ಮಾಧ್ಯಮ ರಂಗದ ಲಿಂಗ ಅಸಮಾನತೆಯ ಆಳ ಅಗಲ; ಪ್ರಶಸ್ತಿ ನೀಡಿಕೆಯಲ್ಲೂ ಅನಾವರಣ

Date:

Advertisements

ಸರ್ಕಾರದ ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ, ಪ್ರೆಸ್‌ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘ ಹೀಗೆ ಎಲ್ಲ ಕಡೆ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರನ್ನು ಆಯ್ಕೆ ಮಾಡುವಾಗ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಅದಕ್ಕೆ ನಿನ್ನೆಯಿಂದ ಘೋಷಣೆಯಾದ ಮೂರು ಪ್ರಶಸ್ತಿ ಪಟ್ಟಿಯೇ ಪುರಾವೆ ಒದಗಿಸುತ್ತದೆ. ಅಷ್ಟೇ ಅಲ್ಲ ಮಾಧ್ಯಮ ಲೋಕದ ಮುಂದಿನ ಭವಿಷ್ಯವಾದ ಡಿಜಿಟಲ್‌ ಮಾಧ್ಯಮವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ

ಕರ್ನಾಟಕ ಸರ್ಕಾರದ ನೀಡುವ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಜನವರಿ 1ರಂದು ಪ್ರಕಟಿಸಿದೆ. ಈ ಪ್ರಶಸ್ತಿಗಳನ್ನು ಕರ್ನಾಟಕ ಸರ್ಕಾರವು 2001ನೇ ಸಾಲಿನಿಂದ ಪ್ರಾರಂಭಿಸಿದ್ದು, 2016ರವರೆಗೆ ಪ್ರತಿ ವರ್ಷವೂ ಇಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಕಾರಣಾಂತರದಿಂದ 2017ರಿಂದ 2023ರ ವರೆಗಿನ ಏಳು ವರ್ಷಗಳ ಪ್ರಶಸ್ತಿ ನೀಡಿರಲಿಲ್ಲ. ಈ ವರ್ಷ ಏಳೂ ವರ್ಷಗಳ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿ, ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ. ಶಿವಕುಮಾರ್ ಅವರಿದ್ದ ಸಮಿತಿಯು 14 ಪತ್ರಕರ್ತರನ್ನು ಆಯ್ಕೆ ಮಾಡಿದೆ. ಈ ಹದಿನಾಲ್ಕು ಮಂದಿ ಪತ್ರಕರ್ತರಲ್ಲಿ 2017ರ ಸಾಲಿನ ಪ್ರಶಸ್ತಿಗೆ ಟಿವಿ ಜರ್ನಲಿಸ್ಟ್ ಆಗಿದ್ದ ಸದ್ಯ ಸ್ವಂತ ಯುಟ್ಯೂಬ್‌ ಚಾನೆಲ್‌ ವಿಜಯ ನ್ಯೂಸ್‌ ಸಂಪಾದಕಿಯಾಗಿರುವ ವಿಜಯಲಕ್ಷ್ಮಿ ಶಿಬರೂರು ಅವರನ್ನು ಆಯ್ಕೆ ಮಾಡಲಾಗಿದೆ. ನಂತರದ ಆರು ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಎರಡೂ ವಿಭಾಗಗಳಲ್ಲಿ ಪ್ರಶಸ್ತಿಗೆ ಪುರುಷರನ್ನೇ ಆಯ್ಕೆ ಮಾಡಿದ್ದಾರೆ! ಇದು ನಿಜಕ್ಕೂ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯಕ್ಕೆ ಬದ್ಧ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಶೋಭೆ ತರುವ ನಿರ್ಧಾರವಲ್ಲ.

