ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ ರಿಪಬ್ಲಿಕನ್ ಪಕ್ಷದ ವಿರುದ್ಧ ಸಾರ್ವಜನಿಕ ಅಸಮಾಧಾನ ಹೆಚ್ಚುತ್ತಿರುವುದನ್ನು ಇತ್ತೀಚಿನ ಸಮೀಕ್ಷೆಗಳು ಸೂಚಿಸುತ್ತಿವೆ. ಹೌಸ್ ಆಫ್ ರೆಪ್ರೆಸೆಂಟೇವಿವ್ಸ್ (ಅಮೆರಿಕ ಸಂಸತ್ನ ಕೆಳಮನೆ) ಮತ್ತು ಸೆನೆಟ್ನಲ್ಲಿ ಅಧಿಕಾರದ ಸಮತೋಲನ ಬದಲಾದರೆ ಟ್ರಂಪ್ ಆಡಳಿತದ ಉಳಿದ ಎರಡು ವರ್ಷಗಳ ಕಾರ್ಯವೈಖರಿಯೇ ಬದಲಾಗಲಿದೆ.
ಅಂದಹಾಗೆ, ಅಮೆರಿಕದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಅಧ್ಯಕ್ಷರ ನಾಲ್ಕು ವರ್ಷಗಳ ಅಧಿಕಾರಾವಧಿಯ ಮಧ್ಯದಲ್ಲಿ ಅಂದರೆ, ಪ್ರತಿ ಎರಡು ವರ್ಷಕ್ಕೊಮ್ಮೆ ಕಾಂಗ್ರೆಸ್ನ (ಅಮೆರಿಕ ಸಂಸತ್ತು) ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (HoR) ಮತ್ತು ಸೆನೆಟ್ಗೆ ಸದಸ್ಯರನ್ನು ಆಯ್ಕೆ ಮಾಡಲು ಮಧ್ಯಂತರ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ HoRನ ಎಲ್ಲ 435 ಮತ್ತು ಸೆನೆಟ್ನ ಒಟ್ಟು 100 ಸ್ಥಾನಗಳಲ್ಲಿ ಸುಮಾರು ಮೂರನೇ ಒಂದರಷ್ಟು ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ, 2026ರ ನವೆಂಬರ್ 3ರಂದು ಮಧ್ಯಂತರ ಚುನಾವಣೆ ನಡೆಯಲಿದೆ.
ಈ ಚುನಾವಣೆಯಲ್ಲಿ ಟ್ರಂಪ್ ಸ್ವತಃ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ. ಹೀಗಾಗಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾದರೂ ಟ್ರಂಪ್ ತಕ್ಷಣ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವುದಿಲ್ಲ. ಅವರ ಪ್ರಸ್ತುತ ಅಧ್ಯಕ್ಷೀಯ ಅವಧಿ 2029ರ ಜನವರಿವರೆಗೆ ಮುಂದುವರಿಯುತ್ತದೆ.
ಆದರೆ ಕಾಂಗ್ರೆಸ್ನ ಒಂದು ಅಥವಾ ಎರಡೂ ಸದನಗಳ ನಿಯಂತ್ರಣ ಬದಲಾದರೆ ಟ್ರಂಪ್ ಆಡಳಿತದ ಕಾನೂನು ರಚನೆ, ಬಜೆಟ್, ತೆರಿಗೆ, ಸರ್ಕಾರಿ ವೆಚ್ಚ ಹಾಗೂ ಪ್ರಮುಖ ನೇಮಕಾತಿಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಈ ಚುನಾವಣೆ ಕೇವಲ ಕಾಂಗ್ರೆಸ್ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿ ಉಳಿದಿಲ್ಲ. ಟ್ರಂಪ್ ಅವರ ಎರಡನೇ ಅವಧಿಯ ಮೊದಲ ಎರಡು ವರ್ಷಗಳ ಆಡಳಿತದ ಬಗ್ಗೆ ಮತದಾರರು ನೀಡುವ ರಾಜಕೀಯ ಪ್ರತಿಕ್ರಿಯೆಯೂ ಆಗಿರುತ್ತದೆ.
‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಜೊತೆಗೆ ಸೆನೆಟ್ ಚುನಾವಣೆಯೂ ಟ್ರಂಪ್ಗೆ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ಸೆನೆಟ್ನಲ್ಲಿ ರಿಪಬ್ಲಿಕನ್ ಪಕ್ಷ 53 ಸ್ಥಾನಗಳನ್ನು ಹೊಂದಿದೆ. ಡೆಮಾಕ್ರಟಿಕ್ ಪಕ್ಷವು ಸ್ವತಂತ್ರ ಸದಸ್ಯರನ್ನು ಒಳಗೊಂಡು 47 ಸ್ಥಾನಗಳನ್ನು ಹೊಂದಿದೆ.
ಹೀಗಾಗಿ ಡೆಮಾಕ್ರಟಿಕ್ ಪಕ್ಷವು ಈ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಹೆಚ್ಚಿಸಿಕೊಂಡು 51 ಸ್ಥಾನಗಳನ್ನು ತಲುಪಿದರೆ ಸೆನೆಟ್ ನಿಯಂತ್ರಣ, ಡೆಮಾಕ್ರಟಿಕ್ ಪಕ್ಷದ್ದಾಗುತ್ತದೆ. 50–50ರ ಸಮಬಲ ಉಂಟಾದರೆ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರ ನಿರ್ಣಾಯಕ ಮತದಿಂದ ರಿಪಬ್ಲಿಕನ್ ಪಕ್ಷಕ್ಕೆ ಕಾರ್ಯನಿರ್ವಹಣೆಯ ಬಹುಮತ ದೊರೆಯುತ್ತದೆ.
ಚುನಾವಣೆಗೆ ಮುನ್ನ ಟ್ರಂಪ್ ಜನಪ್ರಿಯತೆ ಕುಸಿತ: ಏನು ಹೇಳುತ್ತಿವೆ ಸಮೀಕ್ಷೆಗಳು?
ಅಕ್ಟೋಬರ್ 19ರಂದು ಬಿಡುಗಡೆಯಾದ ರಾಯಿಟರ್ಸ್ ಸಮೀಕ್ಷೆ ಹೇಳುವಂತೆ ಟ್ರಂಪ್ ಅವರನ್ನು 31% ವಯಸ್ಕರು (ಮತದಾರರು) ಇಂದಿಗೂ ಬೆಂಬಲಿಸಿದ್ದಾರೆ. ಆದರೆ, ಬರೋಬ್ಬರಿ 68% ವಯಸ್ಕರು ಟ್ರಂಪ್ ಅವರ ಆರ್ಥಿಕ ನಿರ್ವಹಣೆಯನ್ನು ವಿರೋಧಿಸಿದ್ದಾರೆ.
ಅಂತೆಯೇ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವನ್ನು 35% ವಯಸ್ಕರು ಬೆಂಬಲಿಸಿದರೆ, ಡೆಮಾಕ್ರಟಿಕ್ ಪಕ್ಷದ ಪರವಾಗಿ 47% ಜನರು ಒಲವು ಹೊಂದಿದ್ದಾರೆ. ಅಂದರೆ, ರಾಷ್ಟ್ರೀಯ ಮಟ್ಟದಲ್ಲಿ ಡೆಮಾಕ್ರಟಿಕ್ ಪಕ್ಷವು 12% ಅಂಕಗಳ ಮುನ್ನಡೆ ದಾಖಲಾಗಿದೆ.
ಇದೇ ವೇಳೆ, ‘ರಿಯಲ್ ಕ್ಲಿಯರ್ ಪೋಲಿಂಗ್’ ಸಂಗ್ರಹಿಸಿದ ವಿವಿಧ ಸಮೀಕ್ಷೆಗಳ ಅಕ್ಟೋಬರ್ 19ರವರೆಗಿನ ಸರಾಸರಿಯಲ್ಲಿ ಡೆಮಾಕ್ರಟಿಕ್ ಪಕ್ಷ 50.9% ಮತ್ತು ರಿಪಬ್ಲಿಕನ್ ಪಕ್ಷ 42.3% ಬೆಂಬಲ ಪಡೆದಿವೆ. ಅಂದರೆ 8.6 ಅಂಕಗಳೊಂದಿಗೆ ಡೆಮಾಕ್ರಟಿಕ್ ಪಕ್ಷ ಮುಂದಿದೆ.
