ಗುಜರಾತ್‌ ನರಮೇಧದ ಹಿಂದಿದ್ದವರು ಮೋದಿಯೇ ಎಂದು ನಿರಂತರ ಸಮರ ಸಾರಿದ್ದರು ಝಕಿಯಾ ಜಾಫ್ರಿ

Date:

Advertisements

2024ರ ತನಕ ಝಕಿಯಾ ಪ್ರತಿ ಫೆಬ್ರವರಿ 27ರಂದು ಚಾಚೂ ತಪ್ಪದೆ ಬೆಂದು ಕರಕಾಗಿ ಪಾಳು ಬಿದ್ದಿರುವ ಗುಲ್ಪರ್ಗ್ ಸೊಸೈಟಿಯ ತಮ್ಮ ಮನೆಯ ಅವಶೇಷಗಳನ್ನು ಕಂಡು ತಮ್ಮ ಜೀವನ ಸಂಗಾತಿ ಎಹ್ಸಾನ್ ಮತ್ತು ಇತರೆ ಸಂತ್ರಸ್ತರ ಸಂಕಟವನ್ನು ಸ್ಮರಿಸಿ ದುಗುಡ ತುಂಬಿದ ಭಾರದ ಮನಸು ಹೊತ್ತು ಹಿಂದಿರುಗುತ್ತಿದ್ದರು. ಈ ವರ್ಷವೂ ಅಲ್ಲಿಗೆ ತೆರಳುವ ಮನಸು ಅವರಿಗಿತ್ತು.

2002ರ ಗುಜರಾತಿನ ಗೋಧ್ರೋತ್ತರ ಕೋಮು ಗಲಭೆಗಳ ಸಂತ್ರಸ್ತರಿಗೆ ನ್ಯಾಯ ಒದಗಿಸಲು 20 ವರ್ಷಗಳ ಕಾಲ ನಿರಂತರ ಕಾದಾಡಿದ ಝಕಿಯಾ ಜಾಫ್ರಿ ಕಡೆಯುಸಿರೆಳೆದಿದ್ದಾರೆ. ಗುಜರಾತಿನ ಕೋಮು ದಂಗೆಗಳ ಸಂತ್ರಸ್ತರ ಅಳಿವು ಉಳಿವಿನ ಹೋರಾಟದ ಚಹರೆಯೇ ಆಗಿದ್ದರು ಝಕಿಯಾ ಆಪಾ.

ಈ ಕೋಮು ಗಲಭೆಗಳ ನರಮೇಧವು ವ್ಯವಸ್ಥಿತ ಒಳಸಂಚಿನ ಭಾಗವಾಗಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತಿತರರು ಪಿತೂರಿಯ ಭಾಗವಾಗಿದ್ದರು ಎಂಬುದು ಝಕಿಯಾ ಆರೋಪವಾಗಿತ್ತು. 119 ಪುಟಗಳ ದೂರೊಂದನ್ನು 2006ರಲ್ಲಿ ಗುಜರಾತಿನ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿದ್ದರು. ಮೋದಿ ಮತ್ತಿತರೆ 22 ಮಂದಿಯ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಳ್ಳುವಂತೆ ಮತ್ತು ಸಿಬಿಐ ತನಿಖೆ ನಡೆಸುವಂತೆ 2007ರಲ್ಲಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.

