ಅಖಿಲ ಭಾರತ ವೀರಶೈವ ಮಹಾಸಭಾ ರಚನೆಗೊಂಡು ಜಾತಿ ರಾಜಕಾರಣ ಮಾಡುತ್ತಾ ತನ್ನಲ್ಲಿಯ ಕುಂಬಾರ, ಕಮ್ಮಾರ, ಮಡಿವಾಳ, ಹಡಪದ, ಸಮಗಾರ, ಜಾಡರು, ನಾಯಿಂದ, ಮಾಲಗಾರ... ಹೀಗೆ ಹತ್ತು ಹಲವಾರು ದುಡಿಯುವ ವರ್ಗದವರನ್ನು ಅಪ್ಪಿಕೊಳ್ಳದೇ ದೂರವಿಡುತ್ತಲೇ ಬರಲಾಗಿದೆ. ಈಗ ಜಾತಿ ಆಧಾರಿತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಜಾರಿಗೆ ಶಾಮನೂರು ಶಿವಶಂಕರಪ್ಪ ಅವರ ವಿರೋಧ ಇದೇ ಹುನ್ನಾರದ ಭಾಗವಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ, ದೇಶದಲ್ಲೇ ಮಾದರಿ ವರದಿ ಎಂದು ಹೇಳಲಾಗುತ್ತಿರುವ ಜಾತಿ ಆಧಾರಿತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಜಾರಿಗೆ ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
“ಜಾತಿ ಗಣತಿ ವರದಿಯು ಅವಾಸ್ತವಿಕವಾಗಿದ್ದು, ತಮಗೆ ಬೇಕಾದಂತೆ ಬರೆಸಲಾಗಿದೆ” ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೇ, “ವರದಿಯನ್ನು ಒಪ್ಪಲು ಸಾಧ್ಯವೇ ಇಲ್ಲ” ಎಂದಿದ್ದಾರೆ. ಶಾಮನೂರು ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಅಲ್ಲದೆ ಹೊಸ ಗಣತಿಯನ್ನು ನಡೆಸಲು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ.
ಸರ್ಕಾರದ ಭಾಗವಾಗಿರುವ ಶಾಮನೂರು ಶಿವಶಂಕರಪ್ಪ ಅವರ ವಿರೋಧ ಸಿಎಂ ಸಿದ್ದರಾಮಯ್ಯ ಅವರಿಗೆ ಬಹುದೊಡ್ಡ ಸವಾಲಾಗಿದೆ. ಜಾತಿ ಗಣತಿ ವರದಿ ದೇಶದಲ್ಲೇ ಜಾರಿಯಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾಧಿಸುತ್ತಲೇ ಬಂದಿದ್ದರೂ ರಾಜ್ಯದ ಜಾತಿ ಗಣತಿ ವರದಿ ಬಗ್ಗೆ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿಕೊಂಡೇ ಬರುತ್ತಿದ್ದಾರೆ. ಶಾಮನೂರು ಅವರ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವ ಎದೆಗಾರಿಕೆಯನ್ನು ಯಾವ ಕಾಂಗ್ರೆಸ್ ನಾಯಕರು ಇದುವರೆಗೂ ತೋರಿಲ್ಲ. ವರದಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಎಷ್ಟೇ ಮಾತನಾಡಿದರೂ ಶಾಮನೂರು ವಿರುದ್ಧ ಇದುವರೆಗೂ ಯಾವುದೇ ಕ್ರಮವಾಗಿಲ್ಲ.
2015ರಿಂದ ಸುಮಾರು 10 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಭಾರೀ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ದಿನದಿಂದಲೇ ‘ವರದಿ ಸ್ವೀಕರಿಸುವ ನನ್ನ ನಿರ್ಧಾರ ಅಚಲ’ ಎಂದು ಸಿದ್ದರಾಮಯ್ಯ ಹೇಳಿಕೊಂಡೇ ಬಂದಿದ್ದರು. ಆದರೆ, ಇದೇ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮಠಾಧೀಶರು, ಸಚಿವರು, ಶಾಸಕರು ವರದಿ ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳೂ ಆದ ಸಚಿವ ಈಶ್ವರ ಖಂಡ್ರೆ, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ವರದಿಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರ ಸಹ ಸಲ್ಲಿಸಿದ್ದರು.
