ಇತ್ತೀಚಿನ ಭಾರತ-ಪಾಕಿಸ್ತಾನ ಯುದ್ಧದಂತಹ ಸಂಘರ್ಷದ ಸಂದರ್ಭದಲ್ಲಿ ಸುದ್ದಿ ಚಾನೆಲ್ ನೋಡುಗರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದಕ್ಕೆ ಪ್ರಮುಖ ಕಾರಣ, ಟಿವಿ ಉದ್ಯಮದ ಮಾರುಕಟ್ಟೆಯಲ್ಲಿ ಮನರಂಜನೆ ಮುಖ್ಯವೇ ಹೊರತು, ನ್ಯೂಸ್ ಚಾನೆಲ್‌ಗಳಲ್ಲ. ಇಲ್ಲಿಯವರೆಗೆ ಅವು ಬಹು ದೊಡ್ಡ ಪಾತ್ರವನ್ನೂ ವಹಿಸಿದ್ದಿಲ್ಲ.
ಒಂದು ವಾರದ ಹಿಂದೆ ಟಿವಿ ವಾಹಿನಿಗಳ ವೀಕ್ಷಕರ ಪ್ರಮಾಣವನ್ನು ಅಳೆಯುವ ಸಂಸ್ಥೆ ‘ಬಾರ್ಕ್’ ಪ್ರತಿ ವಾರದಂತೆ ತನ್ನ ವರದಿಯನ್ನು ನೀಡಿತು. ವರದಿ ಬಿಡುಗಡೆಯಾದಾಗ 24/7 ಸುದ್ದಿವಾಹಿನಿಗಳ ಬಂಡವಾಳ ಬಯಲಾಗಿತ್ತು. ಏಕೆಂದರೆ ಅದೇ ವಾರದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟು ದಿನವಿಡಿ ಸುದ್ದಿ ಪ್ರಸಾರ ಮಾಡುವ ಸುದ್ದಿ ವಾಹಿನಿಗಳ ಟಿಆರ್‌ಪಿ ಪ್ರಮಾಣ ಭಾರಿ ಜಿಗಿತ ಕಂಡಿರಲಿಲ್ಲ. ಇಂಗ್ಲಿಷ್ ಶೇ. 29ಕ್ಕೆ ಏರಿಕೆಯಾಗಿದ್ದರೆ, ಹಿಂದಿ ಶೇ. 26ರಷ್ಟು ಮಾತ್ರ ಹೆಚ್ಚಳವಾಗಿತ್ತು. ಪ್ರಾದೇಶಿಕ ಸುದ್ದಿ ಚಾನೆಲ್‌ಗಳು ಕೂಡ ಇದೇ ರೀತಿಯಲ್ಲಿ ಏರಿಕೆ ದಾಖಲಿಸಿತ್ತು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಭಾರತ – ಪಾಕ್ ನಡುವೆ ಉದ್ವಿಗ್ನತೆ ಉಂಟಾದಾಗ ಸುದ್ದಿ ಮಾಧ್ಯಮಗಳು ಜನರಿಗೆ ಬೇಕಾದ ವಾಸ್ತವಾಂಶಗಳನ್ನು ಬಿಟ್ಟು ಯುದ್ಧದಾಹದ ಸುದ್ದಿಗಳ ಜೊತೆ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡಿದವು. ದೊಡ್ಡ ಮಟ್ಟದ ವೀಕ್ಷಕರು ತಮ್ಮ ಚಾನೆಲ್‌ಗಳನ್ನು ಬಿಡದೆ ನೋಡುತ್ತಾರೆ ಎಂದುಕೊಂಡಿದ್ದವು ಟಿವಿ ಚಾನೆಲ್‌ಗಳು. ಜನರು ಸಾರಾಸಗಟಾಗಿ ಸುದ್ದಿ ಚಾನೆಲ್‌ಗಳನ್ನು ತಿರಸ್ಕರಿಸಿದ್ದರು.
