ಬೈಡನ್ ಮತ್ತು ಕಮಲಾ ಇಬ್ಬರೂ ಅಮೆರಿಕೆಯ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು. ನವೆಂಬರ್ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ತಾವು ಪುನಃ ಸ್ಪರ್ಧಿಸುವುದಿಲ್ಲ, ಬದಲಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುವುದಾಗಿ ಬೈಡನ್ ಸಾರಿದ್ದಾರೆ
ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ ಕಣದಿಂದ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧದ ಚುನಾವಣಾ ಕಾಳಗದ ಖಡ್ಗವನ್ನು ತಮ್ಮದೇ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರ ಕೈಗೆ ಇತ್ತಿದ್ದಾರೆ. ಟ್ರಂಪ್ ಮತ್ತು ಕಮಲಾ ಅವರ ಈ ಮುಖಾಮುಖಿ ಇನ್ನೂ ಅಂತಿಮ ಅಲ್ಲ. ಬೈಡನ್ ಅವರ ಈ ಪ್ರಸ್ತಾವವನ್ನು ಡೆಮಾಕ್ರಟಿಕ್ ಪಾರ್ಟಿ ಇನ್ನೂ ಅನುಮೋದಿಸಿಲ್ಲ. ಆದರೆ ಡೆಮಾಕ್ರಟಿಕ್ ಪಕ್ಷ ಬೈಡನ್ ಅವರ ಪ್ರಸ್ತಾವವನ್ನು ತಿರಸ್ಕರಿಸುವ ಸಾಧ್ಯತೆ ಕಡಿಮೆ. ಟ್ರಂಪ್ ವಿರುದ್ಧ ತನ್ನ ಅಭ್ಯರ್ಥಿ ಯಾರೆಂಬ ಅನಿಶ್ಚಯತೆಯನ್ನು ಆದಷ್ಟು ಶೀಘ್ರ ಅಂತ್ಯಗೊಳಿಸಲು ಕಾತರವಾಗಿದೆ ಡೆಮಾಕ್ರಟಿಕ್ ಪಕ್ಷ.
ಬೈಡನ್ ಮತ್ತು ಕಮಲಾ ಇಬ್ಬರೂ ಅಮೆರಿಕೆಯ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು. ನವೆಂಬರ್ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ತಾವು ಪುನಃ ಸ್ಪರ್ಧಿಸುವುದಿಲ್ಲ, ಬದಲಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುವುದಾಗಿ ಬೈಡನ್ ಸಾರಿದ್ದಾರೆ. ಡೆಮಾಕ್ರಟಿಕ್ ಪಾರ್ಟಿಯ ಉಮೇದುವಾರಿಕೆಯನ್ನು ತೊರೆಯುವ ಪ್ರಶ್ನೆಯೇ ಇಲ್ಲವೆಂದು ಕಳೆದ ಕೆಲವು ವಾರಗಳಿಂದ ಅವರು ಹಠ ತೊಟ್ಟಿದ್ದರು. ಆದರೆ, ಆದಾಗಲೇ ಬಹಳ ತಡವಾಗಿ ಹೋಗಿರುವುದು ವಾಸ್ತವ. ಬೈಡನ್ ಪಕ್ಕಕ್ಕೆ ಸರಿದು ಬೇರೆ ಅಭ್ಯರ್ಥಿಗೆ ದಾರಿ ಮಾಡಿಕೊಡಬೇಕೆಂಬುದು ಶೇ.61ರಷ್ಟು ಅಮೆರಿಕನ್ನರ ಅಭಿಪ್ರಾಯ ಆಗಿತ್ತು.
ಸ್ಪರ್ಧೆಯಿಂದ ಹಿಂದೆ ಸರಿಯುವಂತೆ 81 ವರ್ಷದ ಜೋ ಬೈಡನ್ ಮೇಲೆ ಡೆಮಾಕ್ರಟಿಕ್ ಪಾರ್ಟಿಯ ಬೆಂಬಲಿಗ ವರ್ಗದಿಂದ ಭಾರೀ ಒತ್ತಡ ಏರ್ಪಟ್ಟಿತ್ತು. ತಮಗಿಂತ ಕೇವಲ ನಾಲ್ಕು ವರ್ಷ ಕಿರಿಯರಾದ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಿದರೆ ಬೈಡನ್ ತೀರಾ ವಯಸ್ಸಾದವರಂತೆ ಕಂಡು ಬರುತ್ತಿದ್ದರು. ಟ್ರಂಪ್ ವಿರುದ್ಧದ ಡಿಬೇಟುಗಳಲ್ಲಿ ಮಂಕಾಗಿಯೂ ದುರ್ಬಲರಾಗಿಯೂ ತೋರಿದ್ದರು. ಇದೀಗ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೆಳವಣಿಗೆಯು ಚುನಾವಣೆಯ ಗತಿ ಸ್ಥಿತಿಯನ್ನು ಬದಲಿಸಬಹುದು ಎಂಬುದು ಡೆಮಾಕ್ರಟರ ಆಶಾವಾದ.