ವಾರ್ತಾ ಇಲಾಖೆ ಪ್ರಶಸ್ತಿ
ವಾರ್ತಾ ಇಲಾಖೆ ನೀಡುವ 2017-2023ರ ಸಾಲಿನ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದವರು

ಇದು ಯಾವುದೋ ಒಂದು ಖಾಸಗಿ ಸಂಘಟನೆ ನೀಡುವ ಪ್ರಶಸ್ತಿಯಲ್ಲ. ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ನೀಡುವ ಪ್ರಶಸ್ತಿ. ಅಂತಹ ಪ್ರಶಸ್ತಿಗೆ ಆಯ್ಕೆ ಮಾಡುವಾಗಲಾದರೂ ಮಹಿಳೆಯರ ಪ್ರಾತಿನಿಧ್ಯ ಮರೆಯಬಾರದು. ಈ ಪ್ರಶಸ್ತಿಗೆ ಬೇರೆಯವರು ಪತ್ರಕರ್ತರನ್ನು ನಾಮನಿರ್ದೇಶನ ಮಾಡಬಹುದು ಅಥವಾ ಅವರೇ ಅರ್ಜಿ ಸಲ್ಲಿಸಬಹುದು ಎಂಬ ನಿಯಮ ಇತ್ತು. ಹಾಗಿದ್ದರೆ, ಮಹಿಳೆಯರನ್ನು ಯಾರೂ ನಾಮನಿರ್ದೇಶನ ಮಾಡಿಲ್ಲವೇ? ಅಥವಾ ಪತ್ರಕರ್ತೆಯರು ಸ್ವತಃ ಅರ್ಜಿ ಸಲ್ಲಿಸಿಲ್ಲವೇ? ಇದನ್ನು ಸರ್ಕಾರ, ಆಯ್ಕೆ ಸಮಿತಿ ಸ್ಪಷ್ಟಪಡಿಸಬೇಕು. ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುವಾಗ ಅರ್ಜಿ ಸಲ್ಲಿಸದ ಹಲವರನ್ನು ಗುರುತಿಸಿ ಆಯ್ಕೆ ಮಾಡುವ ಪರಿಪಾಟವಿದೆ. ಮಾಧ್ಯಮ ಕ್ಷೇತ್ರದಲ್ಲೂ ಸಾಧಕಿಯರನ್ನು ಗುರುತಿಸಲು ಈ ಮಾರ್ಗವನ್ನು ಅನುಸರಿಸುವ ಅಗತ್ಯವಿದೆ. ಸದ್ಯ ಈ ಪ್ರಶಸ್ತಿ ಪಟ್ಟಿ ನೋಡಿ ಸಹಿ ಮಾಡಿದ ಮುಖ್ಯಮಂತ್ರಿಗಳು ಅಥವಾ ವಾರ್ತಾ ಇಲಾಖೆಯ ಸಚಿವರಿಗೆ ಈ ಅಸಮಾನತೆ ಕಂಡಿಲ್ಲವೇ? ಆಯ್ಕೆ ಸಮಿತಿಯಲ್ಲಿದ್ದ ಹಿರಿಯರಾದ ಸನತ್‌ ಕುಮಾರ್‌ ಬೆಳಗಲಿಯವರಿಗೆ ಈ ಕೊರತೆ ಕಾಣದಿರುವುದು ಅಚ್ಚರಿ ಮೂಡಿಸಿದೆ.

Advertisements

ಇದರ ಜೊತೆಗೆ ಇಂದೇ (ಜ.2) ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ಮತ್ತು 2024ರ ಸಾಲಿನ ವಾರ್ಷಿಕ ಪ್ರಶಸ್ತಿಗಳು, ದತ್ತಿನಿಧಿ ಪ್ರಶಸ್ತಿಗಳು ಘೋಷಣೆಯಾಗಿವೆ. 2023ರ ವಾರ್ಷಿಕ ಪ್ರಶಸ್ತಿ ಪುರಸ್ಕೃತ 30 ಪತ್ರಕರ್ತರಲ್ಲಿ ನಾಲ್ಕು ಮಂದಿ ಮಹಿಳೆಯರು ಹಾಗೂ 2024ರಲ್ಲಿ 30ರಲ್ಲಿ ಮೂವರು ಮಹಿಳೆಯರಿದ್ದಾರೆ. ಜೊತೆಗೆ ಪಟ್ಟಿಯಲ್ಲಿ ಇಬ್ಬರು ಪತ್ರಿಕೋದ್ಯಮ ಪ್ರೊಫೆಸರ್‌ಗಳಾಗಿ ನಿವೃತ್ತರಾದವರೂ ಇದ್ದಾರೆ! ಇನ್ನು ಹಿರಿಯ ಪತ್ರಕರ್ತರ ಸಾಲಿನಲ್ಲಿ ನಲವತ್ತರ ಆಸುಪಾಸಿನವರು ಬಹಳ ಮಂದಿ ಇದ್ದಾರೆ.