24/7 ಸುದ್ದಿ ವಾಹಿನಿಗಳಲ್ಲಿ ಮುಖ್ಯವಾಹಿನಿ ಎನಿಸಿಕೊಂಡ ದಿನಪತ್ರಿಕೆಗಳು ಹಾಗೂ ಡಿಜಿಟಲ್ ಮಾಧ್ಯಮಗಳಿಗಿಂತ ತಾವು ಶ್ರೇಷ್ಠ ಎಂಬ ಭಾವನೆಯಿದೆ. ತಮ್ಮನ್ನು ತಾವು ಮುಖ್ಯವಾಹಿನಿ ಎಂದು ಬಿಂಬಿಸಿಕೊಳ್ಳುತ್ತವೆ. ಆದರೆ ಸತ್ಯವೇ ಬೇರೆಯಿದೆ. ಎರಡು, ಮೂರು ದಶಕದ ಹಿಂದೆ ಕೇಬಲ್ ಚಾನೆಲ್‌ಗಳು ದೇಶಾದ್ಯಂತ ಕಾಲಿಟ್ಟಾಗ ಮನರಂಜನೆಯೇ ಮುಖ್ಯ ಆದ್ಯತೆಯಾಗಿತ್ತು. ಕೆಲವು ಚಾನೆಲ್‌ಗಳು ದಿನಕ್ಕೆ ಎರಡರಿಂದ ಮೂರು ಬಾರಿ ಅಥವಾ ಗಂಟೆಗೊಮ್ಮೆ ಸುದ್ದಿ ಪ್ರಸಾರ ಮಾಡುತ್ತಿದ್ದವು. ಒಂದೆರೆಡು ವರ್ಷ ಕಳೆದಂತೆ ತಾವು ದಿನವಿಡಿ ಸುದ್ದಿಗಳನ್ನು ಪ್ರಸಾರ ಮಾಡುತ್ತೇವೆಂದು 24/7 ಸುದ್ದಿ ಚಾನೆಲ್‌ಗಳು ಟಿವಿ ಲೋಕಕ್ಕೆ ಕಾಲಿಟ್ಟವು. ಸಿನಿಮಾ, ಕ್ರೀಡೆ, ಧಾರಾವಾಹಿ ಮತ್ತಿತರ ಮನರಂಜನೆಯನ್ನು ನೋಡುತ್ತಿದ್ದ ಒಂದು ವರ್ಗ ಏನೋ ಹೊಸತು ಇದೆ ಎಂದುಕೊಂಡು ಸುದ್ದಿ ವಾಹಿನಿಗಳನ್ನು ನೋಡಲು ಶುರು ಮಾಡಿದರು. ಆದರೆ ದಿನಕಳೆದಂತೆ ಈ ಚಾನೆಲ್‌ಗಳು ಟಿಆರ್‌ಪಿಯ ಬೆನ್ನು ಹತ್ತಿ ಇಲ್ಲಸಲ್ಲದ್ದನ್ನು ಪ್ರಸಾರ ಮಾಡಿ ಪತ್ರಿಕೋದ್ಯಮದ ಮೌಲ್ಯಗಳನ್ನೇ ಗಾಳಿಗೆ ತೂರಿದವು.
ಸುದ್ದಿಗಳ ವೈಭವೀಕರಣ, ತಿರುಚುವಿಕೆ ಹೀಗೆ ಯಾವ ಮಾರ್ಗದಲ್ಲಾದರೂ ಸರಿ ವೀಕ್ಷಕರನ್ನು ಸದಾ ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಎನ್ನುವ ಏಕೈಕ ಉದ್ದೇಶವನ್ನು ಅವು ಹೊಂದಿದ್ದವು. ತಾವು ಪ್ರಸಾರ ಮಾಡುತ್ತಿರುವ ಸುದ್ದಿಗಳು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅವು ಯಾವ ಕಾಳಜಿಯನ್ನೂ ಹೊಂದಿಲ್ಲ. ಅದಲ್ಲದೆ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಪೈಪೋಟಿಗಿಳಿದು ಸುಳ್ಳು ಸುದ್ದಿಗಳನ್ನು, ಪ್ರಚೋದಕ ಸುದ್ದಿಗಳನ್ನು, ಸುದ್ದಿಯೊಂದಿಗೆ ರಕ್ತ-ಬೆಂಕಿಯನ್ನು ನೀಡತೊಡಗಿದವು. ಕೆಲವು ಸುದ್ದಿವಾಹಿನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಪ್ರೇಕ್ಷಕರನ್ನು ಸೃಷ್ಟಿಸುವ ಮೂಲಕ ಪತ್ರಿಕೋದ್ಯಮದ ಮೂಲ ಸ್ವರೂಪವನ್ನೇ ಹಾಳುಮಾಡಿದವು.
