ʼಶರಣರ ಸಾವು ಮರಣದಲ್ಲಿ ನೋಡುʼ ಎಂಬಂತೆ ಬದುಕಿದ್ದ ತುಳಸಿ ಗೌಡರು, ʼಉಂಡದ್ದು ಅಂಬಲಿ; ಹೊದ್ದದ್ದು ಕಂಬಳಿʼ ಎಂಬ ಸರಳ ಜೀವನ ತತ್ವದಲ್ಲಿ ನಡೆದವರು. ಮನುಷ್ಯರ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು- ಸೌಕರ್ಯ ಇರಬಾರದು. ಇದ್ದರೆ ಅಹಂ ಬಂದು ಬಿಡ್ತದೆ ಎಂದು ತೀರಾ ಅಪ್ತ ಎನಿಸಿದವರಲ್ಲಿ ಹೇಳುತ್ತಿದ್ದರು.
ಬದುಕಿರುವಾಗ ಹೆಚ್ಚು ಸದ್ದು ಮಾಡದೇ ಬದುಕಿದವರು ತುಳಸಿ ಗೌಡತಿ. ತುಳಸಿ ಎಂಬ ಹೆಸರೇ ಚೆಂದ. ತುಳಸಿ ಮನೆಯ ಅಂಗಳದಲ್ಲಿ ಪೂಜಿಸಲ್ಪಡುವ ಪುಟ್ಟ ಗಿಡ. ಅದಕ್ಕೆ ಔಷಧಿ ಗುಣವೂ ಇದೆ. ಹಾಗೆ ಕರಾವಳಿ ಜನತೆ ದೀಪಾವಳಿಯ ನಂತರ ಆಚರಿಸುವ ಒಂದು ಹಬ್ಬ ಆಚರಣೆಯಲ್ಲಿ ತುಳಸಿ ಮದುವೆಯೂ ಒಂದು. ಹೀಗೆ ಮನೆಮಾತಾದ ತುಳಸಿ ಎಂಬ ಗಿಡದ ಹೆಸರು ಹೊತ್ತಿದ್ದ ತುಳಸಿ ಗೌಡರು ಮನೆಮಾತಾಗಿ, ಸರ್ಕಾರದಿಂದ ಗೌರವಿಸಲ್ಪಟ್ಟ ಒಂದು ಶಕ್ತಿಯಾಗಿದ್ದರು. ಅವರೇನು ಓದಿ ಪದವಿ ಪಡೆದು, ಅಕಾಡೆಮಿ ವಲಯದಲ್ಲಿ ಹೆಸರು ಮಾಡಿದವರಲ್ಲ. ವೇದಿಕೆಯಲ್ಲಿ ನಿಂತು ಅದ್ಭುತ ಭಾಷಣ ಮಾಡಿದವರಲ್ಲ. ಪರಿಸರದ ರಕ್ಷಣೆ ಹೆಸರಲ್ಲಿ ಪತ್ರಿಕೆಯಲ್ಲಿ ಪೋಟೋ ಹಾಕಿಸಿಕೊಂಡು, ದೇಶ, ವಿದೇಶಗಳಿಂದ ಫಂಡ್ ಹೊಡೆದವರೂ ಅಲ್ಲ; ತುಳಸಿ ಗೌಡರು ಸಸ್ಯಪಾಲನ ಕೇಂದ್ರದಲ್ಲಿ ಬೀಜ ನೆಟ್ಟು, ಸಸಿಗಳನ್ನು ಬೆಳಸಿ ಪಾಲನೆ ಪೋಷಣೆ ಮಾಡಿದ್ದರೆ ಅಷ್ಟು ಬೆಳಕಿಗೆ ಬರುತ್ತಿರಲಿಲ್ಲವೇನೋ! ಅವರು ಕಾಡಿನ ಅಪರೂಪದ ಬೀಜ ಸಂಗ್ರಹಿಸಿ, ಅವನ್ನು ಮಣ್ಣಿಗೆ ಹಾಕಿ, ನೀರೆರೆದು ಬದುಕಿಸಿ, ಸಸಿ ಮಾಡಿ, ಅರಣ್ಯದಲ್ಲಿ ನೆಟ್ಟು ತನ್ನ ಸ್ವಂತ ಮಕ್ಕಳಂತೆ ಬೆಳಸಿದರು. ಈ ಕಾಯಕ ಮೂರು ದಶಕಗಳ ಕಾಲ ಸದ್ದಿಲ್ಲದೆ ನಡೆಯಿತು. ಯಲ್ಲಪ್ಪರೆಡ್ಡಿ ಅಂತ ಅರಣ್ಯಾಧಿಕಾರಿಗಳು ತುಳಸಿ ಗೌಡರ ಶ್ರಮ ಗುರುತಿಸಿ, ಸರ್ಕಾರದ ಕಣ್ಣಿಗೆ ಬೀಳುವಂತೆ ಮಾಡಿದರು. ಅದರ ಪ್ರತಿಫಲವಾಗಿ ತುಳಸಿ ಅವರ ಬಳಿ ಸರ್ಕಾರಗಳು ಮಂಡಿಯೂರಿ ಕುಳಿತು ಗೌರವಿಸಿದವು. ಅವರು ಬದುಕಿದ್ದಾಗಲೇ ಗೌರವಗಳು ಹುಡುಕಿ ಬಂದವು. ತುಳಸಿ ಅವರಿಗೆ ಸಿಕ್ಕ ಗೌರವ ನೈತಿಕ ತಳಹದಿಯಿಂದ ಬಂದವು. ಲಾಭಿ ಮಾಡಿ ಪ್ರಶಸ್ತಿ ಪಡೆದವರು ಇಂದು ತುಳಸಿ ಗೌಡರಂತಹ ಪ್ರತಿಭೆ ಕಂಡು ನಾಚಿಕೊಳ್ಳಬೇಕಷ್ಟೆ.
ಶರಣರ ಸಾವು ಮರಣದಲ್ಲಿ ನೋಡು ಎಂಬಂತೆ ಬದುಕಿದ್ದ ತುಳಸಿ ಗೌಡರು, ಉಂಡದ್ದು ಅಂಬಲಿ, ಹೊದ್ದದ್ದು ಕಂಬಳಿ ಎಂಬ ಸರಳ ಜೀವನ ತತ್ವದಲ್ಲಿ ನಡೆದವರು. ಮನುಷ್ಯರ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು, ಸೌಕರ್ಯ ಇರಬಾರದು. ಇದ್ದರೆ ಅಹಂ ಬಂದು ಬಿಡ್ತದೆ ಎಂದು ತೀರಾ ಅಪ್ತ ಎನಿಸಿದವರಲ್ಲಿ ಮಾತ್ರ ಹೇಳುತ್ತಿದ್ದರು. ತುಳಸಿ ಅವರನ್ನು ಮಾತಾಡಿಸಲು, ಅವರಿಗೆ ವಿಶ್ವಾಸಿಕರು ಅನಿಸಬೇಕಿತ್ತು. ಪರಿಚಿತವಾದೊಡನೆ ಅವರು ತಕ್ಷಣಕ್ಕೆ ಬದುಕಿನ ಗುಟ್ಟು ಬಿಟ್ಟು ಕೊಟ್ಟವರಲ್ಲ. ಬದುಕಿನ ಬಹುಕಾಲ ಕಾಯಕ ಜೀವಿಯಾಗಿ ಬಾಳಿದವರು.

