ವಕ್ಫ್ ತಿದ್ದುಪಡಿ ಮಸೂದೆ 2025 | ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಛವಾಗಿವೆಯೇ?

Date:

Advertisements

ವಕ್ಫ್‌ ನಲ್ಲಿ ಮಾತ್ರವೇ ದುರುಪಯೋಗ ನಡೆಯುತ್ತಿದ್ದು, ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಛವಾಗಿದೆಯೇ? ಅಥವಾ ಬೇರೆ ಧಾರ್ಮಿಕ ಸಂಸ್ಥೆಗಳು ಕಾನೂನು ಮತ್ತು ಸುಧಾರಣೆಗಳನ್ನು ಮೀರಿದ್ದೇ? ಇದು ಕೇವಲ ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಅವರನ್ನು ಸರಿದಾರಿಗೆ ತರಬೇಕೆನ್ನುವ ಇರಾದೆಯನ್ನು ಸೂಚಿಸಿದ್ದು, ಆಡಳಿತ ಪಕ್ಷದ ಇಂತಹ ಇರಾದೆಗಳ ಬಗ್ಗೆಯೇ ಅಪನಂಬಿಕೆ ಎನ್ನಲಾಗಿದೆ.

ಸುಮಾರು 10 ವರ್ಷಗಳಲ್ಲಿ ಮೊದಲ ಬಾರಿಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ‘ವಕ್ಫ್ ತಿದ್ದುಪಡಿ ಮಸೂದೆ 2025’ ಕುರಿತಾಗಿ ಧೀರ್ಘಾವಧಿಯ ಬಿರುಸಿನ ಪರ ವಿರೋಧ ಚರ್ಚೆಗಳು ನಡೆದಿದ್ದು ಸ್ವಾಗತಾರ್ಹ ಸಂಗತಿಯಾಗಿದೆ. ಎಲ್ಲಾ ಪಕ್ಷಗಳು ತಮ್ಮ ವಿಚಾರ ಮಂಡನೆಗೆ ಸಾಕಷ್ಟು ಅವಕಾಶ ಪಡೆದಿದ್ದರ ಜೊತೆಗೆ, ಕರಡು ಮಸೂದೆಯು ಮೊದಲೇ ಜಂಟಿ ಪಾರ್ಲಿಮೆಂಟ್ ಸಮಿತಿಯ (ಜೆಪಿಸಿ) ಪರಿಶೀಲನೆಗೆ ಒಳಪಡಿಸಿದ್ದು ಸಮಾಧಾನಕರ ವಿಷಯವಾದರೂ, ಅದರ ಮುಖ್ಯ ಶಿಫಾರಸ್ಸುಗಳನ್ನು ಪರಿಣಗಣಿಸದೆ, ಮಸೂದೆಯು ಎರಡೂ ಸದನಗಳಲ್ಲಿ ಅಂಗೀಕೃತವಾಗಿದ್ದು ವಿರೋಧ ಪಕ್ಷಗಳ ಅಸಹನೆಗೆ ಕಾರಣವಾಗಿದೆ.

ವಕ್ಫ್ Waqf ಎನ್ನುವುದು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಲ್ಲಾಹನ ಹೇಸರಿನಲ್ಲಿ ಮುಸ್ಲಿಂ (ಹೆಚ್ಚಿನಂಶ) ಜನರು ತಮ್ಮ ಸ್ಥಿರ/ಚರ ಆಸ್ತಿಗಳನ್ನು ದಾನ ಮಾಡಿರುವುದು. ಈ ಆಸ್ತಿಯನ್ನು ಮತ್ತೆ ವಾಪಸ್ಸು ಪಡೆಯಲು, ಅಥವಾ ಮಾರಾಟ ಮಾಡಲು ಸಾಧ್ಯವಿರುವುದಿಲ್ಲ. ಒಮ್ಮೆ ವಕ್ಫ್ ಎಂದು ಘೋಷಿಸಿದ ಆಸ್ತಿಯು ವಕ್ಫ್ ಆಗಿಯೇ ಉಳಿಯುತ್ತದೆ. ಎಲ್ಲಾ ಧರ್ಮಗಳಲ್ಲಿರುವಂತೆ ದಾನವು ಪುಣ್ಯದ ಕೆಲಸವೆಂಬ ಭಾವನೆ Islam ಇಸ್ಲಾಂ ಧರ್ಮದಲ್ಲೂ ಇದ್ದು, ಬಹು ಹಿಂದಿನಿಂದ ಉಳ್ಳವರು ತಮ್ಮ ಆಸ್ತಿಗಳನ್ನು ದೇವರ ಹೇಸರಿನಲ್ಲಿ ದಾನ ಮಾಡುತ್ತಾ ಬಂದಿದ್ದಾರೆ. ಇದು ಅನೇಕ ಮುಸ್ಲಿಂ ಮತ್ತು ಇತರೆ ರಾಷ್ಟ್ರಗಳಲ್ಲಿಯೂ ಪ್ರಚಲಿತದಲ್ಲಿದೆ. ಭಾರತದಲ್ಲಿ ಹಿಂದಿನಿಂದಲೂ ರಾಜರು ಮತ್ತು ಶ್ರೀಮಂತರು ಭೂಮಿ, ಮಹಲು, ಮತ್ತಿತರ ಸಂಪತ್ತನ್ನು ದಾನ ಮಾಡಿದ್ದು, ಮಸಿದಿ, ದರ್ಗಾ, ಸ್ಮಶಾನ, ಮದ್ರಸ, ಬಡವರಿಗೆ ಮನೆ, ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರೆ ಕಲ್ಯಾಣ ಕೆಲಸಗಳಿಗೆ ಉಪಯೋಗಿಸಲ್ಪಡುತ್ತಿದೆ.

