ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾದಾಗಿನಿಂದಲೂ, ಅದರ ಯಶಸ್ಸನ್ನು ಟ್ರಂಪ್ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಟ್ರಂಪ್ ಹೇಳಿಕೆಗಳ ಬಗ್ಗೆ ಭಾರತದ ಪ್ರಧಾನಿ ಮೋದಿಯಾಗಲೀ, ಕೇಂದ್ರ ಸರ್ಕಾರದ ಯಾರೊಬ್ಬರಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ.
”ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಕೊನೆಗಾಣಿಸಿದ್ದು ನಾನೇ, ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ ಕದನ ವಿರಾಮ ಘೋಷಿಸುವಂತೆ ಮಾಡಿದೆ, ನನ್ನ ಮಧ್ಯಸ್ಥಿಕೆಯಿಂದಲೇ ಉಭಯ ರಾಷ್ಟ್ರಗಳ ಸಂಘರ್ಷ ಅಂತ್ಯಗೊಂಡಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೆ ಹೇಳುತ್ತಿದ್ದಾರೆ. ತಮ್ಮ ಬೆನ್ನನ್ನೇ ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇದೀಗ, ‘ವ್ಯಾಪಾರ ವಹಿವಾಟು ಸಂಬಂಧವನ್ನು ಬಳಸಿಕೊಂಡು ಟ್ರಂಪ್ ಭಾರತ-ಪಾಕ್ ಸಂಘರ್ಷವನ್ನು ಪೂರ್ಣ ಪ್ರಮಾಣದಲ್ಲಿ ತಪ್ಪಿಸಿದ್ದಾರೆ’ ಎಂದು ಟ್ರಂಪ್ ಆಡಳಿತ ಕೂಡ ನ್ಯೂಯಾರ್ಕ್ ಫೆಡರಲ್ ಕೋರ್ಟ್‌ಗೆ ಲಿಖಿತವಾಗಿ ತಿಳಿಸಿದೆ.
ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾದಾಗಿನಿಂದಲೂ, ಅದರ ಯಶಸ್ಸನ್ನು ಟ್ರಂಪ್ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಉಭಯ ರಾಷ್ಟ್ರಗಳನ್ನು ತನ್ನ ಸ್ನೇಹಿತರೆಂದು ಹೇಳುವ ಮೂಲಕ ಭಾರತ-ಪಾಕಿಸ್ತಾನವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿದ್ದಾರೆ. ಅಲ್ಲದೆ, ಎರಡೂ ರಾಷ್ಟ್ರಗಳು ‘ಸಾಮಾನ್ಯ ಜ್ಞಾನ’ ಇಲ್ಲದವು ಎಂದು ಲೇವಡಿ ಮಾಡಿದ್ದಾರೆ. ಆದರೂ, ಟ್ರಂಪ್ ಹೇಳಿಕೆಗಳ ಬಗ್ಗೆ ಭಾರತದ ಪ್ರಧಾನಿ ಮೋದಿಯಾಗಲೀ, ಕೇಂದ್ರ ಸರ್ಕಾರದ ಯಾರೊಬ್ಬರಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ. ಇನ್ನು, ಉಭಯ ರಾಷ್ಟ್ರಗಳ ಸಂಘರ್ಷ ಅಂತ್ಯಗೊಳಿಸಲು ವ್ಯಾಪಾರ ನಿಯಂತ್ರಣವನ್ನು ಅಸ್ತ್ರವಾಗಿ ಬಳಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದ ಟ್ರಂಪ್, ಇದೇ ಮೊದಲ ಬಾರಿಗೆ ಈ ವಿಚಾರವಾಗಿ ಲಿಖಿತ ದಾಖಲೆಯಲ್ಲಿ ತನ್ನ ಪ್ರತಿಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಈವರೆಗೆ ಜಾಗತಿಕ 10% ಇದ್ದ ಆಮದು ಸುಂಕವನ್ನು ಟ್ರಂಪ್ ಆಡಳಿತವು ಹೆಚ್ಚಿಸಿತು. ಕೆಲವು ರಾಷ್ಟ್ರಗಳ ಮೇಲೆ ಅಧಿಕ ಶುಲ್ಕವನ್ನು ವಿಧಿಸಿತು. ಟ್ರಂಪ್ ನಿರ್ಧಾರಗಳನ್ನು ಪ್ರಶ್ನಿಸಿ ಸಣ್ಣ ಕಂಪನಿಗಳು ನ್ಯೂಯಾರ್ಕ್ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿವೆ. ಮೊಕದ್ದಮೆಯ ವಿಚಾರಣೆ ವೇಳೆ, ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ವಿಲಿಯಂ ಲುಟ್ನಿಕ್ ಅವರು ‘ಭಾರತ-ಪಾಕ್ ಸಂಘರ್ಷವನ್ನು ತಡೆಯಲು ವ್ಯಾಪಾರ ನಿರ್ಬಂಧವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ’ ಎಂಬುದನ್ನು ವಿವರಿಸಿದ್ದಾರೆ.
ಸುಂಕ ಹೆಚ್ಚಳವನ್ನು ಸಮರ್ಥಿಸಿಕೊಂಡ ಲುಟ್ನಿಕ್, ”ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯು (ಐಇಇಪಿಎ) ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಅಮೆರಿಕ ಅಧ್ಯಕ್ಷರು ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಅಧಿಕಾರ ನೀಡುತ್ತದೆ. ಅಂತಹ ಕ್ರಮಗಳು ವಿದೇಶಿ ಸರ್ಕಾರಗಳ ಮೇಲೆ ಒತ್ತಡ ಹೇರಲು ಸಹಾಯ ಮಾಡುತ್ತದೆ. ಇದೇ ಅಧಿಕಾರವನ್ನು ಬಳಸಿಕೊಂಡು, ವ್ಯಾಪಾರ ನಿರ್ಬಂಧದ ಬೆದರಿಕೆಯೊಡ್ಡಿ ಭಾರತ-ಪಾಕ್ ನಡುವಿನ ಸಂಘರ್ಷವನ್ನು ಟ್ರಂಪ್ ತಡೆದಿದ್ದಾರೆ” ಎಂದು ಹೇಳಿದ್ದಾರೆ.
“ಕೇವಲ 13 ದಿನಗಳ ಹಿಂದೆ, ಸಂಘರ್ಷದಲ್ಲಿ ತೊಡಗಿದ್ದ ಭಾರತ-ಪಾಕ್ ಮೇ 10ರಂದು ದುರ್ಬಲ ಕದನ ವಿರಾಮಕ್ಕೆ ಮುಂದಾಗಿದ್ದವು. ಆದರೆ, ಟ್ರಂಪ್ ಮಧ್ಯಪ್ರವೇಶಿಸಿ, ವ್ಯಾಪಾರ ಪ್ರವೇಶ-ನಿರ್ಬಂಧದ ಅಸ್ತ್ರ ಬಳಸಿ ಎರಡೂ ರಾಷ್ಟ್ರಗಳ ನಡುವೆ ಸಂಪೂರ್ಣ ಕದನ ವಿರಾಮ ಘೋಷಿಸುವಂತೆ ಮಾಡಿದರು. ಇಂತಹ ಸಂದರ್ಭದಲ್ಲಿ, ಅರ್ಜಿದಾರರ ಪರವಾಗಿ ತೀರ್ಪು ನೀಡಿದರೆ, ‘ಆರ್ಥಿಕ ಸಾಧನಗಳನ್ನು ಕಾರ್ಯತಂತ್ರದ ಭಾಗವಾಗಿ ಬಳಸುವ ಪ್ರತಿಯೊಂದು ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ’. ಜೊತೆಗೆ, ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಲ್ಲಿ ಟ್ರಂಪ್ ಅವರ ಕೊಡುಗೆಯ ಸಿಂಧುತ್ವವನ್ನು ಪ್ರಶ್ನಿಸಲು ಕಾರಣವಾಗಬಹುದು” ಎಂದು ಲುಟ್ನಿಕ್ ವಾದಿಸಿದ್ದಾರೆ.
ಅಂದಹಾಗೆ, ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭೀಕರ ದಾಳಿ ನಡೆಸಿದರು. ದಾಳಿಯಲ್ಲಿ ಸ್ಥಳೀಯರು, ಪ್ರವಾಸಿಗರು ಹಾಗೂ ವಿದೇಶಿಗರು ಸೇರಿ 28 ಮಂದಿ ಬಲಿಯಾದರು. ಅದಾದ ಎರಡು ವಾರಗಳ ಬಳಿಕ, ಮೇ 7ರಂದು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತು. ಪ್ರತಿದಾಳಿಯೊಂದಿಗೆ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಮೋದಿ ಭಕ್ತರು ಮತ್ತು ಮಾಧ್ಯಮಗಳು ಯುದ್ಧವನ್ನು ಬಯಸಿ, ಭ್ರಮಾಲೋಕದಲ್ಲಿ ತೇಲಾಡತೊಡಗಿದರು.
