ದೆಹಲಿ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಹಲವರಿದ್ದಾರೆ. ಯಾರು ಎನ್ನುವುದು ಊಹಿಸಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಎಲ್ಲ ಹೆಸರುಗಳು ಬದಲಾಗಬಹುದು.
ಹತ್ತು ದಿನಗಳ ಹಿಂದೆ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯು ಸರಿ ಸುಮಾರು ಮೂರು ದಶಕದ ನಂತರ ಅಚ್ಚರಿಯ ಗೆಲುವು ಸಾಧಿಸಿದೆ. 70 ಸ್ಥಾನಗಳ ಪೈಕಿ 48 ಸ್ಥಾನಗಳನ್ನು ಜಯಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿದ್ದ ಎಎಪಿ ಕೇವಲ 22 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್, ಸತ್ಯೇಂದರ್ ಜೈನ್ ಅವರಂತಹ ಘಟಾನುಘಟಿಗಳು ಚುನಾವಣೆಯಲ್ಲಿ ನೆಲಕಚ್ಚಿದರು.
ಕೇಸರಿ ಪಕ್ಷ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸಭೆ ನಡೆಸುತ್ತಿದೆ. ಫೆ. 19 ಅಥವಾ 20ರಂದು ದೆಹಲಿಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಆರಂಭದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಮಾಜಿ ಸಿಎಂ ಸಾಹೀಬ್ ಸಿಂಗ್ ಪುತ್ರ ಪರ್ವೇಶ್ ವರ್ಮಾ ಅವರ ಹೆಸರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಪ್ರಮುಖವಾಗಿ ಕೇಳಿ ಬಂದಿತ್ತು. ಆದರೆ ದಿನದಿಂದ ದಿನಕ್ಕೆ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಹಲವು ಹೆಸರುಗಳು ಸೇರಿಕೊಳ್ಳುತ್ತಿವೆ.
ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸಲು ಬಿಜೆಪಿಯು ಎರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬಹುದು ಎನ್ನಲಾಗುತ್ತಿದೆ. ಎರಡು ಡಿಸಿಎಂ ಸೂತ್ರವನ್ನು ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಅನುಸರಿಸಿತ್ತು. ಪಕ್ಷ ಸೋತಾಗ ತಾನು ಹೊಣೆಯಲ್ಲ ಎಂದು ಜಾರಿಕೊಳ್ಳುವ ನಾಯಕರು, ಗೆದ್ದಾಗ ತನ್ನಿಂದಲೇ ಬಿಜೆಪಿ ಗೆಲುವು ಸಾಧಿಸಿತು ಎನ್ನುತ್ತಿದ್ದು, ತಮಗೂ ಉನ್ನತ ಹುದ್ದೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಯಾವುದೇ ರಾಜ್ಯದಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಹೇಗೆ ಆಯ್ಕೆ ಮಾಡುತ್ತದೆ ಮತ್ತು ಅದರ ಯೋಜನೆಗಳೇನು ಎಂಬುದನ್ನು ಸುಲಭದಲ್ಲಿ ಅರ್ಥ ಮಾಡಿಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಜೊತೆ ಆರ್‌ಎಸ್‌ಎಸ್ ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ದೆಹಲಿಯಲ್ಲಿ ಸಂಘಪರಿವಾರದ ಉನ್ನತಮಟ್ಟದ ಸಭೆಗಳು ಶುರುವಾಗಿದ್ದು ಕಳೆದ ಎರಡು ದಿನಗಳಿಂದ ಚರ್ಚೆಗಳು ಜೋರಾಗಿವೆ. ಸಿಎಂ ಆಯ್ಕೆಯ ವಿಚಾರದಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ. ಆದರೆ ಬಿಜೆಪಿ ಇಲ್ಲಿಯವರೆಗೂ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ.
ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಅಥವಾ ಛತ್ತೀಸ್‌ಗಢದಲ್ಲಿ ಅಚ್ಚರಿಯ ಹೆಸರುಗಳನ್ನು ಕೊನೆ ಕ್ಷಣದಲ್ಲಿ ಪ್ರಕಟಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ ಯಾರೂ ನಿರೀಕ್ಷಿಸಿರದ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅದೇ ರೀತಿ, ಮಧ್ಯಪ್ರದೇಶದಿಂದ ಇದ್ದಕ್ಕಿದ್ದಂತೆ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಮೋಹನ್ ಯಾದವ್ ಅವರಿಗೆ ರಾಜ್ಯದ ಉಸ್ತುವಾರಿ ವಹಿಸಲಾಯಿತು. ಅದೇ ರೀತಿ, ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರ ಪ್ರಾಬಲ್ಯ ಕೊನೆಗೊಂಡು, ಅವರ ಸ್ಥಾನಕ್ಕೆ ಭಜನ್‌ಲಾಲ್ ಶರ್ಮಾ ಅವರನ್ನು ನೇಮಿಸಲಾಯಿತು. ಛತ್ತೀಸ್‌ಗಢದಲ್ಲೂ ರಮಣ್ ಸಿಂಗ್ ಅವರನ್ನು ಪದಚ್ಯುತಗೊಳಿಸಿ ಬುಡಕಟ್ಟು ಸಮುದಾಯದ ವಿಷ್ಣು ದೇವ್ ಸಾಯಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು.