ಆದರೆ, ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ದಿಟ್ಟ ನಿರ್ಧಾರ ಮಾಡಿ ವರದಿಯನ್ನು ಸ್ವೀಕರಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿ ಪ್ರತಿಗಳನ್ನು ಸಲ್ಲಿಸುವ ಮೂಲಕ ವರದಿ ಸಲ್ಲಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ವರದಿ ಈಗ ಸರ್ಕಾರದ ಕೈ ಸೇರಿದೆ. ಸಚಿವ ಸಂಪುಟದಲ್ಲಿ ತೆರೆಯಲಾಗಿದೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಭಾರೀ ಬದಲಾವಣೆಗೆ ಕಾರಣವಾಗುವ ಅಂಶಗಳನ್ನು ಮತ್ತು ಶಿಫಾರಸುಗಳನ್ನು ವರದಿ ಒಳಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಜಾತಿ ಗಣತಿಯನ್ನು ‘ಕಸ’ ಎಂದರೂ ಒಬಿಸಿಗಳ ಮೌನ ಸರಿಯಲ್ಲ: ಎ.ನಾರಾಯಣ
ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ, ಜಾತಿ ಸಮೀಕ್ಷೆ ನಡೆಸಲು 2014ರಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್. ಕಾಂತರಾಜ ಅಧ್ಯಕ್ಷತೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಆಯೋಗ ರಚನೆ ಮಾಡಿತ್ತು. ಆಗ ಸಚಿವ ಸಂಪುಟದಲ್ಲಿ ಶಾಮನೂರ ಶಿವಶಂಕರಪ್ಪ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಅವರೇ ಸಚಿವರಾಗಿದ್ದರು. ಕಾಂತರಾಜ ನೇತೃತ್ವದ ಆಯೋಗ 2015ನೇ ಸಾಲಿನಲ್ಲಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತು. 2015ರ ಎಪ್ರಿಲ್ 11ರಿಂದ ಶುರುವಾದ ಸಮೀಕ್ಷೆ 2015ರ ಮೇ 30ಕ್ಕೆ ಮುಕ್ತಾಯಗೊಂಡಿದೆ.
2015ರಲ್ಲಿ ಸಿದ್ಧವಾದ ಕಾಂತರಾಜ ಆಯೋಗದ ಈ ವರದಿಯ ಹೆಸರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಎಂದಿದೆ. ಉದ್ದೇಶಕ್ಕೆ ಅನುಗುಣವಾಗಿ, ಜಾತಿವಾರು ಸಮೀಕ್ಷೆಯಲ್ಲಿ ರಾಜ್ಯದ ಪ್ರತಿಯೊಂದು ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯ ಮಾಹಿತಿಯಿದೆ. ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಇತರ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಮೀಸಲಾತಿಯನ್ನು ಮರು ವರ್ಗೀಕರಣ ಮಾಡಬೇಕು ಮತ್ತು ಆಯಾ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಜಾತಿಗಣತಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಆದರೆ, ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಮತ್ತು ಸದಸ್ಯರುಗಳ ಅವಧಿ 2019ರಲ್ಲಿ ಮುಗಿದ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಆಗಿರಲಿಲ್ಲ. ನಂತರ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015ರ ದತ್ತಾಂಶ ಅಧ್ಯಯನ ವರದಿ-2024 ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ .ಈ ವರದಿ ಗುರುತಿಸಿರುವಂತೆ, ಕಾಂತರಾಜ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಒಟ್ಟು 6.50 ಕೋಟಿ ಜನಸಂಖ್ಯೆಯ ಶೇ.90ಕ್ಕೂ ಹೆಚ್ಚು ಜನಸಂಖ್ಯೆಗೆ ಸಂಬಂಧಿಸಿ ದತ್ತಾಂಶ ಸಂಗ್ರಹಿಸಲಾಗಿದೆ.
