ಬಿರೇನ್ ಸಿಂಗ್ ರಾಜೀನಾಮೆಯಿಂದ ಬದಲಾಗುವುದೇ ಮಣಿಪುರ?

Date:

Advertisements
"ಬಿಜೆಪಿ ಪ್ರದರ್ಶಿಸುತ್ತಿರುವುದು ರಾಜಕೀಯ ನಾಟಕವೆಂದೇ ನಾವು ನೋಡುತ್ತೇವೆ. ಈ ಬಿರೇನ್ ಸಿಂಗ್ ಕೆಳಗಿಳಿದರೆ ಮತ್ತೊಬ್ಬ ಬಿರೇನ್ ಸಿಂಗ್ ಶೀಘ್ರದಲ್ಲೇ ಅಧಿಕಾರಕ್ಕೆ ಏರುತ್ತಾರೆ" ಎನ್ನುತ್ತಾರೆ ಕುಕಿ ಸಮುದಾಯದ ಗ್ರೇಸ್.

ಮಣಿಪುರ ಸಿಎಂ ಬಿರೇನ್ ಸಿಂಗ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ರಾಜಕೀಯ ಬಿಕ್ಕಟ್ಟು ಬಿಗಡಾಯಿಸಿದೆ. ಬಿರೇನ್ ಅವರ ನಿರ್ಧಾರಗಳು ಮುಳುವಾದಂತೆ, ಬಿಜೆಪಿಯ ಆಂತರಿಕ ಕಲಹ, ವೈಫಲ್ಯ ಮಣಿಪುರದಲ್ಲಿ ಹೆಚ್ಚಾಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಮಣಿಪುರದಲ್ಲಿ ಬಿಜೆಪಿ ನೆಲ ಕಚ್ಚಿತ್ತು. ಮಣಿಪುರದಲ್ಲಿರುವುದು ಎರಡು ಲೋಕಸಭಾ ಕ್ಷೇತ್ರಗಳಷ್ಟೆ. ಒಂದು- ಇನ್ನರ್ ಮಣಿಪುರ (ಮೈತೇಯಿ ಪ್ರಾಬಲ್ಯದ ಕ್ಷೇತ್ರ), ಎರಡು- ಔಟರ್ ಮಣಿಪುರ (ಕುಕಿ, ನಾಗಾ ಪ್ರಾಬಲ್ಯದ ಕ್ಷೇತ್ರ). ಈ ಎರಡಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದು ಬೀಗಿದ್ದರು. ಆ ಮೂಲಕ ಮೈತೇಯಿ ಮತ್ತು ಕುಕಿ ಸಮುದಾಯಗಳೆರಡೂ ಬಿರೇನ್ ಆಡಳಿತಕ್ಕೆ, ಬಿಜೆಪಿಯ ನಿರ್ಧಾರಗಳಿಗೆ ಬೇಸತ್ತಿದ್ದಾರೆಂಬ ಸಂದೇಶ ಮಣಿಪುರದಿಂದ ಹೊಮ್ಮಿತು. ಮತ ಗಳಿಕೆಯಲ್ಲೂ ಗಣನೀಯವಾಗಿ ಕುಸಿತ ಕಂಡಿತ್ತು ಬಿಜೆಪಿ. ಇವೆಲ್ಲವೂ ಮಣಿಪುರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೂಚ್ಯವಾಗಿ ಹೇಳುತ್ತಿದ್ದವು.

