ಪಕ್ಷದ 24 ನೇ ಮಹಾಧಿವೇಶನಕ್ಕೆ ದೇಶಾದ್ಯಂತ ತಯಾರಿಗಳು ಬಿರುಸಿನಿಂದ ಆರಂಭವಾಗಿರುವ ಸಮಯದಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ನಿಧನವು ಹೆಚ್ಚಿನ ಅಘಾತವನ್ನುಂಟು ಮಾಡಿದೆ…
1997ರ ಸಮಯ; ಹೊರಗಿನಿಂದ ಬೆಂಬಲ ನೀಡಿದ್ದ ಕಾಂಗ್ರೆಸ್ ಪಕ್ಷದಿಂದ ಸಂಯುಕ್ತ ರಂಗ ಸರ್ಕಾರ ಅಸ್ಥಿರತೆ ಎದುರಿಸುತ್ತಿದ್ದ ಕಾಲ. ಆ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿಳಿದ ಸೀತಾರಾಮ್ ಯೆಚೂರಿ ರವರನ್ನು, ಪತ್ರಕರ್ತರು ಸುತ್ತುವರೆದು “ಸಂಯುಕ್ತ ರಂಗ ಸರ್ಕಾರ ಎಷ್ಟು ದಿನ ಇರುತ್ತದೆ” ಎಂದು ಕೆಣಕಿದರು. ಈ ಪ್ರಶ್ನೆಯನ್ನು ಕೇಳಬೇಕಾಗಿರುವುದು ಸೀತಾರಾಮ ಕೇಸರಿ ಅವರಿಗೆ ಹೊರತು ಯೆಚೂರಿಗೆ ಅಲ್ಲ ಎಂದು ಶಾಂತ ಹಾಗೂ ಹಾಸ್ಯ ಶೈಲಿಯಲ್ಲಿ ಉತ್ತರಿಸಿದರು. ಕಠಿಣ ರಾಜಕೀಯ ಸಂದರ್ಭ ಹಾಗೂ ಸನ್ನಿವೇಶಗಳನ್ನು ಸಮಚಿತ್ತ ಹಾಗೂ ಅಪೂರ್ವ ಚತುರತೆಯಿಂದ ನಿರ್ವಹಿಸುತ್ತಿದ್ದ ಅವರ ರೀತಿಗೆ ಇಂತಹ ಹಲವಾರು ಉದಾಹರಣೆಗಳು ಸಿಗುತ್ತವೆ.
1989ರಲ್ಲಿ ವಿಪಿ ಸಿಂಗ್ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸುವ ಮೂಲಕ ರಾಷ್ಟ್ರ ರಾಜಕೀಯ ರಂಗದ ಧ್ರುವತಾರೆಯಾಗಿ ಬೆಳಕಿಗೆ ಬಂದ ಯೆಚೂರಿ ಅವರು ‘ಇಂಡಿಯಾ’ ಕೂಟ ರಚನೆವರೆಗೂ ಪ್ರತಿಯೊಂದು ರಾಜಕೀಯ ಸನ್ನಿವೇಶಗಳಲ್ಲಿ ನೇತೃತ್ವ ನೀಡಿದ್ದಾರೆ. ಸಂಯುಕ್ತ ರಂಗ ಸರ್ಕಾರದ ಚಾಲನಾ ಸಮಿತಿಯ ಹಾಗೂ ಯು.ಪಿ.ಎ ಸರ್ಕಾರದ ಸಮನ್ವಯ ಸಮಿತಿಯ ಮುಖಂಡರಾಗಿ ಈ ಸರ್ಕಾರಗಳ ಸ್ಥಿರತೆಗೆ ಅಗತ್ಯವಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮʼ (ಸಿಎಂಪಿ) ರೂಪಿಸಿದವರು.
ತುರ್ತು ಪರಿಸ್ಥಿತಿ ವಿರುದ್ಧದ ಸಮರಶೀಲ ಹೋರಾಟದ ಕುಲುಮೆಯಲ್ಲಿ ರೂಪುಗೊಂಡ ಸೀತಾರಾಮ್ ಯೆಚೂರಿ ಅವರು ಒಬ್ಬ ಅಪ್ರತಿಮ ಮಾರ್ಕ್ಸ್‌ವಾದಿ ವಿದ್ವಾಂಸರಾಗಿದ್ದರು. ಅವರ ಜ್ಞಾನ ಗಳಿಕೆಯ ವಿಸ್ತಾರ ಹಾಗೂ ಆಳ ಎಂತಹವರನ್ನು ನಿಬ್ಬೆರಾಗಾಗಿಸುತ್ತಿತ್ತು. ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನದಿಂದ ಭಾರತ ದೇಶದ ಅತಿ ದೊಡ್ಡ ಎಡಪಕ್ಷವಾದ ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗೆ ಅವರು ಏರಿದ ಎತ್ತರ ಮತ್ತು ಸಮಕಾಲೀನ ರಾಜಕೀಯ-ಸೈದ್ದಾಂತಿಕ ಬೆಳವಣಿಗೆಗಳಿಗೆ ಅವರು ನೀಡಿದ ಕೊಡುಗೆಗಳು ನಿಜಕ್ಕೂ ಅವಿಸ್ಮರಣೀಯ ಮತ್ತು ಮುಂದಿನ ಜನಾಂಗಕ್ಕೆ ಸ್ಫೂರ್ತಿಯಾಗಿ ಉಳಿಯಲಿದೆ.