ಡೊನಾಲ್ಡ್ ಟ್ರಂಪ್ ತೀವ್ರ ಬಲಪಂಥೀಯ ಮತ್ತು ಪ್ರಬಲ ಜನಾಂಗೀಯವಾದಿ. ಬಿಳಿಯ ಪುರುಷಾಧಿಪತ್ಯವನ್ನು ಎತ್ತಿ ಹಿಡಿದಿರುವವರು. ಸ್ತ್ರೀದ್ವೇಷಿ. ಕಪ್ಪು ವರ್ಣೀಯರ ಪ್ರಬಲ ವಿರೋಧಿ. 590 ಕೋಟಿ ಡಾಲರುಗಳ ಸಂಪತ್ತಿನ ಒಡೆಯ. ಉಗ್ರರಾಷ್ಟ್ರವಾದಿ. ತಂದೆಯ ರಿಯಲ್ ಎಸ್ಟೇಟ್ ದಂಧೆಯ ಉತ್ತರಾಧಿಕಾರಿ. ವ್ಯಾಪಾರೋದ್ಯಮಿ. ಹುಸಿ ಪಿತೂರಿ ಸಿದ್ಧಾಂತಗಳ ಸರದಾರ ಮತ್ತು ತಪ್ಪುದಾರಿಗೆಳೆಯುವ ಸುಳ್ಳುಗಳನ್ನು ಹೇಳುವ ಹಮ್ಮೀರ. 2016ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ರನ್ನು ಸೋಲಿಸಿದ್ದರು. ಬೈಡನ್ ವಿರುದ್ಧ ಸೋಲು ಒಪ್ಪಿಕೊಳ್ಳಲು ತಯಾರಿಲ್ಲದೆ ಚುನಾವಣಾ ಫಲಿತಾಂಶಗಳನ್ನು ಬದಲಿಸಲು ಪ್ರಯತ್ನಿಸಿದ್ದವರು. ತಮ್ಮ ಬೆಂಬಲಿಗ ದಂಗೆಕೋರರನ್ನು ಪ್ರಚೋದಿಸಿದವರು. ಹಗಲಿರುಳೂ ದುಡಿಯುವ ತಾವು ದಿನಕ್ಕೆ ಐದಾರು ತಾಸುಗಳ ಕಾಲ ಮಾತ್ರವೇ ನಿದ್ರಿಸುವುದಾಗಿ ಹೇಳಿಕೊಂಡವರು.
ಪೈಪೋಟಿಯ ಮುಂಚೂಣಿಗೆ ಬಂದಿರುವ ಕಮಲಾ ಹ್ಯಾರಿಸ್ ಅಮೆರಿಕೆಯ ಮೊದಲ ಕಪ್ಪು ಜನಾಂಗೀಯ ಉಪಾಧ್ಯಕ್ಷೆ. 59ರ ಕಿರಿಯ ವಯಸ್ಸಿನವರು. ಭಾರತೀಯ ಬೇರಿನವರು. ಅವರ ತಾಯಿ ಶ್ಯಾಮಲಾ ಗೋಪಾಲನ್ ಭಾರತ ಸಂಜಾತೆ. ತಂದೆ ಜಮೈಕಾದಲ್ಲಿ ಜನಿಸಿದವರು. ಕಮಲಾ ಹುಟ್ಟಿದ್ದು ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡಿನಲ್ಲಿ. ಕಮಲಾ ಅವರ ಪತಿ ಯಹೂದಿ (ಜ್ಯೂಯಿಶ್) ಮೂಲದವರು.
