ಗಾತ್ರದಲ್ಲಿ ಕಿರಿಯ, ಗುಣದಲ್ಲಿ ಹಿರಿಯ – ಸಿರಿಧಾನ್ಯ ಮೇಳದಲ್ಲಿ ಜನವೋ ಜನ

Date:

Advertisements
ಜ.23ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ಸಿರಿಧಾನ್ಯ ಮೇಳದಲ್ಲಿ ಅಂತಾರಾಜ್ಯದ ಕೃಷಿ ತಜ್ಞರು, ಸಾವಯವ ಕೃಷಿಕರು, 12 ರಾಷ್ಟ್ರಗಳಿಂದ ಬಂದಿರುವ ವಿದೇಶಿ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳ ಬೆಳೆ ತಜ್ಞರು, ಕೃಷಿ ವಿದ್ಯಾರ್ಥಿಗಳು, ಸಾಮಾನ್ಯ ರೈತರು, ಗ್ರಾಹಕರು ಹಾಗೂ ಆಸಕ್ತರು ಎರಡನೇ ದಿನವಾದ ಶುಕ್ರವಾರವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. 

‘ಜೋಳ’ ತಿಂದವರು ಗೂಳಿಯಂತೆ ಬಲಿಷ್ಠರಾಗುವರು, ‘ಸಜ್ಜೆ‘ ತಿಂದವರು ಸಲಾಕೆಯಂತೆ ಸಜ್ಜಾಗುವರು, ‘ರಾಗಿ‘ ತಿಂದವರು ನಿರೋಗಿಯಾಗುವರು, ‘ಕೊರಲೆ‘ ತಿಂದವರು ಹಕ್ಕಿಯಂತೆ ಹಾರಾಡುವರು, ‘ಹಾರಕ‘ ತಿಂದವರು ಮಾರಕರೋಗಗಳಿಂದ ಮುಕ್ತರಾಗುವರು, ‘ನವನೆ‘ ತಿಂದವರು ಬುದ್ಧಿವಂತರಾಗುವರು, ‘ಊದಲು‘ ತಿಂದವರು ಉತ್ಸಾಹದ ಕಹಳೆ ಊದುವರು, ‘ಸಾಮೆ‘ ತಿಂದವರು ಆಮೆಯಂತೆ ದೀರ್ಘಾಯುಷಿಯಾಗುವರು, ‘ಬರಗು‘ ತಿಂದವರು ದೇಹಕಾಂತಿಯಿಂದ ಬೆಳಗುವರು…

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.23ರಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 2025ನೇ ಸಾಲಿನ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಪ್ರವೇಶ ದ್ವಾರದಲ್ಲಿ 16 ಧಾನ್ಯಗಳಿಂದ ಬಿಡಿಸಿದ ರಂಗೋಲಿಯಲ್ಲಿ ಕಂಡ ಸಾಲುಗಳಿವು. ಧಾನ್ಯಗಳ ಗಾತ್ರದಲ್ಲಿ ಇವು ತೃಣಧಾನ್ಯ ಅಥವಾ ಕಿರಿಯ ಧಾನ್ಯಗಳಾಗಿದ್ದರೂ ಗುಣದಲ್ಲಿ ಹಿರಿಯ ಧಾನ್ಯಗಳು ಎಂಬುದನ್ನು ಪ್ರತಿಯೊಂದು ಸಿರಿಧಾನ್ಯ ಸಾರಿ ಹೇಳುತ್ತಿವೆ.