ಇವೆಲ್ಲದರ ನಡುವೆ ಮಹಿಳಾ ಹೆಸರುಗಳು ಮುನ್ನಲೆಗೆ ಬರುತ್ತಿವೆ. ಈ ಹಿಂದೆ ದೆಹಲಿಯ ಮುಖ್ಯಮಂತ್ರಿಗಳಾಗಿ ಈಗಾಗಲೇ ಮೂವರು ಮಹಿಳೆಯರು ಅಧಿಕಾರ ನಿರ್ವಹಿಸಿದ್ದಾರೆ. ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಅತಿಶಿ ಸಿಎಂ ಆಗಿದ್ದರು. ಈಗ ಮತ್ತೊಬ್ಬರು ಮಹಿಳೆಯನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಬಾರಿ ಮಹಿಳಾ ಮುಖ್ಯಮಂತ್ರಿ ಹುದ್ದೆಗೆ ಒಂದಷ್ಟು ಪ್ರಮುಖ ಸ್ಪರ್ಧಿಗಳಿದ್ದಾರೆ. ಇದರಲ್ಲಿ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ ಮತ್ತು ಬನ್ಸುರಿ ಸ್ವರಾಜ್ ಸೇರಿದ್ದಾರೆ. ಸ್ಮೃತಿ ಇರಾನಿ ಮತ್ತು ಮೀನಾಕ್ಷಿ ಲೇಖಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರೆ, ಬನ್ಸುರಿ ಮೊದಲ ಬಾರಿಗೆ ಸಂಸದೆಯಾಗಿದ್ದು, ಮಾಜಿ ಸಿಎಂ ಸುಷ್ಮಾ ಸ್ವರಾಜ್ ಅವರ ಪುತ್ರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪಾಠ ಕಲಿಯದ ‘ರೈಲ್ವೆ ಇಲಾಖೆ’
ಇವರೆಲ್ಲರ ಜೊತೆ ಬಿಜೆಪಿ ನಾಯಕಿ ರೇಖಾ ಗುಪ್ತಾ ಕೂಡ ಮುಖ್ಯಮಂತ್ರಿಯಾಗಬಹುದು ಎಂಬ ಸುದ್ದಿಗಳು ಹರಿದಾಡುತ್ತಿದೆ. ಬಿಜೆಪಿ ಯುವ ಮೋರ್ಚಾದ ದೆಹಲಿ ಘಟಕದ ಕಾರ್ಯದರ್ಶಿಯಾಗಿರುವ ಇವರು ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಪಾಲಿಕೆ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ರೇಖಾ ಅವರು ಶಾಲಿಮಾರ್ ಬಾಗ್ ಕ್ಷೇತ್ರದಿಂದ ಎಎಪಿಯ ವಂದನಾ ಕುಮಾರಿ ಅವರನ್ನು ಸೋಲಿಸಿದ್ದರು. ಹಾಗೆಯೇ ಗ್ರೇಟರ್ ಕೈಲಾಶ್‌ನಲ್ಲಿ ಎಎಪಿಯ ಸೌರಭ್ ಭಾರದ್ವಾಜ್ ಅವರನ್ನು ಸೋಲಿಸಿ ಗೆದ್ದ ಶಿಖಾ ರಾಯ್ ಅವರು ಕೂಡ ಮಹಿಳಾ ಸಿಎಂ ಸಂಭಾವ್ಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಪರ್ವೇಶ್ ವರ್ಮಾ ಅವರು ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ, ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರನ್ನು ನವದೆಹಲಿ ಕ್ಷೇತ್ರದಿಂದ ಸೋಲಿಸಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಆದರೆ ಪರ್ವೇಶ್ ವರ್ಮಾ ಅವರ ಹೆಸರು ಇದೀಗ ರೇಸ್‌ನಿಂದ ಹೊರಬೀಳುವ ಸಾಧ್ಯತೆ ಇದ್ದು, ಇನ್ನುಳಿದ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನಾಗಿ ಅಷ್ಟೇನು ಜನಪ್ರಿಯರಲ್ಲದ ಶಾಸಕರನ್ನು ಆಯ್ಕೆ ಮಾಡುವುದು ಬಿಜೆಪಿ ರೂಢಿಸಿಕೊಂಡಿರುವ ತಂತ್ರಗಾರಿಕೆಯಾಗಿದೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಬಿಜೆಪಿ ಇದೇ ತಂತ್ರಗಾರಿಕೆಯನ್ನು ಅನುಸರಿಸಿತ್ತು. ಇದೀಗ ದೆಹಲಿಯಲ್ಲೂ ಬಿಜೆಪಿ ಇದೇ ತಂತ್ರಗಾರಿಕೆಯ ಮೊರೆ ಹೋಗಲಿದೆ ಎನ್ನಲಾಗಿದೆ.
