ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆ ನಡೆಸುವುದು ದೊಡ್ಡ ಸವಾಲಾಗಿದೆ. ಮೈತೇಯಿ ಸಮುದಾಯವು ಕಣಿವೆ ಪ್ರದೇಶದಲ್ಲಿ ಬಹುಸಂಖ್ಯಾತರಾಗಿದ್ದರೆ, ಬೆಟ್ಟದ ಪ್ರದೇಶಗಳಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳು ಹಂಚಿಕೆಯಾಗಿವೆ. ಹಿಂಸಾಚಾರದ ಕಾರಣದಿಂದ ಈ ಸಮುದಾಯಗಳ ನಡುವಿನ ಮುಕ್ತ ಸಂಚಾರ ಬಂದ್ ಆಗಿದೆ.
ಮಣಿಪುರ ರಾಜ್ಯವು ಕಳೆದೆರಡು ವರ್ಷಗಳಿಂದ ಜನಾಂಗೀಯ ಹಿಂಸಾಚಾರದ ಕಾವಿನಲ್ಲಿ ಬೇಯುತ್ತಿದೆ. ಪ್ರಸ್ತುತ ಪರಿಸ್ಥಿತಿ ಮತ್ತಷ್ಟು ಸಂಕೀರ್ಣ ರೂಪಕ್ಕೆ ತಿರುಗಿದೆ. ಆರಂಭದಲ್ಲಿ ಮೈತೇಯಿ (Meitei) ಮತ್ತು ಕುಕಿ-ಜೋ (Kuki-Zo) ಸಮುದಾಯಗಳ ನಡುವೆ ಈ ಹಿಂಸಾತ್ಮಕ ಸಂಘರ್ಷ ಸೀಮಿತವಾಗಿತ್ತು. ಆದರೆ ಈಗ ರಾಜ್ಯದ ಬೆಟ್ಟದ ಪ್ರದೇಶಗಳಲ್ಲಿ ವಾಸಿಸುವ ನಾಗಾ (Naga) ಮತ್ತು ಕುಕಿ ಸಮುದಾಯಗಳ ನಡುವೆಯೂ ಹೊಸ ಕಿಡಿ ಹೊತ್ತಿದೆ.
ಈ ಉದ್ವಿಗ್ನತೆಯ ಮಧ್ಯೆಯೇ, ರಾಜ್ಯದ ಉಪಮುಖ್ಯಮಂತ್ರಿ ಲೋಸಿ ಡಿಖೋ ಅವರ “ನಾಗಾ-ಕುಕಿ ಹಿಂಸಾಚಾರ ಹೀಗೆಯೇ ಮುಂದುವರೆದರೆ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ನಡೆಸುವುದು ಅತ್ಯಂತ ದುಸ್ತರವಾಗಲಿದೆ” ಎಂಬ ಹೇಳಿಕೆಯು ಮಣಿಪುರದ ರಾಜಕೀಯ ಹಾಗೂ ಸಾಂವಿಧಾನಿಕ ಭವಿಷ್ಯದ ಕುರಿತು ತೀವ್ರ ಕಳವಳವನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ| ಪೊಲೀಸ್ ಠಾಣೆ, ಅರಣ್ಯ ಕಚೇರಿಗೆ ಬೆಂಕಿ; ಸುಟ್ಟು ಕರಕಲು
ಮಣಿಪುರ ಸರ್ಕಾರದಲ್ಲಿ ಜಂಟಿಯಾಗಿ ಅಧಿಕಾರ ಹಂಚಿಕೊಂಡಿರುವ ನಾಗಾ ಶಾಸಕರು ಹಾಗೂ ಕುಕಿ ನಾಯಕರ ನಡುವಿನ ಭಿನ್ನಾಭಿಪ್ರಾಯ ಈಗ ಬಹಿರಂಗ ರಾಜಕೀಯ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗೆ ಕಂಗ್ಪೋಕ್ಪಿ ಮತ್ತು ಇಂಫಾಲ್-ತಮೆಂಗ್ಲಾಂಗ್ ರಸ್ತೆಗಳಲ್ಲಿ ನಡೆದ ದಾಳಿಗಳಲ್ಲಿ ನಾಗಾ ಸಮುದಾಯದ ನಾಗರಿಕರು ಹತ್ಯೆಗೀಡಾದ ಘಟನೆಗಳ ನಂತರ, ನಾಗಾ ಶಾಸಕರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಕಿ ಸಶಸ್ತ್ರ ಗುಂಪುಗಳ ವಿರುದ್ಧ ಹಾಗೂ ಹತ್ಯೆಗಳಲ್ಲಿ ಭಾಗಿಯಾಗಿದ್ದಾರೆನ್ನಲಾದ ಕುಕಿ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುವುದಾಗಿ ನಾಗಾ ನಾಯಕರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಯವರು ನೀಡಿದ ಹೇಳಿಕೆಯು ಕೇವಲ ಶಾಂತಿ ಪಾಲನೆಯ ಸವಾಲನ್ನು ಮಾತ್ರವಲ್ಲದೆ, ರಾಜಕೀಯ ಸ್ಥಿರತೆಯ ಮೇಲಿರುವ ಗಂಭೀರ ಬೆದರಿಕೆಯನ್ನು ಬಿಂಬಿಸುತ್ತದೆ.
