ಯಡಿಯೂರಪ್ಪ v/s ಬಿ.ಎಲ್ ಸಂತೋಷ್: ಮೋದಿ-ಶಾ ಯಾರ ಪರ?

Date:

Advertisements
ಭ್ರಷ್ಟಾಚಾರದ ಕಾರಣಕ್ಕೆ ಯಡಿಯೂರಪ್ಪನವರನ್ನು ಹಿಂದೆ ಅನಂತ್ ಕುಮಾರ್ ಮತ್ತು ಈಗ ಕತ್ತಿ ಮಸೆಯುತ್ತಿರುವ ಬಿ.ಎಲ್ ಸಂತೋಷ್‍ ದ್ವೇಷಿಸಲಿಲ್ಲ. ಅವರಿಗೆ ಭ್ರಷ್ಟಾಚಾರ ಮುಖ್ಯ ವಿಷಯವೇ ಅಲ್ಲ. ಆದರೆ, ತಾವು ಯಡಿಯೂರಪ್ಪನವರಿಗಿಂತಲೂ ಮೇಲ್ಜಾತಿಯವರಾದರೂ ತಮಗೆ ದಕ್ಕದ ಉನ್ನತ ಅಧಿಕಾರ ಯಡಿಯೂರಪ್ಪನವರಿಗೆ ಪದೇ ಪದೇ ದಕ್ಕುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ

ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಪ್ರತಿನಿತ್ಯವೂ ಬಣ ಜಗಳ ಹಾದಿ – ಬೀದಿಯಲ್ಲಿ ನಡೆಯುತ್ತಿದೆ. ಒಂದು ವರ್ಷದ ಹಿಂದೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರರನ್ನು ಕೆಳಗಿಳಿಸಲು ಬಸನಗೌಡ ಯತ್ನಾಳ್ ಬಣ ಕಿತ್ತಾಡುತ್ತಿದೆ. ಚೆಂಡು ಈಗ ಹೈಕಮಾಂಡ್ ಅಂಗಳ ತಲುಪಿದ್ದು, ಚುನಾವಣೆ ಮೂಲಕ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ತಾನೂ ಕೂಡ ಸ್ಪರ್ಧಿ ಎಂದು ಘೋಷಿಸಿರುವ ಯತ್ನಾಳ್ ದೆಹಲಿಯಲ್ಲಿಯೇ ತನ್ನ ಉಮೇದುವಾರಿಕೆ ಸಲ್ಲಿಸುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಇಂತಹ ಸಂದರ್ಧದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಯಾರ ಪರ ನಿಲ್ಲುತ್ತಾರೆ ಎಂಬ ಕೂತೂಹಲ ಎಲ್ಲರಲಿ ಮನೆ ಮಾಡಿದೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಬಿಜೆಪಿಯ ಬಣ ಕಚ್ಚಾಟ ಮೇಲ್ನೋಟಕ್ಕೆ ವಿಜಯೇಂದ್ರ, ರೇಣುಕಾಚಾರ್ಯ ವರ್ಸಸ್ ಯತ್ನಾಳ್ – ರಮೇಶ್ ಜಾರಕಿಹೊಳಿಯವರ ನಡುವಿನದ್ದು ಎಂದು ಕಂಡುಬಂದರೂ ಇದು ಮುಖ್ಯವಾಗಿ ಯಡಿಯೂರಪ್ಪ ವರ್ಸಸ್ ಬಿ.ಎಲ್ ಸಂತೋಷ್‌ರವರ ಬಣ ಕಾದಾಟ ಎಂಬುದರಲ್ಲಿ ಯಾರಿಗೂ ಸಂದೇಹವಿಲ್ಲ. ಬಿ.ಎಲ್ ಸಂತೋಷ್ ಜೊತೆಗೆ ರಾಜ್ಯದಲ್ಲಿ ಕೇವಲ ಒಂದಲ್ಲ ಎರಡು ಗುಂಪುಗಳು ಇವೆ. ಪ್ರಹ್ಲಾದ್ ಜೋಶಿ, ಸಿ.ಟಿ ರವಿ, ತೇಜಸ್ವಿ ಸೂರ್ಯ ಥರಹದ ಸಂಘ ಪರಿವಾರದ ಕೋಮುವಾದಿ ಮನಸ್ಥಿತಿ ಗುಂಪು ಹಿಂದಿನಿಂದಲೂ ಸಂತೋಷ್ ಜೊತೆಗಿದ್ದರೂ ಅವರನ್ನು ಸದ್ಯಕ್ಕೆ ಮುಂದೆ ಬಿಡುತ್ತಿಲ್ಲ. ಬದಲಿಗೆ ಬಾಯಿ ಬಡುಕರಾದ ಯತ್ನಾಳ್‌ ಥರದವರನ್ನು ಮುಂದೆ ಬಿಟ್ಟು ಈ ಫೈಟ್ ನಡೆಸಲಾಗುತ್ತಿದೆ. ಜೊತೆಗೆ ಈ ಬಣ ಜಗಳ ಕೇವಲ ಇತ್ತೀಚೆಗೆ ಆರಂಭವಾದುದ್ದಲ್ಲ ಬದಲಿಗೆ ದಶಕಗಳ ಇತಿಹಾಸವೇ ಇದರಲ್ಲಿ ಅಡಗಿದೆ. ಅದನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಇಂದಿನ ಬಣ ಜಗಳ ಏಕೆ ನಡೆಯುತ್ತಿದೆ ಮತ್ತು ಯಾರ ಒಲವು ಯಾರ ಪರವಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಹಾಗಾಗಿ, ರಾಜ್ಯದ ಬಿಜೆಪಿ ಬಣ ರಾಜಕಾರಣದ ಸಿಂಹಾವಲೋಕನ ಅಗತ್ಯವಿದೆ.