2002ರ ಫೆಬ್ರವರಿ 28ರಂದು ಅಹ್ಮದಾಬಾದಿನ ಗುಲ್ಬರ್ಗ್ ಸೊಸೈಟಿಯ 69 ನಿವಾಸಿಗಳನ್ನು ಕೊಲ್ಲಲಾಯಿತು. ಈ ಸೊಸೈಟಿಯ ನಿವಾಸಿಗಳೆಲ್ಲ ಮುಸಲ್ಮಾನರೇ ಆಗಿದ್ದರು. 19 ಬಂಗಲೆಗಳು ಮತ್ತು ಎಂಟು ಫ್ಲ್ಯಾಟುಗಳಿದ್ದ ಈ ಸೊಸೈಟಿಯ ಗೋಡೆಗಳನ್ನು ಒಡೆಯಲು ಅಡುಗೆ ಅನಿಲದ ಸಿಲಿಂಡರುಗಳನ್ನು ಸಿಡಿಸಿದ್ದರು ಉನ್ಮತ್ತ ಕೋಮುವಾದಿಗಳು. ಇದೇ ಸೊಸೈಟಿಯ ನಿವಾಸಿಯಾಗಿದ್ದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಎಹ್ಸಾನ್ ಜಾಫ್ರಿಯವರು ಗುಂಪನ್ನು ಚೆದುರಿಸಲು ಗುಂಡು ಹಾರಿಸುತ್ತಾರೆ. ಆದರೂ ಚೆದುರದೆ ಎರಗಿ ಬಂದ ಗುಂಪಿನಿಂದ ರಕ್ಷಿಸುವಂತೆ ಎಹ್ಸಾನ್ ಜಾಫ್ರಿ ಪೊಲೀಸರಿಗೆ ಮೊರೆಯಿಡುತ್ತಾರೆ. ಮುಖ್ಯಮಂತ್ರಿಯವರೂ ಸೇರಿದಂತೆ ತಾವು ಬಲ್ಲ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಸುಮಾರು 200 ದೂರವಾಣಿ ಕರೆಗಳನ್ನು ಮಾಡುತ್ತಾರೆ. ಆದರೆ ಯಾವ ನೆರವೂ ದೊರೆಯುವುದಿಲ್ಲ. ಜಾಫ್ರಿಯವರ ಕೈಕಾಲುಗಳನ್ನು ಕತ್ತರಿಸಿ ಆನಂತರ ಅವರನ್ನು ಜೀವಂತವಾಗಿ ಸುಡಲಾಗುತ್ತದೆ. ಈ ಭಯಾನಕ ಕೃತ್ಯ ಎಸಗಿದವರೇ ತೆಹಲ್ಕಾ ರಹಸ್ಯ ಕ್ಯಾಮೆರಾ ಮುಂದೆ ಒಪ್ಪಿಕೊಂಡಿದ್ದಾರೆ. ಗುಜರಾತಿನ ಸಿವಿಲ್ ಸೊಸೈಟಿಯ ಕಡು ಕರಾಳ ದಿನವದು. ಆದರೆ ಎಹ್ಸಾನ್ ಜಾಫ್ರಿ ಗುಂಡು ಹಾರಿಸಿದ ಕಾರಣ ಗುಂಪಿನ ಕ್ರೋಧದ ಬೆಂಕಿಗೆ ತೈಲವೆರೆಯಿತು ಎಂದು ನ್ಯಾಯಾಲಯ ಹೇಳಿದೆ.

ಗುಜರಾತ್ ಗಲಭೆ
ಕೋಮುವಾದಿಗಳಿಂದ ಹಿಂಸಾಚಾರ

ಪತಿಯ ಹತ್ಯೆಯ 23 ವರ್ಷಗಳ ನಂತರ ಪತಿಯನ್ನು ಮಣ್ಣು ಮಾಡಿದ ಅದೇ ಮಸಣದಲ್ಲಿ ಅವರ ಪಕ್ಕದಲ್ಲೇ ಮಣ್ಣಾದರು ಝಕಿಯಾ. ವೃದ್ಧಾಪ್ಯದಲ್ಲಿ ಕಾಡುವ ರೋಗಗಳಿಗೆ ಬಲಿಯಾದ ಅವರಿಗೆ 86 ವರ್ಷ ವಯಸ್ಸಾಗಿತ್ತು.

Advertisements

ಕೋಮುವಾದಿಗಳು ಜೀವಂತ ಸುಟ್ಟು ಹಾಕಿದ ಎಹ್ಸಾನ್ ಜಾಫ್ರಿಯವರ ಅವಶೇಷಗಳೂ ಸರಿಯಾಗಿ ಸಿಕ್ಕಿರಲಿಲ್ಲ. ಅವರ ಅವಶೇಷವೆಂದು ಭಾವಿಸಲಾದ ಹಿಡಿ ಮಣ್ಣನ್ನೇ ತಂದು ಮಸಣದಲ್ಲಿ ಹೂಳಲಾಗಿತ್ತು. ಅಸ್ವಸ್ಥ ತಾಯಿಯ ಕಡೆಗಾಲದಲ್ಲಿ ಜೊತೆ ನೀಡಲು ಅಮೆರಿಕದಿಂದ ಆಗಮಿಸಿದ್ದ ಜಾಫ್ರಿ ಪುತ್ರಿ ನಿಶ್ರೀನ್ ನೆನಪು ಮಾಡಿಕೊಂಡರು.