ನಂತರದ ವರ್ಷಗಳಲ್ಲಿ ಕಾರ್ಪೊರೇಟ್ ವಲಯಗಳಿಂದ ದೊರೆಯುವ ಜಾಹೀರಾತುಗಳು ಟಿವಿ ವಾಹಿನಿಗಳ ಆರ್ಥಿಕ ಶಕ್ತಿಯಾಗಿರುವುದರಿಂದ ಟಿಆರ್‌ಪಿಗಾಗಿ ಹಂತಹಂತವಾಗಿ ಪತ್ರಿಕೋದ್ಯಮದ ಘನತೆಯನ್ನು ಸುದ್ದಿ ವಾಹಿನಿಗಳು ಕೈ ಚೆಲ್ಲುತ್ತಾ ಬಂದವು. ಟಿಆರ್‌ಪಿ ಹೆಚ್ಚಾದಷ್ಟು ಟಿವಿ ವಾಹಿನಿಗಳಿಗೆ ಆದಾಯವೂ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿಯೇ ದೇಶದ ಬಹುತೇಕ ಟಿವಿ ಮಾಧ್ಯಮಗಳು ವೀಕ್ಷಕರ ಬದಲಿಗೆ ತಮಗೆ ಲಾಭ ನೀಡುವ ಹಿತಾಸಕ್ತಿಗಳಿಗೆ ತಮ್ಮ ನಿಷ್ಠೆಯನ್ನು ತೋರಿಸುತ್ತ ಬಂದಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು-ತುಮಕೂರು ಮೆಟ್ರೊ ಯೋಜನೆ ಯಾರಿಗಾಗಿ?
ಸಮಾಜದ ಕನ್ನಡಿಯಾಗಬೇಕಾದ ಮಾಧ್ಯಮಗಳು ವಿರೂಪಗೊಂಡಿವೆ. ಭ್ರಷ್ಟಾಚಾರ ಹಾಗೂ ವ್ಯವಸ್ಥೆಯ ಕೊಳಕನ್ನು ಜನರಿಗೆ ತೋರಿಸಿ ಅದನ್ನು ಸರಿಪಡಿಸಬೇಕಾದ 24 ಗಂಟೆಯ ಸುದ್ದಿ ಚಾನೆಲ್‌ಗಳು ಹಣಕ್ಕಾಗಿ, ಜನಪ್ರಿಯತೆಗಾಗಿ ವ್ಯವಸ್ಥೆಯ ಜೊತೆ ರಾಜಿಯಾಗಿವೆ. ಸುಳ್ಳುಗಳು, ಗಾಳಿ ಸುದ್ದಿಗಳನ್ನು ವಿಜೃಂಭಿಸತೊಡಗಿವೆ. ಮಕ್ಕಳು ಹಾಗೂ ಯುವಜನತೆಯ ಮನಸ್ಸನ್ನು ಹಾಳುಗೆಡುವ ಕೊಲೆ, ಅಪರಾಧ ಸುದ್ದಿಗಳನ್ನು ವೈಭವೀಕರಿಸಲಾಗುತ್ತಿದೆ. ಇವೆಲ್ಲ ಕಾರಣಗಳಿಂದ ಜನರು ಸುದ್ದಿ ಚಾನಲ್‌ಗಳಿಂದ ದೂರವಾಗುತ್ತಿದ್ದಾರೆ. ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳದ ಈ ಮಾಧ್ಯಮಗಳಿಗೆ ಮುಂದುವರೆಯುತ್ತಿರುವ ತಂತ್ರಜ್ಞಾನ ಕೂಡ ಹೊಡೆತ ನೀಡಿದೆ. ಕೆಲವು ವರ್ಷಗಳಿಂದ 24/7 ನ್ಯೂಸ್ ಚಾನೆಲ್‌ಗಳ ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಬದಲಾವಣೆಯಾಗಿದೆ.
