ಕರಾರುವಾಕ್ಕಾದ ಬೌಲಿಂಗ್ ಹಾಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಜಯಗಳಿಸಿದೆ.
ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 117 ರನ್ಗಳ ಸುಲಭದ ಸವಾಲನ್ನು ಬೆನ್ನಟ್ಟಿದ ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಕೇವಲ 16.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ಮೊದಲ ಪದಾರ್ಪಣೆಯ ಪಂದ್ಯವನ್ನಾಡಿದ ಸಾಯಿ ಸುದರ್ಶನ್ ಅಜೇಯ 55 ಮತ್ತು ಸ್ಫೋಟಕ ಆಟಗಾರ ಶ್ರೇಯಸ್ ಅಯ್ಯರ್ (52) ಬಾರಿಸಿದ ಅರ್ಧಶತಕಗಳ ನೆರವಿನಿಂದ ಗೆಲುವು ಸುಲಭವಾಯಿತು. ಇವರಿಬ್ಬರು ಎರಡನೇ ವಿಕೆಟ್ ಜೊತೆಯಾಟದಲ್ಲಿ 73 ಎಸೆತಗಳಲ್ಲಿ 88 ರನ್ ಪೇರಿಸಿದರು.
ಅರ್ಷದೀಪ್, ಆವೇಶ್ ದಾಳಿಗೆ 116ಕ್ಕೆ ದ. ಆಫ್ರಿಕಾ ಆಲ್ಔಟ್
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಅರ್ಷದೀಪ್ ಸಿಂಗ್ (37ಕ್ಕೆ 5) ಮತ್ತು ಅವೇಶ್ ಖಾನ್ (27ಕ್ಕೆ 4) ಅವರ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ನಲುಗಿ 116 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆಯಿತು.
ಈ ಸುದ್ದಿ ಓದಿದ್ದೀರಾ? ಸಂಸತ್ತಿನ ಭದ್ರತಾ ಮುಖ್ಯಸ್ಥರ ಹುದ್ದೆ 45 ದಿನಗಳಿಂದ ಖಾಲಿ; ಶೇ.40 ಸಿಬ್ಬಂದಿ ಕೊರತೆ
ಟೋನಿ ಡೆ ಝೋರ್ಝಿ (28) ಮತ್ತು ಆಂಡಿಲ್ ಫೆಹ್ಲುಕ್ವಾಯೊ (33) ಹೊರತಾಗಿ ಉಳಿದ ಯಾವ ಬ್ಯಾಟರ್ಗಳು ಕೂಡ ಭಾರತದ ಭರ್ಜರಿ ಬೌಲಿಂಗ್ ಎದುರು ನಿಲ್ಲಲಿಲ್ಲ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿ ಚೊಚ್ಚಲ 5 ವಿಕೆಟ್ ಪಡೆದ ಯುವ ವೇಗಿ ಅರ್ಷದೀಪ್ ಸಿಂಗ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸರಣಿಯ 2ನೇ ಪಂದ್ಯ ಡಿ.19ರಂದು ಮೆಬೆಕಾದ ಸೇಂಟ್ ಜಾರ್ಜ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.