ವಕ್ಫ್ ಇತಿಹಾಸವನ್ನು 12ನೇ ಶತಮಾನದ ಮಹಮ್ಮದ್ ಇಬ್ನ್-ಸ್ಯಾಮ್ ರಚಿಸಿದ ದತ್ತಿಯಿಂದ ಗುರುತಿಸಬಹುದಾಗಿದೆ. ನಂತರ ಮೊಗಲರ ಕಾಲಕ್ಕೆ ವಕ್ಫ್ ಆಡಳಿತದಲ್ಲಿ ಸುಧಾರಣೆಯಾಗುವ ಕುರಿತು ದಾಖಲೆಗಳು ಸಿಗುತ್ತವೆ. ಬ್ರಿಟೀಷರ ಆಡಳಿತದಲ್ಲಿ 1913ರಲ್ಲಿ ದಾನದ ಆಸ್ತಿಗಳನ್ನು ನಿರ್ವಹಿಸಲು ವಕ್ಫ್ ಬೋರ್ಡು (Waqf Board)ಗಳನ್ನು ರಚಿಸಲಾಗುತ್ತದೆ. ನಂತರ ‘ಮುಸಲ್ಮಾನ್ ವಕ್ಫ್ ಕಾಯ್ದೆಯು 1923’ ರಲ್ಲಿ ಜಾರಿಯಾಗುತ್ತದೆ. ಸ್ವಾತಂತ್ರ ನಂತರದಲ್ಲಿ ಇದು ಬದಲಾಗಿ ‘ವಕ್ಫ್ ಕಾಯ್ದೆ 1954 ಜಾರಿಯಾಗುತ್ತದೆ. ಈ ಕಾಯ್ದೆಯು 1964ರಲ್ಲಿ ತಿದ್ದುಪಡಿಯಾಗಿ ಕೆಲವು ಸುಧಾರಣೆಗಳೊಂದಿಗೆ ಸೆಂಟ್ರಲ್ ವಕ್ಫ್ ಕೌನ್ಸಿಲ್ ಆಫ್ ಇಂಡಿಯಾ (ವಕ್ಫ್ ಪರಿಷತ್ತು) ಎಂಬ ಶಾಸನಬದ್ಧ ಕೇಂದ್ರ ಸಂಸ್ಥೆಯನ್ನು ಹಾಗು ರಾಜ್ಯಗಳಲ್ಲಿ ವಕ್ಫ್ ಬೋರ್ಡ್‍ಗಳನ್ನು ಪ್ರಾರಂಭಿಸಲಾಗುತ್ತದೆ. ನಂತರದಲ್ಲಿ ಹಳೆಯ ಕಾಯ್ದೆಯನ್ನು ರದ್ದುಗೊಳಿಸಿ, ‘ವಕ್ಫ್ ಕಾಯ್ದೆ 1995ನ್ನು ಜಾರಿ ಮಾಡಿ ವಕ್ಫ್ ಪರಿಷತ್ತು, ವಕ್ಫ್ ಬೋರ್ಡ್, ಕಾರ್ಯನಿರ್ವಹಕ ಅಧಿಕಾರಿ ಹಾಗೂ ಮುತುವಲ್ಲಿಗಳ ಅಧಿಕಾರ ಮತ್ತು ಕಾರ್ಯಗಳನ್ನು ನಿಗದಿಪಡಿಸಲಾಗುತ್ತದೆ. ಮುತುವಲ್ಲಿಗಳು ಎಂದರೆ ಪ್ರತಿ ವಕ್ಫ್ ಬೋರ್ಡ್ ಆಸ್ತಿಯ ನಿರ್ವಾಹಕರಾಗಿರುತ್ತಾರೆ. ಇದಲ್ಲದೆ, ಈ ಕಾಯ್ದೆಯು ಸಿವಿಲ್ ನ್ಯಾಯಾಲಯಕ್ಕೆ ಬದಲಾಗಿ ವಕ್ಫ್ ಟ್ರಿಬ್ಯೂನಲ್ ಸ್ಥಾಪಿಸಿ, ತನ್ನ ವ್ಯಾಪ್ತಿಯಲ್ಲಿನ ದಾವೆಗಳನ್ನು ನಿರ್ಧರಿಸಲು ಅಧಿಕಾರ ನೀಡುವ ಜೊತೆಗೆ ನಿರ್ಬಂಧಗಳನ್ನೂ ಹೇಳಿರುತ್ತದೆ.