ಈ ನಡುವೆ, ಮೇ 10ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಟ್ರಂಪ್, ”ಅಮೆರಿಕದ ಮಧ್ಯಸ್ಥಿಕೆಯಿಂದ ಭಾರತ-ಪಾಕ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಸಾಮಾನ್ಯ ಜ್ಞಾನವನ್ನು ಬಳಸಿದ್ದಕ್ಕಾಗಿ ಉಭಯ ರಾಷ್ಟ್ರಗಳಿಗೆ ಅಭಿನಂದನೆಗಳು” ಎಂದು ಕದನ ವಿರಾಮದ ಕುರಿತು ಮೊದಲಿಗೆ ಘೊಷಿಸಿದರು.
ಮರು ದಿನ ಮತ್ತೊಂದು ಪೋಸ್ಟ್ ಹಂಚಿಕೊಂಡ ಟ್ರಂಪ್, “ಚರ್ಚಿಸದಿದ್ದರೂ, ನಾನು ಈ ಎರಡೂ ಮಹಾನ್ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ವ್ಯಾಪಾರ ಸಂಬಂಧದ ಅಸ್ತ್ರವನ್ನು ಬಳಸಿ, ಎರಡೂ ರಾಷ್ಟ್ರಗಳ ಸಂಘರ್ಷವನ್ನು ತಡೆದಿದ್ದೇನೆ” ಎಂದು ಹೇಳಿಕೊಂಡರು.
ಅಲ್ಲದೆ, ಮೇ 12ರಂದು ”ವ್ಯಾಪಾರ ನಿರ್ಬಂಧದ ಬೆದರಿಕೆ ಹಾಕಿ ಅಮೆರಿಕವು ಭಾರತ ಮತ್ತು ಪಾಕಿಸ್ತಾನ ತಮ್ಮ ಸಂಘರ್ಷವನ್ನು ನಿಲ್ಲಿಸುವಂತೆ ಒತ್ತಡ ಹೇರಿತು” ಎಂದು ಹೇಳಿದರು.
“ನಾನು ಹೇಳಿದೆ, ಬನ್ನಿ, ನಾವು ನಿಮ್ಮೊಂದಿಗೆ ಹೆಚ್ಚಿನ ವ್ಯಾಪಾರ-ವಹಿವಾಟನ್ನು ವಿಸ್ತರಿಸುತ್ತೇವೆ. ಸಂಘರ್ಷವನ್ನು ನಿಲ್ಲಿಸೋಣ. ನೀವು ಕನದವನ್ನು ನಿಲ್ಲಿಸಿದರೆ, ನಾವು ನಿಮ್ಮೊಂದಿಗೆ ವ್ಯಾಪಾರ ಮಾಡುತ್ತೇವೆ. ನೀವು ಸಂಘರ್ಷ ನಿಲ್ಲಿಸದಿದ್ದರೆ, ನಾವು ಯಾವುದೇ ವ್ಯಾಪಾರ-ವಹಿವಾಟು ನಡೆಸುವುದಿಲ್ಲವೆಂದು ತಾಕೀತು ಮಾಡಿದೆ. ವ್ಯಾಪಾರ ಸಂಬಂಧವನ್ನು ನಾನು ಬಳಸಿದ ರೀತಿಯಲ್ಲಿ ಯಾರೊಬ್ಬರೂ ಎಂದಿಗೂ ಅದನ್ನು ಬಳಸಿಲ್ಲ. ನಮ್ಮ ಮಾತು ಕೇಳಿ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು” ಎಂದು ಟ್ರಂಪ್ ಹೇಳಿಕೊಂಡಿದ್ದರು.
