‘Scanning is the new Spinning’ ಎನ್ನುವ ಅಮೆರಿಕೆಯ ಕಾರ್ಲ್ ಬೆಂಗಳೂರಲ್ಲಿ ಮಾಡುತ್ತಿರುವುದೇನು?

Date:

Advertisements
ಜ್ಞಾನ ಎಂಬುದು ಎಲ್ಲರಿಗೂ ಸೇರಿದ್ದು. ಅದರ ಜನತಾಂತ್ರೀಕರಣ ಆಗಬೇಕಿದೆ. ನಿಃಶುಲ್ಕವಾಗಿ ಲಭಿಸಬೇಕಿದೆ ಎಂದು ಪ್ರತಿಪಾದಿಸುವ ಅಂತರ್ಜಾಲ ಪ್ರವರ್ತಕ ಕಾರ್ಲ್ ಮಾಲಮಡ್ (Carl Malamud). ಅಮೆರಿಕೆಯ ಎಂ.ಐ.ಟಿಯಲ್ಲಿ ಕಲಿತು ಜ್ಞಾನದ ಹೆಚ್ಚಳ ಮತ್ತು ಪ್ರಸಾರವನ್ನು ಹಲವು ಬಗೆಗಳಲ್ಲಿ ವಿಸ್ತರಿಸಿದಾತ. ಪುಸ್ತಕಗಳ ಡಿಜಟಲೀಕರಣವು ಚರಕ ಸುತ್ತಿ ನೂಲು ತೆಗೆಯುವ ಹೊಸ ಬಗೆಯ ಕಾಯಕತತ್ವ (Scanning is the new Spinning) ಎಂದು ಬಣ್ಣಿಸಿದಾತ. ಸದ್ಯ ಬೆಂಗಳೂರಿನಲ್ಲಿ ದೊಡ್ಡ ರೀತಿಯಲ್ಲಿ ಕಾರ್ಯನಿರತರಾಗಿದ್ದಾರೆ. ಇದೇ ಅಕ್ಟೋಬರ್ ಎರಡರ ಗಾಂಧೀ ಜಯಂತಿಯಂದು ಬೆಂಗಳೂರಿನ ಗಾಂಧೀ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಕಾರ್ಲ್ ಮಾಲಮಡ್ ಮಾಡಿದ ಇಂಗ್ಲಿಷ್ ಭಾಷಣದ ಕನ್ನಡ ಅನುವಾದ ಇಲ್ಲಿದೆ

ಗಾಂಧೀಜಿಯನ್ನು ನೆನೆದಾಗಲೆಲ್ಲ ನನ್ನ ಮನಸ್ಸಿನಲ್ಲಿ ಮೂಡುವುದು ದಕ್ಷಿಣ ಆಫ್ರಿಕಾ, ಅವರು ಅಲ್ಲಿ ನಡೆಸಿದ ಸತ್ಯಾಗ್ರಹ. ಮುಂದಾಳತ್ವವನ್ನು ಅವರು ಕಲಿತದ್ದು ದಕ್ಷಿಣ ಆಫ್ರಿಕಾದಲ್ಲಿ. ಅರಿವನ್ನು ಹಂಚಿಕೊಳ್ಳುವ ಮತ್ತು ಮಾನವ ಹಕ್ಕುಗಳ ಕುರಿತು ಎಚ್ಚರ ಮೂಡಿಸುವ ಮೂಲಕ ಗಾಂಧೀಜಿ ಅಲ್ಲಿನ ಜನರನ್ನು ಮುಟ್ಟಿದರು. ಬರವಣಿಗೆ, ಸುದ್ದಿವರದಿಗಳ ಮರುಸಂವಹನ, ಅವುಗಳ ವಿಶ್ಲೇಷಣೆ, ಸುದ್ದಿಗಳ ಸಾಧಕ ಬಾಧಕಗಳ ಕುರಿತ ಅಭಿಪ್ರಾಯಗಳು, ಬದಲಾವಣೆಯನ್ನು ತರುವ ಮೂಲಭೂತ ಮಾರ್ಗೋಪಾಯಗಳು, ಹಾಗೂ ಅಧಿಕಾರವನ್ನು ಪ್ರಶ್ನಿಸುವ ಬಗೆಯನ್ನು ಕಲಿಸಿದ್ದೇ ಅವರ ಗೆಲುವು. ಇಂದಿನ ದಿನಗಳಲ್ಲಾಗಿದ್ದರೆ ಅವರು ಅಂತರ್ಜಾಲವನ್ನು ಆಲಿಂಗಿಸಿಕೊಳ್ಳುತ್ತಿದ್ದರು. ಆದರೆ ಅಂತರ್ಜಾಲ ಕುರಿತು ಕಠಿಣ ನಿಲುವುಗಳನ್ನೂ ಹೊಂದಿರುತ್ತಿದ್ದರು. ಈ ಕುರಿತು ನನಗೆ ಯಾವ ಅನುಮಾನವೂ ಇಲ್ಲ.