1995ರ ವಕ್ಫ್ ಕಾಯ್ದೆಯಲ್ಲಿ ಜಿಜೆಪಿ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ 2025ರ ಮೂಲಕ ತಂದಿರುವ ಬದಲಾವಣೆಗಳ ಕುರಿತು ಪಾರ್ಲಿಮೆಂಟಿನಲ್ಲಿ ಪರವಿರೋಧ ವಿಚಾರಗಳು ವಿಸ್ತೃತವಾಗಿ ಚರ್ಚೆಯಾಗಿದ್ದು, ಅವು ರಾಜಕೀಯ ಲಾಭ, ಕಳಕಳಿಗಳು, ವಕ್ಫ್‌ ನ ಕೆಲವು ಸೂಕ್ಷ್ಮ ವಿಷಯಗಳನ್ನೂ ಸಹ ಒಳಗೊಂಡಿದ್ದಲ್ಲದೆ, ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಕೆಲವು ತಪ್ಪು/ಸುಳ್ಳು ಮಾಹಿತಿಗಳನ್ನೂ ಸಹ ಬಳಕೆ ಮಾಡಿಕೊಂಡಿದ್ದು ಕಂಡುಬರುತ್ತದೆ.

new parliament building inside view of new parliament 255608819

ಹಿಂದಿನ ವಕ್ಫ್ ಕಾಯ್ದೆ 1995ಯನ್ನು ಈಗ ‘ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ 1995’ ಎಂದು ಹೆಸರಿಸಿದ್ದು, ಇದನ್ನು ಚಿಕ್ಕದಾಗಿ ‘ಉಮ್ಮೀದ್’ ಎಂದು ಕರೆಯಲಾಗಿದೆ. (UWMEED – Unified Waqf Management, Empowerment, Efficiency and Development Act, 1995). ಪ್ರಸ್ತುತ ವಕ್ಫ್ ಬೋರ್ಡ್‍ಗಳ ಆಸ್ತಿಗಳು ಸರಿಯಾಗಿ ನಿರ್ವಹಿಸದೆ ಪಾರದರ್ಶಕತೆ ಕಳೆದುಕೊಂಡು ದುರ್ಬಳಕೆ ಆಗುತ್ತಿವೆ. ದೇಶದ ಮೂರನೇ ದೊಡ್ಡ ಭೂಮಾಲಿಕತನ ಹೊಂದಿದ್ದರೂ, ಅದು ಸದ್ಬಳಕೆಯಾಗದ ಕಾರಣ ಮುಸ್ಲಿಂ ಸಮುದಾಯವೂ ಇನ್ನೂ ಬಡತನದಲ್ಲಿದೆ. ವಕ್ಫ್ ಭೂಮಿಯು ಮಿತಿಮೀರಿ ಒತ್ತುವರಿ ಆಗಿರುವುದಲ್ಲದೆ, ಆಸ್ತಿಗಳನ್ನು ಅತಿ ಕಡಿಮೆ ಬೆಲೆಗೆ ಮಾರಿರುವ ಅಥವಾ ಬಾಡಿಗೆ/ಭೋಗ್ಯಕ್ಕೆ ನೀಡುವ ಮೂಲಕ ಕೊಳ್ಳೆ ಹೊಡೆಯಲಾಗುತ್ತಿದೆ. ಒಂದು ವೇಳೆ ಈ ಮಸೂದೆ ತರಲಿಲ್ಲವಾದರೆ, ವಿಮಾನ ನಿಲ್ದಾಣ ಮತ್ತು ಪಾರ್ಲಿಮೆಂಟ್ ಕಟ್ಟಡಗಳ ಜಾಗವನ್ನೂ ಸಹ ವಕ್ಫ್ ಆಸ್ತಿಯೆಂದು ಘೋಷಿಸುವ ಸಂದರ್ಭಗಳಿವೆ. 2014ರ ಚುನಾವಣೆಯ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರವು 2013ರಲ್ಲಿ ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡದಿದ್ದರೆ, ಇಂದು ಈ ಮಸೂದೆಯ ಅಗತ್ಯವಿರಲಿಲ್ಲ. ಅಂದು, ಕಾಯ್ದೆಯನ್ನು ಮನಬಂದಂತೆ ಬಳಸಿಕೊಂಡ ಕಾರಣ ದೇಹಲಿಯ ನೂರಕ್ಕೂ ಹೆಚ್ಚು ಸರ್ಕಾರಿ ಆಸ್ತಿಗಳನ್ನು ವಕ್ಫ್‌ಗೆ ನೀಡಲಾಯಿತು. ವಕ್ಫ್ ಮಂಡಳಿಗಳು ಕೈತೋರಿದ ಆಸ್ತಿಯೆಲ್ಲವನ್ನು ತಮ್ಮ ವಶಮಾಡಿಕೊಳ್ಳುವ ಹಾಗೂ ವಕ್ಫ್ ಟ್ರಿಬ್ಯೂನಲ್ ತೀರ್ಮಾನವೇ ಅಂತಿಮವೆಂಬ ಅಧಿಕಾರವು ಎಲ್ಲಾ ಭ್ರಷ್ಟಾಚಾರಗಳಿಗೆ ಮೂಲವಾಗಿದೆ. ವಕ್ಫ್‌ನಂತಹ ಅವ್ಯವಹಾರಗಳನ್ನು ಕೊನೆಗೊಳಿಸಲು ಈ ಮಸೂದೆಯು ಅನಿವಾರ್ಯವಾಗಿದೆ ಎನ್ನುವುದು ಸರ್ಕಾರದ ಸಮರ್ಥನೆಗಳಾಗಿವೆ.

