ಸುಬ್ರಹ್ಮಣ್ಯಪುರ ಪೊಲೀಸರ ಪ್ರಕಾರ ಅದು 2017ರ ವಿಡಿಯೋ. ಆದರೆ, ಮಾತಾಡಿದ್ದು ಯಾವಾಗ, ಎಷ್ಟು ವರ್ಷಗಳ ಹಿಂದೆ ಎಂಬುದು ಕಾನೂನು ಕ್ರಮ ಜರುಗಿಸದಿರಲು ಕಾರಣವಾಗಬಾರದು. ಯಾಕೆಂದರೆ ಆತ ಇನ್ನೆಷ್ಟು ಇಂತಹ ದ್ವೇಷ ಭಾಷಣ ಮಾಡಿರಬಹುದು, ಅದು ಅದೆಷ್ಟು ಹಿಂದುತ್ವದ ನಶೆ ಏರಿಸಿಕೊಂಡ ಯುವಕರಿಗೆ ಪ್ರೇರಣೆಯಾಗಿರಬಹುದು ಎಂಬುದು ಕೂಡ ಮುಖ್ಯ.
ಬೆಂಗಳೂರಿನ ಸಮರ್ಥ ಶ್ರೀಧರಾಶ್ರಮ ಟ್ರಸ್ಟ್‌ನ ಆತ್ಮಾನಂದ ಸರಸ್ವತಿ ಸಾಮೂಹಿಕ ನರಮೇಧಕ್ಕೆ ಕರೆ ಕೊಟ್ಟಿರುವ ವಿಡಿಯೋವೊಂದು ಎರಡು ದಿನಗಳ ಹಿಂದೆ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ “ಧರ್ಮ ಒಂದೇ, ಅದು ಹಿಂದೂ ಧರ್ಮ. ಉಳಿದವೆಲ್ಲ ದುಷ್ಟರ ಗುಂಪು ಅಷ್ಟೇ. ಆ ಗುಂಪುಗಳು ಸರ್ವನಾಶ ಆಗಬೇಕು. ಇದು ನಾನು ಹೇಳುತ್ತಿದ್ದೇನೆ. ಮುಸ್ಲಿಂ ಗುಂಪು, ಕ್ರೈಸ್ತರ ಗುಂಪು ಯಾವುದೇ ಆದರೂ ಕೊಚ್ಚಿ ಹಾಕಿ. ನೀವೆಲ್ಲ ತಯಾರಾಗಿ ಕತ್ತಿ ಹಿಡಿದು ಹೊರಡಿ. ಇಡೀ ಪ್ರಪಂಚಕ್ಕೆ ಕರೆ ಕೊಡುತ್ತಿದ್ದೇನೆ. ಏನೂ ಆಗಲ್ಲ, ಒಬ್ಬೊಬ್ಬರು ಸಾವಿರಾರು ಮಂದಿಯನ್ನು ಕೊಚ್ಚಿ ಹಾಕಿ. ಏನೂ ಪಾಪ ಬರಲ್ಲ” ಎಂದು ನೇರವಾಗಿ ಹಿಂಸಾಚಾರಕ್ಕೆ ಕರೆಕೊಟ್ಟಿದ್ದಾರೆ. ಆ ಮಾತುಗಳನ್ನು ಕೇಳಿಸಿಕೊಂಡ ಯಾರಿಗಾದರೂ ಆತನನ್ನು ಒಂದು ಕ್ಷಣವೂ ತಡ ಮಾಡದೇ ಬಂಧಿಸಿಬಿಡಬೇಕಿತ್ತು ಅನ್ನಿಸದಿರದು.