ಸಣ್ಣ ಸಣ್ಣ ಮರದಲ್ಲಿ ತುಂಬಿದ ಪ್ರತಿಯೊಂದು ಸಿರಿಧಾನ್ಯಗಳ ಮೇಲೆ ಅವುಗಳ ಆರೋಗ್ಯದ ಗುಣ ವಿಶೇಷತೆಗಳನ್ನು ಒಂದೇ ಸಾಲಿನಲ್ಲಿ ಕಟ್ಟಿಕೊಡಲಾಗಿದೆ. ಬಾಗಲಕೋಟೆಯ ಕೃಷಿ ಇಲಾಖೆಯ ಜಂಟಿ ಸಹಯೋಗದಲ್ಲಿ ಮಹಾಲಿಂಗಪುರದ ಕಲಾವಿದರೂ ಪ್ರವೇಶ ದ್ವಾರದಲ್ಲಿ ಧಾನ್ಯಗಳಲ್ಲಿ ಆಕರ್ಷಕ ಚಿತ್ತಾರ ಬಿಡಿಸಿದ್ದಾರೆ. ದುಂಡಾಕಾರದ ಚಿತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಯೋಜನೆಗಳನ್ನು ಪ್ರತಿನಿಧಿಸುವ ಚಿತ್ರಗಳನ್ನು ಬಿಡಿಸಾಲಗಿದೆ. ಮಧ್ಯದಲ್ಲಿ ಗ್ರಾಮೀಣ ಸೊಗಡಿನ ಪ್ರತೀಕವಾದ ಕುಂಬವನ್ನು ಸ್ಥಾಪಿಸಿ, ಸುತ್ತಲು ಸಿರಿಧಾನ್ಯಗಳನ್ನು ಅಶೋಕ ಚಕ್ರದ ರೀತಿ ರಚಿಸಲಾಗಿದೆ. ಆ ಇಡೀ ರಂಗೋಲಿ ಚಿತ್ರದಲ್ಲಿ ಉಳುಮೆ ಮಾಡುತ್ತಿರುವ ರೈತ ಮತ್ತು ಜೋಡೆತ್ತುಗಳು ಗಮನ ಸೆಳೆಯುತ್ತವೆ.

Advertisements
ಸಿರಧಾನ್ಯ ಮೇಳ
2025ನೇ ಸಾಲಿನ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಚಿತ್ರಾವಳಿ

ಜ.23ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ಸಿರಿಧಾನ್ಯ ಮೇಳದಲ್ಲಿ ಅಂತಾರಾಜ್ಯದ ಕೃಷಿ ತಜ್ಞರು, ಸಾವಯವ ಕೃಷಿಕರು, 12 ರಾಷ್ಟ್ರಗಳಿಂದ ಬಂದಿರುವ ವಿದೇಶಿ ಪ್ರತಿನಿಧಿಗಳು ಹಾಗೂ ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳ ಬೆಳೆ ತಜ್ಞರು, ಕೃಷಿ ವಿದ್ಯಾರ್ಥಿಗಳು, ಸಾಮಾನ್ಯ ರೈತರು, ಗ್ರಾಹಕರು ಹಾಗೂ ಆಸಕ್ತರು ಎರಡನೇ ದಿನವಾದ ಶುಕ್ರವಾರವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಮೇಳದಲ್ಲಿ 300ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಬಹುತೇಕ ಮಳಿಗೆಗಳಲ್ಲಿ ಸಿರಿಧಾನ್ಯಗಳು, ಮತ್ತು ಅವುಗಳ ತರಹೇವಾರಿ ಆಹಾರ ಉತ್ಪನ್ನಗಳು ಮಾರಾಟಕ್ಕಿದ್ದವು.

ಈ ಸ್ಟೋರಿ ಓದಿದ್ದೀರಾ? ಬೆಳೆ ಬದಲಾವಣೆ | ಸಿರಿಧಾನ್ಯದ ಕಳವಳದ ಬೆಳವಣಿಗೆ – 75 ವರ್ಷದಲ್ಲಿ ಶೇ.93ರಷ್ಟು ಕುಗ್ಗಿದ ಬೆಳೆ ಪ್ರದೇಶ!

ಸಿರಿಧಾನ್ಯಗಳಿಗೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳು, ಸ್ಥಳದಲ್ಲೇ ಎತ್ತುಗಳಿಂದ ಮರದ ಗಾಣದಲ್ಲಿ ಎಣ್ಣೆ ತೆಗೆಯುವ ವಿಧಾನ ಹಾಗೂ ಬೆಲ್ಲ ಸಾವಯವ ಬೆಲ್ಲ ತಯಾರಿಸುವ ವಿಧಾನ, ಕಬ್ಬು ಸುಡುತ್ತಿರುವ ಹೊಗೆ ಮೇಳಕ್ಕೆ ಬಂದವರನ್ನು ಆಕರ್ಷಿಸುತ್ತಿದ್ದವು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದಿಂದ ಕಾಡಿನ ಹಣ್ಣುಗಳ ಪರಿಚಯ ಜನರನ್ನು ಸೆಳೆಯುತ್ತಿತ್ತು. ಬ್ಯಾಲದ ಹಣ್ಣು, ನಗರೆ ಹಣ್ಣು ಹಾಗೂ ಗೇರು ಹಣ್ಣಿನ ರುಚಿ ನೋಡಲು ಜನ ಮುಗಿಬಿದ್ದಿದ್ದರು.