ಹೀಗಿದ್ದ ನಮ್ಮ ವನದ ತಾಯಿ ತುಳಸಿ ಗೌಡ ಡಿಸೆಂಬರ್ 16 ರಂದು ಇಹಲೋಕ ತ್ಯಜಿಸಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಈಚಿನ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಅಂಕೋಲಾ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಹಾಲಕ್ಕಿ ಜನಾಂಗದ ಮುಗ್ಧತೆಯನ್ನೇ ಹಾಸಿ ಹೊದ್ದವರು. ಹೆಚ್ಚು ಮಾತನಾಡದ ಅವರು ಹೊನ್ನಳ್ಳಿ ಸಸ್ಯಪಾಲನ ಕೇಂದ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಸಮಯ ಸಸಿಗಳೊಂದಿಗೆ ಮಾತಾಡುತ್ತಾ, ಸಸಿಗಳ ಪೋಷಣೆ ಮಾಡುತ್ತಾ, ಅವನ್ನು ನೆಟ್ಟು ಮರವಾಗಿ ಬೆಳಸುವತ್ತಾ ಅವರ ಚಿತ್ತ ನೆಟ್ಟಿತ್ತು. ಪ್ರತಿ ವರ್ಷ ಮೂವತ್ತು ಸಾವಿರ ಸಸಿ ಬೆಳೆಸಿ ಪೋಷಿಸಿದ ಕೀರ್ತಿ ಅವರದ್ದು. ಹಾಗೆ ಕಾಡಿನಿಂದ ಅಪರೂಪದ ಬೀಜ ಸಂಗ್ರಹಿಸಿ, ನೆಟ್ಟು ಸಸಿ ಮಾಡಿ, ಅದೇ ಸಿಸಿಗಳನ್ನು ಅರಣ್ಯದಲ್ಲಿ ಬೆಳಸಿದ ಕೀರ್ತಿ ಅವರದ್ದು. ಅವರ ಶ್ರದ್ಧೆ, ಅರಣ್ಯ ಪ್ರೀತಿ ನೋಡಿದ ಅರಣ್ಯಾಧಿಕಾರಿಗಳು, ಅವರನ್ನು ಅರಣ್ಯೀಕರಣ ಮತ್ತು ಸಸ್ಯಪಾಲನೆಗೆ ಬಳಸಿಕೊಂಡರು. ಅವರ ಕಾಡಿನ ಜ್ಞಾನವನ್ನು ಅರಣ್ಯಾಧಿಕಾರಿಗಳಿಗೆ ಮತ್ತು ಗಾರ್ಡ ಗಳಿಗೆ ಹಂಚಿದ್ದರು
ಪದ್ಮಶ್ರೀ ಪ್ರಶಸ್ತಿ ಹುಡುಕಿ ಬಂದಿತ್ತು ; ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಕ್ರಿ ಬೊಮ್ಮ ಗೌಡರ ನಂತರ ಪದ್ಮಶ್ರೀ ಪಡೆದ ಹಾಲಕ್ಕಿ ಜನಾಂಗದ ಎರಡನೇ ಮಹಿಳೆ ಎಂಬ ಗೌರವ ತುಳಸಿ ಗೌಡರಿಗೆ ಇತ್ತು. ವೇದಿಕೆಯಲ್ಲಿ ಎಂದೂ ಭಾಷಣ ಮಾಡದ ತುಳಸಿ ಅವರು ಅರಣ್ಯದೊಂದಿಗೆ ಮಾತ್ರ ಮಾತನಾಡುತ್ತಿದ್ದರು. ಸದ್ದಿಲ್ಲದೆ ಸಾಧನೆ ಮಾಡಿದ ಮಹಿಳೆ ತುಳಸಿ ಯೌವ್ವನ ಕಾಲದಲ್ಲಿ ಪತಿಯನ್ನು ಕಳೆದುಕೊಂಡು, ಎರಡು ಪುಟ್ಟ ಮಕ್ಕಳ ಬೆಳೆಸುತ್ತಾ, ದಿನಗೂಲಿಯಾಗಿ ಸಸ್ಯಪಾಲನ ಕೇಂದ್ರದಲ್ಲಿ ಕೆಲಸ ಮಾಡಿದರು. ಕೊನೆಯತನಕ, ಅರವತ್ತು ವರ್ಷ ದಾಟಿದರೂ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದರು. ಅರಣ್ಯ ಕಾಪಾಡಿದರು. ಹಾಗಾಗಿ ಅವರನ್ನು ವೃಕ್ಷಮಾತೆ ಎಂದು ಕರೆಯಲಾಯಿತು. ಸುಬ್ರಾಯ ಮತ್ತು ಸೋಮಿ ಎಂಬ ಎರಡು ಮಕ್ಕಳು ಹಾಗೂ ನಾಲ್ಕು ಜನ ಮೊಮ್ಮಕ್ಕಳು, ಅಪಾರ ಅಭಿಮಾನಿಗಳನ್ನು, ಪಶ್ಚಿಮಘಟ್ಟದ ಅರಣ್ಯ, ಸಹ್ಯಾದ್ರಿ ಸರಮಾಲೆಯ ಪರ್ವತಗಳನ್ನು ಬಿಟ್ಟು, ಕಾಣದ ಲೋಕಕ್ಕೆ ತುಳಸಿ ಪಯಣ ಬೆಳಸಿದ್ದಾರೆ.