ಸೋಮವಾರ (ಜೂ. 16) ಸುಬ್ರಹ್ಮಣ್ಯಪುರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದೇ ಮಾತನ್ನು ಮುಸ್ಲಿಂ ವ್ಯಕ್ತಿ ಅಥವಾ ಕ್ರೈಸ್ತ ಪಾದ್ರಿ ಆಡಿದ್ದಿದ್ರೆ ಇಡೀ ಹಿಂದೂ ಸಮಾಜ ದೊಂಬಿ ಎದ್ದು ಕರ್ನಾಟಕ ಅಕ್ಷರಶಃ ಧಗಧಗ ಎನಿಸುತ್ತಿತ್ತು. ದ್ವೇಷ ಭಾಷಣಕಾರರಿಗೆ ಶಿಕ್ಷೆ ಆಗುವ ಬದಲು ಜಾಮೀನು ಸಿಗುತ್ತದೆ, ಎಫ್‌ಐಆರ್‌ಗೆ ತಡೆ ಸಿಗುತ್ತದೆ. ಕೋರ್ಟ್‌ಗಳೇ ಬಂಧಿಸದಂತೆ ಆದೇಶ ನೀಡುತ್ತಿವೆ. ಇದರಿಂದಾಗಿ ದ್ವೇಷ ಭಾಷಣಕಾರರಿಗೆ ಕಡಿವಾಣವಿಲ್ಲದಂತಾಗಿದೆ. ಅಷ್ಟೇ ಅಲ್ಲ ನರಮೇಧ ನಡೆಸಿದರೂ “ಏನೂ ಆಗಲ್ಲ” ಎಂಬ ಸ್ವಾಮಿಯ ಮಾತಿನ ಅರ್ಥವೇ ʼನಮಗೆ ಈ ನೆಲದ ಕಾನೂನು ಏನೂ ಮಾಡಲ್ಲʼ ಎಂಬುದಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸರ ಪ್ರಕಾರ “ಅದು 2017ರ ವಿಡಿಯೋ. ಆತ ಬೆಂಗಳೂರು ಬಿಟ್ಟು ಎರಡು ವರ್ಷವಾಗಿದೆ. ಈಗ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನೆಲೆಸಿದ್ದಾರೆ. ಆರೋಗ್ಯ ಸರಿಯಿಲ್ಲ”. ಆದರೆ, ಮಾತಾಡಿದ್ದು ಯಾವಾಗ, ಎಷ್ಟು ವರ್ಷ ಹಳೆಯ ವಿಡಿಯೊ, ಆರೋಗ್ಯ ಸರಿಯಿಲ್ಲ, ವಯಸ್ಸಾಗಿದೆ ಎಂಬುದು ಕಾನೂನು ಕ್ರಮ ಜರುಗಿಸದಿರಲು ಕಾರಣವಾಗಬಾರದು. ಆಡಿರುವ ಮಾತಷ್ಟೇ ಮುಖ್ಯವಾಗಬೇಕು. ಯಾಕೆಂದರೆ ಆತ ಇನ್ನೆಷ್ಟು ಇಂತಹ ದ್ವೇಷ ಭಾಷಣ ಮಾಡಿರಬಹುದು, ಅದು ಅದೆಷ್ಟು ಹಿಂದುತ್ವದ ನಶೆ ಏರಿಸಿಕೊಂಡವರಿಗೆ ಪ್ರೇರಣೆಯಾಗಿರಬಹುದು ಎಂಬುದು ಕೂಡಾ ಮುಖ್ಯ. ಪ್ರವಚನದ ಹೆಸರಲ್ಲಿ ದ್ವೇಷ ಹರಡುವುದನ್ನೇ ಉದ್ಯೋಗ ಮಾಡಿಕೊಂಡವರಿಗೆ ಪಾಠ ಕಲಿಸಬೇಕು. ಹಳೆಯ ಭಾಷಣ ಎಂಬುದು ಕಾನೂನು ಕ್ರಮ ಕೈಗೊಳ್ಳದಿರಲು ಕಾರಣವಾಗಬಾರದು.
