ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಣಕಾಸು ಹಗರಣ ಬಹಿರಂಗವಾಗಿದೆ. ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಭಾರತದ ಹೆಸರನ್ನು ಮುನ್ನೆಲೆಗೆ ತಂದಿದ್ದ, ಫಾರ್ಚೂನ್ 500 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಹಾಗೂ ವಿಶ್ವದ ಒಟ್ಟು ಚಿನ್ನದ ಸಂಸ್ಕರಣೆಯಲ್ಲಿ ಸಿಂಹಪಾಲು ಹೊಂದಿದ್ದ ‘ರಾಜೇಶ್ ಎಕ್ಸ್ಪೋರ್ಟ್ಸ್’ (Rajesh Exports Ltd.) ಸಂಸ್ಥೆಯ ಬೃಹತ್ ಹಗರಣ ಬೆಳಕಿಗೆ ಬಂದಿದೆ.
2026ರ ಜೂನ್ 3ರಂದು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ಹೊರಡಿಸಿದ 109 ಪುಟಗಳ ಸುದೀರ್ಘ ಮಧ್ಯಂತರ ಆದೇಶವು ಇಡೀ ಹೂಡಿಕೆ ಜಗತ್ತನ್ನು ಬೆಚ್ಚಿಬೀಳಿಸಿದೆ. ಕೇವಲ 1,200 ರೂ. ಸಾಲದೊಂದಿಗೆ ಆರಂಭವಾಗಿ, ಸ್ವಿಸ್ ಚಿನ್ನದ ದೈತ್ಯ ಸಂಸ್ಥೆಯನ್ನೇ ಖರೀದಿಸುವ ಹಂತಕ್ಕೆ ಬೆಳೆದಿದ್ದ ಬಿಲಿಯನೇರ್ ಉದ್ಯಮಿ ರಾಜೇಶ್ ಜಸ್ವಂತರಾಯ್ ಮೆಹ್ತಾ ಎಸಗಿರುವ ‘ಲೆಕ್ಕಪತ್ರ ಮಹಾ ವಂಚನೆ’ಯು ಶೇರು ಮಾರುಕಟ್ಟೆಯನ್ನೇ ತಲ್ಲಣಗೊಳಿಸಿದೆ. ಕಳೆದ ಐದು ಆರ್ಥಿಕ ವರ್ಷಗಳಲ್ಲಿ ಕಂಪನಿಯು ಸುಮಾರು 15.15 ಲಕ್ಷ ಕೋಟಿ ರೂಗಳಷ್ಟು ಬೃಹತ್ ಪ್ರಮಾಣದ ಆದಾಯದ ಸುಳ್ಳು ಲೆಕ್ಕವನ್ನು ತೋರಿಸಿದೆ ಎಂದು ಸೆಬಿ ಆರೋಪಿಸಿದೆ. ಇದು ಭಾರತೀಯ ನಿಯಂತ್ರಣ ವ್ಯವಸ್ಥೆಯ ಲೋಪದೋಷಗಳನ್ನೂ ಎತ್ತಿ ತೋರಿಸಿದೆ.
ಗ್ಯಾರೇಜ್ನಿಂದ ಜಾಗತಿಕ ಮಾರುಕಟ್ಟೆಗೆ ರಾಜೇಶ್ ಮೆಹ್ತಾ
ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ನವರೇ ಆದ ರಾಜೇಶ್ ಜಸ್ವಂತರಾಯ್ ಮೆಹ್ತಾ, ಆರಂಭದಲ್ಲಿ ತಮ್ಮ ತಂದೆ ಜಸ್ವಂತರಾಯ್ ಮೆಹ್ತಾ ಅವರ ಆಭರಣ ವ್ಯವಹಾರವನ್ನು ಮುಂದುವರೆಸಲು ಕೈ ಹಾಕಿದ್ದರು. ಆರಂಭದಲ್ಲಿ 1,200 ರೂ. ಸಾಲ ಪಡೆದು ಬೆಳ್ಳಿ ಆಭರಣಗಳ ವ್ಯಾಪಾರ ಆರಂಭಿಸಿದ್ದರು. ನಂತರ, 1989ರಲ್ಲಿ ತಮ್ಮ ಸಹೋದರ ಪ್ರಶಾಂತ್ ಮೆಹ್ತಾ ಅವರೊಂದಿಗೆ ಸೇರಿ ತಮ್ಮ ಮನೆಯ ಸಣ್ಣ ಗ್ಯಾರೇಜ್ನಲ್ಲಿ 10 ಮಂದಿ ಕಾರ್ಮಿಕರೊಂದಿಗೆ ಚಿನ್ನದ ಆಭರಣ ತಯಾರಿಕೆಯನ್ನು ಪ್ರಾರಂಭಿಸಿದರು. ಇದು ಮುಂದೆ, ‘ರಾಜೇಶ್ ಎಕ್ಸ್ಪೋರ್ಟ್ಸ್’ಆಗಿ ಬೆಳೆಯಿತು.
