ವಿರೋಧಿ ಬಣಗಳಲ್ಲಿನ ರಾಜಕೀಯ ಬಿಕ್ಕಟ್ಟಿನ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿರುವುದರಿಂದಲೇ ಮತ್ತೆ ‘ಡಿಲಿಮಿಟೇಷನ್’ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಲಿಮಿಟೇಷನ್ ಜೊತೆಗೆ ‘ಒಂದು ದೇಶ ಒಂದು ಚುನಾವಣೆ’ಗೆ ಬಹುಮತ ಪಡೆಯಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಈ ಎರಡು ವಿಷಯಗಳು ಅಸ್ತಿತ್ವಕ್ಕೆ ಬರಬೇಕಾದರೆ ಸಂಸತ್ತಿನ ಮೂರನೇ ಎರಡರಷ್ಟು ಬೆಂಬಲ ಬೇಕೇಬೇಕು.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (ಡಿಲಿಮಿಟೇಷನ್) ಮಾಡಿ ಉತ್ತರ ಭಾರತದ ರಾಜ್ಯಗಳ ಸ್ಥಾನಗಳನ್ನು ಹೆಚ್ಚಿಸುವುದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಲವು ವರ್ಷಗಳ ಕನಸು. “ವಿರೋಧ ಪಕ್ಷಗಳು ಮಸೂದೆಯನ್ನು ಬೆಂಬಲಿಸಲು ಒಪ್ಪಿದರೆ ಎಲ್ಲ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳನ್ನು ಸಮಾನವಾಗಿ 50%ರಷ್ಟು ಹೆಚ್ಚಿಸಲು ತಿದ್ದುಪಡಿ ತರುವುದಕ್ಕೆ ಸರ್ಕಾರ ಸಿದ್ಧವಿದೆ” ಎಂದು ಅಮಿತ್ ಶಾ ಅವರು ಬಾಯಿ ಮಾತಿನಲ್ಲಿ ಹೇಳಿದರೂ ದಾಖಲೆಯಲ್ಲಿ ಅಂತಹ ಅಂಶಗಳಿರಲಿಲ್ಲ. ನಿಚ್ಚಳವಾಗಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುವಂತೆ ಡಿಲಿಮಿಟೇಷನ್ ಕಾಯ್ದೆ ರೂಪಿಸಲಾಗಿತ್ತು. ಕೊನೆಗೆ ಸಾಂವಿಧಾನಿಕ ತಿದ್ದುಪಡಿಗೆ ಗೆಲುವಾಗದೆ ದೊಡ್ಡ ಹಾನಿ ತಪ್ಪಿತು.
‘ಡಿಲಿಮಿಟೇಷನ್’, ರಾಜ್ಯಗಳ ರಚನೆ, ‘ಒನ್ ನೇಷನ್ ಒನ್ ಎಲೆಕ್ಷನ್’ ನಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸಾಂವಿಧಾನಿಕ ತಿದ್ದುಪಡಿಗಳು ಅಗತ್ಯವಿರುತ್ತವೆ ಮತ್ತು ಅದಕ್ಕಾಗಿ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಮತ ಪಡೆಯಬೇಕಾಗುತ್ತದೆ. ಮಹಿಳಾ ಮೀಸಲಾತಿಯ ಹೆಗಲ ಮೇಲೆ ಬಂದೂಕು ಇಟ್ಟು, ಜನಸಂಖ್ಯಾ ಪ್ರಮಾಣದಲ್ಲಿ ಡಿಲಿಮಿಟೇಷನ್ ಎಂಬ ಟ್ರಿಗರ್ ಒತ್ತಲು ಯತ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ‘ಇಂಡಿಯಾ’ ಬಣ ಮುಖಭಂಗ ಮಾಡಿತ್ತು. ಮೂರನೇ ಎರಡರಷ್ಟು ಬಲ ಸಿಗಬೇಕಾದರೆ ವಿರೋಧ ಪಕ್ಷಗಳ ಬೆಂಬಲವೂ ಅಗತ್ಯವಿರುತ್ತದೆ. ದಕ್ಷಿಣ ರಾಜ್ಯಗಳಿಗೆ ದೊಡ್ಡ ಹೊಡೆತ ನೀಡಲಿದ್ದ ಡಿಲಿಮಿಟೇಷನ್ ವಿರುದ್ಧ ಡಿಎಂಕೆ, ಟಿಎಂಸಿ ಪಕ್ಷಗಳು ನಿಲುವು ತಾಳಿದ್ದವು. ಇಂಡಿಯಾ ಬ್ಲಾಕ್ನ ಭಾಗವಾಗಿದ್ದ ಈ ಪಕ್ಷಗಳು ಮೋದಿ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸುವುದು ಸಹಜವಾಗಿತ್ತು. ಹೀಗಾಗಿ ಬಹುಮತ ಸಿಗಲಿಲ್ಲ.
