್ಲ. ಯಾಕೆಂದರೆ ಅವರು ಮೀಸಲಾತಿ ಮಾಡಿಬಿಟ್ಟರು. ವಾಸ್ತವವಾಗಿ ನಾನು ಅಭ್ಯಾಸ ಮಾಡಿದಂತೆ, ಖಾಸಗೀ ಉದ್ಯಮ ಸಂಸ್ಥೆಗಳನ್ನು ಬೆಂಬಲಿಸುವ (ಹಾಗೆ ನೋಡಿದರೆ ಇದು ಮನಮೋಹನ ಸಿಂಗರ ಆರ್ಥಿಕ ನೀತಿಯ ಮುಂದುವರಿದ ಭಾಗವೇ) ಬಿಜೆಪಿ ಈ ಸಮುದಾಯದ ಹೆಚ್ಚಿನವರಿಗೆ ಇಷ್ಟ. ರಾಜಕೀಯವಾಗಿ ಅವರಿಗೇ ಇವರ ಬೆಂಬಲ ದೊರಕುತ್ತದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರವು ಖಾಸಗಿ ವ್ಯವಸ್ಥೆಯಲ್ಲಿ ಮೀಸಲು ನೀತಿ ತರುವುದನ್ನು ವಿರೋಧಿಸುವವರಲ್ಲಿ ಈ ಸಮುದಾಯದ ಹೆಚ್ಚಿನವರು ಇದ್ದಾರೆ. ಒಂದು ಕಡೆ ಆರ್ಥಿಕ ಆಧಾರದ ಶೇ.10ರ ಮೀಸಲಾತಿ, ಉನ್ನತ ವ್ಯಾಸಂಗ (ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ)ಗಳಲ್ಲಿನ ಮೀಸಲು ನೀತಿಯನ್ನು ಬೆಂಬಲಿಸುವ ಇವರೇ ಜಾತಿ ಮೀಸಲಾತಿಯನ್ನು ವಿರೋಧಿಸುವ ವೈರುಧ್ಯ ಕಾಣುತ್ತದೆ. ಮೊನ್ನೆ ನಡೆದ ಸಮ್ಮೇಳನದಲ್ಲಿ ಸಂವಿಧಾನವನ್ನು ಗೌರವಿಸುವ ಬಗ್ಗೆ ಅನೇಕ ನಾಯಕರು ಮಾತನಾಡಿ, ‘ಕೈಯಲ್ಲಿ ಕೆಂಪು ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಇದೇ ಸಂವಿಧಾನದಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರವು ಇಲ್ಲಿಯವರೆಗೂ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಈ ಮೀಸಲಾತಿಯನ್ನು ಜಾರಿ ಮಾಡಿಲ್ಲ. ಬ್ರಾಹ್ಮಣರು ಯಾವುದನ್ನೂ ಕೇಳದಿರುವುದರಿಂದಲೇ ಹೀಗೆ ಆಗುತ್ತಿದೆ’ ಎಂಬುದಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರು (ಇವರು ಹವ್ಯಕರಲ್ಲ) ಹೇಳುತ್ತಾರೆ. ‘ಸಂವಿಧಾನದ ಕೆಂಪು ಪುಸ್ತಕ’ದ ಕುರಿತು ಇವರು ವ್ಯಂಗ್ಯ ಮಾಡಿದ್ದಾರೆಂಬುದು ಕಾಣುತ್ತದೆ, ಅದರರ್ಥ ಅಂಬೇಡ್ಕರ್ ಸಂವಿಧಾನದ ಬಗೆಗೆ ಇವರಲ್ಲಿ ಗೌರವದ ಕೊರತೆ ಕಾಣಿಸುತ್ತದೆಯಷ್ಟೆ.