ಅವರು ಮಾಹಿತಿಯ ಚಿಲುಮೆಯೇ ಆಗಿದ್ದರು. ಇಂಡಿಯನ್ ಒಪಿನಿಯನ್ ಪತ್ರಿಕೆಯಲ್ಲಿ ಒಡೆದು ಮೂಡಿರುವ ಸಂಗತಿಯಿದು. ಅವರ ಧೈರ್ಯ ದಿಟ್ಟತನದ ಮೂಲ ಅರಿವೇ ಆಗಿದ್ದಿತು. ದಿಟ್ಟತನವೇ ಅವರಿಗೆ ಸ್ವಾತಂತ್ರ್ಯವನ್ನು ನೀಡಿತ್ತು. ಅದು ಅನಿರ್ಬಂಧಿತ ಸ್ವಾತಂತ್ರ್ಯವೇನೂ ಆಗಿರಲಿಲ್ಲ ಎಂಬುದು ಹೌದು. ಹೋರಾಟ ಮುಂದುವರೆಯಿತು. ಇಂದಿಗೂ ಮುಂದುವರೆದಿದೆ.

ಜ್ಞಾನವು ಸ್ವಾತಂತ್ರ್ಯದೆಡೆಗೆ ಮುನ್ನಡೆಸುವ ದಾರಿದೀಪ ಎಂಬ ಗಾಂಧೀಜಿ ಒಳನೋಟ ಹೊಸದೇನೂ ಅಲ್ಲ. ಇಲ್ಲಿ ಕರ್ನಾಟಕದಲ್ಲಿ ಬಸವಣ್ಣ ಮತ್ತು ಶರಣ ಚಳವಳಿಯನ್ನೇ ನೋಡೋಣ. ಅನುಭವ ಮಂಟಪವೆಂಬ ಸಂಸತ್ತನ್ನೇ ಕಟ್ಟಿದ್ದ ಚಳವಳಿಯಿದು. ಸಮಾನತೆ, ಶಿಕ್ಷಣವನ್ನು ಆಧರಿಸಿದ ಈ ಚಳವಳಿ ವಚನಗಳ ಮಹಾವಿಕಾಸವನ್ನೇ ಅರಳಿಸಿತು. ಕ್ರೂರವಾಗಿ ದಮನಕ್ಕೆ ತುತ್ತಾದರೂ ಈ ಚಳವಳಿಯ ಚೈತನ್ಯ ನಮ್ಮ ನಡುವೆ ಇಂದಿಗೂ ಜೀವಂತ.

