ಜಾತಿ ಗಣತಿಯ ಬಗ್ಗೆ ಬಾಬಾಸಾಹೇಬರು ಹೇಳಿದ್ದೇನು?

Date:

Advertisements
ಅಸ್ಪೃಶ್ಯತೆಯ ಮಾನದಂಡವು ಅಖಿಲ ಭಾರತ ಮಟ್ಟದಲ್ಲಿ ಒಂದೇ ತೆರನಾಗಿರಬೇಕು ಎಂದು ಸವರ್ಣ ಹಿಂದೂಗಳು ವಾದಿಸಿದರು. ಅಸ್ಪೃಶ್ಯತೆ ಆಚರಣೆ ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಇರುವಾಗ, ಒಂದೇ ಮಾನದಂಡ ಅನ್ವಯಿಸಬೇಕೆಂದು ವಾದಿಸುವವರು ಅಸ್ಪೃಶ್ಯರ ಸಂಖ್ಯೆಯನ್ನು ಕಡಿಮೆ ತೋರಿಸುವ ದುರುದ್ದೇಶ ಹೊಂದಿದ್ದಾರೆಂದು ಅಂಬೇಡ್ಕರ್ ಟೀಕಿಸಿದ್ದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯ ಹೊತ್ತಿನಲ್ಲಿ ಹಿಂದುತ್ವ ಬೆಂಬಲಿತ ಫೇಸ್ ಬುಕ್ ಖಾತೆಯೊಂದರಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸೃಷ್ಟಿತ ವಿಡಿಯೊವೊಂದನ್ನು ಪೋಸ್ಟ್ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೆಜ್ಜೆ ಹಾಕುತ್ತಿರುವಂತೆ ವಿಡಿಯೊ ಸೃಷ್ಟಿಸಿ, ‘ರಘುಪತಿ ರಾಘವ ರಾಜಾರಾಮ್’ ಹಾಡನ್ನು ಹಿನ್ನೆಲೆಯಲ್ಲಿ ಬಳಸಲಾಗಿತ್ತು. ಬಿಜೆಪಿ ಮತ್ತು ಸಂಘಪರಿವಾರವು ಅಂಬೇಡ್ಕರ್ ಅವರನ್ನು ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗಿ, ಅಪ್ರಾಪ್ರಿಯೇಟ್ ಮಾಡಿಕೊಳ್ಳುವ ಕಸರತ್ತು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಅಂಬೇಡ್ಕರ್ ಅವರ ಹೆಸರಲ್ಲಿ ಹಸಿಹಸಿ ಸುಳ್ಳುಗಳನ್ನು ಬಿತ್ತುವುದು ಮಾತ್ರ ಆತಂಕಕಾರಿ.

ಸದರಿ ವಿಡಿಯೊ ತುಣುಕಿನ ಕೊನೆಯ ಭಾಗದಲ್ಲಿ ‘ಕಾಸ್ಟ್ ಸೆನ್ಸಸ್’ (ಜಾತಿ ಗಣತಿ) ಎಂಬ ಬೋರ್ಡ್ ಹಿಡಿದು ನಿಂತಿರುವ ರಾಹುಲ್ ಗಾಂಧಿಯವರನ್ನು ಬಾಬಾ ಸಾಹೇಬರು ತಿರಸ್ಕರಿಸಿ ಮುಂದೆ ನಡೆಯುತ್ತಿರುವಂತೆ ಸೃಷ್ಟಿಸಲಾಗಿತ್ತು. ಆ ಮೂಲಕ ಅಂಬೇಡ್ಕರ್ ಅವರು ಜಾತಿಗಣತಿಯನ್ನು ಒಪ್ಪುತ್ತಿರಲಿಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಜಾತಿ ಗಣತಿಯ ಮಹತ್ವದ ಕುರಿತು ಬಾಬಾ ಸಾಹೇಬರು ಅನೇಕ ಸಂದರ್ಭದಲ್ಲಿ ಮಾತನಾಡಿರುವುದನ್ನು ಗಮನಿಸಬೇಕು. ಈ ವಿಚಾರಗಳಲ್ಲಿ ಇಲ್ಲಿ ಚರ್ಚಿಸಲಾಗಿದೆ.

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಮೊಟ್ಟಮೊದಲಿಗೆ, ಅಂದರೆ 1881ರಲ್ಲಿ ಜನಗಣತಿಯನ್ನು ಆರಂಭಿಸಲಾಯಿತು. ಹತ್ತು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಗಣತಿಯ ಮೂಲಕ ಜನಸಂಖ್ಯೆಯ ಪ್ರಮಾಣವನ್ನು ತಿಳಿದುಕೊಳ್ಳುವುದು ಆಡಳಿತಗಾರರಿಗೆ ಅಗತ್ಯವಾಗಿತ್ತು. ಕಾಲಾನುಕ್ರಮದಲ್ಲಿ ಜನಗಣತಿಯೊಂದಿಗೆ ಜಾತಿಗಣತಿಯನ್ನು ಮಾಡಬೇಕೆಂಬುದನ್ನು ಬ್ರಿಟಿಷರು ಮನಗಂಡರು. ಮುಖ್ಯವಾಗಿ ಹಿಂದೂ ಸಮುದಾಯದಲ್ಲಿನ ಅಸ್ಪೃಶ್ಯರ ಜನಸಂಖ್ಯೆಯನ್ನು ತಿಳಿದುಕೊಳ್ಳುವುದಕ್ಕಾಗಿ ಈ ಪ್ರಯತ್ನ ಮಾಡಿದಾಗ, ಸವರ್ಣೀಯ ಹಿಂದೂ ಸಮಾಜ ‘ಹಿಂದೂಗಳನ್ನು ಒಡೆಯಲಾಗುತ್ತಿದೆ’ ಎಂದು ಇಂದಿನಂತೆಯೇ ಅಂದು ಕೂಡ ಗುಲ್ಲೆಬ್ಬಿಸಿ, ಬ್ರಿಟಿಷರ ವಿರುದ್ಧ ಬೀದಿಗಿಳಿದರು. ಜಾತಿಗಣತಿಯನ್ನು ಆರಂಭಿಕ ವರ್ಷಗಳಲ್ಲಿ ವಿರೋಧಿಸುತ್ತಿದ್ದ ಜನ ನೀಡುತ್ತಿದ್ದ ಮೊದಲ ಸಬೂಬು-`ಹಿಂದೂಗಳಿಂದ ಅಸ್ಪೃಶ್ಯರನ್ನು ಬೇರ್ಪಡಿಸಿ ಹಿಂದೂಗಳ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ’ ಎಂಬುದಾಗಿತ್ತು. ಆದರೆ ಬ್ರಿಟಿಷರು ಇಂತಹ ವಾದಕ್ಕೆ ಸೊಪ್ಪು ಹಾಕಲಿಲ್ಲ. ಯಾವಾಗ ದಲಿತರಿಗೆ ರಾಜಕೀಯ ಪ್ರಾತಿನಿಧ್ಯ ಕೊಡುವ ವಿಚಾರ ಬಂತೋ ಆಗ, ‘ಅಸ್ಪೃಶ್ಯರು ಆ ಪ್ರಮಾಣದಲ್ಲಿ ಇಲ್ಲ. ಅಸ್ಪೃಶ್ಯತೆಯನ್ನು ಅಳೆಯುವ ಮಾನದಂಡ ಸರಿಯಾಗಿಲ್ಲ’ ಎಂದು ಅಡ್ಡಗಾಲು ಹಾಕಲು ನೋಡಿದರು. ಈ ಎಲ್ಲ ವಿಚಾರಗಳನ್ನು ಬಾಬಾಸಾಹೇಬರು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ.