ನನ್ನ ತಂದೆಯ ಸಮಾಧಿಯ ಪಕ್ಕದಲ್ಲೇ ತಮ್ಮನ್ನು ಹೂಳಬೇಕೆಂಬುದು ನನ್ನಮ್ಮನ ಆಸೆಯಾಗಿತ್ತು. ಅಹಮದಾಬಾದಿನಿಂದ ದೂರವಿದ್ದಾಗ ಸಾವು ತಮ್ಮ ಮೇಲೆರೆಗಿದರೆ ಗತಿಯೇನು ಎಂಬುದು ಅವರ ಆತಂಕವಾಗಿತ್ತು ಎಂದರು ನಿಶ್ರಿನ್.

ಗೋಧ್ರಾ ರೈಲು ಡಬ್ಬಿಗಳಿಗೆ ಬೆಂಕಿ ಬಿದ್ದು ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕರಸೇವಕರು ಸೇರಿದಂತೆ 59 ಮಂದಿ ಸುಟ್ಟು ಮೃತರಾದ ಮರುದಿನವೇ (2002ರ ಫೆಬ್ರವರಿ 27) ಜಾಫ್ರಿ ದಂಪತಿ ಕಟ್ಟಿಕೊಂಡು ವಾಸಿಸುತ್ತಿದ್ದ ಗುಲ್ಬರ್ಗ್ ಸೊಸೈಟಿಗೆ ಹಿಂದುತ್ವವಾದಿ ಗುಂಪು ಬೆಂಕಿ ಇಟ್ಟು ಸುಟ್ಟು ಹಾಕಿತು. ಎಹ್ಸಾನ್ ಜಾಫ್ರಿ ಅವರ ಕಳೇಬರದ ಯಾವ ಅವಶೇಷಗಳೂ ದೊರೆಯಲಿಲ್ಲ.

ಫೆಬ್ರವರಿ ಒಂದರಂದು ಶನಿವಾರ ಮುಂಜಾನೆ ಎಂದಿನಂತೆ ಉಪಾಹಾರ ಚಹಾ ಸೇವಿಸಿದ ಝಕಿಯಾ, ಹನ್ನೊಂದೂ ಕಾಲರ ವೇಳೆಗೆ ಉಸಿರಾಟದ ತೊಂದರೆಗಳಿಂದ ತೀರಿ ಹೋದರು.

ಜಾಫ್ರಿ ಅವರ ಸುಟ್ಟ ಮನೆ
ಸುಟ್ಟ ಮನೆಯ ಅವಶೇಷಗಳ ಮಧ್ಯೆ ಝಕಿಯಾ

2024ರ ತನಕ ಝಕಿಯಾ ಪ್ರತಿ ಫೆಬ್ರವರಿ 27ರಂದು ಚಾಚೂ ತಪ್ಪದೆ ಬೆಂದು ಕರಕಾಗಿ ಪಾಳು ಬಿದ್ದಿರುವ ಗುಲ್ಪರ್ಗ್ ಸೊಸೈಟಿಯ ತಮ್ಮ ಮನೆಯ ಅವಶೇಷಗಳನ್ನು ಕಂಡು ತಮ್ಮ ಜೀವನ ಸಂಗಾತಿ ಎಹ್ಸಾನ್ ಮತ್ತು ಇತರೆ ಸಂತ್ರಸ್ತರ ಸಂಕಟವನ್ನು ಸ್ಮರಿಸಿ ದುಗುಡ ತುಂಬಿದ ಭಾರದ ಮನಸು ಹೊತ್ತು ಹಿಂದಿರುಗುತ್ತಿದ್ದರು. ಈ ವರ್ಷವೂ ಅಲ್ಲಿಗೆ ತೆರಳುವ ಮನಸು ಅವರಿಗಿತ್ತು. ಆದರೆ ಅದಕ್ಕೆ ಮೊದಲೇ ಮರಣ ಅವರನ್ನು ಮರಳಿ ಬಾರದ ಊರಿಗೆ ಕರೆದೊಯ್ಯಿತು.

2002ರಿಂದ 2022ರ ತನಕ ಬಿಡುವಿಲ್ಲದೆ ಜರುಗಿತ್ತು ಅವರ ಕಾನೂನು ಸಮರ. 2022ರಲ್ಲಿ ಸುಪ್ರೀಮ್ ಕೋರ್ಟು ತೀರ್ಪು ನೀಡುವ ತನಕ ನ್ಯಾಯ ದಕ್ಕೀತೆಂಬ ಆಸೆ ಇಟ್ಟುಕೊಂಡಿದ್ದರು. ತಮ್ಮ ನೆರೆಹೊರೆಯ ಹಿಂದು ಕುಟುಂಬಗಳು ಈ ನರಮೇಧದ ಕೃತ್ಯದಲ್ಲಿ ಭಾಗಿಯಾಗಿಲ್ಲ. ಅವರೆಲ್ಲ ಒಳ್ಳೆಯವರು. ಗುಲ್ಬರ್ಗ್ ಸೊಸೈಟಿಯನ್ನು ಮತ್ತೆ ಕಟ್ಟಲು ರಾಜ್ಯ ಸರ್ಕಾರ ನೆರವಾಗಬೇಕು. ಮರುನಿರ್ಮಿತ ಗುಲ್ಬರ್ಗ್ ಸೊಸೈಟಿಯು ಎಹ್ಸಾನ್ ಜಾಫ್ರಿಯವರ ನೆನಪಿನ ಕೋಮು ಸೌಹಾರ್ದದ ಸಂಕೇತವಾಗಬೇಕು ಎಂಬ ಬಯಕೆಯನ್ನು ಝಕಿಯಾ ವ್ಯಕ್ತಪಡಿಸಿದ್ದರು.

ಗೋಧ್ರಾ ನಂತರ ಜರುಗಿದ ಕೋಮು ನರಮೇಧದ ಸಂಬಂಧ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತಿತರರ ವಿರುದ್ಧ ಪೊಲೀಸರು ದೂರು ದಾಖಲಿಸಿಲ್ಲವೆಂದು 2006ರಲ್ಲಿ ಅಧೀನ ನ್ಯಾಯಾಲಯಕ್ಕೆ ದೂರು ನೀಡಿದ್ದರು ಝಕಿಯಾ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಡೆಸಿದ ಈ ಸಮರ ಸುದೀರ್ಘ ಜಗ್ಗಿತು. ಈ ಸಮರದಲ್ಲಿ ಅವರಿಗೆ ಆಸರೆಯಾದದ್ದು ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು ಸಂಘಟನೆ (ಸಿಜೆಪಿ).

ಗುಲ್ಬರ್ಗ್ ಸೊಸೈಟಿ ನರಮೇಧವೂ ಸೇರಿದಂತೆ ಗುಜರಾತಿನ ಒಂಬತ್ತು ಪ್ರಮುಖ ಕೋಮುಹಿಂಸೆಗಳ ಕೇಸುಗಳನ್ನು ಮರುತನಿಖೆ ಮಾಡುವಂತೆ ಸುಪ್ರೀಮ್ ಕೋರ್ಟು ಆದೇಶ ಹೊರಡಿಸಿತು. ವಿಶೇಷ ತನಿಖಾ ತಂಡ ರಚನೆಯಾಯಿತು. ಕೋರ್ಟಿನ ಈ ಆದೇಶದ ಹಿಂದೆ ಝಕಿಯಾ ಅವರ ಹೋರಾಟವಿತ್ತು. ಆದರೆ ವಿಶೇಷ ತನಿಖಾ ತಂಡ 2012ರಲ್ಲಿ ಈ ಮರುತನಿಖೆಯ ಸಮಾಪ್ತಿ ವರದಿಯನ್ನು ಸಲ್ಲಿಸಿತು.

