'ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್'ನವರು ಪ್ರಕಟಿಸಿದ ಹೊಸ ಅಧ್ಯಯನವು ಇದಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಹೊರಹಾಕಿದೆ
ಪುರುಷರು ಸಾಮಾನ್ಯವಾಗಿ ಮಹಿಳೆಯರಿಗಿಂತ ಹೆಚ್ಚು ಎತ್ತರವಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದರ ಹಿಂದಿನ ನಿಖರ ಕಾರಣವೇನು? ಇದೊಂದು ಅನುವಂಶೀಯ ಅಂಶವೇ ಅಥವಾ ಬೇರೇನಾದರೂ ಇದೆಯೇ?… ಈ ಕುರಿತು ಇತ್ತೀಚೆಗೆ ‘ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್’ನವರು ಪ್ರಕಟಿಸಿದ ಹೊಸ ಅಧ್ಯಯನವು ಇದಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಹೊರಹಾಕಿದೆ. ಪುರುಷರು ಮಹಿಳೆಯರಿಗಿಂತ ಸರಾಸರಿ 5 ಇಂಚು ಹೆಚ್ಚು ಎತ್ತರವಾಗಿರುವುದರ ಹಿಂದಿನ ಕಾರಣವನ್ನು ಸಂಶೋಧನೆ ತಿಳಿಸಿದೆ.
SHOX ಜೀನ್ನ ಪಾತ್ರ
ಮಾನವನ ಎತ್ತರದ ಬೆಳವಣಿಗೆಯಲ್ಲಿ SHOX ಎಂಬ ಜೀನ್ ಪ್ರಭಾವ ಬೀರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ. ಈ SHOX ಜೀನ್ ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಕಂಡುಬರುತ್ತದೆ, ಆದರೆ ವಿಭಿನ್ನ ಕ್ರೋಮೋಸೋಮ್ಗಳಲ್ಲಿ (ವರ್ಣತಂತುಗಳಲ್ಲಿ) ಇದರ ಪರಿಣಾಮ ಭಿನ್ನವಾಗಿರುತ್ತದೆ.
ಮಹಿಳೆಯರು ಎರಡು X ವರ್ಣತಂತುಗಳು (XX) ಹಾಗೂ ಪುರುಷರು ಒಂದು X, ಒಂದು Y ವರ್ಣತಂತು (XY) ಹೊಂದಿರುತ್ತಾರೆಂಬುದು ತಿಳಿದಿರುವ ವಿಷಯ. ಲಿಂಗ ನಿರ್ಣಯ ಮಾಡುವ X ಮತ್ತು Y ಕ್ರೋಮೋಸೋಮ್ ಎರಡರಲ್ಲೂ SHOX ಜೀನ್ ಇರುತ್ತದೆ.
ವರ್ಣತಂತುಗಳ ಪಾತ್ರ ಮತ್ತು ಎತ್ತರದ ವ್ಯತ್ಯಾಸ
ಕೆಲವು ವಿಶೇಷ/ ಅಪರೂಪದ ಪ್ರಕರಣಗಳಲ್ಲಿ ಕೆಲವರು ಹೆಚ್ಚುವರಿ X ಅಥವಾ ಹೆಚ್ಚುವರಿ Y ಅಥವಾ ಕಾಣೆಯಾದ X ಅಥವಾ Y ವರ್ಣತಂತುಗಳೊಂದಿಗೆ (ಹೆಚ್ಚುವರಿಯಾಗಿ X/Y ಪಡೆದುಕೊಂಡು ಇಲ್ಲವೇ X/Y ಕಳೆದುಕೊಂಡು) ಜನಿಸುತ್ತಾರೆ.