Advertisements

‘ಡಾ.ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು’ ಸಂಪುಟ 4ರಲ್ಲಿ ದಾಖಲಿಸಿರುವ ಕೆಲವು ಸಂಗತಿಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಇಲ್ಲಿದೆ. ಅನೇಕ ಸಂದರ್ಭಗಳಲ್ಲಿ ಬಾಬಾಸಾಹೇಬರು ಜಾತಿ ಗಣತಿಯ ಮಹತ್ವವನ್ನು ಎತ್ತಿಹಿಡಿದಿದ್ದರು ಎಂಬುದನ್ನು ನಾವು ಮರೆಯಬಾರದು.

ಇದನ್ನೂ ಓದಿರಿ: ಅಖಂಡವು ಕತ್ತರಿಸಿ ಬಿಸುಡಿರುವ ಖಂಡ ನಾನು (A Part Apart)- ಅಂಬೇಡ್ಕರ್

ಜಾತಿಗಣತಿ ವಿರೋಧಿಸಿದ್ದವರ ಬಗ್ಗೆ ಅಂಬೇಡ್ಕರ್ ಹೀಗೆ ಹೇಳುತ್ತಾರೆ: “ಜನಗಣತಿಯನ್ನು ಜಾತಿಯ ಆಧಾರದಲ್ಲಿ ಮಾಡಲು ಸವರ್ಣ ಹಿಂದೂಗಳು ಯಾವಾಗಲೂ ವಿರೋಧಿಸುತ್ತಾರೆ. ಜನಗಣತಿಯ ಮಾಹಿತಿಯಲ್ಲಿ ಜಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಪ್ಪದ ಅವರು ಜನಸಂಖ್ಯೆಯನ್ನು ಜಾತಿ ಮತ್ತು ಬುಡಕಟ್ಟುಗಳಾಗಿ ವಿಭಜಿಸುವ ಪ್ರಯತ್ನವನ್ನು ಅದುಮಿಟ್ಟರು. ಜಾತಿ ಮತ್ತು ಬುಡಕಟ್ಟುಗಳ ವಿಭಜನೆ ಸ್ವರೂಪ ನಿಧಾನವಾಗಿ ಬದಲಾಗುತ್ತಿರುವುದರಿಂದ, ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯಿಂದ ಈ ಸಂಖ್ಯೆಯನ್ನು ನಿರ್ಣಯಿಸಬಾರದೆಂದು 1901ರಲ್ಲಿ ನಡೆದ ಜನಗಣತಿಯಲ್ಲಿ ಒಂದು ಸಲಹೆ ಬಂದಿತ್ತು” ಎನ್ನುತ್ತಾರೆ.

ಮುಂದುವರಿದು, “ಇಂತಹ ಆಕ್ಷೇಪಗಳು ಜನಗಣತಿಯ ನಿರ್ದೇಶಕರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಜನಗಣತಿಯ ನಿರ್ದೇಶಕರ ದೃಷ್ಟಿಯಲ್ಲಿ ಜಾತಿ ಆಧಾರದ ಮೇಲೆ ಜನಗಣತಿ ಮಾಡುವುದು ಅತಿ ಮುಖ್ಯ ಅವಶ್ಯಕವೆನಿಸಿತು. ಅದಕ್ಕೆ ಪೋಷಕವಾಗಿ ಜನಗಣತಿಯ ನಿರ್ದೇಶಕರು ಮಂಡಿಸಿದ ವಾದವೆಂದರೆ- “ಭಾರತದ ಜನಸಂಖ್ಯೆ ವಿಚಾರದಲ್ಲಿ ಯಾವುದಾದರೂ ಉಪಯುಕ್ತವಾದ ಚಿಂತನೆ ನಡೆಯಬೇಕಾದರೆ ಅಲ್ಲಿ ಜಾತಿ ಪದ್ಧತಿಯ ಮಹತ್ವವನ್ನು ಮರೆತು ಚಿಂತಿಸುವುದನ್ನು ನಾವು ಊಹಿಸುವುದು ಕಷ್ಟ. ಇಂದಿಗೂ ಭಾರತದ ಸಾಮಾಜಿಕ ವ್ಯವಸ್ಥೆಯ ತಳಹದಿ ಜಾತಿಯೇ. ಆದ್ದರಿಂದ ಭಾರತದ ಸಾಮಾಜಿಕ ಪರಿವರ್ತನೆಯನ್ನು ಗುರುತಿಸಲು ಜಾತಿಯ ಗಣನೆಯು ಅತ್ಯವಶ್ಯಕ”.  ಗಣತಿ ನಿರ್ದೇಶಕರ ಈ ಮಾತನ್ನು ಬಾಬಾಸಾಹೇಬರು ಅನುಮೋದಿಸುತ್ತಾರೆ.

1911ನೆಯ ಜನಗಣತಿಯಲ್ಲಿ ಹತ್ತು ರೀತಿಯ ಪ್ರಮಾಣಗಳನ್ನು ವಿಧಿಸಿ ಆ ಪ್ರಮಾಣಗಳನ್ನು ಮಾನ್ಯ ಮಾಡುವ ಜಾತಿಗಳನ್ನು ಒಂದೇ ಶ್ರೇಣಿಯಲ್ಲಿ ಸೇರಿಸಿ ಎಣಿಸಲು ಪ್ರಯತ್ನಿಸಲಾಯಿತು. ಆ ಪ್ರಮಾಣಗಳೆಂದರೆ:

(1) ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು

(1) ಬ್ರಾಹ್ಮಣರು ಮತ್ತು ಹಿಂದೂ ಗುರುಗಳಿಂದ ಮಂತ್ರದೀಕ್ಷೆಯನ್ನು ಪಡೆಯದವರು

(3) ವೇದ ಪ್ರಮಾಣವನ್ನು ಒಪ್ಪದವರು

(4) ಹಿಂದೂಧರ್ಮದ ಹಿರಿಯ ದೇವತೆಗಳನ್ನು ಪೂಜಿಸದವರು

(5) ಬ್ರಾಹ್ಮಣ ಪುರೋಹಿತರನ್ನು ಒಪ್ಪದವರು

(6) ಸಂಪ್ರದಾಯದ ಬ್ರಾಹ್ಮಣರು ಸೇರಿಸಬಯಸದವರು

(7) ಸಾಧಾರಣ ಹಿಂದೂ ದೇವಾಲಯದ ಒಳಗೆ ಪ್ರವೇಶ ಪಡೆಯದವರು

(8) ಊರಿನಿಂದ ಹೊರದೂಡಲ್ಪಟ್ಟವರು

(9) ಸತ್ತವರನ್ನು ಹೂಳುವವರು

(10) ಗೋವನ್ನು ಆರಾಧಿಸದವರು ಮತ್ತು ಗೋಮಾಂಸವನ್ನು ತಿನ್ನುವವರು.

ಈ ರೀತಿ ವಿಭಾಗಿಸಿ ಅಸ್ಪೃಶ್ಯರು ಮತ್ತು ಇತರ ಸಮುದಾಯಗಳನ್ನು ಗುರುತಿಸಲಾಯಿತು.