ಕಳೆದ ಒಂದು ದಶಕದಲ್ಲಿ ದ್ವೇಷಭಾಷಣ ಮಾಡೋದು, ಕೇಸು ಹಾಕಿಸಿಕೊಳ್ಳುವುದು, ನಂತರ ಜಾಮೀನು ಪಡೆಯುವುದು, ಪ್ರಕರಣಕ್ಕೆ ತಡೆ ತರೋದು ಮಾಮೂಲಿಯಾಗಿದೆ. ಸುಪ್ರೀಂ ಕೋರ್ಟ್ ಏನೇ ಎಚ್ಚರಿಕೆ ಕೊಟ್ಟರೂ ಅದಕ್ಕೆ ಚಿಕ್ಕಾಸಿನ ಬೆಲೆ ಕೊಡುವವರು ಇಲ್ಲ. ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತಾಡೋದು ಸಾಮಾನ್ಯವಾಗಿದೆ. ಅದರಲ್ಲೂ ಬಿಜೆಪಿ ನಾಯಕರಿಗೆ ನಾಲಿಗೆಯ ಮೇಲೆ ಹಿಡಿತ ಎಂಬುದೇ ಇಲ್ಲ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಸೇನೆಯ ಕಾರ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ. ಆದರೆ ಸೇನಾ ಕರ್ನಲ್ ಸೋಫಿಯಾ ಖುರೇಷಿ ಮುಸ್ಲಿಂ ಎಂಬುದು ಹಲವರಿಗೆ ಸಹಿಸಲಾಗಿಲ್ಲ. ಸೋಫಿಯಾ ಪ್ರೆಸ್‌ಮೀಟ್‌ನಲ್ಲಿ ಸೇನಾಕಾರ್ಯದ ವಿವರಣೆ ನೀಡಿದರೆ ಸಂಘಿ ಭಕ್ತರು ಆಕೆ ಮುಸ್ಲಿಂ ಎಂಬ ಕಾರಣಕ್ಕೆ ಆಕೆಯ ಧರ್ಮವನ್ನ ಟೀಕಿಸಿದ್ರು. ಮಧ್ಯಪ್ರದೇಶದ ಸಚಿವ ವಿಜಯ್ ಶಾ ಎಂಬಾತ ಇನ್ನೂ ಮುಂದೆ ಹೋಗಿ ನಮ್ಮ ಸಹೋದರಿಯರ ಸಿಂಧೂರ ಅಳಿಸಿದ ಉಗ್ರರಿಗೆ ಅವರ ಸಹೋದರಿಯಿಂದಲೇ ಉತ್ತರ ಕೊಡಿಸಲಾಗಿದೆ ಎಂದ. ಸೇನಾ ಅಧಿಕಾರಿಯ ತೇಜೋವಧೆ ಮಾಡಿದ್ದ ವಿಜಯ್ ಶಾ ಪ್ರಕರಣ ಎದುರಿಸುತ್ತಿದ್ದಾರೆ. ಆದರೆ, ಆತನ ಬಂಧನಕ್ಕೆ ಕೋರ್ಟ್ ತಡೆ ಕೊಟ್ಟಿದೆ. ಇದುವರೆಗೆ ಬಿಜೆಪಿ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರ ಆತನ ರಾಜೀನಾಮೆಯನ್ನೂ ಪಡೆದಿಲ್ಲ. ಈಗಲೂ ಆತ ಮಂತ್ರಿ! ಒಂದು ದಿನಕ್ಕೂ ಆತನ ಬಂಧನವೂ ಆಗಿಲ್ಲ. ಆಪರೇಷನ್ ಸಿಂಧೂರದ ಬಗ್ಗೆ ಬಾರೀ ಕೊಚ್ಚಿಕೊಳ್ಳುವ ಮೋದಿಯವರಿಗೆ ವಿಜಯ್ ಶಾನ ಮಾತುಗಳು ಆಘಾತಕಾರಿ ಅನ್ನಿಸಿಲ್ಲವೇ? ಹಾಗೆ ಮಾತನಾಡುವುದಕ್ಕೆ ಅವರ ಸಮ್ಮತಿ ಇದೆ ಎಂದು ಅರ್ಥವೇ?

ಕರ್ನಾಟಕ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್ ರವಿಕುಮಾರ್ ಕಲಬುರ್ಗಿಯಲ್ಲಿ ನಡೆದ ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಕಲಬುರ್ಗಿಯ ದಿಟ್ಟ ಡಿಸಿ ಮುಸ್ಲಿಂ ಎಂಬ ಕಾರಣಕ್ಕೆ ಆಕೆ ಪಾಕಿಸ್ತಾನದವರು ಎಂದು ಟೀಕಿಸಿ ನಂತರ ಹೈಕೋರ್ಟ್‌ನ ಮುಂದೆ ಕ್ಷಮೆ ಯಾಚಿಸಬೇಕಾಯ್ತು. ಡಿ ಸಿ ಅವರಿಗೆ ಕ್ಷಮಾಪಣೆ ಪತ್ರ ಬರೆಯಬೇಕು. ಅದಕ್ಕೆ ಆಕೆ ಒಪ್ಪಿದರೆ ಮಾತ್ರ ಪ್ರಕರಣವನ್ನು ಕೈ ಬಿಡುವ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಪೀಠ ಎಚ್ಚರಿಕೆ ಕೊಟ್ಟಿದೆ.
