ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟದಿಂದ ಜಲಾಶಯಗಳು ಭರ್ತಿಯಾಗಿವೆ. ಜೂನ್‌ನ ಮುಂಗಾರು ಮಳೆಗೆ ರೈತರು ಬಿತ್ತನೆ ಆರಂಭಿಸಿದರೂ, ಜುಲೈ ಹೊತ್ತಿಗೆ ಮಳೆ ಮುಗಿಲು ಮುಟ್ಟಿದ ಪರಿಣಾಮ ಬೆಳೆ ಬತ್ತತೊಡಗಿದೆ. ರೈತರ ಆತಂಕ, ಭೀತಿ ಯಥಾರೀತಿ...
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದ್ದು ಹಲವು ಜಿಲ್ಲೆಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣದ ಕೆಲ ಶಾಲೆಗಳಿಗೆ ರಜೆ ನೀಡಲಾಗಿದೆ. ಜಲಾಶಯಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆ ಸೃಷ್ಟಿಸಿರುವ ಅವಾಂತರದಿಂದ ಹಲವೆಡೆ ಗುಡ್ಡ ಕುಸಿತ, ಮನೆ ಕುಸಿತ, ಬೆಳೆ ಹಾನಿ ಸೇರಿದಂತೆ ಜನಜೀವನ ಅಸ್ತವ್ಯಸ್ತವಾಗಿದೆ. ಏತನ್ಮಧ್ಯೆ ಬಯಲುಸೀಮೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಂಡುಬರುತ್ತಿದೆ.
ಮಲೆನಾಡು ಭಾಗಗಳಲ್ಲಿ ನಿರಂತರ ಮಳೆಯಿಂದ ಬೆಳೆ ಹಾನಿಯಾಗಿದ್ದರೆ, ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳು ಮಳೆ ಕೊರತೆಯಿಂದ ಬಳಲುತ್ತಿವೆ. ಬೀದರ್, ಕೋಲಾರ, ಬಳ್ಳಾರಿ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಸ್ಥಿತಿ ಗಂಭೀರವಾಗಿದೆ. ಲಕ್ಯಾ, ಕ್ಯಾತನಬೀಡು, ಕಣಿವೆಹಳ್ಳಿ, ದೇವಗೊಂಡನಹಳ್ಳಿ, ಸಿಂದಿಗೆರೆ, ಹುಲಿಕೆರೆ, ಕೇತಮಾರನಹಳ್ಳಿ, ಕಬ್ಬಿಗರಹಳ್ಳಿ, ಶಿರಬಡಿಗೆ, ಬೆಳವಾಡಿ, ಎಸ್.ಬಿದರೆ, ಸ್ವಾಮಿಕಟ್ಟೆ, ಜೋಡಿ ಲಿಂಗದಹಳ್ಳಿ, ಚಟ್ನಹಳ್ಳಿ, ಅಂಬಳೆ, ಕನ್ನೇನಹಳ್ಳಿ, ಬಂಡೀಹಳ್ಳಿ, ಕುರುವಂಗಿ, ಮಲ್ಲೇದೇವರಹಳ್ಳಿ, ಹರಿಹರದಳ್ಳಿ, ನೆಟ್ಟೆಕೆರೆಹಳ್ಳಿ, ಸಗನಿಪುರ ಹಾಗೂ ಕಳಸಾಪುರ ಸುತ್ತಮುತ್ತ ಇದೇ ಪರಿಸ್ಥಿತಿ ಇದೆ. ಹಾಸನದ ಬಾಣಾವರ, ಜಾವಗಲ್‌ನಲ್ಲೂ ಮಳೆ ಇಲ್ಲ.