Advertisements

ಸ್ವಾತಂತ್ರ್ಯ ಹೋರಾಟವೆಂಬುದು ಕ್ಷಣಮಾತ್ರದಲ್ಲಿ ಗೆದ್ದುಬಿಡುವ ಅಥವಾ ಸೋತುಹೋಗುವ ಸಮರವಲ್ಲ. ಅದು ನಮ್ಮ ನಿರಂತರ ಎಚ್ಚರವನ್ನು ಬೇಡುವಂತಹುದು. ಮಾರ್ಟಿನ್ ಲೂಥರ್ ಕಿಂಗ್ ಹೇಳಿರುವಂತೆ ಬದಲಾವಣೆ ಎಂಬುದು ಅನಿವಾರ್ಯವೆಂಬ ಗಾಲಿಗಳ ಮೇಲೆ ಸಲೀಸಾಗಿ ಉರುಳಿ ಬರುವಂತಹುದಲ್ಲ, ಅದು ನಿರಂತರ ಸಂಘರ್ಷದೊಂದಿಗೆ ಮಾತ್ರವೇ ಆಗುವಂತಹುದು. ತಮ್ಮ ಕೆಲಸ ಕಾರ್ಯಗಳ ಕೇಂದ್ರದಲ್ಲಿ ಗಾಂಧೀಜಿ ಎರಡು ಬಹಳ ಸರಳ ಮತ್ತು ಸಶಕ್ತ ಸಾಧನಗಳನ್ನು ಅಳವಡಿಸಿಕೊಂಡಿದ್ದರು. ಮೊದಲನೆಯದು ಸಾರ್ವಜನಿಕ ಸೇವೆ. ಸಾರ್ವಜನಿಕ ಸೇವೆ ಸಮುದಾಯ ಪ್ರಯೋಜಕ. ನಮ್ಮ ಕಾರ್ಯನಿರ್ವಹಣೆಯ ಬೇರ್ಪಡಿಸಲಾಗದ ಅಂಗ ಹಾಗೂ ನಾಗರಿಕರಾಗಿ ನಮ್ಮ ಆದ್ಯ ಕರ್ತವ್ಯ ಕೂಡ. ಅವರು ಅಳವಡಿಸಿಕೊಂಡಿದ್ದ ಎರಡನೆಯ ಸಾಧನವು ಬೆವರು ಬಸಿದು ದುಡಿದು ಅನ್ನ ಸಂಪಾದಿಸುವುದು. ಬೈಬಲ್ ಬೋಧಿಸುವುದೂ ಇದೇ (ಬ್ರೆಡ್ ಲೇಬರ್) ಮೌಲ್ಯವನ್ನು. ನಿತ್ಯ ನಿಜ ಕಾಯಕವನ್ನು ಮಾಡಿ ಅಂದಿನ ಅನ್ನ ಸಂಪಾದಿಸಬೇಕು. ಎಲ್ಲ ಬಗೆಯ ಕಾಯಕವನ್ನೂ ಗೌರವಿಸಬೇಕು ಮತ್ತು ಎಲ್ಲ ಕಾಯಕಜೀವಿಗಳನ್ನೂ ಆದರಿಸಬೇಕು. ಬೈಬಲ್ ನ ಈ ಬೋಧನೆ ಮತ್ತು ಕಾಯಕವೇ ಕೈಲಾಸ ಎಂಬ ವಚನ ಸಂದೇಶದ ನಡುವಣ ಸಾಮ್ಯತೆ ಅಸಾಧಾರಣ. ಪೂಜೆ ಅಥವಾ ಆರಾಧನೆಯೊಂದೇ ಸಾಲದು, ಭಕ್ತಿಯ ಪ್ರಕಟರೂಪವಾಗಿ ಕಾಯಕವನ್ನೂ ಮಾಡಬೇಕು. ತನಗೆ ತಾನು ನೆರವಾಗಬಲ್ಲವನಿಗೆ ದೇವರೂ ನೆರವಾಗುತ್ತಾನೆ ಎಂಬಂತೆ.

ದುಡಿದು ಅನ್ನ ಉಣ್ಣುವ ತತ್ವ ಕುರಿತು ಧೇನಿಸುವಾಗ ಚರಕ ಮತ್ತು ಗಾಂಧೀಜಿ ದಿನನಿತ್ಯ ಶ್ರಮವಹಿಸಿ ಚರಕ ತಿರುಗಿಸಿ ನೂಲು ತೆಗೆಯುವ ವಿಗ್ರಹರೂಪ ನಿಮ್ಮ ಕಣ್ಣ ಮುಂದೆ ಬಂದೀತು. ನೀಲಿ ಮತ್ತು ಹತ್ತಿ ಬೆಳೆಗಾರರು ತಮ್ಮ ಸರಕುಗಳನ್ನು ಮ್ಯಾಂಚೆಸ್ಟರಿಗೆ ಕಳಿಸಿ ಅದು ಅಲ್ಲಿ ಬಟ್ಟೆಯಾಗಿ ತಯಾರಾಗಿ ವಾಪಸು ಬಂದು ಅದೇ ರೈತರಿಗೆ ಮಾರಾಟ ಮಾಡಲಾಗುತ್ತಿದ್ದ ಸರಪಳಿಯನ್ನು ತುಂಡರಿಸಿದ್ದು ಇದೇ ಚರಕ.

DSC1413
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಚ್‌ ಕೆ ಪಾಟೀಲ್‌ ಜೊತೆ ಕಾರ್ಲ್ ಮಾಲಮಡ್ :Photo Credit: K. MURALI KUMAR