1995ರ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಉತ್ತಮ ಆಡಳಿತದ ಮೂಲಕ ಮುಸ್ಲಿಂ ಸಮುದಾಯದ ಹಿಂದುಳಿದವರ ಅಭಿವೃದ್ಧಿಗೆ ವಕ್ಫ್‌ ಸಂಪತ್ತನ್ನು ಬಳಸುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ. ವಕ್ಫ್‌ ನ ಆಸ್ತಿಗಳ ನೋಂದಣಿಯನ್ನು ಸುಗಮಗೊಳಿಸಿ, ತಂತ್ರಜ್ಞಾನ ಅಳವಡಿಕೆ ಮೂಲಕ ದತ್ತಾಂಶವನ್ನು (ಪೋರ್ಟಲ್‌ನಲ್ಲಿ) ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ಲೆಕ್ಕ ಪರಿಶೋಧನೆಯಂತಹ ಕ್ರಮಗಳಿಂದ ವಕ್ಫ್‌ ನಲ್ಲಿರುವ ಸಂಕೀರ್ಣತೆಗಳನ್ನು ಪರಿಹರಿಸಿ ಪಾರದರ್ಶಕತೆಯನ್ನು ಹೆಚ್ಚಿಸಲಾಗುವುದು ಎಂದು ಆಡಳಿತ ಪಕ್ಷ ಹೇಳಿದೆ.

ಈ ಮಸೂದೆಯು ವಕ್ಫ್ ಬೋರ್ಡ್ ವ್ಯವಸ್ಥೆಯನ್ನು ನಾಶ ಮಾಡುವ ಮೂಲಕ ತಮ್ಮ ಧಾರ್ಮಿಕ ವ್ಯವಹಾರಗಳ ಮೇಲೆ ಮುಸ್ಲಿಮರು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ. ಅಲ್ಪಸಂಖ್ಯಾತರ (ಮುಸ್ಲಿಮರ) ಸಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಸರ್ಕಾರದ ನಿಯಂತ್ರಣವನ್ನು ಹೆಚ್ಚಿಸಿ ಅಸಮಾನತೆ ಉಂಟುಮಾಡಿದೆ ಎಂಬ ಪ್ರಮುಖ ವಿರೋಧವು ವ್ಯಕ್ತವಾಗಿದೆ.

ಮಸೂದೆಯು ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿರುವ ವಿಶೇಷ ವಿಧಿ 14ರ (ಸಮಾನತೆಯ ಹಕ್ಕು), 25ರ (ತಮ್ಮ ಧರ್ಮವನ್ನು ಅನುಸರಿಸುವ ಹಕ್ಕು) 26ರ (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ), 29 (ಅಲ್ಪಸಂಖ್ಯಾತರ ಹಕ್ಕು) ಮತ್ತು 300ಎ (ಆಸ್ತಿ ಹಕ್ಕು) ಇವುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ. ಇವುಗಳ ಹಿನ್ನೆಲೆಯಲ್ಲಿ, ಈ ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ 150ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಕೆಯಾಗಿವೆ.

ಸೆಕ್ಯೂಲರ್ ಹೆಸರಿನಲ್ಲಿ ವಕ್ಫ್‌ ಪರಿಷತ್ತು ಮತ್ತು ರಾಜ್ಯ ಬೋರ್ಡ್‍ಗಳಲ್ಲಿ ಮುಸ್ಲಿಮೇತರರನ್ನು ಸದಸ್ಯರನ್ನಾಗಿ ಮಾಡುವ ಪ್ರಸ್ತಾವನೆಯು ನೇರವಾಗಿ ಸಂವಿಧಾನದ ವಿಧಿ 26ರ ಉಲ್ಲಂಘನೆ ಮಾಡುತ್ತದೆ. ಇದಕ್ಕೂ ಮಿಗಿಲಾಗಿ, ಮುಸ್ಲಿಂ ಸಮುದಾಯವನ್ನು ನಂಬಲಾಗದು ಎಂಬ ಮನೋಭೂಮಿಕೆಯ ಕಾರಣ ಇತರೆ ಧರ್ಮೀಯರನ್ನು ತರುವ ಮೂಲಕ ಇವರನ್ನು ನಿಯಂತ್ರಿಸಬೇಕು ಎಂಬ ಸಂದೇಶವನ್ನು ಇದರಲ್ಲಿ ಗ್ರಹಿಸಬಹುದಾಗಿದೆ. ಇತರೆ ಧಾರ್ಮಿಕ ಸಂಸ್ಥೆಗಳಲ್ಲಿಯೂ ಜಾತ್ಯತೀತತೆ ಇರಬೇಕು, ಅಲ್ಲಿಯೂ ಸರ್ಕಾರದ ಲೆಕ್ಕಪರಿಶೋಧನೆ ನಡೆಯಬೇಕು, ಅಲ್ಲಿನ ಆಸ್ತಿಗಳೂ ಸಹ ಸರ್ಕಾರಿ ದತ್ತಾಂಶದಲ್ಲಿ ದಾಖಲಾಗುವ ಅವಶ್ಯಕತೆ ಇಲ್ಲವೇ? ಅಥವಾ ವಕ್ಫ್‌ ನಲ್ಲಿ ಮಾತ್ರವೇ ದುರುಪಯೋಗ ನಡೆಯುತ್ತಿದ್ದು, ಬೇರೆ ಧಾರ್ಮಿಕ ಸಂಸ್ಥೆಗಳು ಸ್ವಚ್ಚವಾಗಿದೆಯೇ? ಅಥವಾ ಬೇರೆ ಧಾರ್ಮಿಕ ಸಂಸ್ಥೆಗಳು ಕಾನೂನು ಮತ್ತು ಸುಧಾರಣೆಗಳನ್ನು ಮೀರಿದ್ದೇ? ಇದು ಕೇವಲ ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಅವರನ್ನು ಸರಿದಾರಿಗೆ ತರಬೇಕೆನ್ನುವ ಇರಾದೆಯನ್ನು ಸೂಚಿಸಿದ್ದು, ಆಡಳಿತ ಪಕ್ಷದ ಇಂತಹ ಇರಾದೆಗಳ ಬಗ್ಗೆಯೇ ಅಪನಂಬಿಕೆ ಎನ್ನಲಾಗಿದೆ.