ಡಿಲಿಮಿಟೇಷನ್ಗೆ ಮತದಾನ ನಡೆದ ದಿನ ಲೋಕಸಭೆಯಲ್ಲಿ ಒಟ್ಟು 528 ಸಂಸದರು ಹಾಜರಿದ್ದರು. ಸಂವಿಧಾನ ತಿದ್ದುಪಡಿ ನಿಯಮದ ಪ್ರಕಾರ ವಿಧೇಯಕ ಪಾಸ್ ಆಗಲು ಹಾಜರಿದ್ದವರಲ್ಲಿ 3ನೇ 2ರಷ್ಟು ಅಂದರೆ ಕನಿಷ್ಠ 352 ಮತಗಳು ಬೇಕಾಗಿದ್ದವು. 298 ಮತಗಳು ವಿಧೇಯಕದ ಪರ ಬಿದ್ದವು (ಇದರಲ್ಲಿ ಬಿಜೆಪಿ ಮತ್ತು ಅದರ ಎನ್ಡಿಎ ಮಿತ್ರಪಕ್ಷಗಳ ಮತಗಳು ಸೇರಿದ್ದವು). 230 ಮತಗಳು ವಿಧೇಯಕದ ವಿರುದ್ಧ ಬಿದ್ದವು (ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ಒಗ್ಗಟ್ಟಾಗಿದ್ದ ‘ಇಂಡಿಯಾ’ ಬಣದ ಮತಗಳು ಇದರಲ್ಲಿದ್ದವು). ಎನ್ಡಿಎ ಒಕ್ಕೂಟವು ಒಟ್ಟಾಗಿ ನಿಂತು ವಿಧೇಯಕದ ಪರ ಮತ ಚಲಾಯಿಸಿದರೂ, 54 ಮತಗಳ ಕೊರತೆ ಎದುರಾಯಿತು. ವಿರೋಧ ಪಕ್ಷಗಳು ಸಂಪೂರ್ಣ ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಈ ವಿಧೇಯಕ (131ನೇ ಸಂವಿಧಾನ ತಿದ್ದುಪಡಿ) ಲೋಕಸಭೆಯಲ್ಲೇ ತಿರಸ್ಕೃತಗೊಂಡಿತು. ಕೇಂದ್ರ ಸರ್ಕಾರ ತನ್ನ ದುಸ್ಸಾಹಸವನ್ನು ಕೈಬಿಡಬೇಕಾಯಿತು.
ಆದರೆ, ಅದೇ ಸಂದರ್ಭದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳಲ್ಲಿ, ‘ಇಂಡಿಯಾ ಒಕ್ಕೂಟ ಮಹಿಳೆಯರಿಗೆ ಅನ್ಯಾಯ ಮಾಡಿದೆ’ ಎಂದು ಬಿಜೆಪಿ ನಾಯಕರು ಭಾರೀ ಪ್ರಚಾರ ಮಾಡಿದರು. ಈಗ ಸಮಯ ಬದಲಾಗಿದೆ. ರಾಜ್ಯಗಳಲ್ಲಿ ಸರ್ಕಾರಗಳು ಬದಲಾಗಿವೆ. ಬಿಜೆಪಿ ತನ್ನ ಗುರಿ ಮುಟ್ಟಲು ಹೊಸ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಉಂಟಾಗಿರುವ ಅಸ್ಥಿರತೆಯನ್ನು ಅನುಕೂಲವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಆಲೋಚಿಸುತ್ತಿದೆ.
