ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಬರುವ 7% ಮೀಸಲಾತಿಯ ಬಹುಪಾಲು ಏಕಮುಖವಾಗಿ ಸಾಗುತ್ತಾ, ಸರ್ಕಾರದ ಎಲ್ಲಾ ಹಂತದಲ್ಲಿಯೂ ಈ ಬಹುಸಂಖ್ಯಾತ ಪ್ರಬಲ ಸಮುದಾಯವೇ ದಕ್ಕಿಸಿಕೊಂಡು ಆದಿವಾಸಿಗಳ ಜೊತೆಗೆ ಉಳಿದ 49 ಬುಡಕಟ್ಟುಗಳಿಗೂ ಪಾರಂಪರಿಕ ಅನ್ಯಾಯವಾಗಿದೆ.
ಅಳಿವಿನಂಚಿನಲ್ಲಿರುವ ಅರಣ್ಯ ಆಧಾರಿತ ಮೂಲ ಆದಿವಾಸಿಗಳ ಉಳಿವಿಗಾಗಿ ಒಳ ಮೀಸಲಾತಿ ಅತ್ಯಂತ ಅನಿವಾರ್ಯ. ಮಾನ್ಯ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಗೆ ಮಾತ್ರ ಒಳ ಮೀಸಲಾತಿ ಜಾರಿ ಮಾಡಿ, ಪರಿಶಿಷ್ಟ ಪಂಗಡಕ್ಕೆ ಒಳಮೀಸಲಾತಿ ನೀಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಮುಂದಾಗಿರುವುದು ಕೇವಲ ಓಲೈಕೆಯೇ ಅಥವಾ ಕೇವಲ ರಾಜಕೀಯ ಉದ್ದೇಶವೇ ಎಂಬ ಪ್ರಶ್ನೆ ಕಾಡುತ್ತಿದೆ.
ಇದೊಂದು ಸಾಮಾಜಿಕ ನ್ಯಾಯದ ಆಶಯವೇ ಆಗಿದ್ದರೆ, ಧ್ವನಿಯಿಲ್ಲದೆ ಇವತ್ತಿಗೂ ಮೀಸಲಾತಿಯ ಪರಿವೇ ಇಲ್ಲದೆ ಕಾಡು ಮೇಡುಗಳಲ್ಲಿ ಗೆಡ್ಡೆ ಗೆಣಸು ತಿನ್ನುತ್ತಾ, ಅಪೌಷ್ಟಿಕತೆಯಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿ, ದಿನದಿಂದ ದಿನಕ್ಕೆ ಅಳಿವಿನಂಚಿನಗೆ ಸಾಗುತ್ತಿರುವ, ಆದಿಮಾನವರಂತೆ ಬದುಕುತ್ತಿರುವ ಆದಿವಾಸಿಗಳ ಉಳಿವಿಗಾಗಿ ಪರಿಶಿಷ್ಟ ಪಂಗಡದಲ್ಲಿಯೂ ಒಳ ಮೀಸಲಾತಿ ಜಾರಿ ಮಾಡಬೇಕಾಗಿತ್ತು.
ಆದರೆ ಇಂದು ಕೇವಲ ಪರಿಶಿಷ್ಟ ಜಾತಿಗೆ ಮಾತ್ರ ಒಳ ಮೀಸಲಾತಿ ನೀಡಲು ಮುಂದಾಗಿ ಪರಿಶಿಷ್ಟ ಪಂಗಡದ ಒಳಮೀಸಲಾತಿಯನ್ನು ಕಡೆಗಣಿಸಿರುವುದು ಎಷ್ಟು ಸರಿ.
ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. 2011ರ ಜನಗಣತಿಯಂತೆ ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ಇದೆ. ಇದರಲ್ಲಿ ಕ್ರಮಸಂಖ್ಯೆ 38 ರಲ್ಲಿ ಬರುವ ಒಂದೇ ಸಮುದಾಯ 32,96,354 ಜನಸಂಖ್ಯೆ ಇದ್ದರೆ, ಉಳಿದ 49 ಬುಡಕಟ್ಟುಗಳ ಜನಸಂಖ್ಯೆ 9,52,633 ರಷ್ಟಿದೆ. ಇದರಲ್ಲಿ ಪ್ರಮುಖವಾಗಿ ಕೊಕ್ನ, ಕೋಕ್ನಿ, ಕುಕ್ನ 32, ಮಲಸಾರ್ 82, ಪಟೇಲಿಯಾ 57, ರಥಾವ 45, ಶೋಲಗ 52, ವರ್ಲಿ 58, ವಿಟೋಲಿಯಾ, ಬರೋಡಿಯ23, ಬರ್ದಾ 266, ಚೋಧರ 117, ಕತೋಡಿ, ಕಾತ್ಕಾರಿ, ಧೋರ 274, ಕೊಟ 121, ಕಾಟ್ಟು ನಾಯಕನ್ 168 ಜನರಿದ್ದಾರೆ.
ಇನ್ನೂ 1000 ಜನಸಂಖ್ಯೆಗೂ ಕಡಿಮೆ ಇರುವ 28 ಬುಡಕಟ್ಟುಗಳು, 5000 ಜನಸಂಖ್ಯೆಗೂ ಕಡಿಮೆ ಇರುವ 3 ಬುಡಕಟ್ಟುಗಳು ಹಾಗೂ 10,000ಕ್ಕೂ ಕಡಿಮೆ ಇರುವ 6 ಬುಡಕಟ್ಟುಗಳಿವೆ. ಗೊಂಡ, ನಾಯ್ಕಪೊಡ್, ರಾಜಗೊಂಡ 1,58,243, ಕೋಳಿ ಧೋರ್, ಟೋಕ್ರಿಕೋಳಿ 1,12,190, ಮರಾಠಿ 82,447, ಮೇದ, ಮೇದಾರಿ 44,160, ಜೇನು ಕುರುಬ 36,076 ಹಾಗೂ ಸೋಲಿಗರು33,819 ಜನಸಂಖ್ಯೆಯನ್ನು ಹೊಂದಿದ್ದಾರೆ. (2011ರ ಜನಗಣತಿಯಂತೆ).
ಹಾಗೆಯೇ ಅತ್ಯಲ್ಪ ಜನಸಂಖ್ಯೆಯ ಅರಣ್ಯಾಧಾರಿತ ಮೂಲ ಆದಿವಾಸಿಗಳಾದ ಜೇನುಕುರುಬ, ಇರುಳಿಗ, ಸೋಲಿಗ, ಯರವ, ಪಣಿಯನ್, ಹಸಲರು, ಗೌಡಲು, ಸಿದ್ದಿ, ಕೊರಗ, ಬೆಟ್ಟ ಕುರುಬ, ಕಾಡು ಕುರುಬ, ಕುಡಿಯ, ತೋಡ, ಕಣಿಯನ್, ಕೊಕ್ಕಣಿ, ಕೋಯ, ವರ್ಲಿ ಮತ್ತು ಮಲೆಕುಡಿಯರ ಜನಸಂಖ್ಯೆ ಒಟ್ಟಾರೆ 2,01,620 ಇದೆ.
ಇವರುಗಳು ಇಂದಿಗೂ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ತೀರಾ ಹಿಂದುಳಿದಿದ್ದಾರೆ. ಇವರು ಭಾರತಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ರಚನೆಯಾಗುವ ಮೊದಲಿನಿಂದಲೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿದ್ದರೂ ಇಂದಿಗೂ ಕನಿಷ್ಠ ಮೀಸಲಾತಿಯ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದಾರೆ. ಈ ಆದಿವಾಸಿಗಳಿಗೆ ಮೀಸಲಾತಿ ಎಂದರೆ ಏನು ಎಂದೆ ತಿಳಿದಿಲ್ಲ. ಕಾಡು ಮೇಡುಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಅಲೆಯುತ್ತಿದ್ದಾರೆ.

