ಸಕ್ಕರೆ ಕಾರ್ಖಾನೆಯೊಂದರಲ್ಲಿ ನಡೆದಿದ್ದ ಹಣಕಾಸು ಅವ್ಯವಹಾರಗಳ ಕುರಿತು 2018ರಲ್ಲಿ ಸಿಬಿಐ ಹಾಕಿದ್ದ ಎಫ್.ಐ.ಆರ್.ನಲ್ಲಿ ನ್ಯಾಯಮೂರ್ತಿ ವರ್ಮ ಅವರ ಹೆಸರಿರುವ ಅಂಶ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಸಿಂಭೋಲಿ ಶುಗರ್ಸ್ ಲಿಮಿಟೆಡ್ ವಿರುದ್ಧ ಸಿಬಿಐ ಹೂಡಿದ್ದ ಹಣಕಾಸು ವಂಚನೆಯ 12 ಮಂದಿ ಆಪಾದಿತರಲ್ಲಿ ಒಂಬತ್ತನೆಯವರಾಗಿದ್ದರು ವರ್ಮ. ಹಣಕಾಸು ವಂಚನೆಯ ಈ ದೂರನ್ನು ಓರಿಯೆಂಟಲ್ ಬ್ಯಾಂಕ್ ದಾಖಲಿಸಿತ್ತು.
ಉನ್ನತ ನ್ಯಾಯಾಂಗದ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ಅಗ್ನಿ ಆಕಸ್ಮಿಕದಂತಹ ನೈಸರ್ಗಿಕ ಶಕ್ತಿಗಳಿಂದ ಮಾತ್ರವೇ ಸಾಧ್ಯ ಎಂಬುದು ಬಹುದೊಡ್ಡ ದುರಂತ ವಿಷಯ. ಬೇಲಿಯೇ ಎದ್ದು ಹೊಲ ಮೇಯ್ದಿದೆ. ವಿಕಟ ವಿಡಂಬನೆಯೇ ಸರಿ.
ಇತರೆ ‘ಪಬ್ಲಿಕ್ ಸರ್ವೆಂಟ್’ಗಳಂತೆ ಅವರೂ ತಮ್ಮ ಆಸ್ತಿಪಾಸ್ತಿ ಘೋಷಣೆ ಮಾಡುತ್ತಾರೆ. ಆದರೆ ಈ ಘೋಷಣೆಗಳು ಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. 25 ಹೈಕೋರ್ಟುಗಳ 749 ನ್ಯಾಯಮೂರ್ತಿಗಳ ಪೈಕಿ ಕೇವಲ 98 ಮಂದಿಯ
ಆಸ್ತಿಪಾಸ್ತಿ ಘೋಷಣೆಗಳು ಮಾತ್ರವೇ ಸಾರ್ವಜನಿಕರಿಗೆ ಲಭ್ಯ ಇವೆ ಎಂದು 2024ರ ಅಧಿಕೃತ ಅಂಕಿಅಂಶವೊಂದು ಹೇಳಿದೆ.
ಇದೇ ಮಾರ್ಚ್ 14ರಂದು ದೇಶದ ರಾಜಧಾನಿಯಲ್ಲಿ ನಡೆದ ಸಣ್ಣ ಬೆಂಕಿ ಆಕಸ್ಮಿಕವೊಂದು ದೇಶದ ಉದ್ದಗಲಕ್ಕೆ ಸಂಚಲನವನ್ನು ಸೃಷ್ಟಿಸಿದೆ. ನ್ಯಾಯಾಂಗದ ಅಡಿಪಾಯಗಳನ್ನು ಅಲುಗಿಸುವ ಅಪನಂಬಿಕೆಯ ಜ್ವಾಲೆಗಳನ್ನೇ ಹೊತ್ತಿಸಿದೆ. ನ್ಯಾಯಾಂಗದ ಸ್ವಾಯತ್ತತೆ- ಸ್ವಾತಂತ್ರ್ಯ ಮತ್ತು ಅದರ ಉತ್ತರದಾಯಿತ್ವ ಕುರಿತ ಪ್ರಶ್ನೆ ಮರುಜೀವ ತಳೆದಿದೆ.