ಅಚ್ಚರಿಯೆಂದರೆ 2023ರ ದತ್ತಿನಿಧಿ ಪ್ರಶಸ್ತಿ ಪಡೆದ ಹತ್ತರಲ್ಲಿ ಐವರು ಪತ್ರಕರ್ತೆಯರು! ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಮಾಡುವಾಗ ವಿವಿಧ ಕ್ಷೇತ್ರದ ಕುರಿತ ಒಂದು ವರದಿ/ ಲೇಖನ/ ಅಂಕಣ ಬರಹವನ್ನು ಪರಿಗಣಿಸಲಾಗುತ್ತದೆ. ಅದರಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಪ್ರಶಸ್ತಿ ಪಡೆದಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಪುರುಷರಷ್ಟೇ ಪರಿಣಾಮಕಾರಿಯಾಗಿ ಮಹಿಳೆಯರೂ ವರದಿ ಮಾಡಿದ್ದಾರೆ ಎಂದಲ್ಲವೇ? ಆದರೆ ವಾರ್ಷಿಕ ಪ್ರಶಸ್ತಿಗೆ, ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಇವರೆಲ್ಲರ ಪ್ರತಿಭೆ ಯಾಕೆ ಗಮನಕ್ಕೆ ಬರುತ್ತಿಲ್ಲ?

ಇಂದು(ಜ.2) ಬೆಂಗಳೂರು ಪ್ರೆಸ್‌ಕ್ಲಬ್‌ನ 2024ರ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದೆ. ವಾರ್ಷಿಕ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ 50 ಮಂದಿಯಲ್ಲಿ ಕೇವಲ ಐವರು ಮಹಿಳೆಯರು ಇದ್ದಾರೆ. ಸುವರ್ಣ ಮಹೋತ್ಸವ ವಿಶೇಷ ಪ್ರಶಸ್ತಿಗೆ ಐವರು ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಎಲ್ಲರೂ ಪುರುಷರೇ! ಪ್ರತಿ ವರ್ಷವೂ ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಪ್ರೆಸ್‌ ಕ್ಲಬ್‌ನ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಇಲ್ಲೆಲ್ಲ ಪುರುಷರೇ ತುಂಬಿದ್ದಾರೆ. ಅವರ ಒತ್ತಡಗಳೇ ಬೇರೆ ಇರಬಹುದು, ಆದರೆ ಈ ಮಟ್ಟಿನ ಅಸಮಾನತೆ ನಿರ್ಲಕ್ಷ್ಯ ಸಲ್ಲದು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವೂ ಇದೇ ರೀತಿಯಲ್ಲಿ ಪ್ರಶಸ್ತಿಗೆ ಪತ್ರಕರ್ತೆಯರನ್ನು ಪರಿಗಣಿಸುವಲ್ಲಿ ಧಾರಾಳತನ ತೋರುತ್ತಿಲ್ಲ. ಇವೆಲ್ಲ ಯಾವ ಸಂದೇಶ ರವಾನಿಸುತ್ತಿದೆ? ಮಾಧ್ಯಮ ಸಂಸ್ಥೆಗಳು, ಮಾಧ್ಯಮ ಸಂಘಟನೆಗಳು ಲಿಂಗ ಸಮಾನತೆಯ ಪರ ನಿಲ್ಲದಿದ್ದರೆ ಇನ್ಯಾರು ನಿಲ್ಲುತ್ತಾರೆ?