ಟ್ರಂಪ್ ಹೇಳಿಕೆಯ ಬಗ್ಗೆ ಪ್ರಧಾನಿ ಮೋದಿ ಈವರೆಗೆ ಪ್ರತಿಕ್ರಿಯಿಸಿಲ್ಲ. ಆದಾಗ್ಯೂ, ಮೇ 13ರಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದರು. “ಮೇ 7ರಂದು ಆಪರೇಷನ್ ಸಿಂಧೂರ ಪ್ರಾರಂಭವಾದಾಗಿನಿಂದ, ಮೇ 10ರಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳ್ಳುವ ಕುರಿತು ಭಾರತ ಮತ್ತು ಅಮೆರಿಕ ನಾಯಕರ ನಡುವೆ ಮಾತುಕತೆ ನಡೆದಿದೆ. ಆದರೆ, ನಮ್ಮ ಯಾವುದೇ ಚರ್ಚೆಗಳಲ್ಲಿ ವ್ಯಾಪಾರ ಸಂಬಂಧದ ವಿಷಯ ಚರ್ಚೆಗೆ ಬಂದಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಈ ಲೇಖನ ಓದಿದ್ದೀರಾ?: ‘ಆಪರೇಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ
ಭಾರತದ ನಿರಾಕರಣೆಗಳ ಹೊರತಾಗಿಯೂ, ಟ್ರಂಪ್ ತಮ್ಮ ಹೇಳಿಕೆಯನ್ನು ಮತ್ತೆ-ಮತ್ತೆ ಹೇಳುತ್ತಿದ್ದರು. ಮೇ 15ರಂದು ‘ಫಾಕ್ಸ್ ನ್ಯೂಸ್’ನ ಬ್ರೆಟ್ ಬೇಯರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್, “ದ್ವೇಷವು ದೊಡ್ಡದಾಗಿತ್ತು. ನಾವು ವ್ಯಾಪಾರ ಸಂಬಂಧದ ವಿಚಾರವನ್ನು ಮುಂದಿಟ್ಟೆ, ನಾವು ಎರಡೂ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಹೆಚ್ಚಿಸುತ್ತೇವೆಂದು ಹೇಳಿದೆ. ಇದು ಶಾಂತಿ ಸ್ಥಾಪನೆಗೆ ನೆರವಾಯಿತು” ಎಂದು ಹೇಳಿಕೊಂಡರು.
ಅದಾದ ಒಂದು ವಾರದ ನಂತರ, ಮೇ 21 ರಂದು, ದಕ್ಷಿಣ ಆಫ್ರಿಕಾದ ಅಧ್ಯಕ್ಷರೊಂದಿಗೆ ನಡೆದ ಸಭೆಯ ಸಂದರ್ಭದಲ್ಲಿಯೂ ಟ್ರಂಪ್, “ನಾವು ಪಾಕಿಸ್ತಾನ ಮತ್ತು ಭಾರತದ ವಿಚಾರದಲ್ಲಿ ಏನು ಮಾಡಿದೆವೆಂದು ನೀವು ನೋಡಿದ್ದೀರಿ. ನಾವು ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ ಸಂಘರ್ಷವನ್ನು ಸಂಪೂರ್ಣವಾಗಿ ಇತ್ಯರ್ಥಪಡಿಸಿದ್ದೇವೆ” ಎಂದು ಪುನರುಚ್ಛರಿಸಿದರು.
ಇದೀಗ, ಟ್ರಂಪ್ ಅವರ ಆಡಳಿತವೂ ಅದನ್ನೇ ಹೇಳುತ್ತಿದೆ. ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್ ಅವರು ”ಅಧ್ಯಕ್ಷರ ತುರ್ತು ಆರ್ಥಿಕ ಅಧಿಕಾರವನ್ನು ಅನುಕೂಲಕರ ವ್ಯಾಪಾರ ಒಪ್ಪಂದಗಳನ್ನು ಪಡೆಯಲು ಬಳಸುವುದು ಅಗತ್ಯ. ಸುಂಕಗಳು ನಿರಂತರ ಬೆದರಿಕೆಯಾಗಿದ್ದು, ಅಗತ್ಯವಾದ ಚೌಕಾಶಿ ಸಾಧನವಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇದು ಲುಟ್ನಿಕ್ ಅವರ ಹೊಸ ಹೇಳಿಕೆಯಲ್ಲ. ಅವರು 3 ವಿಭಿನ್ನ ದೇಶಗಳಲ್ಲಿ 11 ದಿನಗಳಲ್ಲಿ 8 ಬಾರಿ ಆರ್ಥಿಕ ಅಸ್ತ್ರ ಬಳಕೆಯ ಕುರಿತು ಹೇಳಿಕೆಗಳನ್ನು ನೀಡಿದ ಅಧ್ಯಕ್ಷ ಟ್ರಂಪ್ ಅವರ ಪ್ರತಿಪಾದನೆಯ ಮುಂದುವರಿಕೆಯಾಗಿದೆ.
ಇದು ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಭಾರತದ ನಾಯಕತ್ವಕ್ಕೆ ಧಕ್ಕೆ ತರುವುದಿಲ್ಲವೇ?