ಯುದ್ಧದ ಭೀಕರತೆಯೂ… ಕುವೆಂಪು ನೀಡಿರುವ ಎಚ್ಚರಿಕೆಯೂ…

Date:

Advertisements
ಆತಂಕ ಹುಟ್ಟಿಸುವ ಸಂಗತಿ ಏನೆಂದರೆ- ಈ ಹಿಂದೆ ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತಲೂ ಹಲವು ಪಟ್ಟು ಹೆಚ್ಚು ಶಕ್ತಿಶಾಲಿಯಾದ ಅಣುಬಾಂಬ್‌ಗಳು ಈಗ ಇವೆ ಎನ್ನುತ್ತಾರೆ ಅಣ್ವಸ್ತ್ರ ತಜ್ಞರು

”ಇದು ಮಹಾ ವಿಪತ್ತು. ನಾವು ಕಷ್ಟಪಟ್ಟು ಕಟ್ಟಿಕೊಂಡಿದ್ದೆಲ್ಲ ಸಂಪೂರ್ಣ ನಾಶವಾಗಿದೆ. ಯುದ್ಧ ನಮಗೆ ಬೇಕಿಲ್ಲ” -ಈ ಮಾತನ್ನು ಹೇಳಿದ್ದು ಪಾಕಿಸ್ತಾನ-ಇಂಡಿಯಾ ಗಡಿಯಲ್ಲಿರುವ ಪೂಂಚ್ ಪ್ರದೇಶದ ಸಂತ್ರಸ್ತರು.

ಪೂಂಚ್‌ನ ಸ್ಥಳೀಯರು ‘ಅಲ್‌ ಜಜೀರಾ’ ಮಾಧ್ಯಮದೊಂದಿಗೆ ಮಾತನಾಡಿರುವುದು ವರದಿಯಾಗಿದೆ. ಮೇ 7ರ ನಂತರದ ದಾಳಿಯಲ್ಲಿ ಪೂಂಚ್ ಜಿಲ್ಲೆಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎನ್ನುತ್ತಿವೆ ವರದಿಗಳು.

ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ, 26 ಜನ ಪ್ರವಾಸಿಗರನ್ನು ಕೊಂದ ಬಳಿಕ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆದರೆ ಮತ್ತೆ ಕಾಲು ಕೆರೆದುಕೊಂಡು ಬರುತ್ತಿರುವ ಪಾಕಿಸ್ತಾನ, ಪದೇ ಪದೇ ಡ್ರೋನ್‌ಗಳನ್ನು ಕಳುಹಿಸುತ್ತಿದೆ, ಕ್ಷಿಪಣಿಗಳನ್ನು ಹಾರಿಸುತ್ತಿದೆ.

Advertisements

ಎರಡು ದೇಶಗಳು ಪರಮಾಣು ಶಸ್ತ್ರಸಜ್ಜಿತವಾಗಿರುವ ಕಾರಣ ಜನ ಭಯಭೀತರಾಗುವುದು ನಿಶ್ಚಿತ. ಕಾಶ್ಮೀರ, ಪಂಜಾಬ್, ರಾಜಸ್ಥಾನ ರಾಜ್ಯಗಳ ಜನರು ಆತಂಕದಲ್ಲಿ ಬದುಕುವಂತಾಗಿದೆ. ಕತ್ತಲೆಯಲ್ಲಿ ನಡೆಯುತ್ತಿರುವ ಶೆಲ್ ದಾಳಿಯನ್ನು, ‘ಇದು ಭಯೋತ್ಪಾದನೆಯ ರಾತ್ರಿ’ ಎಂದು ಪೂಂಚ್ ನಾಗರಿಕ ರಮೀಜ್ ಚೌಧರಿ ಎಂಬವರು ಬಣ್ಣಿಸುತ್ತಾರೆ.