ಬೆಂಗಳೂರಿನಲ್ಲಿ ‘ಶುಭ್ ಜ್ಯುವೆಲರ್ಸ್’ಎಂಬ ರೀಟೇಲ್ ಮಳಿಗೆ ಆರಂಭಿಸಿದ ಮೆಹ್ತಾ, ನಂತರದಲ್ಲಿ ದೇಶಾದ್ಯಂತ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದರು. ನಂತರದಲ್ಲಿ, ಜಗತ್ತಿನ ಒಟ್ಟು ಚಿನ್ನದ ಸಂಸ್ಕರಣಾ ಮಾರುಕಟ್ಟೆಯಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಬರೋಬ್ಬರಿ 35%ರಷ್ಟು ಪಾಲನ್ನು ಹೊಂದುವಷ್ಟು ಬೆಳವಣಿಗೆ ಕಂಡಿತು. ಜಾಗತಿಕ ‘ಫಾರ್ಚೂನ್ 500’ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು.
ಮಾತ್ರವಲ್ಲದೆ, ಈ ಕಂಪನಿಯು 2015ರಲ್ಲಿ ಮೋದಿ ಪ್ರಧಾನಿಯಾಗಿ ಒಂದು ವರ್ಷವಷ್ಟೇ ಕಳದಿದ್ದ ಸಮಯದಲ್ಲಿ, ಅತ್ಯಂತ ದೊಡ್ಡ ತಿರುವು ಪಡೆದುಕೊಂಡಿತು. ಕಂಪನಿಯು ಸ್ವಿಟ್ಜರ್ಲೆಂಡ್ನ ವಿಶ್ವದ ಅತಿ ದೊಡ್ಡ ಚಿನ್ನ ಸಂಸ್ಕರಣಾ ಘಟಕವಾದ ‘ವ್ಯಾಲ್ಕ್ಯಾಂಬಿ’ ಸಂಸ್ಥೆಯನ್ನು ಸಂಪೂರ್ಣವಾಗಿ ಖರೀದಿಸಿತು. ಈ ಮೂಲಕ ಗಣಿಗಳಿಂದ ಹಿಡಿದು ಗ್ರಾಹಕರ ಕೈ ತಲುಪುವವರೆಗಿನ ಇಡೀ ‘ಚಿನ್ನದ ಸಾಮ್ರಾಜ್ಯ’ದ ಮೇಲೆ ನಿಯಂತ್ರಣ ಪಡೆದುಕೊಂಡಿತು.
ರಾಜೇಶ್ ಮೆಹ್ತಾ ಅವರ ಆಸ್ತಿ 2.6 ಬಿಲಿಯನ್ ಡಾಲರ್ ತಲುಪಿತು. ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ 61ನೇ ಅತ್ಯಂತ ಶ್ರೀಮಂತ ವ್ಯಕ್ತಿಯೂ ಆದರು.
ಸೆಬಿ ಮತ್ತು ರಾಜೇಶ್ ಮೆಹ್ತಾ ನಡುವಿನ ದಶಕಗಳ ಸಂಘರ್ಷ
ರಾಜೇಶ್ ಎಕ್ಸ್ಪೋರ್ಟ್ಸ್ ಸಂಸ್ಥೆ ಜಾಗತಿಕವಾಗಿ ಹೆಸರು ಮಾಡುತ್ತಲೇ ಬೆಳದರೂ, ಅದರ ಕರಾಳ ಮುಖಗಳೂ ಅಷ್ಟೇ ಪ್ರಮಾಣದಲ್ಲಿದ್ದವು. ಸೆಬಿ ಮತ್ತು ರಾಜೇಶ್ ಮೆಹ್ತಾ ನಡುವಿನ ವಿವಾದವು ನಿನ್ನೆಯದಲ್ಲ, ಅದು ಮೂರು ದಶಕಗಳಿಗೂ ಹಳೆಯದು.
1995ರಲ್ಲಿ ರಾಜೇಶ್ ಎಕ್ಸ್ಪೋರ್ಟ್ ಸಂಸ್ಥೆಯು ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ದಿನಗಳಲ್ಲೇ ವಿವಾದಕ್ಕೆ ಸಿಲುಕಿತ್ತು. ಆ ವರ್ಷದ ನವೆಂಬರ್ನಲ್ಲಿ ಕಂಪನಿಯು 10 ಕೋಟಿ ರೂ. ಬಂಡವಾಳ ಸಂಗ್ರಹಿಸಲು ತನ್ನ ಪ್ರಥಮ ಸಾರ್ವಜನಿಕ ಕೊಡುಗೆಯನ್ನು (IPO) ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಈ ಐಪಿಒ ಪ್ರಕ್ರಿಯೆಯನ್ನು ಪರಿಶೀಲಿಸಿದ ಸೆಬಿ, ಅದರಲ್ಲಿ ಆದಾಯ ತಿರುಚುವಿಕೆಯಂತಹ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿತು. ಕಂಪನಿಯು ‘ವಿಶ್ವಪ್ರಿಯಾ ಫೈನಾನ್ಷಿಯಲ್ಸ್’ ಎಂಬ ಹಣಕಾಸು ಸಂಸ್ಥೆಯೊಂದಿಗೆ ಅನಧಿಕೃತ ಒಪ್ಪಂದವನ್ನೂ ಮಾಡಿಕೊಂಡಿತ್ತು.
