ವೈದಿಕರ ಸಂಚುಗಳು ಬಯಲಾದಾಗಲೆಲ್ಲ ಚರಿತ್ರೆ ತಿರುಚುವುದು, ಗೊಂದಲ ಸೃಷ್ಟಿಸುವುದು… ನಡೆದೇ ಇದೆ

Date:

Advertisements
ವೈದಿಕರ ಜೀವವಿರೋಧಿ ಮತ್ತು ಮೌಢ್ಯದ ಆಚರಣೆಗಳಾದ ಯಾಗ ಯಜ್ಞ ಹೋಮ ಹವನ ಯಕ್ಷಿಣಿ ತಂತ್ರ ಮಂತ್ರಗಳನ್ನು ವಿರೋಧಿಸಿದರೋ ಅವರೇ ವೈದಿಕರ ದೃಷ್ಟಿಯಲ್ಲಿ ಅಸುರರಾದರು, ದುಷ್ಟರಾದರು. ಅದನ್ನೇ ವೈದಿಕರು ಇತಿಹಾಸವೆಂದರು. ಇದರ ಅಸಲಿಯತ್ತುಗಳನ್ನು ಇತರರು ದಾಖಲಿಸಬಾರದೆಂದೇ ಬಹಳ ಚಾಣಾಕ್ಷತನದಿಂದ ಭಾರತದ ಮೂಲನಿವಾಸಿಗಳನ್ನು ವರ್ಣವ್ಯವಸ್ಥೆಯೊಳಗೆ ಸಿಲುಕಿಸಿ ಅಕ್ಷರ ಕಲಿಯದಂತೆ ನಿರ್ಬಂಧಿಸಿದರು. ಕಟ್ಟುಕತೆಗಳನ್ನು ಸೃಷ್ಟಿಸಿ ಅದನ್ನೇ ಇತಿಹಾಸವೆಂದು ನಂಬಿಸಿದರು ಮತ್ತು ಈಗಲೂ ಅದನ್ನೆ ನಂಬಿಸಲು ಯತ್ನಿಸುತ್ತಿದ್ದಾರೆ.

ಶ್ರೀಪಾದ ಭಟ್ ಎಂಬ ತುಮಕೂರು ವಿವಿಯ ಪ್ರೊಫೆಸರ್ ಒಬ್ಬರು ಇತ್ತೀಚೆಗೆ ‘ವಿಜಯವಾಣಿ’ ಪತ್ರಿಕೆಯಲ್ಲಿ ಮಹಿಷೂರಿನಲ್ಲಿ ನಾವು ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮಹಿಷ ದಸರಾ ಮತ್ತು ಮಹಿಷ ಮಂಡಲೋತ್ಸವದ ಕುರಿತು ಸುದೀರ್ಘವಾದ ಲೇಖನವೊಂದನ್ನು ಬರೆದಿದ್ದಾರೆ. ಆದರೆ ವಿಶ್ವವಿದ್ಯಾನಿಲಯದಲ್ಲಿ ಓರ್ವ ಪ್ರಾಧ್ಯಾಪಕರಾಗಿರುವ ಅವರ ಈ ಬರಹದಲ್ಲಿ ಎಲ್ಲಿಯೂ ಅಕೆಡೆಮಿಕ್ ಶಿಸ್ತಾಗಲಿ, ಶೈಲಿಯಾಗಲಿ, ಜ್ಞಾನವಾಗಲಿ, ತರ್ಕವಾಗಲಿ, ಸಮರ್ಥನೆಯಾಗಲಿ ಒಂಚೂರೂ ಕಾಣುವುದಿಲ್ಲ. ಈ ಪ್ರೊಫೆಸರ್ ಯಾವ ವಿಷಯ ತಜ್ಞರೋ ತಿಳಿಯಲಿಲ್ಲ. ಆದರೆ ಬರಹದ ಉದ್ದಕ್ಕೂ ತಾವೇ ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಸಮಾಜ ಕೊಡಬಹುದಾದ ಉತ್ತರವನ್ನೂ ತಾವೇ ಕೊಟ್ಟುಕೊಂಡು ಅದನ್ನೂ ತಾರ್ಕಿಕವಾಗಿ ಚರ್ಚಿಸದೆ ಗೊಂದಲಕ್ಕೊಳಗಾಗುತ್ತಾ ಈ ಗೊಂದಲದೊಳಗೆ ತನ್ನ ಬ್ರಾಹ್ಮಣತ್ವವನ್ನು ತಣ್ಣಗೆ ಪೋಷಿಸಿಕೊಂಡು ಬಹಳ ನಯವಾಗಿ ವಸಾಹತೋತ್ತರ ಚಿಂತನೆಗಳಿವೆ ಎಂದು ಕೈತೊಳೆದುಕೊಳ್ಳುವ ವಿಫಲ ಯತ್ನ ಮಾಡುತ್ತಾರೆ!