ಪೂಂಚ್ ಜಿಲ್ಲೆಯ ಶಹಪುರ, ಮಂಕೋಟೆ ಮತ್ತು ಕೃಷ್ಣ ಘಾಟಿ ಗ್ರಾಮಗಳಲ್ಲಿ ಹೆಚ್ಚು ಹಾನಿಗಳಾಗಿವೆ ಎನ್ನುತ್ತಿವೆ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳು. ರಾಜೌರಿ ಜಿಲ್ಲೆಯ ಲಾಮ್, ಮಂಜಕೋಟೆ ಮತ್ತು ಗಂಭೀರ್ ಬ್ರಾಹ್ಮಣ ಪ್ರದೇಶಗಳಲ್ಲಿಯೂ ಶೆಲ್ ದಾಳಿ ತೀವ್ರಗೊಂಡಾಗ, ಇಲ್ಲಿನ ನಿವಾಸಿಗಳು ಸುರಕ್ಷತೆಗಾಗಿ ಹಂಬಲಿಸಿದ್ದಾರೆ.

ಇದನ್ನೂ ಓದಿರಿ: ಭಾರತ-ಪಾಕ್ ಸಂಘರ್ಷ | ಡ್ರೋನ್ ಪತ್ತೆ, ಬ್ಲ್ಯಾಕ್‌ಔಟ್‌ ಬಳಿಕ ರಾಜಸ್ಥಾನದ ಕೆಲವೆಡೆ ರೆಡ್ ಅಲರ್ಟ್

ಕಾಶ್ಮೀರದ ಅತಿದೊಡ್ಡ ನಗರವಾದ ಶ್ರೀನಗರ ವಿಮಾನ ನಿಲ್ದಾಣ ಬಳಿ ಮೂರು ಬಾರಿ ಶಬ್ದ ಕೇಳಿಬಂದಿರುವುದಾಗಿ ಸ್ಥಳೀಯರು ತಿಳಿಸಿರುವುದಾಗಿ ಶನಿವಾರ ಸಿಎನ್‌ಎನ್ ವರದಿ ಮಾಡಿದೆ. ಇಲ್ಲಿನ ಸ್ಥಳೀಯ ಸೇನಾ ಪ್ರಧಾನ ಕಚೇರಿಯ ಬಳಿ ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಒಟ್ಟಾರೆಯಾಗಿ ಉದ್ದೇಶಪೂರ್ವಕವಾಗಿ ಪಾಕಿಸ್ತಾನ ದಾಳಿ ಮಾಡುತ್ತಿರುವುದಂತೂ ಸ್ಪಷ್ಟ. ಭಾರತವೂ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದೆ. ಪಾಕಿಸ್ತಾನ ಕಳುಹಿಸುತ್ತಿರುವ ಎಲ್ಲ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುತ್ತಿದೆ. ಆದರೆ ಇದು ನಿಲ್ಲುತ್ತದೆಯೋ ಇಲ್ಲವೋ ಎಂಬ ಆತಂಕ ನಾಗರಿಕರದ್ದು. ಒಂದೊಂದೇ ಸಾವುಗಳು ಸೇರ್ಪಡೆಯಾದಷ್ಟೂ ಯುದ್ಧದ ಭೀಕರತೆ ಆವರಿಸುತ್ತಾ ಹೋಗುತ್ತದೆ.

ಭಾರತದ ಬಳಿ 180 ಅಣ್ವಸ್ತ್ರಗಳಿದ್ದರೆ ಪಾಕಿಸ್ತಾನದ ಬಳಿ ಇರುವುದು 170 ಅಣ್ವಸ್ತ್ರಗಳು. ಜಗತ್ತಿನ ಒಂಬತ್ತು ರಾಷ್ಟ್ರಗಳು ಅಣ್ವಸ್ತ್ರವನ್ನು ಹೊಂದಿದ್ದು, ಅದರಲ್ಲಿ ಇಂಡಿಯಾ, ಪಾಕಿಸ್ತಾನವೂ ಸೇರಿವೆ. ಚೀನಾ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್- ಇಷ್ಟು ದೇಶಗಳ ಬಳಿ 12,300ಕ್ಕೂ ಹೆಚ್ಚು ಪರಮಾಣುಗಳಿವೆ. ಆತಂಕ ಹುಟ್ಟಿಸುವ ಸಂಗತಿ ಏನೆಂದರೆ- ಈ ಹಿಂದೆ ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತಲೂ ಹಲವು ಪಟ್ಟು ಹೆಚ್ಚು ಶಕ್ತಿಶಾಲಿಯಾದ ಅಣುಬಾಂಬ್‌ಗಳಿವು ಎನ್ನುತ್ತಾರೆ ಅಣ್ವಸ್ತ್ರ ತಜ್ಞರು. ಹತ್ತೇ ಸೆಕೆಂಡಿನಲ್ಲಿ ಲಕ್ಷಾಂತರ ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುವ ಪರಮಾಣು ರಾಷ್ಟ್ರಗಳಾಗಿ ಹೊಮ್ಮಿರುವುದನ್ನು ಉಭಯ ದೇಶಗಳ ಜನರು ಗಮನದಲ್ಲಿಟ್ಟುಕೊಂಡಿದ್ದಾರೆ.