ಜೊತೆಗೆ,ಹಳೆಯ ದಿನಾಂಕದ ‘ಸ್ಟಾಕ್ಇನ್ವೆಸ್ಟ್’ ವ್ಯವಸ್ಥೆಯನ್ನು ಬಳಸಿ, ಸಾವಿರಾರು ನಕಲಿ ಅಥವಾ ಬೇನಾಮಿ ಇಕ್ವಿಟಿ ಅರ್ಜಿದಾರರ ಹೆಸರಿನಲ್ಲಿ ಐಪಿಒಗೆ ಹೂಡಿಕೆ ಮಾಡಲಾಗಿತ್ತು. ಐಪಿಒ ಮುಕ್ತಾಯಗೊಂಡ ತಕ್ಷಣ, ಸಂಗ್ರಹವಾದ ಹಣವನ್ನು ಮತ್ತೆ ಆ ಫೈನಾನ್ಷಿಯರ್ಗಳಿಗೆ ವರ್ಗಾಯಿಸಿ, ಆ ನಕಲಿ ಷೇರುಗಳನ್ನು ಕಂಪನಿಯೇ ಮರಳಿ ಖರೀದಿಸಿತ್ತು.
ಈ ಗಂಭೀರ ಅಕ್ರಮಕ್ಕಾಗಿ ಸೆಬಿ ಕಾಯ್ದೆಯ ಸೆಕ್ಷನ್ 11B ಅಡಿಯಲ್ಲಿ ಕಠಿಣ ಆದೇಶ ಹೊರಡಿಸಿದ ಮಂಡಳಿಯು, ರಾಜೇಶ್ ಮೆಹ್ತಾ ಮತ್ತು ಅವರ ಕಂಪನಿಯನ್ನು 3 ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ನಿಷೇಧಿಸಿತು. ಆ ನಂತರ, ಕಂಪನಿಯು 2015ರಲ್ಲಿ ಸ್ವಿಸ್ನ ವ್ಯಾಲ್ಕ್ಯಾಂಬಿಯನ್ನು ಖರೀದಿಸಿದ ಬಳಿಕ, ಜಾಗತಿಕವಾಗಿ ಮುನ್ನೆಲೆಗೆ ಬಂದಿತು. ಆದರೆ, ಖರೀದಿಯಲ್ಲೂ ಆಂತರಿಕವಾಗಿ ಹಲವಾರು ನಿಯಮಗಳನ್ನು ಉಲ್ಲಂಘಿಸಿತ್ತು.
2021 ಮತ್ತು 2023ರ ನಡುವೆ, ಕಂಪನಿಯು ಲಿಸ್ಟಿಂಗ್ ನಿಯಮಾವಳಿಗಳನ್ನು (LODR) ಸರಿಯಾಗಿ ಪಾಲಿಸುತ್ತಿಲ್ಲ ಎಂದು ಭಾರತದ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್ಎಸ್ಇ), ಬಾಂಬೆ ಸ್ಟಾಕ್ ಎಕ್ಸ್ಚೇಜ್ (ಬಿಎಸ್ಇ) ಹಾಗೂ ಸೆಬಿ ಪದೇ ಪದೇ ಎಚ್ಚರಿಕೆಗಳನ್ನು ನೀಡಿದವು.
ಆದರೂ, ಆಡಿಟ್ ಮಾಡಿದ ಹಣಕಾಸು ವರದಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದಿರುವುದು, ನಗದು ಹರಿವಿನ ವರದಿಗಳನ್ನು ಮುಚ್ಚಿಡುವುದು ಹಾಗೂ ವಾರ್ಷಿಕ ಮಹಾಸಭೆಯ (AGM) ವಿವರಗಳನ್ನು ವಿಳಂಬವಾಗಿ ಸಲ್ಲಿಸುವುದನ್ನು ಕಂಪನಿ ಮುಂದುವರಿಸಿತು. ಇದಕ್ಕಾಗಿ ಸ್ಟಾಕ್ ಎಕ್ಸ್ಚೇಂಜ್ಗಳು ಕಂಪನಿಗೆ ಭಾರಿ ದಂಡವನ್ನೂ ವಿಧಿಸಿದ್ದವು.
ಕಂಪನಿಯ ಪಾರದರ್ಶಕತೆಯ ಕೊರತೆಯಿಂದಾಗಿ, ಪ್ರಮುಖ ರೇಟಿಂಗ್ ಸಂಸ್ಥೆಯಾದ ‘ಬ್ರಿಕ್ವರ್ಕ್ ರೇಟಿಂಗ್ಸ್’, ರಾಜೇಶ್ ಎಕ್ಸ್ಪೋರ್ಟ್ಸ್ ಸಂಸ್ಥೆಯ ರೇಟಿಂಗ್ ಅನ್ನು ‘D’ (ಸಹಕರಿಸದ ವಿತರಕರು) ಹಂತಕ್ಕೆ ದಬ್ಬಿತು.