ಒಟ್ಟು 5.98 ಕೋಟಿ ಜನರು ಒಳಗೊಂಡು ಅಂದಾಜು 1.35 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಖಚಿತವಾಗಿ, 5,98,14,942 ವ್ಯಕ್ತಿಗಳನ್ನು ಒಳಗೊಂಡ 1,35,35,772 ಕುಟುಂಬಗಳ ದತ್ತಾಂಶ ಸಂಗ್ರಹ. ಇದರಲ್ಲಿ 180 ಪರಿಶಿಷ್ಟ ಜಾತಿಗಳು, 105 ಪರಿಶಿಷ್ಟ ಪಂಗಡಗಳು ಸೇರಿದಂತೆ 1,351 ಜಾತಿ, ಸಮುದಾಯಗಳ ಮತ್ತು ಗುರುತಿಸದೇ ಇರುವ 398 ಜಾತಿಗಳು ಸೇರಿವೆ. ಇವರಲ್ಲಿ ಜಾತಿ ತಿಳಿದಿಲ್ಲ ಎಂದವರ ಸಂಖ್ಯೆ 1,94,003; ಯಾವುದೇ ಜಾತಿಗೆ ಸೇರಿಲ್ಲ ಎಂದವರು 1,34,319; ಜಾತಿಯನ್ನು ಬಹಿರಂಗಪಡಿಸಲು ನಿರಾಕರಿಸಿದವರು 2,53,954. ಒಟ್ಟು 51 ಮಾನದಂಡಗಳನ್ನು ಮುಂದಿಟ್ಟುಕೊಂಡು ನಡೆಸಲಾದ ಸಮೀಕ್ಷೆ ಇದು. ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಇಂತಹ ವೈಜ್ಞಾನಿಕ ಮಾಹಿತಿ ಒಳಗೊಂಡ ವರದಿಗೆ ಸಿದ್ದರಾಮಯ್ಯ ನೇತೃತ್ವದ ಸಂಪುಟದ ಕೆಲವು ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ವರದಿ ಬಗ್ಗೆ ತಕರಾರು ತೆಗೆಯುತ್ತಲೇ ಬರುತ್ತಿದ್ದಾರೆ. ಸಮೀಕ್ಷೆಗೆ ವಿರೋಧವಿಲ್ಲ; ಸಮೀಕ್ಷೆ ವೈಜ್ಞಾನಿಕವೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅವರೆಲ್ಲ ಜಾತಿ ಗಣತಿ ವರದಿ ವಿರೋಧಿಸುತ್ತಿದ್ದಾರೆ. ಪ್ರಬಲ ಜಾತಿ ಸಮುದಾಯ ಎನಿಸಿಕೊಂಡಿರುವ ಒಕ್ಕಲಿಗ ಮತ್ತು ಲಿಂಗಾಯತ ನಾಯಕರಿಗೆ ವರದಿ ಸೋರಿಕೆಯಾದ ಮಾಹಿತಿಯಿಂದ ಬಿಸಿ ತಟ್ಟಿದೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರು ಸಂಖ್ಯೆಯು ಜಾತಿ ಗಣತಿ ವರದಿಯಲ್ಲಿ ಸಿಂಹಪಾಲು ಪಡೆದುಕೊಂಡಿರುವುದರಿಂದ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ಬೀಳುವ ಹೊಟ್ಟೆಕಿಚ್ಚಿನಿಂದ ಪಕ್ಷಭೇದ ಮರೆತು ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ದೊಡ್ಡಮಟ್ಟದ ವಿರೋಧಕ್ಕೆ ಮುಂದಾಗಿದ್ದಾರೆ. ಇದಕ್ಕೆಲ್ಲ ಶಾಮನೂರು ಅವರನ್ನು ಮುಂದಾಳತ್ವ ವಹಿಸಿ ಮುಂದೆ ಬಿಟ್ಟಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಂಬುದು ಸ್ವತಂತ್ರ ಸಂಸ್ಥೆ. ಇದಕ್ಕೆ ಸಿವಿಲ್ ಕೋರ್ಟ್ ಸ್ಥಾನಮಾನವಿದೆ. ಶಾಮನೂರು ಶಿವಶಂಕರಪ್ಪ ಸ್ವತಃ ಶಾಸಕರಾಗಿ ಕಾಂಗ್ರೆಸ್‌ನಲ್ಲಿದ್ದಾರೆ. ಮಗ ಸಚಿವರಾಗಿದ್ದಾರೆ. ಸೊಸೆ ಸಂಸದೆಯಾಗಿದ್ದಾರೆ. ಇಡೀ ಕುಟುಂಬ ಸಾರ್ವಜನಿಕ ಜೀವನದಲ್ಲಿದೆ. ಸರ್ಕಾರದ ಭಾಗವಾಗಿದ್ದುಕೊಂಡೇ ಹಿಂದುಳಿದ ವರ್ಗಗಳಿಗೆ ನ್ಯಾಯ ಕಲ್ಪಿಸುವ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿರುವುದು ಅಪರಾಧವಲ್ಲದೇ ಮತ್ತೇನು ಅಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಹ ನಾಯಕರು ಶಾಮನೂರು ಶಿವಶಂಕರಪ್ಪ ಅವರನ್ನು ಟೀಕಿಸುವುದು ಬಿಟ್ಟು ಹಾಡಿಹೊಗಳುತ್ತಾರೆ. ಅದು ಅವರ ವಯಸ್ಸಿನ ಕಾರಣಕ್ಕೂ ಇರಬಹುದು. ಆದರೆ, ಹೈಕಮಾಂಡ್ ನಿಜಕ್ಕೂ ಶಾಮನೂರು ವಿಚಾರದಲ್ಲಿ ಶಕ್ತಿಹೀನವಾಗಿದೆಯೇ ಎನ್ನುವ ಅನುಮಾನ ಮೂಡಿದೆ.
ಜಾತಿ ಗಣತಿ ವರದಿ ಜಾರಿಯಾಗಲೇಬೇಕು ಎನ್ನುವ ಬಗ್ಗೆ ಅಹಿಂದ ವರ್ಗದ ವಿವಿಧ ಸ್ತರಗಳಲ್ಲಿ ದೊಡ್ಡ ಮಟ್ಟದ ಆಗ್ರಹಗಳು ಕೇಳಿಬರುತ್ತಿಲ್ಲ. ರಾಜಕೀಯ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿದ್ದು ಬಿಟ್ಟರೆ, ಶಾಮನೂರು ಶಿವಶಂಕರಪ್ಪ ವಿರುದ್ಧ ಬಹಿರಂಗವಾಗಿ ಬೇಸರ ಹೊರಹಾಕಿಲ್ಲ. ಇದು ಸಹ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದಕ್ಕೆಲ್ಲ ಕಾರಣಗಳನ್ನು ಹುಡುಕುತ್ತ ಹೋದರೆ ಒಂದು ಸಮಯದಲ್ಲಿ ಇಡೀ ಕಾಂಗ್ರೆಸ್‌ಗೆ ಖಜಾಂಚಿಯಾಗಿದ್ದವರು ಶಾಮನೂರು ಶಿವಶಂಕರಪ್ಪ. ಸಾದರ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಇವರು ಲಂಗಾಯತ ಸಮುದಾಯದಲ್ಲೇ ಆರ್ಥಿಕವಾಗಿ ಹೆಚ್ಚು ಸಬಲವಾಗಿರುವ ಸಮುದಾಯ. ಇವರ ಋಣದಲ್ಲೇ ಕಾಂಗ್ರೆಸ್ ಇದೆ ಎನ್ನುವುದು ಸಾಕಷ್ಟು ನಾಯಕರಿಗೆ ಗೊತ್ತಿರುವ ವಿಚಾರ. ಈ ಕಾರಣಕ್ಕೂ ಶಾಮನೂರು ವಿಚಾರದಲ್ಲಿ ಯಾವುದೇ ದೊಡ್ಡ ವಿರೋಧಗಳು ಕಾಂಗ್ರೆಸ್‌ನಲ್ಲಿ ಕಂಡುಬರುತ್ತಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆ ವರದಿ ಇದೀಗ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿರುವಾಗ ಶಾಮನೂರು ವಿಚಾರ ಸೇರಿದಂತೆ ವರದಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವ ನಿಲುವು ತೆಳೆಯುತ್ತದೆ ಎಂಬುದು ಕುತೂಹಲ ಸೃಷ್ಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ದೂರು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಇದನ್ನು ತಡೆಯಲು ಮುಖ್ಯಮಂತ್ರಿಗಳು ಸಚಿವರ ಅಭಿಪ್ರಾಯಗಳನ್ನು ಕಾಗದದ ಮೇಲೆ ಸಂಗ್ರಹಿಸಿ ಹೈಕಮಾಂಡ್‌ಗೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
“ಜಾತಿ ಗಣತಿ ಬಗ್ಗೆ ನಮ ಪಕ್ಷದ ಪ್ರಣಾಳಿಕೆಯಲ್ಲೇ ಪ್ರಸ್ತಾಪಿಸಲಾಗಿದೆ. ಹಾಗಾಗಿ ನುಡಿದಂತೆ ನಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ ಪರಿಪಾಲನೆಗೆ ಕೊಟ್ಟಿರುವ ಈ ಭರವಸೆ ಈಡೇರಿಸದಿದ್ದರೆ ತಪ್ಪಾಗುತ್ತದೆ” ಎಂದು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರು ಕಿವಿಮಾತು ಹೇಳಿಯಾಗಿದೆ. ಸಂಪುಟ ಸಭೆಯಲ್ಲಿನ ಚರ್ಚೆಯ ಬೆನ್ನಲ್ಲೇ ಸಿದ್ದರಾಮಯ್ಯ ಅವರು, ರಾಜ್ಯದ 20-30 ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದ ಸ್ಥಾನಗಳು ಅಹಿಂದ ಮತಗಳಿಂದ ನಿರ್ಧರಿಸಲ್ಪಡುತ್ತವೆ ಎಂಬುದನ್ನು ಸಾಬೀತುಪಡಿಸಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜಾತಿ ಜನಗಣತಿ ವರದಿ ಪಡೆಯಲು ಮುಂದಾಗಿದ್ದಾರೆ.
ಪ್ರಜಾಪ್ರಭುತ್ವ ಆಡಳಿತಕ್ಕಾಗಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯ ಅವರು ಬ್ರಾಹ್ಮಣ್ಯೇತರ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ 1918ರಲ್ಲಿ ಮಿಲ್ಲರ್ ಸಮಿತಿ ರಚಿಸಿದರು. ಮಿಲ್ಲರ್ ಆಯೋಗದ ವರದಿಯ ಅನುಷ್ಠಾನವನ್ನು ಅಂದಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ವಿರೋಧಿಸಿ ದಿವಾನ ಹುದ್ದೆಗೆ ರಾಜೀನಾಮೆ ನೀಡಿದರು. ಅದೇ ರೀತಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ 1953ರಲ್ಲಿ ಕಾಕಾ ಕಾಲೇಲ್ಕರ್ ಸಮಿತಿ, 1960ರಲ್ಲಿ ನಾಗನಗೌಡ ಆಯೋಗ, 1984ರಲ್ಲಿ ಪಿ. ವೆಂಕಟಸ್ವಾಮಿ ಆಯೋಗ ಮತ್ತು 1993ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗಗಳು ಜಾತಿ ಗಣತಿ ಮಾಡಿ ವರದಿ ನೀಡಿದರೂ ಪ್ರಬಲ ಜಾತಿವಾದಿಗಳಾದ ಬ್ರಾಹ್ಮಣರು, ಲಿಂಗಾಯತರು ಹಾಗೂ ಒಕ್ಕಲಿಗರು ಇದನ್ನು ವಿರೋಧಿಸಿಕೊಂಡೇ ಬಂದಿದ್ದಾರೆ.