ಇರಾನ್ ಯುದ್ಧ ಮತ್ತು ಅಮೆರಿಕನ್ನರಿಗೆ ತಟ್ಟುತ್ತಿರುವ ಬೆಲೆ ಏರಿಕೆಯ ಬಿಸಿ
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪ್ರಮುಖವಾಗಿ ಚರ್ಚಿಸಿದ ವಿಷಯಗಳಲ್ಲಿ ಹಣದುಬ್ಬರ, ಇಂಧನ ಬೆಲೆ ಹಾಗೂ ಸಾಮಾನ್ಯ ಕುಟುಂಬಗಳ ಜೀವನ ವೆಚ್ಚ ಸೇರಿದ್ದವು. ಅಧಿಕಾರಕ್ಕೆ ಬಂದ ನಂತರ ಬೆಲೆಗಳನ್ನು ನಿಯಂತ್ರಿಸುವುದು, ಅಮೆರಿಕದ ಇಂಧನ ಉತ್ಪಾದನೆ ಹೆಚ್ಚಿಸುವುದು ಹಾಗೂ ಆರ್ಥಿಕತೆಯನ್ನು ಬಲಪಡಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು.
ಆದರೆ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ಆರಂಭಿಸಿದ ಯುದ್ಧವು ಅಮೆರಿಕರನ್ನೇ ಹೆಚ್ಚಾಗಿ ಕಾಡುತ್ತಿದೆ. 2026ರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಆರಂಭಿಸಿದ ಮಿಲಿಟರಿ ದಾಳಿಗಳು ಮಧ್ಯಪ್ರಾಚ್ಯದ ರಾಜಕೀಯ ಮತ್ತು ಆರ್ಥಿಕ ಸ್ಥಿತಿಯನ್ನು ಬದಲಾಯಿಸಿವೆ. ಇರಾನ್ ಜೊತೆಗಿನ ಅಮೆರಿಕ ಸಂಘರ್ಷವು ಟ್ರಂಪ್ ನಿರೀಕ್ಷೆಗಿಂತ ದೀರ್ಘಕಾಲ ಮುಂದುವರಿದಿದೆ. ಇರಾನ್ನ ಪ್ರತಿದಾಳಿ, ತೈಲ ಸಾಗಣೆಗೆ ಅಡ್ಡಿ, ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ ಹಾಗೂ ಜಾಗತಿಕ ಇಂಧನ ಬೆಲೆ ಏರಿಕೆ ಅಮೆರಿಕದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿವೆ.
ಯುದ್ಧ ಆರಂಭವಾಗಿ ಆರು ತಿಂಗಳುಗಳು ಕಳೆಯುವುದರಲ್ಲಿ ಇರಾನ್ ಶರಣಾಗುತ್ತದೆ ಎಂದು ಟ್ರಂಪ್ ಅಂದಾಜಿಸಿದ್ದರು. ಆದರೆ, ಇರಾನ್ ಬಗ್ಗಲಿಲ್ಲ. ಬದಲಾಗಿ, ಜಾಗತಿಕ ತೈಲ ವ್ಯಾಪಾರಕ್ಕೆ ಪ್ರಮುಖವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತು. ಹಡಗು ಸಂಚಾರವನ್ನು ನಿರ್ಬಂಧಿಸಿತು. ಇದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಲು ಕಾರಣವಾಯಿತು. ಅಮೆರಿಕ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದ್ದರೂ ಜಾಗತಿಕ ಇಂಧನ ಮಾರುಕಟ್ಟೆಯ ಪರಿಣಾಮಗಳು ಅಮೆರಿಕವನ್ನೂ ಕಾಡುತ್ತಿವೆ. ಜಾಗತಿಕ ತೈಲ ಬೆಲೆ ಏರಿದಾಗ ಅಮೆರಿಕದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ ಹೆಚ್ಚಾಗಿವೆ.