ಮೊನ್ನೆಯಷ್ಟೆ ಚಾಮರಾಜನಗರ ಜಿಲ್ಲೆಯಲ್ಲಿರುವ 1,854 ಆದಿವಾಸಿ ಕುಟುಂಬಗಳು ವಿದ್ಯುತ್ ಬೆಳಕನ್ನು ಕಾಣುವಂತಾಯಿತು. 1902 ರಲ್ಲೇ ವಿದ್ಯುತ್ ಪಡೆದ ಕರ್ನಾಟಕ ರಾಜ್ಯದಲ್ಲಿ ಸುಮಾರು 125 ವರ್ಷಗಳ ನಂತರ 2025ರಲ್ಲಿ 22 ಹಾಡಿಗಳು ವಿದ್ಯುತ್ ಬೆಳಕು ಕಂಡವು ಎಂದರೆ ಈ ದೇಶದಲ್ಲಿ ಸಂವಿಧಾನದ ಜಾರಿಯಲ್ಲಿ ಇದೆಯೇ, ಅಥವಾ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆಯೇ ಎಂಬ ಪ್ರಶ್ನೆ ನಿಜಕ್ಕೂ ಕಾಡುತ್ತದೆ. ಇದಲ್ಲದೆ ಚಾಮರಾಜನಗರ ಜಿಲ್ಲೆಯ ಕೆರೆದಿಂಬಾ, ಗೊಂಬೆಗಲ್ಲು, ನಲ್ಲಿಕತ್ರು, ಕೊಕ್ಕಬಾರೆ, ಕೊಡಗು ಜಿಲ್ಲೆಯ ಕೊಡಂಗೆ ಹಾಡಿ, ಬೊಂಬುಕಾಡು, ಬೊಮ್ಮನ ಹಳ್ಳಿಹಾಡಿ, ಮೈಸೂರು ಜಿಲ್ಲೆಯ ಬಳ್ಳೆಹಾಡಿ, ಕೆರೆ ಹಾಡಿ ಹಾಗೂ ರಾಮನಗರ ಜಿಲ್ಲೆಯ ಮಂಜುನಾಥನಗರ, ಊಜಿಗಲ್ಲು, ಗೇಹಳ್ಳಿ, ಮುನಿಯಪ್ಪನ ಕಾಲೋನಿ, ರತ್ನಗಿರಿ ಕಾಲೋನಿಯಲ್ಲಿ ವಿದ್ಯುತ್ ದೀಪದ ಮಾತಿರಲಿ ಇಲ್ಲಿರುವ ಸುಮಾರು 20 ರಿಂದ 30 ಕುಟುಂಬಗಳು ಇಂದಿಗೂ ಕಲ್ಲು ಬಂಡೆಯ ಕೊರಕಲಲ್ಲಿ ನಿಂತಿರುವ ನೀರು ಕುಡಿಯುತ್ತಿದ್ದಾರೆ. ಬಲಿಷ್ಠ ಭಾರತ, ಡಿಜಿಟಲ್ ಭಾರತ ಎನ್ನುವ ಕಾಲದಲ್ಲೂ ವಿದ್ಯುತ್ ದೀಪಗಳಿಲ್ಲದೆ ಬದುಕುತ್ತಿರುವ ಆದಿವಾಸಿಗಳು ವಾಸಿಸಲು ಮನೆಗಳಿಲ್ಲದೆ ಸಿಕ್ಕ ಸಿಕ್ಕಲ್ಲಿ ಹುಲ್ಲಿನ ಜೋಪಡಿಗಳನ್ನು ಹಾಕಿಕೊಂಡು, ಹಳ್ಳ ಕೊಳ್ಳದ ನೀರು ಕುಡಿದು ಬದುಕುತ್ತಿದ್ದಾರೆ.
