ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ | ಬಡತನದಲ್ಲಿ ಬಾಲ್ಯ ಉರಿದಾಗ…

Date:

Advertisements
ಬಾಲ ಕಾರ್ಮಿಕತೆಗೆ ಕಾರಣಗಳೇ ನಿಜವಾದ ಸಮಸ್ಯೆಗಳು. ಈ ಸಮಸ್ಯೆಗಳಿಗೆ ಪರಿಹಾರವೂ ಕಾರಣದಲ್ಲೇ ಇದೆ. ಅದನ್ನು ಹುಡುಕುವ ಕಣ್ಣು ಸರ್ಕಾರ, ಆಡಳಿತ, ವ್ಯವಸ್ಥೆಯದ್ದಾಗಬೇಕಿರುವುದು ಇಂದಿನ ತುರ್ತು.

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಪ್ರತಿ ವರ್ಷ ಜೂನ್ 12 ರಂದು ಆಚರಿಸಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಈ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) 2002ರಲ್ಲಿ ಈ ದಿನವನ್ನು ಮೊದಲಿಗೆ ಆಚರಣೆಗೆ ತಂದಿತು. ಈ ವರ್ಷ ILO ಮತ್ತು UNICEF ಜಂಟಿಯಾಗಿ ಬಾಲ ಕಾರ್ಮಿಕರ ಕುರಿತಾದ ಇತ್ತೀಚಿನ ಜಾಗತಿಕ ಅಂದಾಜು ವರದಿಗಳನ್ನು ಬಿಡುಗಡೆ ಮಾಡಿದೆ. ಇದು ಬಾಲ ಕಾರ್ಮಿಕರ ಸ್ಥಿತಿ, ಯಾವ ಭಾಗಗಳಲ್ಲಿ ಆಚರಣೆ ಹೆಚ್ಚಾಗಿದೆ ಹಾಗೂ ಕಡಿವಾಣ ಹಾಕಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆ. ಇದು ಈ ದಿನದ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ವಿಶ್ವದಾದ್ಯಂತ, ಪ್ರತಿ 10 ಮಕ್ಕಳಲ್ಲಿ ಕನಿಷ್ಠ 1 ಮಗು ಬಾಲ ಕಾರ್ಮಿಕನಾಗಿದೆ ಎಂಬ ಅಂಕಿ ಅಂಶ ಹೊರಬಿದ್ಧಿದೆ. ‘ನೆಕ್ಸ್ಟ್‌ ಐಎಎಸ್‌’ ವರದಿ ಹೇಳುವಂತೆ, 2011ರ ಜನಗಣತಿ ಪ್ರಕಾರ ಭಾರತದಲ್ಲಿ ಒಟ್ಟು ಮಕ್ಕಳ ಜನಸಂಖ್ಯೆ (5-14 ವರ್ಷಗಳು) 25.96 ಕೋಟಿ. ಈ ಪೈಕಿ 1.01 ಕೋಟಿ (ಒಟ್ಟು ಮಕ್ಕಳ ಜನಸಂಖ್ಯೆಯ 3.9%) ಮಕ್ಕಳು ಮುಖ್ಯ ಕೆಲಸಗಾರರಾಗಿ ಅಥವಾ ಅಲ್ಪಾವಧಿ/ಅರೆ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಹಾಗೆಯೇ ಭಾರತದಲ್ಲಿ 4.27 ಕೋಟಿಗಿಂತಲೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರಂತೆ.

ಮಗುವಿನ ವಯಸ್ಸು, ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಸೂಕ್ತವಲ್ಲದ ಯಾವುದೇ ಕೆಲಸವನ್ನು ಬಾಲ ಕಾರ್ಮಿಕ ಪದ್ಧತಿ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಅದರ ದೂರಗಾಮಿ ಪರಿಣಾಮಗಳು ಅವರ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತವೆ.