ಇಂಡಿಯಾ ಒಕ್ಕೂಟದ ಭಾಗವಾಗಿದ್ದ ಡಿಎಂಕೆ ಸಖ್ಯವನ್ನು ತೊರೆದಿರುವ ಕಾಂಗ್ರೆಸ್, ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರದೊಂದಿಗೆ ಸೇರಿಕೊಂಡಿದೆ. ಹೀಗಾಗಿ, ಇಂಡಿಯಾ ಬಣದಿಂದ ಹೊರಗುಳಿಯಲು ಮುಂದಾಗಿರುವ ಡಿಎಂಕೆ, ಮುಂದೇನು ಮಾಡುತ್ತದೆ ಎಂಬುದೇ ಕುತೂಹಲ. ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷವಾದ ಟಿಎಂಸಿಯಲ್ಲಿ ಅರಾಜಕತೆ ಉಂಟಾಗಿದೆ. ವಿಧಾನಸಭಾ ಚುನಾವಣೆ ಸೋತ ಬಳಿಕ, ಟಿಎಂಸಿ ನುಚ್ಚು ನೂರಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ಸಿಪಿಯನ್ನು ಬಿಜೆಪಿ ನಾಯಕರು ಯಶಸ್ವಿಯಾಗಿ ಒಡೆದು ಹಾಕಿದ್ದರು. ವಿರೋಧಿಗಳ ಬಲ ಕುಗ್ಗಿಸಿದ ಬಳಿಕ ಯಶಸ್ವಿಯಾಗಿ ಬಿಜೆಪಿ ಅಧಿಕಾರ ಹಿಡಿಯಿತು. ಬಿಜೆಪಿ ಬಲಗೊಳ್ಳಲು ಚುನಾವಣಾ ಆಯೋಗದ ಸಹಕಾರವು ದೊಡ್ಡಮಟ್ಟದಲ್ಲಿ ಇದೆ ಎಂಬುದು ವಿರೋಧಿ ಬಣದ ಆಕ್ಷೇಪವಾಗಿತ್ತು.
ಈಗ ಮಹಾರಾಷ್ಟ್ರ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯೊಳಗೆ ಬಿರುಕು ಉಂಟಾಗಿದೆ. ಚುನಾವಣೆ ಮುಗಿದ ತಕ್ಷಣ, ಟಿಎಂಸಿ ಹೈಕಮಾಂಡ್ ಹಿರಿಯ ನಾಯಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಲು ಸ್ಪೀಕರ್ ಅವರಿಗೆ ಪತ್ರ ಸಲ್ಲಿಸಿತು. ಆದರೆ, ಈ ಪತ್ರದಲ್ಲಿ ತಮ್ಮ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ರಿತಬ್ರತಾ ಬ್ಯಾನರ್ಜಿ ಮತ್ತು ಅವರ ಬೆಂಬಲಿಗ ಶಾಸಕರು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಗೆ ದೂರು ನೀಡಿದರು. ಈ ಆಂತರಿಕ ಕಾದಾಟ ತಾರಕಕ್ಕೇರಿದಾಗ, ಟಿಎಂಸಿ ಪಕ್ಷವು ರಿತಬ್ರತಾ ಬ್ಯಾನರ್ಜಿ ಅವರನ್ನು ಪಕ್ಷದಿಂದ ಉಚ್ಛಾಟಿಸಿತು.