ದೆಹಲಿ ಹೈಕೋರ್ಟಿನ ಹಿರಿಯ ನ್ಯಾಯಮೂರ್ತಿ ಯಶವಂತ ವರ್ಮ ಅವರ ಅಧಿಕೃತ ಬಂಗಲೆಯಲ್ಲಿ ಭಾರೀ ಮೊತ್ತದ ನಗದು (ಮಾಧ್ಯಮಗಳ ವರದಿಗಳ ಪ್ರಕಾರ 15 ಕೋಟಿ ರುಪಾಯಿ) ಪತ್ತೆಯಾಗಿದೆ ಎಂಬ ವಿವಾದವು ದೇಶದ ಹಲವು ವಲಯಗಳಲ್ಲಿ ಸುಡು ಚರ್ಚೆಯ ವಸ್ತುವಾಗಿದೆ. ಬೆಂಕಿ ಬಿದ್ದ ರಾತ್ರಿ ನ್ಯಾಯಮೂರ್ತಿ ವರ್ಮ ದೂರದ ಭೋಪಾಲ್‌ನಲ್ಲಿದ್ದರು. ಒಂದು ವೇಳೆ ಮನೆಯಲ್ಲೆ ಇದ್ದಿದ್ದರೆ ಈ ಭಾರೀ ನಗದಿನ ಸುದ್ದಿ ಹೊರಬೀಳುವುದು ಸಾಧ್ಯವೇ ಇರಲಿಲ್ಲ.
ಬೆಂಕಿ ಹೊತ್ತಿಕೊಂಡಿರುವ ಕುರಿತು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಕರೆ ಬಂದದ್ದು ಮಾರ್ಚ್ 14ರ ರಾತ್ರಿ 11.30ಕ್ಕೆ. ಶೀಘ್ರದಲ್ಲೇ ತುಘಲಕ್ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಯಾರಿಗೂ ಗಾಯಗಳಾದ ಪ್ರಯುಕ್ತ ಎಫ್.ಐ.ಆರ್. ದಾಖಲು ಮಾಡಿಲ್ಲ. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿ ಮಾಡಿದ್ದ ನಗದು ರಾಶಿಯ ವಿಡಿಯೋ ದೆಹಲಿ ಪೊಲೀಸ್‌ನ ಉನ್ನತಾಧಿಕಾರಿಗಳಿಗೆ, ಆ ಮೂಲಕ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ತಲುಪಿದೆ.
ಬಂಗಲೆಯ ಹಿಂಭಾಗದ ಕೋಣೆಯೊಂದರಲ್ಲಿ ಇರಿಸಿದ್ದ ಈ ನಗದಿನ ರಾಶಿಗೂ ಬೆಂಕಿ ಬಿದ್ದಿತ್ತೆಂದೂ, ದೃಶ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ವಿಡಿಯೋದಲ್ಲಿ ಸೆರೆ ಹಿಡಿದಿತ್ತು. ಈ ಪ್ರಕರಣ ನ್ಯಾಯಾಂಗದ ‘ನೈತಿಕ ಸ್ಥೈರ್ಯವನ್ನು ಉಡುಗಿಸಿದೆ’ ಎಂದಿದ್ದಾರೆ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೇವೇಶ್ ಕುಮಾರ್ ಉಪಾಧ್ಯಾಯ.
‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಬಲು ಗಂಭೀರ ಸಮಸ್ಯೆ. ನ್ಯಾಯಮೂರ್ತಿಗಳ ನೇಮಕದಲ್ಲಿ ಹೆಚ್ಚಿನ ಪಾರದರ್ಶಕತೆ ಅತ್ಯಗತ್ಯ’ ಎಂದಿದ್ದಾರೆ ಹಿರಿಯ ನ್ಯಾಯವೇತ್ತ ಕಪಿಲ್ ಸಿಬ್ಬಲ್.
‘ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸುಳ್ಳು ಸುಳ್ಳೇ ಇಂತಹ ಗಂಭೀರ ಆಪಾದನೆ ಮಾಡಿದ್ದೇ ಆಗಿದ್ದರೆ ಅದು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಆಪಾದನೆಗಳು ನಿಜವೇ ಆಗಿದ್ದರೆ ಅದು ಕೂಡ ಅತ್ಯಂತ ಗಂಭೀರ ಸವಾಲುಗಳನ್ನು ಎತ್ತುತ್ತದೆ’ ಎಂದು ಮತ್ತೊಬ್ಬ ಹಿರಿಯ ನ್ಯಾಯವೇತ್ತ ಹರೀಶ್ ಸಾಲ್ವೆ ಪ್ರತಿಕ್ರಿಯಿಸಿದ್ದಾರೆ.
ಸಾರ್ವಜನಿಕರು ಇಟ್ಟಿರುವ ನಂಬಿಕೆ ವಿಶ್ವಾಸವೇ ನ್ಯಾಯಾಂಗದ ಅಡಿಗಲ್ಲು. ಅದೇ ಕುಸಿದು ಹೋದರೆ ನ್ಯಾಯಾಂಗವನ್ನು ಎತ್ತಿ ನಿಲ್ಲಿಸುವ ನೈತಿಕಶಕ್ತಿ ಇನ್ಯಾವುದು ಎಂಬ ತಳಮಳ ತಲ್ಲಣ ನ್ಯಾಯೋಚಿತ. ಈ ಬಾರೀ ಮೊತ್ತದ ಪತ್ತೆಯು ನ್ಯಾಯದ ಮಾರಾಟ ನಡೆದಿರುವ ಪುರಾವೆಯೇ ಇದ್ದೀತು ಎಂಬ ಸಿನಿಕತನ ಆವರಿಸಿದೆ.
ನ್ಯಾಯಮೂರ್ತಿಗಳ ನೇಮಕ ವಿಧಾನ-ವೈಖರಿಯು ಮತ್ತೆ ಮುನ್ನೆಲೆಗೆ ಬಂದಿದೆ. ಕೊಲಿಜಿಯಂ (ಮುಖ್ಯ ನ್ಯಾಯಮೂರ್ತಿ ಮತ್ತು ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಮೂಲಕ ನಡೆಯುತ್ತಿರುವ ನ್ಯಾಯಮೂರ್ತಿಗಳ ನೇಮಕಗಳು, ಬಡ್ತಿಗಳು, ವರ್ಗಾವಣೆಗಳಿಗೆ ಯಾವುದೇ ಅಧಿಕೃತ ಮಾನದಂಡಗಳಿಲ್ಲ, ಪ್ರಕ್ರಿಯೆ ಪಾರದರ್ಶಕ ಅಲ್ಲ. ಚರ್ಚೆಯ ನಡಾವಳಿಗಳನ್ನು ಅಧಿಕೃತವಾಗಿ ದಾಖಲಿಸುವುದೂ ಇಲ್ಲ. ನಿರ್ದಿಷ್ಟ ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಮುಖ್ಯ ನ್ಯಾಯಮೂರ್ತಿಯೊಬ್ಬರು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಯಾಗಿ ಯಾಕೆ ಬಡ್ತಿ ಪಡೆಯಲಿಲ್ಲ ಎಂಬ ಪ್ರಶ್ನೆಗೆ ಸುಪ್ರೀಮ್ ಕೋರ್ಟು ಜವಾಬು ನೀಡಬೇಕಿಲ್ಲ. ಈ ‘ಲೋಪ’ವನ್ನು ಸರಿಪಡಿಸಲೆಂದು 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ನ್ಯಾಶನಲ್ ಜ್ಯುಡಿಶಿಯಲ್ ಅಪಾಯಿಂಟ್ಮೆಂಟ್ಸ್ ಕಮಿಷನ್) ರಚಿಸಲಾಯಿತು. ನ್ಯಾಯಾಂಗ ನೇಮಕಗಳಲ್ಲಿ ಪಾರದರ್ಶಕತೆ ಮತ್ತು ವ್ಯಾಪಕ ಪ್ರಾತಿನಿಧ್ಯ ಕಲ್ಪಿಸುವುದು ಈ ಆಯೋಗದ ಉದ್ದೇಶವಾಗಿತ್ತು. ಸಂಸತ್ತು ಮತ್ತು 20 ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಈ ಪ್ರಸ್ತಾವವನ್ನು ಸುಪ್ರೀಮ್ ಕೋರ್ಟು ತಿರಸ್ಕರಿಸಿತು. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದಿತು.