2023ರ ಮಣಿಪುರದ ಭೀಕರ ಜನಾಂಗೀಯ ಹಿಂಸಾಚಾರ
ಮಣಿಪುರದಲ್ಲಿ 2023ರಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರವು ರಾಜ್ಯದ ಇಬ್ಬಂದಿ ಸಮುದಾಯಗಳ ನಡುವಿನ ದೀರ್ಘಕಾಲದ ಉದ್ವಿಗ್ನತೆಯ ಪರಿಣಾಮ. ಮೈತೇಯಿ ಸಮುದಾಯದವರು ತಮಗೆ ‘ಪರಿಶಿಷ್ಟ ಪಂಗಡ’ (ST) ಸ್ಥಾನಮಾನ ನೀಡಬೇಕೆಂದು ಕೋರಿದ್ದರು. ಈ ಕುರಿತು ಪರಿಶೀಲಿಸುವಂತೆ ಮಣಿಪುರ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು. ಹೈಕೋರ್ಟ್ ನಿರ್ದೇಶನವನ್ನು ವಿರೋಧಿಸಿ ಕುಕಿ ಸೇರಿದಂತೆ ಇತರ ಬುಡಕಟ್ಟು ಸಮುದಾಯಗಳು ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಿದವು. ಮೈತೇಯಿ ಸಮುದಾಯಕ್ಕೆ ST ಸ್ಥಾನಮಾನ ಸಿಕ್ಕಿದರೆ ತಮ್ಮ ಹಕ್ಕುಗಳು ಮತ್ತು ಜಮೀನು ಕೈತಪ್ಪಬಹುದು ಎಂಬುದು ಕುಕಿ ಸಮುದಾಯದ ಆತಂಕ. ಅದಾಗಲೇ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿಯು ಕೈಮೀರಿ ಹಿಂಸಾಚಾರ ಆರಂಭವಾಯಿತು.
2023ರ ಮೇ 3ರಂದು ಚುರಾಚಂದ್ಪುರ ಜಿಲ್ಲೆಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಗಲಭೆ ಆರಂಭವಾಯಿತು. ಈ ಹಿಂಸಾಚಾರವು ಶೀಘ್ರದಲ್ಲೇ ಇಡೀ ರಾಜ್ಯಕ್ಕೆ ಹರಡಿ, ಎರಡೂ ಕಡೆಯವರಿಂದ ಮನೆಗಳು, ಪ್ರಾರ್ಥನಾ ಮಂದಿರಗಳು, ಸರ್ಕಾರಿ ಆಸ್ತಿಪಾಸ್ತಿಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಗಲಭೆಕೋರರು ಪೊಲೀಸ್ ಠಾಣೆಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ದೋಚಿದ್ದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು. ಬಿಜೆಪಿ ಸರ್ಕಾರಕ್ಕೆ ಈ ಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಇದ್ದಾಗ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಹತೋಟಿಗೆ ತರಲು ಸೇನೆ, ಅರೆಸೈನಿಕ ಪಡೆಗಳನ್ನು (CRPF, BSF) ನಿಯೋಜಿಸಿತು ಮತ್ತು ‘ಕರ್ಫ್ಯೂ’ ಜಾರಿಗೊಳಿಸಿತು.