Advertisements

ಈ ಕುರಿತು ಈದಿನದೊಂದಿಗೆ ಮಾತನಾಡಿದ ‘The concerned for working Children’ ಸಂಸ್ಥೆಯ ನಿರ್ದೇಶಕಿ ಕವಿತ ರತ್ನ, “ವಿಶ್ವದ ಎಲ್ಲಾ ರಾಷ್ಟ್ರಗಳು ಕೋವಿಡ್‌ ಹೊಡೆತಕ್ಕೆ ತತ್ತರಿಸಿವೆ. ಆ ಸಮಯಕ್ಕೆ ಬಹಳಷ್ಟು ಮಧ್ಯಮ, ಕೆಳ ಮಧ್ಯಮ ಕುಟುಂಬಗಳು, ಕಿರು ಸ್ವ-ಉದ್ದಿಮೆ ಮಾಡಿಕೊಂಡಿದ್ದ ಕುಟುಂಬಗಳು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದವು. ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಡತನ ಆವರಿಸಿಕೊಂಡಿತು. ಆಗ ಆರ್ಥಿಕವಾಗಿ ತೀವ್ರ ನಷ್ಟಕ್ಕೊಳಗಾದ, ಕಡಿಮೆ ಆದಾಯವಿದ್ದ ಹಾಗೂ ಕಡಿಮೆ ದುಡಿಯುವ ಕೈಗಳಿದ್ದ ಬಹುತೇಕ ಕುಟುಂಬಗಳು ಜೀವನ ನಿರ್ವಹಣೆಗೆ ಬೇರೆ ದಾರಿ ಇಲ್ಲದೆ ತಮ್ಮ ಮಕ್ಕಳನ್ನೇ ಕೆಲಸಕ್ಕೆ ಕಳುಹಿಸುವುದು ಅನಿವಾರ್ಯವಾಯಿತು. ಹಾಗಾಗಿ ಕೋವಿಡ್‌ ನಂತರದ ವರ್ಷಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಇದು ತೀವ್ರ ಸಂಕಟದ ಸಂಗತಿ”

WhatsApp Image 2025 06 11 at 4.33.49 PM

“ಬಹುತೇಕ ಉದ್ಯಮಿಗಳು ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಗಳಿಸುವ ಸೂತ್ರದ ಹಿಂದೆ ಬೀಳುತ್ತಾರೆ. ಇದು ಬಹುಕಾಲದಿಂದಲೂ ನಡೆದಿರುವ ಉದ್ಯಮ ಕ್ಷೇತ್ರದ ಸಿದ್ಧ ಪ್ರವೃತ್ತಿ. ವಯಸ್ಕ ಕಾರ್ಮಿಕರಿಗೆ ಹೆಚ್ಚಿನ ಸಂಬಳ, ಭತ್ಯೆ, ನಿರ್ವಹಣಾ ವೆಚ್ಚ ಸೇರಿ ಹೆಚ್ಚು ಖರ್ಚು. ಮಕ್ಕಳಾದರೆ ಇದಾವುದಕ್ಕೂ ಉತ್ತರಿಸುವ ಅಗತ್ಯವಿಲ್ಲ. ಹಾಗಾಗಿಯೇ ಹೆಚ್ಚಾಗಿ ನಗರ ಪ್ರದೇಶಗಳ ಕಾರ್ಖಾನೆಗಳಲ್ಲಿ 16 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ದುಡಿಯುವುದು ಸಾಮಾನ್ಯ. ಬಡ ಮಕ್ಕಳಿಗೆ ನಮ್ಮ ದೇಶದಲ್ಲಿ ಉತ್ತಮ ಶಿಕ್ಷಣ ಮರೀಚಿಕೆ. ಒಂದು ವೇಳೆ ಶಿಕ್ಷಣ ದೊರೆಯುತ್ತಿದ್ದರೂ ಅದನ್ನ ಗ್ರಹಿಸುವ ಬೌದ್ಧಿಕ ಮಟ್ಟ ಬಹುತೇಕ ಮಕ್ಕಳಲ್ಲಿ ಇಲ್ಲ.”

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?

“ಯುರೋಪ್‌, ಅಮೆರಿಕಾದಂತಹ ದೇಶಗಳಲ್ಲಿ ಅಗತ್ಯವಿರುವಷ್ಟು ಮಾತ್ರ ಅಕ್ಷರಭ್ಯಾಸಕ್ಕೆ ಒತ್ತು ಕೊಡುವುದು. ಬಳಿಕ ಮಕ್ಕಳ ಅಭಿರುಚಿಗೆ ತಕ್ಕಂತೆ, ಅವರ ಆಯ್ಕೆಯಂತೆಯೇ ಕೌಶಲ್ಯಾಧಾರಿತ ವೃತ್ತಿ ತರಬೇತಿ ನೀಡಲಾಗುತ್ತದೆ. ಇದರಿಂದ ಉನ್ನತ ಶಿಕ್ಷಣದ ಕೊರತೆಯಿದ್ದರೂ ತಮ್ಮ ಕೌಶಲ್ಯವನ್ನೇ ಬಳಸಿ ಮಕ್ಕಳು ಭವಿಷ್ಯದಲ್ಲಿ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ವ್ಯವಸ್ಥೆ ನಮ್ಮ ದೇಶದಲ್ಲಿಲ್ಲ. ಮಕ್ಕಳು ಕೆಲಸ ಮಾಡುವುದು, ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಪರಾಧವೆಂದಷ್ಟೇ ಹೇಳಲಾಗುತ್ತದೆ. ಆದರೆ, ಅದರ ಹಿಂದಿನ ಕಾರಣಗಳೇನು, ಅಂತಹ ಮಕ್ಕಳಿಗೆ/ಕುಟುಂಬಗಳಿಗೆ ಹೇಗೆ ಬೇರೆ ಆರ್ಥಿಕ ಮೂಲಗಳನ್ನು ಕಲ್ಪಿಸಬಹುದು ಎಂಬುದನ್ನೂ ಪರಿಗಣಿಸುವುದು ಅಗತ್ಯ” ಎಂದಿದ್ದಾರೆ.

