ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200 ಮೀಟರ್ಸ್ ‘ಟಿ12’ ವಿಭಾಗದ ಓಟದ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟುಗಳು ಪಾರುಪತ್ಯ ಮೆರೆದಿದ್ದಾರೆ. ಅನುಭವಿ ಓಟಗಾರ್ತಿ ಸಿಮ್ರಾನ್ ನೂತನ ಗೇಮ್ಸ್ ದಾಖಲೆಯೊಂದಿಗೆ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ತಮ್ಮ ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಸಹ ಕ್ರೀಡಾಪಟು ತೇಜಲ್‌ಬೆನ್ ಡಾಮೋರ್ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಿಮ್ರಾನ್ 24.80 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರೆ, ಇರಾನ್‌ನ ಹಜಾರ್ ಸಫರ್‌ಜಾದೆ (25.02 ಸೆಕೆಂಡು) ಬೆಳ್ಳಿ ಪದಕ ಪಡೆದರು. 25.23 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ತೇಜಲ್‌ಬೆನ್ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು. ‘ಟಿ12’ ವಿಭಾಗವು ಸಾಧಾರಣ ದೃಷ್ಟಿದೋಷ ಹೊಂದಿರುವ ಕ್ರೀಡಾಪಟುಗಳ ಸ್ಪರ್ಧೆಯಾಗಿದೆ.
2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ 26 ವರ್ಷದ ಸಿಮ್ರಾನ್, ಡೋಪಿಂಗ್ ಉಲ್ಲಂಘನೆಗಾಗಿ ತಮ್ಮ ಹಿಂದಿನ ಮಾರ್ಗದರ್ಶಕ (ಗೈಡ್) ಉಮರ್ ಸೈಫಿ ಅಮಾನತುಗೊಂಡ ನಂತರ, ನೂತನ ಗೈಡ್ ಶಿವಂ ಅವರೊಂದಿಗೆ ಈ ಕೂಟದಲ್ಲಿ ಕಣಕ್ಕಿಳಿದು ಯಶಸ್ಸು ಸಾಧಿಸಿದ್ದಾರೆ. 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನ ಇದೇ ವಿಭಾಗದಲ್ಲಿ ಸಿಮ್ರಾನ್ ಬೆಳ್ಳಿ ಗೆದ್ದಿದ್ದರು. ಅವರ ಮುಂದಿನ ಸ್ಪರ್ಧೆ 100 ಮೀಟರ್ಸ್ ಓಟವಾಗಿದ್ದು, ಕಳೆದ ಬಾರಿ ಆ ಸ್ಪರ್ಧೆಯಲ್ಲೂ ಅವರು ಬೆಳ್ಳಿ ಗೆದ್ದಿದ್ದರು.
ಗೆಲುವಿನ ನಂತರ ಮಾತನಾಡಿದ ಸಿಮ್ರಾನ್, “ಏಷ್ಯನ್ ದಾಖಲೆ (24.46 ಸೆಕೆಂಡು) ಕೂಡ ನನ್ನ ಹೆಸರಿನಲ್ಲೇ ಇದೆ. ಅದನ್ನು ಮುರಿಯುವುದು ನನ್ನ ಗುರಿಯಾಗಿತ್ತು. ಆದರೆ, ಸ್ಪರ್ಧೆಯ ಬಳಿಕ ಚೇತರಿಕೆ (ರಿಕವರಿ) ಉತ್ತಮವಾಗಿರಲಿಲ್ಲವಾದ್ದರಿಂದ ದೇಹ ಬಿಗಿಯಾಗಿತ್ತು ಹಾಗೂ ಹೀಟ್ ರೇಸ್ ನಂತರ ನಾನು ತುಂಬಾ ಸುಸ್ತಾಗಿದ್ದೆ” ಎಂದರು.
ಜೊತೆಗೆ ಊಟದ ಸಮಸ್ಯೆಯ ಬಗ್ಗೆ ಹೇಳಿಕೊಂಡ ಅವರು, “ನಾನೊಬ್ಬಳು ಸಸ್ಯಾಹಾರಿ, ಆದರೆ ಇಲ್ಲಿ ಹೆಚ್ಚಾಗಿ ಸಮುದ್ರ ಆಹಾರಗಳೇ (ಸೀಫುಡ್) ಸಿಗುತ್ತಿವೆ. ನಮಗೆ ಸಿಗುತ್ತಿರುವ ಸಸ್ಯಾಹಾರಿ ಆಹಾರವೆಂದರೆ ಕೇವಲ ದಾಲ್ ಮತ್ತು ಅನ್ನ. ಇದು ಕಷ್ಟವಾದರೂ ಹೇಗಾದರೂ ನಿಭಾಯಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಭಾರತೀಯರಾದ ನಾವು ಕೇವಲ ನಮ್ಮ ಇಚ್ಛಾಶಕ್ತಿಯಿಂದಲೂ ಓಡಬಲ್ಲೆವು” ಎಂದು ನುಡಿದರು.
24 ವರ್ಷದ ತೇಜಲ್‌ಬೆನ್ ಡಾಮೋರ್ ಅವರ ಮುಂದಿನ ಗುರಿ 400 ಮೀಟರ್ಸ್ ಓಟದ ಸ್ಪರ್ಧೆಯಾಗಿದೆ. “ನನ್ನ ಜೀವನದ ಪರಿಸ್ಥಿತಿಗಳು ಅಷ್ಟು ಸುಲಭವಾಗಿರಲಿಲ್ಲ. ನಾನು ಬಹಳಷ್ಟು ಭರವಸೆ ಮತ್ತು ದೃಢಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇನೆ” ಎಂದು ಅವರು ತಿಳಿಸಿದರು.
”ನನ್ನ ಪೋಷಕರು ತಮ್ಮ ಜೀವನದ ಬಹುಪಾಲು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದಾರೆ. ಅವರಿಗಾಗಿ ಒಂದು ಪದಕ ತರಲು ನಾನು ಪ್ರಾಣ ಪಣಕ್ಕಿಡಲೂ ಸಿದ್ಧಳಿದ್ದೆ. ನನ್ನ ಮುಂದಿನ 400 ಮೀಟರ್ಸ್ ರೇಸ್ ನನ್ನ ನೆಚ್ಚಿನ ಸ್ಪರ್ಧೆಯಾಗಿದ್ದು, ಈ ಕಂಚಿನ ಪದಕ ಆ ಸ್ಪರ್ಧೆಗೆ ನನಗೆ ಅಪಾರ ಆತ್ಮವಿಶ್ವಾಸ ನೀಡಿದೆ” ಎಂದು ತೇಜಲ್‌ಬೆನ್ ಭಾವುಕರಾಗಿ ಹೇಳಿದರು.