ಇದೆಲ್ಲದರ ನಡುವೆ, 2024ರ ಮಾರ್ಚ್ 3ರಂದು ಕಂಪನಿಯ ಸಣ್ಣ ಹೂಡಿಕೆದಾರರೊಬ್ಬರು ಸೆಬಿಗೆ ಅಧಿಕೃತ ದೂರು ನೀಡಿದರು. ಕಂಪನಿಯ ಬ್ಯಾಲೆನ್ಸ್ ಶೀಟ್ನಲ್ಲಿ ಭಾರಿ ಪ್ರಮಾಣದ ‘ಟ್ರೇಡ್ ರಿಸೀವಬಲ್ಸ್’ಅನ್ನು (ಗ್ರಾಹಕರಿಂದ ಬರಬೇಕಾದ ಬಾಕಿ ಹಣ) ಯಾವುದೇ ವಸೂಲಾತಿ ಇಲ್ಲದೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಹಾಗೇ ಉಳಿದಿರುವುದನ್ನು ದೂರಿನಲ್ಲಿ ಬೆಟ್ಟು ಮಾಡಿದ್ದರು. ಸಾಮಾನ್ಯವಾಗಿ ಕೆಲವು ವಾರ ಅಥವಾ ತಿಂಗಳುಗಳಲ್ಲಿ ಬರಬೇಕಾದ ಹಣ ವರ್ಷಗಟ್ಟಲೆ ಬಾರದೇ ಇರುವುದು ಲೆಕ್ಕಪತ್ರ ವಂಚನೆಯ ಮುನ್ಸೂಚನೆಯಾಗಿತ್ತು.
ಇದೆಲ್ಲದರ ಪರಿಣಾಮ, ಕಂಪನಿಯು ನಕಲಿ ಬಿಲ್ಗಳ ಮೂಲಕ ಆದಾಯವನ್ನು ಹೆಚ್ಚಿಸಿ ತೋರಿಸುತ್ತಿದೆ ಎಂಬ ಸಂಶಯದ ಮೇರೆಗೆ, ಸೆಬಿ ತನಿಖೆ ಆರಂಭಿಸಿತು. ಕಂಪನಿಯ ಖಾತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲು ‘BDO ಇಂಡಿಯಾ ಸರ್ವಿಸಸ್’ ಸಂಸ್ಥೆಯನ್ನು ಫೋರೆನ್ಸಿಕ್ ಆಡಿಟರ್ ಆಗಿ ನೇಮಿಸಿತು.
ಫೋರೆನ್ಸಿಕ್ ಆಡಿಟ್ ನಡೆಯುವಾಗ ರಾಜೇಶ್ ಮೆಹ್ತಾ ಮತ್ತು ಕಂಪನಿಯ ಮ್ಯಾನೇಜ್ಮೆಂಟ್ ತನಿಖಾಧಿಕಾರಿಗಳಿಗೆ ಸಂಪೂರ್ಣವಾಗಿ ಅಸಹಕಾರ ತೋರಿತು.
ಕಂಪನಿಯ ಮುಖ್ಯ ಇಆರ್ಪಿ ಅಕೌಂಟಿಂಗ್ ಸಾಫ್ಟ್ವೇರ್, ಜರ್ನಲ್ ಎಂಟ್ರಿಗಳು ಹಾಗೂ ಲೆಡ್ಜರ್ ಖಾತೆಗಳನ್ನು ಪರಿಶೀಲಿಸಲು BDO ಇಂಡಿಯಾ ತಂಡಕ್ಕೆ ಮ್ಯಾನೇಜ್ಮೆಂಟ್ ಅವಕಾಶ ನೀಡಲಿಲ್ಲ. ಕಂಪನಿಯು ಗ್ರಾಹಕರು, ಪೂರೈಕೆದಾರರು ಹಾಗೂ ದಾಸ್ತಾನು ವಿವರಗಳನ್ನು ಕೂಡ ಮುಚ್ಚಿಟ್ಟಿತ್ತು.
ಈ ಲೇಖನ ಓದಿದ್ದೀರಾ?: ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್ಸೋ? ಬಿಜೆಪಿಯೋ?