2023ರ ಮೇ 3ರಂದು ರಾಜ್ಯದಲ್ಲಿ ಹಿಂಸಾಚಾರ ಆರಂಭವಾಗಿತ್ತು. ಬಿರೇನ್ ಸಿಂಗ್ ತಕ್ಷಣವೇ ರಾಜೀನಾಮೆ ಕೊಡಬೇಕೆಂಬುದು ಕುಕಿ ಸಮುದಾಯದ ಬೇಡಿಕೆಯೂ ಆಗಿತ್ತು. ಆದರೆ ಒಮ್ಮೆ ರಾಜೀನಾಮೆ ಕೊಟ್ಟಾಗ ಮೈತೇಯಿ ಜನಾಂಗದವರು ಬಿರೇನ್ ಸಿಂಗ್ ಅವರ ಪತ್ರವನ್ನು ಹರಿದು ಹಾಕಿ ಬೆಂಬಲ ಸೂಚಿಸಿದ್ದರು. ಈ ರಾಜಕೀಯ ಹೈಡ್ರಾಮಾದಲ್ಲಿ ಬಿರೇನ್ ಮತ್ತೆ ಅಧಿಕಾರದಲ್ಲಿ ಮುಂದುವರಿದರು. ಆದರೆ ಈಗ ಕೊಟ್ಟಿರುವ ರಾಜೀನಾಮೆಯು ದಿಢೀರ್ ಆಗಿದ್ದೇನೂ ಅಲ್ಲ. ಇಂತಹ ರಾಜೀನಾಮೆಯಿಂದ ಆಗುವ ಪರಿಣಾಮಗಳೇನು ಎಂದು ಯೋಚಿಸಬೇಕಿದೆ.

ಬಿರೇನ್ ವಿರುದ್ಧ ಭುಗಿಲೆದ್ದು ಕುಕಿ ನಾಯಕರ ಅಸಮಾಧಾನಕ್ಕೆ 21 ತಿಂಗಳುಗಳಾಯಿತು, ಬಹುಸಂಖ್ಯಾತ ಮೈತೇಯಿಗಳಿರುವ ಇಂಫಾಲ್ ಕಣಿವೆಯಲ್ಲಿ ಬಿರೇನ್‌ ಜನಪ್ರಿಯತೆ ಕ್ಷೀಣಿಸುತ್ತಿದೆ. ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಒತ್ತಾಯಿಸುತ್ತಿದೆ. ಪ್ರಮುಖ ಎನ್‌ಡಿಎ ಪಾಲುದಾರರೂ ಬಿರೇನ್ ಮೇಲೆ ಮುನಿಸಿಕೊಂಡಿದ್ದರು. ಬಿರೇನ್‌ ಸಂಪುಟ ಸಹದ್ಯೋಗಿಗಳಿಂದ ಒತ್ತಡ ಶುರುವಾಗಿತ್ತು, ಅಂತಿಮವಾಗಿ ಬಿರೇನ್ ಮನೆಗೆ ಹೊರಟಿದ್ದಾರೆ.

Advertisements

ಏಳು ಮಂದಿ ಬಿಜೆಪಿ ಎಂಎಲ್‌ಎಗಳನ್ನು ಒಳಗೊಂಡ ಕುಕಿ ಗುಂಪಿನ 10 ಜನ ಎಂಎಲ್‌ಎಗಳು, “2023ರ ಮೇ 3ರಂದು ಶುರುವಾದ ಹಿಂಸಾಚಾರಕ್ಕೆ ಬಿರೇನ್ ಅವರೇ ಹೊಣೆಗಾರರು” ಎಂದು ಹೇಳುತ್ತಾ ಬಂದಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಅವರ ರಾಜೀನಾಮೆಗೆ ಒತ್ತಾಯಗಳು ಆರಂಭವಾದವು. ಮುಖ್ಯಮಂತ್ರಿಯನ್ನು ಬದಲಾಯಿಸುವಂತೆ ಕೋರಿ ಕಣಿವೆ ಭಾಗದ ಬಿಜೆಪಿ ಶಾಸಕರು ಪಕ್ಷದ ಕೇಂದ್ರ ನಾಯಕರ ಮುಂದೆ ತಿಂಗಳುಗಟ್ಟಲೆ ಅಲೆದಾಡಿದರು. 2024ರ ಅಕ್ಟೋಬರ್‌ನಲ್ಲಿ ಪ್ರಧಾನಿ ಕಚೇರಿಗೂ ದೂರು ಹೋಗಿತ್ತು. ಆದರೂ ಬಿಜೆಪಿ ನಾಯಕತ್ವವು ಬಿರೇನ್ ಅವರನ್ನು ಬೆಂಬಲಿಸುತ್ತಲೇ ಇತ್ತು.

ಇದನ್ನೂ ಓದಿರಿ: ಸಣ್ಣತನದ ನಡವಳಿಕೆ ಪಿಯೂಷ್ ಗೋಯಲ್ ಅವರದ್ದೊ, ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳದ್ದೊ?

“ಬಿರೇನ್ ಅವರ ರಾಜೀನಾಮೆ ಅವರ ಸಚಿವ ಸಂಪುಟಗಳ ನಡುವಿನ ರಾಜಕೀಯ ಬಿರುಕಿನ ಪರಿಣಾಮವಾಗಿರಬಹುದು” ಎನ್ನುತ್ತಾರೆ ಕುಕಿ ಸ್ಟುಡೆಂಟ್ ಅಸೋಸಿಯೇಷನ್‌ನ ಗ್ರೇಸ್. ‘ಈದಿನ’ದೊಂದಿಗೆ ಮಾತನಾಡಿದ ಅವರು, “ಬಿಜೆಪಿ ಶಾಸಕರ ಬೆಂಬಲ ಕುಸಿದಿತ್ತು. ಇದು ಬಿರೇನ್ ಅವರಿಗೆ ತಿಳಿದಿತ್ತು. ಈ ಅಸಹಾಯಕತೆಯಿಂದ, ಮುಜುಗರದಿಂದ ತಪ್ಪಿಸಿಕೊಳ್ಳಲು ರಾಜೀನಾಮೆಯೇ ಸರಿಯಾದ ಮಾರ್ಗವಾಗಿ ಅವರಿಗೆ ತೋರಿರಬಹುದು. ಆದರೆ ಕುಕಿಗಳು ಈ ವಿಚಾರದಲ್ಲಿ ಹೆಚ್ಚಿನದನ್ನೇನೂ ಪ್ರತಿಕ್ರಿಯಿಸುವುದಿಲ್ಲ. ಅವರ ರಾಜೀನಾಮೆಯನ್ನೂ ನಾವು ನಿರೀಕ್ಷಿಸುವುದಿಲ್ಲ. ಬಿರೇನ್ ಏಕೆ ಮತ್ತು ಹೇಗೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದರ ಬಗ್ಗೆ ನಮಗೆ ಯಾವುದೇ ಆಸಕ್ತಿ ಇಲ್ಲ. ಇಂದು ವಿಧಾನಸಭೆ ಅಧಿವೇಶನ ನಡೆಯಬೇಕಾಗಿತ್ತು. ಅವಿಶ್ವಾಸ ನಿರ್ಣಯ ಮಂಡಿಸಲು ಶಾಸಕರು ಸಜ್ಜಾಗಿದ್ದರು. ಈ ಭಯದಿಂದ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿರಬಹುದು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿರುವುದರಿಂದ ಮಣಿಪುರ ಸಂಘರ್ಷದ ಸ್ವರೂಪವನ್ನು ಏನೇನೂ ಬದಲಾಯಿಸುವುದಿಲ್ಲ” ಎಂದರು.