ಅಮೆರಿಕದ ಕಾರ್ಮಿಕ ಅಂಕಿಅಂಶಗಳ ಬ್ಯೂರೊ (BLS) ಅಕ್ಟೋಬರ್ 14ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ, 2026ರ ಸೆಪ್ಟೆಂಬರ್ನಲ್ಲಿ ವಾರ್ಷಿಕ ಗ್ರಾಹಕ ಬೆಲೆ ಹಣದುಬ್ಬರ 3.7%ಗೆ ಏರಿದೆ. ಆಗಸ್ಟ್ನಲ್ಲಿ ಇದು 3.4%ರಷ್ಟಿತ್ತು. ಹಣದುಬ್ಬರದ ಪ್ರಮಾಣ 3.7%ಗೆ ಏರಿದೆ ಎಂದರೆ ಎಲ್ಲ ವಸ್ತುಗಳ ಬೆಲೆ ಒಂದೇ ಪ್ರಮಾಣದಲ್ಲಿ ಏರಿದೆ ಎಂದಲ್ಲ. ಆಹಾರ, ವಸತಿ, ಇಂಧನ ಮತ್ತು ಸೇವಾ ವಲಯಗಳಲ್ಲಿ ಬೆಲೆ ಏರಿಕೆಯ ಪ್ರಮಾಣ ಬೇರೆಬೇರೆಯಾಗಿದೆ.

ಅಂತೆಯೇ, ಇಂಧನ ಬೆಲೆಯೂ ಸರಾಸರಿ 74.2%ರಷ್ಟು ಹೆಚ್ಚಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ ಅದರ ಪರಿಣಾಮ ಕೇವಲ ವಾಹನ ಬಳಸುವ ಕುಟುಂಬಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಸರಕು ಸಾಗಣೆ, ಕೃಷಿ, ಆಹಾರ ವಿತರಣೆ, ವಿಮಾನ ಪ್ರಯಾಣ ಹಾಗೂ ದಿನಬಳಕೆಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.
ಅಕ್ಟೋಬರ್ 17ರಂದು ಪ್ರಕಟವಾದ ‘ಅಸೋಸಿಯೇಟೆಡ್ ಪ್ರೆಸ್’ ವರದಿಯ ಪ್ರಕಾರ, ಯುದ್ಧಕ್ಕೂ ಮುಂಚಿನ ಅವಧಿಗೆ ಹೋಲಿಸಿದರೆ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಸುಮಾರು 45%ರಷ್ಟು ಮತ್ತು ಡೀಸೆಲ್ ಬೆಲೆ 68%ರಷ್ಟು ಹೆಚ್ಚಾಗಿದೆ. ವಿಮಾನ ಪ್ರಯಾಣದ ದರಗಳೂ ಏರಿವೆ. ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗಿರುವುದರಿಂದ ಹಲವು ಉದ್ಯಮಗಳು ಒತ್ತಡ ಎದುರಿಸುತ್ತಿವೆ.
ಆರ್ಥಿಕ ತಜ್ಞರ ಅಂದಾಜಿನಂತೆ ಇರಾನ್ ಯುದ್ಧದ ಪರಿಣಾಮಗಳಿಂದ ಸರಾಸರಿ ಅಮೆರಿಕನ್ ಕುಟುಂಬವೊಂದಕ್ಕೆ ಸುಮಾರು 2,000 ಡಾಲರ್ ಹೆಚ್ಚುವರಿ ವೆಚ್ಚ ಉಂಟಾಗಿದೆ. ಅದರಲ್ಲಿ ಸುಮಾರು 1,100 ಡಾಲರ್ ಇಂಧನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದೆ.