ವಸಾಹತು ಪೂರ್ವದಲ್ಲಿಯೂ ಭಾರತವಿತ್ತು. ಈ ಭಾರತವನ್ನು ಸಾವಿರಾರು ವರ್ಷಗಳ ಕಾಲ ಭಾರತದ ವಿವಿಧ ರಾಜಮನೆತನಗಳು ಆಳಿದ್ದವು. ಅನೇಕ ಸಾಧು ಸಂತರು, ಶರಣರು ಇಲ್ಲಿ ಅನೇಕ ಸಾಮಾಜಿಕ ಸುಧಾರಣೆಯ ಚಳವಳಿಗಳನ್ನು ನಡೆಸಿದ್ದರು ಅಲ್ಲವೇ? ಈ ಸಾಮಾಜಿಕ ಚಳವಳಿಗಳು ಯಾಕೆ ಹುಟ್ಟಿಕೊಂಡವು? ಎಲ್ಲವೂ ಬ್ರಿಟಿಷರ ಆಳ್ವಿಕೆಯ ವಿರುದ್ದವಿದ್ದವೇ? ಅಥವಾ ಸಾಮಾಜಿಕ ಅನಿಷ್ಟಗಳಾದ ಸತಿಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ, ಅಸಮಾನತೆ ಮುಂತಾದ ಅನಿಷ್ಟಗಳ ವಿರುದ್ದ ನಡೆದವಲ್ಲವೇ? ಅಂದಮೇಲೆ ವಸಾಹತು ಪೂರ್ವದಲ್ಲಿನ ಈ ಅನಿಷ್ಟಗಳಿಗೆ ಯಾರು ಕಾರಣ? ಭಾರತಕ್ಕೆ ವಲಸೆ ಬಂದ ಆರ್ಯರಲ್ಲವೇ? ಅವರು ಮೂಲನಿವಾಸಿಗಳ ಮೇಲೆ ಹೇರಿದ ಮೌಢ್ಯಗಳ ವಿರುದ್ದವಲ್ಲವೇ? ಇವತ್ತು ಬ್ರಿಟಿಷರಿಲ್ಲ. ಆದರೆ ಜಾತೀಯತೆ ಇದೆ, ಅಸಮಾನತೆ ಇದೆ, ಅಸ್ಪೃಶ್ಯತೆ ಇದೆ, ತಾರತಮ್ಯ ಇದೆ. ಶ್ರೇಷ್ಠ ಕನಿಷ್ಠ ಎಂಬ ಭೇದಭಾವಗಳಿವೆ ಅಲ್ಲವೇ? ಇದೆಲ್ಲವೂ ಇರುವುದು ಯಾರಲ್ಲಿ? ವೈದಿಕರಲ್ಲಿ ಮತ್ತು ಅವರನ್ನು ಅನುಕರಿಸುವ ಇತರೆ ಮೇಲ್ಜಾತಿ ಎನಿಸಿಕೊಂಡವರಲ್ಲಿ ಅಲ್ಲವೇ? ಈ ಧೋರಣೆಗಳು ವಸಾಹತು ಕಾಲದಲ್ಲೇ ಸೃಷ್ಟಿಯಾಗಿದ್ದಾದರೆ ಅವರು ಭಾರತ ಬಿಟ್ಟು ತೊಲಗಿದ ನಂತರ ಇವರೆಲ್ಲರ ತಲೆಗಳಿಂದ ಈ ಧೋರಣೆಗಳೂ ತೊಲಗಬೇಕಿತ್ತಲ್ಲವೇ? ಏಕೆ ತೊಲಗಲಿಲ್ಲ?