ಹಾಡಿ, ಗದ್ದೆ, ಪೋಡು, ಕಾಲೋನಿ ಹಾಗೂ ದೊಡ್ಡಿಗಳಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಇಂದಿಗೂ ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವೇ ಆಗಿಲ್ಲ. ಇನ್ನು ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆದುಕೊಳ್ಳುವ ಮಾತೆಲ್ಲಿ ಬರಬೇಕು.
ಕರ್ನಾಟಕದಲ್ಲಿ ಜಾರಿಯಲ್ಲಿರುವ ಪರಿಶಿಷ್ಟ ಪಂಗಡದ 7% ಮೀಸಲಾತಿಯನ್ನು ಪರಿಶಿಷ್ಟ ಪಂಗಡದಲ್ಲಿರುವ ಬಹುಸಂಖ್ಯಾತ ಬಲಾಢ್ಯ ಸಮುದಾಯಗಳು ಸಂಪೂರ್ಣವಾಗಿ ಪಡೆದುಕೊಂಡಿವೆ.
ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಬರುವ 7% ಮೀಸಲಾತಿಯ ಬಹುಪಾಲು ಏಕ ಮುಖವಾಗಿ ಸಾಗುತ್ತಾ, ಸರ್ಕಾರದ ಎಲ್ಲಾ ಹಂತದಲ್ಲಿಯೂ ಈ ಬಹುಸಂಖ್ಯಾತ ಪ್ರಬಲ ಸಮುದಾಯವೇ ದಕ್ಕಿಸಿಕೊಂಡು ಆದಿವಾಸಿಗಳ ಜೊತೆಗೆ ಉಳಿದ 49 ಬುಡಕಟ್ಟುಗಳಿಗೂ ಪಾರಂಪರಿಕ ಅನ್ಯಾಯವಾಗಿದೆ. ಇದುವರೆಗೂ ಸರ್ಕಾರದ A ಶ್ರೇಣಿಯಿಂದ D ಶ್ರೇಣಿಯವರೆಗಿನ ಹೇಳಿಕೊಳ್ಳುವ ಯಾವುದೇ ಹುದ್ದೆಗಳಲ್ಲಿ ಅದರಲ್ಲೂ ಇರುಳಿಗ, ಕುಡಿಯ, ಪಣಿಯನ್, ಜೇನುಕುರುಬರಲ್ಲಿ ಕನಿಷ್ಠ ಡಿ ಮತ್ತು ಸಿ ಗ್ರೂಪ್ ಹುದ್ದೆಗಳಲ್ಲಿಯೂ ಈ ಅರಣ್ಯಾಧಾರಿತ ಮೂಲ ಆದಿವಾಸಿಗಳು ಇಲ್ಲದಿರುವುದು ವಿಷಾದನೀಯ.
ಕೊಪ್ಪಳ | ಅಳಿಯದ ಅಸ್ಪೃಶ್ಯತೆ, ದೌರ್ಜನ್ಯ ಪ್ರಕರಣಗಳು; ಕ್ರಮ ಕೈಗೊಳ್ಳಬೇಕಾದವರಾರು?
ಮೀಸಲಾತಿ ಜಾರಿಗೆ ತಂದು 74 ವರ್ಷಗಳಾದರೂ ಪರಿಶಿಷ್ಟ ಪಂಗಡದಲ್ಲಿರುವ ಆದಿವಾಸಿಗಳು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಲಿ ಯಾವುದೇ ಸ್ಥಾನಮಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಸುಪ್ರಿಂ ಕೋರ್ಟ್ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ಮಾಡಿ ಎಂದು ಹೇಳಿ ಅಳಿವಿನಂಚಿನಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಜಾರಿ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಪರಿಶಿಷ್ಟ ಪಂಗಡದಲ್ಲಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗಳಿಗೆ ನೀಡಿದೆ. ಆದರೆ ಬಡವರ, ದೀನ ದಲಿತರ ಪರ ಸಮಾಜದ ಕಟ್ಟ ಕಡೆಯ ಆದಿವಾಸಿಗಳ ಪರ ಎಂದು ಹೇಳುವ ಪ್ರಸ್ತುತ ರಾಜ್ಯ ಸರ್ಕಾರ ಕೇವಲ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ಆಯೋಗ ರಚನೆ ಮಾಡಿ ಮತ್ತೆ ಪರಿಶಿಷ್ಟ ಪಂಗಡದಲ್ಲಿರುವ ಆದಿವಾಸಿಗಳನ್ನು ನಿರ್ಲಕ್ಷ್ಯ ಮಾಡುತ್ತಾ, ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ.