ಸಿರಿಧಾನ್ಯಗಳ ಬೆಳೆಯೇ ನೋಡದ ಎಷ್ಟೋ ಜನರು ಮೇಳದೊಳಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದ್ದ ಮಳಿಗೆಯಲ್ಲಿ ಎಲ್ಲ ಸಿರಿಧಾನ್ಯಗಳ ಬೆಳೆಗಳನ್ನು ನೋಡಿ ಕಣ್ತುಂಬಿಕೊಂಡರು. ಅಲ್ಲಿದ್ದ ತಜ್ಞರಿಂದ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಬೆಳೆಗಳ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟರು.

ಡಾ. ಬಿ ಡಿ ಬಿರಾದರ್
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ ಡಿ ಬಿರಾದರ್‌

ಮೇಳದಲ್ಲಿ ಈ ದಿನ.ಕಾಮ್‌ ಜೊತೆ ಮಾತಿಗೆ ಸಿಕ್ಕ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ ಡಿ ಬಿರಾದರ್‌ ಅವರು ಸಿರಿಧಾನ್ಯ ಮೇಳದ ಮಹತ್ವ ವಿವರಿಸಿ, “ಆಹಾರದಿಂದಲೇ ಆರೋಗ್ಯ. ಆಹಾರವೇ ಔಷಧಿ. ಸಿರಿಧಾನ್ಯಗಳು ಆಹಾರ ಸಂಪತ್ತಿನಿಂದ ಕೂಡಿದ ಧಾನ್ಯಗಳಾಗಿವೆ. ಒಂದು ಕಾಲದಲ್ಲಿ ಒರಟು ಧಾನ್ಯಗಳೆಂಬ ಹಣೆಪಟ್ಟಿಯೊಂದಿಗೆ ಆಹಾರ ಕ್ರಮದ ಮುಖ್ಯವಾಹಿನಿಯಿಂದ ದೂರ ಸರಿದಿದ್ದವು. ಮತ್ತೆ ಈಗ ಜನರು ಸಿರಿಧಾನ್ಯಗಳಾದ ಜೋಳ, ಸಜ್ಜೆ, ರಾಗಿ, ಕೊರಲೆ, ಹಾರಕ, ನವನೆ, ಊದಲು, ಸಾಮೆ, ಬರಗು ಧಾನ್ಯಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಆಹಾರದ ಭಾಗವಾಗಿ ಸ್ವೀಕರಿಸಲು ಮುಂದೆ ಬರುತ್ತಿದ್ದಾರೆ” ಎಂದರು.

