ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ತಾತ್ಸಾರ ಮುಂದುವರಿಯುತ್ತಲಿದೆ. ದಲಿತರ ಹಾಗೂ ಹಿಂದುಳಿದವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದರೂ ಕಟ್ಟಕಡೆಯ ವ್ಯಕ್ತಿಗೆ ತಲುಪುವುದು ಇನ್ನು ದುಸ್ತರವಾಗಿದೆ. ಅವರನ್ನು ಮೇಲೆತ್ತುವ ಕೆಲಸವನ್ನು ಅರ್ಥ ಸಚಿವರಾಗಲಿ, ಕೇಂದ್ರ ಸರ್ಕಾರವಾಗಲಿ ಮಾಡುತ್ತಿಲ್ಲ. ಇನ್ನು ಅಲ್ಪಸಂಖ್ಯಾತರ ಸ್ಥಿತಿ ಹೇಳತೀರದಾಗಿದೆ
ಸತತ ಎಂಟನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ (ಫೆ.1) 2025ನೇ ಸಾಲಿನ ಬಜೆಟ್ ಮಂಡಿಸಲು ಅಣಿಯಾಗಿದ್ದಾರೆ. ಜಿಡಿಪಿ, ಆರ್ಥಿಕ ಬೆಳವಣಿಗೆ ದರ ಕುಸಿತ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ, ಪ್ರತಿ ವರ್ಷ ಸಾಲಾಗಿ ನಿಲ್ಲುತ್ತಿರುವ ಲಕ್ಷಾಂತರ ನಿರುದ್ಯೋಗಿಗಳು, ಮಧ್ಯಮ ವರ್ಗ, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬದುಕು ದಿನದಿಂದ ದಿನಕ್ಕೆ ಹೈರಾಣಾಗುತ್ತಿದೆ. ಇಂತಹ ನೂರಾರು ಸವಾಲುಗಳ ನಡುವೆ ಸುಮಾರು 50 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯವನ್ನು ವಿತ್ತ ಸಚಿವೆ ಮಂಡಿಸುತ್ತಿದ್ದಾರೆ.
2024-25ನೇ ಆರ್ಥಿಕ ಸಾಲಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಎರಡು ವರ್ಷದ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. ಅಲ್ಲದೆ, ಪೂರ್ಣ ಆರ್ಥಿಕ ವರ್ಷದಲ್ಲಿ ಶೇ. 6.4ರಷ್ಟು ದಾಖಲಾಗಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂದಾಜಿಸಿದೆ. ಇದು 2023–24ನೇ ಸಾಲಿನಲ್ಲಿ ದಾಖಲಾಗಿದ್ದ ಶೇ 8.2ಕ್ಕಿಂತಲೂ ಕಡಿಮೆಯಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದ ದಾಖಲೆ ಮಟ್ಟದಲ್ಲಿ ಕುಸಿಯುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಧ್ಯಪ್ರವೇಶದ ಹೊರತಾಗಿಯೂ ರೂಪಾಯಿಯು ಚೇತರಿಕೆ ಕಾಣುವ ಲಕ್ಷಣ ತೋರುತ್ತಿಲ್ಲ. ಡಾಲರ್ ಏರಿಕೆಯು ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ.
ತರಕಾರಿಗಳು, ಅಡುಗೆ ಎಣ್ಣೆ, ಹಾಲು ಮತ್ತು ಆಹಾರ ಪದಾರ್ಥಗಳ ಬೆಲೆಗಳು ಇತ್ತೀಚಿನ ತಿಂಗಳುಗಳಲ್ಲಿ ಏರಿಕೆಯಾಗಿರುವುದರಿಂದ ಹಣದುಬ್ಬರವು ಕುಟುಂಬಗಳಿಗೆ ನಿರಂತರ ತಲೆನೋವಾಗಿದೆ. ಬಡವರು ಜೀವನ ನಡೆಸುವುದು ದುಸ್ತರವಾಗಿದೆ. ಸಾರ್ವಜನಿಕರ ವೇತನಗಳು ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಹೊಂದುತ್ತಿಲ್ಲ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಸಂಬಂಧಿಸಿದಂತೆ, ಜಿಎಸ್‌ಟಿ ದರಗಳನ್ನು ಕೇಂದ್ರ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡಿರುವ ಜಿಎಸ್‌ಟಿ ಮಂಡಳಿಯಿಂದ ನಿರ್ಧರಿಸಲಾಗುತ್ತದೆ. ಆದ್ದರಿಂದ ಸರ್ಕಾರವು ಅಗತ್ಯ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬಹುದು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ನಿಯಂತ್ರಿಸಬಹುದು. ಆದರೆ ಇವ್ಯಾವ ನಿರ್ಧಾರಗಳನ್ನು ಕೈಗೊಳ್ಳಲು ಕೇಂದ್ರ ಹಣಕಾಸು ಸಚಿವರಿಗೆ ಮನಸ್ಸಿಲ್ಲ.