ಮುಂದುವರೆದ ದೇಶಗಳು ಅನುಸರಿಸುವ ನಿಯಮಗಳನ್ನು ಇಲ್ಲಿಯೂ ಅಳವಡಿಸಿಕೊಂಡರೆ, ಶಿಕ್ಷಣದ ಕೊರತೆಯನ್ನು ಉದ್ಯೋಗ, ಉದ್ಯಮ, ಕೌಶಲ್ಯಗಳು ತುಂಬಬಹುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಭದ್ರತೆ ಒದಗಿಸುವ, ಅವರ ಜೀವನ ಮಟ್ಟ ಸುಧಾರಿಸಲು ಪೂರಕವಾಗುವ ನಿಯಮಗಳನ್ನು ಸರ್ಕಾರವೇ ರೂಪಿಸಬೇಕಿದೆ. ಕುಟುಂಬದಲ್ಲಿ ಆರ್ಥಿಕ ಭದ್ರತೆ ಇದ್ದಾಗ ಯಾವ ಮಗುವೂ ದುಡಿಯುವ ಗೋಜಿಗೆ ಹೋಗಲ್ಲ; ಕಳುಹಿಸಬೇಕೆಂದು ಪೋಷಕರೂ ಯೋಚಿಸಲ್ಲ.

ತುಮಕೂರಿನ ಬಡ ಕೂಲಿ ಕಾರ್ಮಿಕರೊಬ್ಬರು (ಹೆಸರು ಹೇಳಲು ಇಚ್ಛಿಸದ) ಮಾತನಾಡಿ, “ನಾವು ಕೆಲಸ ಮಾಡಿಕೊಂಡು ಊರೂರು ಅಲೆಯುವ ವಲಸಿಗರು. ಬಡತನಕ್ಕೆ ಮನೆ ತುಂಬಾ ಮಕ್ಕಳು ಬೇರೆ. ಜತೆಯಲ್ಲಿ ವಯಸ್ಸಾದವ್ರೂ ಇರ್ತಾರೆ. ಅವರನ್ನೆಲ್ಲ ಸಾಕ್ಬೇಕು ಅಂದ್ರೆ ಒಬ್ಬಿಬ್ರು ಕೆಲ್ಸ ಮಾಡಿದ್ರೆ ಸಾಕಾಗಲ್ಲ. ಸಿಗೋ ಕೂಲಿನೂ ಕಡಿಮೆನೆ. ಹಿಂಗಿರುವಾಗ ಕೈಗೆ ಬಂದ ಮಕ್ಕಳನ್ನೇ ಕೆಲ್ಸಕ್ಕೆ ಹಚ್ತೀವಿ. ನಮ್ಗೆ ಇನ್ನೇನ್‌ ಮಾಡೋಕಾಗ್ತದೆ. ನಮ್‌ ಮಕ್ಳನ್ನೂ ಶಾಲೆಗೆ ಸೇರಿಸ್ಬೇಕು, ನಾಲ್ಕ್‌ ಅಕ್ಷರ ಕಲಿಸ್ಬೇಕು, ಅವೂ ನಮ್ಮಂಗೆ ಆಗೋದ್‌ ಬೇಡ ಅಂತ ನಮಗೂ ಆಸೆ ಇರ್ತದೆ. ಆದ್ರೆ ನಮ್ ಪರಿಸ್ಥಿತಿ ಕೇಳೋರು ಯಾರು. ದೊಡ್ಡೋರು ಅನ್ನೋರು ನಮ್ಮಂತೋರ ಕಡೆಗೂ ಗಮನಕೊಟ್ರೆ ನಾವೂ ಅವ್ರಂಗೆ ಆಗ್ತೀವಿ. ಊರಿನ್ ಕಡೆಗೋದ್ರೂ ಅಷ್ಟೆ, ಬೇರೆವ್ರ ಜಮೀನಲ್ಲಿ ಅಷ್ಟೋ ಇಷ್ಟೋ ಕೃಷಿ ಮಾಡ್ಬೇಕು. ಬಂದಿದ್ರಲ್ಲಿ ನಮಗರ್ಧ, ಹೊಲ ಕೊಟ್ಟೋರ್ಗರ್ಧ. ಹೊಲದ ಕೆಲ್ಸಕ್ಕೆ ಆಳು ಕರಿಸೋ ಅಷ್ಟು ಹಣ ನಮಗೆಲ್ಲಿಂದ ಬರ್ಬೇಕು. ಅದಿಕ್ಕೆ ನಮ್‌ ಜೊತೆ ನಮ್‌ ಮಕ್ಳು ಮರಿನೂ ಹಚ್ಕೊಂತೀವಿ. ಇಷ್ಟಕ್ಕೇ ಇದು ಅಪರಾಧವಂತೆ, ಹಿಂಗೆ ಮಾಡುದ್ರೆ ಜೈಲಿಗೆ ಹಾಕ್ತಾರಂತೆ. ಆ ಭಯಕ್ಕೆ ಎಲ್ಲೂ ಹೇಳಂಗಿಲ್ಲ ಬಿಡಂಗಿಲ್ಲ ಅನ್ನೋದು ನಮ್‌ ಪರಿಸ್ಥಿತಿ. ನೀವೂ ಎಲ್ಲೂ ಹೇಳ್ಬೇಡಿ ಮತ್ತೆ..!” ಎಂದರು.

