ತಮ್ಮ ರಾಜಕೀಯಕ್ಕಾಗಿ ದೇಶಪ್ರೇಮದ ಅಲೆಯನ್ನು ಎಬ್ಬಿಸುವ ಕಾರ್ಯವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಲೇ ಬಂದಿದೆ. ಆದರೆ ಈ ಅಲೆಯು ಮತವಾಗಿ ಬದಲಾದ ಬಳಿಕ ಆ ಹುತಾತ್ಮರ ಕುಟುಂಬಗಳಿಗೆ ಸಿಗುವ ನ್ಯಾಯವೇನು? ತನಿಖೆ ನಡೆಯುತ್ತಿದೆಯೇ, ಇಲ್ಲವೇ? ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನವೇಕೆ? -ಹೀಗೆ ಹಲವು ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರಾದ ನಮ್ಮನ್ನು ಕಾಡುತ್ತಿವೆ.
“ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗಲ್ಲ. ಭಯೋತ್ಪಾದಕರನ್ನು ಮಟ್ಟ ಹಾಕುತ್ತೇವೆ. ದೇಶವು ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಲು ಶಕ್ತವಾಗಿದೆ. ದೇಶದ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ರೀತಿಯ ಉಗ್ರಗಾಮಿ ಕೃತ್ಯಗಳನ್ನು ಸಹಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು”- ಇವೆಲ್ಲವೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಭಾಷಣಗಳಲ್ಲಿ ಕೇಳಿಬಂದ ಮಾತುಗಳು, ಭರವಸೆಗಳು. 2019ರ ಪುಲ್ವಾಮ ದಾಳಿಯ ನಂತರದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲೂ ಇದೇ ಹೇಳಿಕೆ, ಇದೇ ಪ್ರಚಾರದ ವಿಷಯವಸ್ತು. ಆದರೆ ಪುಲ್ವಾಮ, ಪಹಲ್ಗಾಮ್ ದಾಳಿಯ ತನಿಖೆ ಏನಾಗಿದೆ ಎಂದು ಒಮ್ಮೆ ಪ್ರಶ್ನೆ ಹಾಕಿಕೊಳ್ಳೋಣವೇ?
ನಮ್ಮ ದೇಶದಲ್ಲಿ ಯೋಧರ ವಿಚಾರದಲ್ಲಿ ಒಂದು ದೇಶಪ್ರೇಮದ ಭಾವನೆಯಿದೆ. ಯೋಧರು ಬಲಿ ಎಂದರೆ ಅದು ನಮ್ಮ ಕುಟುಂಬಸ್ಥರ ಮರಣ ಎಂಬಷ್ಟು ಆಳವಾಗಿ ನೋವು ಪಡುವವರು ನಾವು. ತಮ್ಮ ರಾಜಕೀಯಕ್ಕಾಗಿ ಈ ದೇಶಪ್ರೇಮದ ಅಲೆಯನ್ನು ಎಬ್ಬಿಸುವ ಕಾರ್ಯವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಲೇ ಬಂದಿದೆ. ಆದರೆ, ಈ ಅಲೆಯು ಮತವಾಗಿ ಬದಲಾದ ಬಳಿಕ ಆ ಹುತಾತ್ಮರ ಕುಟುಂಬಗಳಿಗೆ ಸಿಗುವ ನ್ಯಾಯವೇನು? ತನಿಖೆ ನಡೆಯುತ್ತಿದೆಯೇ, ಇಲ್ಲವೇ? ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನವೇಕೆ? -ಹೀಗೆ ಹಲವು ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರಾದ ನಮ್ಮನ್ನು ಕಾಡುತ್ತಿವೆ.
ಇದನ್ನು ಓದಿದ್ದೀರಾ? ಪುಲ್ವಾಮ ದಾಳಿ ದೋಷ ಮುಚ್ಚಿಟ್ಟು ಮೋದಿ ಚುನಾವಣಾ ಲಾಭ ಪಡೆದಿದ್ದರು: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್
ಪುಲ್ವಾಮ ದಾಳಿ: ಇಂದಿಗೂ ಉತ್ತರವಿಲ್ಲದ ಪ್ರಶ್ನೆಗಳು
2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೆಥ್‌ಪೋರಾದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು ಅದನ್ನು ಪುಲ್ವಾಮ ದಾಳಿ ಎಂದು ಕರೆಯಲಾಗುತ್ತದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಸಾಲಿಗೆ, ಉಗ್ರಗಾಮಿಯೊಬ್ಬ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದನು. ಈ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತ್ಮಾತರಾಗಿದ್ದಾರೆ.
ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತು. ಪುಲ್ವಾಮ ದಾಳಿಯ ನಂತರ ಪ್ರತೀಕಾರವಾಗಿ ಬಾಲಾಕೋಟ್‌ನಲ್ಲಿರುವ ಉಗ್ರರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ಕೇಂದ್ರ ಸರ್ಕಾರ ಹೇಳಿತು. ಆದರೆ ಅದು ಬಿಜೆಪಿಯ ಚುನಾವಣೆಯ ವಿಷಯವಸ್ತುವಾಯ್ತು. ಮೋದಿ ಸರ್ಕಾರ 2019ರ ಚುನಾವಣೆಯಲ್ಲಿ ಅತಿದೊಡ್ಡ ಸಾಧನೆಯಾಗಿ ಬಿಂಬಿಬಿಸಿತು. ಭದ್ರತಾ ಲೋಪದ ಬಗ್ಗೆ ಧ್ವನಿ ಎತ್ತಿದವರನ್ನು ‘ದೇಶದ್ರೋಹಿಗಳು’ ಎಂದು ಕರೆದು ಬಾಯಿ ಮುಚ್ಚಿಸಿತು.
ಅವೆಲ್ಲವುದರ ನಡುವೆ ಇಂದಿಗೂ ಹಲವು ಪ್ರಶ್ನೆಗಳು ಹಾಗೆಯೇ ಉಳಿದಿದೆ. ಅಷ್ಟು ದೊಡ್ಡ ಪ್ರಮಾಣದ ಆರ್‌ಡಿಎಕ್ಸ್ ಅತ್ಯಧಿಕ ಭದ್ರತೆ ಇರುವ ವಲಯಕ್ಕೆ ಬಂದಿದ್ದು ಹೇಗೆ? ಯೋಧರ ಚಲನವಲನವಿರುವ ಮತ್ತು ತಪಾಸಣೆ ಇರುವ ಹೈವೇಗೆ ಇಷ್ಟೊಂದು ಪ್ರಮಾಣದ ಆರ್‌ಡಿಎಕ್ಸ್ (300 ಕೆಜಿಗಿಂತಲೂ ಹೆಚ್ಚು) ಹೇಗೆ ತರಲು ಸಾಧ್ಯವಾಗಿದ್ದು? ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆಯಾದರೂ, ಆ ದಾಳಿಯ ಹಿಂದಿನ ‘ಮಾಸ್ಟರ್ ಮೈಂಡ್’ಗಳ ಪತ್ತೆ ಹಚ್ಚಲು ಸಾಧ್ಯವಾಗಿದೆಯೇ? ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ಯೋಧರನ್ನು ಕರೆದೊಯ್ಯಲು ವಿಮಾನದ ವ್ಯವಸ್ಥೆ ಯಾಕೆ ಮಾಡಿಲ್ಲ? ಈ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ ಹೊತ್ತಿದ್ದರೂ ಈ ದಾಳಿಯ ಹಿಂದೆ ಇದ್ದ ಸ್ಥಳೀಯ ಕೈವಾಡ ಯಾರದ್ದು, ಬೆಂಬಲ ನೀಡಿದವರು ಯಾರು? ರಾಜಕೀಯ ಲಾಭಕ್ಕಾಗಿ ದಾಳಿಯ ತನಿಖೆಯನ್ನು ನಿಧಾನಗೊಳಿಸಲಾಗುತ್ತಿದೆಯೇ ಅಥವಾ ಕೆಲವು ಸತ್ಯಗಳನ್ನು ಮರೆಮಾಚಲಾಗುತ್ತಿದೆಯೇ? ಅಂದಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭದ್ರತಾ ಲೋಪದ ಬಗ್ಗೆ ಪ್ರಧಾನಿಯವರ ಬಳಿ ಮಾತನಾಡಿದಾಗ ಅವರನ್ನು ಪ್ರಧಾನಿ ಸುಮ್ಮನಿರಲು ಹೇಳಿದ್ದು ಯಾಕೆ?
ಪಹಲ್ಗಾಮ್ ದಾಳಿಯ ಬಳಿಕ ಕಾಶ್ಮೀರದ ಸ್ಥಿತಿ
2025ರ ಏಪ್ರಿಲ್ 22ರಂದು, ಪಹಲ್ಗಾಮ್‌ನ ಬೈಸರನ್ ಎಂಬ ಪ್ರವಾಸಿ ತಾಣದಲ್ಲಿ ಲಷ್ಕರ್-ಎ-ತಯಬಾ (LeT) ಮತ್ತು ಪ್ರತಿರೋಧ ಪಡೆ (TRF)ಗೆ ಸೇರಿದ ಭಯೋತ್ಪಾದಕರು ಪ್ರವಾಸಿಗರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದರು. ಈ ಭೀಕರ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಇದರಲ್ಲಿ 25 ಮಂದಿ ಭಾರತೀಯ ಪ್ರವಾಸಿಗರು ಮತ್ತು ಒಬ್ಬ ನೇಪಾಳಿ ಪ್ರಜೆ. ಇದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ’ ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ನಾಶಮಾಡಿದೆ.
ಇದನ್ನು ಓದಿದ್ದೀರಾ? ಪುಲ್ವಾಮಾ ದಾಳಿಗೆ ಏಳು ವರ್ಷ | ಇಂದಿಗೂ ಪ್ರಶ್ನೆಗಳೇ ಹೆಚ್ಚು; ಉತ್ತರಿಸಬೇಕಾದವರು ಗಪ್‌ಚುಪ್!
ಈ ಕಾರ್ಯಾಚರಣೆ ಬಳಿಕ ಮೋದಿ ಸರ್ಕಾರವು “ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯವಾಗಿದೆ” ಎಂದು ಅಧಿಕೃತವಾಗಿ ಹೇಳಿಕೆಗಳನ್ನು ನೀಡಿದೆ. ಆದರೆ ಪಹಲ್ಗಾಮ್ ಅಥವಾ ರಾಜೌರಿ ಭಾಗಗಳಲ್ಲಿ ಸರಣಿ ದಾಳಿಗಳು ನಡೆಯುತ್ತಲೇ ಇವೆ. ಸರ್ಕಾರವು ಕಾಶ್ಮೀರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆಯಾದರೂ, ಅಲ್ಲಿನ ಸಾಮಾನ್ಯ ನಾಗರಿಕರು ಮತ್ತು ಪ್ರವಾಸಿಗರ ಮೇಲೆ ನಡೆಯುವ ದಾಳಿಗಳು ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತವೆ. ಪ್ರತಿ ದಾಳಿಯ ನಂತರವೂ ಪ್ರಧಾನಿ ಮೋದಿ ಅವರು “ಭಯೋತ್ಪಾದಕರನ್ನು ಮಟ್ಟ ಹಾಕುತ್ತೇವೆ” “ಮನೆಗೆ ನುಗ್ಗಿ ಕೊಲ್ಲುತ್ತೇವೆ” ಎಂಬ ಹಳೇ ಡೈಲಾಗ್‌ಗಳನ್ನೇ ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಇಂದಿಗೂ ಅಂತ್ಯವಾಗಿಲ್ಲ.
ಇನ್ನೊಂದೆಡೆ “ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೆಸೆಯುತ್ತೇವೆ” ಎಂಬ ಪ್ರಚಾರವನ್ನು ಬಿಜೆಪಿ ಪ್ರತಿ ಚುನಾವಣೆಯಲ್ಲಿಯೂ ಹೇಳುತ್ತದೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ ಎಂಬುದು ವಾಸ್ತವಾದರೂ ರಾಜಕೀಯ ಲಾಭಕ್ಕಾಗಿ ಈ ಹುಸಿ ಭರವಸೆಗಳನ್ನು ನೀಡುವುದು ಎಷ್ಟು ಸರಿ? ಅದಕ್ಕೂ ಮುಖ್ಯವಾಗಿ ಯೋಧರು ಮತ್ತು ಅವರ ಶೌರ್ಯವನ್ನು ತಮ್ಮ ರಾಜಕೀಯ ಪ್ರಚಾರಕ್ಕಾಗಿ ಬಳಸುವ ಈ ಬಿಜೆಪಿ, ತನಿಖೆಯಲ್ಲಿ ಆಗುವ ವಿಳಂಬದ ಬಗ್ಗೆ ಯಾಕೆ ಮಾತನಾಡಲ್ಲ?
ಪಹಲ್ಗಾಮ್ ಚಂದನ್ವಾರಿಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲೇ ದಾಳಿಗಳು ನಡೆಯುತ್ತಿರುವುದು ಸ್ಥಳೀಯ ಗುಪ್ತಚರ ಇಲಾಖೆಯ ವೈಫಲ್ಯವೇ? ಪ್ರವಾಸಿಗರ ಭದ್ರತೆಗಾಗಿ ನಿಯೋಜಿಸಲಾದ ಪಡೆಗಳ ಕಣ್ತಪ್ಪಿಸಿ ಭಯೋತ್ಪಾದಕರು ಹೇಗೆ ತಪ್ಪಿಸಿಕೊಳ್ಳುತ್ತಿದ್ದಾರೆ? ಇಂತಹ ದಾಳಿಗಳನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು, ಕೇವಲ ತಾತ್ಕಾಲಿಕವಾಗಿ ಪಡೆಗಳನ್ನು ಹೆಚ್ಚಿಸುವುದು ಎಷ್ಟು ಸರಿ? – ಹೀಗೆ ಹಲವು ಪ್ರಶ್ನೆಗಳು ಪಹಲ್ಗಾಮ್ ದಾಳಿಯ ವೇಳೆಯೂ ಎದ್ದಿವೆ. ಆದರೆ, ಪ್ರಶ್ನೆ ಕೇಳಿದವರು ‘ದೇಶದ್ರೋಹಿ’ಗಳೆನಿಸಿಕೊಂಡರು.
ವಾಸ್ತವದಲ್ಲಿ ನಮ್ಮ ದೇಶದ ರಾಜಕಾರಣದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ಎಂಬುದು ಈಗ ಕೇವಲ ಆಡಳಿತಾತ್ಮಕ ವಿಷಯವಾಗಿ ಉಳಿದಿಲ್ಲ. ಬದಲಾಗಿ ಭಾವನಾತ್ಮಕ ಚುನಾವಣಾ ಅಸ್ತ್ರಗಳಾಗಿ ಮಾರ್ಪಟ್ಟಿವೆ. 2019ರ ಪುಲ್ವಾಮ ದಾಳಿಯಿಂದ ಹಿಡಿದು ಇತ್ತೀಚಿನ ಪಹಲ್ಗಾಮ್ ಘಟನೆಗಳವರೆಗೆ, ಪ್ರತಿಯೊಂದು ರಕ್ತಪಾತವೂ ಪ್ರಧಾನಿ ಮೋದಿ ಅವರಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವೇದಿಕೆಯಾಗಿದೆ.
ಅದರಲ್ಲೂ ಯಾವುದೇ ಒಂದು ದೊಡ್ಡ ದಾಳಿಯಾದಾಗ ಗೃಹ ಇಲಾಖೆ ಅಥವಾ ರಕ್ಷಣಾ ಇಲಾಖೆಯ ನೈತಿಕ ಹೊಣೆಗಾರಿಕೆಯ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಇದನ್ನು ಬಿಟ್ಟು ಜನರ ಆಕ್ರೋಶವೆಂಬ ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದು, ಭಾವನಾತ್ಮಕವಾಗಿ ಆಟವಾಡಿ ಮತವನ್ನು ಸೆಳೆಯುವ ತಂತ್ರವಷ್ಟೇ ನಡೆಯುತ್ತದೆ. ಪ್ರಧಾನಿ ಮೋದಿ ಅವರಿಗೆ ಅಥವಾ ಈ ಬಿಜೆಪಿ ನಾಯಕರುಗಳಿಗೆ ಹುತಾತ್ಮ ಯೋಧರಿಗೆ ನಿಜವಾಗಿಯೂ ಗೌರವ ಸಲ್ಲಿಸಬೇಕು ಎಂಬ ಮನಸ್ಸಿದ್ದರೆ ಇಂತಹ ದಾಳಿಗಳು ಮರುಕಳಿಸದಂತೆ ನೋಡಿಕೊಳ್ಳಲಿ. ಹಾಗೆಯೇ ನಡೆದ ದಾಳಿಯ ತನಿಖೆಯನ್ನು ಪಾರದರ್ಶಕವಾಗಿ ಸಾರ್ವಜನಿಕರ ಮುಂದಿಡಲಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