ಇದೊಂದು ವಿಷವೃತ್ತವಾಗಿತ್ತು. ರೈತರಿಂದ ಬಲವಂತವಾಗಿ ಹತ್ತಿ ಮತ್ತು ನೀಲಿ ಕೃಷಿ ಮಾಡಿಸಲಾಗುತ್ತಿತ್ತು. ಅದಕ್ಕಾಗಿ ಬಿತ್ತನೆ ಬೀಜ ಖರೀದಿಗೆ ಸಾಲ ಪಡೆಯುವುದೂ ಕಡ್ಡಾಯವಾಗಿತ್ತು. ಪರಿಣಾಮವಾಗಿ ರೈತನ ಸುತ್ತ ಹೆಣೆದ ಸಾಲದ ಬಲೆ ಮತ್ತು ಕ್ಷಾಮವು ಭಾರತವನ್ನು ತೀವ್ರ ದಾರಿದ್ರ್ಯಕ್ಕೆ ನೂಕಿತು. ಆದರೆ ಇದೇ ವಿಷವೃತ್ತವು ಬ್ರಿಟನ್ನಿಗೆ ಅಪಾರ ಸಂಪತ್ತನ್ನು ಹರಿಸಿತು, ಭಾರತದ ಜನತೆಯನ್ನು ಬಡತನ ಬಲವಾಗಿ ಸುತ್ತಿಕೊಳ್ಳುತ್ತಲೇ ಹೋಯಿತು. ಚರಕ ನೂಲುವುದರಿಂದ ಮತ್ತು ದುಡಿದು ಉಣ್ಣುವುದರಿಂದ (ಬ್ರೆಡ್ ಲೇಬರ್) ಈ ವಿಷವೃತ್ತವನ್ನು ಒಡೆಯಲು ಪರಸ್ಪರ ನೆರವಾಯಿತು ಭಾರತದ ಜನತೆ. ದೇಶ ಎಚ್ಚರಗೊಂಡಿತು.

ಆದರೆ ಗಾಂಧೀಜಿ ಲೋಕೋಪಯೋಗಿ ಕಾರ್ಯವನ್ನು ಮೊದಲು ಆರಂಭಿಸಿದ ದಕ್ಷಿಣ ಆಫ್ರಿಕಾದಲ್ಲಿ ಮುದ್ರಣ ಕಾರ್ಯಕ್ಕೆ ಮುನ್ನ ನಡೆಯುವ ಅಕ್ಷರಗಳ ಅಚ್ಚುಮೊಳೆ ಜೋಡಣೆ ‘ಬ್ರೆಡ್ ಲೇಬರ್’ ಆಗಿತ್ತೇ ವಿನಾ ಚರಕ ಸುತ್ತಿ ನೂಲು ತೆಗೆಯುವುದಲ್ಲ. ಮುದ್ರಣ ಯಂತ್ರವೆಂಬುದು ಅರಿವನ್ನು ಹಬ್ಬಿಸುವ ಸಾಧನವಾಗಿತ್ತು. ಈ ಮೂಲಕ ವ್ಯಕ್ತಿಗಳು ತಮ್ಮನ್ನು ತಾವೇ ಶಿಕ್ಷಣವಂತರಾದರು, ಜನಸಮುದಾಯವಾದರು, ಒಗ್ಗಟ್ಟಾದ ಜನಸಮೂಹವಾದರು, ಸತ್ಯಾಗ್ರಹ ಮಾಡಿ ಗೆದ್ದವರಾದರು. ಜ್ಞಾನವು ಸತ್ಯಕ್ಕೆ ಜನ್ಮ ನೀಡಿತು. ಸತ್ಯದಿಂದ ಸ್ವಾತಂತ್ರ್ಯ ಹುಟ್ಟಿತು.

ಗಾಂಧೀ ಭವನದಲ್ಲಿ ನಾವು ಅರಿವನ್ನು ಹಿಗ್ಗಿಸಿ ಪ್ರಸಾರ ಮಾಡತೊಡಗಿದ್ದೇವೆ. ನಮ್ಮನ್ನು ನಾವು ಅರಿವಿನ ಸೇವಕರು (ಸರ್ವೆಂಟ್ಸ್ ಆಫ್ ನಾಲೆಜ್) ಎಂದು ಕರೆದುಕೊಳ್ಳುತ್ತೇವೆ. ಪ್ರತಿ ತಿಂಗಳೂ 14 ಲಕ್ಷ ಪುಟಗಳ ಡಿಜಿಟೀಕರಣ ಮಾಡುತ್ತಿದ್ದೇವೆ. ನಮ್ಮ ಈ ಸಾಮರ್ಥ್ಯ ಸದ್ಯದಲ್ಲೇ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಅರಿವಿಗೆ ಸಂಪರ್ಕ ಸೇತುವೆಯನ್ನು ಕಟ್ಟುವ ಈ ಕೆಲಸದಲ್ಲಿ ನಮ್ಮಲ್ಲಿ ಬಹುತೇಕರು ತೊಡಗಿಕೊಂಡು ವರ್ಷಗಳೇ ಉರುಳಿವೆ. ಗಾಂಧೀ ಭವನದಲ್ಲಿ ಪ್ರಗತಿಯಲ್ಲಿರುವ ಬೆಂಗಳೂರಿನ ನಮ್ಮ ಈಗಿನ ಪ್ರಯತ್ನಗಳು ಆರಂಭ ಆದದ್ದು ಭಾರತೀಯ ವಿಜ್ಞಾನಗಳ ಅಕಾಡೆಮಿಯಲ್ಲಿ.