ಪರ್ಯಾಯ ಮಾಧ್ಯಮಗಳ ಆಯ್ಕೆ – ಸುದ್ದಿ ಮಾಧ್ಯಮಗಳಿಗೆ ಪೆಟ್ಟು
ನಮ್ಮ ದೇಶದಲ್ಲಿ 24/7 ಸುದ್ದಿ ಚಾನೆಲ್‌ಗಳನ್ನು ವೀಕ್ಷಿಸುತ್ತಿದ್ದ ಬಹುತೇಕ ವೀಕ್ಷಕರು ಒಟಿಟಿ, ಯೂಟ್ಯೂಬ್, ಇನ್‌ಸ್ಟಾ ರೀಲ್ಸ್‌ನಂಥ ಸಾಮಾಜಿಕ ಮಾಧ್ಯಮಗಳು, ಡಿಜಿಟಲ್ ಮಾಧ್ಯಮ ಮುಂತಾದ ಮಾಧ್ಯಮಗಳತ್ತ ವಾಲಿದ್ದಾರೆ. ಇದರಿಂದ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ ಅರ್ಧದಷ್ಟು ಕಡಿಮೆಯಾಗಿದೆ. 2023ರ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ. 71ರಷ್ಟು ಜನರು ಆನ್‌ಲೈನ್ ಸುದ್ದಿಗಳಿಗೆ ಆದ್ಯತೆ ನೀಡುತ್ತಾರೆ. ಶೇ. 49ರಷ್ಟು ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿಗಳನ್ನು ಪಡೆಯುತ್ತಾರೆ. ಯೂಟ್ಯೂಬ್‌ನಂತಹ ವೇದಿಕೆಗಳ ಮೂಲಕ ಶೇ. 93ರಷ್ಟು ಜನರು ಸುದ್ದಿಗಳನ್ನು ವೀಕ್ಷಿಸುತ್ತಾರೆ. ಇವುಗಳ ಜೊತೆಗೆ ತಲೆಗೆ ಕಿರಿಕಿರಿ ಮಾಡುವ ಸುದ್ದಿಗಳ ಗೊಡವೆಯೆ ಬೇಡವೆಂದು ಒಟಿಟಿ ರೀತಿಯ ಮನರಂಜನೆಯ ಮಾಧ್ಯಮಗಳತ್ತ ವಲಸೆ ಹೋಗಿದ್ದಾರೆ. ಇದರಿಂದಾಗಿ, 24 ಗಂಟೆಯ ಸುದ್ದಿ ವಾಹಿನಿಗಳ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಬದಲಾವಣೆಯಾಗಿದೆ.
ಹಲವು ಅಂಕಿಅಂಶ ಹಾಗೂ ಸಮೀಕ್ಷೆಗಳ ಪ್ರಕಾರ ಸುದ್ದಿ ಚಾನೆಲ್‌ಗಳ ವೀಕ್ಷಕರ ಬದಲಾವಣೆಗೆ ಹಲವು ಕಾರಣಗಳಿವೆ. ಬಹುಪಾಲು ಪ್ರಮುಖ ಸುದ್ದಿ ಚಾನೆಲ್‌ಗಳು ಒಂದೇ ವಿಷಯವನ್ನು ದಿನವಿಡೀ ಪ್ರಸಾರ ಮಾಡುವ ಪ್ರವೃತ್ತಿಗೆ ಒಳಗಾಗಿವೆ. ಇದರೊಂದಿಗೆ ಎಲ್ಲವನ್ನೂ ‘ಬ್ರೇಕಿಂಗ್ ನ್ಯೂಸ್’ ಎಂದು ಬಣ್ಣಿಸುವುದು ವೀಕ್ಷಕರಿಗೆ ಬೇಸರ ತರಿಸಿದೆ. ಹಲವಾರು ಚಾನೆಲ್‌ಗಳು ವಾಸ್ತವಗಳು ಹಾಗೂ ವಿಶ್ಲೇಷಣೆಗೆ ಒಳಪಡಿಸದೆ ರಾಜಕೀಯ ಪಕ್ಷಗಳು ಅಥವಾ ಆಡಳಿತ ಪಕ್ಷಗಳ ಪರವಾಗಿ ಸುದ್ದಿ ಪ್ರಸಾರ ಮಾಡುತ್ತವೆ ಎಂಬ ಆರೋಪಕ್ಕೆ ಗುರಿಯಾಗಿವೆ. ಇದರ ಜೊತೆಗೆ ಆನ್‌ಲೈನ್ ಮಾಧ್ಯಮಗಳ ಪ್ರಭಾವ ಕೂಡ ಹೆಚ್ಚಾಗಿದೆ. ಈಗ ಸಾಮಾನ್ಯ ವೀಕ್ಷಕರು ಕೂಡ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ನೇರವಾಗಿ ತಮಗೆ ಬೇಕಾದ ಮನರಂಜನೆಯನ್ನು ಸುಲಭವಾಗಿ ಪಡೆದುಕೊಳ್ಳುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸುದ್ದಿ ವಾಹಿನಿಗಳಿಂದ ದೂರ ಹೋಗಲು ಕಾರಣವಾಗಿದೆ.