ಭಾರತದ ಶ್ರೀಮಂತ ಸಮ್ಮಿಶ್ರ ಮತ್ತು ಬಹುತ್ವ ಪರಂಪರೆಯನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದ ಅವರ ಶೈಲಿ ಎಂತಹವರನ್ನು ತಲೆದೂಗುವಂತೆ ಮಾಡುತ್ತಿತ್ತು. ‘ಹಿಂದುತ್ವ’ ಸಿದ್ಧಾಂತ ಮತ್ತು ರಾಜಕೀಯದ ಟೊಳ್ಳುತನವನ್ನು ಬೆತ್ತಲುಗೊಳಿಸುತ್ತಿದ್ದ ಪರಿ ಎಂತಹವರನ್ನು ಆಕರ್ಷಿಸುತ್ತಿತ್ತು. ನಿರಂತರವಾಗಿ ಬರೆಯುವ ಮತ್ತು ಮಾತನಾಡುವ ಮೂಲಕ ಭಾರತದ ಬೌದ್ಧಿಕ ಚಿಂತನೆ ಮತ್ತು ಸಂವಾದಕ್ಕೆ ಸರಿಸಾಟಿಯಿಲ್ಲದ ಕೊಡುಗೆ ನೀಡಿದ್ದಾರೆ. ಅವರೊಬ್ಬ ಶ್ರೇಷ್ಠ ಜಗತ್ಪ್ರಸಿದ್ಧ ಮಾರ್ಕ್ಸ್‌ವಾದಿ ಚಿಂತಕರಾಗಿದ್ದರು. ಬ್ರಿಟನ್ ಮತ್ತಿತರ ಯೂರೋಪಿಯನ್ ದೇಶಗಳ ಕಮ್ಯುನಿಸ್ಟ್ ಪಕ್ಷಗಳು, ಚೀನಾ, ವಿಯೆಟ್ನಾಂ, ಕ್ಯೂಬಾ ಮತ್ತಿತರ ಸಮಾಜವಾದಿ ದೇಶಗಳು ಕೂಡ ಸಮಕಾಲೀನ ಮಾರ್ಕ್ಸ್‌ವಾದಿ ಚಿಂತನೆ ಮತ್ತು ಅಭಿಪ್ರಾಯಕ್ಕಾಗಿ ಸೀತಾರಾಮ್ ಯೆಚೂರಿ ಅವರನ್ನು ಸಂದರ್ಶಿಸುತ್ತಿದ್ದರು. ಜಾಗತಿಕ ಮಾರ್ಕ್ಸ್‌ವಾದಿ ವಿದ್ವಾಂಸರು ಸೇರಿದಂತೆ ಹಲವು ಕ್ಷೇತ್ರಗಳ ಶ್ರೇಷ್ಠ ಚಿಂತಕರ ಜೊತೆ ನಿರಂತರವಾಗಿ ಸಂವಾದಿಸುತ್ತಿದ್ದರು. ಬಹಳ ದೀರ್ಘಕಾಲ ಸಿಪಿಐಎಂ ಪಕ್ಷದ ಅಂತರರಾಷ್ಟ್ರೀಯ ವಿಭಾಗದ ಮುಖ್ಯಸ್ಥರಾಗಿ ಜಗತ್ತಿನ ಬೆಳವಣಿಗೆಗಳನ್ನು ಹತ್ತಿರದಿಂದ ಅವಲೋಕಿಸಿದ್ದಾರೆ.
ಪ್ರಬಲ ಪುರಾವೆ, ಸೂಕ್ಷ್ಮ ಒಳನೋಟ, ಹಾಸ್ಯ ಚಟಾಕಿಗಳು ಇದ್ದ ಅವರ ವಿಚಾರ ಸರಣಿ, ತರ್ಕ ಮತ್ತು ವಿಷಯ ನಿರೂಪಣೆ ಶೈಲಿ ಎಡ ವಿಚಾರಧಾರೆಯನ್ನು ಜನಪ್ರಿಯಗೊಳಿಸಲು ಸಹಕಾರಿಯಾಗಿತ್ತು.
ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ, ಸಾಮಾಜಿಕ ನ್ಯಾಯ ಮುಂತಾದ ಸಂವಿಧಾನಿಕ ಮೌಲ್ಯಗಳ ಸಮರ್ಥ ಪ್ರತಿಪಾದಕರಾಗಿ ಸಂಸತ್ತಿನ ಒಳಗೆ ಮತ್ತು ಹೊರಗೆ ದಣಿವರಿಯದ ರೀತಿಯಲ್ಲಿ ಶ್ರಮಿಸಿದ್ದಾರೆ. ಎಡ ಪ್ರಜಾಸತ್ತಾತ್ಮಕ ಶಕ್ತಿಗಳ ವಿರುದ್ಧ ವಿಶಾಲ ಐಕ್ಯತೆಯನ್ನು ಮೂಡಿಸಲು ಅವರು ನೀಡಿರುವ ಕಾಣಿಕೆ ದಿಗ್ದರ್ಶಕವಾಗಿದೆ. ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನತೆಗಳ ಮಧ್ಯೆಯೂ ಸಮಾನ ಅಂಶಗಳ ಮೇಲೆ ಒಟ್ಟಾಗಿಸುವ ಅವರ ರಾಜತಾಂತ್ರಿಕ ನೈಪುಣ್ಯವು ಭಾರತದ ರಾಜಕೀಯ ರಂಗದ ಒಬ್ಬ ಪ್ರಮುಖ ನೇತಾರರನ್ನಾಗಿ ರೂಪಿಸಿದೆ.
1996ರಲ್ಲಿ ಸಂಯುಕ್ತ ರಂಗ ಸರ್ಕಾರದ ನೇತೃತ್ವ ವಹಿಸುವಂತೆ ಸಿಪಿಐಎಂ ಪಕ್ಷಕ್ಕೆ ಆಹ್ವಾನ ಬಂದಂತಹ ಸೂಕ್ಷ್ಮ ಸನ್ನಿವೇಶವನ್ನು ಯಾವುದೇ ಸೈದ್ಧಾಂತಿಕ ಗೊಂದಲಕ್ಕೆ ಅವಕಾಶ ಆಗದಂತೆ ರಾಜಕೀಯ ತಂತ್ರಗಾರಿಕೆ ರೂಪಿಸಲು ಮಹತ್ವದ ಕೊಡುಗೆ ನೀಡಿದ್ದಾರೆ. ಈ ತೀರ್ಮಾನ ಸರಿಯಾಗಿತ್ತು ಎಂದು ನಂತರ ನಡೆದ ಪಕ್ಷದ ಮಹಾಧೀವೇಶನ ನಿರ್ಣಯಿಸಿತು.
ಪಕ್ಷದ 24ನೇ ಮಹಾಧಿವೇಶನಕ್ಕೆ ದೇಶಾದ್ಯಂತ ತಯಾರಿಗಳು ಬಿರುಸಿನಿಂದ ಆರಂಭವಾಗಿರುವ ಸಮಯದಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ನಿಧನವು ಹೆಚ್ಚಿನ ಆಘಾತವನ್ನುಂಟು ಮಾಡಿದೆ.
ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರ ಅಕಾಲಿಕ ನಿಧನಕ್ಕೆ ದೇಶದ ಉದ್ದಗಲಕ್ಕೂ ಪ್ರವಾಹೋಪಾದಿಯಲ್ಲಿ ಬರುತ್ತಿರುವ ಪ್ರಜಾಸತ್ತಾತ್ಮಕ, ಜಾತ್ಯಾತೀತ ಶಕ್ತಿಗಳ ಸಾಂತ್ವನ ಮತ್ತು ಶ್ರದ್ಧಾಂಜಲಿ ನುಡಿಗಳು ಇಂತಹ ಆಘಾತದಿಂದ ಚೇತರಿಸಿಕೊಳ್ಳಲು ಖಂಡಿತವಾಗಿಯೂ ನೆರವಾಗಲಿದೆ.

ಟಿ ಯಶವಂತ
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ
ಸೀತಾರಾಮ್ ಯೆಚೂರಿ ಕ್ರಿಶ್ಚಿಯನ್ ರಂತೆ ಹೌದಾ? ಅವರು ಯಾಕೆ ನಮ್ಮ ಹೆಸರು ಬದಲಾಯಿಸಿ ಕೊಳ್ಳಲಿಲ್ಲ. ಹಿಂದುಗಳನ್ನು ಮೋಸಗೊಳಿಸಲು ಅದು ಅವರ ಕುತಂತ್ರವಾಗಿತ್ತೆ?