ಮಂಗಳೂರಿನಲ್ಲಿ ನಾಲ್ಕು ಸಾವಿರದಷ್ಟು ಕೊಂಕಣಿ ಪುಸ್ತಕಗಳನ್ನು ‘ಆನ್ ಲೈನ್’ಗೆ ತರಲು ನೆರವಾಗಿದ್ದೇವೆ. ಚೆನ್ನೈನ ರಾಜಾ ಮುತ್ತಯ್ಯ ಗ್ರಂಥಾಲಯದಲ್ಲೂ ನಮ್ಮ ಕೆಲಸ ಮುಂದುವರೆದಿದೆ. ಇದೇ ರೀತಿ ಸಂಸ್ಕೃತ ಮತ್ತು ತೆಲುಗು ವಿದ್ವಾಂಸರೊಂದಿಗೂ ನಮ್ಮ ಕೆಲಸ ನಡೆದಿದೆ. 150 ಭಾಷೆಗಳಲ್ಲಿನ ಸುಮಾರು ಎಂಟು ಲಕ್ಷ ಪುಸ್ತಕಗಳ ಸಂಗ್ರಹದ ‘ಮೆಟಾಡೇಟಾ’ದ ಸುಧಾರಣೆಯಲ್ಲಿ ತೊಡಗಿದ್ದೇವೆ.

ಬೆಂಗಳೂರಿನಲ್ಲಿ ನಮ್ಮ ಕೆಲಸ ಕಾರ್ಯದ ಬಹುತೇಕ ಶ್ರೇಯಸ್ಸು ನನ್ನ ಗೆಳೆಯ ಮತ್ತು ಸಹೋದ್ಯೋಗಿ ಓಂ ಶಿವಪ್ರಕಾಶ್ ಅವರಿಗೆ ಸಲ್ಲುತ್ತದೆ. ಕನ್ನಡದ ಸಾವಿರಾರು ಪುಸ್ತಕಗಳು ಆನ್ ಲೈನ್ ನಲ್ಲಿ ಲಭ್ಯವಾಗಲು ಮುಖ್ಯ ಕಾರಣಕರ್ತರು ಅವರು. ವಿಕಿಪೀಡಿಯಾ ಮುಂತಾದ ಸಂಘಟನೆಗಳಿಗೆ ನೆರವಾಗಿರುವ ಅವರ ಸೇವೆ ಹಲವಾರು ವರ್ಷಗಳಿಂದ ನಡೆದಿದೆ. ಕೇವಲ ಡಿಜಿಟಲೀಕರಣವಲ್ಲದೆ ಅತ್ಯುತ್ತಮ ಗುಣಮಟ್ಟದ ನಿಘಂಟುಗಳು, ಕನ್ನಡ ಭಾಷೆಗೆ ಹೊಸ ಫಾಂಟ್ ಗಳನ್ನು ರೂಪಿಸುವುದೇ ಅಲ್ಲದೆ ಹಲವಾರು ಕೆಲಸ ಕಾರ್ಯ ಮಾಡಿಕೊಟ್ಟಿದ್ದಾರೆ. ಡಿಜಿಟಲೀಕರಣದ ಆಚೆಗೂ ಅವರ ಸೇವೆಯ ವಿಸ್ತಾರ ದೊಡ್ಡದು.