‘ಹಿರಿಯ ನ್ಯಾಯವಾದಿ’ (ಸೀನಿಯರ್ ಅಡ್ವೋಕೇಟ್) ಎಂದು ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟುಗಳ ಕೊಲಿಜಿಯಮ್ ಗಳು ವಕೀಲರಿಗೆ ನೀಡುವ ಅಥವಾ ನೀಡದಿರುವ ಬಡ್ತಿ ಪ್ರಕ್ರಿಯೆ ಪಾರದರ್ಶಕ ಅಲ್ಲ.
ಸುಪ್ರೀಮ್ ಕೋರ್ಟ್ ಕೊಲಿಜಿಯಂ ನ (ಮುಖ್ಯನ್ಯಾಯಮೂರ್ತಿಯೂ ಸೇರಿದಂತೆ ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಕೆಲ ಸದಸ್ಯರಿಗೆ ಇಷ್ಟಾನಿಷ್ಟವೇ ಕಾರಣವಾಗಿ ಅನೇಕ ಅತ್ಯುತ್ತಮ ನ್ಯಾಯಮೂರ್ತಿಗಳಿಗೆ ಹೈಕೋರ್ಟುಗಳಿಂದ ಸುಪ್ರೀಮ್ ಕೋರ್ಟಿಗೆ ಬಡ್ತಿಯೇ ಸಿಗಲಿಲ್ಲ. ಕೆಲವರಿಗೆ ವಿಳಂಬವಾಗಿ ದಕ್ಕಿತು. ಈ ಪ್ರಕ್ರಿಯೆಯು ಸರ್ಕಾರ ಮತ್ತು ಸುಪ್ರೀಮ್ ಕೋರ್ಟ್ ನಡುವಣ ಕೊಡು-ಕೊಳುವ ಕಸರತ್ತೇ ಆಗಿ ಹೋಗಿದೆ. ಕಾರ್ಯಾಂಗವು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಜಡ್ಜ್‌ಗಳನ್ನು ಬಯಸುತ್ತದೆ. ದುರ್ಬಲ ನ್ಯಾಯಮೂರ್ತಿಗಳಿಗೇ ಮಣೆ ಹಾಕುತ್ತದೆ. ಇಂತಹ ನ್ಯಾಯಮೂರ್ತಿಗಳನ್ನು ತನ್ನ ಹಿತಾಸಕ್ತಿಗೆ ಅನುವಾಗಿ ಬಳಸಿಕೊಳ್ಳುತ್ತದೆ ಎಂಬುದು ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರ ಕಟು ಟೀಕೆ.
ನ್ಯಾಯಮೂರ್ತಿಗಳು ತಮ್ಮ ಆಸ್ತಿಪಾಸ್ತಿ ಎಷ್ಟೆಂದು ಕಾಲ ಕಾಲಕ್ಕೆ ಘೋಷಣೆ ಮಾಡಬೇಕೆಂಬ ನಿಯಮವೇನೋ ಇದೆ. ಈ ಸಾರ್ವಜನಿಕ ಘೋಷಣೆಗಳು ಅಕ್ರಮ ಆಸ್ತಿಪಾಸ್ತಿಯ ಗಳಿಕೆ ಮಾತ್ರವಲ್ಲದೆ ನ್ಯಾಯಮೂರ್ತಿಗಳು ಹೊಂದಿರಬಹುದಾದ ‘ಹಿತಾಸಕ್ತಿಗಳ ಘರ್ಷಣೆ’ಯನ್ನೂ ಬಹಿರಂಗಪಡಿಸುತ್ತವೆ. ಉತ್ತರದಾಯಿತ್ವ ಮತ್ತು ಪಾರದರ್ಶಕತೆಗೂ ದಾರಿ ಮಾಡಿಕೊಡುತ್ತವೆ.