ಕನಿಷ್ಠ ಐದು ವರ್ಷ ಇಸ್ಲಾಂ ಅನುಸರಿಸುತ್ತಿರುವ ವ್ಯಕ್ತಿಗಳು ಮಾತ್ರ ವಕ್ಫ್‌ಗೆ ದಾನ ಮಾಡಬೇಕೆಂಬ ತಿದ್ದುಪಡಿಯು ತೀವ್ರ ಟೀಕೆಗೆ ಒಳಗಾಗಿದೆ. ಇಸ್ಲಾಂ ಧರ್ಮದ ಅನುಯಾಯಿ ಎಂದು ಗುರುತಿಸಲು ಯಾವ ವ್ಯಾಖ್ಯಾನ ಮತ್ತು ಮಾನದಂಡಗಳಿವೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಇದಕ್ಕೂ ಮುಖ್ಯವಾಗಿ ಧಾರ್ಮಿಕ ಸ್ವಾತಂತ್ಯ್ರತೆ ಎಲ್ಲಾ ಧರ್ಮಿಯರಿಗೂ ಅನ್ವಯಿಸುವ ಕಾರಣ ತಮಗಿಷ್ಟ ಬಂದ ಧರ್ಮಕ್ಕೆ ದೇಣಿಗೆ ನೀಡುವ ಹಕ್ಕನ್ನು ಎಲ್ಲರಿಗೂ ಸಂವಿಧಾನವು ಖಾತ್ರಿಗೊಳಿಸಿರುವ ಹಿನ್ನೆಲೆಯಲ್ಲಿ ಇತರೆ ಧರ್ಮಿಯರು ವಕ್ಫ್‌ ನೀಡುವುದನ್ನು ನಿರ್ಬಂಧಿಸುವುದು ನ್ಯಾಯಸಮ್ಮತವಲ್ಲ.

ವಿವಾದಿತ ಸರ್ಕಾರಿ ಆಸ್ತಿಯು ವಕ್ಫ್ ಆಸ್ತಿಯೇ ಅಲ್ಲವೇ ಎಂಬುದನ್ನು ತಿರ್ಮಾನಿಸುವ ವಕ್ಫ್ ಟ್ರಿಬ್ಯೂನಲ್ Tribunal ಅಧಿಕಾರವನ್ನು ಇನ್ನು ಮುಂದೆ ಜಿಲ್ಲಾ ಆಡಳಿತಾಧಿಕಾರಿ/ಜಿಲ್ಲಾಧಿಕಾರಿ ಅಥವಾ ಅವರಿಗೂ ಮೇಲಿನ ಅಧಿಕಾರಿಗಳಿಗೆ ನೀಡಲಾಗಿದೆ. ಈ ಅಧಿಕಾರಿಗಳು ಸರ್ಕಾರಿ ನೌಕರರಾದ ಕಾರಣ, ಅವರ ತೀರ್ಮಾನಗಳು ಸಹಜವಾಗಿ ಸರ್ಕಾರದ ಪರವಾಗಿರುತ್ತದೆ ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ವಿರೋಧ ವ್ಯಕ್ತವಾಗಿದೆ. ಜಿಲ್ಲಾ ಆಡಳಿತವು ಜಿಲ್ಲೆಯ ಎಲ್ಲಾ ಭೂಸಂಬಂಧಿ ದಾಕಲಾತಿಗಳನ್ನು ಹೊಂದಿರುವ ಕಾರಣ ದಾವೆಗಳನ್ನು ಇತ್ಯರ್ಥಗೊಳಿಸಲು ಸುಲಭವಾಗುತ್ತದೆ ಎಂಬುದು ನಿಜವಾದರೂ, ವಿವಾದದಲ್ಲಿ ನೇರ ಅರ್ಜಿದಾರ ಅಥವಾ ಪ್ರತಿವಾದಿಯಾಗಿರುವ ಸರ್ಕಾರವೇ ತೀರ್ಪುಗಾರರೂ ಆಗುವುದೂ ಎಷ್ಟು ಸೂಕ್ತ?

Advertisements

POCSO ಪ್ರಕರಣ | ವರ್ಷವಾದರೂ ಶುರುವಾಗದ ವಿಚಾರಣೆ; ಯಂಕನಿಗೊಂದು ನ್ಯಾಯ ಯಡಿಯೂರಪ್ಪರಿಗೊಂದು ನ್ಯಾಯ ಸರಿಯೇ?