Press Club

ಪತ್ರಿಕಾ ರಂಗದಲ್ಲಿ ಲಿಂಗ ತಾರತಮ್ಯ ಢಾಳಾಗಿದೆ. ಅದು ಪತ್ರಿಕಾ ಕಚೇರಿಯ ಒಳಗೆ, ಹೊರಗೆ ಮಾತ್ರವಲ್ಲ, ಪತ್ರಕರ್ತರ ಸಂಘಟನೆಗಳಲ್ಲೂ ಮುಂದುವರಿದಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಇಷ್ಟು ವರ್ಷಗಳು ಬೇಕಾದವು ಎಂಬುದೇ ನಾಚಿಕೆಗೇಡಿನ ಸಂಗತಿ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಿದ್ದರಾಮಯ್ಯ ಸರ್ಕಾರ ಸಾಮಾಜಿಕ ನ್ಯಾಯದ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ನಿಟ್ಟುಸಿರು ಬಿಡುವಂತಾಗಿತ್ತು. ಅದೇ ಬದ್ಧತೆ ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ಗೋಚರಿಸಬೇಕಲ್ಲವೇ? ಇದೆಲ್ಲ ಹೇಳಿಸಿಕೊಂಡು, ಕೇಳಿಸಿಕೊಂಡು ಪಡೆಯುವ ಗೌರವವಾಗಬಾರದು. ಏಳು ವರ್ಷಗಳ ಹದಿನಾಲ್ಕು ಪ್ರಶಸ್ತಿ ನೀಡಿಕೆಯಲ್ಲಿ ಈ ಮಟ್ಟಿಗೆ ಪತ್ರಕರ್ತೆಯರನ್ನು ನಿರ್ಲಕ್ಷಿಸಿರುವುದು ಸರಿಯಲ್ಲ.

ಮಾಧ್ಯಮ ಅಕಾಡೆಮಿ, ಪ್ರೆಸ್‌ ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘಗಳಲ್ಲಿಯೂ ಪತ್ರಕರ್ತೆಯರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ. ಪ್ರೆಸ್‌ ಕ್ಲಬ್‌, ಪತ್ರಕರ್ತರ ಸಂಘದ ಚುನಾವಣೆಗಳೂ ರಾಜಕೀಯ ಪಕ್ಷಗಳ ಚುನಾವಣೆಯಂತೆಯೇ ಹಣ ಚೆಲ್ಲುವ ಚುನಾವಣೆಗಳಾಗಿ ಬದಲಾಗಿವೆ. ಇಲ್ಲಿ ಹೆಣ್ಣುಮಕ್ಕಳು ಸೆಣಸುವುದು ಕಷ್ಟ. ಮಾಧ್ಯಮ ಸಂಸ್ಥೆಗಳಲ್ಲಿ ಕೂಡಾ ಮುಖ್ಯಸ್ಥಾನಗಳಲ್ಲಿ ಮಹಿಳೆಯರನ್ನು ಕಾಣಲು ಪುರುಷರು ಬಯಸುವುದಿಲ್ಲ. ಹಿರಿತನ, ಅರ್ಹತೆ, ಪ್ರತಿಭೆ ಇದ್ದರೂ ಸಂಪಾದಕರ ಕುರ್ಚಿಯಿಂದ ದೂರ ಇಡಲಾಗುತ್ತಿದೆ. ಪ್ರಸ್ತುತ ಕನ್ನಡದ ಎಷ್ಟು ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ಮಹಿಳೆಯರು ಸಂಪಾದಕರಾಗಿದ್ದಾರೆ? ಸ್ವಂತ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಟ್ಟು ಬೇರೆಲ್ಲಾದರೂ ಸಂಪಾದಕಿಯರು ಕಾಣಸಿಗುತ್ತಾರೆಯೇ? ಇಲ್ಲ. ಇದು ಮಾಧ್ಯಮ ಲೋಕ ಮಹಿಳೆಯರನ್ನು ಕಡೆಗಣಿಸಿರುವುದಕ್ಕೆ ಉದಾಹರಣೆಯಷ್ಟೇ.