ತನ್ನ ಎಲ್ಲ ಕೊರತೆಗಳ ನಡುವೆಯೂ ಕೊಲಿಜಿಯಂ ಪದ್ಧತಿ ಉತ್ತಮ ಪದ್ಧತಿ. ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕದ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಕಾರ್ಯಾಂಗ (ಕೇಂದ್ರ ಸರ್ಕಾರ) ಸದಾ ಕಾರ್ಯ ತತ್ಪರವಾಗಿದೆ. ಸರ್ಕಾರಕ್ಕಿಂತ ಕೊಲಿಜಿಯಂ ಪದ್ಧತಿಯೇ ವಾಸಿ. ಆದರೆ ಕೊಲಿಜಿಯಂ ಪದ್ಧತಿಯ ದೋಷಗಳ ನಿವಾರಣೆಗೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುತ್ತಾರೆ ಹಲವು ನ್ಯಾಯವೇತ್ತರು.
ದುರ್ವರ್ತನೆ ಮತ್ತು ದುರುಪಯೋಗ ಆಪಾದನೆಗಳನ್ನು ಕೇವಲ ವರ್ಗಾವಣೆಗಳ ಮೂಲಕ ಬಗೆಹರಿಸುವುದು ಸಲ್ಲದು. ಅಧಿಕೃತ ತನಿಖೆಯ ಶಿಷ್ಟಾಚಾರಗಳನ್ನು ರೂಪಿಸಿದರಷ್ಟೇ ಸಾಲದು, ಅವುಗಳನ್ನು ಜಾರಿಗೊಳಿಸಬೇಕು. ಅರ್ಥಪೂರ್ಣ ಸುಧಾರಣೆಗಳು ನ್ಯಾಯಾಂಗದ ಒಳಗಿನಿಂದ ಬರಬೇಕಲ್ಲದೆ, ಹೊರಗಿನಿಂದ ಹೇರುವಂತಿರಕೂಡದು ಎಂಬುದು ಹಿರಿಯ ನ್ಯಾಯವಾದಿಗಳ ಖಚಿತ ಅಭಿಪ್ರಾಯ.
ನ್ಯಾಯಮೂರ್ತಿ ವರ್ಮ ಅವರನ್ನು ಅಲಹಾಬಾದ್ ಹೈಕೋರ್ಟಿಗೆ ವರ್ಗಾವಣೆ ಮಾಡಿದ್ದ ತನ್ನ ಆದೇಶವನ್ನು ಸುಪ್ರೀಮ್ ಕೋರ್ಟು ಜಾರಿಗೊಳಿಸಿಲ್ಲ. ವರ್ಗಾವಣೆಯ ಬದಲು ಅವರನ್ನು ದೆಹಲಿ ಹೈಕೋರ್ಟಿನಲ್ಲೇ ಉಳಿಸಿಕೊಂಡು ತನಿಖೆ ಮುಗಿಯುವ ತನಕ ಯಾವುದೇ ಕೆಲಸ ನೀಡಕೂಡದು. ಬೆಳಿಗ್ಗೆ ಬಂದು ಸುಮ್ಮನೆ ಕುಳಿತು ಕಾಲ ಕಳೆದು ಸಂಜೆ ವಾಪಸು ಹೋಗುವ ಶಿಕ್ಷೆಯನ್ನು ನೀಡಬೇಕು ಎಂಬ ವಾದಕ್ಕೆ ಕಿವಿಗೊಟ್ಟಿರುವ ಸೂಚನೆಗಳಿವೆ.