ಜೂನ್‌ನಲ್ಲಿ ಮುಂಗಾರಿನ ದೆಸೆಯಿಂದ ರೈತರು ಬಿತ್ತನೆ ಆರಂಭಿಸಿದರೂ, ಜುಲೈ ಹೊತ್ತಿಗೆ ಮಳೆ ಮುಗಿಲು ಮುಟ್ಟಿದ ಪರಿಣಾಮ ಬೆಳೆ ನಾಶವಾಗುವ ಹಂತಕ್ಕೆ ಬಂದಿವೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದ ರೈತರು ಬಿತ್ತಲು ಸಿದ್ಧವಾಗಿದ್ದರೂ ಮಳೆ ಇಲ್ಲದೆ ಬಿತ್ತನೆ ಮಾಡದೆ ಮಳೆಗಾಗಿ ಕಾದು ಕುಳಿತಿದ್ದಾರೆ. ಕೋಲಾರದಲ್ಲಿ ಶೇ. 3.2 ಮತ್ತು ಚಿಕ್ಕಬಳ್ಳಾಪುರದಲ್ಲಿ ಶೇ.9.5ರಷ್ಟು ಬಿತ್ತನೆಯಷ್ಟೇ ನಡೆದಿದೆ.

ಮಳೆ ಇಲ್ಲದಿದ್ದರೂ ಸದ್ಯಕ್ಕೆ ಕುಡಿಯುವ ನೀರು ಮತ್ತು ಜಾನುವಾರು ಮೇವಿಗೆ ತಕ್ಷಣದ ತೊಂದರೆ ಇಲ್ಲ ಎನ್ನುವುದು ತಾತ್ಕಾಲಿಕ ಸಮಾಧಾನ. ಆದರೆ ಮುಂದಿನ ದಿನಗಳಲ್ಲಿ ಈ ಸ್ಥಿತಿ ಮುಂದುವರಿದರೆ, ಬರದ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಸಕಲೇಶಪುರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಅತಿವೃಷ್ಟಿ ಸಂಭವಿಸುತ್ತಿರುವಾಗ, ಅದರ ಹತ್ತಿರವಿರುವ ಜಿಲ್ಲೆಗಳೇ ಮಳೆಗಾಗಿ ತವಕಿಸುತ್ತಿರುವುದು ‘ಅನಿಯಮಿತ ಹವಾಮಾನ ಮಾದರಿ’ಯ ತೀಕ್ಷ್ಣ ಉದಾಹರಣೆಯಾಗಿದೆ. ರೈತರ ಆತಂಕ ಬೆಳೆ ನಷ್ಟವಷ್ಟೇ ಅಲ್ಲ, ಅವರ ಆರ್ಥಿಕತೆಯ ಬುನಾದಿಗೂ ಧಕ್ಕೆಯಾಗಿರುವುದು ಸ್ಪಷ್ಟ. ಮುಂಗಾರು ಪೂರ್ವದಲ್ಲಿ ಮಳೆ ಅಬ್ಬರಿಸಿದ್ದು ಬಿಟ್ಟರೆ ಮತ್ತೆ ಈ ಭಾಗಕ್ಕೆ ಮಳೆಯೇ ಬಂದಿಲ್ಲ. ಬಿತ್ತನೆ ಮಾಡಿದ್ದ ಈರುಳ್ಳಿ, ಎಳ್ಳು, ಹೆಸರು, ಉದ್ದು, ಹತ್ತಿ, ಕೊತ್ತಂಬರಿ, ಹಲಸಂದೆ, ಶೇಂಗಾ, ಆಲೂಗಡ್ಡೆ ಬೆಳೆಗಳು ನೆಲ ಬಿಟ್ಟು ಮೇಲೆ ಎದ್ದಿಲ್ಲ. ರಾಗಿ, ಜೋಳ ಬಿತ್ತನೆಗೆ ಭೂಮಿ ಹದ ಮಾಡಿ ಕಾದಿದ್ದೀವಿ. ಆದರೆ ಮಳೆ ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಬಯಲು ಸೀಮೆಗಳಲ್ಲಿ ಮುಂಗಾರು ಮಳೆಯಾಗುವುದೇ ಕೊನೆ ಹಂತದಲ್ಲಿ. ಹೀಗಾಗಿ, ಈ ತಿಂಗಳಾಂತ್ಯದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಬಿತ್ತನೆಗೆ ಇನ್ನೂ ಅವಕಾಶ ಇದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಮಳೆ ಬಾರದಿದ್ದರೆ ಪರಿಸ್ಥಿತಿ ಎದುರಿಸಲು ಕೃಷಿ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಉತ್ತರ ಒಳನಾಡು ಮತ್ತು ಅರೆಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿಯೂ ಈ ವರ್ಷ ಮುಂಗಾರು ಮಳೆ ನಿರೀಕ್ಷೆಯಷ್ಟು ಬಂದಿಲ್ಲ. ಬಳ್ಳಾರಿ, ವಿಜಯನಗರ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿಯೂ ಈ ಬಾರಿ ಮಳೆ ವಾಡಿಕೆಗಿಂತಲೂ ಕಡಿಮೆಯಾಗಿದೆ. ಇದರಿಂದಾಗಿ ಬಿತ್ತನೆ ವಿಳಂಬಗೊಂಡಿದೆ. ಆದರೆ, ಬಳ್ಳಾರಿ ಭಾಗದಲ್ಲಿ ತುಂತುರು ಮಳೆಯಿಂದ ಬೆಳೆಗಳು ನಾಶವಾಗದೇ ಉಳಿದಿವೆ. ಮಳೆ ಕೊರತೆ ಹೀಗೇ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲೂ ಇದೇ ಕಥೆ. ರೈತರು ಮುಂಗಾರು ಆರಂಭದ ಮಳೆಯಲ್ಲಿ ನಂಬಿಕೆ ಇಟ್ಟು ಬಿತ್ತನೆ ಕೈಗೊಂಡಿದ್ದರೂ, ಆ ಮಳೆ ಮುಂದುವರಿಯದ ಕಾರಣ ಬಿತ್ತಿದ ಪೈರು ನಲುಗಿದಂತಾಗಿದೆ. ಈಗ ಕಳೆದ ಎರಡು ದಿನಗಳಿಂದ ಆಗಿರುವ ಉತ್ತಮ ಮಳೆಯು ಅವರ ಮನಸ್ಸಿನ ಆತಂಕ ಕಡಿಮೆಗೊಳಿಸಿದೆ. ಬೀದರ್ ಜಿಲ್ಲೆಯಲ್ಲಿ ಶೇ. 50ರಷ್ಟು ಮಳೆ ಕೊರತೆ ಇದೆ. ಇದರೊಂದಿಗೆ 2022ರಲ್ಲಿ ಈ ಜಿಲ್ಲೆ ತೀವ್ರ ಬರಪರಿಸ್ಥಿತಿಯನ್ನು ಅನುಭವಿಸಿದ್ದ ನೆನಪು ಮತ್ತೆ ಜೀವಂತವಾಗುತ್ತಿದೆ. ಈ ಬಾರಿ ಶೇ. 90ರಷ್ಟು ಬಿತ್ತನೆಯಾಗಿದೆ. ಆದರೆ, ಅದು ಮಳೆಯ ನಿರಂತರತೆ ಇಲ್ಲದಿದ್ದರೆ ಸಫಲವಾಗುವುದು ಅನುಮಾನ.