ಯುದ್ಧಕ್ಕಾಗಿ ಖರ್ಚಾಗುತ್ತಿರುವ ಹಣವೂ ಚುನಾವಣಾ ವಿಷಯ
ಯುದ್ಧದ ಆರ್ಥಿಕ ಹೊರೆ ತೈಲ ಬೆಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಯಿಟರ್ಸ್ನ ಸೆಪ್ಟೆಂಬರ್ 15ರ ವರದಿ ಪ್ರಕಾರ, ಆಗಸ್ಟ್ 1ರವರೆಗೆ ಇರಾನ್ ವಿರುದ್ಧದ ಯುದ್ಧಕ್ಕೆ ಸುಮಾರು 38 ಶತಕೋಟಿ ಡಾಲರ್ ವೆಚ್ಚವಾಗಿದೆ ಎಂದು ಅಮೆರಿಕದ ಕಾಂಗ್ರೆಷನಲ್ ಬಜೆಟ್ ಆಫೀಸ್ ಅಂದಾಜಿಸಿದೆ. ಮುಂದುವರಿದ ಮಿಲಿಟರಿ ಕಾರ್ಯಾಚರಣೆಗಳಿಗೆ ತಿಂಗಳಿಗೆ ಸುಮಾರು 3 ಶತಕೋಟಿ ಡಾಲರ್ ಹೆಚ್ಚುವರಿ ವೆಚ್ಚವಾಗಬಹುದು ಎಂದೂ ಅಂದಾಜಿಸಲಾಗಿದೆ.
ಈ ಹಣದ ಜೊತೆಗೆ ಶಸ್ತ್ರಾಸ್ತ್ರಗಳ ಬಳಕೆ, ಸೇನಾ ಸಿದ್ಧತೆ, ಮಿಲಿಟರಿ ಸಿಬ್ಬಂದಿಯ ನಿಯೋಜನೆ ಹಾಗೂ ಭವಿಷ್ಯದ ರಕ್ಷಣಾ ಖರ್ಚುಗಳ ಪ್ರಶ್ನೆಗಳೂ ಉದ್ಭವಿಸಿವೆ.
ವಿದೇಶಿ ಯುದ್ಧಗಳಲ್ಲಿ ಅಮೆರಿಕದ ಭಾಗವಹಿಸುವಿಕೆಯನ್ನು ಕಡಿಮೆ ಮಾಡಲು ಬಯಸುವ ಮತದಾರರು ಈ ಯುದ್ಧ ವೆಚ್ಚದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಟ್ರಂಪ್ ನಡೆಯನ್ನು ಬೀದಿಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. ಆದ್ದರಿಂದ, ಇರಾನ್ ವಿರುದ್ಧದ ಯುದ್ಧವು ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವಿನ ಸಂಘರ್ಷಕ್ಕಷ್ಟೇ ಸೀಮಿತವಾಗಿಲ್ಲ. ಅದು ಜನರ ವಿಷಯವಾಗಿದೆ. ಚುನಾವಣೆಯ ವಿಷಯವೂ ಆಗಿ ಕಾಣಿಸಿಕೊಂಡಿದೆ.
ಈ ಲೇಖನ ಓದಿದ್ದೀರಾ?: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್ ಏನು ಹೇಳುತ್ತಾರೆ?
ಟ್ರಂಪ್ ಅಧಿಕಾರಕ್ಕೆ ಬರುವಾಗ ಬೆಲೆ ಇಳಿಸುವ ಭರವಸೆ ನೀಡಿದ್ದರು. ಆದರೆ, ಇರಾನ್ ಜೊತೆ ಯುದ್ಧಕ್ಕಳಿದು ಈಗ ಇಂಧನ ಬೆಲೆ ಮತ್ತು ಜೀವನ ವೆಚ್ಚ ಏರಿಕೆಯಾಗುವಂತೆ ಮಾಡಿದ್ದಾರೆ. ಜನರ ಜೀವನ ವೆಚ್ಚ ಕಡಿಮೆ ಮಾಡುವುದು ಆಡಳಿತದ ಪ್ರಮುಖ ಜವಾಬ್ದಾರಿ. ಮಾತ್ರವಲ್ಲದೆ, ಯುದ್ಧ ಮತ್ತು ವ್ಯಾಪಾರ ನೀತಿಗಳ ಆರ್ಥಿಕ ಪರಿಣಾಮಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಮೆರಿಕದ ವಿದೇಶಾಂಗ ನೀತಿಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮೇಲ್ವಿಚಾರಣೆ ಇರಬೇಕು. ದೊಡ್ಡ ಮಿಲಿಟರಿ ಕಾರ್ಯಾಚರಣೆಗಳ ಉದ್ದೇಶ, ಅವಧಿ ಹಾಗೂ ವೆಚ್ಚವನ್ನು ಜನಪ್ರತಿನಿಧಿಗಳ ಮುಂದೆ ವಿವರಿಸಬೇಕು ಎಂದು ಅಮೆರಿಕನ್ನರು ಒತ್ತಾಯಿಸಿದ್ದಾರೆ.