ತಮ್ಮ ಹಳೆಯ ಕೃತಿಗಳು ವಾಣಿಜ್ಯೇತರ ಬಳಕೆಗೆ ಕ್ರಿಯೇಟಿವ್ ಕಾಮನ್ ಲೈಸೆನ್ಸ್ ವ್ಯವಸ್ಥೆಯಡಿಯಲ್ಲಿ ಯಾವುದೇ ಶುಲ್ಕವಿಲ್ಲದೆ ಲಭಿಸುವಂತಾಗಲು ಹಲವು ಪ್ರಕಾಶಕರ ಮನ ಒಲಿಸಿದ್ದಾರೆ. ಅವರ ಈ ಕೆಲಸ ಕನ್ನಡಿಗರೆಲ್ಲರ ಮನ ಗೆದ್ದಿದೆ. ಅವರೊಂದಿಗೆ ಕಲೆತು ಕೆಲಸ ಮಾಡಲು ನನಗೆ ಹೆಮ್ಮೆಯೆನಿಸಿದೆ. ದೆಹಲಿಯ ಅಂಬೇಡ್ಕರ್ ಕಾನೂನು ಶಾಲೆಯ ಸ್ಥಾಪಕ ಡೀನ್, ಪ್ರತಿಷ್ಠಿತ ಇನ್ಫೋಸಿಸ್ ಬಹುಮಾನ ವಿಜೇತರೂ, ಇಂಟೆಲೆಕ್ಚ್ಯುವಲ್ ಪ್ರಾಪರ್ಟಿ ಮತ್ತು ಫಿಲ್ಮ್ ಸ್ಟಡೀಸ್ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಯಾದ ಡಾ.ಲಾರೆನ್ಸ್ ಲಿಯಾಂಗ್, ‘ಇಂಡಿಯಾ ಕಾನೂನ್ʼ ನಿರ್ಮಿಸಿ ನ್ಯಾಯಾಲಯಗಳ ತೀರ್ಪುಗಳು, ವಿಧಾನಮಂಡಲಗಳ ಕಾಯಿದೆಗಳು, ಅಧಿಕೃತ ಗೆಜೆಟ್ ಗಳು ಮುಂತಾದವುಗಳನ್ನು ಕಾನೂನು ಕಾಯಿದೆ ವೃತ್ತಿಯವರಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಉಚಿತವಾಗಿ ಎಟುಕಿಸಿರುವ ಡಾ.ಸುಶಾಂತ ಸಿನ್ಹಾ ನಮ್ಮೊಂದಿಗಿದ್ದಾರೆ. ಈ ಇಬ್ಬರೂ ಮಹನೀಯರು ನಮ್ಮ ಪ್ರಯತ್ನಗಳ ಅವಿಭಾಜ್ಯ ಅಂಗವಾಗಿದ್ದಾರೆ. ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಬಹುತೇಕ ಪುಸ್ತಕ ಸಂಗ್ರಹವನ್ನು ನಾವು ಈಗಾಗಲೇ ಡಿಜಿಟಲೀಕರಿಸಿದ್ದೇವೆ. ಇಲ್ಲಿನ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಗ್ರಂಥಾಲಯದ ಎಲ್ಲ ಪುಸ್ತಕಗಳನ್ನೂ ಕಳೆದ ವರ್ಷ ಡಿಜಿಟಲ್ ರೂಪಕ್ಕೆ ತಂದಿದ್ದೇವೆ. ಈ ಎಲ್ಲ ಪುಸ್ತಕಗಳನ್ನು ದೇಶದ ಯಾವುದೇ ಮೂಲೆಯಲ್ಲಿನ ಕಣ್ಣಿಲ್ಲದವರು ಓದುವಂತೆ ವ್ಯವಸ್ಥೆ ಮಾಡಿದ್ದೇವೆ. ಇದೀಗ ಗಾಂಧೀ ಭವನದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಜ್ಞಾನವು ಎಲ್ಲರಿಗೂ ಎಟುಕುವಂತೆ ಶ್ರಮಿಸಿದ್ದೇವೆ. ನಮ್ಮ ಗ್ರಂಥಾಲಯಗಳ ಸಿರಿಸಮೃದ್ಧಿಯು ಎಲ್ಲರಿಗೂ ಲಭಿಸಬೇಕೆಂಬ ಎಂಬ ಆಶಯದ ಬೇರು ಗಾಂಧೀಜಿ ತತ್ವದಲ್ಲಿದೆ. ಅವರು ಲಂಡನ್ ನಲ್ಲಿದ್ದಾಗ ಮೂರು ಪುಸ್ತಕಗಳು ಅವರ ಕಣ್ಣು ತೆರೆಸಿ ಅವರ ಬದುಕನ್ನೇ ಬದಲಿಸಿದವು. ಮೊದಲನೆಯದು ಭಗವದ್ಗೀತೆ, ಎರಡನೆಯದು ಬೈಬಲ್, ಮೂರನೆಯದು Snell on Equity ಎಂಬ ಕಾನೂನು ವಿದ್ಯಾರ್ಥಿಗಳ ಪಠ್ಯಪುಸ್ತಕ. ಧರ್ಮದರ್ಶಿತ್ವ (Trusteeship) ಎಂಬ ಕಾನೂನು ಪರಿಕಲ್ಪನೆಯನ್ನು ಗಾಂಧೀಜಿ ಅವರು ಸ್ನೆಲ್ ಕೃತಿಯಿಂದ ಕಲಿತರು. ಮಹಾನ್ ಐಶ್ವರ್ಯವೆಂಬುದು ನ್ಯಾಸಕ್ಕಲ್ಲದೆ ಯಾವುದೇ ಶ್ರೀಮಂತನಿಗೆ ಸೇರಿದ್ದಲ್ಲ ಮತ್ತು ‘ಸಮುದಾಯದ ಸ್ವತ್ತು ಹಾಗೂ ಸಮುದಾಯದ ಕಲ್ಯಾಣಕ್ಕಾಗಿಯೇ ಬಳಕೆ ಮಾಡತಕ್ಕದ್ದು’ ಎಂಬ ತತ್ವಕ್ಕೆ ಗಾಂಧೀಜಿಯನ್ನು ಮುನ್ನಡೆಸಿದ ಪುಸ್ತಕವಿದು.