Gemini Generated Image vsm2snvsm2snvsm2

ಇಲ್ಲಿ ಯಾರದು ತಪ್ಪು, ಯಾರು ಸರಿ ಎಂದು ಚರ್ಚಿಸುವುದಕ್ಕಿಂತ ಸಮಸ್ಯೆ ಏನು, ಅದರ ಕಾರಣಗಳೇನು, ಪರಿಹಾರವಾಗಿ ಏನು ಮಾಡಬಹುದು, ಅದರ ಜವಾಬ್ದಾರಿ ಯಾರದ್ದು… ಎಂಬುದನ್ನಷ್ಟೇ ಪರಾಮರ್ಶಿಸಬೇಕು.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಹೆಚ್ಚು ಆಚರಣೆಯಲ್ಲಿರಲು ಕಾರಣಗಳೇನಿರಬಹುದು:

ಬಡತನವೇ ಏಕೈಕ ದೊಡ್ಡ ಕಾರಣ ಎಂದರೆ ತಪ್ಪಾಗುವುದಿಲ್ಲ. ಬಡ ಮಕ್ಕಳು ಚಿಕ್ಕಂದಿನಿಂದಲೇ ಕುಟುಂಬಗಳನ್ನು ಆರ್ಥಿಕವಾಗಿ ಪೊರೆಯಲು ಅನಿವಾರ್ಯವಾಗಿ ಕೆಲಸ ಮಾಡಬೇಕಾಗುತ್ತದೆ. ದೇಶದ ಲಕ್ಷಾಂತರ ಮಕ್ಕಳಿಗೆ ಶಾಲೆಯ ಮೆಟ್ಟಿಲು ಹತ್ತುವ ಭಾಗ್ಯವೂ ಇಲ್ಲ. ಇದ್ದರೂ ಉತ್ತಮ ಗುಣಮಟ್ಟದ ಶಿಕ್ಷಣ ಇಲ್ಲ. ಹೀಗಿದ್ದಾಗ ಅವರು ಶಾಲೆಗೆ ಹೋಗುವ ಬದಲು ಕಾರ್ಖಾನೆಗೋ, ಸಣ್ಣಪುಟ್ಟ ಹೋಟೆಲ್‌ ಕಡೆಗೋ ಮುಖ ಮಾಡುತ್ತಾರೆ. ಸರ್ಕಾರ ಕಾಲ ಕಾಲಕ್ಕೆ ಬಾಲ ಕಾರ್ಮಿಕತೆಯ ವಿರುದ್ಧ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ಮತ್ತು ಶಿಕ್ಷಣ ಹಕ್ಕು ಕಾಯಿದೆ (RTE) ರೂಪಿಸಿದೆ. ಆದರೆ, ಇವುಗಳನ್ನು ಸಮರ್ಪಕವಾಗಿ ಜಾರಿ ಮಾಡಲು ಬೇಕಾದಷ್ಟು ಕಠಿಣ ನಿರ್ವಹಣಾ ತಂತ್ರಗಳು ನಿಜವಾಗಿ ಸ್ಥಳೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ತಳಮಟ್ಟದಲ್ಲಿ ಅಡ್ಡಿಯುಂಟು ಮಾಡುತ್ತದೆ ಎಂಬುದಂತೂ ಸತ್ಯ.‌