ಹೊಸದಾಗಿ ಬರುವ ಯುವ ಪತ್ರಕರ್ತೆಯರಿಗೆ ಚಾಲೆಂಜಿಂಗ್‌ ಕೆಲಸ ಮಾಡಲು ಹಚ್ಚುತ್ತಿಲ್ಲ. ಪತ್ರಿಕೆಗಳಲ್ಲಿ ಫ್ಯಾಷನ್‌, ಸಾಂಸ್ಕೃತಿಕ ಕಾರ್ಯಕ್ರಮಗಳ ವರದಿಗಷ್ಟೇ ಸೀಮಿತಗೊಳಿಸುವುದು, ಪುಟ ಮಾಡಲಷ್ಟೇ ಇರಿಸುವುದು, ವಿಭಾಗ ಮುಖ್ಯಸ್ಥರ ಹುದ್ದೆ ನೀಡುವಾಗಲೂ ಹಿರಿತನವನ್ನೂ ನಿರ್ಲಕ್ಷಿಸಲಾಗುತ್ತಿದೆ. ಕೆಲವೇ ಕೆಲವರಿಗೆ ಬೇರೆ ಬೇರೆ ʼಮಾನದಂಡʼಗಳ ಆಧಾರದಲ್ಲಿ ಅವಕಾಶ ಸಿಗುತ್ತಿದೆ. ಮಹಿಳಾ ಪುರವಣಿ, ಮಕ್ಕಳ ಪುರವಣಿ, ಹೆಚ್ಚೆಂದರೆ ಸಾಹಿತ್ಯ ಪುಟಗಳಲ್ಲಿ ಮಾತ್ರ ಮಹಿಳೆಯರ ಉಪಸ್ಥಿತಿಯನ್ನು ಕಾಣಬಹುದು. ಚಾಲೆಂಜಿಂಗ್‌ ಕೆಲಸ ಮಾಡಿದವರನ್ನು ಗುರುತಿಸದಿರುವುದು ಮತ್ತೊಂದು ವ್ಯಾದಿ. ಅನೇಕ ಪತ್ರಕರ್ತೆಯರು ಈ ಕಾರಣಕ್ಕೆ ಪತ್ರಿಕಾರಂಗ ತೊರೆದಿದ್ದಾರೆ. ಕೆಲವರು ಅಲ್ಲಿಂದ ಹೊರಬಂದ ನಂತರ ಸ್ವತಂತ್ರ ಮಾಧ್ಯಮಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಿದವರಿದ್ದಾರೆ.

ರಾಜಕೀಯ ವರದಿಗಾರಿಕೆಗೆ ಮಹಿಳೆಯರನ್ನು ಎಷ್ಟು ಪತ್ರಿಕೆಗಳು ಕಳುಹಿಸುತ್ತಿವೆ ಎಂಬುದನ್ನು ವಿಧಾನಮಂಡಲ ಅಧಿವೇಶನ ನಡೆಯುವಾಗ ಪತ್ರಕರ್ತರ ಗ್ಯಾಲರಿಯತ್ತ ಒಮ್ಮೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ವಿಧಾನ ಸೌಧದ ಬೀಟ್‌ನಲ್ಲಿ ಎಷ್ಟು ಮಂದಿ ಪತ್ರಕರ್ತೆಯರು ಇದ್ದಾರೆ ಎಂದು ನೋಡಿದರೆ ಐದಾರು ಮಂದಿ ಸಿಗಲ್ಲ. ಇಂಗ್ಲಿಷ್‌ ಪತ್ರಿಕೆಗಳ ಒಬ್ಬಿಬ್ಬರಿಗೆ ವಿಧಾನಮಂಡಲದ ಅಧಿವೇಶನ ವರದಿ ಮಾಡುವ ಭಾಗ್ಯ ಸಿಕ್ಕಿರುತ್ತದೆ. ಪ್ರಮುಖ ರಾಜಕಾರಣಿ, ಮುಖ್ಯಮಂತ್ರಿ ಮುಂತಾದವರ ಸಂದರ್ಶನವನ್ನು ಹೆಣ್ಣುಮಕ್ಕಳಿಂದ ಮಾಡಿಸುತ್ತಿಲ್ಲ. ಕನ್ನಡದ ದೃಶ್ಯಮಾಧ್ಯಮವೂ ಸೇರಿದಂತೆ ಪತ್ರಕರ್ತೆಯರ ಹಾಜರಿ ಅಲ್ಲಿ ಇರುವುದೇ ಇಲ್ಲ. ಅದೆಷ್ಟೋ ಪತ್ರಕರ್ತೆಯರು ದಶಕಗಳ ಕಾಲ ಪತ್ರಿಕೆಗಳಲ್ಲಿ ಕೆಲಸ ಮಾಡಿದರೂ ವಿಧಾನಸೌಧದ ಮೆಟ್ಟಿಲು ಹತ್ತದವರೂ ಇದ್ದಾರೆ. ಇದು ಸಾಮಾಜಿಕ ನ್ಯಾಯ ಸ್ತ್ರೀ ಸಮಾನತೆ, ಮಣ್ಣುಮಸಿ ಎಂದು ಬಡಿದುಕೊಳ್ಳುವ ಮಾಧ್ಯಮಗಳ ನಿಜರೂಪ.

