ಯುಎಸ್‌ಏಡ್ ನೆರವು ನೀಡುವ ಮೂಲಕ ಲ್ಯಾಟಿನ್ ಅಮೆರಿಕ ಹಾಗೂ ವಿವಿಧ ದೇಶಗಳಲ್ಲಿ ಅಮೆರಿಕ ತನ್ನ ಹಸ್ತಕ್ಷೇಪ ನಡೆಸುತ್ತಲೇ ಬಂದಿದೆ. ಯುಎಸ್‌ಏಡ್ ಸಂಸ್ಥೆಯ ಮೂಲಕ ಹಲವು ದೇಶಗಳಲ್ಲಿ ಅಮೆರಿಕ ತನಿಖಾ ಸಂಸ್ಥೆಗಳಾದ ಎಫ್‌ಬಿಐ ಹಾಗೂ ಸಿಐಎ ಏಜೆಂಟ್‌ಗಳು ಅಲ್ಲಿನ ಆಡಳಿತದಲ್ಲಿ ಮೂಗು ತೂರಿಸಿ ತಮಗೆ ಅನುಕೂಲವುಳ್ಳ ಸರ್ಕಾರಗಳನ್ನು ಸ್ಥಾಪಿಸಿದ್ದಾರೆ
ಇತ್ತೀಚಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಯುಎಸ್‌ಏಡ್ (USAID) ನೆರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಸಾಮಾನ್ಯವಾಗಿ ಯುಎಸ್‌ಏಡ್‌ಅನ್ನು ಅಂತಾರಾಷ್ಟ್ರೀಯ ಅಭಿವೃದ್ದಿಗಾಗಿ ಅಮೆರಿಕದ ಸಂಸ್ಥೆ ಎಂದು ಕರೆಯಲಾಗುತ್ತದೆ. ಇದಕ್ಕೆಂದೆ ಅಧ್ಯಕ್ಷ ಟ್ರಂಪ್ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದಲ್ಲಿ ಸರ್ಕಾರಿ ಕಾರ್ಯಕ್ಷಮತಾ ಇಲಾಖೆ(DOGE) ಎಂಬ ಸಂಸ್ಥೆಯನ್ನು ರಚನೆ ಮಾಡಿದ್ದಾರೆ. ಈ ಇಲಾಖೆ ಈಗಾಗಲೇ ವಿವಿಧ ದೇಶಗಳಿಗೆ ನೀಡಿರುವ ಅನುದಾನದ ಲೆಕ್ಕಾಚಾರ ಆರಂಭಿಸಿದ್ದು, ಭಾರತಕ್ಕೆ ನೀಡಲಾಗಿರುವ ಯುಎಸ್‌ಏಡ್ ಹಣದ ಕುರಿತು ಉಲ್ಲೇಖಿಸಿ ರದ್ದುಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.
ಭಾರತಕ್ಕೂ ಯುಎಸ್‌ಏಡ್‌ನಿಂದ ಹಲವು ವರ್ಷಗಳಿಂದ ಆರ್ಥಿಕ ನೆರವು ನೀಡಲಾಗುತ್ತದೆ. ವಿಶ್ವಾದ್ಯಂತ ವಿವಿಧ ಕಾರ್ಯಗಳಿಗೆ ಹಲವು ರೀತಿಯ ಉದ್ದೇಶಗಳಿಗೆ ಯುಎಸ್‌ಏಡ್‌ನಿಂದ ದೇಣಿಗೆಯನ್ನು ನೀಡಲಾಗುತ್ತಿದ್ದು, ಈಗ ಅವೆಲ್ಲವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಜಗತ್ತಿನ ದೊಡ್ಡಣ್ಣ ಬಂದಿದೆ. ಚುನಾವಣೆ ಮತ್ತು ರಾಜಕೀಯ ಪ್ರಕ್ರಿಯೆಗಳಿಗಾಗಿ ಮೀಸಲಿಟ್ಟ ಒಟ್ಟು 486 ಮಿಲಿಯನ್ ಅಮೆರಿಕನ್ ಡಾಲರ್ ಪೈಕಿ, ಒಂದಿಷ್ಟು ಪಾಲನ್ನು ತನ್ನ ಜಾಗತಿಕ ನೆರವು ಸಂಸ್ಥೆಯಾದ ಯುಎಸ್‌ಏಡ್ ಮೂಲಕ ಭಾರತಕ್ಕೆ ನೀಡಿದೆ.