ದೇಶದ ನಿರ್ಣಾಯಕ ಕಾಳಜಿಯೆಂದರೆ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಸೃಷ್ಟಿಸುವುದು. ಆದರೆ 10 ವರ್ಷಗಳಲ್ಲಿ ಈ ಸಮಸ್ಯೆಗೆ ಎನ್‌ಡಿಎ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ನಿರೀಕ್ಷೆ ಇರಿಸಲಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕೈಗೆಟುಕುವಂತಿರಬೇಕು. ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಸರ್ಕಾರದ ವತಿಯಿಂದ ಆರೋಗ್ಯ ಸೇವೆಗೆ ಸಿಗುವ ಸೌಲಭ್ಯಗಳ ಅಗತ್ಯವೂ ಅಷ್ಟೇ ಇದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ಅಸಮಾನತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಯಾವ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ನೋಡಬೇಕಿದೆ.
ಇದರ ಜೊತೆಗೆ ಗ್ರಾಮೀಣ ಭಾಗದ ಜನರ ಆರೋಗ್ಯದತ್ತ ಕೇಂದ್ರ ಸರ್ಕಾರ ಗಮನಹರಿಸಬೇಕಿದೆ. ಆರೋಗ್ಯ ಸೇವೆ ನಗರ ಪ್ರದೇಶದಲ್ಲಿ ಸುಲಭವಾಗಿ ಸಿಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ. ಸಣ್ಣಪುಟ್ಟ ಗ್ರಾಮಗಳಲ್ಲಿ ತುರ್ತು ಆರೋಗ್ಯ ಸೇವೆಗೆ ಈಗಲೂ ಕಿಲೋ ಮೀಟರ್‌ಗಟ್ಟಲೆ ದೂರ ಹೋಗಬೇಕಾದ ಅನಿವಾರ್ಯತೆಯಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಹಲವು ಬಾರಿ ಸಾವು ಸಂಭವಿಸಿದ ಅನೇಕ ಪ್ರಕರಣಗಳನ್ನು ದೇಶಾದ್ಯಂತ ನಾವು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಭಾಗದಲ್ಲಿ ತುರ್ತು ಚಿಕಿತ್ಸೆಯ ಸೌಲಭ್ಯಗಳು ಕೈಗೆಟಕುವ ರೀತಿಯಲ್ಲಿ ಸಿಗುವಂತಾಗಬೇಕಿದೆ. ಪಾಶ್ಚಿಮಾತ್ಯ ದೇಶಗಳೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತವೆ. ತಮ್ಮ ಬಜೆಟ್‌ನಲ್ಲಿ ಬಹುಪಾಲು ಈ ಕ್ಷೇತ್ರಗಳಿಗೆ ಹೆಚ್ಚು ಹಣ ಮೀಸಲಿಡುತ್ತವೆ. ಕೇಂದ್ರ ಸರ್ಕಾರವೂ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾದ ಬಜೆಟ್ ಮಂಡನೆ ಮಾಡಿ ಉತ್ತಮ ಸಂದೇಶ ಸಾರಬೇಕಿದೆ.
ನಿರ್ಮಲಾ ಅವರು ಬಜೆಟ್ ಮಂಡಿಸುತ್ತಿರುವ ಬೆನ್ನಲ್ಲೆ ಪ್ರಧಾನಿ ಹಾಗೂ ಆರ್‌ಎಸ್ಎಸ್ ಶ್ರೀಮಂತರ ಹಾಗೂ ಮಧ್ಯಮ ವರ್ಗದಲ್ಲಿರುವ ಉನ್ನತ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಬೇಡಿಕೆಯನ್ನು ಮಂಡಿಸಿದ್ದಾರೆ. ಇತ್ತೀಚೆಗೆ ಆರ್‌ಎಸ್‌ಎಸ್ ಹಾಗೂ ಅಂಗಸಂಸ್ಥೆಗಳಾದ ಲಘು ಉದ್ಯೋಗ್ ಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ವದೇಶಿ ಜಾಗರಣ್ ಮಂಚ್ ಸಮಿತಿಯ ನಾಯಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಬಜೆಟ್‌ನಲ್ಲಿ ಪ್ರಾಮುಖ್ಯತೆ ನೀಡಬೇಕಾದ ಅಂಶಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಅವರ ಬೇಡಿಕೆಯಂತೆ ದೇಶದಲ್ಲಿ ಆದಾಯ ನಿರ್ವಹಣೆಗೆ ತೆರಿಗೆ ಸಂಗ್ರಹವನ್ನು ಇನ್ನಷ್ಟು ಹೆಚ್ಚಿಸಬೇಕು, ಮಧ್ಯಮ ವರ್ಗ ಹಾಗೂ ಮೇಲ್ ಮಧ್ಯಮ ವರ್ಗದ ಜನರ ಮೇಲೆ ಆರ್ಥಿಕ ಹೊರೆ ಬೀಳದಂತೆ ಎಚ್ಚರ ವಹಿಸಬೇಕು ಹಾಗೂ ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳನ್ನು ಖಾಸಗೀಕರಣದಿಂದ ದೂರ ಇರಿಸಬೇಕು ಎಂದು ಆಗ್ರಹಿಸಿವೆ.
ರಾಷ್ಟ್ರೀಯ ಸ್ವಯಂ ಸಂಘದ ಪ್ರಕಾರ ದೇಶದಲ್ಲಿ ಮಧ್ಯಮ ವರ್ಗ ಹಾಗೂ ಉನ್ನತ ವರ್ಗದವರ ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿದೆ. ಮಧ್ಯಮ ವರ್ಗ ದೇಶದ ಆರ್ಥಿಕತೆಯ ಬೆನ್ನಲುಬಾಗಿದೆ ಎಂದು ಹೇಳಿವೆ. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರೈತರು, ಶ್ರಮಿಕರು, ದಿನಗೂಲಿ ಕಾರ್ಮಿಕರನ್ನು ಸಂಘಪರಿವಾರದವರು ಪರಿಗಣಿಸಿಲ್ಲ. ದಲಿತ, ಹಿಂದುಳಿದವರನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿರುವುದದಿಂದ ಭಾರತದ ಮಾರುಕಟ್ಟೆಯಲ್ಲಿ ಅನಿಶ್ಚಿತ ಪರಿಣಾಮ ತರುವ ಸಾಧ್ಯತೆ ಇದೆ. ತಮ್ಮ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿಬಿಟ್ಟಿದ್ದಾರೆ. ಪಾಶ್ಚಾತ್ಯ ದೇಶ ಜಾರಿಗೊಳಿಸುವ ಕಠಿಣ ನೀತಿಗಳು ದೀರ್ಘಾವಧಿಯಲ್ಲಿ ಭಾರತದ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಳ್ಳಿಹಾಕುವಂತಿಲ್ಲ. ಕಳೆದ ಆರು ತಿಂಗಳಿಂದಲೂ ಸಾಕಷ್ಟು ಅಲುಗಾಡುತ್ತಿರುವ ಷೇರು ಮಾರುಕಟ್ಟೆ ಫೆಬ್ರುವರಿ 1ರ ಬಜೆಟ್ ಬಳಿಕ ಇನ್ನು ಹೆಚ್ಚಿನ ರೀತಿಯಲ್ಲಿ ಕುಸಿತ ಕಾಣಬಹುದು ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ ಆಯವ್ಯಯದ ನಂತರ ಷೇರು ಮಾರುಕಟ್ಟೆಯು ಕುಸಿತ ಕಾಣಬಹುದು ಎನ್ನಲಾಗಿದೆ.