ಘಟನೆಗೂ ನ್ಯಾಯಮೂರ್ತಿ ವರ್ಮ ಅವರ ವರ್ಗಾವಣೆಗೂ ಸಂಬಂಧವೇ ಇಲ್ಲ ಎಂದಿತ್ತು. ಆದರೆ ಆಘಾತಕಾರಿ ವಿವರಗಳು ಅನಾವರಣ ಆಗುತ್ತಿದ್ದಂತೆಯೇ ಆಳದ ತನಿಖೆಗೆ ಆದೇಶ ನೀಡಿದೆ. ಸುಪ್ರೀಮ್ ಕೋರ್ಟಿನ ಸ್ಪಷ್ಟೀಕರಣದ ಪ್ರಕಾರ- ‘ಮಾಹಿತಿ ದೊರೆಯುತ್ತಿದ್ದಂತೆಯೇ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಂತರಿಕ ತನಿಖೆ ಶುರುವಾಗಿದೆ. ಮಾಹಿತಿ- ಪುರಾವೆಗಳನ್ನು ಸಂಗ್ರಹಿಸಲಾಗಿದೆ.
ಅಲಹಾಬಾದ್ ಹೈಕೋರ್ಟಿನಲ್ಲಿ 2013ರ ಆಗಸ್ಟ್ ತನಕ ವಕೀಲಿವೃತ್ತಿ ನಡೆಸಿದ ವರ್ಮ ಅವರು 2014ರ ಅಕ್ಟೋಬರ್ ನಲ್ಲಿ ಅದೇ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2016ರ ಫೆಬ್ರವರಿ ಒಂದರಂದು ಕಾಯಂ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2021ರ ಅಕ್ಟೋಬರ್ 11ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿಯುಕ್ತಗೊಂಡಿದ್ದರು.
ಈ ನಡುವೆ ಸಕ್ಕರೆ ಕಾರ್ಖಾನೆಯೊಂದರಲ್ಲಿ ನಡೆದಿದ್ದ ಹಣಕಾಸು ಅವ್ಯವಹಾರಗಳ ಕುರಿತು 2018ರಲ್ಲಿ ಸಿಬಿಐ ಹಾಕಿದ್ದ ಎಫ್.ಐ.ಆರ್.ನಲ್ಲಿ ನ್ಯಾಯಮೂರ್ತಿ ವರ್ಮ ಅವರ ಹೆಸರಿರುವ ಅಂಶ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಸಿಂಭೋಲಿ ಶುಗರ್ಸ್ ಲಿಮಿಟೆಡ್ ವಿರುದ್ಧ ಸಿಬಿಐ ಹೂಡಿದ್ದ ಹಣಕಾಸು ವಂಚನೆಯ 12 ಮಂದಿ ಆಪಾದಿತರಲ್ಲಿ ಒಂಬತ್ತನೆಯವರಾಗಿದ್ದರು ವರ್ಮ. ಹಣಕಾಸು ವಂಚನೆಯ ಈ ದೂರನ್ನು ಓರಿಯೆಂಟಲ್ ಬ್ಯಾಂಕ್ ದಾಖಲಿಸಿತ್ತು. ವರ್ಮ ಅವರು ಸಿಂಭೋಲಿ ಶುಗರ್ಸ್‌ನ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಆಗ ಅವರು ಇನ್ನೂ ನ್ಯಾಯಮೂರ್ತಿಯಾಗಿ ನೇಮಕಗೊಂಡಿರಲಿಲ್ಲ. 2011ರಲ್ಲಿ ಮಂಜೂರು ಮಾಡಲಾದ 97.85 ಕೋಟಿ ರುಪಾಯಿಯ ಸಾಲದ ದುರ್ಬಳಕೆಯಾಗಿದೆ. ಸಾಧನ ಸಲಕರಣೆಗಳನ್ನು ಖರೀದಿಸಲು ಕಬ್ಬು ಬೆಳೆಗಾರರಿಗೆ ಸಾಲ ನೀಡಲೆಂದು ಮಂಜೂರು ಮಾಡಲಾಗಿದ್ದ ಈ ಮೊತ್ತವನ್ನು ಖಾಸಗಿ ಉದ್ದೇಶಕ್ಕೆ ವಿನಿಯೋಗಿಸಲಾಗಿದೆ. ಪರಿಣಾವಾಗಿ ಬ್ಯಾಂಕಿಗೆ 109 ಕೋಟಿ ರುಪಾಯಿಯ ನಷ್ಟ ಉಂಟಾಗಿದೆ. ಈ ಹಣಕಾಸು ವ್ಯವಹಾರ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ 2015ರಲ್ಲೇ ವಂಚನೆಯ ಅನುಮಾನ ಪ್ರಕಟಿಸಿತ್ತು.