ಈ ವೈದ್ಯಕೀಯ ಸ್ಥಿತಿಗಳನ್ನು ವಿಶ್ಲೇಷಿಸಲು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಸುಮಾರು 10 ಲಕ್ಷ ಜನರ ದತ್ತಾಂಶವನ್ನು ಮೂರು ದೊಡ್ಡ ಬಯೋಬ್ಯಾಂಕ್ಗಳಿಂದ (ಒಂದು ಬ್ರಿಟನ್ ಮೂಲದ ಬ್ಯಾಂಕ್ ಮತ್ತು ಇನ್ನೆರಡು ಅಮೆರಿಕಾ ಮೂಲದ ಬ್ಯಾಂಕ್) ಸಂಗ್ರಹಿಸಲಾಗಿತ್ತು. ದತ್ತಾಂಶಗಳ ಪರಿಶೀಲನೆಯಿಂದ 10 ಲಕ್ಷ ಜನರ ಪೈಕಿ 1,225 ಜನರು ಹೆಚ್ಚುವರಿ ಅಥವಾ ಮಿಸ್ಸಿಂಗ್ X, Y ವರ್ಣತಂತುಗಳನ್ನು ಹೊಂದಿದ್ದಾರೆಂಬುದು ತಿಳಿದುಬಂದಿದೆ.
ಕೆಲವರ ಶರೀರದಲ್ಲಿ ಇರುವ ಕ್ರೋಮೋಸೋಮ್ಗಳ ಸಂಖ್ಯೆ ಅಸಮಾನವಾಗಿರಬಹುದು. ಉದಾಹರಣೆಗೆ, ಸಾಮಾನ್ಯವಾಗಿ ಪುರುಷರಲ್ಲಿರುವ ಒಂದು X ಮತ್ತು ಒಂದು Y ಕ್ರೋಮೋಸೋಮ್ಗೆ ಬದಲಾಗಿ ಕೇವಲ ಒಂದು X ಕ್ರೋಮೋಸೋಮ್ ಮಾತ್ರ ಇದ್ದು, Y ಕ್ರೋಮೋಸೋಮ್ ಮಿಸ್ಸಾಗಿರುತ್ತದೆ. ಇಂತಹವರ ಬೆಳೆವಣಿಗೆ/ ಎತ್ತರದಲ್ಲಿ ಕುಂಠಿತವಾಗುತ್ತದೆ. ಜೊತೆಗೆ ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ ಎಂದು ಈ ಅಧ್ಯಯನ ತಿಳಿಸಿದೆ.
ಈ ವಿಷಯದ ಆಧಾರದ ಮೇಲೆ ಹೆಚ್ಚು ಎತ್ತರ ಬೆಳೆಯಲು Y ಕ್ರೋಮೋಸೋಮ್ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. Y ಕ್ರೋಮೋಸೋಮ್ ಇದ್ದರೆ, ಎತ್ತರವಾಗಿ ಬೆಳೆಯಬಹುದು. ಬದಲಿಗೆ ಹೆಚ್ಚುವರಿಯಾಗಿ X ಕ್ರೋಮೋಸೋಮ್ ಇದ್ದರೆ, ಅಷ್ಟೊಂದು ಬೆಳವಣಿಗೆ ಆಗದೇ ಇರಬಹುದು. ಹೀಗಾಗಿ, ಎತ್ತರ ಬೆಳೆಯುವಲ್ಲಿ Y ಕ್ರೋಮೋಸೋಮ್ ಹೆಚ್ಚು ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನಗಳು ಸೂಚಿಸುತ್ತವೆ.
ಇದನ್ನೂ ಓದಿರಿ: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ | ಕಾಯ್ದೆ ಏನು ಹೇಳುತ್ತದೆ, ಯಾರಿಗೆಲ್ಲ ಅನುಕೂಲವಾಗುತ್ತದೆ?
SHOX ಜೀನ್ನ ಕಾರ್ಯನಿರ್ವಹಣೆ
ಪೆನ್ಸಿಲ್ವೇನಿಯಾದ ಗೈಸಿಂಗರ್ ಕಾಲೇಜ್ನ ವಿಜ್ಞಾನಿ ಮ್ಯಾಥ್ಯೂ ಓಟ್ಜೆನ್ಸ್ ಅವರ ಹೇಳಿಕೆಯಂತೆ, “SHOX ಎಂಬ ಜೀನ್ ಎತ್ತರವಾಗಿ ಬೆಳೆಯಲು ಸಹಾಯ ಮಾಡುವ ಮಹತ್ವದ ಜೀನ್ ಆಗಿದೆ. ಈ ಜೀನ್ X ಮತ್ತು Y ಕ್ರೋಮೋಸೋಮ್ಗಳ ಕೊನೆಯ ಭಾಗದಲ್ಲಿ ಇರುತ್ತದೆ.