ಈ ಅಪಾರದರ್ಶಕತೆಯನ್ನು ಸಮರ್ಥಿಸಿಕೊಳ್ಳಲು ಸಂಸ್ಥೆಯು ಸ್ವಿಸ್ ಕಾನೂನಿನ ನೆಪ ಹೇಳಿತು. ತಮ್ಮ ವಿದೇಶಿ ಸಬ್ಸಿಡಿಯರಿ (ವ್ಯಾಲ್ಕ್ಯಾಂಬಿ) ಖಾತೆಗಳನ್ನು ತೋರಿಸುವಂತೆ ತನಿಖಾಧಿಕಾರಿಗಳು ಕೇಳಿದಾಗ, ಕಂಪನಿಯು ‘ಸ್ವಿಟ್ಜರ್ಲೆಂಡ್ನ ಡೇಟಾ ಸಂರಕ್ಷಣೆ ಮತ್ತು ಗೋಪ್ಯತೆ ಕಾನೂನುಗಳು’ ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ನೆಪ ಒಡ್ಡಿತು. ಆದರೆ, ಸ್ವಿಸ್ ಕಾನೂನುಗಳು ವ್ಯಕ್ತಿಗಳ ಖಾಸಗಿತನವನ್ನು ರಕ್ಷಿಸುತ್ತವೆಯೇ ಹೊರತು ಕಾರ್ಪೊರೇಟ್ ವಂಚನೆಯನ್ನಲ್ಲ ಎಂದು ಹೇಳಿದ ಸೆಬಿ, ಕಂಪನಿಯ ವಾದವನ್ನು ಕಸದ ಬುಟ್ಟಿಗೆ ಹಾಕಿತು. ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟ ಕಂಪನಿಯು ವಿದೇಶಿ ಕಾನೂನಿನ ನೆಪವೊಡ್ಡಿ ದೇಶದ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿತು.
ಸೆಬಿಯ ಮಧ್ಯಂತರ ಆದೇಶ ಮತ್ತು ವಂಚನೆಯ ಪ್ರಮುಖ ಅಂಶಗಳು
ಸೆಬಿಯ ಪೂರ್ಣಾವಧಿ ಸದಸ್ಯರಾದ ಕಮಲೇಶ್ ಚಂದ್ರ ವರ್ಷ್ನೆಯ್ ಅವರು ಹೊರಡಿಸಿದ 109 ಪುಟಗಳ ಸುದೀರ್ಘ ಮಧ್ಯಂತರ ಆದೇಶವು ರಾಜೇಶ್ ಎಕ್ಸ್ಪೋರ್ಟ್ಸ್ ಸೃಷ್ಟಿಸಿದ್ದ ‘ಮಾಹಿತಿ ಕಪ್ಪು ಪೆಟ್ಟಿಗೆ’ಯನ್ನು (Information Black Box) ಜಗತ್ತಿನ ಮುಂದೆ ತೆರೆದಿಟ್ಟಿತು. ಸೆಬಿ ಬಹಿರಂಗಪಡಿಸಿದ ವಂಚನೆಯ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
| ಪ್ರಮುಖ ಅಂಶಗಳು | ಸೆಬಿ ಬಹಿರಂಗಪಡಿಸಿದ ಸತ್ಯಾಂಶಗಳು |
| 15.15 ಲಕ್ಷ ಕೋಟಿ ರೂ. ಆದಾಯದ ಬೃಹತ್ ವ್ಯತ್ಯಾಸ | ಆರ್ಥಿಕ ವರ್ಷ 2021 ರಿಂದ 2025ರ ನಡುವೆ ರಾಜೇಶ್ ಎಕ್ಸ್ಪೋರ್ಟ್ಸ್ ತನ್ನ ಒಟ್ಟು ಕ್ರೋಡೀಕೃತ ಆದಾಯ ಸುಮಾರು 15.45 ಲಕ್ಷ ಕೋಟಿ ರೂ. ಎಂದು ತೋರಿಸಿತ್ತು. ಅದರಲ್ಲಿ 97-99% ಆದಾಯವು ವಿದೇಶಿ ಅಂಗಸಂಸ್ಥೆಗಳಿಂದ, ಪ್ರಮುಖವಾಗಿ ‘ವ್ಯಾಲ್ಕ್ಯಾಂಬಿ’ಯಿಂದ ಬರುತ್ತದೆ ಎಂದು ಹೇಳಿಕೊಂಡಿತ್ತು. ಆದರೆ, ಕೆಪಿಎಂಜಿ ಸಂಸ್ಥೆ ನಡೆಸಿದ ವ್ಯಾಲ್ಕ್ಯಾಂಬಿಯ ನಿಜವಾದ ಆಡಿಟ್ ವರದಿ ಪ್ರಕಾರ ಅದರ ಆದಾಯ ಕೇವಲ 3,027 ಕೋಟಿ ರೂ., ಅಂದರೆ, 15.45 ಲಕ್ಷ ಕೋಟಿ ರೂ.ಗಳಲ್ಲಿ ಕೇವಲ 0.1%- 0.5% ಮಾತ್ರ. ಉಳಿದ 99.8% ರಷ್ಟು ಆದಾಯ ಸುಳ್ಳು ಅಥವಾ ನಕಲಿ ಎಂದು ಸೆಬಿ ಆರೋಪಿಸಿದೆ. |