ಮೂಲ ಆದಿವಾಸಿ ಬುಡಕಟ್ಟುಗಳ ಉಳಿವಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಒಳಮಿಸಲಾತಿ ಅನಿವಾರ್ಯವಾಗಿದೆ. ಹೀಗಾಗಿ ಅರಣ್ಯವಾಸಿ ಪರಿಶಿಷ್ಟ ಪಂಗಡಕ್ಕೂ ಕೂಡಲೇ ಸರ್ಕರ ಮೀಸಲಾತಿ ಸೌಲಭ್ಯ ಒದಗಿಸಿ ಘನತೆಯ ಬದುಕು ನಡೆಸುವಂತೆ ಕ್ರಮ ಕೈಗೊಳ್ಳಬೇಕು.
ಡಾ. ಕೃಷ್ಣಮೂರ್ತಿ ಕೆ ವಿ ಇರುಳಿಗ
ಇರುಳಿನ ಸಮುದಾಯದ ಮೊದಲ ಪಿಎಚ್ ಡಿ ಪದವೀಧರ, ಕನಕಪುರ.
ಸಕಾಲಿಕ ಬರಹ. ಪರಿಶಿಷ್ಟ ಪಂಗಡದಲ್ಲೂ ಒಳ ಮೀಸಲು ಜಾರಿಯಾಗಬೇಕು. ಆದರೆ, 7% ಮೀಸಲು ಜಾರಿಯಾಗಿ ಒಂದು ವರ್ಷ ಆಗಿರಬಹುದು. ಅದಕ್ಕೂ ಮೊದಲು ಇದ್ದದ್ದು 3.5 ಮಾತ್ರ. ಆಗ ಪರಿಶಿಷ್ಟ ಪಂಗಡದಲ್ಲಿರುವ ಪ್ರಬಲ ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾದ ಸಾಮಾಜಿಕ ನ್ಯಾಯ ಸಿಕ್ಕಿರಲಿಲ್ಲ. ಈಗ ಮೀಸಲು ಪ್ರಮಾಣ ಹೆಚ್ಚಾಗಿರುವುದರಿಂದ ಆಯಾ ಜಾತಿ ಸಂಖ್ಯೆಗೆ ಅನುಗುಣವಾಗಿ ಒಳ ಮೀಸಲು ಹಂಚಿಕೆಯಾಗುವುದು ಸೂಕ್ತ.
ಸದರಿ ಲೇಖನದಲ್ಲಿ ತಾವು ತಿಳಿಸಿದ ವಿಷಯ ಸತ್ಯವಾದ ಸಂಗತಿ ಆಗಿರುತ್ತದೆ ಇನ್ನು ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ ಮತ್ತು ಕೆಲವೊಂದು ಕಡೆ ಕೊಟ್ಟರು ಅದನ್ನು ತಡೆಹಿಡಿಯುವ ಕೆಲಸವಾಗುತ್ತಿದೆ ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರು ಯಾರೂ ಕೂಡ ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ ಸರ್ಕಾರ ಮೊದಲು ಎಲ್ಲ ಅಲೆಮಾರಿಗಳು ಒಂದೆ ಕಡೆ ನೆಲೆ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು.