ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಪ್ಯಾರಾ ಆರ್ಚರಿ (ಬಿಲ್ಲುಗಾರ್ತಿ) ಕ್ರೀಡಾಪಟು ಶೀತಲ್ ದೇವಿ ಅದ್ಭುತ ಸಾಧನೆ ಮಾಡಿದ್ದಾರೆ. ಒಂದೇ ದಿನದಲ್ಲಿ ಎರಡು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ಅವರು ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಈ ಗೆಲುವಿನೊಂದಿಗೆ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವರ ಒಟ್ಟು ಪದಕಗಳ ಸಂಖ್ಯೆ ನಾಲ್ಕು ಚಿನ್ನ ಹಾಗೂ ಎರಡು ಬೆಳ್ಳಿಗೆ ಏರಿಕೆಯಾಗಿದೆ.
ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ನೂರ್ ಶಹಿದಾ ಅಲಿಮ್ ಅವರನ್ನು 142-138 ಅಂತರದಿಂದ ಮಣಿಸಿದ ಶೀತಲ್, ದಿನದ ಎರಡನೇ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಆರಂಭಿಕ ಹಿನ್ನಡೆಯ ನಡುವೆಯೂ ಛಲ ಬಿಡದೆ ಹೋರಾಡಿದ ಅವರು, ಅತ್ಯದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಈ ಗೆಲುವು ಒಲಿಸಿಕೊಂಡರು.
ವೈಯಕ್ತಿಕ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ಇಬ್ಬರೂ ಕ್ರೀಡಾಪಟುಗಳು 29-29 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ಎದುರಾಳಿ ಅಲಿಮ್ 30 ಅಂಕ ಕಲೆಹಾಕಿದರೆ, ಶೀತಲ್ ಕೇವಲ 26 ಅಂಕ ಗಳಿಸುವ ಮೂಲಕ 55-59 ಅಂತರದ ಹಿನ್ನಡೆ ಅನುಭವಿಸಿ ಒತ್ತಡಕ್ಕೆ ಸಿಲುಕಿದ್ದರು.
ಆದರೆ, ಮೂರನೇ ಸುತ್ತಿನಲ್ಲಿ ಫೀನಿಕ್ಸ್‌ನಂತೆ ಪುಟಿದೆದ್ದ ಶೀತಲ್, ಸತತ ಮೂರು ಬಾಣಗಳನ್ನು 10ರ ನಿಖರ ಗುರಿಗೆ ನಾಟಿ ಅಂತರವನ್ನು 85-86ಕ್ಕೆ ಇಳಿಸಿದರು. ನಾಲ್ಕನೇ ಸುತ್ತಿನಲ್ಲೂ ಇದೇ ಅಮೋಘ ಲಯ ಕಾಯ್ದುಕೊಂಡು 115-113ರ ಮುನ್ನಡೆ ಸಾಧಿಸಿದರು. ಕೊನೆಯ ಸುತ್ತಿನಲ್ಲೂ ಎದುರಾಳಿಗೆ ಅವಕಾಶ ನೀಡದೆ ಅಂತಿಮವಾಗಿ 142-138 ಅಂಕಗಳ ಜಯ ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ ನಡೆದ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಶೀತಲ್ ದೇವಿ ಅವರು ಟೋಮನ್ ಕುಮಾರ್ ಅವರೊಂದಿಗೆ ಕಣಕ್ಕಿಳಿದಿದ್ದರು. ಚಿನ್ನದ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಈ ಭಾರತೀಯ ಜೋಡಿಯು ಇಂಡೋನೇಷ್ಯಾದ ಟಿಯೋಡೋರಾ ಆಡಿ ಆಯುಡಿಯಾ ಫೆರೆಲ್ಲಿ ಮತ್ತು ಕೆನ್ ಸ್ವಾಗುಮಿಲಾಂಗ್ ಜೋಡಿಯ ಸವಾಲನ್ನು ಎದುರಿಸಿತು.
ಈ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಆರಂಭ ಪಡೆದ ಭಾರತದ ಜೋಡಿ, ಮೂರನೇ ಸುತ್ತಿನಲ್ಲಿ ತುಸು ಹಿನ್ನಡೆ ಅನುಭವಿಸಿದರೂ, ಅಂತಿಮ ಸುತ್ತಿನಲ್ಲಿ 38 ಅಂಕ ಕಲೆಹಾಕುವ ಮೂಲಕ ತಿರುಗೇಟು ನೀಡಿತು. ಅಂತಿಮವಾಗಿ 151-148 ಅಂತರದಲ್ಲಿ ಇಂಡೋನೇಷ್ಯಾ ಜೋಡಿಯನ್ನು ಸೋಲಿಸಿ ದಿನದ ಮೊದಲ ಚಿನ್ನದ ಪದಕವನ್ನು ಕೊರಳೊಡ್ಡಿತ್ತು.