ಇದೀಗ ಬೆಂಗಳೂರಿನಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಈ ಸಮುದಾಯದ ಇಬ್ಬರು ಮಠಾಧೀಶರು ಪಾಲ್ಗೊಂಡಿದ್ದರು. ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರರು, ‘ಹವ್ಯಕರು ಅಳಿದುಹೋಗುತ್ತಿದ್ದಾರೆ. ಈ ಸಮುದಾಯದ ಉಳಿವಿಗೆ ಎರಡಕ್ಕಿಂತ ಹೆಚ್ಚು ಮಕ್ಕಳ ಪಡೆಯುವ ಅಗತ್ಯವಿದೆ’ ಎಂದು ಕರೆಕೊಟ್ಟಿದ್ದಾರೆ. ಹಾಗೆಯೇ ಮತ್ತೊಬ್ಬರಾದ ಸ್ವರ್ಣವಲ್ಲಿ ಮಠಾಧೀಶರು, ‘ಜನಸಂಖ್ಯೆ ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆ, ನೈತಿಕತೆಯ ಪತನದಂತಹ ಸಮಸ್ಯೆಗಳನ್ನು ಹವ್ಯಕ ಸಮುದಾಯವೂ ಎದುರಿಸುತ್ತಿದೆ… ಧರ್ಮ ಸಮ್ಮತವಲ್ಲದ ವಿಧಾನದಿಂದ ಶರೀರ ಮತ್ತು ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ. ಅದಕ್ಕೆ ವಿಜ್ಞಾನ ಸಮ್ಮತಿ ಸೂಚಿಸುತ್ತಿದೆ. ಈ ವಿಜ್ಞಾನವು ಅಧರ್ಮದ ಮಾರ್ಗದಲ್ಲಿ ಸಾಗುವ ದಾರಿ ತೋರಿಸುತ್ತಿದೆ. ಹೀಗಾಗಿ ಮಕ್ಕಳು ದಾರಿ ತಪ್ಪಬಾರದೆಂದರೆ ಅವರಿಗೆ ಬೇಗನೇ ಮದುವೆ ಮಾಡಿಬಿಡಬೇಕು. ಎಂದರೆ ಹೆಣ್ಣುಮಕ್ಕಳಿಗೆ 18 ಮತ್ತು ಗಂಡು ಮಕ್ಕಳಿಗೆ 21ರೊಳಗೆ ಮದುವೆ ಮಾಡುವುದೇ ಪರಿಹಾರ’ ಎಂದು ಹೇಳಿದ್ದಾರೆ.

ಮಕ್ಕಳಿಗೆ ಬೇಗ ಮದುವೆ ಮಾಡಬೇಕು ಎಂದು ಬಿಜೆಪಿಯ ಯಾರೋ ಮಹಾನುಭಾವರೊಬ್ಬರು ಇತ್ತೀಚೆಗೆ ಹೇಳಿದ ನೆನಪು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂಬ ಮಾತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತರು ಈಚೆಗೆ ಹೇಳಿದ್ದು ಇಲ್ಲಿ ಮರುದನಿಯಾಗಿದೆ. ಒಂದು ಕಡೆಯಲ್ಲಿ ಮಾರ್ಕೆಟ್ ಇಕಾನಮಿಯ ಕಾರಣದಿಂದ ಲಾಭ ಪಡೆದುಕೊಂಡು ನವ ಶ್ರೀಮಂತರಾಗಿರುತ್ತಲೇ, ದೊರಕಿದ ಆರ್ಥಿಕ ಅನುಕೂಲತೆಯಿಂದಾಗಿ ಆಧುನಿಕ ಸಕಲೆಲ್ಲ ಸೌಲಭ್ಯಗಳನ್ನು ಉಪಯೋಗಿಸುತ್ತ ತಮಗೆ ಸರ್ಕಾರವೇ ಬೇಡ ಎಂಬಂತಿರುವ ಹೆಚ್ಚಿನವರು ಇರುವ ಈ ಸಮುದಾಯದವರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಕರೆ ಕೊಡುತ್ತಿದ್ದಾರೆ. ಮತ್ತೊಬ್ಬರು, ಹವ್ಯಕ ಯುವಕರು ನೈತಿಕವಾಗಿ ಪತನಗೊಂಡಿದ್ದಾರೆ ಎಂಬರ್ಥದ ಮಾತುಗಳನ್ನು ಆಡುತ್ತಿದ್ದಾರೆ. ಈ ಮಾತುಗಳನ್ನು ನೇರವಾಗಿ ಕೇಳಿಸಿಕೊಂಡಿದ್ದ ಸಭೆಯಲ್ಲಿದ್ದವರು ಹೇಗೆ ಮೌನವಾಗಿದ್ದರು ಎಂಬುದೇ ನನಗೆ ಅಚ್ಚರಿ. ಮತ್ತು ವಿಜ್ಞಾನದ ಕುರಿತು ಕೂಡ ಅಪ್ರಬುದ್ಧ ಮಾತುಗಳನ್ನು ಆಡಿರುವುದನ್ನು ಯಾರಾದರೂ ಹೇಗೆ ಸಹಿಸಿಕೊಂಡಾರು? ಹವ್ಯಕರು ಬುದ್ಧಿವಂತರು ಎಂದು ಹೆಮ್ಮೆ ಪಡುತ್ತಿದ್ದವರ ಮಠಾಧೀಶರು ಹೇಗೆ ಇಂತಹ ಮಾತುಗಳನ್ನು ಆಡಬಲ್ಲರು?