ಇದನ್ನೂ ಓದಿ: ಈ ದಿನ ಸಂಪಾದಕೀಯ | ಭ್ರಷ್ಟಾಚಾರಿಯನ್ನು ಶಿಕ್ಷಿಸುವುದಾದರೆ ಕೋಮುವಾದಿಯನ್ನು ರಕ್ಷಿಸಬಹುದೇ?

ವಿವಾಹೇತರ ಅಥವಾ ವಿವಾಹ ಪೂರ್ವ ಸಂಬಂಧಗಳಿಂದ ಜನಿಸಿದ ಮಕ್ಕಳು ಬಾಲ ಕಾರ್ಮಿಕರಾಗುವ ಸಂಭವ ಹೆಚ್ಚಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಸಾಮಾಜಿಕ ತಿರಸ್ಕಾರಕ್ಕೆ ಸಿಲುಕಿ ಜೀವನೋಪಾಯಕ್ಕೆ ಕೊಟ್ಟಷ್ಟಕ್ಕೆ ಕೆಲಸ ಮಾಡಲೇಬೇಕಾಗುತ್ತದೆ. ಆದರೆ, ಇದನ್ನು ಒಂದು ಕಾರಣವೆಂದು ಲೇಬಲ್‌ ಮಾಡುವುದು ತಪ್ಪಾಗಬಹುದು. ಇಂತಹ ಮಕ್ಕಳಿಗೂ ಎಲ್ಲರಂತೆ ಶಿಕ್ಷಣ, ಸಾಮಾಜಿಕ ಸ್ವೀಕಾರ, ಬಾಲ್ಯದಲ್ಲಿ ಬೇಕಾದ ಪೋಷಕ ಪ್ರೀತಿ ಸಿಕ್ಕರೆ ಅವರೂ ಎಲ್ಲರಂತೆಯೇ ಬದುಕಲು ಅನುಕೂಲ.

ಜಗತ್ತು ಜಾಗತೀಕರಣ, ಎಐ, ಡಿಜಿಟಲ್ ಕ್ರಾಂತಿಗಳ ಉತ್ತುಂಗದಲ್ಲಿದೆ. ಮಾನವ ಜ್ಞಾನವನ್ನೂ, ತಂತ್ರಜ್ಞಾನವನ್ನೂ ಅತ್ಯಂತ ಸುಧಾರಿತ ಹಂತಕ್ಕೆ ಕೊಂಡೊಯ್ಯಲಾಗಿದೆ. ಆದರೆ ಇದೇ ಜಗತ್ತಿನಲ್ಲಿ– ಅಮೆರಿಕ, ಭಾರತ, ಚೀನಾ, ಬ್ರೆಜಿಲ್, ನೈಜೀರಿಯಾದಂತೆ ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಚಿಕ್ಕ ಮಕ್ಕಳನ್ನು ದುಡಿಮೆಗೆ ತಳ್ಳುವಂತಹ ದೌರ್ಭಾಗ್ಯಕರ ಪರಿಸ್ಥಿತಿ ಇಂದೂ ಮುಂದುವರೆದಿದೆ ಎಂಬುದು ಆತಂಕಕಾರಿ ಮತ್ತು ನಿಜಕ್ಕೂ ವಿರೋಧಾಭಾಸ. ಬಾಲ ಕಾರ್ಮಿಕತೆಗೆ ಕಾರಣಗಳೇ ನಿಜವಾದ ಸಮಸ್ಯೆಗಳು. ಈ ಸಮಸ್ಯೆಗಳಿಗೆ ಪರಿಹಾರವೂ ಕಾರಣದಲ್ಲೇ ಇದೆ. ಅದನ್ನು ಹುಡುಕುವ ಕಣ್ಣು ಸರ್ಕಾರ, ಆಡಳಿತ, ವ್ಯವಸ್ಥೆಯದ್ದಾಗಬೇಕಿರುವುದು ಇಂದಿನ ತುರ್ತು.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X