ಕೇಂದ್ರ ಸರ್ಕಾರವು ಹಣ ಹೂಡಿಕೆ ಮಾಡಿ ಆಡುವ ಆನ್‌ಲೈನ್ ಗೇಮಿಂಗ್‌ಗಳನ್ನು ನಿಷೇಧಿಸಿರುವ 2025ರ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆಯನ್ನು ಎರಡೂ ಸದನಗಳಲ್ಲಿ ಅಂಗೀಕರಿಸಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಪ್ರಮುಖ ಪ್ರಾಯೋಜಕರಾದ ಡ್ರೀಮ್11ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದೆ.
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿದ್ದು, “ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತು ಕಾಯ್ದೆಯನ್ನು ಗಣನೆಗೆ ತೆಗೆದುಕೊಂಡರೆ, ಡ್ರೀಮ್11ನೊಂದಿಗಿನ ಸಂಬಂಧವನ್ನು ಮುಂದುವರಿಸುವುದು ಬಿಸಿಸಿಐಗೆ ಕಷ್ಟಕರವಾಗಿದೆ. ಆದ್ದರಿಂದ, ಡ್ರೀಮ್11ನೊಂದಿಗಿನ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದ್ದು, ಮುಂದಿನ ಕ್ರಮವಾಗಿ ಹೊಸ ಪ್ರಾಯೋಜಕರನ್ನು ಹುಡುಕಲಾಗುವುದು” ಎಂದು ತಿಳಿಸಿದ್ದಾರೆ.
ಡ್ರೀಮ್11 ತನ್ನ ಮಾಹಿತಿಯನ್ನು ಬಿಸಿಸಿಐಗೆ ನೀಡಿದ್ದು, ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ ಬಿಸಿಸಿಐಗೆ ಹೊಸ ಪ್ರಾಯೋಜಕರ ಅಗತ್ಯವಿದೆ. 2007ರಲ್ಲಿ ಸ್ಥಾಪನೆಯಾದ ಡ್ರೀಮ್11 ಸಂಸ್ಥೆಯು 2023ರ ಜುಲೈನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವವನ್ನು 2023-2026ರ ಅವಧಿಗೆ 358 ಕೋಟಿ ರೂಪಾಯಿಗಳಿಗೆ ಪಡೆದುಕೊಂಡಿತ್ತು. ಆದರೆ, ಒಪ್ಪಂದದ ಅವಧಿ 2026ರ ಜುಲೈವರೆಗೆ ಇದ್ದರೂ, ಕಾನೂನಿನ ನಿಷೇಧದಿಂದಾಗಿ ಸಂಸ್ಥೆಯು ಒಂದು ವರ್ಷಕ್ಕೂ ಮುನ್ನವೇ ಪ್ರಾಯೋಜಕತ್ವವನ್ನು ತೊರೆದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಕಾನೂನಿನ ನಿಯಮಗಳಿಗೆ ಒಳಪಟ್ಟಿರುವುದರಿಂದ, ಡ್ರೀಮ್11 ಸಂಸ್ಥೆಯು ಒಪ್ಪಂದದ ಅವಧಿಗೂ ಮುನ್ನ ಪ್ರಾಯೋಜಕತ್ವವನ್ನು ಕೈಬಿಟ್ಟರೂ ಬಿಸಿಸಿಐಗೆ ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ. ಒಪ್ಪಂದದಲ್ಲಿ ಸಂಸ್ಥೆಯ ಮುಖ್ಯ ವ್ಯವಹಾರವು ಸರ್ಕಾರಿ ನಿಷೇಧಕ್ಕೆ ಒಳಗಾದರೆ ದಂಡದಿಂದ ರಕ್ಷಣೆ ನೀಡುವ ಷರತ್ತು ಇದ್ದ ಕಾರಣ, ಡ್ರೀಮ್11ಗೆ ಯಾವುದೇ ಹೆಚ್ಚುವರಿ ಪಾವತಿಯ ಜವಾಬ್ದಾರಿಯಿಲ್ಲ. ಡ್ರೀಮ್11 ಮತ್ತು ಮೈ11ಸರ್ಕಲ್ ಸಂಸ್ಥೆಗಳು ಭಾರತೀಯ ಕ್ರಿಕೆಟ್ ತಂಡ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸುಮಾರು 1,000 ಕೋಟಿ ರೂಪಾಯಿಗಳ ಪ್ರಾಯೋಜಕತ್ವವನ್ನು ಒದಗಿಸುತ್ತಿದ್ದವು. ಇದರ ಜೊತೆಗೆ, ಡ್ರೀಮ್11 ಇಂಡಿಯನ್ ಸೂಪರ್ ಲೀಗ್‌ನ ಅಧಿಕೃತ ಫ್ಯಾಂಟಸಿ ಪಾಲುದಾರರಾಗಿಯೂ ಇತ್ತು.
ಕಾಯ್ದೆಯ ಅಂಗೀಕಾರದ ನಂತರ ಡ್ರೀಮ್11 ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ನಾವು ಯಾವಾಗಲೂ ಕಾನೂನನ್ನು ಪಾಲಿಸುವ ಸಂಸ್ಥೆಯಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ವ್ಯವಹಾರ ನಡೆಸಿದ್ದೇವೆ. ಪ್ರಗತಿಪರ ಕಾನೂನು ಸೂಕ್ತ ಮಾರ್ಗವಾಗಿರಬಹುದೆಂದು ನಾವು ಭಾವಿಸಿದ್ದರೂ, 2025ರ ಆನ್‌ಲೈನ್ ಗೇಮಿಂಗ್ ಕಾಯ್ದೆಯನ್ನು ಸಂಪೂರ್ಣವಾಗಿ ಗೌರವಿಸಿ ಪಾಲಿಸುತ್ತೇವೆ” ಎಂದು ತಿಳಿಸಿದೆ.
2008ರಲ್ಲಿ ಆರಂಭವಾದ ಡ್ರೀಮ್11, ಕೇವಲ ಭಾರತೀಯ ಕ್ರಿಕೆಟ್ ತಂಡವಷ್ಟೇ ಅಲ್ಲದೆ ಐಎಸ್ಎಲ್ (ಇಂಡಿಯನ್ ಸೂಪರ್ ಲೀಗ್)ಗೂ ಅಧಿಕೃತ ಫ್ಯಾಂಟಸಿ ಪಾಲುದಾರರಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಬಿಸಿಸಿಐ ಪ್ರಾಯೋಜಕತ್ವವನ್ನು ತೊರೆದ ಪರಿಣಾಮ ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೂ ಹೊಸ ಪ್ರಾಯೋಜಕರ ಅಗತ್ಯವಿದೆ.