ಬಿ.ಎಸ್ ಯಡಿಯೂರಪ್ಪನವರು 1999 ಮತ್ತು 2004ರ ಚುನಾವಣೆಗಳಲ್ಲಿ ಬಿಜೆಪಿಯ ಮುಖವಾಗಿ ಹೋರಾಟ ನಡೆಸಿದ್ದರು. ಅಧಿಕಾರ ಸಿಗದಿದ್ದರೂ ಕ್ರಮವಾಗಿ 44 ಮತ್ತು 79 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ವಿಪಕ್ಷ ನಾಯಕರಾಗಿದ್ದರು. ಆನಂತರ ಹೆಚ್‍.ಡಿ ಕುಮಾರಸ್ವಾಮಿಯವರ ಜೊತೆ ಆಪರೇಷನ್ ನಡೆಸಿ 20:20 ಸರ್ಕಾರ ರಚಿಸಿ ಉಪ ಮುಖ್ಯಮಂತ್ರಿಯಾದವರು. ಕುಮಾರಸ್ವಾಮಿಯವರು ಕೈಕೊಟ್ಟಾಗ ಚುನಾವಣೆ ಎದುರಿಸಿ, ಬಹುಮತಕ್ಕೆ ಕೊರತೆಯುಂಟಾದಾಗ ಜನಾರ್ದನ ರೆಡ್ಡಿಯವರ ಸಹಾಯದಿಂದ ಆಪರೇಷನ್ ಕಮಲ ನಡೆಸಿ ಕೊನೆಗೂ ಸಿಎಂ ಆದರು. ಆ ಸಂದರ್ಭದಲ್ಲಿ ಬಿಜೆಪಿಯಲ್ಲಿ ಅವರಿಗೆ ಮಗ್ಗುಲ ಮುಳ್ಳಾಗಿದ್ದವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಿದ್ದ ಮತ್ತು ವಾಜಪೇಯಿ ಸಂಪುಟದಲ್ಲಿ ವಿಮಾನಯಾನ ಸಚಿವರಾಗಿದ್ದ ಅನಂತ್ ಕುಮಾರ್. ಅವರಿಗೆ ಎಲ್.ಕೆ ಅಡ್ವಾಣಿಯವರ ಕೃಪಾಕಟಾಕ್ಷವಿತ್ತು.

Advertisements
image 41
ಅನಂತ್ ಕುಮಾರ್ ಮತ್ತು ಅಡ್ವಾಣಿ

ಆ ಸಂದರ್ಭದಲ್ಲಿ ಸಂಘಪರಿವಾರದ ಜೊತೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ಅಡ್ವಾಣಿಯವರು ಬಿಜೆಪಿ ಮತ್ತು ಸಂಘವು ಭ್ರಷ್ಟಾಚಾರದ ವಿರುದ್ಧ ನಿಲುವು ತೆಗೆದುಕೊಳ್ಳಬೇಕು ಎಂದು ಘೋಷಿಸಿದ್ದರು. ಆಗ ಮಾತ್ರ ನಾವು ಚುನಾವಣೆಗಳನ್ನು ಗೆಲ್ಲಲು ಸಾಧ್ಯ ಎಂದು ನಿಲುವು ತೆಗೆದುಕೊಂಡರು. ಅದನ್ನು ಸಮರ್ಪಕವಾಗಿ ಬಳಸಿಕೊಂಡ ಅನಂತ್ ಕುಮಾರ್ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಸದಾ ಟೀಕಿಸುತ್ತಿದ್ದರು. ಆಗಲೇ ಬೆಲೇಕೇರಿ ಅಕ್ರಮ ಅದಿರು ಪ್ರಕರಣ ನಡೆದು ಸಿಎಂ ಯಡಿಯೂರಪ್ಪ ಮತ್ತು ಸಚಿವ ಕೃಷ್ಣ ಪಾಲೇಮಾರ್ ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಂತಿದ್ದಾರೆ ಮತ್ತು ಲೋಕಾಯುಕ್ತ ಅಧಿಕಾರಿಗಳನ್ನು ಅಮಾನತು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆಯವರು 10 ಜೂನ್, 2023ರಲ್ಲಿ ರಾಜೀನಾಮೆ  ನೀಡಿದರು. ಇದು ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಆಗ ಖುದ್ದು ಅಖಾಡಕ್ಕಿಳಿದ ಎಲ್.ಕೆ ಅಡ್ವಾಣಿಯವರು ಯಡಿಯೂರಪ್ಪನವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಲ್ಲದೇ ಸಂತೋಷ್ ಹೆಗ್ಡೆ ಮನವೊಲಿಸಿ ಅವರು ರಾಜೀನಾಮೆ ವಾಪಸ್ ಪಡೆಯುವಂತೆ ಮಾಡಿದರು.

ಅಷ್ಟು ಮಾತ್ರವಲ್ಲದೇ ಆನಂತರ ಸಂತೋಷ್ ಹೆ‍ಗ್ಡೆಯವರ ವರದಿ ಆಧರಿಸಿಯೇ ಅಕ್ರಮ ಗಣಿಕಾರಿಕೆ ಆರೋಪದಲ್ಲಿ ಜನಾರ್ದನ ರೆಡ್ಡಿ, ಕುರುಣಾಕರ ರೆಡ್ಡಿಯವರ ಮೇಲೆ ಕ್ರಮಗಳು ಜರುಗಿದವು. ಯಡಿಯೂರಪ್ಪನವರು ಅಕ್ರಮ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಜೈಲು ಸೇರಬೇಕಾಯಿತು.