ದ್ವೇಷ ಭಾಷಣದ ದಾಖಲೆ ಬಿಜೆಪಿ ಮತ್ತು ಹಿಂದುತ್ವದ ಪ್ರಚಾರಕರು ಹಾಗೂ ಯತಿ/ ಸ್ವಾಮೀಜಿಗಳ ಹೆಸರಿನಲ್ಲಿದೆ. ಅದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಆ ಮಟ್ಟಿಗೆ ಬಿಜೆಪಿ ನಾಯಕರು ಮತ್ತು ಖಾವಿಧಾರಿಗಳು ಮುಸ್ಲಿಂ ದ್ವೇಷವನ್ನೇ ಉಸಿರಾಡುತ್ತಿದ್ದಾರೆ.
ಮಠ ಕಟ್ಟಿಕೊಂಡು, ದಾಸೋಹ, ಧರ್ಮ ಪ್ರಚಾರ ಮಾಡುವ ಕಾಯಕ ಬಿಟ್ಟು ಸಮಾಜದ ಶಾಂತಿ ಕದಡುವ ಕೆಲಸ ಮಾಡುವ ಸ್ವಾಮಿಗಳು ಯತಿಗಳು ಬೇಕಾದಷ್ಟು ಮಂದಿ ಇದ್ದಾರೆ. ಉತ್ತರ ಭಾರತದಲ್ಲಿ ಇಂತಹದೊಂದು ದೊಡ್ಡ ತಂಡ ಇದೆ. ಧರ್ಮ ಸಂಸತ್ತಿನ ಹೆಸರಿನಲ್ಲಿ ಮುಸ್ಲಿಮರನ್ನು ಕೊಚ್ಚಿ ಹಾಕಿ ಎಂದು ಉಗ್ರವಾದಿ ಭಾಷಣ ಮಾಡಿದ್ದು ಈ ಒಂದು ದಶಕದ ಕರಾಳ ಇತಿಹಾಸ. ಹರಿದ್ವಾರ, 2021 ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಯತಿ ನರಸಿಂಗಾನಂದನನ್ನು 2022 ಜನವರಿಯಲ್ಲಿ ಬಂಧಿಸಲಾಗಿತ್ತು. ಸಾಮೂಹಿಕ ಮುಸ್ಲಿಂ ಹತ್ಯೆಗೆ ಕರೆ ನೀಡಿದ್ದ. ಆತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆಪ್ತ. ಸದಾ ಬೆಂಕಿಯುಗುಳುವ ವಿಕಾರ ಮುಖಭಾವ ಯತಿ ಈತ! ಅದಕ್ಕೂ ಮೊದಲು ನರಸಿಂಹಾನಂದ ವಿರುದ್ಧ ಇಂಥವೇ ಹಲವು ಪ್ರಕರಣಗಳು ದಾಖಲಾಗಿ ಜಾಮೀನು ಪಡೆದುಕೊಂಡಿದ್ದ. ಸಮಾಜದ ಶಾಂತಿಭಂಗ ಮಾಡುವುದು, ಕೊಲೆಗೆ ಪ್ರಚೋದನೆ ನೀಡುವುದು, ದ್ವೇಷ ಹರಡುವುದು ಇವರ ಪ್ರಮುಖ ಕೆಲಸ. ಹೆಸರಿಗೆ ಯೋಗಿ, ಯತಿ, ಸ್ವಾಮಿ ಮುಂತಾದ ಬಿರುದುಗಳು.

ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) 2024 ವರದಿ
ಇಂಡಿಯಾ ಹೇಟ್ ಲ್ಯಾಬ್ 2024 ವರದಿಯು ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) ವರದಿಯು 2024 ರಲ್ಲಿ ಭಾರತದಾದ್ಯಂತ ದ್ವೇಷಭಾಷಣ ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದನ್ನು ದಾಖಲಿಸಿದೆ. ಕೋಮು ಧ್ರುವೀಕರಣದ ಉದ್ದೇಶದಿಂದ ರಾಜಕೀಯ ಮತ್ತು ಧಾರ್ಮಿಕ ನಾಯಕರು ಸಮಾಜವನ್ನು ವಿಭಜಿಸುವ ರೀತಿಯಲ್ಲಿ ದ್ವೇಷ ಭಾಷಣ ಮಾಡುತ್ತಿದ್ದಾರೆ. ಒಂದೇ ವರ್ಷದಲ್ಲಿ 1,165 ದ್ವೇಷ ಭಾಷಣ ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 688 ಪ್ರಕರಣ ಆಗಿತ್ತು. ಅಂದ್ರೆ 74.5% ಹೆಚ್ಚಳವಾಗಿದೆ. ಈ ಭಾಷಣಗಳು ಸಂಘಟಿತ ಕಾರ್ಯತಂತ್ರದ ಭಾಗ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದ್ರೆ ಬೇಕೆಂದೇ ದ್ವೇಷಭಾಷಣ ಮಾಡಲಾಗುತ್ತದೆ. ಅದನ್ನು ಬಿಜೆಪಿ ಮತ್ತು ಅಂಗಸಂಸ್ಥೆಗಳಾದ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳು ಆಯೋಜಿಸುತ್ತಿವೆ.