2002ರ ಈ ಗಲಭೆಗಳಲ್ಲಿ ಮೋದಿ ಮತ್ತಿತರರ ಪಾತ್ರ ಇಲ್ಲವೆಂದು ವಿಶೇಷ ತನಿಖಾ ತಂಡ ‘ಕ್ಲೀನ್ ಚಿಟ್’ ನೀಡಿತು. ತನಿಖಾ ತಂಡ ನೀಡಿದ ಈ ‘ಪರಿಸಮಾಪ್ತಿ’ ವರದಿಯನ್ನು ಝಕಿಯಾ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದರು. ಆದರೆ ಈ ಮೇಲ್ಮನವಿಯನ್ನು ಸುಪ್ರೀಮ್ ಕೋರ್ಟು ತಳ್ಳಿ ಹಾಕಿತು.

ಕಾಂಗ್ರೆಸ್ ಪ್ರಚಾರ ಸಭೆ
ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಎಹ್ಸಾನ್‌ ಜಾಫ್ರಿ

ಪ್ರತಿ ವರ್ಷ ಫೆಬ್ರವರಿಯಲ್ಲಿ ಗುಲ್ಬರ್ಗ್ ಸೊಸೈಟಿಗೆ ಭೇಟಿ ನೀಡಿ ಭಯಾನಕ ದುರಂತದ ಗಾಯಗಳನ್ನು ಮಾಯಿಸಿಕೊಳ್ಳುತ್ತಿದ್ದರು ಝಕಿಯಾ. ಸುಟ್ಟು ಪಾಳು ಬಿದ್ದಿದ್ದ ಈ ಸಮುಚ್ಚಯದ ತಮ್ಮ ಸ್ವಂತ ಮನೆಗೆ ಒಂದಲ್ಲ ಒಂದು ದಿನ ಮರಳುವ, ಅಲ್ಲಿ ನೆಲೆಸುವ ಆಸೆ ಇಟ್ಟುಕೊಂಡಿದ್ದರು. ಪತಿ ಎಹ್ಸಾನ್ ಅವರೊಂದಿಗೆ ಬದುಕಿದ ನೆನಪುಗಳನ್ನು ಅಲ್ಲಿನ ಗಾಳಿಗಂಧದಲ್ಲಿ ಮತ್ತೊಮ್ಮೆ ಜೀವಿಸುವ ಅವರ ಉತ್ಕಟತೆ ಈಡೇರದೆ ಹೋಯಿತು.

ಝಕಿಯಾ ಕೇವಲ ತಮಗಾಗಿ ಹೋರಾಡಲಿಲ್ಲ. ತಮ್ಮ ಪತಿಯ ಹತ್ಯೆಯ ನಂತರ ಅನ್ಯಾಯದ ಮತ್ತು ಹಿಂಸ್ರ ವ್ಯವಸ್ಥೆಯ ಎಲ್ಲ ಸಂತ್ರಸ್ತ ಮಹಿಳೆಯರಿಗಾಗಿ ನಿರಂತರ ಕಾದಾಡಿದರು ಎನ್ನುತ್ತಾರೆ ನಾಗರಿಕ ಹಕ್ಕುಗಳ ಹೋರಾಟಗಾರ ಸೆಡ್ರಿಕ್ ಪ್ರಕಾಶ್. ಆಕೆಯ ಅಂತಿಮ ಸಂಸ್ಕಾರಕ್ಕೆ ಬಂದ ಇಬ್ಬರೇ ರಾಜಕಾರಣಿಗಳು ಕಾಂಗ್ರೆಸ್ ನ ಹಾಲಿ ಶಾಸಕ ಇಮ್ರಾನ್ ಖೇಡವಾಲಾ ಮತ್ತು ಮಾಜಿ ಶಾಸಕ ಗಯಾಸುದ್ದೀನ್ ಶೇಖ್. ಕಡೆಯುಸಿರೆಳೆದ ಝಕಿಯಾ ಪಕ್ಕದಲ್ಲಿದ್ದ ಇತರರೆಂದರೆ ಸಿಜೆಪಿಯ ತೀಸ್ತಾ ಸೆಟಲ್ವಾಡ್, ವಕೀಲ- ಹೋರಾಟಗಾರ ಶಂಶದ್ ಪಠಾಣ್ ಹಾಗೂ ಫಾದರ್ ಪ್ರಕಾಶ್.