ರೈತರ, ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಬಗ್ಗೆ ತಾತ್ಸಾರ ಮುಂದುವರಿಕೆ
ಭಾರತದ ಆರ್ಥಿಕತೆಗೆ ಕೃಷಿ ಬೆನ್ನೆಲುಬಾಗಿದೆ. ಆದರೆ, ಭಾರತದ ಆರ್ಥಿಕತೆ ಸುಧಾರಣೆಗೊಂಡರೂ ವರ್ಷವಿಡಿ ಶ್ರಮ ವಹಿಸುತ್ತಿರುವ ರೈತರ ಬದುಕು ಮಾತ್ರ ಹಸನಾಗಿಲ್ಲ. ದೇಶದ ಕಾರ್ಮಿಕ ಜನಸಂಖ್ಯೆಯ ಶೇ. 50ರಷ್ಟು ಜನರು ಕೃಷಿ ಕ್ಷೇತ್ರದಲ್ಲಿ ಇದ್ದರೂ ಈ ಕ್ಷೇತ್ರದಿಂದ ಜಿಡಿಪಿಗೆ ಆಗುತ್ತಿರುವ ಕೊಡುಗೆ ಶೇ. 15 ಮಾತ್ರ. ಸಾಕಷ್ಟು ಬೆಳೆಗಳು, ಸಬ್ಸಿಡಿಗಳು, ವಿವಿಧ ಯೋಜನೆಗಳು ಇವೆಲ್ಲವೂ ಕೃಷಿ ಕ್ಷೇತ್ರದ ಬಗ್ಗೆ ಮೇಲ್ನೋಟಕ್ಕೆ ಸಕಾರಾತ್ಮಕ ಭಾವನೆ ಮೂಡಿಸುತ್ತವೆ. ಆದರೆ, ವಾಸ್ತವವಾಗಿ, ರೈತರು ಮತ್ತು ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರಿಯಾದ ಬೆಲೆ ಸಿಗುವುದಿಲ್ಲ, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಕೃಷಿ ಕ್ಷೇತ್ರವು ಈ ಬಾರಿಯ ಬಜೆಟ್‌ನಲ್ಲಿ ಕೆಲ ಪ್ರಮುಖ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಶೇ. 1ರ ಬಡ್ಡಿದರದಲ್ಲಿ ಕೃಷಿ ಸಾಲ, ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚು, ಪಿಎಂ ಫಸಲ್ ಬಿಮಾ ಯೋಜನೆ ಅಡಿ ಎಲ್ಲ ಸಣ್ಣ ರೈತರಿಗೂ ಉಚಿತವಾಗಿ ಬೆಳೆ ವಿಮೆ, ಕೃಷಿ ಯಂತ್ರೋಪಕರಣ, ರಸಗೊಬ್ಬರ, ಬೀಜಗಳಿಗೆ ಜಿಎಸ್ಟಿಯಿಂದ ವಿನಾಯಿತಿ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳಿವೆ. ಇವೆಲ್ಲವನ್ನು ನಾಳಿನ ಬಜೆಟ್‌ನಲ್ಲಿ ಅರ್ಥ ಸಚಿವರು ಸರಿದೂಗಿಸುತ್ತಾರಾ ಎಂಬುದನ್ನು ನೋಡಬೇಕಿದೆ.
ಅದೇ ರೀತಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ತಾತ್ಸಾರ ಮುಂದುವರಿಯುತ್ತಲಿದೆ. ದಲಿತರ ಹಾಗೂ ಹಿಂದುಳಿದವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದರೂ ಕಟ್ಟಕಡೆಯ ವ್ಯಕ್ತಿಗೆ ತಲುಪುವುದು ಇನ್ನು ದುಸ್ತರವಾಗಿದೆ. ಅವರನ್ನು ಮೇಲೆತ್ತುವ ಕೆಲಸವನ್ನು ಅರ್ಥ ಸಚಿವರಾಗಲಿ, ಕೇಂದ್ರ ಸರ್ಕಾರವಾಗಲಿ ಮಾಡುತ್ತಿಲ್ಲ. ಇನ್ನು ಅಲ್ಪಸಂಖ್ಯಾತರ ಸ್ಥಿತಿ ಹೇಳತೀರದಾಗಿದೆ. ಎನ್‌ಡಿಎ ಸರ್ಕಾರ ಬಂದ ನಂತರ ಅವರನ್ನು ಮತ್ತಷ್ಟು ಕಡೆಗಣಿಸಲಾಗುತ್ತಿದೆ. ಪ್ರತಿ ವರ್ಷವು ಬಜೆಟ್‌ನಲ್ಲಿ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ. ದ್ವೇಷದ ಮನೋಭಾವವನ್ನು ಉಂಟುಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುಲಾಗುತ್ತಿಲ್ಲ. ಎಲ್ಲರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸದುದ್ದೇಶದ ಬಜೆಟ್‌ಅನ್ನು ನೀಡುತ್ತಾರೆಯೇ ಎಂಬುದು ನಾಳೆ ಗೊತ್ತಾಗಲಿದೆ.