ಯುದ್ಧ ಮುಗಿದ ಮೇಲಷ್ಟೇ ಯುದ್ಧದ ಭೀಕರತೆ ತಿಳಿಯುತ್ತದೆ. ಯುದ್ಧೋನ್ಮಾದವನ್ನು ಉದ್ಧೀಪಿಸುವ ಸುಳ್ಳು ಸುದ್ದಿಗಳನ್ನು, ಪ್ರಚೋದನಾಕಾರಿ ಮಾತುಗಳ ಆಡುವವರನ್ನು ದೂರವಿಡುವುದು ಅತ್ಯಗತ್ಯ. ಪಕ್ಷ ರಾಜಕಾರಣದ ಲೆಕ್ಕಾಚಾರ ಹಾಕಿ, ಬೇಕಾಬಿಟ್ಟಿ ಹೇಳಿಕೆ ಕೊಡುವವರು ಶ್ರೀಸಾಮಾನ್ಯರ ದೃಷ್ಟಿಕೋನವನ್ನು ಹೊಂದಿರಲಿಕ್ಕೆ ಸಾಧ್ಯವಿಲ್ಲ. ಈ ಹೊತ್ತು ವಿವೇಚನೆ ಮುಖ್ಯವಾಗುತ್ತದೆ.

“ಯುದ್ಧ ಬೇಡ” ಎಂದ ಕೂಡಲೇ ಮುಗಿಬೀಳುವವರಿಗೆ ಯುದ್ಧವನ್ನು ವಿರೋಧಿಸಿದ ಬಹುದೊಡ್ಡ ದಾರ್ಶನಿಕ ಪರಂಪರೆ ಈ ನೆಲದಲ್ಲಿದೆ ಎಂಬುದನ್ನು ತಿಳಿಸಿ ಹೇಳಬೇಕಾಗಿದೆ. ಯುದ್ಧದ ಭೀಕರತೆಯ ಕುರಿತು ನಮ್ಮ ದಾರ್ಶನಿಕ ಮತ್ತು ಬೌದ್ಧಿಕ ಪರಂಪರೆ ಎಚ್ಚರಿಸುತ್ತಲೇ ಬಂದಿದೆ. ನಮ್ಮ ನೆಲದ ರಸಋಷಿ ಕುವೆಂಪು ಅವರು ಯುದ್ಧದ ಪರಿಣಾಮಗಳ ಕುರಿತ ಬರೆದ ‘ಸ್ಮಶಾನ ಕುರುಕ್ಷೇತ್ರಂ’ ನಾಟಕವನ್ನು ಈ ಹೊತ್ತು ಮೆಲುಕು ಹಾಕಬೇಕು.

ಯುದ್ಧ ತರುವ ದುರಂತವನ್ನು ಕುವೆಂಪು ಅವರು ಕಂಡ ಬಗೆ ಅಧಿಕಾರಶಾಹಿಯ ನೆಲೆಯದ್ದಲ್ಲ. ಅದು ಸಾಮಾನ್ಯ ನಾಗರಿಕರ ಸಂಕಟಕ್ಕೆ ಸಂಬಂಧಿಸಿದ ಮತ್ತು ತಮ್ಮವರನ್ನು ಕಳೆದುಕೊಂಡ ಕರುಳ ಸಂಬಂಧಿಗಳ ಆಕ್ರಂದನಕ್ಕೆ ಕನ್ನಡಿ ಹಿಡಿಯುವ ನಾಟಕ. ಕುವೆಂಪು ಅವರು ಸೃಷ್ಟಿಸಿದ ಅದ್ಭುತ ಪ್ರತಿಮಾ ಸೃಷ್ಟಿಯೂ ಹೌದು.