ಗಾಜಾ ಮೇಲೆ ಇಸ್ರೇಲ್ ನಡೆಸಿರುವ ಎಣೆಯಿಲ್ಲದ ಆಕ್ರಮಣ ಮತ್ತು ಮೇರೆಯಿಲ್ಲದ ಹಿಂಸೆಯನ್ನು ನಿಲ್ಲಿಸಲು ಅಮೆರಿಕ ಮನಃಪೂರ್ವಕ ಪ್ರಯತ್ನವನ್ನೇನೂ ಮಾಡಿಲ್ಲ. ಬದಲಾಗಿ ಇಸ್ರೇಲ್ ಗೆ ಭಯಾನಕ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅದರ ಶಕ್ತಿಯನ್ನು ಹೆಚ್ಚಿಸಿದೆ. ಬೈಡನ್ ಬಹಳ ತಡವಾಗಿ ಕದನ ವಿರಾಮದ ತೋರಿಕೆಯ ಹೇಳಿಕೆಯನ್ನೇನೋ ನೀಡಿದರು. ಇಂತಹ ಹೇಳಿಕೆಯನ್ನು ಬೈಡನ್ ಗಿಂತ ಮೊದಲೇ ಕಮಲಾ ಮಾಡಿದ್ದರು ಎಂಬುದೇ ಆಕೆಯ ಅಗ್ಗಳಿಕೆ. ಅಮೆರಿಕೆಯ ಬಹುಸಂಖ್ಯಾತ ಯಹೂದಿಗಳು ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು.

ಅಮೆರಿಕೆಯ ಜನಪ್ರಿಯ ಅಧ್ಯಕ್ಷರಲ್ಲಿ ಒಬ್ಬರೆನಿಸಿದ್ದ ಬರಾಕ್ ಒಬಾಮಾ ಮತ್ತು ಕಮಲಾ 15 ವರ್ಷಗಳ ಹಿಂದೆ ಒಟ್ಟಿಗೆ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದ ಸಮಕಾಲೀನರು. ಭರವಸೆಯ ರಾಜಕಾರಣಿಗಳೆನಿಸಿದ್ದರು.
ಕಮಲಾ ಕಾನೂನು ಪದವೀಧರೆ. ನ್ಯಾಯವಾದಿಯಾಗಿ ಮೂರು ದಶಕಗಳ ಸುದೀರ್ಘ ಅನುಭವ. 2010ರಲ್ಲೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದರು. 2016ರಲ್ಲಿ ಅಮೆರಿಕೆಯ ಸೆನೆಟ್ ಗೆ ಆಯ್ಕೆ ಆಗಿದ್ದರು. ಟ್ರಂಪ್ ಅವರ ಕಾರ್ಯಶೈಲಿ ಅದರಲ್ಲಿಯೂ ವಲಸೆ ವಿರುದ್ಧ ನೀತಿ ನಿರ್ಧಾರಗಳ ಅಗ್ರಗಣ್ಯ ವಿಮರ್ಶಕಿ. ನ್ಯಾಯಾಂಗಕ್ಕೆ ಟ್ರಂಪ್ ನಾಮಕರಣ ಮಾಡಿದ್ದ ಅಭ್ಯರ್ಥಿಗಳನ್ನು ಪ್ರಖರ ಪಾಟೀ ಸವಾಲಿಗೆ ಗುರಿ ಮಾಡಿದ್ದವರು. 2018ರಲ್ಲೇ ಡೆಮಾಕ್ರೆಟಿಕ್ ಪಾರ್ಟಿಯ ಉದಯೋನ್ಮುಖ ತಾರೆ ಎನಿಸಿಕೊಂಡವರು. ಅಮೆರಿಕ ದೇಶಕ್ಕೆ ವಲಸೆ ಬಂದವರ ಮಗಳೊಬ್ಬಳು ಉಪಾಧ್ಯಕ್ಷ ಹುದ್ದೆಗೆ ಏರಿದ್ದು ಅದೇ ಮೊದಲು. ವಕೀಲರಾಗಿ ವಾದಗಳು ಚರ್ಚೆಗಳಲ್ಲಿ ವಿಜೃಂಭಿಸಿದವರು. ಬೈಡನ್ ಸರ್ಕಾರದ ಪರವಾಗಿ ನಿಂತ ಅದ್ವಿತೀಯ ವಕ್ತಾರೆ. ಟ್ರಂಪ್ ಅವರ ಸುಳ್ಳಿನ ಮತ್ತು ದ್ವೇಷದ ಸುದೀರ್ಘ ಇತಿಹಾಸದ ಮೇಲೆ ದಾಳಿ ನಡೆಸಲು ಈಕೆಗಿಂತ ಉತ್ತಮ ಅಭ್ಯರ್ಥಿ ಬೇಕೇ ಎನ್ನುತ್ತಾರೆ ಕಮಲಾ ಬೆಂಬಲಿಗರು.
ಅಮೆರಿಕೆಯ ಸಂವಿಧಾನದ ಪ್ರಕಾರ ಬೈಡನ್ ನಂತರ ಉಪಾಧ್ಯಕ್ಷೆ ಕಮಲಾ ಅವರದು ಎರಡನೆಯ ಅತ್ಯುನ್ನತ ಪದವಿ. ಬೈಡನ್ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಈಕೆ ರಾಷ್ಟ್ರಾಧ್ಯಕ್ಷ ಹುದ್ದೆಯ ಮೊತ್ತ ಮೊದಲ ಕಪ್ಪು ಮಹಿಳೆ. ಹೀಗಾಗಿ ಈಕೆಯ ಉಮೇದುವಾರಿಕೆಯನ್ನು ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲ ಡೆಮಾಕ್ರಟಿಕ್ ಪಕ್ಷ. ತನ್ನ ಗೆಲುವಿಗೆ ಪೂರಕ ಎನಿಸುವ ಅಭ್ಯರ್ಥಿಯೊಬ್ಬರನ್ನು ಉಪರಾಷ್ಟ್ರಪತಿ ಹುದ್ದೆಗೆ ಆರಿಸಿಕೊಳ್ಳಬಹುದು.
ಚುನಾವಣೆ ಸಮೀಕ್ಷೆಗಳ ಪ್ರಕಾರ ಬೈಡನ್ ಗೆ ಹೇಳಿಕೊಳ್ಳುವಂತಹ ಮತದಾರರ ಬೆಂಬಲವೇನೂ ಇರಲಿಲ್ಲ. ಕಮಲಾ ಅವರ ಪರಿಸ್ಥಿತಿ ಬೈಡನ್ ಗಿಂತ ಕೊಂಚ ವಾಸಿ. ಬೈಡನ್ ಹಿಂದೆ ಸರಿಯುವಲ್ಲಿ ಇಷ್ಟು ತಡ ಮಾಡಿರುವ ಕಾರಣ ಅವರ ಪರವಾಗಿ ನಡೆಸಿದ್ದ ಪ್ರಚಾರದ ಸಿದ್ಧತೆಗಳು ನೀರುಪಾಲಾಗಿವೆ. ಚುನಾವಣಾ ತಂತ್ರ ಮತ್ತು ಪ್ರಚಾರ ವ್ಯವಸ್ಥೆಯನ್ನು ಡೆಮಾಕ್ರಟಿಕ್ ಪಕ್ಷ ಹೊಸದಾಗಿ ಶುರುವಾತಿನಿಂದ ರೂಪಿಸಬೇಕಾಗಿ ಬಂದಿದೆ. ಆದರೆ ರಿಪಬ್ಲಿಕನ್ ಪಕ್ಷದ ಪ್ರಬಲ ಎದುರಾಳಿ ಟ್ರಂಪ್ ಬಹಳ ಮೊದಲಿನಿಂದಲೇ ಅಬ್ಬರ ಆರ್ಭಟದ ಪ್ರಚಾರ ನಡೆಸಿದ್ದಾರೆ. ಶಕ್ತಿಶಾಲಿ ಪ್ರದರ್ಶನದ ಪ್ರಯತ್ನ ನಡೆಸಿದ್ದಾರೆ.

ಉಪಾಧ್ಯಕ್ಷೆಯಾಗಿ ಕಮಲಾ ಅವರಿಗೆ ಮೆಕ್ಸಿಕನ್ ಅಕ್ರಮ ಪ್ರವಾಸಿಗಳ ಬಿಕ್ಕಟ್ಟನ್ನು ನಿವಾರಿಸುವ ಕೆಲಸ ವಹಿಸಲಾಗಿತ್ತು. ಸವಾಲೇ ಆಗಿದ್ದ ಪರಿಣಮಿಸಿದ್ದ ಈ ಕೆಲಸದಲ್ಲಿ ಆಕೆ ಟೀಕೆ ಟಿಪ್ಪಣಿಗಳನ್ನು ಎದುರಿಸಿದ್ದರು. ಮಹಿಳೆಯರ ಗರ್ಭಪಾತದ ಹಕ್ಕಿನ ಪ್ರತಿಪಾದನೆಯಲ್ಲಿ ಅವರ ಕೆಲಸ ಮೆಚ್ಚುಗೆ ಗಳಿಸಿತ್ತು. ಈ ಹಿಂದೆ 2020ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಮಲಾ ಚುನಾವಣೆಯ ಪ್ರಾಥಮಿಕ ಹಂತದಲ್ಲೇ ಸ್ಪರ್ಧೆಯಿಂದ ಹೊರಬೀಳಬೇಕಾಗಿ ಬಂದಿತ್ತು. ಬೈಡನ್ ಅವರು ತಮ್ಮ ಉಪಾಧ್ಯಕ್ಷೆ ಉಮೇದುವಾರ್ತಿಯಾಗಿ ಕಮಲಾ ಅವರನ್ನು ಆಯ್ದುಕೊಂಡಿದ್ದರು. ಕಪ್ಪು ಜನಾಂಗದ ಮತದಾರರನ್ನು ಒಲಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಈ ಹೊತ್ತಿನಲ್ಲಿ ಎದುರಾಳಿಗಳಾಗಿರುವ ಎರಡು ರಾಜಕೀಯ ಪಕ್ಷಗಳು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು. ಇವುಗಳನ್ನು ಅಜಮಾಸಾಗಿ ಇಂಗ್ಲೆಂಡಿನ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳಿಗೆ ಹೋಲಿಸಬಹುದು. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಒಲವು ನಿಲುವುಗಳ ಕುರಿತು ಸಂಕ್ಷಿಪ್ತವಾಗಿಯಾದರೂ ತಿಳಿಯುವ ಅಗತ್ಯವಿದೆ.
ಅಮೆರಿಕ ಈಗಾಗಲೇ ಅಂತರ್ಯುದ್ಧಕ್ಕೆ ಇಳಿದಿದೆ. ಬಡ ಬಿಳಿಯರು ಮತ್ತು ಬಡ ಕಪ್ಪುಜನರನ್ನು ಒಟ್ಟುಗೊಳಿಸುವ ವರ್ಗ ರಾಜಕಾರಣದ ಉದಯವನ್ನು ನಿರಂತರವಾಗಿ ತಡೆ ಹಿಡಿಯಲಾಗಿದೆ. ಗುಲಾಮಗಿರಿಯ ಮೊದಲಿನ ಮತ್ತು ಗುಲಾಮಗಿರಿಯ ಅಂತ್ಯದ ನಂತರದ ಅಮೆರಿಕದಲ್ಲಿ ಜನಾಂಗೀಯ ರಾಜಕಾರಣವೇ ವಿಜೃಂಭಿಸುತ್ತ ಬಂದಿದೆ. ಎರಡು ಸಂಸ್ಕೃತಿಗಳು ಇಬ್ಭಾಗವಾಗಿ ಒಡೆದಿರುವ ಒಂದು ದೇಶ ಅಮೆರಿಕ ಎಂದು ಚಿಂತಕ ಜೆಫರಿ ಸ್ಯಾಕ್ಸ್ ವರ್ಷಗಳ ಹಿಂದೆಯೇ ಹೇಳಿದ್ದರು.

ಕಪ್ಪುಜನರು ಮತ್ತು ಅಮೆರಿಕದ ಮೂಲನಿವಾಸಿಗಳಾದ ರೆಡ್ ಇಂಡಿಯನ್ ಬುಡಕಟ್ಟುಗಳ ಮೇಲೆ ದಮನ ದೌರ್ಜನ್ಯ ನಡೆಸುತ್ತಲೇ ಬಂದಿರುವ ಬಹುತೇಕ ಬಿಳಿಯರು ತಾವೇ ಶ್ರೇಷ್ಠರು ಮತ್ತು ಸಾರ್ವಭೌಮರು ಎಂದು ಸಾಧಿಸುತ್ತಿರುವವರು. ರಿಪಬ್ಲಿಕನ್ ಪಾರ್ಟಿಯ ಬೆಂಬಲಿಗರಾದ ಇವರು ಡೆಮಕ್ರಾಟಿಕ್ ಪಾರ್ಟಿ ಮತ್ತು ಕಪ್ಪುಜನ-ರೆಡ್ ಇಂಡಿಯನ್ನರಿಗೆ ಮೀಸಲಾತಿಯ ವಿರೋಧಿಗಳು. ಕಪ್ಪುಜನರಿಗಿಂತ ಬಿಳಿಯರು ಶ್ರೇಷ್ಠರು ಎಂಬ ಜನಾಂಗೀಯ ಭಾವನೆಯನ್ನೇ ತಬ್ಬಿ ಹಿಡಿದರು ಬಡ ಬಿಳಿಯರು. ಹೀಗಾಗಿ ಅವರು ಬಡ ಕಪ್ಪುಜನರ ಜೊತೆ ಕೈ ಕಲೆಸಿ ಒಂದು ಒಗ್ಗಟ್ಟಿನ ವರ್ಗವಾಗಿ ನಿಲ್ಲಲು ತಯಾರಿಲ್ಲ. ಕುಲೀನ ಸಿರಿವಂತ ಬಿಳಿಯರ ಮೇಲೆ ಹೆಚ್ಚಿನ ತೆರಿಗೆ ಹೇರುವ ಮೂಲಕ ಬರುವ ಆದಾಯದಿಂದ ಬಡ ಬಿಳಿ ಜನರು ಮತ್ತು ಬಡ ಕಪ್ಪುಜನರ ವರ್ಗಕ್ಕೆ ಜೀವನಾವಕಾಶ ಕಲ್ಪಿಸುವ ಚಿಂತನೆ ಮೇಲೆ ಬಾರದೆ ಕಮರಿ ಹೋಯಿತು.
ಅಲ್ಪಸಂಖ್ಯಾತ ವಿರೋಧದ ನೋಟವನ್ನು ರೂಪಿಸಿರುವ ಅವೇ ಸಾಂಸ್ಕೃತಿಕ ಶಕ್ತಿಗಳು ರಿಪಬ್ಲಿಕನ್ ಪಾರ್ಟಿಯ ಬಂದೂಕು ಸಂಸ್ಕೃತಿಯನ್ನೂ ಕಟ್ಟಿ ನಿಲ್ಲಿಸಿವೆ. ಮೂಲನಿವಾಸಿ ಅಮೆರಿಕನ್ ಗ್ರಾಮಗಳ ಮೇಲೆ ದಾಳಿ ನಡೆಸಿದ ಮತ್ತು ಪರಾರಿಯಾದ ಕಪ್ಪು ಗುಲಾಮರನ್ನು ಬಿಡದೆ ಬೆನ್ನಟ್ಟಿ ಬೇಟೆಯಾಡಿದ್ದು ಇದೇ ರಿಪಬ್ಲಿಕನ್ ಬಂದೂಕು ಸಂಸ್ಕೃತಿ.
ಜನಾಂಗೀಯವಾದವನ್ನು ಬಹುತೇಕ ನೂರು ವರ್ಷಗಳ ಕಾಲ ರಭಸದಿಂದ ಆಚರಿಸುತ್ತ ಬಂದಿತ್ತು ಅಮೆರಿಕದ ದಕ್ಷಿಣ ಭೂಭಾಗ. ಉತ್ತರದ ಡೆಮಾಕ್ರಟರ ಬೆಂಬಲದೊಂದಿಗೆ ಅಮೆರಿಕದ ಲೋಕಸಭೆ ನಾಗರಿಕ ಹಕ್ಕುಗಳ ಕಾಯಿದೆಯನ್ನು 1964ರಲ್ಲಿ ಮತ್ತು ಮತದಾನದ ಹಕ್ಕನ್ನು 1965ರಲ್ಲಿ ಜಾರಿಗೆ ತರುವ ತರುವ ತನಕ ಈ ಅನಾಗರಿಕ ಆಚರಣೆ ತಡೆಯಿಲ್ಲದೆ ನಡೆದಿತ್ತು. ಈ ಹಕ್ಕುಗಳ ಜಾರಿಯ ಮರುಕ್ಷಣವೇ ದಕ್ಷಿಣದ ಬಿಳಿಯ ಮತದಾರರು ಡೆಮಾಕ್ರಟಿಕ್ ಪಾರ್ಟಿಯನ್ನು ಹಿಂಡು ಹಿಂಡಾಗಿ ತೊರೆದರು. ಆಫ್ರಿಕನ್ ಅಮೆರಿಕನ್ನರು ಮತ್ತು ಇತರೆ ಅಲ್ಪಸಂಖ್ಯಾತರು ಮೇಲೆ ಬರುವುದನ್ನು ವಿರೋಧಿಸಿದರು. ಆಫ್ರಿಕನ್ ಅಮೆರಿಕನ್ನರು ಮತ್ತು ಇತರೆ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಸುಧಾರಿಸುವ ಇಲ್ಲವೇ ಅವರಿಗೆ ಶಕ್ತಿ ತುಂಬುವ ಹಣಕಾಸಿನ ವರ್ಗಾವಣೆಯ ಎಲ್ಲ ಶಾಸನಗಳನ್ನು ಪ್ರತಿರೋಧಿಸಿದರು. ರಿಪಬ್ಲಿಕನ್ನರು ದಕ್ಷಿಣ ಭೂಭಾಗದ ಪಕ್ಷವಾಗಿಯೂ, ಡೆಮಾಕ್ರಟರು ಈಶಾನ್ಯ ಮತ್ತು ಪಶ್ಚಿಮ ಪೆಸಿಫಿಕ್ ಪಕ್ಷವಾಗಿಯೂ ಹೊರ ಹೊಮ್ಮಿದರು. ಮಧ್ಯ ಪಶ್ಚಿಮ ಮತ್ತು ಪಶ್ಚಿಮ ಪರ್ವತ ಶ್ರೇಣಿಯ ರಾಜ್ಯಗಳು ಯಾವ ಕಡೆಗೆ ಬೇಕಾದರೂ ಪುಟಿದು ಹೊರಳುವ ‘ಸ್ವಿಂಗ್’ ಸೀಮೆಗಳು ಎನಿಸಿಕೊಂಡವು. ಮಹಾನ್ ಕೈಗಾರಿಕಾ ಸರೋವರ ಸೀಮೆಯು ಡೆಮಾಕ್ರಟ್ ಪಕ್ಷಪಾತಿಯಾಯಿತು. ಮಧ್ಯ ಪಶ್ಚಿಮ ಕೃಷಿ ಸೀಮೆಯ ರಾಜ್ಯಗಳು ಮತ್ತು ಪರ್ವತ ಪ್ರಾಂತಗಳು ರಿಪಬ್ಲಿಕನ್ ಪಕ್ಷದೆಡೆಗೆ ವಾಲಿದವು.

ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳು ಕೇವಲ ಭಿನ್ನ ಸಂಸ್ಕೃತಿಗಳು ಮತ್ತು ಭಿನ್ನ ಭೂ ಭಾಗಗಳ ಪಕ್ಷಗಳು ಮಾತ್ರವೇ ಅಲ್ಲ, ಅವುಗಳ ಅರ್ಥವ್ಯವಸ್ಥೆಗಳ ನಡುವೆ ಕೂಡ ನೆಲ ಮುಗಿಲಿನ ಅಂತರವಿದೆ. ಈಶಾನ್ಯ ಮತ್ತು ಪೆಸಿಫಿಕ್ ರಾಜ್ಯಗಳು ಅಮೆರಿಕೆಯ ಉನ್ನತ ತಂತ್ರಜ್ಞಾನ, ಉನ್ನತ ಶಿಕ್ಷಣ, ನವ ನಾವೀನ್ಯತೆ, ಉತ್ತಮ ಆದಾಯದ ಉದ್ಯೋಗಗಳ ಮುಂಚೂಣಿಯಲ್ಲಿವೆ. ದಕ್ಷಿಣದ ರಾಜ್ಯಗಳು ಈ ಎಲ್ಲ ಅಂಶಗಳಲ್ಲಿ ಹಿಂದೆ ಬಿದ್ದಿವೆ. ದಕ್ಷಿಣ ಮತ್ತು ಮಧ್ಯಪಶ್ಚಿಮದ ಬಿಳಿಯರು ದುಡಿಯವ ವರ್ಗಗಳಿಗೆ ಸೇರಿದವರು. ಆದರೂ ತಮ್ಮ ಸ್ಥಾನಮಾನ ಮತ್ತು ಜನಾಂಗೀಯ ವಿಶೇಷಾಧಿಕಾರಗಳನ್ನು ಸಮರ್ಥಿಸಿಕೊಳ್ಳುತ್ತ ಬಂದಿರುವವರು. ಆಟೋಮೇಷನ್ ಮತ್ತು ವಿದೇಶೀ ವ್ಯಾಪಾರದ ಕಾರಣ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಬತ್ತಿ ಹೋಗಿರುವ ಪರಿಸ್ಥಿತಿಯಲ್ಲಿ ಉದ್ಯೋಗಗಳಿಗಾಗಿ ಹೋರಾಡಿರುವವರು ಇವರು. ರಿಪಬ್ಲಿಕನ್ನರ ಜನಾಂಗೀಯ ಆಧಾರಿತ ರಾಜಕಾರಣವನ್ನು ತೊರೆದು ವರ್ಗ ಆಧಾರಿತ ರಾಜಕಾರಣವನ್ನು ಅವಲಂಬಿಸಿದ್ದರೆ ಇವರ ಪರಿಸ್ಥಿತಿ ಸುಧಾರಿಸುತ್ತಿತ್ತು. ವಾಸ್ತವವಾಗಿ ಇವರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿರುವವರು ಕುಲೀನ ಕಾರ್ಪೊರೇಟ್ ಬಿಳಿಯರೇ ವಿನಾ ಬಡ ಆಫ್ರಿಕನ್ ಅಮೆರಿಕನ್ನರು ಮತ್ತು ಇತರೆ ಅಲ್ಪಸಂಖ್ಯಾತರಲ್ಲ.