ಉಚ್ಛಾಟನೆಯ ಬೆನ್ನಲ್ಲೇ ರಿತಬ್ರತಾ ಬ್ಯಾನರ್ಜಿ ಅವರು ಟಿಎಂಸಿಯ ಒಟ್ಟು 80 ಶಾಸಕರ ಪೈಕಿ 58 ಶಾಸಕರು (ಮೂರನೇ ಎರಡರಷ್ಟು ಬಹುಮತ) ತಮ್ಮ ಕಡೆಗೆ ಇದ್ದಾರೆಂದು ಸ್ಪೀಕರ್ ಮುಂದೆ ಹೋದರು. ಪಕ್ಷಾಂತರ ತಡೆ ಕಾಯ್ದೆಯ ಹೊಡೆತದಿಂದ ತಪ್ಪಿಸಿಕೊಳ್ಳಬೇಕಾದರೆ ಈ ‘ಮೂರನೇ ಎರಡರಷ್ಟು’ ಸಂಖ್ಯಾಬಲ ಅಗತ್ಯವಿತ್ತು. 58 ಶಾಸಕರ ಸಹಿ ಇರುವ ಪತ್ರವನ್ನು ಪರಿಶೀಲಿಸಿದ ಸ್ಪೀಕರ್, ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ‘ಅಧಿಕೃತ ಮುಖ್ಯ ವಿರೋಧ ಪಕ್ಷ’ ಎಂದು ಅಲ್ಲಿನ ಸ್ಪೀಕರ್ ಮಾನ್ಯ ಮಾಡಿದ್ದಾರೆ.

ತಾವು ಮುನ್ನಡೆಸುತ್ತಿರುವ ಬಂಡಾಯ ಬಣಕ್ಕೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ ಎಂದು ರಿತಬ್ರತಾ ಬ್ಯಾನರ್ಜಿ ಇತ್ತೀಚೆಗೆ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನೂ ಕೆಲವು ಟಿಎಂಸಿ ಶಾಸಕರು ತಮ್ಮನ್ನು ಸಂಪರ್ಕಿಸುತ್ತಿದ್ದು, ಶಾಸಕರ ಸಂಖ್ಯೆ 58 ರಿಂದ ಮತ್ತಷ್ಟು ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಶಾಸಕರ ಮೇಲೆ ತಮಗೆ ಹಿಡಿತವಿದ್ದರೂ, ಕಳೆದ ಒಂದು ವಾರದಿಂದ ತಾವು ಯಾವುದೇ ಟಿಎಂಸಿ ಸಂಸದರ ಜೊತೆ ಮಾತನಾಡಿಲ್ಲ ಮತ್ತು ಅವರ ಮುಂದಿನ ನಿರ್ಧಾರಗಳ ಬಗ್ಗೆ ತಮಗೆ ಗೊತ್ತಿಲ್ಲ ಎಂದು ರಿತಬ್ರತಾ ಹೇಳಿಕೊಂಡಿದ್ದಾರೆ. ಆದರೆ, ಇದು ಎಷ್ಟು ವಾಸ್ತವ ಎಂಬುದು ಸ್ಪಷ್ಟವಾಗಬೇಕಿದೆ.
ಬಂಡಾಯ ಶಾಸಕರು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವಕ್ಕೆ ಸವಾಲು ಹಾಕಿದ್ದಾರೆಯೇ ಹೊರತು ಮಮತಾ ಬ್ಯಾನರ್ಜಿ ಅವರನ್ನಲ್ಲ. ತಾವೇ ‘ನಿಜವಾದ ಶಾಸಕಾಂಗ ಟಿಎಂಸಿ ಪಕ್ಷ’ ಎಂದು ಪ್ರತಿಪಾದಿಸುತ್ತಿರುವ ರಿತಬ್ರತಾ ಬಣ, “ಮಮತಾ ಬ್ಯಾನರ್ಜಿ ಅವರು ತಮ್ಮ ಶಾಸಕಾಂಗ ತಂಡಕ್ಕೆ ‘ಮುಖ್ಯ ಸಲಹೆಗಾರ’ರಾಗಿ ಮುಂದುವರಿದು ತಮಗೆ ಮಾರ್ಗದರ್ಶನ ನೀಡಬೇಕು” ಎಂದು ಬಹಿರಂಗವಾಗಿ ವಿನಂತಿಸಿದೆ. ಮಮತಾ ಬ್ಯಾನರ್ಜಿ ಅವರು