”ನಾವ್ಯಾಕೆ ಭಾರತಕ್ಕೆ ಯುಎಸ್‌ಏಡ್ ಅನುದಾನ ಕೊಡಬೇಕು? ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದು ಅಮೆರಿಕದ ಜವಾಬ್ದಾರಿಯೇ? ಇಲ್ಲ, ಯುಎಸ್‌ಏಡ್ ನೆಪದಲ್ಲಿ ಬಹುಶಃ ಭಾರತದಲ್ಲಿ ‘ಬೇರೊಬ್ಬರ ಸರ್ಕಾರ’ವನ್ನು ಅಸ್ತಿತ್ವಕ್ಕೆ ತರುವುದು ಈ ಹಿಂದಿನ ಜೋ ಬೈಡನ್ ಆಡಳಿತದ ಇರಾದೆಯಾಗಿತ್ತು ಎಂಬುದು ನಮ್ಮ ಬಲವಾದ ಅನುಮಾನ. ಇದನ್ನು ಭಾರತ ಸರ್ಕಾರಕ್ಕೆ ತಿಳಿಸುತ್ತೇವೆ. ಅದಲ್ಲದೆ ಭಾರತ ಜಗತ್ತಿನಲ್ಲಿಯೇ ಅತ್ಯಧಿಕ ತೆರಿಗೆ ದರ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ. ಆದ್ದರಿಂದ ಇನ್ನು ಮುಂದೆ ನೆರವು ನೀಡುವುದು ಸಾಧ್ಯವಿಲ್ಲ” ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟ ಸಂದೇಶ ನೀಡಿದ್ದಾರೆ.
ಅಲ್ಲದೆ ಅಮೆರಿಕದ ತೆರಿಗೆದಾರರ ಹಣವನ್ನು ವಿದೇಶಿಯರಿಗೆ ಏಕೆ ಖರ್ಚು ಮಾಡಬೇಕು, ವಿದೇಶಿಯರಿಗೆ ನೀಡುತ್ತಿದ್ದ ಹಣದಲ್ಲಿ ಶೇ.20 ರಷ್ಟು ಭಾಗವನ್ನು ತೆರಿಗೆ ಪಾವತಿಸುವ ಅಮೆರಿಕನ್ನರಿಗೆ ನೀಡಲು ಟ್ರಂಪ್ ಮುಂದಾಗಿದ್ದಾರೆ. ಭಾರತ ಮಾತ್ರವಲ್ಲದೆ ಬಾಂಗ್ಲಾದೇಶಕ್ಕೆ ರಾಜಕೀಯ ಸ್ಥಿರತೆಯನ್ನು ಬಲಪಡಿಸಲು ನೀಡಲಾಗುತ್ತಿದ್ದ 29 ಮಿಲಿಯನ್ ಡಾಲರ್, ನೇಪಾಳದ ಹಣಕಾಸು ಒಕ್ಕೂಟ ಮತ್ತು ಜೀವವೈವಿಧ್ಯ ಸಂರಕ್ಷಣೆಗಾಗಿ ಕೊಡುತ್ತಿದ್ದ 39 ಮಿಲಿಯನ್ ಡಾಲರ್, ಮೊಜಾಂಬಿಕ್ ದೇಶಕ್ಕೆ ಸ್ವಯಂಪ್ರೇರಿತ ವೈದ್ಯಕೀಯ ನೆರವಿಗಾಗಿ ಕೊಡಲಾಗುತ್ತಿದ್ದ 10 ಮಿಲಿಯನ್ ಡಾಲರ್, ಲೈಬೀರಿಯಾದ ಮತದಾರರ ವಿಶ್ವಾಸ ಹೆಚ್ಚಿಸಲು 1.5 ಮಿಲಿಯನ್ ನೆರವು, ದಕ್ಷಿಣ ಆಫ್ರಿಕಾದ 2.5 ಡಾಲರ್ ಹಾಗೂ ಏಷ್ಯಾ ದೇಶಗಳ ಶಿಕ್ಷಣ ಸುಧಾರಣಾ ಯೋಜನೆಗಾಗಿ 47 ಮಿಲಿಯನ್ ಡಾಲರ್ ಹಣ ಸೇರಿದಂತೆ ವಿವಿಧ ದೇಶಗಳಿಗೆ ನೀಡುತ್ತಿದ್ದ ಹಣವನ್ನು ಅಮೆರಿಕ ರದ್ದುಗೊಳಿಸಿದೆ.