ಈ ಮಾತು ಎಲ್ಲ ಗ್ರಂಥಾಲಯಗಳಿಗೂ ಅನ್ವಯಿಸುತ್ತದೆ. ಗ್ರಂಥಾಲಯಗಳು ಜ್ಞಾನದ ಧರ್ಮದರ್ಶಿಗಳು. ಅವುಗಳದು ಗ್ರಂಥ ಶ್ರೀಮಂತಿಕೆ. ಆದರೆ ಸಮುದಾಯದ ಬಳಕೆಗಾಗಿ ಆ ಗ್ರಂಥಗಳನ್ನು ಇಟ್ಟುಕೊಂಡಿರುತ್ತವೆ. ಆದರೆ ನಾವು ಜನತಂತ್ರ ವ್ಯವಸ್ಥೆಯಲ್ಲಿರುವ ಕಾರಣ ಈ ಪರಿಕಲ್ಪನೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ನಾಮಮಾತ್ರ ಜಮೀನುದಾರಿ ನಾಗರಿಕರಾದ ನಾವುಗಳು ಸರ್ಕಾರದ ಒಡೆಯರು ಹೌದು, ಆದರೆ ವಾಸ್ತವದಲ್ಲಿ ನಮ್ಮ ಜನತಂತ್ರವನ್ನು ಭಾವೀ ತಲೆಮಾರುಗಳ ಪ್ರಯೋಜನಕ್ಕೆಂದು ನ್ಯಾಸದಲ್ಲಿ (ಟ್ರಸ್ಟ್) ಇಟ್ಟುಕೊಂಡಿರುತ್ತೇವೆ ಅಷ್ಟೇ.

ಈ ಧರ್ಮದರ್ಶಿತ್ವವು ಗಂಭೀರ ಜವಾಬ್ದಾರಿ. ಶ್ರದ್ಧೆ ಮತ್ತು ಹುಮ್ಮಸ್ಸಿನಿಂದ ಜರುಗಿಸಬೇಕಾದದ್ದು. ಬೆಂಗಳೂರಿನ ವಿಧಾನಸೌಧದ ಗೋಡೆಯ ಮೇಲೆ ಬರೆದಿರುವಂತೆ ‘ಸರ್ಕಾರದ ಕೆಲಸವೆಂಬುದು ದೇವರ ಕೆಲಸ’. ಲೋಕೋಪಯೋಗಿ ಕಾರ್ಯ, ಬ್ರೆಡ್ ಲೇಬರ್ (ಕಾಯಕ ತತ್ವ) ಹಾಗೂ ಧರ್ಮದರ್ಶಿತ್ವ ಎಂಬ ಮೂರು ತತ್ವಗಳು ನಮ್ಮ ಕೆಲಸ ಕಾರ್ಯಗಳ ದಿಕ್ಸೂಚಿಗಳಾಗಬೇಕು. ಈ ಪರಿಕಲ್ಪನೆಗಳು ಸರ್ವರಿಗೂ ಪ್ರಸ್ತುತವೆನಿಸಬೇಕು. ಲೋಕೋಪಯೋಗಿ ಕಾರ್ಯ ಮತ್ತು ಬ್ರೆಡ್ ಲೇಬರ್ ಗಾಗಿ ಸತ್ಯದೊಂದಿಗೆ ನಾವೆಲ್ಲರೂ ನಮ್ಮದೇ ಪ್ರಯೋಗಗಳನ್ನು ಮಾಡಿಕೊಳ್ಳಬೇಕು. ನಮ್ಮ ಪಾಲಿಗೆ ಈ ಕಾರ್ಯದ ಅರ್ಥ ಜ್ಞಾನದ ಹೆಚ್ಚಳ ಮತ್ತು ಪ್ರಸಾರಕ್ಕಾಗಿ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವುದೇ ಆಗಿದೆ.