2024 ರಲ್ಲಿ ದ್ವೇಷ ಭಾಷಣ ಹೆಚ್ಚಾಗಿದ್ದು ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಮತ್ತು ಆ ನಂತರ ನಡೆದ ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಚುನಾವಣೆಯ ಸಮಯದಲ್ಲಿ. ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಿತ್ರಪಕ್ಷಗಳು ಮತದಾರರನ್ನು ಸೆಳೆಯುವ, ಒಗ್ಗೂಡಿಸುವ ತಂತ್ರಗಾರಿಕೆಯ ಭಾಗವಾಗಿ, ಧಾರ್ಮಿಕ ವಿಚಾರಗಳಿಂದ ಮತ ಧ್ರುವೀಕರಣ ಮಾಡಲು ಬಳಸಿದವು. 2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನ ಮತ್ತು ಅಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ನಡೆದಿರುವುದು ಭಾರತದಲ್ಲಿ ಮುಸ್ಲಿಂ ವಿರೋಧಿ ಭಾವನೆಯನ್ನು ಹೆಚ್ಚಿಸಿತ್ತು. ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಬಾಂಗ್ಲಾದೇಶದ ಹಿಂದೂಗಳನ್ನು ಸುತ್ತುವರೆದಿರುವ ಆತಂಕಗಳನ್ನು ಬಂಡವಾಳ ಮಾಡಿಕೊಂಡು ಭಾರತೀಯ ಮುಸ್ಲಿಮರ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಲು, ನಿಂದಿಸಲು ಬಳಸಿಕೊಂಡಿವೆ.

ಈ ವರದಿಯು ಕೇವಲ ಸಂಖ್ಯೆಗಳನ್ನು ದಾಖಲಿಸುವುದಿಲ್ಲ; ದ್ವೇಷ ಭಾಷಣದ ತೀವ್ರತೆಯ ಹಿಂದಿನ ಉದ್ದೇಶಪೂರ್ವಕ ತಂತ್ರಗಳು, ಪ್ರಮುಖ ಪಾತ್ರಧಾರಿಗಳು ಮತ್ತು ಸೈದ್ಧಾಂತಿಕ ಪ್ರೇರಣೆಗಳನ್ನು ಇದು ಬಹಿರಂಗಪಡಿಸುತ್ತದೆ. 2024 ರಲ್ಲಿ ದ್ವೇಷ ಭಾಷಣ ಮಾದರಿಗಳ ಅತ್ಯಂತ ಗಮನಾರ್ಹ ಅಂಶವೆಂದರೆ ಹಿಂದೆ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಅಂಗಸಂಸ್ಥೆಗಳ ನೇರ ಒಳಗೊಳ್ಳುವಿಕೆಯಿಂದ ನಡೆಯುತ್ತಿತ್ತು. ದ್ವೇಷ ಭಾಷಣವನ್ನು ಪ್ರಾಥಮಿಕವಾಗಿ ರಾಜ್ಯಮಟ್ಟದ ಬಿಜೆಪಿ ರಾಜಕಾರಣಿಗಳು ಮತ್ತು ಧಾರ್ಮಿಕ ತೀವ್ರಗಾಮಿಗಳು ನಡೆಸುತ್ತಿದ್ದರು. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಉನ್ನತ ಮಟ್ಟದ ರಾಜಕೀಯ ನಾಯಕರು ತಾವೇ ದ್ವೇಷ ಭಾಷಣ ಮಾಡುವ ಒತ್ತಡಕ್ಕೆ ಸಿಲುಕಿದ್ದರು. ಈ ನಾಯಕರು ದ್ವೇಷ ಭಾಷಣವನ್ನು ನಿರ್ಲಕ್ಷಿಸಲಿಲ್ಲ; ಅವರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ತಮ್ಮ ರಾಷ್ಟ್ರೀಯ ಮತ್ತು ಪ್ರಾದೇಶಿಕ ವೇದಿಕೆಗಳನ್ನು ಬಳಸಿಕೊಂಡು ವಿಭಜನಕಾರಿ ನಿರೂಪಣೆಗಳನ್ನು ಹರಡಲು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಅಮಾನವೀಯವಾಗಿ ನಿಂದಿಸಲು ಮತ್ತು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲು ಬಳಸಿಕೊಂಡರು ಎಂದು ವರದಿ ಹೇಳಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಉದ್ದಕ್ಕೂ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆಯಿಂದ ಹತಾಶರಾಗಿ, ಹಿಂದೂಗಳ ಮತಗಳು ಕೈತಪ್ಪಬಹುದು ಎಂಬ ಆತಂಕದಿಂದ ದ್ವೇಷಭಾಷಣದ ಅಸ್ತ್ರವನ್ನು ಎಗ್ಗಿಲ್ಲದೇ ಮೋದಿಯವರು ಪ್ರಯೋಗಿಸಿದ್ದರು.