ಇದನ್ನೂ ಓದಿರಿ: ಭಾರತ- ಪಾಕಿಸ್ತಾನ ಸಂಘರ್ಷ | ವಿದೇಶಾಂಗ ಸಚಿವಾಲಯ ಪತ್ರಿಕಾಗೋಷ್ಠಿ; ಪ್ರಮುಖ ಹತ್ತು ಮಾಹಿತಿಗಳು

ಈ ನಾಟಕದ ಎಂಟನೇ ದೃಶ್ಯದಲ್ಲಿ ಬರುವ ಸನ್ನಿವೇಶ ಮನ ಕಲಕುತ್ತದೆ. ತನ್ನ ಮಗನನ್ನು ಕಳೆದುಕೊಂಡ ಮುದುಕಿಯೊಬ್ಬಳು ಹೆಣವನ್ನು ಹುಡುಕಿಕೊಂಡು ಬಂದಿದ್ದಾಳೆ. ಹಾಗೆಯೇ ತನ್ನ ಗಂಡನನ್ನು ಅರಸಿ ಕಂದನೊಂದಿಗೆ ತಾಯಿಯೊಬ್ಬಳು ಬಂದಿದ್ದಾಳೆ. ಈ ಮುದುಕಿ ಮತ್ತು ಮಾತೆ ಆ ಭೀಕರ ಸ್ಮಶಾನದಲ್ಲಿ ಎದುರಾಗಿ ಆಡುವ ಮಾತುಗಳು ಎದೆ ಕಲಕುತ್ತವೆ.

ಮಾತುಗಳು ಹೀಗಿವೆ:

ಮುದುಕಿ— ಇದೇನ್ ಮಾರಿಯಾಟಂ? ಇನಿತು ಜನಂ ತಿರುಗುತಿರ್ಪ ಈ ಕತ್ತಲೆಯ ಬಯಲಿನೊಳ್ ನನ್ನನ್ ಕೇಳ್ವರೆ ಇಲ್ಲ. ಎಲ್ಲರುಂ ಪುಡುಕು ತಿರ್ಪರೆ ಪೊರೆತು, ತೋರ್ಪರನ್ ಕಾಣೆನ್. ಓ ನಾರಾಯಣಾ, ಎಲ್ಲಿರುವಯ್? ನುಡಿಯಯ್— ಮಕ್ಕಳಿಲ್ಲದ ಮುದುಕರನ್ ಕೇಳ್ವರಾರ್? ಮಗೂ, ನೀನ್ ನನ್ನೊಡನಿರಲ್ ಎಲ್ಲರ್ಗಂ ನಾನ್ ನಚ್ಚಿನವಳಾಗಿರ್ದೆನ್. ನೀನ್ ತುಳಿಲಾಳೆಂದು ತಿಳಿದು ದೊರೆಯ ಸೇನಾಧಿಕಾರಿಗಳುಂ ನನ್ನೆಡೆಗೆ ಬಂದು ನೂರಾರು ಸವಿನುಡಿಗಳಿಂ, ಕವಡಾಸೆಗಳಿಂ ಬೆನ್ನನ್ ತಟ್ಟಿ ಬೋಳೈಸಿ, ದೇಶಾಭಿಮಾನಂ ಸ್ವಾಮಿಭಕ್ತಿ ಧರ್ಮನಿಷ್ಠೆ ಕ್ಷಾತ್ರಧರ್ಮಂ ಮೊದಲಹ ಸಮಯಕ್ಕೊದಗುವ ಉಪಾಯವೇದಾಂತಮಂ ಪೇಳ್ದು ನಿನ್ನನ್ ಕೊಂಡೊಯ್ದರ್. ನಾನುಂ ಮಾತಿಗೆ ಮರುಳಾದೆನ್. ಈಗಳೆಲ್ಲಿ ಆ ತತ್ತ್ವಂಗಳುಂ, ಆ ಆಧಿಕಾರಿಗಳುಂ, ಆ ಭಕ್ತಿಧರ್ಮಾಭಿಮಾನಂ ಗಳುಂ? ಎಲ್ಲ ಬರುಪುಸಿಯಲ್ತೆ? ತಿಳಿಯದವರ್ಗೆ ತಿಳಿದವರೊಡ್ಡುವ ಬಲೆಯುರುಳ್ಗಣ್ಣಿಗಳಲ್ತೆ? ಅಂತುಂ ಶ್ರೀಮಂತರ ಕಲಹಾಗ್ನಿಗೆ ಯಜ್ಞಪಶುಗಳೆಮ್ಮಂತಹ ದರಿದ್ರರಲ್ತೆ? —

