ಈಗಿರುವ ‘ಕರ್ನಾಟಕ ಕಾರ್ಖಾನೆಗಳ ಕಾಯ್ದೆ – 1948’ ರಂತೆ ದಿನದಲ್ಲಿ 8 ಗಂಟೆ ಮತ್ತು ವಾರದಲ್ಲಿ 48 ಗಂಟೆ ದುಡಿಮೆ, ಒಂದು ದಿನ ವೇತನ ಸಹಿತ ರಜೆ ಇರಬೇಕು ಎಂಬದನ್ನು ಸ್ಪಷ್ಟವಾಗಿ ಹೇಳುತ್ತದೆ. ಈಗಿನ ತಿದ್ದುಪಡಿ ಕಾಯ್ದೆಯಲ್ಲಿ ದಿನಕ್ಕೆ 10 ಗಂಟೆ ದುಡಿಮೆ, ವಾರದಲ್ಲಿ ಐದು ದಿನ 48 ಗಂಟೆ ದುಡಿಮೆ ಎಂದು ಬದಲಾಯಿಸಲಾಗಿದೆ. ಆಶ್ಚರ್ಯವೆಂದರೆ ವಾರದಲ್ಲಿ ಐದು ದಿನ ದುಡಿಮೆ ಎಂದಾದಲ್ಲಿ ವಾರದ ಎರಡು ದಿನ ವೇತನ ಸಹಿತ ರಜೆ ಎಂದು ಇರಬೇಕಿತ್ತು.
ರಾಜ್ಯ ಸರ್ಕಾರ ‘ಕರ್ನಾಟಕ ಕಾರ್ಖಾನೆಗಳ ಕಾಯ್ದೆ – 1948’ ಮತ್ತು ‘ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ – 1961’ಕ್ಕೆ ತಿದ್ದುಪಡಿ ತಂದು ನಾಲ್ಕು ಮುಖ್ಯ ಬದಲಾವಣೆಗಳನ್ನು ಮಾಡಿದೆ. ದಿನದ 8 ಗಂಟೆಗಳ ಕೆಲಸದ ಅವಧಿಯನ್ನು 10 ಗಂಟೆವರೆಗೆ ಹೆಚ್ಚಿಸಿಕೊಳ್ಳಲು ಅವಕಾಶ ನೀಡಿದೆ. ವಾರಕ್ಕೆ 48 ಗಂಟೆ, ದಿನಕ್ಕೆ 8 ಗಂಟೆ ದುಡಿಮೆ ಎಂಬ ಇದುವರೆಗೂ ಇದ್ದ ಕಾನೂನು ಇರುವುದಿಲ್ಲ. ಎರಡನೇಯದಾಗಿ ಕಾರ್ಖಾನೆ ಕಾಯ್ದೆಯಲ್ಲಿನ ‘ಕಾರ್ಖಾನೆ’ ಕುರಿತಾದ ವ್ಯಾಖ್ಯಾನವನ್ನು ಬದಲಾಯಿಸುವುದು, ಮೂರನೇಯದಾಗಿ, ಮಹಿಳೆಯರು ರಾತ್ರಿ ಪಾಳಿ (Night Shift)ಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವುದು ಮತ್ತು ಕೊನೆಯದಾಗಿ ಅಪಾಯಕಾರಿ ಕೆಲಸಗಳಲ್ಲಿ ಮಹಿಳಾ ಕಾರ್ಮಿಕರ ನೇಮಕ ಸಂಬಂಧ ಇದ್ದ ನಿಬಂಧನೆಗಳನ್ನು ಸಡಿಲಗೊಳಿಸುವುದು.
ಹೊಸ ತಿದ್ದುಪಡಿಯಂತೆ ವಾರದ ದುಡಿಮೆ 48 ಗಂಟೆ ಮಾತ್ರವೇ ಇದ್ದು, ದಿನದ ದುಡಿಮೆಯನ್ನು 10 ಗಂಟೆಗೆ ಹೆಚ್ಚಿಸುವುದು. ಅಂದರೆ ವಾರದಲ್ಲಿ ಆರು ದಿನ ಮಾಡಬಹುದಾದ ದುಡಿಮೆಯನ್ನು ಐದು ದಿನಗಳಲ್ಲಿ ಮಾಡಿ ಮುಗಿಸಬೇಕು! ಉಳಿದ ಎರಡು ದಿನ ದುಡಿಮೆಯಿಂದ ಮುಕ್ತಿ ಹೊಂದಬಹುದು! ಇದು ಮೇಲ್ನೋಟಕ್ಕೆ ಸರಿ ಎನಿಸಬಹುದು, ವಾರದಲ್ಲಿ ಎರಡು ದಿನ ಫ್ರೀ ಆಗಿ ಓಡಾಡಿಕೊಂಡಿರಬಹುದಲ್ಲವೇ ಎನಿಸಬಹುದು? ಆದರೆ ಇದು ಭಾರಿ ಅಪಾಯ ತಂದೊಡ್ಡಲಿದೆ.