ಜಾತಿಯ ಆಧಾರದ ಮೇಲೆ ಇಂತಹ ಎಣಿಕೆ ಕೂಡದೆಂಬ ಸವರ್ಣ ಹಿಂದೂಗಳ ವಿರೋಧ ಪ್ರಬಲವಾಯಿತು. ಆದರೆ ಇವರ ವಿರೋಧದಿಂದ ಯಾವ ಪ್ರಯೋಜನವೂ ಆಗಲಿಲ್ಲ ಮತ್ತು ಜನಗಣತಿಯಲ್ಲಿ ಮಾನ್ಯ ಮಾಡಿದ್ದ ಹತ್ತು ಪ್ರಮಾಣಗಳನ್ನು ಒಪ್ಪಿ ಅದಕ್ಕನುಗುಣವಾಗಿ ಜಾತಿಗಳನ್ನು ಬೇರೆಯಾಗಿಯೇ ಎಣಿಸಲಾಯಿತು. ಆದರೂ ಅವರ ವಿರೋಧ ತಪ್ಪಲಿಲ್ಲ. 1921ರಲ್ಲಿ ನಡೆದ ಜನಗಣತಿಯಲ್ಲಿ ಅದು ಮತ್ತೆ ತಲೆಯೆತ್ತಿತು. ಈ ಸಾರಿ ಜಾತಿಯ ಆಧಾರದ ಜನಗಣತಿಯನ್ನು ಕಾನೂನುಬದ್ಧವಾಗಿ ವಿರೋಧಿಸಲು ಪ್ರಯತ್ನ ನಡೆಯಿತು. ಬ್ರಿಟಿಷ್ ಸಾಮ್ರಾಜ್ಯದ ಕೇಂದ್ರ ಶಾಸನಸಭೆಯಲ್ಲಿ 1920ರಲ್ಲಿ ಗೊತ್ತುವಳಿಯೊಂದನ್ನು ಮಂಡಿಸಿ ಜಾತಿಗಣತಿಯನ್ನು ತಡೆಯುವ ಪ್ರಯತ್ನ ನಡೆಯಿತು.

ಇದನ್ನೂ ಓದಿರಿ: ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಬಿ ಆರ್ ಗವಾಯಿಯವರ ವಿಶೇಷತೆಗಳೇನು?

ಗೊತ್ತುವಳಿಯ ಆಕ್ಷೇಪಗಳು ಹೀಗಿದ್ದವು:

(1) ಜಾತಿಭೇದದಂತಹ ವ್ಯವಸ್ಥೆಯನ್ನು ಅಧಿಕಾರಯುತವಾದ ಕಾರ್ಯದಲ್ಲಿ ಗುರುತಿಸಿ ಬೆಳೆಸುವುದು ಅಸಾಧುವಾದದ್ದು.

(2) ಈ ಅಂಕಿ ಅಂಶಗಳು ಕರಾರುವಾಕ್ಕಾಗಿ ದೊರೆಯುವುದಿಲ್ಲ ಮತ್ತು ಕೆಲಸಕ್ಕೆ ಬಾರದವುಗಳಾಗುತ್ತವೆ. ಏಕೆಂದರೆ ಕೆಳಗಿನ ಜಾತಿಯ ಜನ ಈ ಅವಕಾಶವನ್ನು ಬಳಸಿ ತಾವು ಮೇಲು ವರ್ಗದವರೆಂದು ಹೇಳಿಕೊಳ್ಳುತ್ತಾರೆ.

ಈ ಕುರಿತು ಬರೆಯುತ್ತಾ ಅಂಬೇಡ್ಕರ್ ಅವರು ಬರೆಯುತ್ತಾ, “ಈ ವಿರೋಧಿ ಗೊತ್ತುವಳಿಯೇನಾದರೂ ಅಂಗೀಕಾರವಾಗಿದ್ದರೆ, ಆಗ ಅಸ್ಪೃಶ್ಯರ ಸಂಖ್ಯೆ ಎಷ್ಟು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಅದೃಷ್ಟವಶಾತ್ ಈ ಗೊತ್ತುವಳಿಯನ್ನು ಮಂಡಿಸಿದವರು ಆ ದಿನ ಗೈರುಹಾಜರಾದ್ದರಿಂದ ಅದು ಚರ್ಚೆಗೆ ಬರಲಿಲ್ಲ. ಆದ್ದರಿಂದ 1921ನೆಯ ಇಸವಿಯ ಜನಗಣತಿಯ ನಿರ್ದೇಶಕರು ಎಂದಿನಂತೆ ಮುಂದುವರಿಯಲು ಸ್ವತಂತ್ರರಾದರು” ಎನ್ನುತ್ತಾರೆ.

1881ರ ಗಣತಿಯ ವೇಳೆ ಬೇರೆ ಬೇರೆ ಜಾತಿ-ಮತಗಳನ್ನು ಪಟ್ಟಿಮಾಡಿ ಅವುಗಳ ಸಂಖ್ಯೆಯನ್ನು ಒಟ್ಟುಗೂಡಿಸಿ ಭಾರತದ ಜನಸಂಖ್ಯೆ ಎಷ್ಟೆಂಬುದನ್ನು ಕಂಡುಕೊಳ್ಳಲಾಯಿತೇ ಹೊರತು, ಅದಕ್ಕಿಂತ ಹೆಚ್ಚೇನನ್ನೂ ಮಾಡಿರಲಿಲ್ಲ. ಎರಡನೆ ಜನಗಣತಿ 1891ರಲ್ಲಿ ನಡೆದಾಗ ಮೊತ್ತಮೊದಲಿಗೆ ಜನಸಂಖ್ಯೆಯನ್ನು ಜಾತಿ, ಬುಡಕಟ್ಟು ಮತ್ತು ವಿವಿಧ ಶ್ರೇಣಿಗಳಾಗಿ ವರ್ಗೀಕರಿಸಿದರು. ಭಾರತದ ಮೂರನೆಯ ಜನಗಣತಿ 1901ರಲ್ಲಿ ನಡೆಯಿತು. ಆದರೆ ಅಸ್ಪೃಶ್ಯರನ್ನು ಸ್ಪಷ್ಟವಾಗಿ ನಿರ್ದೇಶಿಸಿ ಅವರ ಜನಸಂಖ್ಯೆಯನ್ನು ತಿಳಿಯುವ ಉದ್ದೇಶಪೂರ್ವಕ ಪ್ರಯತ್ನವು 1911ರಲ್ಲಿ ಜನಗಣತಿ ನಿರ್ದೆಶಕರಿಂದ ನಡೆಯಿತು.

“1911ನೆಯ ಇಸವಿಯ ಜನಗಣತಿಯ ವೇಳೆಗೆ ಮಾರ್ಲೆ ಮಿಂಟೋ ಸುಧಾರಣೆಗಳು ಸಿದ್ಧವಾಗುತ್ತಿದ್ದವು. ಆ ವೇಳೆಗೆ ಭಾರತದ ಮುಸ್ಲಿಮರು ಶಾಸನ ಸಭೆಗಳಲ್ಲಿ ತಮಗೆ ಸೂಕ್ತವಾದ ಪ್ರಾತಿನಿಧ್ಯವನ್ನು ಪ್ರತ್ಯೇಕ ಚುನಾವಣೆಗಳ ಮೂಲಕ ದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದರು. ಜನಗಣತಿಯ ನಿರ್ದೆಶಕರು ಅಸ್ಪೃಶ್ಯರನ್ನು ಪ್ರತ್ಯೇಕವಾಗಿ ಎಣಿಸಲಾಗುವುದು ಎಂಬುದಾಗಿ ಪ್ರಕಟಿಸಿದಾಗ, ಹಿಂದೂಗಳಲ್ಲಿ ಒಂದು ದೊಡ್ಡ ಕೋಲಾಹಲವೇ ಉಂಟಾಯಿತು” ಎನ್ನುತ್ತಾರೆ ಬಾಬಾ ಸಾಹೇಬರು. ಜನಗಣತಿಯ ನಿರ್ದೇಶಕರ ಉದ್ದೇಶವನ್ನು ಅತ್ಯಂತ ಪ್ರಬಲ ರೀತಿಯಲ್ಲಿ ವಿರೋಧಿಸಲು ಹಿಂದೂಗಳು ರಾಷ್ಟ್ರಾದ್ಯಂತ ಅನೇಕ ಪ್ರತಿಭಟನಾ ಸಭೆಗಳನ್ನು ನಡೆಸಿದರು.