ಈ ವರದಿ ಓದಿದ್ದೀರಾ?: ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಕೇಂದ್ರದ ಬಾಯಿ ಮಾತಿನ ಭರವಸೆಗಳು

ಅದೇ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ‘ಜನಚೇತನ ಯಾತ್ರೆ’ ಕೈಗೊಂಡ ಅಡ್ವಾಣಿಯವರು 30 ಅಕ್ಟೋಬರ್ 2011ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಿ, ಭ್ರಷ್ಟರ ಜೊತೆ ರಾಜಿ ಇಲ್ಲ, ಭ್ರಷ್ಟಾಚಾರದಿಂದ ಉತ್ತಮ ಆಡಳಿತ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪನವರ ವಿರುದ್ಧ ಗುಡುಗಿದರು. ಈ ಎಲ್ಲ ಬೆಳವಣಿಗೆಗಳಲ್ಲಿ ಅನಂತ್ ಕುಮಾರ್‌ ಪಾತ್ರ ಇದ್ದು ಕೊನೆಗೆ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಾಬೇಕಾದುದ್ದು ಇತಿಹಾಸ.

ಆನಂತರದ ಬೆಳವಣಿಗೆಗಳು ಅಡ್ವಾಣಿ/ಅನಂತ್ ಕುಮಾರ್‌ ವಿರುದ್ಧದವೇ ಆಗಿದ್ದವು. ನರೇಂದ್ರ ಮೋದಿ ಬಿಜೆಪಿ ರಾಜಕೀಯದ ಮುಖ್ಯ ಭೂಮಿಕೆ ಪ್ರವೇಶಿಸುತ್ತಲೇ ಅಡ್ವಾಣಿ ಮೂಲೆಗೆ ತಳ್ಳಲ್ಪಟ್ಟರು. ಮೋದಿ ಪ್ರಧಾನಿಯಾದ ನಂತರ ಮಾರ್ಗದರ್ಶಕ ಮಂಡಳಿ ಸೇರಿದ ಅಡ್ವಾಣಿಗೆ ವಯಸ್ಸಿನ ಆಧಾರದಲ್ಲಿ ಸಂಸತ್ ಟಿಕೆಟ್ ಸಹ ಸಿಗದೇ ಮತ್ತಷ್ಟು ಮೂಲೆಗೆ ತಳ್ಳಲ್ಪಟ್ಟರು. ಅನಂತ್ ಕುಮಾರ್ ಉಪಟಳದಿಂದ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪನವರು 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಲು ಕಾರಣರಾದರು. 40 ಸ್ಥಾನಗಳಿಗೆ ಕುಸಿದು, ಸಂಪೂರ್ಣ ನೆಲಕಚ್ಚಿದ್ದ ಬಿಜೆಪಿಗೆ ಯಡಿಯೂರಪ್ಪನವರು ಇಲ್ಲದಿದ್ದರೆ ಉಳಿಗಾಲವಿಲ್ಲ ಎನ್ನವ ಪರಿಸ್ಥಿತಿ ಬಂದು ಮತ್ತೆ ಅವರನ್ನು ಬಿಜೆಪಿ ಸೇರಿಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟ ನೀಡಲಾಯಿತು.

ಬಿ.ಎಲ್ ಸಂತೋಷ್ ವರ್ಸಸ್ ಯಡಿಯೂರಪ್ಪ

ಇಷ್ಟು ದಿನ ಮಗ್ಗುಲ ಮುಳ್ಳಾಗಿದ್ದ ಅನಂತ್ ಕುಮಾರ್ ಅವರನ್ನು ಪಕ್ಕಕ್ಕೆ ಸರಿಸಿ ಮತ್ತೆ ಬಿಜೆಪಿಯಲ್ಲಿ ಕೇಂದ್ರ ಸ್ಥಾನಕ್ಕೆ ಬಂದ ಯಡಿಯೂರಪ್ಪನವರಿಗೆ ಹೊಸ ತಲೆನೋವು ಕೊಟ್ಟಿದ್ದು ಬಿ.ಎಲ್ ಸಂತೋಷ್. ಅದುವರೆಗೂ ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಅವರು 2014ರಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬೆಂಗಳೂರಿನ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಬನ್ನಿ, ಬನ್ನಿ ಎಂದು ಬಿ.ಎಲ್‌ ಸಂತೋಷ್‌ರನ್ನು ಕರೆದರೂ ಅವರು ಮುಖ ಸಿಂಡರಿಸಿಕೊಂಡು ಹೊರನಡೆದುದ್ದು ಎಲ್ಲ ಮಾಧ್ಯಮಗಳಲ್ಲಿ ಬಿತ್ತರವಾಯಿತು. ಈ ಪ್ರಮಾಣದಲ್ಲಿ ಅವರಿಬ್ಬರ ನಡುವಿನ ಘೋಷಿತ ಯುದ್ಧ ಬೀದಿಗೆ ಬಂದಿತು. ಅಲ್ಲಿಗೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಯಿತು.