ಕಾಯ್ದೆಯ ಜಾರಿಯ ನಂತರ ಬಳಕೆಯ ಆಧಾರದ ಮೇಲೆ ವಕ್ಫ್ ಎಂದು ಪರಿಗಣಿಸುತ್ತಿದ್ದ ಹಳೆಯ ನಿಯಮವನ್ನು ರದ್ದುಗೊಳಿಸಲಾಗಿದೆ. ಇದು ಹೊಸದಾಗಿ ನೋಂದಣಿಯಾಗುವ ಮತ್ತು ವಿವಾದಲ್ಲಿರುವ ಹಳೆಯ ವಕ್ಫ್ ಆಸ್ತಿಗಳಿಗೆ ಅನ್ವಯಿಸುತ್ತದೆ. ಅಂತೆಯೇ ಎಲ್ಲಾ ವಕ್ಫ್ ಆಸ್ತಿಗಳನ್ನು ಕೇಂದ್ರೀಯ ದತ್ತಾಂಶ ಸಂಗ್ರಹಣೆಯಲ್ಲಿ ನೋಂದಣಿ ಮಾಡಿಸುವುದು ಉತ್ತಮ ಕ್ರಮವಾದರೂ, ಇದನ್ನು ಆರು ತಿಂಗಳೊಳಗೆ ನೋಂದಾಯಿಸದಿದ್ದಲ್ಲಿ ಆಸ್ತಿಗಳನ್ನು ಮುಟುಗೋಲು ಹಾಕಿಕೊಳ್ಳುವ ನಿಯಮ ಸರಿಯಲ್ಲ. ಇಷ್ಟೊಂದು ಅಸ್ತಿಗಳನ್ನು ಅವಶ್ಯಕ ದಾಖಲೆಗಳೊಂದಿಗೆ ನೋಂದಾಯಿಸಲು ಹೆಚ್ಚಿನ ಸಮಯ ನೀಡಬೇಕಾಗಿದೆ. ಮಹಿಳಾ ಸದಸ್ಯತ್ವವು ಮೊದಲೂ ಇದ್ದು, ಈಗ ಅದನ್ನು ಕಡ್ಡಾಯಗೊಳಿಸಿರುವುದು, ವಕ್ಫ್ ಬೋರ್ಡ್‍ನಲ್ಲಿ ವಿವಿಧ ಮುಸ್ಲಿಂ ವರ್ಗಗಳಿಗೆ ಪ್ರತಿನಿಧಿತ್ವ ನೀಡಿರುವುದು ಹಾಗೂ ಬೋರಾ, ಆಘಖಾನಿ ಮುಸ್ಲಿಮರಿಗೆ ಬೇರೆ ಬೇರೆ ವಕ್ಫ್ ಬೋರ್ಡ್ ಮಾಡುವಂತಹ ಉತ್ತಮ ಬದಲಾವಣೆಗಳನ್ನು ಸ್ವಾಗತಿಸಬಹುದಾಗಿದೆ. ಆದರೆ, ಇದು ಮುಸ್ಲಿಂ ಸಮುದಾಯವನ್ನು ಆಂತರಿಕವಾಗಿ ಒಡೆಯುವ ತಂತ್ರವಾಗಿದೆ ಎನ್ನುವ ಅನುಮಾನಗಳೂ ಸಹ ವ್ಯಕ್ತವಾಗಿವೆ.

ವಕ್ಫ್ ಬೋರ್ಡ್‍ಗಳಡಿ 8.72 ಲಕ್ಷ ಆಸ್ತಿಗಳಿದ್ದು, ಅಂದಾಜು 1.2 ಲಕ್ಷ ಕೋಟಿ ಮೌಲ್ಯದ ಒಟ್ಟು 9.4 ಲಕ್ಷ ಎಕರೆ ಭೂಮಿ ಹೊಂದಿದೆ ಎಂಬ ಸರ್ಕಾರದ ಮಾಹಿತಿಯನ್ನು 3ನೇ ಎಪ್ರಿಲ್ನಲ್ಲಿ ಮಿಂಟ್ ಪತ್ರಿಕೆಯು ವರದಿ ಮಾಡಿದೆ. ಇದೇ ಅಂಕಿ ಅಂಶಗಳನ್ನು ಹಲವು ಪತ್ರಿಕೆಗಳೂ ಸಹ ನೀಡಿರುತ್ತವೆ. ಆದರೆ, ಗೃಹ ಮಂತ್ರಿ ಅಮಿತ್‍ಶಾರವರು 100 ವರ್ಷದಿಂದ 18 ಲಕ್ಷ ಎಕರೆ ಇದ್ದ ವಕ್ಫ್ ಭೂಮಿಯು, 2013-2025ರ ನಡುವಿನ ಅವಧಿಯಲ್ಲಿ 21 ಲಕ್ಷ ಎಕರೆ ವಕ್ಫ್ ಭೂಮಿ ಹೆಚ್ಚಿದೆ ಎಂದು ತಮ್ಮ ಪಾರ್ಲಿಮೆಂಟ್ ಭಾಷಣದಲ್ಲಿ ಹೇಳಿದ್ದಾರೆ. ಆಶ್ಚರ್ಯವೆಂದರೆ ಆರೆಸ್ಸೆಸ್ ಮುಖವಾಣಿ ಪತ್ರಿಕೆ ‘ಆರ್ಗನೈಝರ್’ ಪ್ರಕಟಿಸಿದ ಲೇಖನದಲ್ಲಿ (ಈ ಲೇಖನವನ್ನು ಈಗ ತೆಗೆಯಲಾಗಿದೆ) ಭಾರತದಲ್ಲಿ ವಕ್ಫ್ ಬೋರ್ಡ್‍ಗಿಂತ ಹೆಚ್ಚಿನ ಭೂಮಿಯನ್ನು ಕ್ಯಾಥೊಲಿಕ್ ಚರ್ಚುಗಳು ಹೊಂದಿವೆ ಎಂದಿರುವುದನ್ನು ಎಪ್ರಿಲ್ 5ರ ಇಂಡಿಯನ್ ಎಕ್ಸ್‍ಪ್ರೆಸ್ಸ್ ವರದಿ ಮಾಡಿದೆ. ಯಾವುದು ಸರಿ? ನಮ್ಮ ದೇಶದಲ್ಲಿ ಮೋಜಣಿಗಾಗಿಯೇ ಇಲಾಖೆ ಇದ್ದರೂ ಸಹ ಕೇಂದ್ರ ಸರ್ಕಾರಕ್ಕೆ ಒಂದು ನಿಖರ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ಸಾಧ್ಯವಿಲ್ಲವೇ? ಜನರಿಗೆ ವಾಟ್ಸಾಪ್ ಸುದ್ದಿಗಳೇ ಮಾಹಿತಿಯ ಮೂಲವಾಗಬೇಕೆ? ವಕ್ಫ್ ಬೋರ್ಡ್‍ಗಳು ಕೈತೋರಿದ ಜಾಗವೆಲ್ಲಾ ಅವರದೇ ಆಗುವುದು ಎಂಬ ಸರ್ಕಾರದ ಅಪ್ರಭುದ್ಧ ಹೇಳಿಕೆ ಎಷ್ಟು ಸರಿ?