ಪತ್ರಿಕೋದ್ಯಮದಂತಹ ಸವಾಲಿನ ಕ್ಷೇತ್ರಕ್ಕೆ ಬರುವ ಹೆಣ್ಣುಮಕ್ಕಳು ಅಲ್ಲಿನ ಸವಾಲಿನ ಅರಿವಿದ್ದೇ ಬರುತ್ತಾರೆ. ಅಥವಾ ಅವರನ್ನು ಸವಾಲುಗಳಿಗೆ ಮುಖಾಮುಖಿ ಮಾಡಿಸಿ ಒರೆಗಲ್ಲಿಗೆ ಹಚ್ಚುವ ಕೆಲಸವಾದರೂ ಮಾಡಬೇಕು. ಆದರೆ “ಹೆಣ್ಣುಮಕ್ಕಳಿಗೆ ಅದೆಲ್ಲ ಆಗಲ್ಲ, ಗೊತ್ತಾಗಲ್ಲ, ಬರಲ್ಲ” ಎಂದು ಪುರುಷರು ತಮಗೆ ತಾವೇ ಅಂದುಕೊಂಡು ಬಿಟ್ಟಿದ್ದಾರೆ. ಹಾಗೆಯೇ ಸುದ್ದಿಮನೆಗಳಲ್ಲಿ ಗುಮಾಸ್ತರ ತರ ನಡೆಸಿಕೊಳ್ಳಲಾಗುತ್ತಿದೆ. ಕೆಲವು ಮಹಿಳೆಯರು ಪತ್ರಿಕಾ ಕಚೇರಿಯ ಉದ್ಯೋಗಿಯಷ್ಟೇ ಆಗಿ ಹೋಗಿದ್ದಾರೆ.