ಏಕೆಂದರೆ ಅವು ವೈದಿಕರ ಸೃಷ್ಟಿಯಾಗಿವೆ. ಈ ತರತಮ ಧೋರಣೆಗಳಿಂದ ಕಾಲಾಂತರದಿಂದಲೂ ಇವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಹಳವೇ ಲಾಭವಿದೆ! ಈ ಲಾಭಗಳನ್ನು ಅನುಭವಿಸುತ್ತಾ ಇದಕ್ಕೆಲ್ಲಾ ಕಾರಣ ಬ್ರಿಟಿಷರು ಎಂದು ಅತ್ತ ತೋರುತ್ತಾ ಉಳಿದವರಿಗೆ ತಾವು ಬಹಳ ಸಾಚಗಳು ಎಂದು ಇನ್ನಿಲ್ಲದಂತೆ ತಮ್ಮ ಕುಬುದ್ದಿಯನ್ನೆಲ್ಲಾ ಬಳಸಿ ತಿಳಿಸುತ್ತಾರೆ. ಈ ನಾಟಕಗಳ ಅರಿವಾಗಿ ಪ್ರಶ್ನಿಸುವವರನ್ನು, ಪರ್ಯಾಯಗಳ ಹುಡುಕಾಟ ಮಾಡುವವರನ್ನು ಖಳರೆಂದು ಜರಿದು ಸಮಾಜದೆದುರು ದುರ್ಬಲಗೊಳಿಸಲೆತ್ನಿಸುವುದೇ ಪ್ರೊ. ಶ್ರೀಪಾದ ಭಟ್ ಅವರಂತಹವರ ವ್ಯರ್ಥ ಪ್ರಯತ್ನ. ಅದಕ್ಕೆ ಸಂಪ್ರದಾಯದ ಲೇಪ ಮಾಡಿ ಲೇವಡಿ ಮಾಡುತ್ತಾರೆ. ಆದರೆ ಅದಕ್ಕೆ ನಾವು ಹೆದರುವುದಿಲ್ಲ.

Advertisements

ಏಕೆಂದರೆ ನಾವು ಏನು ಮಾಡುತ್ತೇವೆ ಅದಕ್ಕೆ ನಮಗೆ ಸ್ಪಷ್ಟತೆ ಇದೆ. ಸತ್ಯ ಮತ್ತು ಇತಿಹಾಸದ ಬಲವಿದೆ. ಅದನ್ನು ಬೆಂಬಲಿಸುವವರ ಸಂಖ್ಯೆ ಕಡಿಮೆ ಇದ್ದಾಕ್ಷಣಕ್ಕೆ ಅದು ಸುಳ್ಳಾಗುವುದಿಲ್ಲ. ಹೆಚ್ಚು ಜನರು ಒಪ್ಪಿದಾಕ್ಷಣಕ್ಕೆ ಸುಳ್ಳು ಸತ್ಯವಾಗುವುದೂ ಇಲ್ಲ. ಇದು ವಿಜ್ಞಾನಯುಗ ಎನ್ನುವ ಶ್ರೀಪಾದ ಭಟ್ ಈ ವಿಜ್ಞಾನಯುಗದಲ್ಲಿ ಜಾತೀಯತೆ ಎಂಬುದು ಒಂದು ಮಿಥ್ಯೆ. ಆಚಾರ ಆಹಾರಗಳಲ್ಲಿ ಶ್ರೇಷ್ಠ ಕನಿಷ್ಠ ಎಂಬುದು ಕುತರ್ಕ ಎಂದು ಗಟ್ಟಿಧ್ವನಿಯಲ್ಲಿ ತಮ್ಮ ಸಮುದಾಯದವರ ಎದುರು ಪ್ರತಿಪಾದಿಸಬಲ್ಲರಾ? ಅವರ ಜನರ ಕಣ್ತೆರೆಸಬಲ್ಲರಾ? ಜಾತಿ ಮೀರಿ ಯೋಚಿಸುವಂತೆ, ಜಾತಿ ಮೀರಿ ಸಂಬಂಧಗಳನ್ನು ಬೆಸೆಯುವಂತೆ ಸಮಾಜವನ್ನು ಪ್ರೇರೇಪಿಸಬಲ್ಲರಾ? ಆದರೆ ಆರ್ಯವೈದಿಕರು ಸೃಷ್ಟಿಸಿರುವ ಮೌಢ್ಯ ಮತ್ತು ಜಾತೀಯತೆಯ ತರತಮ ಧೋರಣೆಗಳನ್ನು ಟೀಕಿಸುವ, ತರ್ಕಿಸುವ ಮತ್ತು ವಿರೋಧಿಸಿ ಸತ್ಯಶೋಧನೆಗಿಳಿವವರನ್ನು ಅಲ್ಲಗೆಳೆಯುತ್ತಾ ಈ ಆಪಾದನೆಗಳಿಗೆ ಬ್ರಾಹ್ಮಣರು ಕಾರಣರಲ್ಲ ಎಂದು ಸಾಧಿಸಲು ಮಾತ್ರ ಇನ್ನಿಲ್ಲದಂತೆ ತಿಣುಕಾಡುತ್ತಾರೆ.