ಉತ್ತಮ ಗುಣಮಟ್ಟದ ಪಬ್ಲಿಕ್ ಶಾಲೆಗಳು, ಕೈಗೆಟುಕುವ ಆರೋಗ್ಯ ವ್ಯವಸ್ಥೆ ಹಾಗೂ ಸುಭದ್ರ ಪರಿಸರ ಇವರ ಪಾಲಿಗೆ ಆಕಾಶ ಕುಸುಮ ಆಗಿರುವುದು ಕುಲೀನ ಕಾರ್ಪೊರೇಟ್ ಬಿಳಿಯರಿಂದಲೇ. ರಿಪಬ್ಲಿಕನ್ ಪಾರ್ಟಿಯ ಆಗರ್ಭ ಶ್ರೀಮಂತ ದಾನಿಗಳ ಹಿತ ರಕ್ಷಿಸುವ ಸಾಂಸ್ಕೃತಿಕ ಸಮರದ ಕಾಲಾಳುಗಳಾಗಿ ಕೆಲಸ ಮಾಡುತ್ತಾರೆ ದಕ್ಷಿಣದ ಬಿಳಿಯ ಪುರುಷ ಸೆನೇಟರ್ ಗಳು ಅಥವಾ ಸಂಸದರು. ಈ ರಿಪಬ್ಲಿಕನ್ ಆಗರ್ಭ ಶ್ರೀಮಂತ ದಾನಿಗಳು ಕಾರ್ಪೊರೇಟ್ ತೆರಿಗೆಗಳ ಕಡಿತ ಮತ್ತು ಪರಿಸರ ಸಂಬಂಧದ ನಿರ್ಬಂಧಗಳ ಸಡಿಲಿಕೆಯ ಗರಿಷ್ಠ ಫಲಾನುಭವಿಗಳು. ಮತ್ತೊಂದೆಡೆಗೆ ಆಫ್ರಿಕನ್ ಅಮೆರಿಕನ್ನರು ಮತ್ತು ಹಿಸ್ಪ್ಯಾನಿಕ್ ಜನಾಂಗಗಳನ್ನು ಆಹುತಿ ತೆಗೆದುಕೊಳ್ಳುವುದೇ ರಿಪಬ್ಲಿಕನ್ ಪಕ್ಷದ ಆದ್ಯ ಪ್ರಣಾಳಿಕೆ.
ಹೀಗಾಗಿ ಅಮೆರಿಕೆಯ ಅಂತರ್ಯುದ್ಧ ಸದ್ಯ ಭವಿಷ್ಯದಲ್ಲಿ ಕಿರಿದಾಗುವ ಸುಳಿವಿಲ್ಲ, ಬದಲಾಗಿ ಹಿರಿದಾಗುತ್ತಲೇ ಹೋಗುತ್ತದೆ. ಸಿರಿವಂತ ಕುಲೀನ ಕಾರ್ಪೊರೇಟ್ ಗಳಿಂದ ಹೆಚ್ಚು ತೆರಿಗೆಯನ್ನು ವಸೂಲು ಮಾಡುವ ತನಕ ಮತ್ತು ಅವುಗಳ ಮೇಲೆ ಉತ್ತರದಾಯಿತ್ವವನ್ನು ಹೇರುವ ತನಕ ಈ ಅಂತರ್ಯುದ್ಧ ಅಂತ್ಯಗೊಳ್ಳುವುದಿಲ್ಲ. ಅಮೆರಿಕೆಯ ಎಲ್ಲ ಭೂಭಾಗಗಳು, ಎಲ್ಲ ಜನಾಂಗಗಳ ದುಡಿಯುವ ವರ್ಗಗಳು ಈ ದಿಸೆಯಲ್ಲಿ ಒಂದಾಗಲೇ ಬೇಕಿದೆ. ಅಲ್ಲಿಯ ತನಕ ಅವುಗಳಿಗೆ ಮುಕ್ತಿಯಿಲ್ಲ ಎನ್ನುತ್ತಾರೆ ಜೆಫರಿ ಸ್ಯಾಕ್ಸ್.
ತಮ್ಮ ಸಮಾಜವನ್ನು ವರ್ಣದ್ವೇಷ ಮತ್ತು ವಿಭಜನೆಗೆ ಮತ್ತಷ್ಟು ಹತ್ತಿರ ಒಯ್ಯುವ ಟ್ರಂಪ್ ಅವರನ್ನು ಅಮೆರಿಕನ್ ಮತದಾರರು ಗೆಲ್ಲಿಸುವರೇ ಅಥವಾ ಕಮಲಾ ಹ್ಯಾರಿಸ್ ಅವರ ಕೈ ಹಿಡಿಯುವರೇ ಎಂಬುದನ್ನು ಮುಂಬರುವ ದಿನಗಳೇ ಹೇಳಬೇಕಿದೆ