“ನಿರ್ದೇಶಕರು ಯಾವುದಕ್ಕೂ ಎದೆಗುಂದಲಿಲ್ಲ. ತನ್ನ ಉದ್ದೇಶಿತ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಣಯಿಸಿದರು. ಅಸ್ಪೃಶ್ಯರನ್ನು ಪ್ರತ್ಯೇಕವಾಗಿ ಗಣನೆಮಾಡಲು ಅವರು ಅನುಸರಿಸಿದ ಕಾರ್ಯವಿಧಾನವಂತೂ ವಿನೂತನವಾದದ್ದೇ. ಕೆಲವು ಮಾನದಂಡಕ್ಕೆ ನಿಲ್ಲದ ಅಥವಾ ಕೆಲವು ನ್ಯೂನತೆಗಳಿಗೊಳಗಾದ, ಹಿಂದೂಜಾತಿ ಮತ್ತು ಬುಡಕಟ್ಟಿಗೆ ಸೇರಿದ ಜನರನ್ನು, ಪ್ರತ್ಯೇಕವಾಗಿ ಎಣಿಸುವಂತೆ ಬೇರೆ ಬೇರೆ ಪ್ರಾಂತ್ಯಗಳ ಜನಗಣತಿಯ ಮೇಲ್ವಿಚಾರಕರಿಗೆ ಜನಗಣತಿಯ ನಿರ್ದೇಶಕರು ಅಪ್ಪಣೆ ಮಾಡಿದರು” ಎಂದು ಅಂಬೇಡ್ಕರ್ ಶ್ಲಾಘಿಸುತ್ತಾರೆ.

ಇದನ್ನೂ ಓದಿರಿ: ಜಾತಿಗಣತಿ ವರದಿ ವಿರೋಧಿಸುತ್ತಿರುವ ಜಾತಿವಾದಿ ಲಿಂಗಾಯತರು

1911ನೆಯ ಇಸವಿ ಜನಗಣತಿಯ ನಿರ್ದೆಶಕರು ಅಸ್ಪಶ್ಯರ ಒಟ್ಟು ಜನಸಂಖ್ಯೆ ಎಷ್ಟೆಂದು ಹೇಳಿದರೋ ಅದನ್ನೇ 1921ರ ಜನಗಣತಿಯ ನಿರ್ದೇಶಕರು ದೃಢೀಕರಿಸಿದರು. 1931ನೆಯ ಜನಗಣತಿಯ ವೇಳೆ ಜನಗಣತಿಯ ನಿರ್ದೇಶಕರು ಮಹತ್ವದ ಅಭಿಪ್ರಾಯವನ್ನು ಹೇಳುತ್ತಾರೆ:

“ದಲಿತರ ವರ್ಗದವರಲ್ಲಿ ಅರಿವು ಮತ್ತು ಸಂಘಟನೆ ಬೆಳೆದಿದ್ದು, ಶಾಸನ ಸಭೆಗಳಲ್ಲಿ ಅಧಿಕಾರಯುತವಾದ ಪ್ರಾತಿನಿಧ್ಯವಿದ್ದುದರಿಂದ, ಈ ಸಮಸ್ಯೆಯನ್ನು ನೇರವಾಗಿ ಎದುರಿಸಿ ದಲಿತರ ಸಂಖ್ಯೆ ಎಷ್ಟು ಎಂಬುದನ್ನು ತಿಳಿಯಲು ಯತ್ನಿಸುವುದು ಸೂಕ್ತವೆನಿಸಿತು” ಎನ್ನುತ್ತಾರೆ.

ಅಷ್ಟರಲ್ಲಿ 1919ನೆಯ ಇಸವಿಯ ಭಾರತ ಸರ್ಕಾರದ ಅಧಿನಿಯಮದಂತೆ ಜಾರಿಗೊಳಿಸಿದ ಸಧಾರಣೆಗಳ ಫಲಶ್ರುತಿಯೇನೆಂಬುದನ್ನು ಪರೀಕ್ಷಿಸಿ ಇನ್ನು ಮುಂದೆ ತರಬೇಕಾದ ಸುಧಾರಣೆಗಳ ಸ್ವರೂಪವನ್ನು ಸೂಚಿಸಲು ಬ್ರಿಟಿಷ್ ಪಾರ್ಲಿಮೆಂಟಿನಿಂದ ನಿಯೋಜಿತವಾದ 1929ರ ಸೈಮನ್ ಕಮೀಷನ್ ತನ್ನ ಕೆಲಸವನ್ನು ಆರಂಭಿಸಿತು.

1919ರ ಕಾನೂನಿನಲ್ಲಿ ಸೇರಿಬಂದ ಸುಧಾರಣೆಗಳನ್ನು ಕುರಿತು ಪರಿಶೀಲನೆ ಪ್ರಾರಂಭವಾದಾಗ ಮಾಂಟೆಗೋ ಚಲ್ಮ್‌ಸ್ ಫರ್ಡ್ ವರದಿಯ ಕರ್ತೃಗಳು ಅಸ್ಪೃಶ್ಯರ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಿದ್ದರು. ಶಾಸನಸಭೆಗಳಲ್ಲಿ ಅವರ ಪ್ರಾತಿನಿಧ್ಯಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತೇವೆಂದು ದಿಟ್ಟ ಹೆಜ್ಜೆ ಇಟ್ಟರು. ಆದರೆ ಲಾರ್ಡ್ ಸೌತ್ ಬರೋರವರ ಅಧ್ಯಕ್ಷತೆಯಲ್ಲಿ ಮತಚಲಾವಣೆ ಮತ್ತು ಚುನಾವಣಾ ಸ್ವರೂಪವನ್ನು ನಿರ್ಣಯಿಸಲು ನೇಮಕವಾದ ಸಮಿತಿಯು ಈ ಅಂಶವನ್ನು ಪೂರ್ಣವಾಗಿ ಮರೆಯಿತು. ಇದನ್ನು ಒಪ್ಪದ ಭಾರತ ಸರ್ಕಾರ ಈ ರೀತಿ ಟೀಕೆ ಮಾಡಿತು:

“ಅಸ್ಪೃಶ್ಯರು ತಮ್ಮ ಹಿತವನ್ನು ತಾವು ಕಾಪಾಡಲು ಕಲಿಯಬೇಕೆಂದು ಸುಧಾರಣಾ ಸಮಿತಿಯವರು ಹೇಳಿದ್ದಾರೆ. ಅರವತ್ತು ಅಥವಾ ಎಪ್ಪತ್ತು ಸವರ್ಣ ಹಿಂದೂಗಳಿರುವ ಒಂದು ಸಮಿತಿಯಲ್ಲಿ ಒಬ್ಬ ಅಸ್ಪಶ್ಯ ಸದಸ್ಯನಿರುವುದರಿಂದ ಈ ಉದ್ದೇಶ ಸಾಧ್ಯವಾಗುತ್ತದೆ ಎಂಬುದು ಖಂಡಿತ ಹಾಸ್ಯಾಸ್ಪದ. ಆ ವರದಿಯ ಉದ್ದೇಶವನ್ನು ಸಾಧ್ಯಗೊಳಿಸಬೇಕಾದರೆ ಅಸ್ಪೃಶ್ಯರನ್ನು ಕುರಿತಂತೆ ಮತ್ತಷ್ಟು ಉದಾರವಾಗಿ ಯೋಚಿಸಬೇಕಾಗುತ್ತದೆ” ಎನ್ನುತ್ತದೆ ಸರ್ಕಾರ.