“ಸಿರಿಧಾನ್ಯಗಳು ರೈತ ಸ್ನೇಹಿ ಬೆಳೆಗಳು. ಪ್ರತಿಯೊಂದು ಸಿರಿಧಾನ್ಯ ತನ್ನದೇ ಆದ ಮಹತ್ವವನ್ನು ಪಡೆದಿವೆ. ಇವುಗಳಿಗೆ ಬರ ಸಹಿಸಿಕೊಳ್ಳುವ ಶಕ್ತಿ ಇದೆ. ಸ್ವಲ್ಪ ತೇವಾಂಶ ಇದ್ದರೂ ಸಾಕು ಇವು ಹುಲುಸಾಗಿ ಬೆಳೆಯುತ್ತವೆ. ಫಲವತ್ತತೆಯ ಭೂಮಿಯ ಅವಶ್ಯಕತೆ ಈ ಬೆಳೆಗಳಿಗೆ ಇಲ್ಲ. ನೀರಿನ ಕೊರತೆಯನ್ನು ನೀಗಿಸುವ ಬೆಳೆಗಳಿವು. ಮಳೆಯಾಶ್ರಿತ ಬೆಳೆಗಳು ಇವು ಆಗಿದ್ದರಿಂದ ದೊಡ್ಡ ಪ್ರಮಾಣದ ನೀರಿನ ಅವಶ್ಯಕತೆಯೇ ಬೀಳುವುದಿಲ್ಲ. ಜೊತೆಗೆ ಇವುಗಳಿಗೆ ರೋಗ ಕಡಿಮೆ. ಉತ್ತಮ ಇಳುವರಿ ಹಾಗೂ ಉತ್ಕೃಷ್ಟ ಮೇವು ಸಿರಿಧಾನ್ಯ ಬೆಳೆಯುವುದರಿಂದ ಸಿಗುತ್ತದೆ. ರಾಜ್ಯ ಸರ್ಕಾರ ಸಿರಿಧಾನ್ಯ ಮೇಳ ಆಯೋಜಿಸುತ್ತಿರುವುದರಿಂದ ಮತ್ತಷ್ಟು ಈ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಜನರಿಗೆ ಹೇಳಲು ನಮಗೆ ಇಲ್ಲಿ ಸಮಯ ಸಾಲುತ್ತಿಲ್ಲ” ಎಂದು ಹೇಳಿದರು.

ಕಪನಿಗೌಡ
ಮಂಡ್ಯ ಜಿಲ್ಲೆಯ ಸಾವಯವ ಕೃಷಿಕ ಕಪನಿಗೌಡ

“ರಾಜ್ಯ ಸರ್ಕಾರ ಸಿರಿಧಾನ್ಯ ಮೇಳ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಯಾವ ಬೆಳೆಗಳು ನಮ್ಮ ಆಹಾರ ಪದ್ಧತಿಯಿಂದ ದೂರವಾಗಿದ್ದವೋ ಅವು ಈಗ ಮತ್ತೆ ನಮ್ಮ ಆಹಾರದ ಭಾಗವಾಗುತ್ತಿರುವುದು ಸಂತಷದ ಸಂಗತಿ. ನಾನು ಕಲಿತಿವುದು ಎಂಬಿಬಿಸ್‌ ವೃತ್ತಿ. ಆದರೆ ನನಗೆ ಕೃಷಿಯಲ್ಲಿ ಆಸಕ್ತಿ. ವೈದ್ಯ ವೃತ್ತಿಯನ್ನು ಕಲಿಯತ್ತಿರುವಾಗಲೇ ನಾನು ಕೃಷಿಗೆ ಹೊರಳಿದೆ. ಎಲ್ಲೋ ಹೋಗಿ ನಾಲ್ಕು ಅಂಕಿ ಸಂಬಳ ತಗೋದಕ್ಕಿಂತ ಕೃಷಿಯಲ್ಲಿ ಇನ್ನೂ ಹೆಚ್ಚಿನ ಆದಾಯಗಳಿಸಬಹುದು. ನನಗೆ ಸಾವಯವ ಕೃಷಿ ಹೆಚ್ಚು ತೃಪ್ತಿ ತಂದಿದೆ. ಎಲ್ಲ ತರಕಾರಿಗಳಿಗೂ ಗೊಬ್ಬರ ಹಾಕಿ ಬೆಳೆದು ನಮ್ಮ ಇಡೀ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಯಾವುದೇ ಒಂದು ತರಕಾರಿಯನ್ನು ಮಕ್ಕಳು ಬಾಯಲ್ಲಿ ಇಟ್ಟುಕೊಳ್ಳದ ಸ್ಥಿತಿ ನಮ್ಮಲ್ಲಿದೆ. ಪ್ರತಿ ವರ್ಷ ನಾವು ಆಹಾರದ ಮೂಲಕ ಒಂದು ಕೆ.ಜಿಯಷ್ಟು ಯೂರಿಯಾ ಗೊಬ್ಬರ ಸೇವಿಸುತ್ತಿದ್ದೇವೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತೆ ನಾವು ಸಿರಿಧಾನ್ಯಗಳಿಗೆ ಮುಖಮಾಡುವುದು ಒಂದೇ ದಾರಿ” ಎಂದು ಮಂಡ್ಯ ಜಿಲ್ಲೆಯ ಸಾವಯವ ಕೃಷಿಕ ಕಪನಿಗೌಡ ತಿಳಿಸಿದರು.