ಇವೆಲ್ಲವುದರ ನಡುವೆ ಮಣಿಪುರದ ಮುಖ್ಯಮಂತ್ರಿಯಾಗಿದ್ದ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದರು. ಅದಾದ ಬಳಿಕ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗದೆ ಇದ್ದಾಗ 2025 ಫೆಬ್ರವರಿ 13ರಂದು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಯಿತು. ವಿಧಾನಸಭಾ ಕಲಾಪಗಳನ್ನು ಅಮಾನತಿನಲ್ಲಿಡಲಾಗಿತ್ತು. ಈ ರಾಷ್ಟ್ರಪತಿ ಆಡಳಿತವು ಸುಮಾರು ಒಂದು ವರ್ಷದ ಅವಧಿಗೆ ಜಾರಿಯಲ್ಲಿತ್ತು. 2026ರ ಫೆಬ್ರವರಿ 4ರಂದು ಇದನ್ನು ಹಿಂಪಡೆಯಲಾಯಿತು. ಅದಾದ ಬಳಿಕ ಮತ್ತೆ ಬಿಜೆಪಿ ಸರ್ಕಾರ ರಚಿಸಿತು. ಇದಾಗುತ್ತಿದ್ದಂತೆ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆಯೂ ಹಿಂಸಾಚಾರ ಆರಂಭವಾಗಿದೆ.
ನಾಗಾ-ಕುಕಿ ವೈಷಮ್ಯದ ಐತಿಹಾಸಿಕ ಹಿನ್ನೆಲೆ
ಮಣಿಪುರದಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ವೈಷಮ್ಯವು ನಿನ್ನೆ ಮೊನ್ನೆಯದ್ದಲ್ಲ; ಅದಕ್ಕೆ 1990ರ ದಶಕದ ಕಹಿ ಇತಿಹಾಸವಿದೆ. 1992-1995ರ ಅವಧಿಯಲ್ಲಿ ಜಮೀನು ಮತ್ತು ಪ್ರಾದೇಶಿಕ ಪ್ರಾಬಲ್ಯಕ್ಕಾಗಿ ನಡೆದ ನಾಗಾ-ಕುಕಿ ರಕ್ತಸಿಕ್ತ ಸಂಘರ್ಷದಲ್ಲಿ ನೂರಾರು ಜನರು ಜೀವ ಕಳೆದುಕೊಂಡಿದ್ದರು ಹಾಗೂ ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದವು.
ನಂತರದ ದಿನಗಳಲ್ಲಿ ತಾತ್ಕಾಲಿಕ ಶಾಂತಿ ನೆಲೆಸಿದರೂ, ಭೂಮಿ ಹಕ್ಕು, ಸಾಂಸ್ಕೃತಿಕ ಗುರುತು ಮತ್ತು ಹಿಲ್ ಏರಿಯಾಸ್ ಕೌನ್ಸಿಲ್ (HAC) ಅಧಿಕಾರ ವ್ಯಾಪ್ತಿಯ ವಿಷಯಗಳಲ್ಲಿ ಆಂತರಿಕ ಅಪನಂಬಿಕೆ ಉಳಿದುಕೊಂಡಿತ್ತು. 2023ರಿಂದ ಮೈತೇಯ್-ಕುಕಿ ನಡುವೆ ನಡೆಯುತ್ತಿದ್ದ ಹಿಂಸಾಚಾರವು ಇದೀಗ ನಾಗಾ-ಕುಕಿ ಪ್ರದೇಶಗಳಿಗೂ ವಿಸ್ತರಿಸುತ್ತಿರುವುದು 90ರ ದಶಕದ ಆ ಕರಾಳ ದಿನಗಳನ್ನು ನೆನಪಿಸುವಂತೆ ಮಾಡಿದೆ.
ಚುನಾವಣೆ ನಡೆಸುವುದು ದುಸ್ತರ ಏಕೆ?
ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆ ನಡೆಸುವುದು ದೊಡ್ಡ ಸವಾಲಾಗಿದೆ. ಮೈತೇಯಿ ಸಮುದಾಯವು ಕಣಿವೆ ಪ್ರದೇಶದಲ್ಲಿ ಬಹುಸಂಖ್ಯಾತರಾಗಿದ್ದರೆ, ಬೆಟ್ಟದ ಪ್ರದೇಶಗಳಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳು ಹಂಚಿಕೆಯಾಗಿವೆ. ಹಿಂಸಾಚಾರದ ಕಾರಣದಿಂದ ಈ ಸಮುದಾಯಗಳ ನಡುವಿನ ಮುಕ್ತ ಸಂಚಾರ ಬಂದ್ ಆಗಿದೆ.
ಇದನ್ನೂ ಓದಿ: ಮಣಿಪುರ ಬಿಕ್ಕಟ್ಟು: ರಾಷ್ಟ್ರೀಯ ಹೆದ್ದಾರಿಗಳ ಪುನರಾರಂಭಕ್ಕೆ ಯೋಜನೆ ರೂಪಿಸಲು ಕುಕಿ, ನಾಗಾ ಸಮುದಾಯಗಳಿಗೆ ಸುಪ್ರೀಂ ಆದೇಶ
ಸಂಘರ್ಷದಿಂದಾಗಿ ಲಕ್ಷಾಂತರ ಜನರು ತಮ್ಮ ಸ್ವಂತ ಮನೆಗಳನ್ನು ತೊರೆದು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾನ ಪ್ರಕ್ರಿಯೆ ನಿರ್ವಹಿಸುವುದು ಕಠಿಣ. ಪ್ರದೇಶದಲ್ಲಿ ವಿವಿಧ ಜನಾಂಗೀಯ ಸಶಸ್ತ್ರ ಪಡೆಗಳು ಸಕ್ರಿಯವಾಗಿದ್ದು, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಭದ್ರತಾ ಪಡೆಗಳ ನಿಯೋಜನೆ ಮತ್ತು ಮತಗಟ್ಟೆಗಳ ರಕ್ಷಣೆ ದೊಡ್ಡ ಸಾಹಸವಾಗಲಿದೆ. ಬಿಜೆಪಿ ಸರ್ಕಾರ ಮತ್ತು ವಿವಿಧ ಜನಾಂಗೀಯ ಗುಂಪುಗಳ ನಡುವಿನ ಪರಸ್ಪರ ನಂಬಿಕೆಯ ಅಭಾವವು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರನ್ನು ಹಿಂದೇಟು ಹಾಕುವಂತೆ ಮಾಡಿದೆ.
ಉಪಮುಖ್ಯಮಂತ್ರಿಯವರ ಎಚ್ಚರಿಕೆಯು ರಾಜ್ಯದಲ್ಲಿ ತಕ್ಷಣವೇ ಶಾಂತಿ ಮರುಸ್ಥಾಪನೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಮಿಲಿಟರಿ ಬಲದಿಂದ ಸನ್ನಿವೇಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ (ಮೈತೇಯಿ, ನಾಗಾ, ಕುಕಿ) ನಾಯಕರನ್ನು ಒಂದೇ ವೇದಿಕೆಗೆ ತಂದು ಸುದೀರ್ಘ ಶಾಂತಿ ಮಾತುಕತೆ ನಡೆಸಬೇಕಿದೆ.
ಆಂತರಿಕವಾಗಿ ಸೃಷ್ಟಿಯಾಗಿರುವ ಗಡಿಗಳನ್ನು ತೆರವುಗೊಳಿಸಿ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ನಾಗರಿಕರಲ್ಲಿ ನಂಬಿಕೆಯನ್ನು ಮೂಡಿಸುವುದು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವಾಗಿದೆ. ಮಣಿಪುರದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಸಾಂವಿಧಾನಿಕ ಪ್ರಕ್ರಿಯೆಯನ್ನು ಎತ್ತಿಹಿಡಿಯಬೇಕಾದರೆ, ರಾಜಕೀಯ ಲಾಭ-ನಷ್ಟಗಳ ಗಣನೆಯನ್ನು ಬದಿಗೊತ್ತಿ, ಜನಾಂಗೀಯ ಶಾಂತಿಗೆ ಮೊದಲ ಆದ್ಯತೆ ನೀಡಬೇಕಿದೆ.