ಹವ್ಯಕ

ಮಾರ್ಕೆಟ್ ಆಧಾರಿತ ಆರ್ಥಿಕತೆ ಒಂದು ಕಡೆ ದ್ರವ್ಯವನ್ನು ವಿಜೃಂಭಿಸುತ್ತಲೇ ಧರ್ಮಜಾತಿಗಳನ್ನೂ ವಿಜೃಂಭಿಸುತ್ತದೆ ಎಂಬುದು ಇಂತಹ ಉದಾಹರಣೆಗಳಿಂದಾಗಿ ಅಭ್ಯಾಸ ಮಾಡಬಹುದು. ರಾಜಕೀಯ ಕಾರಣದಿಂದಾಗಿ ಸುಮಾರಾಗಿ ಧರ್ಮದ ಅಮಲು ಹತ್ತಿಸಿಕೊಂಡಿರುವ ಹವ್ಯಕ ಸಮುದಾಯದ ಹೆಚ್ಚಿನವರು ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುವವರು. ಮೀಸಲಾತಿಯೇ ಬೇಡ ಎಂದು ಆಶಿಸುವವರು. ಒಂದು ಕಾಲದಲ್ಲಿ ಉದಾರರೂ, ಕಟು ಜಾತಿವಾದಿಗಳಲ್ಲದವರೂ, ಮೃದು ಸ್ವಭಾವದವರೂ, ಶ್ರಮಿಕರೂ ಆಗಿದ್ದವರರಲ್ಲಿ ಈಗ ನೋಡಿದರೆ ತದ್ವಿರುದ್ಧದ ಮಾತು ವರ್ತನೆಗಳು ಕಾಣಿಸುತ್ತದೆ. ಹೆಚ್ಚುಮಕ್ಕಳನ್ನು ಪಡೆಯಿರಿ ಎಂದರೆ ದೇಶದ ಕೌಟಂಬಿಕ ನಿಯಮಕ್ಕೆ ವಿರುದ್ಧವಾದುದು. ಬೇಗ ಮದುವೆ ಮಾಡಿ ಎಂಬುದು ಕೂಡ ಅದೇ ಆಗಿದೆ. ನೈತಿಕ ಪತನವನ್ನು ಕಾರಣವಾಗಿ ಕೊಡುವ ಮಾತುಗಳು ಒಂದು ಸಮುದಾಯದ ಯುವಕರನ್ನು ಅನುಮಾನದಿಂದಲೇ ನೋಡುವಂತಿದೆ. ತಮ್ಮ ಸಮುದಾಯದ ಜನಸಂಖ್ಯೆಯ ಹೆಚ್ಚಳದಿಂದ ಪ್ರಯೋಜನಕ್ಕಿಂತ ಕುಟುಂಬಗಳಲ್ಲಿ ಕಷ್ಟವೇ ಹೆಚ್ಚಾಗುತ್ತದೆ.