ಟಿವಿಗಿರುವ ಮಾರುಕಟ್ಟೆ ಕಡಿಮೆಯಾಗಿಲ್ಲ
ವೀಕ್ಷಕರು ಸುದ್ದಿ ಚಾನೆಲ್‌ಗಳಿಂದ ದೂರವಾಗಿ ತುಂಬ ದಿನಗಳಾಗಿವೆ. ಆದರೆ ಟಿವಿ ಮಾಧ್ಯಮದಿಂದ ಯಾವತ್ತೂ ದೂರವಾಗಿಲ್ಲ ಎಂದು ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿರುವ ಹಿರಿಯ ಪತ್ರಕರ್ತರೊಬ್ಬರು ಕರ್ನಾಟಕದ ಸುದ್ದಿ ಮಾಧ್ಯಮ ಹಾಗೂ ಮನರಂಜನಾ ಮಾಧ್ಯಮಗಳ ಬಗ್ಗೆ ‘ಈದಿನ ಡಾಟ್ ಕಾಂ’ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ಯದ ಒಟ್ಟಾರೆ ಟಿವಿ ವೀಕ್ಷಕರಲ್ಲಿ ಸುದ್ದಿ ಚಾನೆಲ್‌ಗಳನ್ನು ನೋಡುವ ಸಂಖ್ಯೆ ಶೇ. 10 ರಿಂದ ಶೇ. 15 ರಷ್ಟು ಮಾತ್ರವಿದೆ ಎಂದು ಹೇಳುತ್ತಾರೆ.
‘ಟಿವಿ ಮಾಧ್ಯಮದಿಂದ ಜನರು ಸ್ಥಳಾಂತರಗೊಂಡಿಲ್ಲ ಎನ್ನುವುದಕ್ಕೆ ಪ್ರಮುಖ ಕಾರಣ ಇಲ್ಲಿನ ಮಾರುಕಟ್ಟೆ ಕೂಡ ಇಳಿಕೆಯಾಗಿಲ್ಲ. ಈ ವೀಕ್ಷಕರೆಲ್ಲ ಮನರಂಜನೆ, ಕ್ರಿಕೆಟ್ ಸೇರಿದಂತೆ ಮುಂತಾದ ವಾಹಿನಿಗಳನ್ನು ನೋಡುತ್ತಿದ್ದಾರೆ. ಜನರು ಸುದ್ದಿ ಚಾನೆಲ್‌ಗಳನ್ನು ನೋಡುವುದನ್ನು ನಿಲ್ಲಿಸಿರುವುದಕ್ಕೆ ಹತ್ತಾರು ಕಾರಣಗಳಿವೆ. ಇನ್ನೊಂದು ಪ್ರಮುಖ ಕಾರಣವೆಂದರೆ ಟಿವಿ ಉದ್ಯಮದ ಮಾರುಕಟ್ಟೆಯಲ್ಲಿ ನ್ಯೂಸ್ ಚಾನೆಲ್‌ಗಳು ದೊಡ್ಡ ಭಾಗವಾಗಿರಲೇ ಇಲ್ಲ. ಟಿವಿ ವೀಕ್ಷಕರ ಮೂಲಕ ಜಾಹೀರಾತನ್ನು ‘ಜಿಆರ್‌ಪಿ’ಯಿಂದ ನಿರ್ಧರಿಸಲಾಗುತ್ತದೆ. ಕರ್ನಾಟಕದಲ್ಲಿ ಒಟ್ಟು ಸರಾಸರಿ 1300 ಜಿಆರ್‌ಪಿಯಿದೆ. ಇವುಗಳಲ್ಲಿ 24/7 ಚಾನೆಲ್‌ಗಳ ಜಿಆರ್‌ಪಿ 220 ದಾಟಿಲ್ಲ. ಟಿವಿಗಳನ್ನು ಹೆಚ್ಚಾಗಿ ನೋಡುವ 15 ರಿಂದ 50 ವರ್ಷದ ವಯೋಮಾನದವರು ಕೂಡ ಸುದ್ದಿ ಚಾನೆಲ್‌ಗಳನ್ನು ಹೆಚ್ಚಾಗಿ ನೋಡುವುದಿಲ್ಲ. ಜನರಲ್ಲಿ ಟಿವಿ ಚಾನೆಲ್‌ಗಳು ದೊಡ್ಡದು ಎಂಬ ಗ್ರಹಿಕೆಯಿದ್ದರೂ ವಾಸ್ತವವೆ ಬೇರೆಯಿದೆ. ಜನಪ್ರಿಯ ಪತ್ರಿಕೆಯ ಒಂದು ಪುಟದ ಜಾಹೀರಾತು ಹಾಗೂ ಟಿವಿಯಲ್ಲಿ ಎರಡು ದಿನ ಬರುವ ಜಾಹೀರಾತುಗಳ ದರ ಒಂದೆ ಆಗಿರುತ್ತವೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕನ್ನಡ ಚಾನೆಲ್‌ಗಳಲ್ಲಿ ಬರುವ ಒಂದು ವಾರದ ಐಪಿಎಲ್ ಪಂದ್ಯಗಳು ಸುದ್ದಿ ಚಾನೆಲ್‌ಗಳನ್ನು ಮೀರಿಸಿ ಟಿಆರ್‌ಪಿ ಪಡೆಯುತ್ತದೆ. 1300 ಜಿಆರ್‌ಪಿಯಲ್ಲಿ ದೊಡ್ಡ ಪಾಲು ಮನರಂಜನಾ ಮಾಧ್ಯಮಗಳೆ ಪಡೆದುಕೊಳ್ಳುತ್ತವೆ. ಬಾರ್ಕ್ ಅಂಕಿಅಂಶಗಳು ಕೂಡ ಮನರಂಜನಾ ಮಾಧ್ಯಮಗಳ ಟಿಆರ್‌ಪಿ ಕಡಿಮೆ ಇಲ್ಲ ಎಂದು ದೃಢಪಡಿಸುತ್ತವೆ. ಇವೆಲ್ಲವನ್ನು ನೋಡಿದರೆ ಸ್ಥಳಾಂತರಗೊಂಡ ವೀಕ್ಷಕರು ಸುದ್ದಿ ವಾಹಿನಿಗಳ ಬಗ್ಗೆ ಹೆಚ್ಚು ಆದ್ಯತೆ ನೀಡಿಲ್ಲ ಎಂದು ಹೇಳಬಹುದು’ ಎಂದು ಹಿರಿಯ ಪತ್ರಕರ್ತರು ಸುದ್ದಿ ವಾಹಿನಿಗಳ ಭ್ರಮಾಲೋಕದ ಬಗ್ಗೆ ಬಿಚ್ಚಿಟ್ಟರು.
ಒಟ್ಟಾರೆ ಗಮನಿಸಿದರೆ 24/7 ಟಿವಿ ಚಾನೆಲ್‌ಗಳು ಟಿಆರ್‌ಪಿಗಾಗಿ ಜನರ ಮನಸ್ಸನ್ನು ಕಲುಷಿತಗೊಳಿಸುವ ಬದಲು ಕಳೆದುಹೋಗಿರುವ ತನ್ನ ವರ್ಚಸ್ಸನ್ನು ಮರಳಿ ಪಡೆಯಬೇಕಾದರೆ ಇವುಗಳು ಜನತೆಯ ಹಾಗೂ ದೇಶದ ಕಾರ್ಯಸೂಚಿಯೆಡೆಗೆ ಮರಳಬೇಕಾಗಿದೆ. ಶ್ರೀಸಾಮಾನ್ಯನ ದೃಷ್ಟಿಕೋನದೊಂದಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯಗಳೊಂದಿಗೆ ಮಾತನಾಡುವುದನ್ನು ಆರಂಭಿಸಬೇಕಾಗಿದೆ. ಮಾಧ್ಯಮ ಯಾವಾಗ ವೀಕ್ಷಕರ ಕಣ್ಗಾವಲಲ್ಲಿ ಮುಂದುವರಿಯುತ್ತದೆಯೋ ಆಗ ಯಾರೊಬ್ಬರ ಹಂಗಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದಲೂ ಅತಿ ಮುಖ್ಯ ಕಾರ್ಯವಾಗಿದೆ.