“ವೀರಶೈವ-ಲಿಂಗಾಯತ ಧರ್ಮವು ವರ್ಗ, ವರ್ಣ, ವೃತ್ತಿ, ಲಿಂಗಭೇದಗಳನ್ನು ಪರಿಗಣಿಸದೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಉದಾತ್ತ ಆಶಯಗಳ ಮೇಲೆ ನಿಂತಿದೆ. ಬಸವಾದಿ ಶರಣರ ಆಶೋತ್ತರಗಳನ್ನು ಅನುಸರಿಸಿಕೊಂಡು ಬರುತ್ತಿರುವ ಮಹಾಸಭೆಯು ಎಂದಿಗೂ ಜಾತಿಗಣತಿ ವಿರೋಧಿಸಿಲ್ಲ, ವಿರೋಧಿಸುವುದೂ ಇಲ್ಲ. ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು ಎಂಬುದು ಮಹಾಸಭೆಯ ಆಶಯ. ಇಂತಹ ಗಣತಿಗಳಿಂದ ಸರ್ಕಾರದ ಸೌಲಭ್ಯಗಳು ನ್ಯಾಯಯುತವಾಗಿ ಎಲ್ಲ ಸಮಾಜದವರಿಗೂ ಅವರ ಸಂಖ್ಯೆಗೆ ಅನುಗುಣವಾಗಿ ದೊರೆಯುವಂತಾಗಬೇಕು ಎನ್ನುವುದು ಸಂವಿಧಾನದ ಆಶಯವೂ ಆಗಿದೆ” ಎಂದು ಶಾಮನೂರು ಶಿವಶಂಕರಪ್ಪ ಕೇವಲ ಬಾಯಿಮಾತಿನಲ್ಲಿ ಹೇಳುತ್ತಾರೆ. ಒಳಗೆಲ್ಲ ವಿಷವೇ ಅಡಗಿದೆ.
1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಚನೆಗೊಂಡು ಜಾತಿ ರಾಜಕಾರಣ ಮಾಡುತ್ತಾ ತನ್ನಲ್ಲಿಯ ಕುಂಬಾರ, ಕಮ್ಮಾರ, ಹಟಗಾರ, ಮಡಿವಾಳ, ಹಡಪದ, ಸಮಗಾರ, ಜಾಡರು, ನಾಯಿಂದ, ಮಾಲಗಾರ… ಹೀಗೆ ಹತ್ತು ಹಲವಾರು ದುಡಿಯುವ ವರ್ಗದವರನ್ನು ಅಪ್ಪಿಕೊಳ್ಳದೇ ದೂರವಿಡುತ್ತಲೇ ಬಂದಿದ್ದಾರೆ. ಆಧುನಿಕ ಯುಗದ ಲಿಂಗಿ ಬ್ರಾಹ್ಮಣರು ಮತ್ತು ಮನುವಾದಿಗಳಾಗಿ ವರ್ತಿಸುವ ಇವರಿಗೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಕಾಲಕಾಲಕ್ಕೆ ಹುನ್ನಾರ ಸೃಷ್ಟಿಸುತ್ತಲೇ ಬಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ವಿರೋಧ ಈ ಹುನ್ನಾರದ ಭಾಗವಾಗಿಯೇ ಇದೆ. ಇದನ್ನು ಯೋಚನೆ ಮಾಡದೇ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಬೊಬ್ಬೆ ಹಾಕುವುದು ಸರಿಯಲ್ಲ.