ಪಹಲ್ಗಾಮ್‌ನಿಂದ ಮಂಗಳೂರುವರೆಗೆ…
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದ್ದ ಉಗ್ರರು, ಪುರುಷರನ್ನು ಮಾತ್ರ ಗುರಿಯಾಗಿಸಿ ಹತ್ತಿರದಿಂದ ಗುಂಡಿಟ್ಟು ಸಾಯಿಸಿದ್ದಾರೆ. ಆದರೆ ಆ ಪ್ರವಾಸಿಗರನ್ನು ಕಾಶ್ಮೀರದ ಮುಸ್ಲಿಂ ಯುವಕರೇ ಕುದುರೆಯ ಮೇಲೆ ಕೂರಿಸಿಕೊಂಡು ಬೆಟ್ಟಕ್ಕೆ ಕರೆದೊಯ್ದವರು. ಅಷ್ಟೇ ಅಲ್ಲ ದಾಳಿಯ ನಂತರ ಕುಟುಂಬ ಸದಸ್ಯರನ್ನು ಜೋಪಾನವಾಗಿ ಕೆಳಕ್ಕೆ ಕರೆತಂದು ಅವರು ಉಳಿದುಕೊಂಡಿದ್ದ ಹೋಟೆಲ್‌ಗಳಿಗೆ ತಲುಪಿಸಿದ್ದಾರೆ. ಅವರಿಗೆ ಧೈರ್ಯ ತುಂಬಿದ್ದಾರೆ. ಸ್ವತಃ ಸತ್ತವರ ಕುಟುಂಬದವರೇ ಅವರನ್ನು ನೆನಪು ಮಾಡಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಾಶ್ಮೀರ ಅಂದ್ರೆ ಮುಸ್ಲಿಮರೇ ಹೆಚ್ಚು ಇರುವ ರಾಜ್ಯ. ಅಲ್ಲಿಗೆ ಯಾರೇ ಪ್ರವಾಸ ಹೋದರೂ ಗೈಡ್‌ಗಳಾಗಿ, ಕುದುರೆ ಸವಾರರಾಗಿ, ಆತಿಥ್ಯ ನೀಡುವವರಾಗಿ, ಹೋಟೆಲ್‌ಗಳ ಮಾಲೀಕರಾಗಿ, ವಾಹನ ಚಾಲಕರಾಗಿ ಸಿಗುವುದು ಮುಸ್ಲಿಮರೇ. ಅದು ಅಲ್ಲಿಗೆ ಪ್ರವಾಸ ಹೋಗುವ ಎಲ್ಲರ ಅನುಭವವೂ ಆಗಿದೆ. ಮುಸ್ಲಿಂ ದ್ವೇಷಿ ಭಾಷಣಕಾರರು ಹೋದರೂ ಅವರೇ ಗತಿ. ಚಕ್ರವರ್ತಿ ಸೂಲಿಬೆಲೆ ಹೋದರೂ, ಅಜಿತ್ ಅನಮಕ್ಕನವರ್ ಹೋದರೂ, ಮುಸ್ಲಿಮರನ್ನು ಕೊಚ್ಚಿ ಕೊಲ್ಲಿ ಎಂದು ಕರೆ ಕೊಟ್ಟ ಸ್ವಾಮಿ ಹೋದರೂ ಅಷ್ಟೇ.