ನ್ಯಾಯಮೂರ್ತಿ ವರ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಅನುಮತಿ ಕೋರಿತ್ತೇ ಇಲ್ಲವೇ ಎಂಬ ಸಂಗತಿ ಸ್ಪಷ್ಟವಿಲ್ಲ. ಸಿಂಭೋಲಿ ಶುಗರ್ಸ್ ಪ್ರಕರಣ ಕುರಿತು ಅಲಹಾಬಾದ್ ಹೈಕೋರ್ಟು 2021ರಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿತ್ತೆಂದು ದಾಖಲೆಗಳು ಹೇಳುತ್ತವೆ. ಆದರೆ ಅಲಹಾಬಾದ್ ಹೈಕೋರ್ಟಿನ ಈ ಆದೇಶಕ್ಕೆ ಸುಪ್ರೀಮ್ ಕೋರ್ಟು 2024ರಲ್ಲಿ ತಡೆಯಾಜ್ಞೆ ನೀಡುತ್ತದೆ.
ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ನೇಮಕ ಮಾಡಿರುವ ಸಮಿತಿ ತನಿಖೆ ಆರಂಭಿಸಿದೆ. ಹಿಮಾಚಲ, ಪಂಜಾಬ್-ಹರಿಯಾಣ ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಈ ಸಮಿತಿಯಲ್ಲಿದ್ದಾರೆ.
ಹೈಕೋರ್ಟ್, ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳನ್ನು ತೆಗೆದು ಹಾಕುವ, ರಾಜೀನಾಮೆ ಪಡೆಯುವ ಅಧಿಕಾರ ಸುಪ್ರೀಮ್ ಕೋರ್ಟ್‌ಗೆ ಇಲ್ಲ. ಈ ಅಧಿಕಾರವನ್ನು ಸಂಸತ್ತು ತನ್ನ ಬಳಿ ಇಟ್ಟುಕೊಂಡಿದೆ. ಇಂಪೀಚ್ಮೆಂಟ್ ಪ್ರಸ್ತಾವವನ್ನು ಸೋಲಿಸುವ ಅಥವಾ ಗೆಲ್ಲಿಸುವ ಮೂಲಕ ಸಂಸತ್ತು ನಿರ್ಧರಿಸುತ್ತದೆ. ನಿರ್ದಿಷ್ಟ ನ್ಯಾಯಮೂರ್ತಿಯ ಮೇಲಿನ ಆಪಾದನೆಗಳು ತನಿಖೆಯ ನಂತರ ಸಾಬೀತಾದ ನಂತರ ಇಂಪೀಚ್ಮೆಂಟ್ ಪ್ರಸ್ತಾವ ಮಂಡಿಸುವಂತೆ ಸುಪ್ರೀಮ್ ಕೋರ್ಟು ಮಾಡುವ ಶಿಫಾರಸನ್ನು ಸಂಸತ್ತು ತಿರಸ್ಕರಿಸಿದರೆ ನ್ಯಾಯಾಂಗ ಏನೂ ಮಾಡುವಂತಿಲ್ಲ.

ಡಿ ಉಮಾಪತಿ
ಹಿರಿಯ ಪತ್ರಕರ್ತರು