| ನಕಲಿ ಕಂಪನಿಗಳೊಂದಿಗೆ ವ್ಯವಹಾರ | ಕಂಪನಿಯು ‘ಅಫ್ಲುಯೆನ್ಸ್ ಷೇರ್ಸ್ ಅಂಡ್ ಸ್ಟಾಕ್ಸ್’ ಎಂಬ ಸಂಸ್ಥೆಯೊಂದಿಗೆ 11,487 ಕೋಟಿ ರೂ. ಮಾರಾಟ ಮತ್ತು 11,488 ಕೋಟಿ ರೂ. ಖರೀದಿ ವ್ಯವಹಾರ ನಡೆಸಿರುವುದಾಗಿ ದಾಖಲಿಸಿತ್ತು. ಆದರೆ, ಸೆಬಿ ವಿಚಾರಣೆ ನಡೆಸಿದಾಗ, ‘ತಮಗೂ ರಾಜೇಶ್ ಎಕ್ಸ್ಪೋರ್ಟ್ಸ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಗ್ರಾಹಕರೇ ಅಲ್ಲ’ ಎಂದು ಅಫ್ಲುಯೆನ್ಸ್ ಸಂಸ್ಥೆ ಲಿಖಿತವಾಗಿ ಸ್ಪಷ್ಟಪಡಿಸಿತು. |
| ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮತ್ತು ಲೇಯರಿಂಗ್ | ಕಂಪನಿಯ ಕೋಟ್ಯಂತರ ರೂಪಾಯಿ ಹಣವನ್ನು ರಾಜೇಶ್ ಮೆಹ್ತಾ ಮತ್ತು ಅವರ ಮಗ ಸಿದ್ಧಾರ್ಥ್ ಮೆಹ್ತಾ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಮೂಲ ಬ್ಯಾಂಕ್ ಖಾತೆಯನ್ನು ಮರೆಮಾಚಲು ಹಣವನ್ನು ಲೇಯರಿಂಗ್ ಮಾಡಲಾಗಿತ್ತು. ಇದರಲ್ಲಿ ಸುಮಾರು 7.4 ಕೋಟಿ ರೂ. ಹಣವನ್ನು ರಾಜೇಶ್ ಮೆಹ್ತಾ ತಮ್ಮ ವೈಯಕ್ತಿಕ ಮಾರುಕಟ್ಟೆ ವ್ಯಾಪಾರಕ್ಕೆ ಬಳಸಿಕೊಂಡಿದ್ದಾರೆ ಎಂದು ಸೆಬಿ ಹೇಳಿದೆ. |
| ಅಸ್ತಿತ್ವದಲ್ಲೇ ಇಲ್ಲದ ಆಫ್ರಿಕನ್ ಚಿನ್ನದ ಗಣಿಗಳು | ದಕ್ಷಿಣ ಆಫ್ರಿಕಾದ ಚಿನ್ನದ ಗಣಿ ಆಸ್ತಿಗಳಲ್ಲಿ ಸುಮಾರು 1,035 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಿರುವುದಾಗಿ ಕಂಪನಿ ಬ್ಯಾಲೆನ್ಸ್ ಶೀಟ್ನಲ್ಲಿ ತೋರಿಸಿಕೊಂಡಿತ್ತು. ಆದರೆ, ಈ ಗಣಿಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆ ಅಥವಾ ಅದರ ಮಾಲೀಕತ್ವ ಕಂಪನಿಯ ಬಳಿ ಇದೆ ಎಂಬುದಕ್ಕೆ ಯಾವುದೇ ಮೌಲ್ಯಮಾಪನ ವರದಿ (Valuation Report) ಅಥವಾ ಪುರಾವೆಯನ್ನು ಕಂಪನಿ ಒದಗಿಸಿಲ್ಲ. |
ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿರುವ ಸೆಬಿ, ರಾಜೇಶ್ ಮೆಹ್ತಾ ಅವರು ರಾಜೇಶ್ ಎಕ್ಸ್ಪೋರ್ಟ್ಸ್ನ ಯಾವುದೇ ಷೇರುಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವಂತಿಲ್ಲ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧ ಹೇರಿದೆ. ಅಲ್ಲದೆ, ಕಂಪನಿಯ ಎಲ್ಲ ವಹಿವಾಟು ದಾಖಲೆಗಳನ್ನು 30 ದಿನಗಳ ಒಳಗಾಗಿ ಒಪ್ಪಿಸಬೇಕು ಮತ್ತು ಹೊಸದಾಗಿ ಕಡ್ಡಾಯ ಫೋರೆನ್ಸಿಕ್ ಆಡಿಟ್ ನಡೆಸಬೇಕು ಎಂದು ಆದೇಶಿಸಿದೆ. ಜೊತೆಗೆ, ಶಾಸನಬದ್ಧ ಆಡಿಟರ್ಗಳಲ್ಲಿನ ಲೋಪದೋಷಗಳ ತನಿಖೆಗಾಗಿ ಈ ಪ್ರಕರಣವನ್ನು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರಕ್ಕೆ (NFRA) ಶಿಫಾರಸು ಮಾಡಿದೆ.