“ಕಾಂತರಾಜ ಆಯೋಗದ ವರದಿ ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂಬುದೇ ನಮ್ಮ ವಿರೋಧಕ್ಕೆ ಕಾರಣ” ಎನ್ನುವ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಪಕ್ಷದಲ್ಲಿದ್ದಾರಾ? ಅವರ ಸರಕಾರ, ಅವರ ಮಗನೇ ಸಚಿವ ಸಂಪುಟ ಸದಸ್ಯರಾಗಿರುವಾಗ ವರದಿ ವೈಜ್ಞಾನಿಕವಾಗಿಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತಾರೆ? ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ? ಎನ್ನುವ ಶಾಮನೂರು ಮಾತಿನ ಹಿಂದೆ ರಾಜಕೀಯ ಅಸ್ತಿತ್ವದ ಪ್ರಶ್ನೆ ಅಡಗಿದೆ.
ಜಾತಿ ಗಣತಿ ಸಮಾಜದ ಮುಖ್ಯವಾಹಿನಿಗೆ ಅಪರಿಚಿತವಾಗಿಯೇ ಇರುವ ನೂರಾರು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಸರಕಾರದ ಸವಲತ್ತುಗಳಿಂದ ಅವರು ವಂಚಿತರಾಗುತ್ತಲೇ ಬಂದಿರುವ ಕಟು ವಾಸ್ತವಕ್ಕೆ ಅದು ಕನ್ನಡಿಯಾಗುತ್ತದೆ. ಹೀಗಾಗಿಯೇ ಕಾಂತರಾಜ ಆಯೋಗದ ವರದಿಯನ್ನು ವಿರೋಧಿಸುತ್ತ, ಹೊಸ ಸಮೀಕ್ಷೆಗೆ ಒತ್ತಾಯಿಸುತ್ತಿರುವವರು, ವರದಿ ಜಾರಿಯಾಗದಂತೆ ತಡೆಯಲು ಅದನ್ನೊಂದು ನೆಪ ಮಾಡುತ್ತ ಅವೈಜ್ಞಾನಿಕ ವರದಿ ಎನ್ನುವ ಹುನ್ನಾರವನ್ನು ಮುಂದೆ ತೇಲಿ ಬಿಟ್ಟಿದ್ದಾರೆ. ಅವೈಜ್ಞಾನಿಕ ವರದಿ ಎನ್ನುವ ಶಾಮನೂರು ಶಿವಶಂಕರಪ್ಪ ಅವರು ವರದಿಯನ್ನು ಅಧ್ಯಯನ ಮಾಡಿ ಹೇಗೆ ಇದು ಅವೈಜ್ಞಾನಿಕ ಎಂದು ಸಮಾಜದ ಎದುರು ಬಹಿರಂಗಪಡಿಸುವ ಅವಕಾಶ ಅವರಿಗಿದೆ. ಆದರೆ ಅದು ಅವರಿಗೆ ಬೇಕಾಗಿಲ್ಲ. ಒಟ್ಟಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬಾರದು ಎಂಬುದೇ ಒನ್‌ಲೈನ್ ಅಜೆಂಡಾ. ಕಾಂಗ್ರೆಸ್‌ನಲ್ಲಿ ವರದಿ ಪರವಾಗಿ ಇರುವವರ ಸಂಖ್ಯೆಯೂ ಹೆಚ್ಚಿದೆ. ಇದು ಹೀಗೆ ವಿರೋಧ ದೊಡ್ಡದಾಗುತ್ತ ಹೋದಂತೆ ದೊಡ್ಡ ರಾಜಕೀಯ ಧ್ರುವೀಕರಣಕ್ಕೂ ಇದು ದಾರಿಯಾಗಬಹುದು. ಮೆ 2ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಯಾವ ಮಹತ್ವದ ತೀರ್ಮಾನಗಳು ಆಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.