ಆದರೆ ಪಹಲ್ಗಾಮ್ ದಾಳಿಯ ನಂತರ ಭಾರತದ ಮುಸ್ಲಿಮರ ಮೇಲೆ ದಾಳಿಗಳಾದವು. ದ್ವೇಷ ಭಾಷಣಗಳು, ಸಾಮಾಜಿಕ ಜಾಲತಾಣ, ಗೋದಿ ಮೀಡಿಯಾಗಳು ಸಾಮಾನ್ಯ ಮುಸ್ಲಿಮರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸಲು ಶುರುಮಾಡಿದ್ದವು. ಪಹಲ್ಗಾಮ್ ದಾಳಿಯಾಗಿ ಒಂದು ವಾರದೊಳಗೆ ಮಂಗಳೂರಿನಲ್ಲಿ ವಯನಾಡಿನ ಅಶ್ರಫ್ ಎಂಬ ಅಮಾಯಕ ಕೂಲಿ ಕಾರ್ಮಿಕನನ್ನು ಹಿಂದೂಗಳು ಚಚ್ಚಿ ಸಾಯಿಸಿದ್ದರು. ಮೈದಾನವೊಂದರ ಬಳಿ ಕ್ರಿಕೆಟ್ ಆಟ ನೋಡುತ್ತ ಕೂತಿದ್ದ ಯುವಕನನ್ನು ಆತ ಮುಸ್ಲಿಂ ಎಂಬ ಕಾರಣಕ್ಕೆ ಸಾಯಿಸಿ ವಿಕೃತಿ ಮೆರೆದಿದ್ದರು. ಇದೇ ತರ ದೇಶದ ಹಲವು ಕಡೆಗಳಲ್ಲಿ ಮುಸ್ಲಿಂ ದ್ವೇಷ ಹರಡುವ ಘಟನೆಗಳು ನಡೆದವು.
ಕರ್ನಾಟಕದಲ್ಲಿ ಅದರಲ್ಲೂ ಕರಾವಳಿಯ ಮೂವರು ಬಿಜೆಪಿ ಶಾಸಕರು ಮುಸ್ಲಿಂ ದ್ವೇಷ ಭಾಷಣ ಮಾಡುತ್ತಲೇ ಎರಡೆರಡು ಬಾರಿಗೆ ಆಯ್ಕೆಯಾಗಿದ್ದಾರೆ. ಮಂಗಳೂರು ನಗರ ಮೊದಲ ಮಳೆಗೆ ಸಮುದ್ರವಾಗಿದೆ. ಪಂಪ್ವೆಲ್ ಫ್ಲೈಓವರ್ ನಿರ್ಮಾಣಕ್ಕೆ ಹತ್ತು ವರ್ಷ ತೆಗೆದುಕೊಂಡು ಟ್ರೋಲ್‌ಗೆ ಒಳಗಾಗಿದ್ದ ಮಂಗಳೂರಿನ ಮಾಜಿ ಸಂಸದ ನಳಿನ್ ಕುಮಾರ್ ಕಳೆದ ಚುನಾವಣೆಯಲ್ಲಿ ಟಿಕೆಟ್ ತಪ್ಪಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರಾಗಿದ್ದಾರೆ. ಅವರು ವೇದವ್ಯಾಸ ಕಾಮತ್, ಹರೀಶ್ ಪೂಂಜ, ಡಾ ಭರತ್ ಶೆಟ್ಟಿ ಅವರಷ್ಟು ದ್ವೇಷ ಭಾಷಣ ಮಾಡಿದ ದಾಖಲೆ ಇಲ್ಲ. ಆದರೆ ಅವರು ಅದೇ ಹಾದಿಯ ಸಹ ಪಯಣಿಗ, ಬಿಜೆಪಿಯಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಿದ್ದರೆ ಮುಸ್ಲಿಂ ದ್ವೇಷ ಭಾಷಣ ಪ್ರಮುಖ ಅರ್ಹತೆ ಎಂಬ ಮಟ್ಟಿಗೆ ಎಲ್ಲರೂ ಸ್ಪರ್ಧೆಗಿಳಿಯುತ್ತಿದ್ದಾರೆ.