ಹೆಣ್ಣು ಮಕ್ಕಳಲ್ಲಿರುವ ಎರಡು X ಕ್ರೋಮೋಸೋಮ್ಗಳಲ್ಲಿ ಒಂದರ ಮೇಲೆ ಇರುವ ಕೆಲವು ಜೀನ್ಗಳು (ಹೆಚ್ಚಾಗಿ) ಕೆಲಸಮಾಡುವುದಿಲ್ಲ, ಅವು ನಿಷ್ಕ್ರಿಯವಾಗಿರುತ್ತವೆ. ಆದರೆ SHOX ಜೀನ್ ಸೇರಿದಂತೆ ಕೆಲವೊಂದು ಪ್ರಮುಖ ಜೀನ್ಗಳು ಕ್ರಿಯಾಶೀಲವಾಗಿರುತ್ತವೆ.
ಆದರೆ ಗಂಡು ಮಕ್ಕಳಲ್ಲಿರುವ X ಮತ್ತು Y ಕ್ರೋಮೋಸೋಮ್ಗಳೆರಡರಲ್ಲಿಯೂ SHOX ಜೀನ್ ಸಂಪೂರ್ಣವಾಗಿ ಸಕ್ರಿಯವಾಗಿರುತ್ತದೆ.
ಹಾಗಾಗಿ, ಗಂಡು ಮಕ್ಕಳಲ್ಲಿ SHOX ಜೀನ್ ಎರಡೂ ಕ್ರೋಮೋಸೋಮ್ಗಳಲ್ಲಿ (X ಮತ್ತು Y) ಕಾರ್ಯನಿರ್ವಹಿಸುವುದರಿಂದ, ಅವರ ಎತ್ತರ ಬೆಳವಣಿಗೆಗೆ ಇದು ಹೆಚ್ಚು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಹಿಳೆಯರಿಗಿಂತ ಪುರುಷರು ಹೆಚ್ಚು ಎತ್ತರ ಬೆಳೆದಿರುತ್ತಾರೆ” ಎನ್ನುತ್ತಾರೆ.
ಇದನ್ನೂ ಓದಿರಿ: ಮೈಸೂರು ಸ್ಯಾಂಡಲ್ ಮಾರುಕಟ್ಟೆಗೂ ಸವರ್ಣ ಹೆಣ್ಣೇ ಸರಕು; ಇದು ಜಾಹೀರಾತು ಜಗತ್ತಿನ ವಿಕೃತಿ
ಇದರರ್ಥ, ಎರಡು X ಕ್ರೋಮೋಸೋಮ್ಗಳನ್ನು ಹೊಂದಿರುವ ಮಹಿಳೆಯರು, ಒಂದು X ಮತ್ತು ಒಂದು Y ಕ್ರೋಮೋಸೋಮ್ಗಳನ್ನು ಹೊಂದಿರುವ ಪುರುಷರಿಗಿಂತ ಕಡಿಮೆ ಪ್ರಮಾಣದ SHOX ಜೀನ್ ಪರಿಣಾಮವನ್ನು ಹೊಂದಿರುತ್ತಾರೆ. ಹೀಗಾಗಿ ಪುರುಷರು ಸ್ವಲ್ಪ ಹೆಚ್ಚು SHOX ಜೀನ್ನ ಪರಿಣಾಮವನ್ನು ಅನುಭವಿಸುತ್ತಾರೆ.
ಈ ಕಾರಣದಿಂದಾಗಿಯೇ ಪುರುಷರು ಮತ್ತು ಮಹಿಳೆಯರ ನಡುವಿನ ಸರಾಸರಿ ಎತ್ತರದಲ್ಲಿ ಸುಮಾರು ಕಾಲು ಭಾಗದಷ್ಟು ವ್ಯತ್ಯಾಸ ಕಂಡುಬರುತ್ತದೆ ಎಂದು ಓಟ್ಜೆನ್ಸ್ ಅವರು ಲೆಕ್ಕಹಾಕಿದ್ದಾರೆ. ಪುರುಷರು ಮಹಿಳೆಯರಿಗಿಂತ ಹೆಚ್ಚು ಎತ್ತರವಾಗಿರುವುದರ ಹಿಂದಿನ ಜೈವಿಕ ಕಾರಣವನ್ನು ಈ ಸಂಶೋಧನೆಯು ಸ್ಪಷ್ಟಪಡಿಸಿದೆ.