ತುಳಸಿಗೌಡರ ಬದುಕು – ಬವಣೆ
ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ ಪ್ರೇಮವನ್ನು ಮುಂದುರೆಸಿ ಕೊಂಡು ಬಂದಿದ್ದ ತುಳಸಿ ಗೌಡ ಸಮಾಜಕ್ಕೆ ಮಾದರಿಯಾಗಿದ್ದರು. ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಕೇವಲ ಅರಣ್ಯದ ಮೇಲಿನ ಕಾಳಜಿಗಾಗಿ ಗಿಡ ಮರಗಳನ್ನು ಬೆಳೆಸುವುದರ ಮೂಲಕ ಬರಡಾಗುತ್ತಿರುವ ಕಾಡಿಗೆ ಹಸಿರು ಸೆರಗು ಹೊದಿಸುವ ಪರಿಸರ ಸಂರಕ್ಷಣೆಯ ಕಾರ್ಯವನ್ನು ಕಳೆದ ಸುಮಾರು ಆರು ದಶಕಗಳಿಂದ ಮಾಡುತ್ತ ಬಂದಿದ್ದರು. ತುಳಸಿ ಗೌಡರು. ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ಹಾಲಕ್ಕಿ ಮಹಿಳೆ ತುಳಸಿಗೆ ಈಗ ಸುಮಾರು 80 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲಿಯೇ ಹಸೆಮಣೆ ಏರಿದ ಈಕೆಗೆ ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯವೇ ಉದ್ಯೋಗದ ಜೊತೆಗೆ ಹವ್ಯಾಸವೂ ಆಗಿ ಪರಿಣಮಿಸಿತು. ಇಲಾಖೆಯವರು ನೀಡುವ ಕೆಲಸ ವಾರಕ್ಕೆ 5 ದಿನಗಳು ಮಾತ್ರವಾದರೂ ಉಳಿದ 2 ದಿನಗಳಲ್ಲಿಯೂ ಯಾವುದೇ ಕೂಲಿ ದೊರೆಯದಿದ್ದರೂ ತನ್ನ ಕಾರ್ಯವನ್ನು ಉಚಿತವಾಗಿ ಮಾಡುತ್ತಿದ್ದಳು. ನರ್ಸರಿಯಲ್ಲಿ ಬೀಜವನ್ನು ನೆಟ್ಟು ಅವು ಸಸಿಯಾದ ಬಳಿಕ ಬೋಳಾಗಿರುವ ಕಾಡಿನ ಪ್ರದೇಶಕ್ಕೆ ಒಯ್ದು ನೆಡುವ ಕಾರ್ಯದಲ್ಲಿ ತಮ್ಮ ಜೀನವನ್ನೇ ಸವೆದವರು. ಇವಳ ದುಡಿಮೆ ಹಾಗೂ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಅರಣ್ಯ ಇಲಾಖೆಯು ಇವರ ಸೇವೆಯನ್ನು ಖಾಯಂಗೊಳಿಸಿತು. ಖಾಯಂ ಆದ ಬಳಿಕ 14 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದರು.