ಪತ್ರಕರ್ತರು 1
ವಿಧಾನಸಭೆ

ʼಪತ್ರಕರ್ತರುʼ ಪದ ಪುರುಷವಾಚಕ ಎನಿಸಿದರೆ ಅಚ್ಚರಿಯಿಲ್ಲ. ಪುರುಷರೇ ಪ್ರಧಾನವಾಗಿ ಕಾಣಿಸಿಕೊಳ್ಳುವ, ಮುನ್ನಡೆಸುವ ಕ್ಷೇತ್ರವಿದು. ಮಹಿಳೆಯರು ಎರಡನೇ ದರ್ಜೆಯ ಪತ್ರಕರ್ತರು ಎಂದು ಈಗಲೂ ಪರಿಗಣಿಸಲಾಗಿದೆ. ಸವಾಲಿನ ಕೆಲಸ ಮಾಡಲು ಯೋಗ್ಯರಲ್ಲ, ಸೇಫ್‌ ಝೋನ್‌ನಲ್ಲಿ ಇರಲಷ್ಟೇ ಅರ್ಹರು ಎಂದು ವ್ಯವಸ್ಥೆಯೇ ಅಂದುಕೊಂಡಿದೆ. ಅತಿಭ್ರಷ್ಟ ಪತ್ರಕರ್ತರು ಪುರುಷರೇ ಆಗಿದ್ದಾರೆ. ರಾಜಕಾರಣಿಗಳ ಜೊತೆಗಿನ ಗಳಸ್ಯ ಕಂಠಸ್ಯ ನಡವಳಿಕೆ ಪತ್ರಿಕಾ ಧರ್ಮ, ಬದ್ಧತೆ, ಹಲವರನ್ನು ಜವಾಬ್ದಾರಿಯಿಂದ ವಿಮುಖಗೊಳಿಸಿದೆ. ಈ ನಡುವೆ ಮಹಿಳಾ ಪತ್ರಕರ್ತರು ಒಂದು ಮಟ್ಟಿನ ಬದ್ಧತೆ, ಗೌರವ ಉಳಿಸಿಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಬಹುತೇಕ ಮಹಿಳೆಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದರೆ, ನೀತಿ ನಿರ್ಧಾರ ತೆಗೆದುಕೊಳ್ಳುವಾಗ ಈ ಪ್ರಾಮಾಣಿಕರನ್ನು ಬದಿಗೆ ಸರಿಸಿಲಾಗುತ್ತಿದೆ. ಸಂಪಾದಕೀಯ ಮಂಡಳಿಯಲ್ಲಿ ಪತ್ರಕರ್ತೆಯರಿಗೆ ಸ್ಥಾನ ಇಲ್ಲ. ದಿನದ ಸಂಪಾದಕೀಯ ಬರೆಯುವವರ ಲಿಸ್ಟ್‌ನಲ್ಲೂ ಪತ್ರಕರ್ತೆ ಇರಲ್ಲ. ಇನ್ನು ತಾವು ಕೆಲಸ ಮಾಡುವ ಪತ್ರಿಕೆಯಲ್ಲಿ ಅಂಕಣ ಬರೆಯುವ ಅವಕಾಶ ಎಷ್ಟು ಮಹಿಳೆಯರಿಗೆ ಸಿಕ್ಕಿದೆ ಎಂದು ನೋಡಿದರೆ ಕಾಣುವುದು ದೊಡ್ಡ ಸೊನ್ನೆ.

ಒಂದು ಕಾಲದಲ್ಲಿ ಪುರುಷ ಪ್ರಧಾನವಾಗಿದ್ದ ಮಾಧ್ಯಮ ಕ್ಷೇತ್ರದಲ್ಲಿ ಇಂದು ಸಾಕಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಬೆರಳೆಣಿಕೆಯ ಮಹಿಳೆಯರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿಯೇ ಯುದ್ಧಭೂಮಿಯಿಂದ ವರದಿ ಮಾಡಿ ತಮ್ಮ ಸಾಮರ್ಥ್ಯ ತೋರಿದವರಿದ್ದಾರೆ. ಪ್ರವಾಹ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪ ನಡೆದಾಗ ಅಲ್ಲಿಗೆ ಹೋಗಿ ದಿಟ್ಟ ವರದಿ ಮಾಡಿದ ವರದಿಗಾರ್ತಿಯರಿದ್ದಾರೆ. ಆದರೆ, ಈ ತಂತ್ರಜ್ಞಾನ ಯುಗದಲ್ಲಿ, ಬಹಳಷ್ಟು ಸುರಕ್ಷತೆ ಇರುವ ಕಾಲದಲ್ಲಿ ಮಾಧ್ಯಮಗಳಲ್ಲಿ ಮಹಿಳೆಯರಿಗೆ ಸವಾಲಿನ ಅವಕಾಶಗಳನ್ನು ನಿರಾಕರಿಸುವುದು, ಅವರ ಕೆಲಸಗಳನ್ನು ಗೌರವಿಸದಿರುವುದು ಸಲ್ಲದು. ಇದನ್ನು ಸಮಾಜಕ್ಕೆ ಬೋಧನೆ ಮಾಡುವ ಮಾಧ್ಯಮಗಳು ಮೊದಲು ತಿಳಿದುಕೊಳ್ಳಬೇಕಾಗಿದೆ.