“ಬಿಜೆಪಿ ಪ್ರದರ್ಶಿಸುತ್ತಿರುವ ರಾಜಕೀಯ ನಾಟಕವೆಂದೇ ಕುಕಿಗಳು ನೋಡುತ್ತೇವೆ. ಈ ಬಿರೇನ್ ಸಿಂಗ್ ಕೆಳಗಿಳಿದರೆ ಮತ್ತೊಬ್ಬ ಬಿರೇನ್ ಸಿಂಗ್ ಶೀಘ್ರದಲ್ಲೇ ಅಧಿಕಾರಕ್ಕೆ ಏರುತ್ತಾರೆ. ಇತರ ಬಿಜೆಪಿ ಶಾಸಕರು, ಕುಕಿ ಶಾಸಕರು ಮತ್ತು ಕಾಂಗ್ರೆಸ್ ಇಟ್ಟಿರುವ ಅವಿಶ್ವಾಸ ನಿರ್ಣಯ ಆಗ್ರಹವನ್ನು ತಪ್ಪಿಸಲು ರಾಜೀನಾಮೆ ಕೊಡುತ್ತಿದ್ದಾರೆ. ನಮ್ಮ ಬೇಡಿಕೆಗಳು ಹಾಗೆಯೇ ಉಳಿದಿವೆ” ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯೊಳಗಿನ ಬಿರೇನ್ ಅವರ ನಿಷ್ಠಾವಂತರು ಮತ್ತು ಭಿನ್ನಮತೀಯರ ನಡುವಿನ ಭಿನ್ನಾಭಿಪ್ರಾಯವು ತೀವ್ರಗೊಂಡಿದ್ದು ನಿಜ. ವಿಧಾನಸಭಾ ಅಧಿವೇಶನ ಸಮೀಪಿಸುತ್ತಿದ್ದಂತೆ ಭಾನುವಾರ ಬೆಳಿಗ್ಗೆಯೇ ಎರಡೂ ಗುಂಪುಗಳು ಪ್ರತ್ಯೇಕವಾಗಿ ಸಭೆ ಸೇರಿದ್ದವು.

ಸಿಎಂ ಅವರ ಟೀಕಾಕಾರರಲ್ಲಿ ಒಬ್ಬರಾದ ಸ್ಪೀಕರ್ ಥೋಕ್ಚೋಮ್ ಸತ್ಯಬ್ರತ ಸಿಂಗ್ ಅವರು ಕಳೆದ ವಾರ ದೆಹಲಿಗೆ ಭೇಟಿ ನೀಡಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಸಂಪರ್ಕಿಸಿದ್ದರು. ಬಿರೇನ್‌ ಅವರಿಗೆ ಎದುರಾಗಲಿರುವ ಅವಿಶ್ವಾಸ ನಿರ್ಣಯದ ಬಗ್ಗೆ ಸತ್ಯಬ್ರತ ತಿಳಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. “ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ತಪ್ಪಿಸಬಹುದೇ?” ಎಂದು ಕೇಳಿದಾಗ ಸ್ಪೀಕರ್, “ಅದನ್ನು ತಡೆಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ವರದಿಗಳು ಹೇಳುತ್ತಿವೆ.

ಮಣಿಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಕೂಡ ಬಿರೇನ್‌ಗೆ ಬಿಸಿತುಪ್ಪವಾಗಿದ್ದಾರೆ. “ಮುಖ್ಯಮಂತ್ರಿಯನ್ನು ಬದಲಾಯಿಸದಿದ್ದರೆ ಸರ್ಕಾರ ಪತನಗೊಳ್ಳುವ ಸಾಧ್ಯತೆಯಿದೆ” ಎಂದು ಅವರು ಬಿಜೆಪಿ ನಾಯಕರಲ್ಲಿ ಹೇಳಿರುವುದಾಗಿ ಸುದ್ದಿಯಾಯಿತು. ರಾಜ್ಯಪಾಲ ಎ ಕೆ ಭಲ್ಲಾ ಅವರು ಫೆಬ್ರವರಿ 4 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು.

ಇದನ್ನೂ ಓದಿರಿ: ದೆಹಲಿ ಫಲಿತಾಂಶ | ಕೇಜ್ರಿವಾಲ್ ಮತ್ತು ಎಎಪಿ ಸೋಲು ಪರ್ಯಾಯ ರಾಜಕಾರಣದ ಕನಸನ್ನು ಕೊಂದಿತೇ?