ಬಾಬ್ ಡೈಲನ್ ಹೇಳುವಂತೆ ನೀವು ಯಾರೇ ಆಗಿರಲಿ, ಏನನ್ನೇ ಮಾಡುತ್ತಿರಲಿ, ಯಾರೊಬ್ಬರಿಗಾದರೂ ಉಪಯೋಗ ಆಗುವಂತಹ ಸೇವೆ ಅಥವಾ ಕೆಲಸದಲ್ಲಿ ತೊಡಗಿರಬೇಕು. ಜ್ಞಾನದ ಅಥವಾ ಅರಿವಿನ ಸೇವಕರ (Servants of Knowledge) ಪಾಲಿಗೆ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಟಲೀಕರಿಸುವುದು ಚರಕದಿಂದ ನೂಲು ತೆಗೆಯುವುದಕ್ಕೆ ಸಮನಾದ ಸೇವೆ (Scanning is the new Spinning). ಅದುವೇ ನಮ್ಮ ಪಾಲಿನ ಕಾಯಕವೇ ಕೈಲಾಸ ಅಥವಾ ಬೈಬಲ್ ಸಾರುವ ದುಡಿದುಣ್ಣುವ Bread Labour ಅಥವಾ ನಮ್ಮ ಲೋಕೋಪಯೋಗಿ ಕಾರ್ಯ. ಜ್ಞಾನವು ಸಾರ್ವತ್ರಿಕವಾಗಿ ಲಭಿಸುವಂತೆ ಮಾಡುವುದು ನಮ್ಮ ಕಾಲಮಾನದ ಮಹಾನ್ ಆಶ್ವಾಸನೆ. ಭವ್ಯ ಭವಿತವ್ಯದ ಬಾಗಿಲುಗಳನ್ನು ತೆರೆಯುವ ಬೀಗದ ಕೈ. ಜ್ಞಾನವನ್ನು ತನ್ನ ಪಾಡಿಗೆ ತನ್ನನ್ನು ಬಿಟ್ಟರೆ ಸಾಲದು. ಅದನ್ನು ಕ್ರಿಯೆಯ ಜೊತೆ ಬೆಸೆಯಬೇಕು. ಗಾಳಿಯು ಬೆಂಕಿಯ ಕೈ ಹಿಡಿಯದಿದ್ದರೆ, ಹೇಗೆ ಚಲಿಸಬೇಕೆಂದು ಅದಕ್ಕೆ ತೋಚುವುದಿಲ್ಲ ಎನ್ನುತ್ತಾರೆ ದಾಸಿಮಯ್ಯ. ಬ್ರೆಡ್ ಲೇಬರ್ (ಕಾಯಕ ತತ್ವ) ಮತ್ತು ಲೋಕೋಪಯೋಗಿ ಕಾರ್ಯಗಳು ಕ್ರಿಯೆಯ ಅತ್ಯಗತ್ಯ ಅಂಗಗಳು. ಜ್ಞಾನವೆಂಬುದು ಗಾಳಿಯಾದರೆ, ಕ್ರಿಯೆಯೇ ಬೆಂಕಿ. ನಮ್ಮನ್ನು, ನಮ್ಮ ಮಕ್ಕಳನ್ನು, ನಮ್ಮ ಸೋದರ ಬಂಧುಗಳನ್ನು ಹೇಗೆಲ್ಲ ಸುಶಿಕ್ಷಿತರನ್ನಾಗಿಸುತ್ತೇವೆ ಎಂಬುದರ ಬೀಗದ ಕೈ ಜ್ಞಾನ. ಜ್ಞಾನವೇ ಅವಕಾಶ, ಜ್ಞಾನವೇ ಜನತಂತ್ರದ ಬೀಗದೆಸಳು. ಜ್ಞಾನವೇ ಸ್ವಾತಂತ್ರ್ಯದ ಬೀಗದ ಕೈ. ಈ ಬಾಗಿಲುಗಳನ್ನು ತಟ್ಟೋಣ. ಎಲ್ಲರೂ ಜೊತೆ ಜೊತೆಯಾಗಿ ಈ ಬಾಗಿಲಗಳನ್ನು ಹಾದು ನಡೆಯೋಣ.

ಅನುವಾದ : ಡಿ ಉಮಾಪತಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X