ಐಪಿಎಲ್ ಇತಿಹಾಸದಲ್ಲಿ ಟ್ರೋಪಿ ವಂಚಿತ ತಂಡವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಹದಿನೆಂಟನೇ ಆವೃತ್ತಿಯನ್ನು ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ 18 ವರ್ಷದ ಕನಸು ನನಸಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಜಯೋತ್ಸವ ವೇಳೆ ಕಾಲ್ತುಳಿತ ಉಂಟಾಗಿ 11 ಅಭಿಮಾನಿಗಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಆರ್‌ಸಿಬಿ ತಂಡ ಐಪಿಎಲ್ ಚಾಂಪಿಯನ್ ಆಗಿರುವುದರಿಂದ ಕರ್ನಾಟಕದಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ದುರಂತದಿಂದ ರಾಜ್ಯದಲ್ಲಿ ಸೂತಕದ ಛಾಯೆ ಆವರಿಸಿದೆ. ದೇಶಾದ್ಯಂತ ಸಂತಾಪ ವ್ಯಕ್ತವಾಗಿದೆ.
ಕಾಲ್ತುಳಿತ ದುರಂತದ ಬಗ್ಗೆ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, “ಮಾತೇ ಬರುತ್ತಿಲ್ಲ, ಈ ಘಟನೆ ಕರುಳು ಹಿಂಡುತ್ತಿದೆ” ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಘಟನೆಯ ಕುರಿತು ಆರ್‌ಸಿಬಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇಂದು (ಬುಧವಾರ) ಮಧ್ಯಾಹ್ನ ಆರ್‌ಸಿಬಿ ತಂಡದ ಆಗಮನದ ನಿರೀಕ್ಷೆಯಲ್ಲಿ ಬೆಂಗಳೂರಿನಾದ್ಯಂತ ಸಾರ್ವಜನಿಕ ಸಭೆಗಳ ಕುರಿತು ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿರುವ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ದುರಂತದಲ್ಲಾದ ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತದೆ” ಎಂದು ಹೇಳಿದೆ.
ಮೃತರ ಕುಟುಂಬಗಳಿಗೆ 15 ಲಕ್ಷ ಪರಿಹಾರ
ಮೃತರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಅಂತಲೂ ಮಾಹಿತಿ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಆರ್‌ಸಿಬಿ- ಕೆಎಸ್‌ಸಿಎ ಬುಧವಾರ ರಾತ್ರಿ ಪ್ರಕಟಿಸಿದೆ.