ಮತದಾರರ ಆಧ್ಯತೆ ಮತ್ತು ನಿರ್ಧಾರದ ಪ್ರಮುಖ ವಿಷಯಗಳು
ಚುನಾವಣೆಗೆ ಮುನ್ನ ಮತದಾರರ ಆಧ್ಯತೆಯ ಐದು ವಿಷಯಗಳನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
- ಜೀವನ ವೆಚ್ಚ; ಪೆಟ್ರೋಲ್, ಆಹಾರ, ವಸತಿ ಮತ್ತು ಆರೋಗ್ಯದ ವೆಚ್ಚಗಳು ಕುಟುಂಬಗಳ ಆದಾಯದ ಮೇಲೆ ಎಷ್ಟು ಒತ್ತಡ ಉಂಟುಮಾಡಿವೆ ಎಂಬುದು.
- ಇರಾನ್ ಯುದ್ಧ; ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಯುದ್ಧದ ಅಗತ್ಯ, ಅದರ ವೆಚ್ಚ ಮತ್ತು ಸಂಘರ್ಷ ಅಂತ್ಯಗೊಳಿಸುವ ಮಾರ್ಗಗಳೇನು ಎಂದು ಮತದಾರರು ಎದುರು ನೋಡುತ್ತಿದ್ದಾರೆ.
- ಆರ್ಥಿಕ ಭವಿಷ್ಯ; ಉದ್ಯೋಗ, ವೇತನ, ಬಡ್ಡಿದರ, ಸರ್ಕಾರಿ ಸಾಲ ಹಾಗೂ ಕೈಗಾರಿಕಾ ಹೂಡಿಕೆಗಳ ಕುರಿತು ಭವಿಷ್ಯದ ಭರವಸೆಗಳು.
- ವಲಸೆ ಮತ್ತು ಗಡಿ ಭದ್ರತೆ; ಅಕ್ರಮ ವಲಸೆ ನಿಯಂತ್ರಣ, ಗಡಿಭದ್ರತೆ ಮತ್ತು ವಲಸಿಗರ ಹಕ್ಕುಗಳ ಬಗ್ಗೆ ಪಕ್ಷಗಳ ನೀತಿ ವ್ಯತ್ಯಾಸಗಳು.
- ಕಾಂಗ್ರೆಸ್ನ ಪಾತ್ರ; ಅಧ್ಯಕ್ಷರ ನೀತಿಗಳನ್ನು ಕಾಂಗ್ರೆಸ್ ಬೆಂಬಲಿಸಬೇಕೇ ಅಥವಾ ಹೆಚ್ಚಿನ ಸ್ವತಂತ್ರ ಪರಿಶೀಲನೆ ನಡೆಸಬೇಕೇ ಎಂಬ ಸಾಂಸ್ಥಿಕ ಪ್ರಶ್ನೆ ಇದರಲ್ಲಿದೆ.
ಚುನಾವಣೆಯಲ್ಲಿ ಟ್ರಂಪ್ ಪಕ್ಷ ಹಿನ್ನಡೆ ಅನುಭವಿಸಿದರೆ ಏನಾಗುತ್ತದೆ?
ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾದರೆ ಅದು ಯಾವ ಸದನದಲ್ಲಿ ಸಂಭವಿಸುತ್ತದೆ ಎಂಬುದರ ಆಧಾರದಲ್ಲಿ ಪರಿಣಾಮಗಳು ಬದಲಾಗುತ್ತವೆ.
1. ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಡೆಮಾಕ್ರಟಿಕ್ ಪಕ್ಷದ ವಶವಾದರೆ: ಡೆಮಾಕ್ರಟಿಕ್ ಪಕ್ಷಕ್ಕೆ ಹೌಸ್ನಲ್ಲಿ ಬಹುಮತ ದೊರೆತರೆ ಟ್ರಂಪ್ ಆಡಳಿತದ ಮೇಲೆ ಕಾಂಗ್ರೆಸ್ನ ಪರಿಶೀಲನೆ ಹೆಚ್ಚಬಹುದು. ಹೊಸ ಬಹುಮತದ ಪಕ್ಷವು ಸಂಸದೀಯ ಸಮಿತಿಗಳ ಅಧ್ಯಕ್ಷತೆಗಳನ್ನು ಪಡೆದು, ಟ್ರಂಪ್ ಆಡಳಿತದ ನಿರ್ಧಾರಗಳ ಕುರಿತು ವಿಚಾರಣೆಗಳನ್ನು ನಡೆಸಬಹುದು. ಸರ್ಕಾರಿ ದಾಖಲೆಗಳನ್ನು ಕೋರುವ ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಅಧಿಕಾರಗಳನ್ನು ಬಳಸಬಹುದು.
ಇರಾನ್ ಯುದ್ಧದ ವೆಚ್ಚ, ಸೇನಾ ಕಾರ್ಯಾಚರಣೆಗಳ ನಿರ್ಧಾರಗಳು, ಸರ್ಕಾರಿ ಒಪ್ಪಂದಗಳು, ವಲಸೆ ನೀತಿ ಮತ್ತು ತೆರಿಗೆ ವಿಷಯಗಳು ಪರಿಶೀಲನೆಯ ವ್ಯಾಪ್ತಿಗೆ ಬರಬಹುದು.
ಜೊತೆಗೆ ಹೌಸ್ನಲ್ಲಿ ಬಹುಮತ ಕಳೆದುಕೊಂಡರೆ ರಿಪಬ್ಲಿಕನ್ ಪಕ್ಷಕ್ಕೆ ತನ್ನ ಶಾಸನಾತ್ಮಕ ಕಾರ್ಯಕ್ರಮವನ್ನು ಅಂಗೀಕರಿಸುವುದು ಕಷ್ಟವಾಗುತ್ತದೆ. ಆದಾಗ್ಯೂ, ಹೌಸ್ ನಿಯಂತ್ರಣ ಬದಲಾಗುವುದರಿಂದ ಟ್ರಂಪ್ ಅವರ ಅಧ್ಯಕ್ಷೀಯ ಕಾರ್ಯಾಂಗ ಅಧಿಕಾರಗಳು ಕೊನೆಗೊಳ್ಳುವುದಿಲ್ಲ.
2. ಸೆನೆಟ್ ಕೂಡ ಡೆಮಾಕ್ರಟಿಕ್ ಪಕ್ಷದ ವಶವಾದರೆ: ಇದು ಟ್ರಂಪ್ ಆಡಳಿತಕ್ಕೆ ಭಿನ್ನ ರೀತಿಯ ಸಾಂಸ್ಥಿಕ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ನ್ಯಾಯಾಧೀಶರು ಮತ್ತು ಹಿರಿಯ ಅಧಿಕಾರಿಗಳ ನೇಮಕಾತಿಗಳಿಗೆ ಸೆನೆಟ್ ಒಪ್ಪಿಗೆ ಪಡೆಯುವುದು ಹೆಚ್ಚು ಸಂಕೀರ್ಣವಾಗಬಹುದು. ಅಧ್ಯಕ್ಷರು ನಾಮನಿರ್ದೇಶನ ಮಾಡುವವರ ಬಗ್ಗೆ ವಿಚಾರಣೆಗಳು ಮತ್ತು ಮತದಾನಗಳು ಹೊಸ ಬಹುಮತದ ನಿಯಂತ್ರಣಕ್ಕೆ ಒಳಪಡುತ್ತವೆ.