mass media

ಕನ್ನಡದ ಸುದ್ದಿ ಮಾಧ್ಯಮಗಳ ಕಡೆ ಒಮ್ಮೆ ಕಣ್ಣಾಡಿಸಿ ನೋಡಿ, ಎಲ್ಲಾ ಚಾನೆಲ್‌ಗಳಲ್ಲಿ ಸಂಜೆಯ ಪ್ರೈಮ್‌ ಟೈಮ್‌ನ ಸುದ್ದಿ ವಿಶ್ಲೇಷಕರು ಪುರುಷರೇ ಆಗಿದ್ದಾರೆ. ಗೋಣು ಆಡಿಸಲು ಪಕ್ಕದಲ್ಲೊಬ್ಬ ನಿರೂಪಕಿ ಇರುತ್ತಾರೆ. ಬಹುಕೋಟಿ ಹೂಡಿಕೆಯ ಸೆಟಲೈಟ್‌ ಚಾನೆಲ್‌ಗಳಲ್ಲಿ ದಶಕಗಳಿಂದ ಪುರುಷರೇ ಪ್ರೈಮ್‌ ಟೈಮ್‌ನ ಸುದ್ದಿ ವಾಚಕರು. ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ದಶಕಗಳಿಂದ ಇಬ್ಬರು ಸಂಪಾದಕರು ದಿನವೂ ಸುದ್ದಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಯಾರೋ ಫೀಲ್ಡ್‌ನಲ್ಲಿ ಸವಾಲುಗಳನ್ನು ಎದುರಿಸಿ ಸುದ್ದಿ ತಂದು ಕೊಟ್ಟರೆ ಅದನ್ನು ಸೂಟು ಹಾಕಿ ಟೈ ಕಟ್ಟಿಕೊಂಡು ಅದಕ್ಕೊಂದಷ್ಟು ಮಸಾಲೆ ಬೆರೆಸಿ ಉರು ಹೊಡೆಯುವ ನಿರೂಪಕನೇ ಅಥವಾ ಸಾಮಾಜಿಕ ಶಾಂತಿ ಕದಡುವಂತಹ ಹೇಳಿಕೆ ನೀಡುತ್ತಾ ಪುಢಾರಿಯಂತೆ ವರ್ತಿಸುವವರನ್ನೇ ಮಹಾನ್‌ ಪತ್ರಕರ್ತ ಎಂದುಕೊಳ್ಳುವ ಕಾಲಘಟ್ಟದಲ್ಲಿ ಸಮಾಜ ಇದೆ. ಇಂತಹ ಸಮಯದಲ್ಲಿ ನೈಜ ಪತ್ರಕರ್ತರನ್ನು ಹುಡುಕಿ ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಡಿಜಿಟಲ್‌ ಮಾಧ್ಯಮ ಕಡೆಗಣನೆ ಸರಿಯಲ್ಲ
ಮಾಧ್ಯಮ ಜಗತ್ತಿನ ಭವಿಷ್ಯ ಡಿಜಿಟಲ್‌ ಮಾಧ್ಯಮ. ಈಗಾಗಲೇ ಹಲವು ಡಿಜಿಟಲ್‌ ಮಾದ್ಯಮಗಳು ಮುಖ್ಯವಾಹಿನಿಗೆ ಸರಿಸಮವಾಗಿ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಡಿಜಿಟಲ್‌ ಮಾಧ್ಯಮಗಳ ವರದಿಗಾರರೂ ಪತ್ರಕರ್ತರೇ ಎಂಬುದನ್ನು ಇಡೀ ಸರ್ಕಾರ, ಮಾಧ್ಯಮ ಸಂಬಂಧಿ ಸಂಸ್ಥೆಗಳು ಮರೆತಂತಿದೆ. ಇದು ನಿರ್ಲಕ್ಷ್ಯದ ಪರಮಾವಧಿ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X