ಮಾರುಕಟ್ಟೆಯ ಆಘಾತ ಮತ್ತು ಹೂಡಿಕೆದಾರರ ಪರಿಸ್ಥಿತಿ
ಸೆಬಿ ಆದೇಶ ಹೊರಬಿದ್ದ ತಕ್ಷಣ ಷೇರು ಮಾರುಕಟ್ಟೆಯಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ರಾಜೇಶ್ ಎಕ್ಸ್ಪೋರ್ಟ್ಸ್ ಷೇರುಗಳು ತೀವ್ರ ಕುಸಿತ ಕಂಡು 5% ಲೋವರ್ ಸರ್ಕ್ಯೂಟ್ ತಲುಪಿವೆ. ಒಂದು ಕಾಲದಲ್ಲಿ 800 ರೂ.ಗಳಿಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದ ಷೇರು ಕೇವಲ 100 ರೂ.ಗಳ ಆಸುಪಾಸಿಗೆ ಕುಸಿತ ಕಂಡಿದೆ. ಈ ಮೂಲಕ ಹೂಡಿಕೆದಾರರ ಸುಮಾರು 12,726 ಕೋಟಿ ರೂ. ಮೌಲ್ಯದ ಸಂಪತ್ತು ಧೂಳೀಪಟವಾಗಿದೆ.
ಮಾರುಕಟ್ಟೆಗೆ ಈ ಸುದ್ದಿ ತಡವಾಗಿ ತಿಳಿದಿದ್ದರೂ, ಸ್ಮಾರ್ಟ್ ಹೂಡಿಕೆದಾರರು ಮುಂಚಿತವಾಗಿಯೇ ಕಂಪನಿಯ ನಗದು ಹರಿವಿನ ಕೊರತೆಯನ್ನು ಗಮನಿಸಿ ಷೇರುಗಳನ್ನು ಮಾರಾಟ ಮಾಡಿದ್ದರು. ರೀಟೇಲ್ ಹೂಡಿಕೆದಾರರು ಮಾತ್ರ ಮತ್ತೊಮ್ಮೆ ಭಾರಿ ನಷ್ಟ ಅನುಭವಿಸುವಂತಾಗಿದೆ.
ಎಲ್ಐಸಿ ಹೂಡಿಕೆಯ ಮೇಲಿನ ಯಕ್ಷಪ್ರಶ್ನೆ
ಈ ಇಡೀ ಹಗರಣದಲ್ಲಿ ಸಾರ್ವಜನಿಕರನ್ನು ಅತ್ಯಂತ ಹೆಚ್ಚು ಕಾಡುತ್ತಿರುವ ಪ್ರಶ್ನೆ ಎಂದರೆ ಭಾರತೀಯ ಜೀವ ವಿಮಾ ನಿಗಮದ (LIC) ಹೂಡಿಕೆ ನಿರ್ಧಾರಗಳು. ರಾಜೇಶ್ ಎಕ್ಸ್ಪೋರ್ಟ್ಸ್ ಕಂಪನಿಯಲ್ಲಿ ಎಲ್ಐಸಿ ಬರೋಬ್ಬರಿ 10.8% ರಷ್ಟು ಭಾರಿ ಷೇರು ಪಾಲನ್ನು ಹೊಂದಿದೆ. ಎಲ್ಐಸಿ ಹೂಡಿಕೆ ಮಾಡಿರುವ ಈ ಹಣ ಸಾಮಾನ್ಯ ಜನರ ಜೀವಮಾನದ ಉಳಿತಾಯ ಮತ್ತು ಪಾಲಿಸಿ ಹಣ ಎಂಬುದನ್ನು ಮರೆಯುವಂತಿಲ್ಲ.
ಎಲ್ಐಸಿ ಕೇವಲ ರಾಜೇಶ್ ಎಕ್ಸ್ಪೋರ್ಟ್ ರೀತಿಯ ವಂಚಕ ಕಂಪನಿಯಲ್ಲಿ ಮಾತ್ರವೇ ಹೂಡಿಕೆ ಮಾಡಿಲ್ಲ. ಇದೇ ರೀತಿ; ವಕ್ರಾಂಜಿ (Vakrangee), ಡಿಎಚ್ಎಫ್ಎಲ್ (DHFL), ಐಎಲ್&ಎಫ್ಎಸ್ (IL&FS), ಸತ್ಯಂ (Satyam) ಕಂಪನಿಗಳಲ್ಲೂ ಹೂಡಿಕೆ ಮಾಡಿತ್ತು. ಈ ಎಲ್ಲ ಕಂಪನಿಗಳಲ್ಲೂ ಬೃಹತ್ ಹಗರಣ ಮತ್ತು ಅಕ್ರಮಗಳು ನಡೆದಿವೆ.
ಈಗ ರಾಜೇಶ್ ಎಕ್ಸ್ಪೋರ್ಟ್ ಕಂಪನಿಯಲ್ಲೂ ಬೃಹತ್ ಹಗರಣ ನಡೆದಿದೆ. ಈ ಕಂಪನಿಯು ಸತತವಾಗಿ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ, ರೇಟಿಂಗ್ ಸಂಸ್ಥೆಗಳು ಅದರ ದರ್ಜೆಯನ್ನು ತಗ್ಗಿಸುತ್ತಿದ್ದರೂ, ಈ ಕಂಒನಿಯಲ್ಲಿನ ತನ್ನ ಹೂಡಿಕೆಗಳನ್ನು ಹಿಂಪಡೆಯದೆ ಎಲ್ಐಸಿ ಏಕೆ ಉಳಿಸಿಕೊಂಡಿತ್ತು ಎಂಬ ಯಕ್ಷ ಪ್ರಶ್ನೆ ಈಗ ದೇಶದ ಮುಂದಿದೆ. ಕೋಟ್ಯಂತರ ಭಾರತೀಯ ಪಾಲಿಸಿದಾರರ ಹಣ ಮತ್ತು ನಂಬಿಕೆಗೆ ಎಲ್ಐಸಿ ಧೋಖಾ ಎಸಗಿದೆ.