ಅರಣ್ಯದ ಬಗ್ಗೆ ಅಪಾರ ತಿಳಿವಳಿಕೆ
ತುಳಸಿಯ ಅರಣ್ಯ ತಿಳಿವಳಿಕೆ ಅಪಾರವಾಗಿತ್ತು. ಮುಖ್ಯವಾಗಿ ಸಾಗವಾನಿ ಸಸಿಗಳನ್ನು ಹೆಚ್ಚಾಗಿ ಬೆಳೆಸುತ್ತಿದ್ದ ತುಳಸಿ ಗೌಡರು, ಇದರ ಹೊರತಾಗಿ ಬೀಟೆ, ಅತ್ತಿ, ಆಲ, ಹುನಾಲು, ಚೆಳ್ಳೆ, ಹೆಬ್ಬೆಲಸು, ನಂದಿ ಮತ್ತಿ ಮುಂತಾದ ಮರಗಳ ಎಲ್ಲ ಮಾಹಿತಿಗಳ ಅರಿವನ್ನು ಹೊಂದಿದ್ದರು. ಯಾವ ಯಾವ ಮರದಿಂದ ಏನೇನು ಪ್ರಯೋಜನ, ಯಾವ ಮರದಲ್ಲಿ ಯಾವಾಗ ಬೀಜ ಒಣಗುತ್ತದೆ, ಯಾವ ಜಾತಿಯ ಸಸಿಗಳಿಗೆ ಎಷ್ಟು ನೀರಿನ ಅವಶ್ಯಕತೆ ಇದೆ ಮುಂತಾದ ಹಲವಾರು ಮಾಹಿತಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳಿಗಿಂತ ಚೆನ್ನಾಗಿ ಈ ಮಹಿಳೆಗೆ ತಿಳಿದಿದೆ. ಸಸಿಗಳ ಉತ್ಪಾದನೆಯಲ್ಲಿ ಇವರಿಗೆ ಇರುವ ಜ್ಞಾನ, ತೋರುವ ಪ್ರಯೋಗಶೀಲತೆ, ಗಿಡ ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸುತ್ತದೆ. ಜಿಲ್ಲೆಯ ಅಂಕೋಲಾ, ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಇವರು ನೆಟ್ಟು ಬೆಳೆಸಿದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ಭೂತಾಯಿಯ ಒಡಲು ರಕ್ಷಿಸುತ್ತಿವೆ ಎನ್ನುವ ಮಾಹಿತಿ ಸಮಾಜಕ್ಕೆ ನೀಡಿದ್ದರು.

ತುಳಸಿ ಗೌಡರಿಗೆ ಲಭಿಸಿದ ಪ್ರಶಸ್ತಿಗಳು
ಸೇವೆಯ ಅವಧಿಯಲ್ಲಿ ತುಳಸಿಯ ಪರಿಸರ ಕಾಳಜಿಯನ್ನು ಗಮನಿಸಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 1999 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಇವರಿಗೆ ದೊರೆತಿವೆ. ಇವರು ನಿವೃತ್ತಿಯ ನಂತರವೂ ತಮ್ಮ ಗಿಡ ನೆಡುವ ಕಾರ್ಯವನ್ನು ಕೈ ಬಿಡಲಿಲ್ಲ. ಮುಂದುವರೆದು ವಯಸ್ಸಾದಂತೆ ದೂರ ಹೋಗಲು ಕಷ್ಟವಾದಾಗ ತಮ್ಮ ಮನೆಯ ಸುತ್ತಮುತ್ತಲಿನ ಕಾಡಿನಲ್ಲಿಯೇ ಸಸ್ಯ ಸಂಕುಲವನ್ನು ಬೆಳೆಸಿ ಆರೈಕೆ ಮಾಡುತ್ತಿದ್ದರು. ವೃಕ್ಷ ಮಾತೆ ಎಂದೇ ಜನಪ್ರಿಯವಾಗಿರುವ ಇವರ ಪರಿಸರ ಪ್ರೇಮದ ಬಗ್ಗೆ ತಿಳಿದು, ರಾಜ್ಯದ ನಾನಾ ಭಾಗಗಳಿಂದ ಜನರು ಕುಗ್ರಾಮವಾದ ಹೊನ್ನಳ್ಳಿಗೆ ಬರುತ್ತಿದ್ದರು. ತಮ್ಮನ್ನು ಕಾಣಲು ಬಂದವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಇವರು ಪರಿಸರದ ಬಗ್ಗೆ ವಿಶೇಷ ಕಾಳಜಿಯ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಸಂರಕ್ಷಿಸುವ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು.