WhatsApp Image 2025 02 06 at 5.43.18 PM

2018ರಲ್ಲಿ ಅನಂತ್ ಕುಮಾರ್ ಮರಣ ಹೊಂದಿದರು. ಈ ನಡುವೆ 2019ರಲ್ಲಿ ಬಿ.ಎಲ್ ಸಂತೋಷ್ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಅನಂತ್ ಕುಮಾರ್ ಜಾಗದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಡಿಸುವಲ್ಲಿ ಬಿ.ಎಲ್ ಸಂತೊಷ್ ಯಶಸ್ವಿಯಾದರು. ಅವರ ಮತ್ತು ಯಡಿಯೂರಪ್ಪನವರ ನಡುವೆ ಎಷ್ಟೇ ಗುದ್ದಾಟವಿದ್ದರೂ ರಾಜ್ಯದಲ್ಲಿ ಯಡಿಯೂರಪ್ಪ ರೀತಿಯ ಮತ್ತೊಬ್ಬ ಜನನಾಯಕ ಬಿಜೆಪಿಯಲ್ಲಿರಲಿಲ್ಲ. ಹಾಗಾಗಿ, 2018ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾದರೂ ಸಹ 2019ರಲ್ಲಿ ಅವರು ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೀಳಿಸಿ, ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬರಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿತು. ಆದರೆ, 2019ರ ಜುಲೈ 26ರಂದು ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರೂ ಸಹ ಸಚಿವ ಸಂಪುಟ ರಚಿಸಲು ಒಂದು ತಿಂಗಳಾದರೂ ಅವಕಾಶ ನೀಡದೇ ಕಾಡಿಸಲಾಯಿತು. ಕೊನೆಗೆ ಸಂಪುಟ ರಚನೆಗೆ ಅವಕಾಶ ಕೊಟ್ಟರೂ ಸಹ ಮತ್ತೊಬ್ಬ ಲಿಂಗಾಯಿತ ಲಕ್ಷ್ಮಣ್ ಸವದಿ ಜೊತೆಗೆ ಗೋವಿಂದ ಕಾರಜೋಳ ಮತ್ತು ಅಶ್ವಥ್ ನಾರಾಯಣ್‌ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಯಡಿಯೂರಪ್ಪನವರ ಮೇಲೆ ಅಂಕುಶವಿರಿಸಲಾಯಿತು. ಕಾರಣ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವ ಹುಡುಕುವುದಾಗಿತ್ತು ಮತ್ತು ಇದರ ಹಿಂದೆ ಬಿ.ಎಲ್ ಸಂತೋಷ್ ಇದ್ದರು.

ಅಷ್ಟು ಮಾತ್ರವಲ್ಲದೇ ಯಡಿಯೂರಪ್ಪನವರು ಸಿಎಂ ಆದ ಎರಡು ವರ್ಷಗಳಲ್ಲಿ ಅವರನ್ನು ಕೆಳಗಿಳಿಸಬೇಕೆಂದು ತೀರ್ಮಾನಿಸಲಾಯಿತು. ಯಡಿಯೂರಪ್ಪನವರು ನಿಸ್ಸಂದೇಹವಾಗಿ ಬಿಜೆಪಿಯಲ್ಲಿನ ದೊಡ್ಡ ನಾಯಕರು. ಪರ್ಯಾಯ ನಾಯಕರೂ ಇಲ್ಲ. ಪ್ರಭಾವೀ ಸಮುದಾಯ ಅವರ ಹಿಂದೆ ಇದೆ. ಹಾಗಿದ್ದರೂ ಸಹ ಅವರನ್ನು ಕೆಳಗಿಳಿಸಲಾಯಿತು. 2021ರ ಜುಲೈ ತಿಂಗಳಿನಲ್ಲಿ ಯಡಿಯೂರಪ್ಪನವರು ಕಣ್ಣಿರಾಕುತ್ತಲೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ಆ ಸಂದರ್ಭದಲ್ಲಿ ಬಿ.ಎಲ್ ಸಂತೋಷ್‌ಗೆ ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡುವ ಬಯಕೆಯಿತ್ತು. ಆದರೆ ಪ್ರಭಾವಿ ಲಿಂಗಾಯಿತ ಸಮುದಾಯವನ್ನು ಏಕಾಏಕಿ ಎದುರು ಹಾಕಿಕೊಳ್ಳಬಾರದು ಎಂದು ಬಸವರಾಜ್ ಬೊಮ್ಮಾಯಿಯವರನ್ನು ಸಿಎಂ ಮಾಡಲಾಯಿತು. ಅದಕ್ಕೆ ಯಡಿಯೂರಪ್ಪನವರು ಅನಿವಾರ್ಯವಾಗಿ ಓಕೆ ಅಂದಿದ್ದರು. ಆದರೆ ಬೊಮ್ಮಾಯಿಯವರಿಗೆ ನೀವು ಆರ್‌ಎಸ್‌ಎಸ್‌ಗೆ ನಿಷ್ಟರಾಗಿರಬೇಕೆ ಹೊರತು ಯಡಿಯೂರಪ್ಪನವರಿಗಲ್ಲ ಎಂಬ ಸ್ಪಷ್ಟ ಸಂದೇಶ ನೀಡಲಾಗಿತ್ತು. ಹಾಗಾಗಿಯೇ ಅವರು ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದೆಲ್ಲ ಹೇಳಿಕೆ ಕೊಟ್ಟು ಅತಿಯಾಗಿಯೇ ಆರ್‌ಎಸ್‌ಎಸ್‌ ಪ್ರೇಮ ಹೊರಹಾಕಿದರು. ಇಲ್ಲಿ ಬಿ.ಎಲ್ ಸಂತೋಷ್ ಬಣದ ಕೈ ಮೇಲಾಯಿತು. ಟಿಕೆಟ್ ಹಂಚಿಕೆ ಸೇರಿದಂತೆ ಇತ್ಯಾದಿಗಳಲ್ಲಿ ಆಟವಾಡಿದ ಸಂತೋಷ್ ಯಡಿಯೂರಪ್ಪನವರನ್ನು ಸಾಧ್ಯವಾದಷ್ಟು ತುಳಿಯಲು ನೋಡಿದರು. ಆದರೆ, ಪರಿಣಾಮ ಬೇರೆಯೇ ಆಗಿತ್ತು. ಭ್ರಷ್ಟಾಚಾರ, ಅಸರ್ಮಥ ಆಡಳಿತದಿಂದ ಬೇಸತ್ತಿದ್ದ ರಾಜ್ಯದ ಜನತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿತು.