ಈಗಿರುವ ‘ಕರ್ನಾಟಕ ಕಾರ್ಖಾನೆಗಳ ಕಾಯ್ದೆ – 1948’ ರಂತೆ ದಿನದಲ್ಲಿ 8 ಗಂಟೆ ಮತ್ತು ವಾರದಲ್ಲಿ 48 ಗಂಟೆ ದುಡಿಮೆ, ಒಂದು ದಿನ ವೇತನ ಸಹಿತ ರಜೆ ಇರಬೇಕು ಎಂಬದನ್ನು ಸ್ಪಷ್ಟವಾಗಿ ಹೇಳುತ್ತದೆ. ಈಗಿನ ತಿದ್ದುಪಡಿ ಕಾಯ್ದೆಯಲ್ಲಿ ದಿನಕ್ಕೆ 10 ಗಂಟೆ ದುಡಿಮೆ, ವಾರದಲ್ಲಿ ಐದು ದಿನ 48 ಗಂಟೆ ದುಡಿಮೆ ಎಂದು ಬದಲಾಯಿಸಲಾಗಿದೆ. ಆಶ್ಚರ್ಯವೆಂದರೆ ವಾರದಲ್ಲಿ ಐದು ದಿನ ದುಡಿಮೆ ಎಂದಾದಲ್ಲಿ ವಾರದ ಎರಡು ದಿನ ವೇತನ ಸಹಿತ ರಜೆ ಎಂದು ಇರಬೇಕಿತ್ತು. ಆದರೆ ಹಾಗೆ ಬದಲಾವಣೆ ಮಾಡದೇ ಒಂದು ದಿನ ಮಾತ್ರವೇ ವೇತನ ಸಹಿತ ರಜೆ ಎಂದು ತಿದ್ದುಪಡಿ ಮಾಡಲಾಗಿದೆ!
ಕೇಂದ್ರ ಸರ್ಕಾರ ಕಾರ್ಪೊರೇಟ್ ಧಣಿಗಳನ್ನು ತೃಪ್ತಿಪಡಿಸಲು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ 2021ರಲ್ಲೇ ನಾಲ್ಕು ಸಂಹಿತೆಗಳನ್ನಾಗಿ (Codification) ರೂಪಿಸಿದೆ. ಆದರೆ ಇದು ಜಾರಿಯಾಗಿಲ್ಲ. ಇದೀಗ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕಾಂಗ್ರೆಸ್ ನೇತೃತ್ವ ರಾಜ್ಯ ಸರ್ಕಾರವು ಕಾರ್ಮಿಕ ಸಂಘಟನೆಗಳ ವಿರೋಧದ ನಡುವೆಯೂ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದೆ. ಕೇಂದ್ರ ಸರ್ಕಾರ ಒತ್ತಡ ಹೇರುತ್ತಿರುವುದರಿಂದ ನಾವು ಅನಿವಾರ್ಯವಾಗಿ ಮಾಡಬೇಕಿದೆ ಎಂದು ಕೇಂದ್ರದ ಮೇಲೆ ಹಾಕುತ್ತಿದೆ, ಹಾಗೆಯೇ ಕೇಂದ್ರ ಸರ್ಕಾರ ಕೂಡ ಲೇಬರ್ ಕೋಡ್ ಜಾರಿಯನ್ನು ರಾಜ್ಯ ಸರ್ಕಾರಗಳ ಮೇಲೆ ಹಾಕಿ, ಪರದೆಯ ಹಿಂದೆ ಅವಿತುಕೊಳ್ಳಲು ಪ್ರಯತ್ನಿಸಿದೆ. ಅಸಲಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕೇಂದ್ರ ಮತ್ತು ರಾಜ್ಯ ಸರ್ಕಾರಗಳರೆಡೂ ಲೇಬರ್ ಕೋಡ್ ಜಾರಿಗೆ ತುದಿಗಾಲಲ್ಲಿ ನಿಂತಿವೆ ಎಂಬುದು ಸ್ಪಷ್ಟ.