ಮನೋಜ್ ತಿವಾರಿ ಕೂಡ ದೆಹಲಿ ರಾಜಕೀಯದಲ್ಲಿ ಒಂದಿಷ್ಟು ಹೆಸರು ಮಾಡಿರುವ ಬಿಜೆಪಿ ನಾಯಕ. ಅವರು ದೆಹಲಿ ಬಿಜೆಪಿ ಅಧ್ಯಕ್ಷರಾಗಿದ್ದಾರೆ ಮತ್ತು ಸತತ ಮೂರನೇ ಬಾರಿಗೆ ಈಶಾನ್ಯ ದೆಹಲಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ, ದೆಹಲಿಯ ಏಳು ಲೋಕಸಭಾ ಸ್ಥಾನಗಳ ಪೈಕಿ ಆರು ಸ್ಥಾನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಬದಲಾಯಿಸಿತ್ತು, ಆದರೆ ಮನೋಜ್ ತಿವಾರಿ ಅವರ ಟಿಕೆಟ್ ರದ್ದಾಗಿರಲಿಲ್ಲ. ಹೀಗಾಗಿ ಇವರನ್ನು ಕೂಡ ಬಿಜೆಪಿಯ ಸಿಎಂ ಅಭ್ಯರ್ಥಿ ಎಂದು ಗುರುತಿಸಲಾಗಿದೆ.
ದೆಹಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ರಾಜ್ಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್, ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಆರ್‌ಎಸ್‌ಎಸ್ ಮುಖಂಡ ಜಿತೇಂದ್ರ ಮಹಾಜನ್, ಮಾಜಿ ಆಪ್ ನಾಯಕ ಕೈಲಾಶ್ ಗೆಹ್ಲೋಟ್ ಅವರ ಹೆಸರುಗಳು ಸಿಎಂ ಸ್ಥಾನದ ಪಟ್ಟಿಯಲ್ಲಿವೆ. ಆರ್‌ಎಸ್‌ಎಸ್ ಸಂಘಟನೆಯಿಂದ ಒಬ್ಬ ನಾಯಕನನ್ನು ಕರೆತಂದು ದೆಹಲಿಯ ನಾಯಕತ್ವ ವಹಿಸಬಹುದು. ಇದಲ್ಲದೆ, ಒಬಿಸಿ ಅಥವಾ ಜಾಟ್ ಸಮುದಾಯಗಳಿಂದ ಯಾರನ್ನಾದರೂ ಮುಖ್ಯಮಂತ್ರಿಯಾಗಿಯೂ ಪರಿಗಣಿಸುವ ಸಾಧ್ಯತೆಗಳಿವೆ.
ದಲಿತ ಸಮುದಾಯದ ವಿಶ್ವಾಸ ಗಳಿಸಲು ಆ ಸಮುದಾಯದ ಪ್ರಮುಖ ನಾಯಕರೊಬ್ಬರನ್ನು ಸಿಎಂ ಆಗಿ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಸದ್ಯ ದುಷ್ಯಂತ್ ಕುಮಾರ್ ಗೌತಮ್ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಕರೋಲ್‌ಬಾಗ್‌ನಲ್ಲಿ ಪರಾಭವಗೊಂಡಿರುವ ಇವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ದಲಿತ ಸಮುದಾಯದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಮತ್ತೊಂದು ಹೆಸರು ಬವಾನಾ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ರವೀಂದ್ರ ಇಂದ್ರರಾಜ್ ಸಿಂಗ್. ಇವರು ಎಎಪಿಯ ಜೈ ಭಗವಾನ್ ಉಪಕರ್ ಅವರನ್ನು 31 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ರವೀಂದ್ರ ಅವರು ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರು ಆಗಿದ್ದಾರೆ. 50 ವರ್ಷದ ರವೀಂದ್ರ ಇಂದ್ರರಾಜ್ ಸಿಂಗ್ ಅವರು ಉದ್ಯಮಿಯಾಗಿದ್ದು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡೆವಿಟ್‌ನಲ್ಲಿ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ.
ಆದರೆ, ದೆಹಲಿ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಪರಿಗಣಿಸಲಾಗುತ್ತಿರುವ ಯಾವುದೇ ಹೆಸರುಗಳಿರಬಹುದು. ಇಂತಹವರೆ ದೆಹಲಿ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಕೊನೆ ಕ್ಷಣದಲ್ಲಿ ಎಲ್ಲ ಹೆಸರುಗಳು ಬದಲಾಗಬಹುದು.