ಟ್ರಂಪ್‌ ಸುಂಕಗಳು, ತೆರಿಗೆ ಕಡಿತಗಳು, ವಾಣಿಜ್ಯ ಯುದ್ಧಗಳು, ಜಾಗತಿಕ ಮಾರುಕಟ್ಟೆಯ ಕಂಪನಗಳು

ವಕ್ಫ್ ಆಸ್ತಿಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಯಾವ ಅನುಮಾನವೂ ಇಲ್ಲ ನಿಜ. 2005ರಲ್ಲಿಯೇ ಸಚ್ಚರ್ ಸಮಿತಿ ಈ ಬಗ್ಗೆ ತಿಳಿಸಿರುತ್ತದೆ. ಅದೇ ರೀತಿ ಮಠಮಾನ್ಯಗಳ, ಚರ್ಚುಗಳ ಮತ್ತಿತರ ಧರ್ಮಿಯರ ಸಾರ್ವಜನಿಕ ಆಸ್ತಿಗಳು ಕೊಳ್ಳೆಹೋಗುತ್ತಿವೆ ಎಂಬುದೂ ಸಹ ಅಷ್ಟೇ ನಿಜವಾಗಿದೆ. ಅದನ್ನು ನಿಯಂತ್ರಿಸುವ ಸರ್ಕಾರದ ಕ್ರಮಗಳು ಸ್ವಾಗತಾರ್ಹ ಆಗಿದ್ದರೂ, ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿ ತರುವ ಸುಧಾರಣಾ ನೀತಿಗಳ ಹಿಂದಿನ ಇಂಗಿತದ ಬಗ್ಗೆ ಅನುಮಾನಗಳು ಸಹಜವಾಗಿ ಉದ್ಭವಿಸುತ್ತವೆ.

ಕೇರಳÀ, ಕರ್ನಾಟಕÀ, ತಮಿಳುನಾಡು, ಬಿಹಾರ, ಗುಜರಾತ್ ಹೀಗೆ ಅನೇಕ ಕಡೆಗಳಲ್ಲಿ ಮುಸ್ಲಿಮೇತರರ, ದೇವಾಲಯಗಳ ಗ್ರಾಮದ, ಮತ್ತು ಸರ್ಕಾರಿ ಆಸ್ತಿಗಳನ್ನು ವಕ್ಫ್‍ಗೆ ಸೇರಿದ್ದೆಂದು ಹೇಳಲಾಗುತ್ತಿರುವ ಉದಾಹರಣೆಗಳನ್ನು ಕೇಂದ್ರ ಸರ್ಕಾರ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ನಿರಂತರ ಹೇಳುತ್ತಿವೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರಕರಣಗಳಲ್ಲಿ ವಕ್ಫ್ ನೋಟಿಸ್ ನೀಡಿಲ್ಲ, ಬದಲಿಗೆ ಸಂಬಂಧಿತ ಸರ್ಕಾರಿ ಅಧಿಕಾರಿಗಳು ಮಾಡಿರುವ ತಪ್ಪುಗಳಾಗಿದ್ದು, ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ ಎಂದು ವಿರೋಧ ಪಕ್ಷವು ಹೇಳಿರುತ್ತದೆ. 2024ರ ಆಗಸ್ಟ್‍ನಲ್ಲಿ ಮಸೂದೆಯ ಕರಡನ್ನು ಬಿಜೆಪಿಯು ಲೋಕಸಭೆಯಲ್ಲಿ ಮಂಡಿಸಿದ ಸಮಯದಿಂದ ಈ ವಿವಾದಗಳು ಮುನ್ನೇಲೆಗೆ ಬಂದ ಕಾರಣವೇನು ಎಂಬ ಪ್ರಶ್ನೆಗಳೂ ಎದ್ದಿವೆ? ಆದ್ದರಿಂದ ಈ ಎಲ್ಲಾ ವಿವಾದಗಳಲ್ಲಿ ಸತ್ಯವೆಷ್ಟಿದೆ ಎಂಬುದು ಸರಿಯಾದ ಪರಿಶೀಲನೆಗೆ ಒಳಪಡಿಸಬೇಕಿದೆ.

ವಕ್ಫ್‌ ತಿದ್ದುಪಡಿ ಮಸೂದೆ 2025 | ತಾವೇ ಗೊಂದಲ ಸೃಷ್ಟಿಸಿ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದೆ ಮೋದಿ ಸರ್ಕಾರ!

ವಕ್ಫ್ ಕೈತೋರಿದೆಡೆ ಜಾಗವನ್ನು ತಮ್ಮದಾಗಿಸಿಕೊಳ್ಳಬಹುದೇ? ದೇಣಿಗೆ ಆಸ್ತಿಗಳನ್ನು ನಿರ್ವಹಿಸಲು ರಚಿಸಿದ ಶಾಸನಬದ್ಧ ರಾಜ್ಯ ಸರ್ಕಾರದ ಸಂಸ್ಥೆಯಾಗಿದೆ ಈ ವಕ್ಫ್ ಬೋರ್ಡ್. ಅದರಂತೆ, ವಕ್ಫ್ ಟ್ರಿಬ್ಯೂನಲ್ ಸಹ ಬೇರೆ ಬೇರೆ ಹಲವಾರು ಟ್ರಿಬ್ಯೂನಲ್‍ಗಳು ಇರುವಂತೆ (ಉದಾ: ರೈಲ್ವೆ, ತೆರಿಗೆ, ಸಾಲ ಮರುಪಾವತಿ ಇತ್ಯಾದಿ) ಒಂದು ಶಾಸನಬದ್ಧ ನ್ಯಾಯಾಲಯವಾಗಿದೆ. ಇದರಲ್ಲಿ ಸರ್ಕಾರವು ನೇಮಿಸುವ ನ್ಯಾಯಾಧೀಶರು (ಅಧ್ಯಕ್ಷರು), ಹಿರಿಯ ಸರ್ಕಾರಿ ಅಧಿಕಾರಿ ಮತ್ತು ಮುಸ್ಲಿಂ ಕಾಯ್ದೆ ತಿಳಿದ ಒಬ್ಬ ವ್ಯಕ್ತಿಯು ಸದಸ್ಯರಾಗಿರುತ್ತಾರೆ. ಬೇರೆ ಟ್ರಿಬ್ಯೂನಲ್‍ಗಳಂತೆ ವಕ್ಫ್ ಟ್ರಿಬ್ಯೂನಲ್ ತೀರ್ಮಾನವೂ ಅಂತಿಮವೇ ಹೌದಾದರೂ, ಅದನ್ನು ಪ್ರಶ್ನಿಸಿ ಕೆಳಗಿನ (ಸಿವಿಲ್/ಸೆಷನ್) ನ್ಯಾಯಾಲಯಗಳಿಗೆ ಹೋಗುವಂತಿಲ್ಲ. ಆದರೆ ಉಚ್ಚ ಮತ್ತು ಸರ್ವೊಚ್ಚ ನ್ಯಾಯಾಲಯಗಳಿಗೆ ಅಪೀಲ್ ಹೋಗಬಹುದಾಗಿದೆ. ದಾನವಾಗಿ ಬಂದ ಸಂಪತ್ತಿನ ಮೋಜಣಿಯನ್ನು ಮೊದಲು ವಕ್ಫ್ ಬೋರ್ಡ್ ನಡೆಸುತ್ತದೆ, ನಂತರ ಸರ್ಕಾರವು ಮತ್ತೊಮ್ಮೆ ನೋಂದಣಿ ಮಾಡಿ, ಆಸ್ತಿಯು ದಾನ ನೀಡುತ್ತಿರುವ ವ್ಯಕ್ತಿಗೆ ಸೇರಿರುವುದನ್ನು ಹಾಗೂ ಸೂಕ್ತ ದಾಖಲೆಗಳು ಇರುವ ಬಗ್ಗೆ ಖಚಿತಪಡಿಸಿಕೊಂಡು ವಕ್ಫ್ ಆಸ್ತಿಯೆಂದು ಪರಿಗಣಿಸಲಾಗುತ್ತದೆ. ವಿಸ್ತಾರವಾದ ಈ ಸರ್ಕಾರಿ ಪ್ರಕ್ರಿಯೆಯ ನಂತರವೇ ದಾನ ಪಡೆದ ಆಸ್ತಿಯು ವಕ್ಫ್ ಎಂದಾಗುತ್ತದೆಯೇ ಹೊರತು, ಬೆರಳು ತೋರಿದ್ದೆಲ್ಲಾ ವಕ್ಫ್ ಆಸ್ತಿಯಾಗುವುದಿಲ್ಲ.

ಈ ಎಲ್ಲಾ ವಾದವಿವಾದಗಳ ನಡುವೆ ಮಸೂದೆಯು ರಾಷ್ಟ್ರಪತಿಗಳ ಅನುಮತಿ ಪಡೆದು, 8ನೇ ಎಪ್ರಿಲ್ 2025 ರಂದು ಶಾಸನವಾಗಿ ಜಾರಿಯಾಗಿದೆ. ವಾಟ್ಸಾಪ್ ಸುದ್ಧಿಗಳ ಆಧಾರದಲ್ಲಿಯೂ ಶಾಸನಗಳು ರಚನೆಯಾಗುವ ಸಂಭವತೆಯ ಬಗ್ಗೆ ಈ ಮಸೂದೆಯು ಸೂಚಿಸಿದ್ದು, ಜನರು ಈ ಬಗ್ಗೆ ಎಚ್ಚರಗೊಳ್ಳಬೇಕಾಗಿದೆ.

ಲತಾಮಾಲ
ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X