ಫೆಬ್ರವರಿ 5 ರಂದು, ಬಿರೇನ್ ಸಿಂಗ್ ನವದೆಹಲಿಗೆ ಪ್ರಯಾಣ ಬೆಳೆಸಿದರು. ಆದರೆ ಅಮಿತ್ ಶಾ ಅವರು ಭೇಟಿ ಲಭ್ಯವಾಗಲಿಲ್ಲ. ಆಂತರಿಕ ಬಿಕ್ಕಟ್ಟು ತೀವ್ರವಾದಂತೆ ಭಾನುವಾರ ಮತ್ತೆ ಶಾ ಮತ್ತು ನಡ್ಡಾ ಅವರನ್ನು ಭೇಟಿಯಾದರು. ಎರಡು ಗಂಟೆಗಳ ಚರ್ಚೆಯ ನಂತರ ರಾಜೀನಾಮೆ ನಿರ್ಧಾರ ಹೊರಬಿದ್ದಿದೆ ಎಂದಿವೆ ಮೂಲಗಳು.

“ಎಲ್ಲದಕ್ಕೂ ಒಂದು ಸಮಯ, ಸ್ಥಳ ಮತ್ತು ಪರಿಸ್ಥಿತಿ ಇದ್ದೇ ಇರುತ್ತದೆ. ನಾವು ಬಹಳ ಸಮಯದಿಂದ ರಾಜೀನಾಮೆಗೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಶಾಸಕರು ಇನ್ನಷ್ಟು ದಿನ ಸಹಿಸಿಕೊಳ್ಳಲಾರರು. ಬಿಜೆಪಿ, ಎನ್‌ಪಿಎಫ್ (ನಾಗಾ ಪೀಪಲ್ಸ್ ಫ್ರಂಟ್) ಮತ್ತು ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ)ಯಲ್ಲಿ ನಮ್ಮ ಬಣದ ಹೆಚ್ಚಿನವರಿದ್ದಾರೆ” ಎಂದು ಬಿರೇನ್ ಸಿಂಗ್ ಅವರ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ಶಾಸಕರಲ್ಲಿ ಒಬ್ಬರು ಹೇಳಿಕೆ ನೀಡಿದ್ದಾರೆ. ಎನ್‌ಪಿಪಿ ಮತ್ತು ಎನ್‌ಪಿಎಫ್, ಬಿಜೆಪಿಯ ಮಿತ್ರಪಕ್ಷಗಳಾಗಿವೆ.

ಮಾನಸಿಕವಾಗಿ ಮತ್ತು ಭೌಗೋಳಿಕವಾಗಿ ಮಣಿಪುರ ಇಬ್ಭಾಗವಾಗಿ 21 ತಿಂಗಳಾಯಿತು. ಈ ರಾಜೀನಾಮೆಯು ಏನಾದರೂ ಬದಲಾವಣೆ ತಂದಿತ್ತೆಂದು ಹೇಳಲಾಗದು. ‘ಈದಿನ’ದ ಜೊತೆ ಮಾತನಾಡಿದ ಕುಕಿ ವಿದ್ಯಾರ್ಥಿ ಸಂಘಟನೆಯ ಗ್ರೇಸ್, “ಕುಕಿಗಳಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕೆಂಬ ನಿರ್ಧಾರ ಎಂದಿಗೂ ಬದಲಾಗುವುದಿಲ್ಲ. ಕುಕಿಗಳು ಪ್ರತ್ಯೇಕ ಶಾಂಸಕಾಂಗ ಹೊಂದುವಂತೆ ಸಂವಿಧಾನದ 239 (ಎ) ವಿಧಿಯ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶ ಸ್ವರೂಪದ ಪ್ರತ್ಯೇಕ ಆಡಳಿತ ರೂಪಿಸಲೇಬೇಕು. ಅದುವೇ ನಮ್ಮ ನಿಜವಾದ ಬೇಡಿಕೆ” ಎಂದು ತಿಳಿಸಿದರು.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X