ಕೇಂದ್ರ ಸರ್ಕಾರವು 29 ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳಲ್ಲಿ ವಿಲೀನಗೊಳಿಸಿ, ‘ಕಾರ್ಮಿಕರು ಕಷ್ಟಪಟ್ಟು ದುಡಿಯಬೇಕು, ಆದರೆ ವೇತನ ಕೇಳಬಾರದು, ಫ್ಯಾಕ್ಟರಿ ಇರಬೇಕು ಆದರೆ ಖಾಯಂ ಕಾರ್ಮಿಕರು ಇರಬಾರದು’ ಎಂಬ ರೀತಿಯಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಅಂದರೆ, ಖಾಯಂ ಕೆಲಸ ಎಂಬುದು ಇನ್ನು ಮುಂದೆ ಇರುವುದಿಲ್ಲ. ಒಟ್ಟಾರೆ ಈ ಕೋಡ್ ಮೂಲಕ ಕಾರ್ಮಿಕರ ರಕ್ಷಣೆಗೆ ಇದ್ದ ಎಲ್ಲಾ ಕಾನೂನುಗಳನ್ನು ಪೂರ್ತಿಯಾಗಿ ಕಸಿಯಲಾಗಿದೆ. ಈ ಕಾರ್ಮಿಕ ಸಂಹಿತೆಯಲ್ಲಿ ದಿನದ ದುಡಿಮೆ ಅವಧಿಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಅದರಂತೆ ದಿನದ ದುಡಿಮೆಯನ್ನು 12 ಗಂಟೆಗೆ ಹೆಚ್ಚಿಸಲಾಗಿದೆ. ಮೂರು ತಿಂಗಳ ಅವಧಿಯಲ್ಲಿ ಹೆಚ್ಚುವರಿ ದುಡಿಮೆ (over time) 50 ಗಂಟೆಗಿಂತ ಹೆಚ್ಚಿರಬಾರದು ಎಂಬ ನಿಬಂಧನೆಯನ್ನು ತೆಗೆದು ಹಾಕಿ, 144 ಗಂಟೆ ಹೆಚ್ಚುವರಿ ದುಡಿಮೆ ಮಾಡಿಸಿಕೊಳ್ಳಬಹುದು ಎಂದು ಬದಲಾಯಿಸಲಾಗಿದೆ. ಐಟಿಬಿಟಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ಪೂರ್ತಿ ವಿನಾಯಿತಿ ನೀಡಲಾಗಿದೆ.
ಒಕ್ಕೂಟ ತತ್ವಕ್ಕೆ ವಿರುದ್ಧವಾಗಿ ಕೇಂದ್ರದ ಈ ಕಾಯ್ದೆಯನ್ನು ರಾಜ್ಯಗಳು ಜಾರಿಗೊಳಿಸಬೇಕೆಂದು ಮೋದಿ ಸರ್ಕಾರ ಒತ್ತಡ ಹೇರುತ್ತಿದೆ. ‘ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ರಾಜ್ಯಕ್ಕೆ ಆಗಮಿಸಿರುವ ಮನೋಜ್ ಜೈನ್ ಎಂಬ ನೋಡಲ್ ಅಧಿಕಾರಿಯು ಲೇಬರ್ ಕೋಡ್ ಜಾರಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ, ಬೇರೆ ದಾರಿ ಇಲ್ಲದೇ ನಾವು ಜಾರಿ ಮಾಡಬೇಕಿದೆ’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರ ಸರ್ಕಾರ ರೂಪಿಸಿರುವ ಲೇಬರ್ ಕೋಡ್ ಅನುಷ್ಠಾನಗೊಳಿಸುವುದಿಲ್ಲ ಎಂದು ನಿರ್ಭೀತಿಯಿಂದ ಸಾರಿವೆ. ಕಾಂಗ್ರೆಸ್ ನೇತೃತ್ವ ರಾಜ್ಯ ಸರ್ಕಾರವೂ ಇಂಥದ್ದೊಂದು ನಿಲುವಿಗೆ ಬಂದು ರಾಜ್ಯದ ಕಾರ್ಮಿಕ ವರ್ಗವನ್ನು ರಕ್ಷಿಸುವ ಕೆಲಸ ಮಾಡಬೇಕಿತ್ತು. ಜತೆಗೆ ಒಕ್ಕೂಟ ತತ್ವವನ್ನು ಉಳಿಸುವ ಐತಿಹಾಸಿಕ ಕರ್ತವ್ಯವನ್ನು ನಿಭಾಯಿಸಬೇಕಿತ್ತು. ಆದರೆ, ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವಲ್ಲಿ ಆದರೆ ಬಿಜೆಪಿ ರಾಜ್ಯ ಸರ್ಕಾರಗಳಿಗಿಂತಲೂ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆತುರ ತೋರುತ್ತಿರುವುದು, ಅದರ ಬಂಡವಾಳದಾರರ ಪರವಾದ ಧೋರಣೆಯನ್ನು ಬಯಲುಗೊಳಿಸುತ್ತದೆ.

8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ, 8 ಗಂಟೆ ನಿದ್ರೆ ಎಂಬ ಕಾನೂನಿಗಾಗಿ ಕಾರ್ಮಿಕರು ಸಮರಶೀಲ ಚಳವಳಿಗಳನ್ನು ನಡೆಸಿ ಬಲಿದಾನಗೈದಿದ್ದಾರೆ. 19ನೇ ಶತಮಾನದಲ್ಲಿ ಜಾಗತಿಕವಾಗಿ 8 ಗಂಟೆ ದುಡಿಮೆ ಉಳಿದ 16 ಗಂಟೆ ವಿಶ್ರಾಂತಿ ಮತ್ತು ನಿದ್ರೆಗೆ ಅಗತ್ಯ ಎಂದು ವೈಜ್ಞಾನಿಕ ಮತ್ತು ತಾತ್ವಿಕ ತಳಹದಿ ಮೇಲೆ ಬೇಡಿಕೆಯನ್ನಿಟ್ಟು ಹೋರಾಟಗಳು ಶುರುವಾದವು. ನಿರುದ್ಯೋಗದ ಹೆಚ್ಚಳ, ಯಾಂತ್ರೀಕರಣ ಮತ್ತು ಆಂತರಿಕ ಯುದ್ಧದ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ತಲೆದೋರಿ ನಿರುದ್ಯೋಗ ಉಲ್ಬಣಿಸಿತ್ತು. ನಿರುದ್ಯೋಗವನ್ನು ನಿಯಂತ್ರಣಕ್ಕೆ ತರುವ ವಿಚಾರದಲ್ಲಿ ಈ ಬೇಡಿಕೆಗೆ ಮಹತ್ವ ಬಂದಿತ್ತು. ಮಾತ್ರವಲ್ಲದೇ ಮನುಷ್ಯನ ದುಡಿಮೆಯ ಸಾಮರ್ಥ್ಯ, ಇಂದೂ ದುಡಿದು, ನಾಳೆಯೂ ಅದೇ ಚೈತ್ಯನ್ಯ-ಲವಲವಿಕೆಯಿಂದ ಕಾರ್ಖಾನೆಗೆ ದುಡಿಮೆಗೆ ಬರಬೇಕಿದ್ದಲ್ಲಿ ಹೆಚ್ಚಿನ ವಿಶ್ರಾಂತಿ ಅತ್ಯಗತ್ಯವಾಗಿತ್ತು.
1867 ರಲ್ಲಿ ಅಮೆರಿಕಾದ ಇಲಿನಾಯ್ ಪ್ರಾಂತದ ಶಾಸನಸಭೆಯು ಶಾಸನ ಮಂಡಿಸಿ 8 ಗಂಟೆಗಳ ಕೆಲಸ ಕಾಯ್ದೆಬದ್ಧವೆಂದು ಘೋಷಿಸಿತು. ಪರಿಣಾಮವಾಗಿ ಚಿಕಾಗೋ ನಗರದ ಇತಿಹಾಸದಲ್ಲೇ ಎಂದೂ ಕೇಳರಿಯದ ರೀತಿಯ ಕಾರ್ಮಿಕರ ಮೆರವಣಿಗೆಗಳು ಸಾಗಿದವು. ಹನ್ನರೆಡು ಸಾವಿರ ಕಾರ್ಖಾನೆಗಳ ಸುಮಾರು 3 ಲಕ್ಷದ 40 ಸಾವಿರ ಕಾರ್ಮಿಕರು ತಮ್ಮ ಕೆಲಸಗಳನ್ನು ನಿಲ್ಲಿಸಿ ಬೀದಿಗಿಳಿದಿದ್ದರು. ಈ ಹೋರಾಟವೇ ‘ಮೇ 1 ಕಾರ್ಮಿಕ ದಿನದ’ ಘೋಷಣೆಗೆ ಕಾರಣವಾಯ್ತು. ಕೈಗಾರೀಕರಣಗೊಂಡ ದೇಶಗಳಂತೆ ಭಾರತದಲ್ಲೂ 14 ಗಂಟೆಗಳ ದುಡಿಮೆ ಅವಧಿ ಇತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು 1942 ರಿಂದ 1946 ರ ಅವಧಿಯಲ್ಲಿ ಬ್ರಿಟಿಷ್ ವೈಸರಾಯ್ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ಈ ವೇಳೆಯಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಹಲವು ಕಾನೂನುಗಳನ್ನು ಜಾರಿಗೆ ತಂದರು. ಅದರಲ್ಲಿ ಬಹಳ ಮುಖ್ಯವಾಗಿ ಅದುವರೆಗೂ ಇದ್ದ 14 ಗಂಟೆ ಕೆಲಸದ ಅವಧಿಯನ್ನು ರದ್ದು ಮಾಡಿ, 8 ಗಂಟೆ ದುಡಿಮೆಯ ಅವಧಿಗೆ ಇಳಿಸಿದರು.
ದಿನದ ದುಡಿಮೆ; ಹಾಗಂದರೇನು?
ಕಾರ್ಲ್‍ಮಾಕ್ರ್ಸ್ ಅವರ ‘ದಿ ಕ್ಯಾಪಿಟಲ್’ ಕೃತಿಯಲ್ಲಿ ಹೀಗೆ ವಿಶ್ಲೇಷಿಸಲಾಗಿದೆ. ದಿನದ ದುಡಿಮೆ ಎಂದರೆ, ‘ದಿನದ 24 ಗಂಟೆಯ ಅವಧಿಯಲ್ಲಿ ದುಡಿಮೆಗಾರ ತನ್ನ ಚೈತನ್ಯದ ನಿರ್ಧಿಷ್ಟ ಪ್ರಮಾಣವನ್ನು ದುಡಿಮೆಗೆ ಮೀಸಲಿಡಲು ಸಾಧ್ಯ. ಉಳಿದ ಸಮಯವು ಶ್ರಮಶಕ್ತಿಯ ವಿಶ್ರಾಂತಿಗೆ ಮೀಸಲಾಗಿರುತ್ತದೆ. ಈ ಭೌತಿಕ ಮಿತಿಗಳ ಜತೆ ದುಡಿಮೆಯ ಅವಧಿ ಅಸಾಧ್ಯ ಎನಿಸುವಷ್ಟು ಧೀರ್ಘವಾಗದಂತೆ ನೋಡಿಕೊಳ್ಳಲು ನೈತಿಕ ಮಿತಿಗಳೂ ಇವೆ. ದುಡಿಮೆಗಾರನ ಬೌದ್ಧಿಕ ಮತ್ತು ಸಾಮಾಜಿಕ ಆಸಕ್ತಿಗಳಿಗಾಗಿಯೂ ದಿನದ ಒಂದಷ್ಟು ಕಾಲ ಅವಶ್ಯವಾಗಿಬೇಕು. ಇದು ಒಂದು ಸಮಾಜ ಎಷ್ಟು ಪ್ರಗತಿಶೀಲವಾಗಿದೆ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ.’ ಅಂದರೆ ದಿನದ ದುಡಿಮೆಯ ಅವಧಿಯನ್ನು ನಿಗದಿ ಮಾಡುವಾಗ ಸಾಮಾಜಿಕ ಅಗತ್ಯ ಮತ್ತು ಮನುಷ್ಯನ ಜೈವಿಕ ಮಿತಿಯನ್ನು ಅನುಸರಿಸಿ ನಿಗದಿಪಡಿಸುವುದು ಸಹಜ ನ್ಯಾಯವಾಗುತ್ತದೆ.
ಆದರೆ ಬಂಡವಾಳಹಿ ವ್ಯವಸ್ಥೆ ತನ್ನ ಲಾಭವನ್ನಷ್ಟೇ ನೋಡುತ್ತದೆ ಹೊರತು ದುಡಿಮೆಗಾರನ ಭೌತಿಕ ಮಿತಿಗಳನ್ನು ಅದು ಅಲಕ್ಷಿಸುತ್ತದೆ. ಉದಾಹರಣೆಗೆ ಇಂಗ್ಲೆಂಡಿನ ಬಟ್ಟೆ ಗಿರಣಿಗಳಲ್ಲಿ ಮಹಿಳಾ ಕಾರ್ಮಿಕರು ಹಾಗೂ ಬಾಲ ಕಾರ್ಮಿಕರನ್ನು ಇವರ ಭೌತಿಕ ಮಿತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇತರೆ ಕಾರ್ಮಿಕರಂತೆಯೇ ದುಡಿಸಿಕೊಳ್ಳಲಾಗುತ್ತಿತ್ತು. ಬಂಡವಾಳದ ಈ ಕ್ರೌರ್ಯವನ್ನು ಕಾರ್ಲ್‍ಮಾಕ್ರ್ಸ್ ‘ಬಂಡವಾಳ, ಸತ್ತ ದುಡಿಮೆ ಕಳೇಬರವಾಗಿದ್ದು, ರಕ್ತ-ಪಿಶಾಚಿಯಂತೆ ಜೀವಂತ ದುಡಿಮೆಗಾರನ ರಕ್ತವನ್ನು ಹೀರಿ ಬೆಳೆಯುತ್ತದೆ’ ಎಂದು ಅತ್ಯಂತ ಕಠೋರ ಶಬ್ಧಗಳಲ್ಲಿ ಹೇಳಿದ್ದಾರೆ.
ಬಂಡವಾಳದಾರರು ದಿನದ ಹೆಚ್ಚುವರಿ ದುಡಿಮೆಗೆ ಹಪಹಪಿಸುವುದೇಕೆ?
ಬಂಡವಾಳಶಾಹಿ ವ್ಯವಸ್ಥೆಯು ಯಾವಾಗಲೂ ದಿನದ ಹೆಚ್ಚುವರಿ ದುಡಿಮೆಗೆ ಹಾತೊರೆಯುತ್ತದೆ! ಬಂಡವಾಳ ಎಂದೂ ಕುಂತಲ್ಲಿ ಕೂರುವುದಿಲ್ಲ! ಇನ್ನಷ್ಟು ಮತ್ತಷ್ಟೂ ಬೆಳೆಯಲು ಅದು ಹವಣಿಸುತ್ತದೆ. ಲಾಭವೇ ಬಂಡವಾಳದ ಬೆಳವಣಿಗೆಯ ಪಾತುಪತಾಸ್ತ್ರ! ಈ ಲಾಭದ ಮೂಲ ಇರುವುದು ಹೆಚ್ಚುವರಿ ದುಡಿಮೆ ಎಂಬ ಮಿಗುತಾಯ ಮೌಲ್ಯದಲ್ಲಿ! ಕಾರ್ಲ್‍ಮಾಕ್ರ್ಸ್ ಮಿಗುತಾಯ ಮೌಲ್ಯದ ಕುರಿತು ‘ಮಿಗುತಾಯ ಮೌಲ್ಯಗಳನ್ನು ಸೃಷ್ಟಿಸುವುದು ಹಾಗೂ ಸಾಧ್ಯವಾದಷ್ಟು ಗರಿಷ್ಠ ಮಿಗುತಾಯ ದುಡಿಮೆಯನ್ನು ತನ್ನ ಸ್ಥಿರ ಅಂಗವಾದ ಉತ್ಪಾದನಾ ಸಾಧನಗಳು ಅರಗಿಸಿಕೊಳ್ಳುವಂತೆ ಮಾಡುವುದೇ ಬಂಡವಾಳದ ಏಕೈಕ ಜೀವ ಸೆಲೆ’ ಎಂದು ವಿಶ್ಲೇಷಿಸಿದ್ದಾರೆ. ಜತೆಗೆ ‘ದಿನದ ಕೆಲದ ಅವಧಿಯನ್ನು ಹೆಚ್ಚಿಸುವುದರಿಂದ ಪಡೆದ ಮೌಲ್ಯವು ಪರಮ ಮಿಗುತಾಯ ಮೌಲ್ಯ’ ಎನ್ನುತ್ತಾರೆ. ಹೀಗಾಗಿ ಬಂಡವಾಳದಾರರು ತಮ್ಮ ಸೂಪರ್ ಲಾಭಕ್ಕಾಗಿ ಕಾರ್ಮಿಕರಿಂದ ಹೆಚ್ಚುವರಿ ದುಡಿಮೆಯನ್ನು ಸದಾ ಬೇಡುತ್ತಿರುತ್ತಾರೆ.

ದಿನದ ದುಡಿಮೆ 6 ಗಂಟೆಗೆ ಇಳಿಸಲು ಜಗದಗಲ ಒತ್ತಾಯ
8 ಗಂಟೆ ದುಡಿಮೆ ನೀತಿಯನ್ನು ಜಗತ್ತಿನಾದ್ಯಂತ ಇದೀಗ ಅನುಸರಿಸಲಾಗುತ್ತಿದೆ. ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್‍ಓ) ಇದನ್ನು ನಿಯಮಬದ್ಧಗೊಳಿಸಿದೆ. ಮುಂದುವರಿದು, ವಿಜ್ಞಾನ ತಂತ್ರಜ್ಞಾನದಲ್ಲಾಗಿರುವ ಆವಿಷ್ಕಾರಗಳಿಂದಾಗಿ ಶರವೇಗದ ಉತ್ಪಾದನೆಗೆ ದಾರಿ ಮಾಡಿಕೊಟ್ಟಿದೆ. ಇದರ ಜತೆಯಲ್ಲೇ ಜಗತ್ತಿನಲ್ಲಿ ನಿರುದ್ಯೋಗ ಪ್ರಮಾಣವೂ ಹೆಚ್ಚತೊಡಗಿದೆ. ಹೀಗಾಗಿ ಕೆಲಸದ ಅವಧಿಯನ್ನು ವಾರದಲ್ಲಿ 35 ಗಂಟೆ, 5 ದಿನ ದುಡಿಮೆ, ದಿನದ ದುಡಿಮೆಯನ್ನು 6 ಗಂಟೆಗೆ ಇಳಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ದುಡಿಯುವ ಅವಧಿಯನ್ನು ಇಳಿಕೆ ಮಾಡಿದರೂ ತಂತ್ರಜ್ಞಾನದಲ್ಲಿ ಆಗಿರುವ ಕ್ರಾಂತಿಕಾರಕ ಬೆಳವಣಿಗೆಗಳು ಜಗತ್ತಿನ ಮಾನವ ಕುಲ, ಸುಖ ಸಮೃದ್ಧಿಯಿಂದ ಬದುಕಬಹುದಾದ ಉತ್ಪಾದನಾ ಸಾಮಥ್ರ್ಯ ಹೊಂದಿದೆ. ಬಂಡವಾಳಶಾಹಿ ವ್ಯವಸ್ಥೆಯ ಈ ಪೈಪೋಟಿಯ ಜೂಜಾಟದಲ್ಲಿ, ಉತ್ಪಾದಕತೆ ಎಂಬುದು ‘ಸಾಮಾಜಿಕ ಅಗತ್ಯ’ವನ್ನು ಅನುಸರಿಸಿ ಇರುವುದಿಲ್ಲ, ಬದಲಾಗಿ ಅದು ಹುಚ್ಚು ಕುದುರೆಯಂತೆ ದುರಾಸೆಯ ಲಾಭದ ಹಿಂದೆ ಓಡುವುದರಿಂದ, ಕಾರ್ಮಿಕರನ್ನು ಗಾಣದೆತ್ತಿನಂತೆ ದುಡಿಸಿಕೊಂಡು, ಲಾಭದ ಹಪಾಹಪಿಗೆ ಬೀಳುತ್ತದೆ.
12 ಗಂಟೆ ಕೆಲಸದ ಅವಧಿಯಿಂದ ಕಾರ್ಮಿಕರು ಮತ್ತು ಕಾರ್ಖಾನೆ ಅವಲಂಬಿತರಿಗೆ ಒದಗುವ ಅಪಾಯಗಳು
- ಮನೆಯಿಂದ ಕೆಲಸದ ಸ್ಥಳ ತಲುಪುವ ಪ್ರಯಾಣದ ವೇಳೆ ಸೇರಿ ವಿಶ್ರಾಂತಿಗೆ ಅವಕಾಶ ಇರುವುದಿಲ್ಲ
- ಕಾರ್ಮಿಕನ/ಳ ಕೆಲಸದ ಸಮಯದಲ್ಲಿ ಮಧ್ಯಂತರ ವಿಶ್ರಾಂತಿಯನ್ನು 5 ಗಂಟೆ ಬದಲಾಗಿ 6 ಗಂಟೆಯ ನಂತರ ನೀಡುವುದರಿಂದ ದುಡಿಮೆಯ ಸಾಮಥ್ರ್ಯ ಕ್ಷೀಣಿಸುತ್ತದೆ.
- ಇದು ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
- ಹೆಚ್ಚಿನ ಸಮಯ ಕಾರ್ಖಾನೆಯಲ್ಲೇ ಕಳೆಯುವುದರಿಂದ ಕುಟುಂಬ ಮತ್ತು ಸಮಾಜದ ಜತೆಗಿನ ಸಂಬಂಧಗಳು ಸಡಿಲಗೊಳ್ಳುತ್ತವೆ ಮತ್ತು ಇವುಗಳಿಂದಾಗಿ ಭವಿಷ್ಯದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.
- ಈಗಿರುವ ಮೂರು ಪಾಳಿ (Shift) ಬದಲಾಗಿ ಎರಡು ಪಾಳಿಯಲ್ಲೇ ಅಗತ್ಯವಿರುವ ಉತ್ಪಾದನೆ ಆಗುವುದರಿಂದ ಹೆಚ್ಚುವರಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗುತ್ತದೆ. ಇದರಿಂದ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುತ್ತವೆ.
- ಹೆಚ್ಚುವರಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಾಗ ಹೆಚ್ಚು ವೇತನ ಪಡೆಯುವ ಖಾಯಂ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ತೆಗೆಯಲಾಗುತ್ತದೆ. ಕಾರ್ಖಾನೆಯಲ್ಲಿ ಪೂರ್ತಿಯಾಗಿ ಖಾಯಂಯೇತರ ಕಾರ್ಮಿಕರಿಂದ ಕಡಿಮೆ ಕೂಲಿಗೆ ದುಡಿಸಿಕೊಳ್ಳಲಾಗುತ್ತದೆ.
- ಆರು ದಿನಗಳ ಕೆಲಸದ ಬದಲಾಗಿ ಐದು ದಿನ ಮತ್ತು ಎರಡು ಪಾಳಿಯಲ್ಲಿ ಮಾತ್ರವೇ ಕೆಲಸ ನಡೆಯುವುದರಿಂದ ಅವಲಂಬಿತ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಾರೆ. ಉದಾಹರಣೆಗೆ ಕ್ಯಾಂಟೀನ್ ನಡೆಸುವವರು ಮತ್ತು ಇಲ್ಲಿನ ಕಾರ್ಮಿಕರು, ಟ್ಯಾಕ್ಸಿ, ಕ್ಯಾಬ್ ಚಾಲಕರು, ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಿಗಳು ಉದ್ಯೋಗ ನಷ್ಟಕ್ಕೆ ಒಳಗಾಗುತ್ತಾರೆ.