ಬಿಕ್ಕಟ್ಟು ತಾರಕಕ್ಕೇರಿದಾಗ ವೀಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, “ಆಡಳಿತರೂಢ ಬಿಜೆಪಿ ಸರ್ಕಾರವು ಹಣದ ಬಲ, ಆಮಿಷಗಳು ಮತ್ತು ತನಿಖಾ ಸಂಸ್ಥೆಗಳ ಒತ್ತಡದ ತಂತ್ರಗಳನ್ನು ಬಳಸಿ ಟಿಎಂಸಿ ಪಕ್ಷವನ್ನು ಒಡೆಯಲು ಸಂಚು ರೂಪಿಸಿದೆ” ಎಂದು ನೇರವಾಗಿ ಆರೋಪಿಸಿದ್ದಾರೆ. ಬಂಡಾಯ ಶಾಸಕರು ಮಮತಾ ಅವರನ್ನೇ ತಮ್ಮ ‘ಮುಖ್ಯ ಸಲಹೆಗಾರರಾಗಲು’ ಆಹ್ವಾನಿಸಿದ್ದರೂ, ಮಮತಾ ಬ್ಯಾನರ್ಜಿ ಮತ್ತು ಅವರ ನಿಷ್ಠಾವಂತ ನಾಯಕರು ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. “ಪಕ್ಷದಿಂದ ಉಚ್ಛಾಟನೆಗೊಂಡ ನಾಯಕನೊಬ್ಬ ವಿಧಾನಸಭೆಯಲ್ಲಿ ಟಿಎಂಸಿಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಜೋಡಿ ಹೂವಿನ ಚಿಹ್ನೆ (‘ಜೋರಾ ಘಾಸ್ ಫೂಲ್’) ಮತ್ತು ಅಸಲಿ ಟಿಎಂಸಿ ಸದಾ ಮಮತಾ ಬ್ಯಾನರ್ಜಿ ಅವರೊಂದಿಗೇ ಇರಲಿದೆ” ಎಂದು ಮಮತಾ ಬಣ ಸ್ಪಷ್ಟಪಡಿಸಿದೆ.
“ರಾಜ್ಯದಲ್ಲಿ ನೀವು ನಮ್ಮನ್ನು ಕೆಣಕಿದರೆ ರಾಷ್ಟ್ರ ರಾಜಕಾರಣದಲ್ಲಿ ನಿಮಗೆ ಅಡಚಣೆಯಾಗುತ್ತದೆ” ಎಂಬ ನಿಲುವಿನಲ್ಲಿದ್ದ ಮಮತಾ ಬ್ಯಾನರ್ಜಿಯವರಿಗೆ ತಮ್ಮ ಪಕ್ಷವನ್ನು ಸಮಷ್ಟಿಯಾಗಿ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಈಗ ಟಿಎಂಸಿ ಸಂಸದರಲ್ಲೂ ಕೆಲವರು ಬಿಜೆಪಿಯತ್ತ ಹೊರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. “ಟಿಎಂಸಿಯ ಕನಿಷ್ಠ ಒಂಬತ್ತು ಲೋಕಸಭಾ ಸಂಸದರು ಮತ್ತು ಮೂವರು ರಾಜ್ಯಸಭಾ ಸದಸ್ಯರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ” ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಲೋಕಸಭೆಯಲ್ಲಿ 28 ಮತ್ತು ರಾಜ್ಯಸಭೆಯಲ್ಲಿ 13 ಸಂಸದರನ್ನು ಹೊಂದಿರುವ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ನಂತರದ ಮೂರನೇ ಅತಿ ದೊಡ್ಡ ಪಕ್ಷ ಎಂಬುದು ಗಮನಾರ್ಹ.
ಬಿಜೆಪಿಯತ್ತ ಡಿಎಂಕೆ ಹೊರಳಬಹುದೇ?