ರಮೇಶ್
ಹಾಸನದ ಕೃಷಿ ನಿರ್ದೇಶಕ ರಮೇಶ್‌

ಸಿರಿಧಾನ್ಯ ಮೇಳದ ಉಸ್ತುವಾರಿ ಸಮಿತಿಯಲ್ಲಿದ್ದ ಹಾಸನದ ಕೃಷಿ ನಿರ್ದೇಶಕ ರಮೇಶ್‌ ಅವರು ಮಾತನಾಡಿ, “ಹೆಸರಿಗಷ್ಟೇ ಇವು ಕಿರಿಯ ಧಾನ್ಯಗಳು. ಗುಣದಿಂದ ಹಿರಿಯ ಧಾನ್ಯಗಳು. ಪುರಾತನ ಕಾಲದಿಂದಲೂ ಸಿರಿಧಾನ್ಯಗಳೇ ನಮ್ಮ ಆಹಾರದ ಭಾಗವಾಗಿದ್ದವು. ಕ್ರಮೇಣ ನಮ್ಮ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾಗಿ ಅಕ್ಕಿ, ಗೋಧಿಯಂತಹ ಧಾನ್ಯಗಳಿಗಳಿ ಅತೀಯಾಗಿ ಹೊಂದಿಕೊಂಡಿದ್ದೇವೆ. ನಮ್ಮ ಆನಾರೋಗ್ಯಕ್ಕೂ ಇವು ಕಾರಣವಾಗಿವೆ. ಆದರೆ ಸಿರಿಧಾನ್ಯ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತ. ಒಂದೂ ನಕಾರಾತ್ಮಕ ಅಂಶ ಸಿರಿಧಾನ್ಯಗಳಿಗಿಲ್ಲ. ಸಚಿವ ಕೃಷ್ಣ ಬೈರೇಗೌಡ ಅವರಿಂದ ಆರಂಭವಾದ ಸಿರಿಧಾನ್ಯ ಮೇಳ ಪ್ರತಿ ವರ್ಷ ತನ್ನ ವಿಸ್ತಾರವನ್ನು ಹಿಗ್ಗಿಸಿಕೊಂಡಿದೆ. ಈ ಸಲವಂತೂ ಬಹಳ ಅಚ್ಚುಕಟ್ಟಾಗಿ ಮೇಳವನ್ನು ಆಯೋಜಿಸಲಾಗಿದೆ” ಎಂದರು.

“ಉದ್ಘಾನೆಯ ದಿನ ಸುಮಾರು ಒಂದು ಲಕ್ಷ ಜನ ಆಗಮಿಸಿದ್ದರು. ಶಕ್ರವಾರವೂ ಲಕ್ಷಾಂತರ ಜನ ಆಗಮಿಸುವ ನೀರಿಕ್ಷೆ ಇದೆ. ನಾಳೆ ಶನಿವಾರ (ಜ.25) ರಜೆ ದಿನವಾಗಿದ್ದರಿಂದ ಇನ್ನೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ. ಮೂರು ದಿನದಲ್ಲಿ ನಾಲ್ಕೈದು ಲಕ್ಷ ಜನ ಬರಬಹುದು ಎನ್ನುವ ಅಂದಾಜು ಇದೆ. ಎಲ್ಲ ಜಿಲ್ಲೆಗಳಿಂದಲೂ ರೈತರು, ಗ್ರಾಹಕರು ಆಗಮಿಸಿದ್ದಾರೆ. ಬೇರೆ ಬೇರೆ ರಾಜ್ಯಗಳ ಸರ್ಕಾರದ ಪ್ರತಿನಿಧಿಗಳು ಬಂದಿದ್ದಾರೆ. ವಿದೇಶಗಳಿಂದಲೂ ಪ್ರತಿನಿಧಿಗಳು ಬಂದಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬಂದಿದ್ದಾರೆ. ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಒಟ್ಟಾರೆ ಸಿರಿಧಾನ್ಯ ಮೇಳ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನರನ್ನು ತಲುಪುತ್ತಿದೆ” ಎಂದು ತಿಳಿಸಿದರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X