- ಮಹಿಳೆಯರಿಗೆ ರಾತ್ರಿಪಾಳಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಅವರ ಸುರಕ್ಷತೆ ಸಮಸ್ಯೆಗಳು ಉದ್ಭವಿಸಲಿವೆ. ಮಹಿಳೆಯರ ಮೇಲೆ ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಯ ಹೊಣೆಯನ್ನು ಯಾರು ಹೊರುತ್ತಾರೆ? ಎಂಬ ಪ್ರಶ್ನೆಗೆ ಸ್ಪಷ್ಟತೆ ಇಲ್ಲ.
ಈ ತಿದ್ದುಪಡಿಯಿಂದ ಮಾಲೀಕರಿಗೆ ಆಗುವ ಅನುಕೂಲಗಳೇನು? - 10 ಗಂಟೆ ಕೆಲಸದ ಅವಧಿಯ ಎರಡು ಶಿಫ್ಟ್ ಗಳಲ್ಲಿ ತನಗೆ ಅಗತ್ಯವಿರುವ ಉತ್ಪಾದನೆಯನ್ನು ತೆಗೆಯುವುದರಿಂದ, ವರ್ಷದಲ್ಲಿ 52 ದಿನಗಳ ಕಾರ್ಖಾನೆಯ ನಿರ್ವಹಣಾ ದಿನಗಳು ಉಳಿತಾವಾಗುತ್ತವೆ. ಇದರಿಂದ 17% ಉತ್ಪಾದನಾ ವೆಚ್ಚ ತಗ್ಗುತ್ತದೆ
- ಹೆಚ್ಚುವರಿ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದರಿಂದ ಕಾರ್ಮಿಕರ ವೇತನದ ಪಾಲು ಮಾಲೀಕರ ಪಾಲಾಗುತ್ತದೆ.
- ಖಾಯಂ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದರಿಂದ ಭಾರಿ ಪ್ರಮಾಣದ (Incentive) ಇಳಿಕೆಯಾಗುತ್ತದೆ.
- ಎರಡೇ ಶಿಫ್ಟ್‍ಗಳು ಇರುವುದರಿಂದ ಸಾರಿಗೆ ವೆಚ್ಚ, ಕ್ಯಾಂಟಿನ್ ಇತ್ಯಾದಿ ವೆಚ್ಚಗಳು ಮಾಲೀಕರಿಗೆ ಉಳಿತಾಯ ಆಗಲಿದೆ.
- ಕಡಿಮೆ ಅವಧಿಯಲ್ಲಿ ಉತ್ಪಾದನೆ ಆಗುವುದರಿಂದ ಹೆಚ್ಚುವರಿ ಕೆಲಸ ನೀಡಬೇಕಿದ್ದ ಎರಡು ಪಟ್ಟು ವೇತನ ಮಾಲೀಕರಿಗೆ ಉಳಿತಾಯ ಆಗಲಿದೆ.
ದಿನದ ದುಡಿಮೆ ಅವಧಿ ಹೆಚ್ಚಿಸುವುದು ಮಾಲಿಕರ ಸೂಪರ್ ಲಾಭಕ್ಕೆ ದಾರಿ ಮಾಡಿಕೊಡುವುದೇ ಆಗಿದೆ, ಇದಲ್ಲದೇ ಇದರಲ್ಲಿ ಕಾರ್ಮಿಕ ವರ್ಗದ ಹಿತ ಕಾಯುವುದಿಲ್ಲ. ಬದಲಾಗಿ ಕಾರ್ಮಿಕರ ರಕ್ತ ಹೀರುತ್ತದೆ. ಈ ಕಾರಣದಿಂದಾಗಿ ಕಾರ್ಮಿಕ ಸಂಘಟನೆಗಳು ‘ಲೇಬರ್ ಕೋಡ್’ ಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿವೆ. ಜುಲೈ 09ಕ್ಕೆ ಅಖಿಲ ಭಾರತ ಮಟ್ಟದ ಮುಷ್ಕರಕ್ಕೂ ಕರೆ ನೀಡಿವೆ. ದೇಶದ ರೈತ ಸಂಘಟನೆಗಳೂ ಬೆಂಬಲ ಘೋಷಿಸಿವೆ. ನಾಗರಿಕರು ಈ ಮುಷ್ಕರನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಶತಾಯಗತಾಯ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು ರಾಜ್ಯದಲ್ಲಿ ಜಾರಿ ಆಗದಂತೆ ತಡೆಯುತ್ತೇವೆ.

ಲಿಂಗರಾಜು ಮಳವಳ್ಳಿ
ಪ್ರಧಾನ ಕಾರ್ಯದರ್ಶಿ
ಸಿಐಟಿಯು ಬೆಂಗಳೂರು ದಕ್ಷಿಣ