(ಮುದುಕಿ ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತು ಚಿಂತಿಸುತ್ತಾಳೆ. ಮಾತೆಯೂ ಕಂದನೂ ಪ್ರವೇಶಿಸುತ್ತಾರೆ.)

ಕಂದ— ಅಮ್ಮಾ, ನಾನಿನ್ನು ನಡೆಯಲಾರೆ!

ಮಾತೆ— ಬಾ ಮಗೂ, ಎತ್ತಿಕೊಳ್ವೆನ್. (ಎತ್ತಿಕೊಂಡು ಮುಂದೆ ನಡೆದು ಮುದುಕಿಯನ್ನು ಕಂಡು) ಯಾರಲ್ಲಿ? (ಹತ್ತಿರ ಹೋಗಿ ನೋಡಿ) ಅಜ್ಜೀ, ಇದೇಕೆಲ್ಲಿ ಕುಳಿತಿರುವೆ?

ಮುದುಕಿ— (ತಲೆಯೆತ್ತಿ ನೋಡಿ) ತಾಯಿ, ನನ್ನ ಮಗು ನಾರಾಯಣನನ್ ಹುಡುಕಿ ಹುಡುಕಿ ಸೋತು ಸುಣ್ಣವಾದೆ. ಅಯ್ಯೋ ಎಲ್ಲಿರ್ಪನೋ ಏನೋ? ಪೇಳ್ವರಿಲ್ಲ, ಕೇಳ್ವರಿಲ್ಲ; ನನ್ನಗಿನ್ನೇನ್ ಗತಿ? ಪೇಳಮ್ಮಾ! ಕಡೆಗಾಲದೊಳ್ ಕಲ್ಲೆಡವಿದಂತಾಯ್ತು. (ಕೂಸನ್ನು ನೋಡಿ) ತಾಯಿ, ಈ ಮಗುವನೇಕೆ ಇಲ್ಲಿಗೆಳೆತಂದಿರುವೆ? ಈ ರಾತ್ರಿಯ ರುದ್ರಭೂಮಿಗೆ?

ಮಾತೆ— ಅಜ್ಜೀ, ಗುಡಿಸಲೊಳಾರುಮಿಲ್ಲ; ಇವನನ್ ಬಿಟ್ಟರೆನಗಿನ್ನಾರುಂ ಗತಿಯಿಲ್ಲ. ಕದನ ಕೈತಂದ ನನ್ನ ಪತಿಯನರಸಿ ಬಂದಿಹೆನು. —ಈ ಹೆಬ್ಬಯಲಿನ ಹೆಣದ ಬಣಬೆಯೊಳು ಕಾಣಸೆದೇನುಂ!

ಮುದುಕಿ— ನಿನ್ನ ಪತಿ ಆರ ಕಡೆಯವನ್?

ಮಾತೆ— ಪಾಂಡವರ ಪಕ್ಷದವನ್. ನಿನ್ನ ಪುತ್ರನ್?

ಮುದುಕಿ— ಕೌರವನವನ್.

ಮಾತೆ— ನಿನ್ನ ಮಗನೆನ್ನ ಪತಿಗೆ ಪಗೆಯಾಗಿರ್ದನೇನ್?

ಮುದುಕಿ— ಆರಿಗಾರು ಪಗೆ? ನಿನಗಾನ್ ಪಗೆಯೆ?

ಮಾತೆ— ಉಂಟೇ?