ಇನ್ನೊಂದು ಮೂಲದ ಪ್ರಕಾರ ಅಮೆರಿಕದಲ್ಲಿ ಮುಂಬರುವ ದಿನಗಳಲ್ಲಿ ಬರುವ ಆರ್ಥಿಕ ಹಿಂಜರಿತದ ದುಸ್ಥಿತಿಯನ್ನು ತಪ್ಪಿಸಲು ಕೂಡ ಈ ನಿಲುವು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಸರ್ಕಾರಿ ಕಾರ್ಯಕ್ಷಮತಾ ಇಲಾಖೆಯ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್, ‘ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡದಿದ್ದರೆ, ಅಮೆರಿಕ ದಿವಾಳಿಯಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಮೆರಿಕದ ವಿದೇಶಿ ನೆರವು ಬಡ ದೇಶಗಳ ಹಾಗೂ ಅಭಿವೃದ್ಧಿ ಹೊಂದಿರದ ದೇಶಗಳಿಗೆ ಬೆಳಕು ತರುವುದು ಮಾತ್ರವಲ್ಲ, ವಿವಿಧ ದೇಶಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ತಂತ್ರವು ಆಗಿತ್ತು. ಯುಎಸ್‌ಏಡ್ ಸಂಸ್ಥೆಯು 50ಕ್ಕೂ ಹೆಚ್ಚು ದೇಶಗಳ ಸ್ಥಳೀಯ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದು, ಹಣಕಾಸಿನ ನೆರವಿನ ಜೊತೆಗೆ ಸ್ಥಳೀಯ ಉಪಸ್ಥಿತಿಯನ್ನು ಸ್ಥಾಪಿಸಿತ್ತು. ಈ ಕಾರ್ಯಕ್ರಮಗಳೆಲ್ಲವೂ ಅಮೆರಿಕಕ್ಕೆ ತನ್ನ ಹಿತಾಸಕ್ತಿಗಳನ್ನು ಪರೋಕ್ಷವಾಗಿ ಮಂಡಿಸಲು ಅವಕಾಶವನ್ನು ನೀಡಿದೆ. ಹಾಗೆಯೇ ನೆರವು ಪಡೆಯುವ ದೇಶಗಳ ಸರ್ಕಾರಗಳು ಅಮೆರಿಕದ ನೀತಿಗಳ ಬಗ್ಗೆ ಹೆಚ್ಚು ಉದಾರವಾಗಿರುತ್ತವೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆ ದೇಶದ ಪರವಾಗಿರುತ್ತವೆ. ಜೊತೆಗೆ ಸಹಾಯ ಪಡೆಯುವ ದೇಶಗಳ ನೈಸರ್ಗಿಕ ಸಂಪನ್ಮೂಲಗಳು ಸುಲಭವಾಗಿ ಅಮೆರಿಕದ ಪಾಲಾಗುತ್ತವೆ.