ಬಾಬಾಸಾಹೇಬರು ಹೇಳುತ್ತಾರೆ, “ಭಾರತದ ಚರಿತ್ರೆಯನ್ನು ವೈದಿಕರು ಮಕ್ಕಳು ಮತ್ತು ಮಹಿಳೆಯರನ್ನು ರಂಜಿಸುವ ಪುರಾಣ ಮತ್ತು ಕಟ್ಟುಕತೆಗಳಾಗಿ ತಿರುಚಿದ್ದಾರೆ. ನಿಜವಾದ ಭಾರತದ ಚರಿತ್ರೆಯು ಮೂಲನಿವಾಸಿ ಬೌದ್ಧರಿಗೂ ವಲಸಿಗ ವೈದಿಕರಿಗೂ ನಡೆದ ನಿರಂತರ ಸಂಘರ್ಷದ ಕತೆಯಾಗಿದೆ”. ಇದರ ಅರ್ಥವೇನು? ಈ ದೃಷ್ಟಿಯಲ್ಲಿ ನಿಜ ಇತಿಹಾಸದ ಶೋಧಕ್ಕಿಳಿವ ಯಾರಿಗಾದರೂ ಇಲ್ಲಿನ ಅನ್ಯಾಯಗಳು ಗೋಚರಿಸುತ್ತವೆ.

ಇದನ್ನು ಓದಿದ್ದೀರಾ?: ಆತ್ಮವಂಚನೆಯ ಬ್ಯಾಂಡು, ನರಸತ್ತವರ ಡ್ಯಾನ್ಸು: ಪ್ಯಾಲೆಸ್ತೀನಿನ ಸಾವುನೋವು ಅತ್ತತ್ತ, ನಮ್ಮ ದೇಶಬಾಂಧವರ ಮನವಿತ್ತಿತ್ತ

ಈ ಶ್ರೀಪಾದ ಭಟ್ಟರು ಹೇಳುವಂತೆ ದುಷ್ಟಶಕ್ತಿ ಶಿಷ್ಟಶಕ್ತಿ ಎಂದರೆ ಏನು? ಅಸುರೀ ಶಕ್ತಿಗಳೆಂದರೇನು? ಯಾರು ವೈದಿಕರ ಜೀವವಿರೋಧಿ ಮತ್ತು ಮೌಢ್ಯದ ಆಚರಣೆಗಳಾದ ಯಾಗ ಯಜ್ಞ ಹೋಮ ಹವನ ಯಕ್ಷಿಣಿ ತಂತ್ರ ಮಂತ್ರಗಳನ್ನು ವಿರೋಧಿಸಿದರೋ ಅವರೇ ವೈದಿಕರ ದೃಷ್ಟಿಯಲ್ಲಿ ಅಸುರರಾದರು, ದುಷ್ಟರಾದರು. ಅದನ್ನೇ ವೈದಿಕರು ಇತಿಹಾಸವೆಂದರು. ಇದರ ಅಸಲಿಯತ್ತುಗಳನ್ನು ಇತರರು ದಾಖಲಿಸಬಾರದೆಂದೇ ಬಹಳ ಚಾಣಾಕ್ಷತನದಿಂದ ಭಾರತದ ಮೂಲನಿವಾಸಿಗಳನ್ನು ವರ್ಣವ್ಯವಸ್ಥೆಯೊಳಗೆ ಸಿಲುಕಿಸಿ ಅಕ್ಷರ ಕಲಿಯದಂತೆ ನಿರ್ಬಂಧಿಸಿದರು. ಕಟ್ಟುಕತೆಗಳನ್ನು ಸೃಷ್ಟಿಸಿ ಅದನ್ನೇ ಇತಿಹಾಸವೆಂದು ನಂಬಿಸಿದರು ಮತ್ತು ಈಗಲೂ ಅದನ್ನೆ ನಂಬಿಸಲು ಯತ್ನಿಸುತ್ತಿದ್ದಾರೆ.