‘ಸೆಕ್ಯೂಲರ್ ಭಾರತದ ಚರಿತ್ರೆಯಲ್ಲಿನ ಹೊಳೆ ಹೊಳೆಯುವ ತಾರೆ ಝಕಿಯಾ ಜಾಫ್ರಿ. ಇಂದಿಗೂ ನ್ಯಾಯ ಸಂದಿಲ್ಲವೆಂಬುದು ವಿಷಾದದ ಸಂಗತಿ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

ಗುಲ್ಬರ್ಗ್ ಸೊಸೈಟಿ ಕೇಸಿನ 72 ಆಪಾದಿತರ ಪೈಕಿ 24 ಮಂದಿಗೆ 2016ರಲ್ಲಿ ವಿಶೇಷ ನ್ಯಾಯಾಲಯದಿಂದ ಶಿಕ್ಷೆಯಾಯಿತು. 24ರಲ್ಲಿ 11 ಮಂದಿಗೆ ಜೀವಾವಧಿ ಸಜೆಯಾಯಿತು. ಈ ಎಲ್ಲರೂ 2022ರಲ್ಲಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ. 20 ವರ್ಷಗಳ ಕಾಲ ತಾವು ಕೈಕಟ್ಟಿ ಕೂಡಲಿಲ್ಲ, ಬದಲಿಗೆ ನಿರಂತರ ಸಮರ ಸಾರಿದೆ ಎಂಬ ನೆಮ್ಮದಿ ಝಕಿಯಾ ಅವರದಾಗಿತ್ತು ಎನ್ನುತ್ತಾರೆ ಅವರ ಮಗ ತನ್ವೀರ್ ಜಾಫ್ರಿ.

2007ರಲ್ಲಿ ಸಲ್ಲಿಸಿದ್ದ ಝಕಿಯಾ ಅರ್ಜಿಯನ್ನು ಅದೇ ವರ್ಷವೇ ವಜಾಗೊಳಿಸುತ್ತಾರೆ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಎಂ.ಆರ್.ಶಾ. ಝಕಿಯಾ ಹೋರಾಟ ಕೈ ಬಿಡುವುದಿಲ್ಲ. 2008ರಲ್ಲಿ ಸುಪ್ರೀಮ್ ಕೋರ್ಟ್ ಕದ ಬಡಿಯುತ್ತಾರೆ. ಸುಪ್ರೀಮ್ ಕೋರ್ಟು ಗುಜರಾತ್ ಸರ್ಕಾರಕ್ಕೆ ನೋಟಿಸು ನೀಡುತ್ತದೆ. 2010ರಲ್ಲಿ ಗುಜರಾತಿನ ಕೋಮು ಗಲಭೆಗಳ ಕುರಿತ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡಕ್ಕೆ ಝಕಿಯಾ ಅವರ ಅಹವಾಲನ್ನೂ ಒಪ್ಪಿಸುತ್ತದೆ ಸುಪ್ರೀಮ್ ಕೋರ್ಟು. 2010ರ ಮಾರ್ಚ್ ತಿಂಗಳಿನಲ್ಲಿ ವಿಶೇಷ ತನಿಖಾ ತಂಡ ಮೋದಿಯವರನ್ನು ಒಂಬತ್ತು ತಾಸುಗಳ ಕಾಲ ಪ್ರಶ್ನಿಸಿ ಸುಪ್ರೀಮ್ ಕೋರ್ಟಿಗೆ ವರದಿ ಸಲ್ಲಿಸುತ್ತದೆ.