ಮುದುಕಿ— ನಮ್ಮವೋಲಿಹ ಬಡಜನಂಗಳೆಲ್ಲ ಮಂಕುಗಳಮ್ಮಾ. ಪಾಂಡವರ್ ಕೌರವರ್ ನೆಲಕೆ ಪೊಯ್ದಾಡಿದರೆ ನಮ್ಮ ಮಕ್ಕಳ್ ಅವರಿವರಂ ಕೆಳೆಗೊಂಡು ನಿಂತು ಹೆಮ್ಮೆಗೆ ಬಡಿದಾಡಿ ಮಡಿಯುವರ್. ನನ್ನ ಮಗುಗೆ ನಿನ್ನಾತನಮೇಲೆ ಪಗೆಯೇನ್? ನಾವಿರ್ವರುಂ ದುಃಖಾರ್ತರಮ್ಮಾ! ಬಾ, ಹುಡುಕಿ ನೋಡುವಂ.

(ಇಬ್ಬರೂ ಹೆಣಗಳ ನಡುವೆ ಕತ್ತಲಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿಯೆ ತಿರುಗುತ್ತ ಹುಡುಕುತ್ತಾರೆ. ಒಂದೆಡೆ ಮಾತೆ ನಿಂತು ಚೀರಿ ಮಗುವನ್ನು ಕೆಳಗಿಳಿಸಿ ರೋದಿಸುತ್ತಾಳೆ. ಅಲ್ಲಿ ಇಬ್ಬರು ಭಟರು ಒಬ್ಬರನ್ನೊಬ್ಬರು ಭರ್ಜಿಗಳಿಂದ ತಿವಿದು ಮಡಿದಿದ್ದಾರೆ. ಒಬ್ಬನು ಮುದುಕಿಯ ಮಗನು. ಮತ್ತೊಬ್ಬನು ಮಾತೆಯ ಪತಿ. ಮುದುಕಿ ರೋದನವನ್ನು ಆಲಿಸಿ ಓಡಿಬರುತ್ತಾಳೆ.)

ಮುದುಕಿ— ಏನಾಯ್ತು ಮಗಳೇ?

ಮಾತೆ— ಅಯ್ಯೋ, ಅಜ್ಜಿ, ನೋಡಿಲ್ಲಿ: ನನ್ನ ಪತಿಯನ್ ಈ ಪಾಪಿ ತಿವಿದು ಕೊಂದಿಹನ್. ಅಯ್ಯೋ…

ಮುದುಕಿ— ಅಯ್ಯೋ, ಅಯ್ಯೋ, ನನ್ನ ಮಗನನ್ ನಿನ್ನ ಪತಿ ತಿವಿದು ಕೊಂದಿಹನಲ್ಲಮ್ಮಾ! ಅಯ್ಯೋ… ಪಾಂಡವರು ಹಾಳಾಗಲಿ!

ಮಾತೆ— ಅಯ್ಯೋ, ಕೌರವರು ಹಾಳಾಗಲಿ!

(ಇಬ್ಬರೂ ಬಿದ್ದು ಗೋಳಿಡುತ್ತಾರೆ.)

ಇದು ಕವಿಹೃದಯ ಕುವೆಂಪು ಅವರಿಗೆ ಯುದ್ಧದ ಭೀಕರತೆ ಕಂಡ ರೀತಿ. ಇಲ್ಲಿ ಕಾಣುತ್ತಿರುವುದು ಸಾಮಾನ್ಯ ನಾಗರಿಕರ ಅಳಲು. ಮನೆಗೆ ಆಸರೆಯಾದವರ ಕಳೆದುಕೊಂಡ ಅನಾಥಭಾವ. ಯುದ್ಧದ ಭೀಕರತೆಯನ್ನು ಕುವೆಂಪು ಅವರಿಗಿಂತ ಪರಿಣಾಮವಾಗಿ ಇನ್ನಾರು ಹೇಳಲು ಸಾಧ್ಯ?

ಯುದ್ಧೋನ್ಮಾದದ ನಡುವೆ, ಅದು ಉದ್ಭಣವಾಗದಂತೆ ಎಚ್ಚರಿಕೆ ವಹಿಸುವ, ಪ್ರಚೋದಕ ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳ ಬಗ್ಗೆ ಗುಮಾನಿಯನ್ನು ಇರಿಸಿಕೊಳ್ಳುವ ಜರೂರು ಈ ಹೊತ್ತಿನದು.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X