ಆ ಸಮಿತಿಯು ಅಸ್ಪಶ್ಯರಿಗೆ ಹಂಚಿರುವ ಸ್ಥಾನಗಳನ್ನು ಎರಡರಷ್ಟು ಮಾಡಬೇಕು ಎಂದು ಸರ್ಕಾರವು ಶಿಫಾರಸು ಮಾಡಿತು. ಅದರಂತೆ ಏಳು ಸ್ಥಾನಗಳಿಗೆ ಬದಲಾಗಿ ಹದಿನಾಲ್ಕು ಸ್ಥಾನಗಳನ್ನು ಅವರಿಗೆ ಕೊಡಲಾಯಿತು. ಆದರೆ ಅಸ್ಪೃಶ್ಯರಿಗೆ ಸರಿಯಾದ ನ್ಯಾಯ ಕಾರ್ಯಗತವಾಗಲಿಲ್ಲ.

ಸೈಮನ್ ಕಮಿಷನ್ ಅಸ್ಪಶ್ಯರ ಜನಸಂಖ್ಯೆಯ ವಿಚಾರದಲ್ಲಿ ಆಳವಾದ ಅನ್ವೇಷಣೆ ಮಾಡಬೇಕಾಯಿತು. ವಿವಿಧ ಪ್ರಾಂತ್ಯಗಳಲ್ಲಿ ವಾಸಿಸುವ ಅಸ್ಪಶ್ಯರ ಸಂಖ್ಯೆಯ ಮಾಹಿತಿಯನ್ನು ಕೊಡುವಂತೆ ಪ್ರಾಂತೀಯ ಸರ್ಕಾರಗಳಿಗೆ ಕರೆನೀಡಿತು ಮತ್ತು ಆ ಸರ್ಕಾರಗಳು ಬಹಳ ಎಚ್ಚರದಿಂದ ಆ ಮಾಹಿತಿಯನ್ನು ಸಿದ್ಧಗೊಳಿಸಿದವು. ಆದ್ದರಿಂದ ಸೌತ್ ಬರೋ ಸಮಿತಿ ಮತ್ತು ಸೈಮನ್ ಕಮಿಷನ್ಗಳಲ್ಲಿ ಕೊಡಲಾದ ಅಸ್ಪೃಶ್ಯರ ಜನಸಂಖ್ಯೆ ಮಹತ್ವ ಪಡೆಯಿತು.

ಅಸ್ಪೃಶ್ಯರ ಸಂಖ್ಯೆ ಸುಮಾರು 5 ಕೋಟಿ ಎಂದು ಅಂದಾಜು ಮಾಡಿರುವುದು ಸ್ಪಷ್ಟವಾಗುತ್ತದೆ. ಇದು ಅಸ್ಪಶ್ಯರ ಜನಸಂಖ್ಯೆ ಎಂಬುದನ್ನು 1911ರ ಜನಗಣತಿಯ ನಿರ್ದೇಶಕರು ಕಂಡುಹಿಡಿದುಕೊಂಡಿದ್ದಾಗಿತ್ತು. 1921ರ ಜನಗಣತಿಯ ನಿರ್ದೇಶಕರು ಮತ್ತು 1929ರ ಸೈಮನ್ ಕಮಿಷನ್ನಿಂದ ಈ ಅಂಕಿ-ಅಂಶಗಳನ್ನು ದೃಢಪಡಿಸಲಾಯಿತು. ಅದರ ಇಪ್ಪತ್ತು ವರ್ಷಗಳಲ್ಲಾದ ದಾಖಲೆಯಲ್ಲಿ ಯಾವ ಹಿಂದೂವೂ ಈ ಸಂಖ್ಯೆ ತಪ್ಪೆಂದು ಆಕ್ಷೇಪಿಸಿಲ್ಲ. ಸೈಮನ್ ಕಮಿಷನ್ನೊಂದಿಗೆ ಸಹಕರಿಸಲು ಪ್ರಾಂತೀಯ ಮತ್ತು ಕೇಂದ್ರ ಶಾಸನ ಸಭೆಗಳಿಂದ ರಚಿತವಾದ ಬೇರೆ ಬೇರೆ ಸಮಿತಿಗಳನ್ನು ಗಮನದಲ್ಲಿಟ್ಟು ಹೇಳುವುದಾದರೆ ಹಿಂದೂಗಳು ಅಸ್ಪಶ್ಯರ ಈ ಸಂಖ್ಯೆಯನ್ನು ಯಾವ ತಕರಾರೂ ಇಲ್ಲದೆ ಒಪ್ಪಿರುವುದು ಕಾಣುತ್ತದೆ ಎಂದು ಅಂಬೇಡ್ಕರ್ ದಾಖಲಿಸುತ್ತಾರೆ.

ಇದನ್ನೂ ಓದಿರಿ: ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ? ರಾಹುಲ್- ಸೋನಿಯಾ ಗಾಂಧಿ ವಿರುದ್ಧದ ಆರೋಪವೇನು?

1932ರ ಲೋಥಿಯನ್ ಸಮಿತಿ ತನ್ನ ಕೆಲಸವನ್ನು ಆರಂಭಿಸಿದಾಗ ಹಿಂದೂಗಳು ಇದ್ದಕ್ಕಿದ್ದಂತೆ ಈ ಸಂಖ್ಯೆಯನ್ನು ಒಪ್ಪದೆ ತಕರಾರು ತೆಗೆದರು. ಕೆಲವು ಪ್ರಾಂತಗಳಲ್ಲಿ ಅಸ್ಪಶ್ಯರೇ ಇಲ್ಲವೆಂದು ಹೇಳುವವರೆಗೂ ಹೋದರು. “ಈ ಘಟನೆ ಹಿಂದೂಗಳ ಮನೋಧರ್ಮ ಎಂತಹದ್ದು ಎಂಬುದನ್ನು ಸೂಚಿಸುತ್ತದೆ. ಆ ಕಾರಣದಿಂದ ಅದನ್ನು ಕುರಿತು ಸ್ವಲ್ಪ ವಿವರಣೆಯನ್ನು ನೀಡಬೇಕು” ಎನ್ನುತ್ತಾರೆ ಅಂಬೇಡ್ಕರ್.

ಭಾರತದ ದುಂಡುಮೇಜಿನ ಪರಿಷತ್ತಿನ ನಾಗರಿಕ ಉಪ ಸಮಿತಿಯ ಸಲಹೆಯಂತೆ ಲೋಥಿಯನ್ ಕಮಿಟಿಯನ್ನು ನೇಮಿಸಲಾಯಿತು. ಈ ಸಮಿತಿಯು ಮಧ್ಯಪ್ರಾಂತ ಮತ್ತು ಅಸ್ಸಾಂ ಪ್ರಾಂತವನ್ನು ಬಿಟ್ಟು ಭಾರತದ ಮಿಕ್ಕೆಲ್ಲ ಪ್ರಾಂತಗಳನ್ನು ಭೇಟಿಮಾಡಿತು. ಈ ಸಮಿತಿಯೊಂದಿಗೆ ಸಹಕರಿಸಲು ಬೇರೆ ಬೇರೆ ವಿಚಾರಧಾರೆಯನ್ನು ಪ್ರತಿನಿಧಿಸುವ ಹಾಗೂ ಆಯಾ ಪ್ರಾಂತದಲ್ಲಿ ಕಾಣುವ ವಿವಿಧ ರಾಜಕೀಯ ಆಸಕ್ತಿಗಳನ್ನು ಪ್ರತಿಪಾದಿಸುವ ಜನರನ್ನೊಳಗೊಂಡ ಪ್ರಾಂತೀಯ ಸಮಿತಿಗಳನ್ನು ಆಯಾ ಪ್ರಾಂತದ ಸರಕಾರಗಳು ರಚಿಸಿದವು. ಭಾರತದ ನಾಗರಿಕ ಸಮಿತಿಯ ಅಧ್ಯಕ್ಷರಾದ ಲಾರ್ಡ್ ಲೋಥಿಯನ್‌ ಅವರಿಗೆ ಆ ಸಮಿತಿಯ ಉದ್ದೇಶವನ್ನು ಕುರಿತಂತೆ ಪ್ರಧಾನಮಂತ್ರಿಯವರು ಬರೆದ ಪತ್ರದಲ್ಲಿ ಕೆಲವು ಮಹತ್ವದ ವಿಚಾರಗಳಿದ್ದವು.

“ದುಂಡುಮೇಜಿನ ಪರಿಷತ್ತಿನಲ್ಲಿ ಚರ್ಚೆಗಳಿಂದ ತಿಳಿದುಬಂದ ಅಂಶವೆಂದರೆ ಹೊಸ ಸಂವಿಧಾನದಲ್ಲಿ ದಲಿತರ ಸೂಕ್ತ ಪ್ರಾತಿನಿಧ್ಯ ವ್ಯವಸ್ಥೆ ಮಾಡಬೇಕು ಮತ್ತು ಅವರ ಪ್ರಾತಿನಿಧ್ಯವನ್ನು ಇನ್ನು ಮುಂದೆ ನಾಮಕರಣದಿಂದ ನಿರ್ಣಯಿಸುವಂತಿರಬಾರದು. ನಿಮಗೆ ತಿಳಿದಿರುವಂತೆ ದಲಿತರಿಗೆ ಪ್ರತ್ಯೇಕವಾದ ಚುನಾವಣೆಯಿರಬೇಕೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದು, ಸಾಮಾನ್ಯ ಚುನಾವಣೆಯಲ್ಲಿಯೇ ದಲಿತರೂ ತಮ್ಮ ಮತಚಲಾಯಿಸಲು ಅವಕಾಶ ಕೊಡುವುದು ಸೂಕ್ತವೇ ಎಂಬ ವಿಚಾರವನ್ನು ನಿರ್ಣಯಿಸಲು ನಿಮ್ಮ ಸಮಿತಿಯ ಸಲಹೆಯು ಸಹಕಾರಿಯಾಗುವಂತಿರಬೇಕು. ದಲಿತರ ಸಂಖ್ಯೆ ಸ್ಪಷ್ಟವೂ ನಿರ್ದಿಷ್ಟವೂ ಆಗಿರುವ ಪ್ರಾಂತ್ಯಗಳಲ್ಲಿ ಅಥವಾ ಎಲ್ಲ ಪ್ರಾಂತ್ಯಗಳಲ್ಲಿ ದಲಿತ ವರ್ಗದವರನ್ನೇ ಒಂದು ಪ್ರತ್ಯೇಕ ಚುನಾವಣಾ ಸಮುದಾಯವಾಗಿ ರೂಪಿಸಬಯಸಿದರೆ, ಆಗ ದಲಿತರಿಗೆ ಮತದಾನದ ಹಕ್ಕನ್ನು ಚುನಾವಣಾ ಸಮುದಾಯವಾಗಿ ರೂಪಿಸಬೇಕೇ ಎಂಬ ವಿಚಾರದಲ್ಲಿಯೂ ಬೆಳಕು ಚೆಲ್ಲುವಂತಿರಬೇಕು” ಎಂದಿತ್ತು ಆ ಪತ್ರ.

ಭಾರತದ ನಾಗರಿಕ ಸಮಿತಿಯಲ್ಲಿ ಬಾಬಾ ಸಾಹೇಬರು ಇದ್ದರು. “ಅಸ್ಪೃಶ್ಯರ ಜನಸಂಖ್ಯೆಯನ್ನು 1911ರಿಂದ 1929ರವರೆಗೆ ನಾಲ್ಕು ಸಾರಿ ಅಧಿಕಾರಯುತವಾಗಿ ಪರಿಶೀಲಿಸಿ ಅದು ಸುಮಾರು 5 ಕೋಟಿ ಎಂದು ನಿರ್ಣಯವಾಗಿದ್ದರಿಂದ ಅದರ ಬಗ್ಗೆ ಯಾವ ವಿರೋಧವೂ ಬರಲಾರದೆಂದು ನಾನು ತಿಳಿದಿದ್ದೆ. ಭಾರತೀಯ ನಾಗರಿಕ ಸಮಿತಿಯ ಮುಂದೆ ಅಸ್ಪೃಶ್ಯರ ಜನಸಂಖ್ಯೆಯನ್ನು ಕುರಿತಂತೆ ತುಂಬಾ ಬಿರುಸಾದ ಮತ್ತು ಸಂಘಟಿತ ವಿರೋಧ ತಲೆದೋರಿದ್ದು ಆಶ್ಚರ್ಯವೆನಿಸಿತು” ಎನ್ನುತ್ತಾರೆ ಅಂಬೇಡ್ಕರ್.

“ಅಸ್ಪೃಶ್ಯತೆಯೆಂಬುದೇ ಇಲ್ಲ ಎಂದು ಪ್ರತಿಪಾದಿಸಲು ಸಾಕ್ಷಿಗಳ ಮೇಲೆ ಸಾಕ್ಷಿಗಳು, ಸಮಿತಿಗಳ ಮೇಲೆ ಸಮಿತಿಗಳು ಮುಂದೆ ಬಂದವು. ಇದು ನನ್ನನ್ನು ಚಕಿತನನ್ನಾಗಿ ಮಾಡಿತು” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