ಝಾಕಿಯಾ ೧

2011ರಲ್ಲಿ ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ರಾಜು ರಾಮಚಂದ್ರನ್ ಅವರು 10 ಪುಟಗಳ ವರದಿ ಸಲ್ಲಿಸುತ್ತಾರೆ. ಈ ವರದಿಯ ನಂತರ ಇನ್ನಷ್ಟು ವಿಸ್ತೃತ ತನಿಖೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ ಆದೇಶ ನೀಡುತ್ತದೆ ಸುಪ್ರೀಮ್ ಕೋರ್ಟು. ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಲೋಪದೋಷಗಳನ್ನು ಎತ್ತಿ ತೋರಿಸುತ್ತಾರೆ ರಾಜು ರಾಮಚಂದ್ರನ್. ಸ್ವತಂತ್ರ ಸಾಕ್ಷಿಗಳ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಮ್ ಕೋರ್ಟು ರಾಜು ರಾಮಚಂದ್ರನ್ ಅವರಿಗೆ ಸೂಚಿಸುತ್ತದೆ. ರಾಮಚಂದ್ರನ್ ವರದಿ ಸಲ್ಲಿಸುತ್ತಾರೆ. ಕೇಸಿಗೆ ಸಂಬಂಧಪಟ್ಟ ದಾಖಲೆ ದಸ್ತಾವೇಜುಗಳನ್ನು ಸುಪ್ರೀಮ್ ಕೋರ್ಟು ಕೆಳಹಂತದ ನ್ಯಾಯಾಲಯಕ್ಕೆ ಕಳಿಸುತ್ತದೆ. ಮೋದಿ ಮತ್ತಿತರರ ಪಾತ್ರವಿಲ್ಲವೆಂದು ವಿಶೇಷ ತನಿಖಾ ತಂಡ 2012ರಲ್ಲಿ ತನ್ನ ವರದಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ.ಎಸ್.ಭಟ್ ಅವರಿಗೆ ಸಲ್ಲಿಸುತ್ತದೆ.

2013ರಲ್ಲಿ ಝಕಿಯಾ ಪ್ರತಿಭಟನಾ ಅರ್ಜಿ ಸಲ್ಲಿಸುತ್ತಾರೆ. ಮೆಟ್ರೋಪಾಲಿಟನ್ ನ್ಯಾಯಾಲಯ 2013ರ ಡಿಸೆಂಬರಿನಲ್ಲಿ ಮೋದಿ ಮತ್ತಿತರರ ಪಾತ್ರ ಇಲ್ಲ ಎಂಬ ವಿಶೇಷ ತನಿಖಾ ತಂಡದ ವರದಿಯನ್ನು ಎತ್ತಿ ಹಿಡಿಯುತ್ತದೆ. ಝಕಿಯಾ ದೂರನ್ನು ವಜಾ ಮಾಡುತ್ತದೆ. 2014ರಲ್ಲಿ ಝಕಿಯಾ ಗುಜರಾತ್ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ವಿಸ್ತೃತ ಪಿತೂರಿ ಇದೆಯೆಂಬ ಝಕಿಯಾ ದೂರನ್ನು 2017ರಲ್ಲಿ ತಿರಸ್ಕರಿಸುತ್ತದೆ. ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ 2018ರಲ್ಲಿ ಸುಪ್ರೀಮ್ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ.

2022ರ ಜೂನ್ 24ರಂದು ಸುಪ್ರೀಮ್ ಕೋರ್ಟು ಝಕಿಯಾ ಅವರ ಮೇಲ್ಮನವಿಯನ್ನು ವಜಾಗೊಳಿಸುತ್ತದೆ. ಮೋದಿ ಮತ್ತಿತರರ ಪಾತ್ರ ಇಲ್ಲವೆಂದು ವಿಶೇಷ ತನಿಖಾ ತಂಡ ನೀಡಿದ್ದ ವರದಿಯನ್ನು ಎತ್ತಿ ಹಿಡಿಯುತ್ತದೆ. ಝಕಿಯಾ ಅವರ ಸಹವರ್ತಿ ಅರ್ಜಿದಾರರಾಗಿದ್ದ ತೀಸ್ತಾ ಸೆಟಲ್ವಾಡ್ ಅವರನ್ನು ಟೀಕಿಸುತ್ತದೆ. ‘ಇಷ್ಟು ವರ್ಷಗಳ ಕಾಲ ಈ ಪ್ರಕರಣವನ್ನು ಕುದಿಬಿಂದುವಿನಲ್ಲಿ ಇಟ್ಟಿದ್ದವರ ಮೇಲೆ ಕ್ರಮ ಜರುಗಿಸುವಂತೆ’ ಆದೇಶ ನೀಡುತ್ತದೆ