ಇದನ್ನೂ ಓದಿರಿ: ದೇಶ ಕಂಡ ಪರಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್

ಮಠಾಧೀಶರ ಬಗೆಗೆ ಗೌರವ ಇರಿಸಿಕೊಂಡಿದ್ದರೆ, ಅದು ಇರಲಿ, ಅದೇನು ಸಮಸ್ಯೆಯಲ್ಲ. ಆದರೆ ದೇಶದ ಭಾವನೆಗಳಿಗೆ ವಿರುದ್ಧವಾದ, ನಿಯಮಗಳಿಗೆ ವಿರುದ್ಧವಾದ ಮಾತುಗಳನ್ನು ಯಾವ ಕಾರಣಕ್ಕೂ ಬೆಂಬಲಿಸಬಾರದು. ವಿಜ್ಞಾನವನ್ನು ತಮ್ಮ ಸಮರ್ಥನೀಯವಲ್ಲದ ವಾದಕ್ಕೆ ಉಪಯೋಗಿಸಿಕೊಳ್ಳಬಾರದು. ಯಾವುದೇ ರಾಜಕೀಯ ವ್ಯವಸ್ಥೆಯ ಮಾನಸಿಕ ಗುಲಾಮರಂತೆ ಕೂಡ ಇರಬಾರದು. ಅದರಲ್ಲೂ ಆರ್‌ಎಸ್‌ಎಸ್ ಏನು ಹೇಳುತ್ತಿದೆಯೋ ಅದನ್ನು ಬೆಂಬಲಿಸುವ ಮಠಾಧೀಶರ ಮಾತುಗಳನ್ನು ಸಮುದಾಯವು ಬೆಂಬಲಿಸಬಾರದು. ಇದೆಲ್ಲ ಹೇಗಾಗಿದೆ ಎಂದರೆ ನಾವು ಬೆಳೆಯಬೇಕು ಎಂದರೆ ನಮ್ಮ ಸಂಖ್ಯೆ ಹೆಚ್ಚಾಗಬೇಕು ಎಂಬಂತಿದೆ. ದಯವಿಟ್ಟು ಇಂತಹ ಅಭಿಪ್ರಾಯಗಳನ್ನು ಖಂಡಿಸಿ. ಈ ಮಾತುಗಳು ದೇಶದ ಮತ್ತು ಕುಟುಂಬದ ಹಿತದ ಮಾತುಗಳೇ ಅಲ್ಲ. ಮಕ್ಕಳನ್ನು ಪಡೆಯುವುದು ಸಂತತಿಯ ಮುಂದುವರಿಕೆಗೇ ಹೊರತು ಮತ್ತೊಂದು ಸಮುದಾಯದ ವಿರುದ್ಧ ಯುದ್ಧ ಮಾಡುವುದಕ್ಕೋ ಪೈಪೋಟಿ ಮಾಡಿ ಗೆಲ್ಲುವುದಕ್ಕೋ ಅಲ್ಲ.

ಹವ್ಯಕ ಸಮುದಾಯದಲ್ಲಿರುವ ಕಡಿಮೆ ಸಂಖ್ಯೆಯವರೇ ಆಗಿದ್ದರೂ ಪ್ರಗತಿಪರ ವಿಚಾರವಿರಿಸಿಕೊಂಡಿರುವ ಅನೇಕರ ಮನಸ್ಸಿಗೆ ಇದರಿಂದ ಘಾಸಿಯಾಗಿದೆ ಮತ್ತು ಇದೆಲ್ಲ ತಪ್ಪುದಾರಿ. ಉನ್ನತ ಗುರಿಗಾಗಿ ಉನ್ನತ ದಾರಿಯ ಕುರಿತು ಮಾತನಾಡುವ ಮಹಾತ್ಮ ಗಾಂಧಿಯೂ ಇವರಿಗೆ ಬೇಡವಾಗಿದ್ದಾರೆ. ಮೀಸಲಾತಿಯ ಕಾರಣದಿಂದ ಅಂಬೇಡ್ಕರ್ ಕೂಡ ಇವರಿಗೆ ಬೇಡವಾಗಿದ್ದಾರೆ. ಅಂದರೆ ಹವ್ಯಕರಲ್ಲಿ ಹೊಸದೊಂದು ವಿಚಾರವಂತಿಕೆ ಆರಂಭವಾಗಿದೆ ಎಂದು ತಿಳಿಯಬಹುದು. ಆದರೆ ಇದು ಅಪಾಯಕಾರಿಯಾಗಿದೆ.
ಇಷ್ಟಾದರೂ ಹವ್ಯಕರು ಬದಲಾಗುತ್ತಿರುವುದು ನಿಜವಾದರೂ ಮಠಾಧೀಶರ ಈ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ನಡೆಸಿಕೊಡುತ್ತಾರೆಂದಂತೂ ನಾನು ನಂಬುವುದಿಲ್ಲ! ಎಷ್ಟೆಂದರೂ ಅವರು ಬುದ್ಧಿವಂತರಲ್ಲವೇ?

(ಹಿರಿಯ ಪತ್ರಕರ್ತ ಅ.ರಾ.ಶ್ರೀನಿವಾಸ ಅವರು ಹವ್ಯಕ ಸಮುದಾಯದವರೂ ಹೌದು)

srinivas
ಅ.ರಾ. ಶ್ರೀನಿವಾಸ
+ posts

ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬದವರಾದ ಅ.ರಾ.ಶ್ರೀನಿವಾಸ ಅವರು ಮೈಸೂರು ವಿ.ವಿ. (ಕೊಣಾಜೆ ಕೇಂದ್ರ) ಯಿಂದ ಕನ್ನಡ ಎಂ.ಎ. ಪದವಿ ಪಡೆದುಕೊಂಡವರು. 'ಮಣ್ಣಿನ ವಾಸನೆ' ಎಂಬ ವಾರಪತ್ರಿಕೆಯನ್ನು ಅನೇಕ ವರ್ಷ ನಡೆಸಿದವರು. ರಂಗ ನಟ. ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಲ್ಲದೇ ಸಾಹಿತ್ಯದಲ್ಲಿಯೂ ಸಕ್ರಿಯರು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನಿತರಾದವರು. ಇಲ್ಲಿಯವರೆಗೆ 18 ಕೃತಿಗಳನ್ನು ಪ್ರಕಟಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅ.ರಾ. ಶ್ರೀನಿವಾಸ
ಅ.ರಾ. ಶ್ರೀನಿವಾಸ
ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬದವರಾದ ಅ.ರಾ.ಶ್ರೀನಿವಾಸ ಅವರು ಮೈಸೂರು ವಿ.ವಿ. (ಕೊಣಾಜೆ ಕೇಂದ್ರ) ಯಿಂದ ಕನ್ನಡ ಎಂ.ಎ. ಪದವಿ ಪಡೆದುಕೊಂಡವರು. 'ಮಣ್ಣಿನ ವಾಸನೆ' ಎಂಬ ವಾರಪತ್ರಿಕೆಯನ್ನು ಅನೇಕ ವರ್ಷ ನಡೆಸಿದವರು. ರಂಗ ನಟ. ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಲ್ಲದೇ ಸಾಹಿತ್ಯದಲ್ಲಿಯೂ ಸಕ್ರಿಯರು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನಿತರಾದವರು. ಇಲ್ಲಿಯವರೆಗೆ 18 ಕೃತಿಗಳನ್ನು ಪ್ರಕಟಿಸಿದ್ದಾರೆ.

3 COMMENTS

  1. Congress aga idda hage iddidre havyakaroo irtidru.Eega namma alivu ulivina paristithi bandaga bere dari bakagutte.Arthika meesalati 10% brahmanarige matra alla adu General category ge.Meesalati bagge matanada didre chanagirutte.

  2. ತುಂಬಾ ಮೃಧುವಾಗಿ, ಸೂಕ್ಷ್ಮವಾಗಿ ವಿಷಯ ಮಂಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಾವು ಇಸ್ರೇಲ್ ಗಳಂತೆ,ಯಹೋದಿಗಳಂತೆ ಎಂದು ವಿ ಭಟ್ಟರು ಹೇಳಿದ್ದು ಇಲ್ಲಿ ಪ್ರಸ್ತಾಪಿಸಲಾಗಿಲ್ಲ. ವಿ.ಭಟ್ಟರ ಹೇಳಿಕೆಯಲ್ಲಿ ಇಸ್ರೇಲಿಗಳಂತೆ ಎಂಬುದನ್ನು ಭಾಗಶಃ ನಾಗೇಶ್ ಹೆಗಡೆ ಒಪ್ಪಿದ್ದರೂ, ಇಸ್ರೇಲಿಗಳ ಉಗ್ರವಾದವನ್ನು ನಾಗೇಶ್ ಹೆಗಡೆ ತಿರಸ್ಕರಿಸಿದ್ದಾರೆ. ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X