ಕಾಂಗ್ರೆಸ್ ನಮಗೆ ದ್ರೋಹ ಬಗೆದಿದೆ ಎಂದು ಆರೋಪಿಸಿರುವ ಡಿಎಂಕೆ, ಜೂನ್ 8ರಂದು ನಡೆಯುವ ಇಂಡಿಯಾ ಬಣದ ಸಭೆಯಿಂದ ಹೊರಗಿರುವುದಾಗಿ ಘೋಷಿಸಿದೆ. “ಈ ಸಭೆಯಲ್ಲಿ ಡಿಎಂಕೆ ಭಾಗವಹಿಸುವುದಿಲ್ಲವಾದರೂ, ಸಭೆಯಲ್ಲಿ ಭಾಗವಹಿಸುವ ಇತರ ಪಕ್ಷಗಳು ಮುಂದಿಡಬಹುದಾದ, ರಾಷ್ಟ್ರ ಕಲ್ಯಾಣದ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಧ್ವನಿ ಎತ್ತುವುದನ್ನು ಡಿಎಂಕೆ ಮುಂದುವರಿಸುತ್ತದೆ” ಎಂದೂ ತಿಳಿಸಲಾಗಿದೆ. ಇನ್ನೊಂದು ಬೆಳವಣಿಗೆಯಲ್ಲಿ ಡಿಎಂಕೆ, ಕಾಂಗ್ರೆಸ್ ನಿಂದ ದೂರ ಕುಳಿತುಕೊಳ್ಳಲು ಲೋಕಸಭೆ ಸಚಿವಾಲಯದಿಂದ ಅನುಮೋದನೆ ಪಡೆದುಕೊಂಡಿದೆ. ಅಂದರೆ ಡಿಎಂಕೆ ಯಾವ ಕಡೆ ಹೊರಳುತ್ತದೆ ಎಂದು ಹೇಳುವುದು ಕಷ್ಟ. 1999 ರಿಂದ 2003 ರ ಅವಧಿಯಲ್ಲಿ ಎನ್ಡಿಎ ಸರ್ಕಾರಕ್ಕೆ ಡಿಎಂಕೆ ಬೆಂಬಲ ನೀಡಿತ್ತು. ಆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದರು ಎಂಬುದನ್ನು ಗಮನಿಸಬಹುದು.
ವಿರೋಧಿ ಬಣಗಳಲ್ಲಿನ ಈ ರಾಜಕೀಯ ಬಿಕ್ಕಟ್ಟಿನ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿರುವುದರಿಂದಲೇ ಮತ್ತೆ ‘ಡಿಲಿಮಿಟೇಷನ್’ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಲಿಮಿಟೇಷನ್ ಜೊತೆಗೆ ‘ಒಂದು ದೇಶ ಒಂದು ಚುನಾವಣೆ’ಗೆ ಬಹುಮತ ಪಡೆಯಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಈ ಎರಡು ವಿಷಯಗಳು ಅಸ್ತಿತ್ವಕ್ಕೆ ಬರಬೇಕಾದರೆ ಸಂಸತ್ತಿನ ಮೂರನೇ ಎರಡರಷ್ಟು ಬೆಂಬಲ ಬೇಕೇಬೇಕು.
ಒಟ್ಟು 543ರ ಸದಸ್ಯರ ಲೋಕಸಭೆಯಲ್ಲಿ 2/3 ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 362 ಸ್ಥಾನಗಳು. ಪ್ರಸ್ತುತ ಎನ್ಡಿಎ ಮೈತ್ರಿಕೂಟದ ಬಲ 292 ಸ್ಥಾನಗಳು. ಟಿಎಂಸಿ ಸಂಸದರ ಬಲ 28 ಸ್ಥಾನಗಳು. ಡಿಎಂಕೆ ಸಂಸದರ ಬಲ 22 ಸ್ಥಾನಗಳು. ಡಿಎಂಕೆ, ಟಿಎಂಸಿ ಸದಸ್ಯರು ಬಿಜೆಪಿ ಜೊತೆ ಸೇರಿಕೊಂಡರೂ ಒಟ್ಟು ಸಂಖ್ಯೆ 342 ಆಗುತ್ತದೆ. ಇದು ಮೂರನೇ ಎರಡರಷ್ಟು ಬಹುಮತಕ್ಕೆ ಬೇಕಾದ 362 ರ ಸಂಖ್ಯೆಗಿಂತ 20 ಸ್ಥಾನಗಳಷ್ಟು ಕಡಿಮೆ ಬೀಳುತ್ತದೆ. ಆದಾಗ್ಯೂ, ಪ್ರಾಯೋಗಿಕವಾಗಿ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಸಿಗುವ ಸಾಧ್ಯತೆ ಇದೆ.