ಇದನ್ನೂ ಓದಿ ಮುಸ್ಲಿಮರಿಗೆ ಹಿಂಸೆ ನೀಡಿ ಶ್ರೀರಾಮನಿಗೆ ಜೈ ಎನ್ನಿಸಿದರೆ ದೇವರು ಮೆಚ್ಚುವನೇ?
ಇಂದಿನ ಪರಿಸರ ನಾಶದ ಬಗ್ಗೆ ಆತಂಕವಿತ್ತು. ಭವಿಷ್ಯದಲ್ಲಿ ಇದರಿಂದಾಗಿ ತಮ್ಮ ಮರಿ ಮಕ್ಕಳಿಗೆ ಆಗಬಹುದಾದ ದುರವಸ್ಥೆಯ ಬಗ್ಗೆ ಕಲ್ಪಿಸಿ ಮರಗುತ್ತಿದ್ದವರು. ತಾವು ಮೊದಲೆಲ್ಲ ಸಾಗುವಾನಿ, ಮಾವು, ಹಲಸು ಮುಂತಾದ ಪರಿಸರ ಪ್ರೇಮಿ ಮರಗಳನ್ನು ಬೆಳೆಸುತ್ತಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಇವರು ಇಂದು ಎಲ್ಲೆಡೆ ಅಂತರ್ಜಲ ಮಟ್ಟವನ್ನು ಕಡಿಮೆ ಮಾಡುತ್ತಿರುವ, ಅಶುದ್ಧ ವಾತಾವರಣ ನಿರ್ಮಾಣ ಮಾಡುತ್ತಿರುವ ಅಕೇಶಿಯಾ ಬೆಳೆಸುತ್ತಿರುವುದನ್ನು ಕಂಡು ಬೇಸರ ಪಡುತ್ತಿದ್ದರು. ಆರಂಭದಿಂದ
ಕಡು ಬಡತನದಲ್ಲೇ ಬೆಳೆದಿದ್ದರು. ಅರಣ್ಯ ಇಲಾಖೆಯ ಅಲ್ಪ ಪಿಂಚಣಿಯಿಂದ ಜೀವನ ಸಾಗಿಸುತ್ತಿದ್ದರು. ಇಬ್ಬರು ಗಂಡು ಮಕ್ಕಳು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಭೂತಾಯಿಯನ್ನು ಹಸಿರಾಗಿಸುವ ಕಾಯಕದಲ್ಲಿ ತೊಡಗಿದ ತುಳಸಿ ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದರು. ಇಂದು ಅವರು ಪ್ರಕೃತಿಯಲ್ಲಿ ಲೀನವಾಗಿದ್ದಾರೆ. ತಾನು ನೆಟ್ಟು ಬೆಳಿಸಿದ ಮರಗಳಲ್ಲಿ ಜೀವಂತವಾಗಿದ್ದಾರೆ.

ನಾಗರಾಜ್ ಹರಪನಹಳ್ಳಿ
ಪತ್ರಕರ್ತ. ಹುಟ್ಟೂರು ಚಾಮರಾಜನಗರ. ಬೆಳೆದದ್ದು ಹರಪನಹಳ್ಳಿಯಲ್ಲಿ. ಓದಿದ್ದು ಧಾರವಾಡದಲ್ಲಿ. ಬದುಕು ಹಾಗೂ ನೆಲೆ ಕಾರವಾರ.