ರಾಜೇಶ್ ಎಕ್ಸ್ಪೋರ್ಟ್ ಮತ್ತು ಹಗರಣಗಳಾಗಿರುವ ಎಲ್ಲ ಕಂಪನಿಗಳಲ್ಲೂ ಎಲ್ಐಸಿ ಹೂಡಿಕೆಯ ಹಿಂದೆ ಮೋದಿ ಸರ್ಕಾರದ ಕೈಚಳಕವಿದೆ ಎಂಬುದೇನೂ ಗೊತ್ತಿಲ್ಲದ ವಿಚಾರವೂ ಅಲ್ಲ.
ರಾಜೇಶ್ ಎಕ್ಸ್ಪೋರ್ಟ್ಸ್ ಹಗರಣವು ಕೇವಲ ಒಂದು ಕಂಪನಿಯ ವಂಚನೆಯಲ್ಲ. ಇದು ಭಾರತೀಯ ಆರ್ಥಿಕ ನಿಯಂತ್ರಣ ವ್ಯವಸ್ಥೆಯ ಮೇಲಿರುವ ದೊಡ್ಡ ಕಪ್ಪು ಚುಕ್ಕೆಯಾಗಿದೆ.
ದೇಶದ ಅತಿ ದೊಡ್ಡ ಲಿಸ್ಟೆಡ್ ಕಂಪನಿಗಳಲ್ಲಿ ಒಂದಾದ ಸಂಸ್ಥೆಯು ಐದು ವರ್ಷಗಳ ಕಾಲ 15 ಲಕ್ಷ ಕೋಟಿ ರೂ.ಗೂ ಹೆಚ್ಚು ಸುಳ್ಳು ಆದಾಯವನ್ನು ತೋರಿಸುತ್ತಿದ್ದರೂ ಆಡಿಟರ್ಗಳು, ಸ್ಟಾಕ್ ಎಕ್ಸ್ಚೇಂಜ್ಗಳು ಹಾಗೂ ಸ್ವತಃ ಸೆಬಿ ಏಕೆ ಮುಂಚಿತವಾಗಿಯೇ ಇದನ್ನು ಪತ್ತೆಹಚ್ಚಲಿಲ್ಲ?
ವಾರ್ಷಿಕ ವರದಿಗಳಿಗೆ ಮತ್ತು ಬ್ಯಾಲೆನ್ಸ್ ಶೀಟ್ಗಳಿಗೆ ಸಹಿ ಹಾಕಿದ ಪ್ರತಿಷ್ಠಿತ ಆಡಿಟ್ ಸಂಸ್ಥೆಗಳು ಕೇವಲ ಕಂಪನಿ ನೀಡಿದ ಕಾಗದದ ದಾಖಲೆಗಳನ್ನು ನಂಬಿದವೇ ಹೊರತು, ನಗದು ಹರಿವು ಮತ್ತು ಬ್ಯಾಂಕ್ ಖಾತೆಗಳನ್ನು ಏಕೆ ತಾಳೆಹಾಕಿ ನೋಡಲಿಲ್ಲ? ಎಂಬ ಪ್ರಶ್ನೆಗಳೂ ನಮ್ಮ ಮುಂದಿವೆ.
ಪ್ರಸ್ತುತ ಸೆಬಿಯ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ರಾಜೇಶ್ ಮೆಹ್ತಾ ಅವರಿಗೆ ತಮ್ಮ ವಾದವನ್ನು ಮಂಡಿಸಲು ನ್ಯಾಯಾಲಯ ಮತ್ತು ಸೆಬಿ ಮುಂದೆ ಅವಕಾಶವಿದೆ. ಆದರೆ, ಅಲ್ಲಿಯವರೆಗೆ ಭಾರತೀಯ ಕಾರ್ಪೊರೇಟ್ ವಲಯದ ಪಾರದರ್ಶಕತೆ ಮತ್ತು ಹೂಡಿಕೆದಾರರ ನಂಬಿಕೆಗೆ ಆಗಿರುವ ಬೃಹತ್ ನಷ್ಟವನ್ನು ತುಂಬಿಕೊಡುವುದು ಸುಲಭದ ಮಾತಲ್ಲ. ಈ ಹಗರಣದ ಅಂತಿಮ ತೀರ್ಪು ಭಾರತದ ಭವಿಷ್ಯದ ಕಾರ್ಪೊರೇಟ್ ನಿಯಂತ್ರಣ ಕಾಯ್ದೆಗಳಿಗೆ ಒಂದು ದಿಕ್ಸೂಚಿಯಾಗಲಿದೆ.