ಇಶಾನ್‌ ಜಾಫ್ರಿ ಮೊಮ್ಮಕ್ಕಳ ಜೊತೆ
ಮೊಮ್ಮಕ್ಕಳೊಂದಿಗೆ ಎಹ್ಸಾನ್‌ ಜಾಫ್ರಿ

ಸುಪ್ರೀಮ್ ಕೋರ್ಟಿನ ಈ ಆದೇಶದ ಮರುದಿನವೇ (2022ರ ಜೂನ್25) ಅಹಮದಾಬಾದ್ ಕ್ರೈ ಬ್ರ್ಯಾಂಚ್ ತೀಸ್ತಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಆರ್.ಬಿ.ಶ್ರೀಕುಮಾರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ವಿರುದ್ಧ ಎಫ್.ಐ.ಆರ್. ದಾಖಲಿಸುತ್ತದೆ. ಮೋದಿಯವರನ್ನು ‘ಸಿಕ್ಕಿಸಿ ಹಾಕಲು’ ಕೃತಕ ಸಾಕ್ಷ್ಯಗಳನ್ನು ಹೆಣೆಯಲಾಗಿದೆ ಎಂದು ಇವರ ಮೇಲೆ ಆರೋಪ ಹೊರಿಸಿತು. ತೀಸ್ತಾ ಅವರನ್ನು ಬಂಧಿಸಲಾಯಿತು. 2023ರಲ್ಲಿ ತೀಸ್ತಾಗೆ ಸುಪ್ರೀಮ್ ಕೋರ್ಟು ಜಾಮೀನು ಮಂಜೂರು ಮಾಡಿತು.
ಹಿಂದೂ ನೆರೆಹೊರೆಯೊಂದಿಗೆ ನನ್ನ ತಂದೆ ತಾಯಿ ಅತ್ಯಂತ ಸೌಹಾರ್ದ ಸಂಬಂಧವನ್ನು ಹೊಂದಿದ್ದರು. ಆದರೂ ತಂದೆಯವರನ್ನು ಅತ್ಯಂತ ಬರ್ಬರವಾಗಿ ಕೊಲ್ಲಲಾಯಿತು. ಪುಟ್ಟ ಮಕ್ಕಳು ಮಹಿಳೆಯರನ್ನೂ ಬಿಡದೆ ಹತ್ಯೆ ಮಾಡಲಾಯಿತು ಎನ್ನುತ್ತಾರೆ ನಿಶ್ರಿನ್ ಜಾಫ್ರಿ.

2022ರ ಸುಪ್ರೀಮ್ ಕೋರ್ಟಿನ ತೀರ್ಪನ್ನು ಹಿರಿಯ ನ್ಯಾಯವಾದಿ ಮತ್ತು ಕೇಂದ್ರದ ಮಾಜಿ ಕಾನೂನು ಮಂತ್ರಿ ಕಪಿಲ್ ಸಿಬಲ್ ಅವರು ಟೀಕಿಸಿದರು. ಸುಪ್ರೀಮ್ ಕೋರ್ಟಿನಿಂದ ನ್ಯಾಯ ದೊರೆಯುವುದೆಂಬ ಯಾವುದೇ ಭರವಸೆ ಉಳಿದಿಲ್ಲ ಎಂದು ಅವರು ನಾಗರಿಕ ಹಕ್ಕುಗಳ ಗುಂಪುಗಳು ಸಂಘಟಿಸಿದ್ದ ಜನತೆಯ ನ್ಯಾಯಾಧಿಕರಣದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದ್ದರು. 50 ವರ್ಷಗಳ ಕಾಲ ಸುಪ್ರೀಮ್ ಕೋರ್ಟಿನಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡಿದ ಅನುಭವದ ಮೇರೆಗೆ ಈ ಮಾತನ್ನು ಹೇಳುತ್ತಿದ್ದೇನೆ ಎಂದೂ ಅವರು ಒತ್ತು ನೀಡಿದ್ದುಂಟು. ಹೋರಾಟದ ಪ್ರತಿರೋಧದ ಜಾತ್ಯತೀತತೆಯಲ್ಲಿ ಅಚಲ ವಿಶ್ವಾಸ ಇರಿಸಿದ್ದ ಚಿರಂತನ ಚಹರೆಯಾಗಿ ಉಳಿಯಲಿದ್ದಾರೆ ಝಕಿಯಾ ಜಾಫ್ರಿ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X