ಅದೇ ರೀತಿ ಪ್ರಮುಖ ಶಾಸನಗಳು ಮತ್ತು ಬಜೆಟ್ ವಿಷಯಗಳಲ್ಲಿ ಅಧ್ಯಕ್ಷರು ಎರಡೂ ಸದನಗಳೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಒಂದು ವೇಳೆ, ಎರಡೂ ಸದನಗಳಲ್ಲಿ ಡೆಮಾಕ್ರಟಿಕ್ ಬಹುಮತ ಪಡೆದು, ಟ್ರಂಪ್ ಪ್ರಸ್ತಾಪಗಳಿಗೆ ಒಪ್ಪಿಗೆ ನೀಡದಿದ್ದರೆ, ಟ್ರಂಪ್ ಅವರು ವೀಟೊ ಅಧಿಕಾರ ಬಳಸಿಕೊಂಡು, ಆಡಳಿತ ನಡೆಸಬೇಕಾಗುತ್ತದೆ.
3. ಟ್ರಂಪ್ ವಿರುದ್ಧ ಮಹಾಭಿಯೋಗವನ್ನೂ ನಡೆಸಬಹುದು: ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನಲ್ಲಿ ಬಹುಮತ ಹೊಂದಿರುವ ಪಕ್ಷವು ಸೂಕ್ತ ಕಾರಣಗಳ ಆಧಾರದಲ್ಲಿ ಅಧ್ಯಕ್ಷರ ವಿರುದ್ಧ ಮಹಾಭಿಯೋಗ ಪ್ರಕ್ರಿಯೆಯನ್ನು ಆರಂಭಿಸಬಹುದು. ಆದರೆ, ಅಧ್ಯಕ್ಷರನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಪದಚ್ಯುತಗೊಳಿಸಲು ಸೆನೆಟ್ನಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬೆಂಬಲ ಅಗತ್ಯ.
ರಿಪಬ್ಲಿಕನ್ ಪಕ್ಷ ಬಹುಮತ ಉಳಿಸಿಕೊಂಡರೆ ಏನಾಗುತ್ತದೆ?
ರಿಪಬ್ಲಿಕನ್ ಪಕ್ಷವು ಹೌಸ್ ಮತ್ತು ಸೆನೆಟ್ ಎರಡರಲ್ಲಿಯೂ ಬಹುಮತ ಉಳಿಸಿಕೊಂಡರೆ ಟ್ರಂಪ್ ಆಡಳಿತಕ್ಕೆ ತನ್ನ ಶಾಸನಾತ್ಮಕ ಕಾರ್ಯಕ್ರಮಗಳನ್ನು ಮುಂದುವರಿಸಲು ಅನುಕೂಲಕರವಾದ ಸಾಂಸ್ಥಿಕ ಪರಿಸ್ಥಿತಿ ಇರುತ್ತದೆ. ತೆರಿಗೆ ನೀತಿ, ವಲಸೆ ನಿಯಂತ್ರಣ, ಇಂಧನ ಉತ್ಪಾದನೆ, ರಕ್ಷಣಾ ವೆಚ್ಚ ಹಾಗೂ ಇತರ ಆರ್ಥಿಕ ಯೋಜನೆಗಳನ್ನು ಕಾಂಗ್ರೆಸ್ ಮೂಲಕ ಮುಂದುವರಿಸುವ ಅವಕಾಶ ಉಳಿಯುತ್ತದೆ.
ಅಧ್ಯಕ್ಷರು ಸೂಚಿಸುವ ನ್ಯಾಯಾಂಗ ಮತ್ತು ಆಡಳಿತಾತ್ಮಕ ನೇಮಕಾತಿಗಳನ್ನು ಸೆನೆಟ್ ಪರಿಶೀಲಿಸಿ ಅಂಗೀಕರಿಸುವ ಪ್ರಕ್ರಿಯೆಯಲ್ಲಿಯೂ ರಿಪಬ್ಲಿಕನ್ ಪಕ್ಷದ ಪ್ರಭಾವ ಮುಂದುವರಿಯುತ್ತದೆ.