image 41 1

ಬಿ.ಎಲ್ ಸಂತೋಷ್ ಮತ್ತು ಬಿಜೆಪಿಗೆ ಎಂತಹ ದುಸ್ಥಿತಿ ಎದುರಾಯಿತೆಂದರೆ ಅವರು ಯಡಿಯೂರಪ್ಪನವರನ್ನು ಬಿಟ್ಟುಬಿಡಲು ಸಾಧ್ಯವಿಲ್ಲದ, ಕಟ್ಟಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು. ಹಾಗಾಗಿ ಅಷ್ಟೆಲ್ಲ ಮಾಡಿದ ನಂತರವೂ ಕೊನೆಗೆ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಬೇಕಾಯಿತು. ಇದಕ್ಕೆ ಬಿ.ಎಲ್ ಸಂತೋಷ್‌ರವರಿಗೆ ಒಪ್ಪಿಗೆ ಇರಲಿಲ್ಲ. ಆದರೆ, ಸಂತೋಷ್ ಅವರ ದೊಡ್ಡ ದೌರ್ಬಲ್ಯವೆಂದರೆ ತಾನೂ ಜನನಾಯಕನಲ್ಲ, ತನ್ನ ಪರವಾಗಿ ಬೇರೆ ಜನನಾಯಕರೂ ಇಲ್ಲ. ಆದರೆ ಯಡಿಯೂರಪ್ಪನವರ ಏಳ್ಗೆ ಸಹಿಸಲು ಮನಸ್ಸು ಒಪ್ಪುತ್ತಿಲ್ಲ. ಅವರ ಮೇಲಿನ ದ್ವೇಷ ಅಳಿಯುತ್ತಿಲ್ಲ. ಹಾಗಾಗಿಯೇ ಮತ್ತೊಬ್ಬ ಲಿಂಗಾಯಿತ ಬಸನಗೌಡ ಯತ್ನಾಳ್‍ರನ್ನು ಮುಂದೆ ಬಿಟ್ಟು ಯಡಿಯೂರಪ್ಪನವರ ಕುಟುಂಬವನ್ನು ಹಳಿಯುವ ಯತ್ನ ಮಾಡಲಾಗುತ್ತಿದೆ. ಅದೇ ಬಣ ರಾಜಕಾರಣವನ್ನು ರಾಜ್ಯವೀಗ ನಿತ್ಯ ನೋಡುತ್ತಿದೆ.

ಈ ಮೊದಲು ಯಡಿಯೂರಪ್ಪನವರ ವಿರುದ್ಧವಿದ್ದ ಅನಂತ್ ಕುಮಾರ್ ಮತ್ತು ಈಗ ಕತ್ತಿ ಮಸೆಯುತ್ತಿರುವ ಬಿ.ಎಲ್ ಸಂತೋಷ್‍ರವರು ಭ್ರಷ್ಟಾಚಾರದ ಕಾರಣಕ್ಕೆ ಯಡಿಯೂರಪ್ಪನವರನ್ನು ದ್ವೇಷಿಸಲಿಲ್ಲ. ಅವರಿಗೆ ಭ್ರಷ್ಟಾಚಾರ ಮುಖ್ಯ ವಿಷಯವೇ ಅಲ್ಲ. ಹಾಗೇ ನೋಡಿದರೆ ಅನಂತ್ ಕುಮಾರ್ ವಿರುದ್ಧವೂ ಹಲವು ಭ್ರಷ್ಟಾಚಾರದ ಆರೋಪಗಳಿದ್ದವು. ಆದರೆ, ತಾವು ಯಡಿಯೂರಪ್ಪನವರಿಗಿಂತಲೂ ಮೇಲ್ಜಾತಿಯವರಾದರೂ ತಮಗೆ ದಕ್ಕದ ಉನ್ನತ ಅಧಿಕಾರ ಯಡಿಯೂರಪ್ಪನವರಿಗೆ ಪದೇ ಪದೇ ದಕ್ಕುತ್ತಿರುವುದನ್ನು ಸಹಿಸಲು ಬಿ.ಎಲ್ ಸಂತೋಷ್‍ರವರಿಗೆ ಸಾಧ್ಯವಾಗುತ್ತಿಲ್ಲ. ಒಂದು ಸಮುದಾಯದ ಹೆಚ್ಚು ಜನರು ಯಡಿಯೂರಪ್ಪನವರ ಬೆಂಬಲಿಗರಾಗಿರುವ ತನಕ ತನ್ನ ಆಸೆ ಪೂರೈಸುವುದಿಲ್ಲ ಎಂಬ ಅಸೂಯೆ ಅದರಿಂದೆ ಅಡಗಿದೆ. ಹಾಗಾಗಿಯೇ ಲಿಂಗಾಯಿತ ಸಮುದಾಯವನ್ನು ಒಳಗೆ ಹಾಕಿಕೊಳ್ಳಲು ಆರ್‍ಎಸ್‍ಎಸ್‍ ಬಹಳಷ್ಟು ಸರ್ಕಸ್ ನಡೆಸಿದೆ. ಒಂದಷ್ಟು ಯಶಸ್ವಿಯೂ ಆಗಿದೆ. ಆ ಭಾಗವಾಗಿ ತಾನು ಕರ್ನಾಟಕದ ಸಿಎಂ ಆಗಬೇಕು ಎಂದು ಕನಸು ಕಾಣುತ್ತಿರುವ ಸಂತೋಷ್‌ಗೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಮುಗಿಸದಿದ್ದರೆ ಈ ಜನ್ಮದಲ್ಲಿ ತನ್ನ ಕನಸು ನನಸಾಗುವುದಿಲ್ಲ ಎಂಬ ಅರಿವಿದೆ. ಅದಕ್ಕಾಗಿಯೇ ದ್ವೇಷ ರಾಜಕಾರಣದ ಮೊರೆ ಹೋಗಿದ್ದಾರೆ. ಆದರೆ ತನ್ನ ಕನಸಿಗೆ ಅದಕ್ಕೆ ಬೇಕಾದ ನಾಯಕತ್ವವಾಗಲಿ, ಸಂಘಟನಾ ಸಾಮರ್ಥ್ಯವಾಗಲಿ ಅವರ ಬಳಿ ಇಲ್ಲ ಎನ್ನುವುದು ವಾಸ್ತವ. ಹಾಗಾಗಿಯೇ ತನಗೆ ಸಿಗದದ್ದು ಅವರಿಗೂ ಬೇಡ ಎಂಬ ನಿಲುವಿಗೆ ಬಂದಂತೆ ಕಾಣುತ್ತಿದೆ.

ಈ ವರದಿ ಓದಿದ್ದೀರಾ?: ಬಿಎಸ್‌ವೈ ಪೋಕ್ಸೋ ಪ್ರಕರಣ: ನಿತ್ಯವೂ ನರಕ – ಬದುಕು ಜರ್ಜರಿತ; ವಿಡಿಯೋದಲ್ಲಿ ಸಂತ್ರಸ್ತೆಯ ಸಹೋದರನ ಅಳಲು

ಇಲ್ಲಿ ಪ್ರಶ್ನೆ ಬರುವುದು ಮತ್ತೆ ಮತ್ತೆ ಯಾಕೆ ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯವಾಗುತ್ತಿದ್ದಾರೆ? ಜೈಲಿನಿಂದ ಹೊರಬಂದ ನಂತರವೂ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಾಧ್ಯಕ್ಷ ಹುದ್ದೆ ನೀಡಲಾಯಿತು. ಎರಡನೇ ಸಲ ಸಿಎಂ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಲಾಯಿತು. ಅವರ ಮಗನನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಬಹುಶಃ ಚುನಾವಣೆ ನಡೆದರೆ ಮತ್ತೆ ಅವರೇ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ. ಇದೆಲ್ಲದರ ಹಿಂದೆ ಬಿಜೆಪಿಯಲ್ಲಿ ಒಂದು ಗುಂಪಿದೆ. ಅವರು ಯಾರು ಎಂದರೆ ಅವರೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚವ ಅಮಿತ್ ಶಾ. ಮುಖ್ಯವಾಗಿ ಮೋದಿ ಯಡಿಯೂರಪ್ಪನವರ ಪರ ನಿಲ್ಲುತ್ತಿದ್ದಾರೆ. ಹಾಗಾಗಿಯೇ ಈ ವಿಚಾರದಲ್ಲಿ ಹೆಚ್ಚು ಮಾತನಾಡದ ಯಡಿಯೂರಪ್ಪನವರು ಮೋದಿ ಕೃಪಕಟಾಕ್ಷವಿರುವುದರಿಂದ ತನ್ನ ಮಗನಿಗೆ ತೊಂದರೆಯಾಗುವುದಿಲ್ಲ ಎಂಬ ನಂಬಿಕೆಯಲ್ಲಿದ್ದಾರೆ.

ಮೋದಿ ಬೆಂಬಲ ಏಕೆ ಯಡಿಯೂರಪ್ಪನವರಿಗೆ ಎಂಬ ಪ್ರಶ್ನೆ ಕೆಲವರಿಗೆ ಮೂಡಬಹುದು. ಇದು ಒಂದು ರೀತಿಯಲ್ಲಿ ಆರ್‍ಎಸ್‍ಎಸ್‍ ಮತ್ತು ಮೋದಿ ನಡುವಿನ ಮುಸುಕಿನ ಗುದ್ದಾಟ. ಆರ್‌ಎಸ್‍ಎಸ್‍ ಬಿ.ಎಲ್ ಸಂತೋಷ್ ಕಡೆಗೂ, ಮೋದಿ ಯಡಿಯೂರಪ್ಪನವರ ಕಡೆಗೂ ಇರುವುದರ ದ್ಯೋತಕ. ಆದರೆ, ಇದರರ್ಥ ಮೋದಿಗೆ ಯಡಿಯೂರಪ್ಪನವರ ಮೇಲೆ ಭಾರೀ ಮಮಕಾರವಿದೆಯೆಂದು ಅಲ್ಲ. ಬದಲಿಗೆ ಅವರಿಗೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಯಾರನ್ನು ಮುಂದೆ ತರಬೇಕು ಎಂಬುದರ ಅರಿವಿದೆ.

ಬಿ.ಎಲ್ ಸಂತೋಷ್‌ ಕೂಡ ನಾನು ತೇಜಸ್ವಿ ಸೂರ್ಯನಂತಹ ಅನನುಭವಿಯನ್ನು ಕೂಡ ಗೆಲ್ಲಿಸಿಕೊಂಡು ಬರಬಲ್ಲೆ ಎಂದು ಹೇಳುತ್ತಾರೆ. ಆದರೆ, ಅವರು ಮರೆತಿರುವುದು ತೇಜಸ್ವಿ ಸೂರ್ಯ ಕೇವಲ ಆರ್‌ಎಸ್‍ಎಸ್‍ನಿಂದ ಗೆದ್ದು ಬಂದವರಲ್ಲ. ಮೋದಿ ಹೆಸರೂ ಸಹ ಅವರ ಗೆಲುವಿಗೆ ಸಹಕಾರಿಯಾಗಿದೆ ಎಂಬುದನ್ನು. ಮೋದಿ ಹೆಸರಿನಲ್ಲಿಯೂ ಒಂದಷ್ಟು ಬಿಜೆಪಿಗರು ಇಂದಿಗೂ ಗೆಲ್ಲುತ್ತಿರುವುದರಿಂದ ಆರ್‍ಎಸ್‍ಎಸ್‍ನಲ್ಲಿ ಬಿ.ಎಲ್ ಸಂತೋಷ್‍ರವರ ಮಾತಿಗೆ ಬೆಂಬಲವಿದ್ದರೂ ಸಹ ಮೋದಿಯಂತವರ ಮಾತುಗಳೇ ಅಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿವೆ.