ಆದರೆ ಜೋತಿಬಾಫುಲೆ, ಪೆರಿಯಾರ್, ಅಂಬೇಡ್ಕರ್, ವಿವೇಕಾನಂದರಂತಹ ಸಾಮಾಜಿಕ ಪರಿವರ್ತನಕಾರರಿಂದ ಅಕ್ಷರದ ಅರಿವು ಪಡೆದ ಹೊಸತಲೆಮಾರು ಇತಿಹಾಸವನ್ನು ಪುನರ್ ಪರಿಶೀಲನೆ ಮಾಡುತ್ತಿದೆ. ಸತ್ಯ ಮಿಥ್ಯೆಗಳನ್ನು ಅರಿಯುತ್ತಿದೆ. ಅಲ್ಲಿ ಗೋಚರಿಸುವ ದಾಖಲೆಗಳು ಪುರಾಣಗಳ ಪೊಳ್ಳುತನವನ್ನು ಸಾಬೀತುಪಡಿಸುತ್ತಿದೆ. ಮಾನವಶಾಸ್ತ್ರ ಅಧ್ಯಯನ ನಡೆಯುತ್ತಿದೆ. ವೈಜ್ಞಾನಿಕ ಶೋಧವು ಡಿಎನ್ಎ ಪರೀಕ್ಷೆಗಳಿಗೆ ತೆರೆದುಕೊಂಡು ಆರ್ಯರು ಹೊರಗಿನಿಂದ ವಲಸೆ ಬಂದು ಮೂಲನಿವಾಸಿಗಳನ್ನು ಆಕ್ರಮಿಸಿ, ಆವರಿಸಿ ಆಪೋಷಣ ತೆಗೆದುಕೊಂಡದ್ದನ್ನು ದೃಢೀಕರಿಸುತ್ತಿದೆ. ಅದರ ಭಾಗವಾಗಿಯೇ ಮಹಿಷೂರು ಇತಿಹಾಸದ ಮಹಿಷನ ಆಳ್ವಿಕೆಯ ಚರಿತ್ರೆಯೂ ಹೊರಬರುತ್ತಿದೆ. ಅದರಿಂದ ವೈದಿಕರು ಕಂಗಾಲಾಗಿದ್ದಾರೆ. ಅದೇ ಕಾರಣಕ್ಕೆ ಅವರು ಸಂಪ್ರದಾಯದ ಸಮರ್ಥನೆಗಿಳಿದು ಪರ್ಯಾಯ ಸಂಸ್ಕೃತಿಗಳು ತಲೆಯೆತ್ತುತ್ತಿವೆ ಎಂದು ಹುಯಿಲೆಬ್ಬಿಸುತ್ತಿವೆ. ಅಲ್ಲಿಗೆ ಮಹಿಷ ದಸರಾ ಆಚರಣೆಯು ಸರಿದಾರಿಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವೈದಿಕರ ಸಂಚುಗಳು ಬಯಲಾಗುವಾಗೆಲ್ಲವೂ ವೈದಿಕರು ಬಹಳ ವಿಚಲಿತಗೊಳ್ಳುತ್ತಾರೆ. ಆಗ ಚರಿತ್ರೆಯನ್ನು ತಪ್ಪಾಗಿ ಹೇಳುವ ಅಥವಾ ಗೊಂದಲದಲ್ಲಿ ಸಿಲುಕಿಸುವ ಮಟ್ಟಕ್ಕೆ ಇಳಿಯುತ್ತಾರೆ.

ಸತ್ಯದೊಡನೆ ಮುಖಾಮುಖಿಯಾಗುವ ಬದಲು ದೇವರು, ಧರ್ಮ, ಸಂಪ್ರದಾಯಗಳನ್ನು ಮುಂದಿಟ್ಟು ಜನರನ್ನು ಅವರವರ ನಡುವೆಯೇ ಎತ್ತಿಕಟ್ಟುತ್ತಾರೆ. ಇದು ಮಹಿಷ ದಸರ ಕುರಿತ ಶ್ರೀಪಾದ ಭಟ್ ಅವರ ಲೇಖನದ ಉದ್ದೇಶ. ಮಹಿಷ ಮಂಡಲ, ಮಹಿಸೂರು ಇದರ ಬಗ್ಗೆ ವಿಫುಲವಾದ ಅಧ್ಯಯನಗಳಾಗಿವೆ, ಬೌಧ್ದಸಾಹಿತ್ಯಗಳಿಂದಲೂ ಬೇಕಾದಷ್ಟು ಆಧಾರಗಳಿವೆ. ಎದುರಾ ಬದುರ ಚರ್ಚೆ ಮಾಡೋಣ ಬನ್ನಿ.

?s=150&d=mp&r=g
ಡಾ ಕೃಷ್ಣಮೂರ್ತಿ ಚಮರಂ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X