“ಹಿಂದೂಗಳು ಅಸ್ಪಶ್ಯರ ಸಂಖ್ಯೆಯನ್ನು ಇದ್ದಕ್ಕಿದ್ದಂತೆಯೆ ಲಕ್ಷಗಟ್ಟಲೆಯಿಂದ ಅತ್ಯಲ್ಪ ಸಂಖ್ಯೆಗೆ ಇಳಿಸಲು ಕಾರಣವೇನು? 1911ರಿಂದಲೂ ಅವರ ಸಂಖ್ಯೆ 5 ಕೋಟಿ ಎಂದು ಎಲ್ಲ ಕಡೆಯೂ ದಾಖಲಾಗಿದ್ದಿತು. ಅದನ್ನು ಯಾರೂ ಕೂಡ ಪ್ರಶ್ನೆ ಮಾಡಿರಲಿಲ್ಲ. 1932ರಲ್ಲಿ ಹಿಂದೂಗಳು ಯಾವ ಮಾರ್ಗದಿಂದಲಾದರೂ ಈ ಸಂಖ್ಯೆಯನ್ನು ಪ್ರತಿಭಟಿಸಬೇಕೆಂದು ಏಕೆ ಸಂಕಲ್ಪ ಮಾಡಿದರು? ಇದಕ್ಕೆ ಉತ್ತರ ಸುಲಭ. 1932ರವರೆಗೆ ಅಸ್ಪೃಶ್ಯರಿಗೆ ರಾಜಕೀಯವಾಗಿ ಯಾವ ಮಹತ್ವವೂ ಇರಲಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣದ ಹಿಂದೂಗಳಿಂದ ಅಸ್ಪೃಶ್ಯರನ್ನು ಹೊರಗಿಟ್ಟಿದ್ದರೂ ರಾಜಕೀಯ ಉದ್ದೇಶಗಳಿಗೆ ಮಾತ್ರ ಅವರನ್ನು ಹಿಂದೂ ಸಮಾಜದ ಅಂಗವೆಂದೇ ಗುರುತಿಸುತ್ತಿದ್ದರು. ಆದ್ದರಿಂದ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ಮುಂತಾದ ರಾಜಕೀಯ ಉದ್ದೇಶಗಳಿಗೆ ಅವರ ಜನಸಂಖ್ಯೆಯಿಂದ ಯಾವ ಪರಿಣಾಮವೂ ಆಗುತ್ತಿರಲಿಲ್ಲ. 1932ರವರೆಗೆ ಶಾಸನ ಸಭೆಗಳ ಸ್ಥಾನಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಹಂಚಿಕೆಯಾಗುತ್ತಿದ್ದುವೇ ಹೊರತು ಹಿಂದೂಗಳ ಪಾಲಿಗೆ ಬಂದ ಸ್ಥಾನಗಳ ಸಂಖ್ಯೆಯಲ್ಲಿ ಅಸ್ಪೃಶ್ಯರು ಮತ್ತು ಸ್ಪಶ್ಯರ ನಡುವೆ ಹಂಚಿಕೆಯಾಗುತ್ತಿರಲಿಲ್ಲ. ಹೀಗಾಗಿ ಆ ಎಲ್ಲ ಸ್ಥಾನಗಳೂ ಸ್ಪಶ್ಯರ ಪಾಲಿಗೆ ಹೋಗುತ್ತಿದ್ದುದರಿಂದ ಅಸ್ಪೃಶ್ಯರ ಸಂಖ್ಯೆ ಎಷ್ಟೆಂಬುದನ್ನು ತಿಳಿಯುವ ಪ್ರಯತ್ನವೇ ನಡೆಯಲಿಲ್ಲ. 1932ರ ಹೊತ್ತಿಗೆ ಪರಿಸ್ಥಿತಿ ಪೂರ್ಣವಾಗಿ ಬದಲಾಯಿತು.  ಅಸ್ಪೃಶ್ಯರು ತಮ್ಮ ಪಾಲಿಗಾಗಿ ಒತ್ತಾಯ ಮಾಡಲು ಆರಂಭಿಸಿದರು. ಈ ಒತ್ತಾಯವನ್ನು ಮನ್ನಿಸಿ ದುಂಡುಮೇಜಿನ ಸಭೆಯಲ್ಲಿ ಅಸ್ಪಶ್ಯರಿಗೆ ಪ್ರತ್ಯೇಕವಾದ ಪ್ರಾತಿನಿಧ್ಯವನ್ನು ಕೊಡಲಾಯಿತು. ಹೀಗಾಗಿ ಅಸ್ಪೃಶ್ಯರ ಜನಸಂಖ್ಯೆಯ ವಿಷಯ ಅತ್ಯಂತ ಮಹತ್ವ ಪಡೆಯಿತು. ಅಸ್ಪಶ್ಯರ ಸಂಖ್ಯೆ ಕಡಿಮೆಯಿದ್ದಷ್ಟೂ ಸ್ಪೃಶ್ಯರಾದ ಹಿಂದೂಗಳಿಗೆ ದೊರೆಯುವ ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗುತ್ತಿದ್ದಿತು.” “1932ಕ್ಕೆ ಮುಂಚೆ ಸ್ಪಶ್ಯರೆನಿಸಿದವರು ಅಸ್ಪಶ್ಯರ ಜನಸಂಖ್ಯೆಯ ವಿಚಾರದಲ್ಲಿ ವಿರೋಧವನ್ನು ಮಾಡದೆ ಇದ್ದು, 1932ರ ನಂತರ ಅಸ್ಪೃಶ್ಯರೆಂಬುವವರು ಇಲ್ಲವೇ ಇಲ್ಲ ಎಂಬುದಾಗಿ ಹೇಳುವುದರ ಉದ್ದೇಶ ಇದರಿಂದ ತಿಳಿಯುತ್ತದೆ” ಎಂದು ತಿವಿದಿದ್ದರು ಬಾಬಾಸಾಹೇಬರು.

ಇದನ್ನೂ ಓದಿರಿ: ವಕ್ಫ್‌ ಕಾಯ್ದೆ ಸಮರ್ಥನೆ: ಮುಸ್ಲಿಮರನ್ನು ʼಪಂಕ್ಚರ್ ವಾಲಾʼಗಳೆಂದು ಅವಮಾನಿಸಿದ ಮೋದಿ

ಅಸ್ಪಶ್ಯರ ಜನಸಂಖ್ಯೆಯನ್ನು ಕಡಿಮೆ ಮಾಡಲು ಲೋಥಿಯನ್ ಸಮಿತಿಯ ಮುಂದೆ ಹಿಂದೂಗಳು ಕೊಟ್ಟ ಕೋರಿಕೆಯ ಕಾರಣಗಳು ಎರಡು. ಜನಗಣತಿಯ ನಿರ್ದೇಶಕರು ಕೊಟ್ಟ ಸಂಖ್ಯೆ ದಲಿತ ವರ್ಗದ ಸಂಖ್ಯೆಯೇ ಹೊರತು ಅಸ್ಪೃಶ್ಯರ ಸಂಖ್ಯೆಯಲ್ಲ. ಏಕೆಂದರೆ ದಲಿತ ವರ್ಗದಲ್ಲಿ ಅಸ್ಪೃಶ್ಯರಲ್ಲದೆ ಬೇರೆ ವರ್ಗದವರೂ ಸೇರಿದ್ದಾರೆ. ಅವರು ಕೊಟ್ಟ ಎರಡನೆಯ ಕಾರಣವೆಂದರೆ, ಅಸ್ಪೃಶ್ಯ ಎಂಬ ಪದಕ್ಕೆ ಭಾರತಾದ್ಯಂತ ಎಲ್ಲ ಪ್ರಾಂತ್ಯಗಳಲ್ಲಿಯೂ ಒಂದೇ ಅರ್ಥವಿರುವಂತೆ ಅವರ ಜನಸಂಖ್ಯೆಯನ್ನು ಕಂಡುಹಿಡಿಯಬೇಕು. ಅಂದರೆ ಅಖಿಲ ಭಾರತ ಮಟ್ಟದಲ್ಲಿ ಅಸ್ಪೃಶ್ಯತೆಯನ್ನು ಗುರುತಿಸಲು ಒಂದೇ ಮಾನದಂಡ ಇರಬೇಕು ಎಂಬುದು ಅವರ ವಾದವಾಗಿತ್ತು. ಆದರೆ ಇದು ಎಂತಹ ದುರುದ್ದೇಶವನ್ನು ಹೊಂದಿತ್ತು ಎಂಬುದನ್ನು ಅಂಬೇಡ್ಕರ್ ವಿವರಿಸುತ್ತಾರೆ. “ದೇಶದ್ಯಾಂತ ಅಸ್ಪೃಶ್ಯರನ್ನು ಗುರುತಿಸಲು ಒಂದೇ ಮಾನದಂಡ  ಇರಬೇಕೆಂಬ ವಾದದ ಉದ್ದೇಶ ಅಸ್ಪೃಶ್ಯರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬುದಷ್ಟೆ ಆಗಿತ್ತು. ಭಾರತದ ವಿವಿಧ ಪ್ರದೇಶದಲ್ಲಿ ಅಸ್ಪೃಶ್ಯತೆ ಬೇರೆ ಬೇರೆ ರೂಪದಲ್ಲಿದೆ ಎಂಬುದು ಚೆನ್ನಾಗಿ ಗೊತ್ತಿರುವ ವಿಚಾರ. ಕೆಲವು ಭಾಗಗಳಲ್ಲಿ ಅಸ್ಪೃಶ್ಯರು ಸ್ಪಶ್ಯರ ಕಣ್ಣಿಗೆ ಬಿದ್ದರೆ ಸಾಕು ಅಪವಿತ್ರ. ಭಾರತದ ಕೆಲವು ಭಾಗದಲ್ಲಿ ಅಸ್ಪೃಶ್ಯರನ್ನು ನೋಡುವುದು ಅಥವಾ ಸಮೀಪ ಬರುವುದು ಅಪವಿತ್ರವಲ್ಲ, ಕೇವಲ ಮುಟ್ಟಿದರೆ ಮಾತ್ರ ಅಪವಿತ್ರ; ಕೆಲವು ಭಾಗಗಳಲ್ಲಿ ನೀರು ಮತ್ತು ಆಹಾರವನ್ನು ಮುಟ್ಟಲು ಅಸ್ಪೃಶ್ಯರಿಗೆ ಅವಕಾಶವಿಲ್ಲ. ಕೆಲವು ಕಡೆ ದೇವಸ್ಥಾನಕ್ಕೆ ಪ್ರವೇಶವಿಲ್ಲದವರನ್ನು ಅಸ್ಪಶ್ಯರೆಂದು ಕರೆಯುತ್ತಾರೆ. ಈ ರೀತಿಯ ಭಿನ್ನತೆಗಳಿವೆ. ಒಂದೇ ಮಾನದಂಡ ವಿಧಿಸಬೇಕೆಂಬುದು ಸರಿಯಲ್ಲ” ಎಂಬ ವಾದವನ್ನು ಅಂಬೇಡ್ಕರ್ ಅವರು ಮುಂದಿಡುತ್ತಾರೆ.

ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಬಿಕ್ಕಟ್ಟನ್ನು ಚರ್ಚೆ ತರುತ್ತಾರೆ ಬಾಬಾ ಸಾಹೇಬರು. ದಲಿತ ವರ್ಗ ಎಂಬ ಶ್ರೇಣಿಯಲ್ಲಿ ಅಸ್ಪೃಶ್ಯರೇ ಅಲ್ಲದೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಇತರ ವರ್ಗದ ಜನರೂ ಸೇರುತ್ತಾರೆ ಎಂಬುದಾಗಿ ಹಿಂದುಳಿದ ಜನಾಂಗದ ನಾಯಕರು ಸ್ಪರ್ಧೆಗಿಳಿದರು. ಇದನ್ನು ಉಲ್ಲೇಖಿಸುತ್ತಾ ಅಂಬೇಡ್ಕರ್ ಅವರು ಹೀಗೆ ಹೇಳುತ್ತಾರೆ : “ಅಸ್ಪೃಶ್ಯರು ಮಾತ್ರವಲ್ಲದೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗೂ ಪ್ರತ್ಯೇಕ ಪ್ರಾತಿನಿಧ್ಯವಿರಬೇಕೆಂಬ ಇವರ ವಾದ ಸರಿ. 1920ರಲ್ಲಿ ಜಾರಿಗೆ ಬಂದ ಸುಧಾರಿತ ಸಂವಿಧಾನದಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಹಕ್ಕುಗಳನ್ನು ಬೊಂಬಾಯಿ ಪ್ರಾಂತ್ಯದಲ್ಲಿ ನೀಡಲಾಯಿತು. ಮದರಾಸ್ ಪ್ರಾಂತದಲ್ಲಿ ಬ್ರಾಹ್ಮಣೇತರರಿಗೆ ಅವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರೆಂಬ ಕಾರಣದಿಂದಲೇ ಪ್ರತ್ಯೇಕ ಪ್ರಾತಿನಿಧ್ಯ ಕೊಡಲಾಯಿತು. ಆದ್ದರಿಂದ ಹಿಂದೂಗಳಲ್ಲಿ ಹಿಂದುಳಿದ ವರ್ಗದ ಪ್ರತಿನಿಧಿಗಳು ತಮಗೆ ಪ್ರತ್ಯೇಕ ಪ್ರಾತಿನಿಧ್ಯ ಬೇಕೆಂದು ಪ್ರತಿಪಾದಿಸಿದ್ದು ಖಂಡಿತವಾಗಿಯೂ ಸರಿಯಾದ ಕ್ರಮ. ಆದರೆ ತಮ್ಮನ್ನೂ ದಲಿತರೆಂದು ಸೇರಿಸಬೇಕೆನ್ನುವ ಅವರ ವಾದವನ್ನು ಅಸ್ಪೃಶ್ಯರು ಮತ್ತು ಸವರ್ಣ ಹಿಂದೂಗಳು ಯಾರೂ ಒಪ್ಪಲಿಲ್ಲ. ಈ ವಾದವನ್ನು ಒಪ್ಪಿದರೆ ದಲಿತರ ಜನಸಂಖ್ಯೆ ಹೆಚ್ಚುತ್ತದೆ ಎಂಬ ಕಾರಣದಿಂದ ಸವರ್ಣ ಹಿಂದೂಗಳು ವಿರೋಧಿಸಿದರು. ಅಸ್ಪೃಶ್ಯರಾದವರು ಅಸ್ಪೃಶ್ಯರಲ್ಲದ ಯಾರನ್ನೂ ದಲಿತರ ವ್ಯಾಪ್ತಿಗೆ ಸೇರಿಸಬಾರದೆಂದು ಆಗ್ರಹಿಸಿದರು. ಹಿಂದುಳಿದ ವರ್ಗದವರಿಗೆ ಇದ್ದ ಸರಿಯಾದ ಮಾರ್ಗವೆಂದರೆ ಸ್ಪಶ್ಯ ಹಿಂದೂಗಳನ್ನು ಮುಂದುವರಿದವರು ಮತ್ತು ಹಿಂದುಳಿದವರೆಂದು ವಿಭಜಿಸಿ, ಹಿಂದುಳಿದವರಿಗೆ ಪ್ರತ್ಯೇಕ ಪ್ರಾತಿನಿಧ್ಯಬೇಕೆಂದು ಹೋರಾಡುವುದು. ಆ ರೀತಿ ಮಾಡಿದ್ದರೆ ಅಸ್ಪಶ್ಯರೂ ಅವರನ್ನು ಬೆಂಬಲಿಸುತ್ತಿದ್ದರು” ಎಂಬ ಅಭಿಪ್ರಾಯಕ್ಕೆ ಬರುತ್ತಾರೆ ಅಂಬೇಡ್ಕರ್. ಇಂದಿನ ಸಂದರ್ಭದಲ್ಲಿ ದಲಿತ, ಒಬಿಸಿ ಸಮುದಾಯಗಳ ನಡುವೆ ಇರಬೇಕಾದ ಸಂಧಾನ ಸೂತ್ರವಿದು ಎಂದೇ ಭಾವಿಸಬಹುದು.

ಈ ರೀತಿಯಲ್ಲಿ ಬಾಬಾ ಸಾಹೇಬರು ಜಾತಿಗಣತಿ ಮತ್ತು ಅದರಿಂದಾಗುವ ಸಾಮಾಜಿಕ ಬದಲಾವಣೆಗಳ ಕುರಿತು ವಿವರಿಸುತ್ತಾ ಹೋಗುತ್ತಾರೆ. ಅದರ ಆಧಾರದಲ್ಲಿ ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತಾರೆ. ಆ ಮೂಲಕ ಎಲ್ಲ ದಲಿತ ದಮನಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಹಕ್ಕನ್ನು ಜಾರಿಗೊಳಿಸುವ ಆಶಯ ಅವರದ್ದಾಗಿತ್ತು. ಇಂದು ಬಾಬಾ ಸಾಹೇಬರ ಆಶಯಗಳನ್ನು ಸರ್ಕಾರ ಈಡೇರಿಸುವ ಕೆಲಸ ಮಾಡಲಿ ಎಂದು ಆಶಿಸೋಣ. ಜಾತಿಗಣತಿ ವರದಿ ಬಿಡುಗಡೆಗೊಳಿಸಲು ಆಗ್ರಹಿಸೋಣ. ಬಾಬಾಸಾಹೇಬರು ಜಾತಿಗಣತಿಯ ಬಗ್ಗೆ ಏನೆಲ್ಲ ಚರ್ಚೆ ಮಾಡಿದ್ದಾರೆಂದು ಮತ್ತಷ್ಟು ಚರ್ಚಿಸಬೇಕಿದೆ.

(ಆಧಾರ: ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು’, ಸಂಪುಟ 4, ಪುಟ ಸಂ. 7-10, ಪು.ಸಂ. 241- 257)

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X