ಈ ಲೇಖನ ಓದಿದ್ದೀರಾ?: ಬಂಗಾರ ಸಾಮ್ರಾಜ್ಯ ಪತನ: ರಾಜೇಶ್ ಎಕ್ಸ್ಪೋರ್ಟ್ಸ್ನ 15.15 ಲಕ್ಷ ಕೋಟಿ ರೂ. ಮಹಾ ಹಗರಣ
ಸಂವಿಧಾನದ ಪ್ರಕಾರ 2/3ರಷ್ಟು ಬಹುಮತದ ನಿಯಮವು ಒಟ್ಟು ಸೀಟುಗಳ ಮೇಲೆ ನಿರ್ಧಾರವಾಗುವುದಿಲ್ಲ. ಬದಲಿಗೆ ಮತದಾನದ ದಿನದಂದು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸಂಸದರ ಸಂಖ್ಯೆಯ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ವಿರೋಧ ಪಕ್ಷದ ಕೆಲವು ಸಂಸದರು ಗೈರುಹಾಜರಾದರೆ ಅಥವಾ ಸಭಾತ್ಯಾಗ ಮಾಡಿದರೆ, ಬಹುಮತಕ್ಕೆ ಬೇಕಾದ ಸಂಖ್ಯೆ 362 ಕ್ಕಿಂತ ಕೆಳಗೆ ಇಳಿಯುತ್ತದೆ. ಆಗ 342 ಸಂಸದರ ಬಲದಲ್ಲೇ ವಿವಾದಿತ ಬಿಲ್ಗಳು ಸುಲಭವಾಗಿ ಪಾಸಾಗುತ್ತವೆ. ಎನ್ಡಿಎ ಕೂಟ, ಟಿಎಂಸಿ ಮತ್ತು ಡಿಎಂಕೆ ಜೊತೆಯಾದಾಗ, ಮೈತ್ರಿಕೂಟದ ಹೊರಗಿರುವ ವೈಎಸ್ಆರ್ ಕಾಂಗ್ರೆಸ್ (YSRCP – 4 ಸೀಟುಗಳು) ಮತ್ತು ಕೆಲವು ಪಕ್ಷೇತರರು ಹಾಗೂ ಸಣ್ಣ ಪಕ್ಷಗಳು (11 ಸೀಟುಗಳು) ಕೂಡ ಪ್ರಮುಖ ವಿಧೇಯಕಗಳಿಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ದೊಡ್ಡ ರಾಜಕೀಯ ಪಲ್ಲಟಗಳಿಗೆ ಕಾರಣವಾಬಹುದು.
ಎಲ್ಲವೂ ಸುಲಭವಾಗುವುದೇ?
ಟಿಎಂಸಿಯನ್ನು ಇಬ್ಭಾಗ ಮಾಡಿದರೂ, ಎಷ್ಟು ಸಂಸದರು ಬಿಜೆಪಿ ಪರ ನಿಲ್ಲುತ್ತಾರೆ ಎಂಬುದು ಇಲ್ಲಿರುವ ಪ್ರಶ್ನೆ. ಎಲ್ಲ ಟಿಎಂಸಿ ಸದಸ್ಯರೂ ಬಿಜೆಪಿಗೆ ಬೆಂಬಲಿಸುತ್ತಾರೆಂದು ಈಗಲೇ ನಿರ್ಧರಿಸುವುದು ಕಷ್ಟ. ಆದರೆ ಬಿಜೆಪಿ ಯಾವುದಾದರೂ ತನ್ನ ಅಜೆಂಡಾ ಪೂರೈಸಿಕೊಳ್ಳಲು ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳುವ ಪಕ್ಷ. ಹೀಗಾಗಿ ಯಾವ ಕಸರತ್ತುಗಳು ಬೇಕಾದರೂ ನಡೆಯಬಹುದು.
“ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಗೆ ಬೆಂಬಲ ಅಗತ್ಯವಿಲ್ಲ. ನಮ್ಮ ಆದ್ಯತೆ ಸಂಸದರ ಬೆಂಬಲ ಪಡೆಯುವುದು. ಟಿಎಂಸಿ ಛಿದ್ರವಾದ ನಂತರ, ಅದರ ಸಂಸದರು ಪ್ರತ್ಯೇಕ ಗುಂಪನ್ನು ರಚಿಸಬಹುದು. ನಮ್ಮ ಮಹತ್ವಾಕಾಂಕ್ಷೆಯ ಶಾಸನಕ್ಕೆ ಅಗತ್ಯವಿರುವ ಸಂಖ್ಯೆಗಳಿಗಾಗಿ ಅವರ ಬೆಂಬಲವನ್ನು ಬಿಜೆಪಿ ಪಡೆಯಬಹುದು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕಾಂಗ್ರೆಸ್ ಜೊತೆ ಸಖ್ಯ ಕಳೆದುಕೊಂಡಿರುವ ಡಿಎಂಕೆ, ಸುಲಭವಾಗಿ ಬಿಜೆಪಿಯ ಜೊತೆ ಹೋಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಊಹಿಸುವುದಿಲ್ಲ. ಸೈದ್ಧಾಂತಿಕವಾಗಿ ಬಿಜೆಪಿ ಮತ್ತು ಡಿಎಂಕೆ ಪಕ್ಷಗಳು ವಿರುದ್ಧ ದಿಕ್ಕಿನಲ್ಲಿವೆ. ಡಿಲಿಮಿಟೇಷನ್ ನಂತಹ ವಿವಾದಿತ ಮಸೂದೆಯನ್ನು ಸುಟ್ಟು ಹಾಕಿ, ಸ್ಟಾಲಿನ್ ಪ್ರತಿಭಟಿಸಿದ್ದರು. ಜೊತೆಗೆ ಇದು ತಮಿಳು ಜನರ ಹಕ್ಕುಗಳನ್ನು ಕಸಿಯುವ ‘ಸಂಚು ಮತ್ತು ಕಪ್ಪು ಕಾಯ್ದೆ’ ಎಂದು ಕರೆದಿದ್ದ ಅವರು, ಆ ಪ್ರತಿಭಟನೆಯನ್ನು ಮಾಡುವಾಗ ಕಪ್ಪು ಶರ್ಟ್ ಧರಿಸಿದ್ದರು. ಗಾಢವಾದ ಭಾಷಾ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುವ ತಮಿಳುನಾಡಿನ ಜನರ ಆಶಯಗಳಿಗೆ ವಿರುದ್ಧವಾಗಿ ಸ್ಟಾಲಿನ್ ಹೆಜ್ಜೆ ಇಡುವುದು ಸುಲಭವಲ್ಲ. “ವಿಷಯಾಧಾರಿತವಾಗಿ ಬಿಜೆಪಿಗೆ ಬೆಂಬಲ ನೀಡಬಹುದು. ಆದರೆ, ಎಂದಿಗೂ ತಮಿಳುನಾಡಿನ ಹಿತಾಸಕ್ತಿಗೆ ದಕ್ಕೆಯಾಗುವುದಕ್ಕೆ ಬಿಡುವುದಿಲ್ಲ. ಡಿಲಿಮಿಟೇಷನ್ ಸಂಗತಿಯು ಜನಸಂಖ್ಯಾ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಅನ್ಯಾಯ ಮಾಡದಿದ್ದರೆ, ಈ ವಿಚಾರವಾಗಿ ಬೆಂಬಲ ನೀಡುವುದಕ್ಕೆ ಸಮಸ್ಯೆ ಇಲ್ಲ” ಎಂಬ ನಿಲುವಿಗೆ ಡಿಎಂಕೆ ಬಂದಿದೆ ಎಂದು ವರದಿಗಳಾಗುತ್ತಿವೆ. ಒಟ್ಟಾರೆ ಬದಲಾದ ರಾಜಕೀಯ ಸನ್ನಿವೇಶಗಳನ್ನು ಬಳಸಿಕೊಂಡು, ವಿವಾದಿತ ಮಸೂದೆಗಳ ಅಂಗೀಕಾರಕ್ಕೆ ಎನ್ಡಿಎ ಸರ್ಕಾರ ಯತ್ನಿಸುತ್ತಿರುವುದಂತೂ ಸತ್ಯ.