ಈ ರೀತಿಯ ತಿಕ್ಕಾಟ ಕೇಂದ್ರ ಬಿಜೆಪಿಯಲ್ಲಿ ನಡೆಯುತ್ತಿವೆ. ಹಾಗಾಗಿಯೇ ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲಿರುವ ಭಾರೀ ಭ್ರಷ್ಟಾಚಾರದ ಕೇಸ್‍ಗಳು ಇದ್ದಾಗಲೂ ಸಹ ಅವರ ಮಗನನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮೋದಿ ಮತ್ತು ಯಡಿಯೂರಪ್ಪನವರ ನಡುವೆ ಕನ್ನಡೇತರ ಬಿಜೆಪಿ ನಾಯಕನೊಬ್ಬ ಸದಾ ಕಾಲ ಮಧ್ಯವರ್ತಿಯಾಗಿ ವ್ಯವಹರಿಸುತ್ತಿದ್ದಾರೆ. ಹಾಗಾಗಿ ಮೋದಿ ಇರುವ ತನಕ ನಮಗೆ ಭಯವಿಲ್ಲ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಭಾವಿಸಿದ್ದಾರೆ. ಇನ್ನೊಂದು ಕಡೆ ತಾನೇ ಆರ್‍ಎಸ್‍ಎಸ್‍ ಎಂದುಕೊಂಡಿರುವ ಬಿ.ಎಲ್ ಸಂತೋಷ್ ಮುಂದಿನ ತನ್ನ ಭವಿಷ್ಯಕ್ಕಾಗಿ ಫೈಟ್ ನಡೆಸುತ್ತಿದ್ದಾರೆ.

image 41 2

ಸದ್ಯಕ್ಕೆ ಮೋದಿ ಮತ್ತು ಅಮಿತ್ ಶಾ ಯಡಿಯೂರಪ್ಪನವರ ಪರ ನಿಂತಿದ್ದಾರೆ. ಹಾಗಾಗಿಯೇ ರಾಜ್ಯದ ಬಿಜೆಪಿ ಉಸ್ತುವಾರಿಯಾದ ರಾಧಮೋಹನ್ ದಾಸ್ ಅಗರ್ವಾಲ್ ಮೇಲ್ನೋಟಕ್ಕೆ ಎಲ್ಲರ ದೂರು ಆಲಿಸಿದಂತೆ ಕಂಡುಬಂದರೂ ಯಡಿಯೂರಪ್ಪನವರ ಪರವೇ ವರದಿ ನೀಡುತ್ತಿದ್ದಾರೆ. ಆದರೆ, ಇಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ನಿಟ್ಟುಸಿರು ಬಿಡುವ ಪರಿಸ್ಥಿತಿಯಲ್ಲಿಲ್ಲ. ಏಕೆಂದರೆ ಯಾವುದೋ ಒಂದು ದಿನ ಮೋದಿ ದಿಢೀರ್ ಎಂದು ತಮ್ಮ ಕೈ ಬಿಡುವುದಿಲ್ಲ ಎಂಬುದುಕ್ಕೆ ಯಾವುದೇ ಆಧಾರಗಳಿಲ್ಲ. ಯಾವಾಗ ಕೈಬಿಡುತ್ತಾರೆ ಎಂಬುದು ಸಹ ತಿಳಿಯದ ಪರಿಸ್ಥಿತಿಯಲ್ಲಿದ್ದಾರೆ.

ಇನ್ನೊಂದೆಡೆ, ಬಿ.ಎಲ್ ಸಂತೋಷ್‍ರವರ ಮತ್ತೊಂದು ಬಣದಲ್ಲಿರುವ ಪ್ರಹ್ಲಾದ್ ಜೋಶಿ, ತೇಜಸ್ವಿ ಸೂರ್ಯ ಮತ್ತು ಸಿ.ಟಿ ರವಿಯವರಿಗೆ ಯಡಿಯೂರಪ್ಪನವರ ಮೇಲೆ ಸಿಟ್ಟಿದ್ದರೂ ಅವರೂ ನೇರವಾಗಿ ಬಾಯಿ ಬಿಡುತ್ತಿಲ್ಲ. ಬದಲಿಗೆ ಬಾಯಿಬಡುಕ ಎಂದು ಖ್ಯಾತಿ ಗಳಿಸಿರುವ ಯತ್ನಾಳ್ ರವರನ್ನು ಮುಂದೆ ಬಿಡಲಾಗಿದೆ. ಇದಕ್ಕೆ ಅವರು ಲಿಂಗಾಯಿತ ಸಮುದಾಯದವರು ಎಂಬುದಲ್ಲದೇ ಬೇರೆ ಕಾರಣವಿಲ್ಲ. ಲಿಂಗಾಯಿತರ ವಿರುದ್ಧ ಲಿಂಗಾಯಿತರನ್ನೇ ಎತ್ತಿಕಟ್ಟಿ ಕೊನೆಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂತೋಷ್ ಮುಂದಾಗಿದ್ದಾರೆ.

ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಮೋದಿ–ಶಾ ಯಡಿಯೂರಪ್ಪನವರ ಪರ ಇದ್ದಾರೆ. ಆದರೆ ಯತ್ನಾಳ್ ಪ್ರತಿ ದಿನ ಯಡಿಯೂರಪ್ಪನವರಿಗೆ ಬಾಯಿಗೆ ಬಂದ ಹಾಗೆ ಬೈಯ್ಯುತ್ತಾರೆ. ಸಾವಿರ ಕೋಟಿ ರೂ. ಕೊಟ್ಟು ಸಿಎಂ ಆದರು, ಕಾಂಗ್ರೆಸ್‍ನವರ ಜೊತೆ ಅಡ್ಜೆಸ್ಟ್‍ಮೆಂಟ್ ಆಗಿದ್ದಾರೆ, ಕಾಂಗ್ರೆಸ್ ಭಿಕ್ಷೆಯಲ್ಲಿ ವಿಜಯೇಂದ್ರ ಶಾಸಕನಾಗಿದ್ದಾನೆ, ಆತನ ಪರ ಇರುವ ಸ್ವಾಮಿಗಳು ಪೇಮೆಂಟ್ ಗಿರಾಕಿಗಳು.. ಹೀಗೆ ಹೀನಾತಿ ಹೀನವಾಗಿ ಯತ್ನಾಳ್ ಬೈಯ್ದರು ಅವರ ವಿರುದ್ಧ ಮೋದಿ-ಶಾ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಏಕೆಂದರೆ, ಮೋದಿ – ಶಾ ಸಹ ಇದರಲ್ಲಿ ಒಂದು ಬ್ಯಾಲೆನ್ಸ್ ಮೇಂಟೇನ್ ಮಾಡುತ್ತಿದ್ದಾರೆ. ಯಡಿಯೂರಪ್ಪ ತೀರ ತಮ್ಮನ್ನು ದಾಟಿ ಬೆಳೆಯದಿರಲಿ ಎಂಬ ಹುನ್ನಾರ ಅದು. ಏಕೆಂದರೆ ತಮ್ಮ ಮಾತು ಕೇಳದ ಯಾವುದೇ ಜನನಾಯಕರು ಬೆಳೆಯುವುದನ್ನು ಮೋದಿಯ ಸರ್ವಾಧಿಕಾರಿ ಮನಸ್ಸು ಒಪ್ಪುವುದಿಲ್ಲ. ಹಾಗಾಗಿಯೇ ಯತ್ನಾಳ್ ಬೈಯ್ದಷ್ಟು ಯಡಿಯೂರಪ್ಪನವರು ಮೋದಿಗೆ ನಿಷ್ಟರಾಗುತ್ತಾರೆ. ಮೋದಿಗೂ ಸಹ ಅದೇ ಬೇಕಿರುವುದಲ್ಲವೇ?

ಇಲ್ಲಿ ಜನರು ಕೇಳಬೇಕಿರುವುದು ಹಿಂದೆ ಬಿಜೆಪಿ ಹೇಳಿದ್ದೇನು? ಈಗ ಮಾಡುತ್ತಿರುವುದೇನು ಎಂಬುದನ್ನೇ ಹೊರತು ಅವರ ಬಣ ಸರಿ, ಇವರ ಬಣ ತಪ್ಪು ಎಂಬುದನ್ನಲ್ಲ. ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳನ್ನು ಮುಖ್ಯವಾಹಿನಿಗೆ ತಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಬಿಜೆಪಿ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಬಣಗಳ ಗೂಡಾಗಿ ಪರಿವರ್ತನೆಯಾಗಿದೆ. ತಮ್ಮನ್ನು ತಾವು ಶಿಸ್ತಿನ ಪಕ್ಷ, ಭ್ರಷ್ಟಾಚಾರದ ವಿರುದ್ಧ ಪಕ್ಷ ಎಂದುಕೊಳ್ಳುತ್ತಿದ್ದ ಬಿಜೆಪಿ ಇದೇನಾ ಎಂದು ಜಾಡಿಸಿ ಕೇಳಬೇಕಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮುತ್ತುರಾಜು
ಮುತ್ತುರಾಜು
ಪತ್ರಕರ್ತ, ಲೇಖಕ

1 COMMENT

  1. ಪೂರ್ವಾಗ್ರಹ ಪೀಡಿತ ಲೇಖನ.. ಆರ್ ಎಸ್ ಎಸ್ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡುವುದಿಲ್ಲ.. ಪರಮ ಭ್ರಷ್ಟ ಯಡ್ಡಿಯ ಭ್ರಷ್ಟಾಚಾರ , ಬ್ಲ್ಯಾಕ್ಮೇಲ್ ರಾಜಕೀಯ ನೋಡಿ ಬೇಸತ್ತಿರುವ ಹೈಕಮಾಂಡ್ ಮತ್ತೊಬ್ಬ ನಾಯಕನನ್ನು ಬೆಳೆಯಲು ಬಿಡದ ಯಡ್ಡಿ ಮತ್ತು ಮಗನಿಂದ ನಾಯಕತ್ವವನ್ನು ಬೇರೊಬ್ಬರಿಗೆ ಹಸ್ತಾಂತರಿಸಲು ಮಾಡುತ್ತಿರುವ ಪ್ರಯತ್ನ ತಪ್ಪಲ್ಲ.. ಕಳೆದ ಬಾರಿ ಸುಮಾರು 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ನೇರ ಕಾರಣ ಯಡ್ಡಿ ಮತ್ತು ಅವನ ಮಗ.. ಪೂರ್ತಿ ವಿಷಯ ತಿಳಿಯದೆ, ರಾಜಕೀಯ ಅನನುಭವಿ ಮತ್ತು ಮೈತುಂಬಾ ಒಂದು ಸಮುದಾಯದ ವಿರುದ್ಧ ನಂಜು ತುಂಬಿಕೊಂಡಿರುವ ಒಬ್ಬ ಎಳಸು ಬರೆದಿರುವ ಲೇಖನ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X