ಇದನ್ನೂ ಓದಿ: ಶಕ್ತಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು
ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ಹಾಗೂ ಕಲಬುರಗಿ ತಾಲೂಕುಗಳಲ್ಲಿ ಮೇ ತಿಂಗಳಲ್ಲಿ ಮಳೆ ಆರಂಭವಾದರೂ, ಜೂನ್ ಮತ್ತು ಜುಲೈ ತಿಂಗಳಲ್ಲಿ ಅದು ನಿಂತುಬಿಟ್ಟಿದೆ. ತೊಗರಿ, ಹತ್ತಿ ಬೆಳೆದ ರೈತರು ಮಳೆ ನಿರೀಕ್ಷೆಯಲ್ಲಿ ಕಂಗಾಲಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲೂ ಇಂತೇ ತೊಗರಿ ಮತ್ತು ಹತ್ತಿ ನೀರಿಲ್ಲದೆ ನಲುಗುತ್ತಿವೆ. ಅರೆಮಲೆನಾಡಿನ ಕೊಡುಗು ಜಿಲ್ಲೆಯಲ್ಲೂ ಜುಲೈನಲ್ಲಿ ಶೇ. 22ರಷ್ಟು ಮಳೆ ಕೊರತೆ ಇದೆ. ಸಾಮಾನ್ಯವಾಗಿ ಹೆಚ್ಚು ಮಳೆಯಾಗುವ ಜಿಲ್ಲೆಯಲ್ಲಿ ಈ ತೀವ್ರ ಇಳಿಕೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಶೇ. 4 ಮತ್ತು ಶೇ. 13ರಷ್ಟು ಮಳೆಯ ಕೊರತೆ ದಾಖಲಾಗಿದೆ. ನೀರಿನ ಮೂಲಗಳು ಹೆಚ್ಚಾಗಿರುವ ಮಲೆನಾಡಿನಲ್ಲೂ ಮಳೆಯ ಪ್ರಮಾಣ ಈ ಮಟ್ಟಿಗೆ ಇಳಿಕೆಯಾಗಿರುವುದು ಆಘಾತಕರವಾಗಿದೆ.
ರಾಜ್ಯದ ಜಲಾಶಯಗಳ ಸ್ಥಿತಿಗತಿ ಹೀಗಿದೆ…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಪರಿಣಾಮ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಈಗಾಗಲೇ ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜೀನವಾಡಿ ಕೆಆರ್‌ಎಸ್ ಭರ್ತಿ ಆಗಿದೆ. ತುಂಗಾಭದ್ರಾ, ಭದ್ರಾ, ಕಬಿನಿ, ಹೇಮಾವತಿ, ಮಲಪ್ರಭಾ, ಘಟಪ್ರಭಾ, ಹಾರಂಗಿ, ಆಲಮಟ್ಟಿ, ಲಿಂಗನಮಕ್ಕಿ ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ.
ಕೆಆರ್‌ಎಸ್: ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದರೆ, ಈಗಾಗಲೇ 123.25 ಅಡಿ ಮಟ್ಟದ ನೀರು ತುಂಬಿದೆ. ಜಲಾಶಯದ ಒಟ್ಟು ಸಾಮರ್ಥ್ಯ 49.45 ಟಿಎಂಸಿ. 19,983 ಕ್ಯೂಸೆಕ್ ಒಳಹರಿವು, 17,721 ಕ್ಯೂಸೆಕ್ ಹೊರಹರಿವು ಆಗಿದೆ. ನೀರಿನ ಮಟ್ಟ ಸಮರ್ಪಕವಾಗಿದ್ದು, ಮಿತವಾದ ನಿರ್ವಹಣೆಯೂ ಅಗತ್ಯವಾಗಿದೆ.

ಕಬಿನಿ: ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2,284 ಅಡಿ ಇದ್ದರೆ, ನಿನ್ನೆಗೆ 2,282.51 ಅಡಿ ನೀರಿದೆ. ಒಳಹರಿವು 24,180 ಕ್ಯೂಸೆಕ್ ಆಗಿದ್ದು, ಹೊರಹರಿವು 17,292 ಕ್ಯೂಸೆಕ್ ಆಗಿದೆ. ಜಲಾಶಯವು ಶೀಘ್ರದಲ್ಲೇ ಪೂರ್ಣ ಮಟ್ಟ ತಲುಪುವ ನಿರೀಕ್ಷೆ ಇದೆ.
ಆಲಮಟ್ಟಿ: ಗರಿಷ್ಠ ನೀರಿನ ಮಟ್ಟ 519.6 ಮೀಟರ್ ಇದ್ದರೆ, ಇಂದಿಗೆ 518.16 ಮೀಟರ್ ಮಟ್ಟದ ನೀರು ಇದೆ. ಒಟ್ಟು ಸಾಮರ್ಥ್ಯ 123.8 ಟಿಎಂಸಿ. ಒಳಹರಿವು 1,00,937 ಕ್ಯೂಸೆಕ್ ಮತ್ತು ಹೊರಹರಿವು 90,740 ಕ್ಯೂಸೆಕ್. ಜಲಾಶಯ ಬಹುತೇಕ ಭರ್ತಿಯಾಗಿದ್ದು, ನಿರ್ವಹಿತ ಹರಿವು ನಡೆಯುತ್ತಿದೆ.
ತುಂಗಭದ್ರಾ: ಗರಿಷ್ಠ ನೀರಿನ ಮಟ್ಟ 1,633 ಅಡಿ ಇದ್ದರೆ, ಈಗಾಗಲೇ 1,626.6 ಅಡಿ ನೀರು ಭರ್ತಿಯಾಗಿದೆ. ಒಟ್ಟು ಸಾಮರ್ಥ್ಯ 105.79 ಟಿಎಂಸಿ. 33,690 ಕ್ಯೂಸೆಕ್ ಒಳಹರಿವಿದ್ದು, 33,716 ಕ್ಯೂಸೆಕ್ ಹೊರಹರಿವಿದೆ. ಪ್ರವಾಹ ನಿಯಂತ್ರಣಕ್ಕಾಗಿ ಸಮರ್ಪಕ ಹೊರಹರಿವು ನಡೆಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗಿದೆ.
ಮಲಪ್ರಭಾ: ಜಲಾಶಯದ ಗರಿಷ್ಠ ನೀರಿನ ಮಟ್ಟ 2,079.5 ಅಡಿ ಇದ್ದರೆ, 2,072.70 ಅಡಿ ಮಟ್ಟದ ನೀರು ತುಂಬಿದೆ. ಜಲಾಶಯದ ಒಟ್ಟು ಸಾಮರ್ಥ್ಯ 49.45 ಟಿಎಂಸಿ. 5,151 ಕ್ಯೂಸೆಕ್ ಒಳಹರಿವು ಮತ್ತು 1,094 ಕ್ಯೂಸೆಕ್ ಹೊರಹರಿವು ದಇದೆ. ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದು, ಮಿತವಾದ ಹೊರಹರಿವು ನಡೆಯುತ್ತಿದೆ.

ಲಿಂಗನಮಕ್ಕಿ: ಗರಿಷ್ಠ ನೀರಿನ ಮಟ್ಟ 1,819 ಅಡಿ ಇದ್ದರೆ, ನೀರಿನ ಮಟ್ಟ 1,803.5 ಅಡಿ ಇದೆ. ಒಟ್ಟು ಸಾಮರ್ಥ್ಯ 151.75 ಟಿಎಂಸಿ. ಒಳಹರಿವು 20,657 ಕ್ಯೂಸೆಕ್ ಆಗಿದ್ದು, ಹೊರಹರಿವು 6,691 ಕ್ಯೂಸೆಕ್. ಜಲಾಶಯದ ನೀರಿನ ಪ್ರಮಾಣ ಸ್ಥಿರವಾಗಿದೆ.
ಭದ್ರಾ: ಗರಿಷ್ಠ ನೀರಿನ ಮಟ್ಟ 186 ಅಡಿ ಇದ್ದರೆ, ಪ್ರಸ್ತುತ ನೀರಿನ ಮಟ್ಟ 178.9 ಅಡಿ ತಲುಪಿದೆ. ಒಟ್ಟು ಸಾಮರ್ಥ್ಯ 71.54 ಟಿಎಂಸಿ. ಒಳಹರಿವು 10,462 ಕ್ಯೂಸೆಕ್ ಮತ್ತು ಹೊರಹರಿವು 3,680 ಕ್ಯೂಸೆಕ್. ನೀರಿನ ಪ್ರಮಾಣ ಸಾಧಾರಣ ಮಟ್ಟದಲ್ಲಿದ್ದು, ಹೊರಹರಿವು ನಿಯಂತ್ರಿತವಾಗಿದೆ.
ಘಟಪ್ರಭಾ: ಜಲಾಶಯದ ಗರಿಷ್ಠ ನೀರಿನ ಮಟ್ಟ 2,175 ಅಡಿ ಇದ್ದರೆ, ಇಂದಿನ ನೀರಿನ ಮಟ್ಟ 2,169.53 ಅಡಿ ಇದೆ. ಒಟ್ಟು ಸಾಮರ್ಥ್ಯ 51 ಟಿಎಂಸಿ. ಒಳಹರಿವು 9,769 ಕ್ಯೂಸೆಕ್ ಆಗಿದ್ದು, ಹೊರಹರಿವು 11,754 ಕ್ಯೂಸೆಕ್. ನೀರಿನ ಮಟ್ಟ ಉತ್ತಮವಾಗಿದ್ದರೂ, ಒಳಹರಿವಿಗಿಂತ ಹೆಚ್ಚಾಗಿ ನೀರನ್ನು ಬಿಡಲಾಗುತ್ತಿದೆ.
ಹೇಮಾವತಿ: ಜಲಾಶಯದ ಗರಿಷ್ಠ ನೀರಿನ ಮಟ್ಟ 2,922 ಅಡಿ ಇದ್ದರೆ, ಇಂದಿನ ಮಟ್ಟ 2,920.97 ಅಡಿ ಇದೆ. ಒಟ್ಟು ಸಾಮರ್ಥ್ಯ 37.10 ಟಿಎಂಸಿ. ಒಳಹರಿವು 9,491 ಕ್ಯೂಸೆಕ್, ಹೊರಹರಿವು 9,650 ಕ್ಯೂಸೆಕ್. ಜಲಾಶಯವು ಪೂರ್ಣಮಟ್ಟ ತಲುಪಿದ್ದು, ಸುರಕ್ಷಿತ ಮಟ್ಟ ಕಾಯ್ದುಕೊಳ್ಳಲು ಸಮರ್ಪಕ ಹೊರಹರಿವು ನಡೆಸಲಾಗುತ್ತಿದೆ.

ಹಾರಂಗಿ: ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿ ಇದ್ದರೆ, ಇಂದಿನ ನೀರಿನ ಮಟ್ಟ 2,856.93 ಅಡಿ. ಒಟ್ಟು ಸಾಮರ್ಥ್ಯ 8.5 ಟಿಎಂಸಿ. ಒಳಹರಿವು 4,276 ಕ್ಯೂಸೆಕ್ ಮತ್ತು ಹೊರಹರಿವು 3,312 ಕ್ಯೂಸೆಕ್. ಜಲಾಶಯದ ಬಹುತೇಕ ಭರ್ತಿಯಾಗಿದ್ದು, ಸಮತೋಲನ ಕಾಯ್ದುಕೊಳ್ಳಲು ನಿಯಮಿತವಾಗಿ ನೀರಿನ ಹರಿವು ನಿರ್ವಹಿಸಲಾಗುತ್ತಿದೆ.
ಇದನ್ನೂ ಓದಿ: ಪದೇ ಪದೆ ಚರ್ಚೆಗೆ ಬರುವ ಕೊರೋನ ಸಾವುಗಳು: ನಿಜ ದತ್ತಾಂಶ ತಿಳಿಯುವುದು ಯಾವಾಗ?
ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಹವಾಮಾನ ಸಂಪೂರ್ಣ ಅನಿಶ್ಚಿತತೆಯಿಂದ ಕೂಡಿದೆ. ಒಂದು ಕಡೆ ತೀವ್ರ ಮಳೆ ಬೀಳುತ್ತಿದ್ದು ನೆರೆ ಪರಿಸ್ಥಿತಿ, ಗುಡ್ಡ ಕುಸಿತ, ಮನೆ ಕುಸಿತ ಹಾಗೂ ಜೀವ ನಷ್ಟವನ್ನುಂಟುಮಾಡುತ್ತಿದೆ. ಮತ್ತೊಂದೆಡೆ ಮಳೆ ಕೊರತೆಯಿಂದಾಗಿ ರೈತರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ. ಜಲಾಶಯಗಳ ಸ್ಥಿತಿಗತಿಯಲ್ಲಿ ಕೆಲವೊಂದು – ವಿಶೇಷವಾಗಿ ಕೆಆರ್‌ಎಸ್, ಆಲಮಟ್ಟಿ, ತುಂಗಭದ್ರಾ, ಹೇಮಾವತಿ ಮುಂತಾದವು ಭರ್ತಿ ಹಂತದಲ್ಲಿವೆ. ಮಲಪ್ರಭಾ, ಘಟಪ್ರಭಾ, ಲಿಂಗನಮಕ್ಕಿ, ಭದ್ರಾ, ಹಾರಂಗಿ ಸೇರಿದಂತೆ ಹಲವಾರು ಜಲಾಶಯಗಳಲ್ಲಿ ಮಿತಮಟ್ಟದ ಒಳಹರಿವು ಕಂಡುಬರುತ್ತಿದೆ. ಇದರಿಂದ ನೀರಿನ ಲಭ್ಯತೆ ಭದ್ರವಾಗಿದೆ ಎನಿಸಿದರೂ, ಮುಂದಿನ ದಿನಗಳಲ್ಲಿ ಮಳೆ ಕೊರತೆಯು ಆತಂಕ ಹೆಚ್ಚಿಸಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಬೇಸಾಯವು ಹವಾಮಾನ, ನಿಗದಿತ ಸಮಯಕ್ಕೆ ಮಳೆ ಸೇರಿದಂತೆ ನೈಸರ್ಗಿಕ ಚಕ್ರದ ಮೇಲೆಯೇ ಆಧಾರಿತವಾಗಿರುವ ದೀರ್ಘ ಪ್ರಕ್ರಿಯೆ. ಸುಮಾರು 20-25 ವರ್ಷಗಳ ಹಿಂದೆ, ವರ್ಷದಲ್ಲಿ ಇದೇ ತಿಂಗಳಿನಲ್ಲಿ ಮಳೆ ಬರುತ್ತದೆ ಎನ್ನುವ ಖಚಿತತೆ ರೈತರಿಗಿರುತ್ತಿತ್ತು. ಅದರ ಆಧಾರದ ಮೇಲೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಯಾವೊಬ್ಬ ಅಧಿಕಾರಿಯ, ಇಲಾಖೆಯ ಮಾರ್ಗದರ್ಶನದ ಅಗತ್ಯವಿಲ್ಲದೆ! ಆದರೀಗ ಪರಿಸ್ಥಿತಿ ಹಾಗಿಲ್ಲ. ಹವಾಮಾನ ವೈಪರೀತ್ಯ ಎನ್ನುವ ದೊಡ್ಡ ಸಮಸ್ಯೆಯೊಂದು ರೈತರನ್ನು ಎಡಬಿಡದೆ ಕಾಡುತ್ತಿದೆ. ಉದಾಹರಣೆಗೆ ಈ ವರ್ಷ ವಾಡಿಕೆಗೂ ಮೊದಲೇ ಅಂದರೆ ಮೇನಲ್ಲಿಯೇ ಮುಂಗಾರು ಮಳೆ ಶುರವಾಗಿ, ರೈತರು ಹಾಕಿಕೊಂಡಿದ್ದ ಯೋಜನೆಯನ್ನೇ ತಲೆಕೆಳಗು ಮಾಡಿದೆ. ಇದನ್ನ ಮೊದಲೇ ಅಂದಾಜಿಸಿ, ಕೃಷಿ-ತೋಟಗಾರಿಕೆ ಇಲಾಖೆಯಾಗಲೀ, ಸರ್ಕಾರವಾಗಲೀ ರೈತರಿಗೆ ಬೇಕಾದ ಮಾರ್ಗದರ್ಶನ, ತಿಳಿವಳಿಕೆ ನೀಡದೆ ತಮ್ಮ ಪಾಡಿಗೆ ತಾವಿವೆ. ಆದರೆ, ಹವಾಮಾನ ಬದಲಾವಣೆ ಕುರಿತು ಅರ್ಥಮಾಡಿಸಿ ಅದಕ್ಕನುಗುಣವಾಗಿ ರೈತರ ಕೈಹಿಡಿಯುವುದು ಸರ್ಕಾರದ ಕರ್ತವ್ಯ.