ಎಲ್ಲ ಶ್ರೀಮಂತ ದೇಶಗಳಿಂದ ಸಹಾಯ
ವಿದೇಶಿ ನೆರವು ಹೆಚ್ಚಾಗಿ ಎಲ್ಲಿ ಖರ್ಚು ಮಾಡಲಾಗುತ್ತದೆ ಎಂಬುದಕ್ಕೆ ನಿಖರವಾದ ಅಂಕಿಅಂಶಗಳು ಸಿಗುವುದಿಲ್ಲ. ಕೆಲವೊಂದು ವರದಿಗಳ ಪ್ರಕಾರ ಅಮೆರಿಕ ನೀಡುವ ಆರ್ಥಿಕ ನೆರವಿನ ಒಂದು ಸಣ್ಣ ಭಾಗ ಮಾತ್ರ ಆಯಾ ದೇಶದ ಸರ್ಕಾರಕ್ಕೆ ಹೋಗುತ್ತದೆ. 2018ರ ಅಂಕಿಅಂಶಗಳ ಪ್ರಕಾರ, ಅಮೆರಿಕದ ನೆರವಿನ ಶೇಕಡಾ 21 ರಷ್ಟು ವಿದೇಶಿ ಸರ್ಕಾರಗಳಿಗೆ, ಶೇಕಡಾ 20ರಷ್ಟು ಎನ್‌ಜಿಒಗಳಿಗೆ, ಶೇಕಡಾ 34ರಷ್ಟು ನೆರವು ಬಹುಪಕ್ಷೀಯ ಸಂಸ್ಥೆಗಳಿಗೆ, ಶೇಕಡಾ 25ರಷ್ಟು ಹಣವನ್ನು ವಿವಿಧ ಸಂಘಸಂಸ್ಥೆಗಳು ಪಡೆದುಕೊಂಡಿವೆ ಎನ್ನಲಾಗಿದೆ. ಶ್ರೀಮಂತ ರಾಷ್ಟ್ರಗಳು ಪ್ರತಿ ವರ್ಷ ತಮ್ಮ ಆದಾಯದ ಶೇ.0.5ರಿಂದ ಶೇ. 1ರಷ್ಟು ಹಣವನ್ನು ಬಡ ದೇಶಗಳಿಗಾಗಿ ಖರ್ಚು ಮಾಡಬೇಕು ಎಂಬುದು ಅಂತಾರಾಷ್ಟ್ರೀಯ ಬದ್ಧತೆಯಾಗಿದೆ. ಅಮೆರಿಕವನ್ನು ಹೊರತುಪಡಿಸಿ, ನಾರ್ವೆ, ಸ್ವೀಡನ್, ಡೆನ್ಮಾರ್ಕ್ ಮತ್ತು ಲಕ್ಸೆಂಬರ್ಗ್‌ನಂತಹ ದೇಶಗಳು ಸಹ ಮಾನವೀಯ ನೆರವಿಗಾಗಿ ಸಾಕಷ್ಟು ಹಣವನ್ನು ನೀಡುತ್ತಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸೊಕ್ಕು-ಸರ್ವಾಧಿಕಾರ-ಮೆದು ಹಿಂದುತ್ವದ ದಾರಿಯನ್ನು ತೊರೆಯುವರೇ ಕೇಜ್ರೀವಾಲ್?
ನೆರೆಯ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದರೆ, ಅಮೆರಿಕ ಕೂಡ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವೆನೆಜುವೆಲಾದ ಬಡತನ ಅಥವಾ ಸಿರಿಯಾದಲ್ಲಿನ ರಾಜಕೀಯ-ಧಾರ್ಮಿಕ ಪ್ರಕ್ಷುಬ್ಧತೆಯಿಂದಾಗಿ, ಜನರು ಅಮೆರಿಕಕ್ಕೆ ಪಲಾಯನಗೈಯಲು ಪ್ರಾರಂಭಿಸಿದರು. ಇದು ವಾಷಿಂಗ್ಟನ್‌ನ ಆರ್ಥಿಕತೆಗೆ ಹಾನಿ ಮಾಡಬಹುದು. ಆದ್ದರಿಂದ ಇದನ್ನು ನಿಲ್ಲಿಸಲು ಅಮೆರಿಕ ಕಂಡುಕೊಂಡ ಒಂದು ಮಾರ್ಗವೆಂದರೆ ಅಂತಹ ದೇಶಗಳಿಗೆ ಆರ್ಥಿಕವಾಗಿ ಸಹಾಯ ಮಾಡುವುದು. ಹಾಗೆಯೇ ಪರೋಕ್ಷವಾಗಿ ರಾಜಕೀಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು. ಅಮೆರಿಕ ಈ ನೀತಿಯನ್ನು ವಿಶ್ವದ ಹಲವು ಬಡ ಹಾಗೂ ದುರ್ಬಲ ದೇಶಗಳ ಮೇಲೆ ಹೇರುತ್ತಲೇ ಬಂದಿದೆ. ಇದು ಅಮೆರಿಕದ ಒಂದು ಮುಖವಾಡ. ಮ ಮುಖವಾಡ ಮತ್ತೊಂದು ಬೇರೆಯದ್ದೆ ಇದೆ.
ಕೆನಡಿ ಶುರು ಮಾಡಿದ ಯುಎಸ್‌ಏಡ್ ಮತ್ತು ಗುಪ್ತ ಕಾರ್ಯಸೂಚಿ
1961ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಆಫ್ ಕೆನಡಿ ಅವರು ಅಂದಿನ ಸೋವಿಯತ್ ಒಕ್ಕೂಟದ ನಡುವೆ ನಡೆಯುತ್ತಿದ್ದ ಶೀತಲ ಸಮರದ ಕಾಲದಲ್ಲಿ ಅಮೆರಿಕ ಪರವಾದ ಅಜೆಂಡಾವನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೆರವಿನ ಜೊತೆಯಲ್ಲಿ ತಮ್ಮ ಉದ್ದೇಶಗಳನ್ನು ಬಿತ್ತುವುದಕ್ಕಾಗಿ ಯುಎಸ್‌ಏಡ್ (ಅಂತಾರಾಷ್ಟ್ರೀಯ ಅಭಿವೃದ್ದಿಗಾಗಿ ಅಮೆರಿಕದ ಸಂಸ್ಥೆ) ಅನ್ನು ಸ್ಥಾಪಿಸಿದರು. ಆದರೆ ಸೋವಿಯತ್ ಒಕ್ಕೂಟ ಪತನವಾಗಿ ರಷ್ಯಾದ ಪ್ರಭಾವ ಕಡಿಮೆಯಾದ ನಂತರ ತನ್ನ ಅಜೆಂಡಾವನ್ನು ಎಲ್ಲಡೆ ವಿಸ್ತರಿಸಲು ಅಮೆರಿಕ ಯುಎಸ್‌ಏಡ್‌ಅನ್ನು ಹಲವು ದೇಶಗಳಿಗೆ ವಿಸ್ತರಿಸಿತು. ವರದಿಗಳ ಪ್ರಕಾರ 2023 ರ ಒಂದು ವರ್ಷದಲ್ಲೇ ಇಡೀ ಯುಎಸ್‌ಏಡ್ ವಿಶ್ವದ ವಿವಿಧ ರಾಷ್ಟ್ರಗಳಿಗೆ ಸುಮಾರು 2.5 ಲಕ್ಷ ಕೋಟಿ ರೂ. ಹಣವನ್ನು ಹಂಚಿದೆ. ಹಣಕಾಸಿನ ನೆರವಿನಲ್ಲಿ ಕೆಲವೊಂದು ಒಳ್ಳೆಯ ಉದ್ದೇಶವಿದ್ದರೂ ಗುಪ್ತ ಕಾರ್ಯಸೂಚಿಯೆ ಬಹಳಷ್ಟಿದೆ. ಇತ್ತೀಚಿನ ವರ್ಷಗಳಲ್ಲಂತೂ ಇದು ಬಯಲಾಗುತ್ತದೇ ಬಂದಿದೆ.
ಯುಎಸ್‌ಏಡ್ ಮೂಲಕ ನೆರವು ನೀಡುವ ಮೂಲಕ ಲ್ಯಾಟಿನ್ ಅಮೆರಿಕ ಹಾಗೂ ವಿವಿಧ ದೇಶಗಳಲ್ಲಿ ಅಮೆರಿಕ ತನ್ನ ಹಸ್ತಕ್ಷೇಪ ನಡೆಸುತ್ತಲೇ ಬಂದಿದೆ. ಯುಎಸ್‌ಏಡ್ ಸಂಸ್ಥೆಯ ಮೂಲಕ ಹಲವು ದೇಶಗಳಲ್ಲಿ ಅಮೆರಿಕ ತನಿಖಾ ಸಂಸ್ಥೆಗಳಾದ ಎಫ್‌ಬಿಐ ಹಾಗೂ ಸಿಐಎ ಏಜೆಂಟ್‌ಗಳು ಅಲ್ಲಿನ ಆಡಳಿತದಲ್ಲಿ ಮೂಗು ತೂರಿಸಿ ತಮಗೆ ಅನುಕೂಲವುಳ್ಳ ಸರ್ಕಾರಗಳನ್ನು ಸ್ಥಾಪಿಸಿದ್ದಾರೆ. ಹೈಟಿ ದೇಶದಲ್ಲಿ 2003-2004 ರಲ್ಲಿ ಅಧ್ಯಕ್ಷ ಜೀನ್-ಬರ್ಟ್ರಾಂಡ್ ಅರಿಸ್ಟೈಡ್ ಅವರನ್ನು ಉರುಳಿಸುವಲ್ಲಿ ಎಫ್‌ಬಿಐ ಹಾಗೂ ಸಿಐಎ ಪ್ರಮುಖ ಪಾತ್ರ ವಹಿಸಿದರು ಎಂಬುದು ನಂತರದ ದಿನಗಳಲ್ಲಿ ಬಹಿರಂಗವಾಯಿತು. ಅದೇ ರೀತಿ 2009 ರಲ್ಲಿ ಹೊಂಡುರಾಸ್‌ನಲ್ಲಿ ನಡೆದ ದಂಗೆಯನ್ನು ಸಂಘಟಿಸುವಲ್ಲಿ ಯುಎಸ್‌ಏಡ್ ಪ್ರಮುಖ ಪಾತ್ರ ವಹಿಸಿತು. ಯುಎಸ್‌ಏಡ್ ಸೋಗಿನಲ್ಲಿ ಸಿಐಎ ಏಜೆಂಟರು ತಮಗೆ ಬೇಕಾದಂತಹ ಎನ್‌ಜಿಒಗಳನ್ನು ಸ್ಥಾಪಿಸಿ ಸಾರ್ವಜನಿಕರಲ್ಲಿ ಅಲ್ಲಿನ ಅಧ್ಯಕ್ಷ ಎಂ. ಜೆಲಾಯಾ ಅವರನ್ನು ಪದಚ್ಯುತಗೊಳಿಸಲು ದಂಗೆಗೆ ಸಹಕಾರ ನೀಡಿದರು. ಅಮೆರಿಕದ ಮಧ್ಯಪ್ರವೇಶದಿಂದ ಈ ದೇಶಗಳಲ್ಲಿ ಅಸ್ಥಿರ ಸರ್ಕಾರಗಳು ರಚನೆಯಾಗಿ ನಾಗರಿಕ ದಂಗೆಗಳು ಮತ್ತಷ್ಟು ಹೆಚ್ಚಾದವು.
ಹಾಗೆಯೆ ಕ್ಯೂಬಾ, ವೆನೆಜುವೆಲಾ, ಈಕ್ವೆಡಾರ್, ಬೊಲಿವಿಯಾ ಮತ್ತು ನಿಕರಾಗುವಾ ದೇಶಗಳಲ್ಲಿ ಕ್ರಾಂತಿಗಳು ಮತ್ತು ದಂಗೆಗಳನ್ನು ಪ್ರಚೋದಿಸಲು ಯುಎಸ್‌ಏಡ್‌ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಮೆರಿಕದ ಹಿತಾಸಕ್ತಿಗೆ ಬೇಕಾದ ರೀತಿಯಲ್ಲಿ ಏಡ್ ಸಂಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಕೋಸ್ಟರಿಕಾ, ಪನಾಮ ಹಾಗೂ ಬ್ರೆಜಿಲ್ ದೇಶಗಳ ಆಡಳಿತದಲ್ಲಿ ಯುಎಸ್‌ಏಡ್ ಹಸ್ತಕ್ಷೇಪ ತೂರಿಸಲು ಶುರುವಾದ ನಂತರ ಅಲ್ಲಿನ ಸರ್ಕಾರಗಳು ಅಮೆರಿಕದ ಏಡ್ ಕಚೇರಿಗಳನ್ನು ಸ್ಥಗಿತಗೊಳಿಸಿವೆ. ಅಫ್ಘಾನಿಸ್ತಾನ, ಸಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಆಂತರಿಕ ದಂಗೆಗಳು ಹೆಚ್ಚಾಗಲು ಯುಎಸ್‌ಏಡ್ ಪ್ರಮುಖ ಕಾರಣ ಎಂಬ ವರದಿಗಳು ಇವೆ. ಬಡ ರಾಷ್ಟ್ರಗಳ ಮೇಲೆ ನೆರವಿನ ರೂಪದಲ್ಲಿ ವಿಷಬೀಜ ಬಿತ್ತಿದ್ದ ಇದೇ ಯುಎಸ್‌ಏಡ್‌ನಿಂದಾಗಿ ಅಮೆರಿಕ ಆರ್ಥಿಕ ಹಿಂಜರಿತ ಪರಿಸ್ಥಿತಿ ಎದುರಾಗಿದೆ. ಅದಕ್ಕಾಗಿ ಅಧ್ಯಕ್ಷ ಟ್ರಂಪ್ ನೆರವು ನೀಡುವುದನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ.