ಮಂಗಳೂರಿನಲ್ಲಿ ಅಶ್ರಫ್ ಎಂಬ ಅಮಾಯಕನ ಗುಂಪು ಹತ್ಯೆಯ ನಂತರ ಎರಡು ಕೊಲೆಗಳ ಆರೋಪಿ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಕೊಲೆ ಮತ್ತೊಂದು ರೌಡಿ ಗ್ಯಾಂಗಿನಿಂದ ಆಗಿದೆ. ಆದರೆ ಅದಕ್ಕೆ ಪ್ರತೀಕಾರ ತೀರಿಸಬೇಕು ಎಂದು ಹಿಂದುತ್ವ ಮುಖಂಡರು ಬಹಿರಂಗವಾಗಿಯೇ ಕರೆ ಕೊಟ್ಟಿದ್ದರು. ಅದಾಗಿ ಎರಡೇ ದಿನದಲ್ಲಿ ಕೊಲೆಗೆ ಸಂಬಂಧವೇ ಇಲ್ಲದ ಬಂಟ್ವಾಳದ ರೆಹ್ಮಾನ್ ಎಂಬ ಅಮಾಯಕನನ್ನು ಆತನ ಪರಿಚಿತ, ಆತನಿಂದ ಸಹಾಯ ಪಡೆದಿದ್ದ ಯುವಕನೇ ತನ್ನ ಸ್ನೇಹಿತರ ಜೊತೆ ಸೇರಿ ಮನೆಯ ಬಳಿ ಕರೆಸಿಕೊಂಡು ನಡು ಮಧ್ಯಾಹ್ನ ಕೊಚ್ಚಿ ಹಾಕಿದ್ದಾನೆ. ಆ ಯುವಕರಿಗೆ ಆತನ ಮೇಲೆ ಯಾವ ದ್ವೇಷವೂ ಇರಲಿಲ್ಲ. ಆದರೆ ಅಂತಹ ಕ್ರೌರ್ಯ ಮೆರೆಯಲು ಹಿಂದುತ್ವದ ಮುಖಂಡರ ಪ್ರಚೋದನಕಾರಿ ಭಾಷಣವೇ ಕಾರಣವಾಗಿತ್ತು. ಅಂತಹ ದ್ವೇಷ ಭಾಷಣಕಾರರ ಮೇಲೆ ಪ್ರಕರಣ ದಾಖಲಿಸಿದರೆ ಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿದೆ. ಕಲ್ಲಡ್ಕ ಪ್ರಭಾಕರ ಭಟ್ಟ, ಕಾರ್ಕಳದ ಶಶಿಕಾಂತ್ ಶೆಟ್ಟಿ, ಪುತ್ತೂರಿನ ಭರತ್ ಕುಮ್ಡೇಲು ಮತ್ತು ಶರಣ್ ಪಂಪ್ವೆಲ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ ನೀಡಿದೆ. ಇದು ದ್ವೇಷ ಭಾಷಣಕಾರರಿಗೆ ನ್ಯಾಯಾಂಗ ವ್ಯವಸ್ಥೆ ಕೊಡುತ್ತಿರುವ ರಕ್ಷಣೆ! ಈಗ ಕರ್ನಾಟಕ ಸರ್ಕಾರ ಕರಾವಳಿಯಲ್ಲಿ “ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್” ರಚಿಸಿದೆ. ಅದನ್ನೂ ಕೋಮುವಾದಿ ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ. ಅಂದ್ರೆ ಕೋಮುವಾದಿಗಳು ದ್ವೇಷ ಭಾಷಣ ಮಾಡುತ್ತ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದರೆ ಮಾತ್ರ ಬಿಜೆಪಿಗೆ ಮತ ಬೀಳುತ್ತದೆ ಎಂಬುದು ನಿಶ್ಚಿತ. ಅದು ಅವರ ರಾಜಕೀಯ ಕಾರ್ಯತಂತ್ರದ ಭಾಗ ಎಂದು ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) 2024 ವರದಿ ಹೇಳಿರುವುದು ಸರಿಯಾಗಿಯೇ ಇದೆ.
ಇದನ್ನೂ ಓದಿ ಮಂಗಳೂರು | ದ್ವೇಷ ಭಾಷಣಗಳಿಗೆ ತಡೆಯಿಲ್ಲ, ಪ್ರಕರಣಗಳಿಗೆ ಒಂದೇ ದಿನದಲ್ಲಿ ತಡೆಯಾಜ್ಞೆ!; ಕಾನೂನಿನ ಕಾರಣಗಳೇನು?

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
Christian,hindugalu kaaffiraru avarannu kondare swarga sigutte annuvavarannu modalu bandisi