ಕಾಲ್ತುಳಿತಕ್ಕೆ ಸರ್ಕಾರ, ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳು 'ತಾನು ಹೊಣೆಯಲ್ಲ' ಎಂದು ಹೇಳುತ್ತಿವೆ. ಇವರೆಲ್ಲರ ಹೇಳಿಕೆಗಳನ್ನು ನೋಡಿದರೆ ದುರಂತಕ್ಕೆ ಜನರೇ ಕಾರಣ ಎನ್ನುವಂತಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತವು ಕರ್ನಾಟಕದ ರಾಜಕೀಯ, ಕ್ರೀಡಾ ಮತ್ತು ಸಾಮಾಜಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. ಈ ಘಟನೆಯಲ್ಲಿ 11 ಅಮಾಯಕ ಜನರು ಮೃತಪಟ್ಟಿದ್ದು, 33ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾಲ್ತುಳಿತ ಪ್ರಕರಣದಿಂದ ಸಾರ್ವಜನಿಕ ಸುರಕ್ಷತೆ, ಆಡಳಿತದ ಜವಾಬ್ದಾರಿ ಮತ್ತು ಕಾನೂನು ಚೌಕಟ್ಟಿನ ಕುರಿತಾದ ಗಂಭೀರ ಪ್ರಶ್ನೆಗಳು ಎದ್ದುನಿಂತಿವೆ. ಕರ್ನಾಟಕ ಸರ್ಕಾರ, ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳು ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕುತ್ತಿರುವುದರಿಂದ, ಈ ದುರಂತಕ್ಕೆ ಯಾರು ನಿಜವಾಗಿಯೂ ಜವಾಬ್ದಾರರೆಂಬುದು ಚರ್ಚೆಯ ಪ್ರಮುಖ ವಿಷಯವಾಗಿದೆ.
ಆರ್‌ಸಿಬಿಯ ಐಪಿಎಲ್ 2025ರ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕ್ರೀಡಾಂಗಣದ ಸುತ್ತಮುತ್ತ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಆರಾಧ್ಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರನ್ನು ಕಣ್ತುಂಬಿಕೊಳ್ಳಲು ಜಮಾಯಿಸಿದ್ದರು. ಆದರೆ, ಉಚಿತ ಪಾಸ್‌ಗಳನ್ನು ನೀಡಿ ಕ್ರೀಡಾಂಗಣದ ದ್ವಾರಗಳನ್ನು ಸೀಮಿತಗೊಳಿಸಲಾಗಿತ್ತು. ಸರ್ಕಾರವೇ ಕೋರ್ಟ್‌ಗೆ ಹೇಳಿದ ಹಾಗೆ ಸಾವಿರ ಚಿಲ್ಲರೆಯಷ್ಟು ಮಾತ್ರ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು. ಜನರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅನಾಹುತ ಸಂಭವಿಸಿಬಿಟ್ಟಿತು. ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿ 11 ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಈ ಘಟನೆ ನಂತರ ಕರ್ನಾಟಕ ಸರ್ಕಾರ, ಆರ್‌ಸಿಬಿ, ಕೆಎಸ್‌ಸಿಎ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ನಂತಹ ಸಂಸ್ಥೆಗಳು ಈ ದುರಂತಕ್ಕೆ ಜವಾಬ್ದಾರಿಯನ್ನು ಒಬ್ಬರ ಮೇಲೊಬ್ಬರು ದೂಷಣೆ ಮಾಡುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಎಲ್ಲರೂ ಮಾಡಬಾರದ ತಪ್ಪನ್ನು ಮಾಡಿ ಅಂತಿಮವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಪಾತ್ರವನ್ನು ಹೇಳಬೇಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ದುರಂತವನ್ನು “ದುರದೃಷ್ಟಕರ” ಎಂದು ಕರೆದು, ಇದಕ್ಕೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಸರ್ಕಾರದ ಹೊಣೆಯನ್ನು ಮುಚ್ಚಿಕೊಳ್ಳಲು ಬೆಂಗಳೂರು ನಗರ ಆಯುಕ್ತರು ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಘಟನೆಗೆ ಕಾರಣ ಎಂದು ರಾಜಕೀಯ ಕಾರ್ಯದರ್ಶಿಯನ್ನು ಹುದ್ದೆಯಿಂದ ಕೈಬಿಡಲಾಗಿದೆ. ಸಿದ್ದರಾಮಯ್ಯ ಅವರು ತಾವು ಕ್ರೀಡಾಂಗಣದೊಂದಿಗೆ ಯಾವುದೇ ನೇರ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅವರು ಕೆಎಸ್‌ಸಿಎಯ ಆಹ್ವಾನದ ಮೇರೆಗೆ ವಿಧಾನಸೌಧದಲ್ಲಿ ನಡೆದ ಆರ್‌ಸಿಬಿಯ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ‘ಐತಿಹಾಸಿಕ ವಿಜಯದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ’ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶ ನೀಡಿದ್ದರು!
ಸರ್ಕಾರದ ಇನ್ನೊಬ್ಬ ಪ್ರಮುಖರಾದ ಡಿಸಿಎಂ ಡಿ.ಕೆ ಶಿವಕುಮಾರ್ ಆಟಗಾರರನ್ನು ವಿಮಾನ ನಿಲ್ದಾಣದಿಂದ ಕರೆತರುವುದರ ಜೊತೆ ವಿಧಾನಸೌಧದ ಮುಂಭಾಗ ಹಾಗೂ ಮೈದಾನದಲ್ಲಿ ಆಟಗಾರರ ಸನ್ಮಾನ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಅದಲ್ಲದೆ ಇತ್ತ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸುತ್ತಿದ್ದರೆ ಮಂತ್ರಿ, ಶಾಸಕರ ಸಂಬಂಧಿಕರು ಆಟಗಾರರ ಜೊತೆ ಸೆಲ್ಫಿಗೆ ಮುಂದಾಗಿದ್ದರು!
ಹೈಕೋರ್ಟಿನಿಂದ ಮಧ್ಯಂತರ ರಕ್ಷಣೆ ಪಡೆದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಕಾಲ್ತುಳಿತದಲ್ಲಿ ತನ್ನದೇನು ತಪ್ಪಿಲ್ಲ, ದುರಂತಕ್ಕೆ ಆರ್‌ಸಿಬಿ, ಡಿಎನ್‌ಎ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಹೊಣೆ ಎಂದು ತನ್ನ ಮೇಲಿರುವ ಆಪಾದನೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕಾಟಾಚಾರಕ್ಕೆಂಬಂತೆ ಇಬ್ಬರು ಅಧಿಕಾರಿಗಳಿಂದ ರಾಜೀನಾಮೆ ಪಡೆದಿದೆ. ಜನರು ಕ್ರೀಡಾಂಗಣಕ್ಕೆ ಬರುವ ಕಾರಣದಿಂದಲೇ ಅನಾಹುತ ಸಂಭವಿಸಿರುವ ಕಾರಣದಿಂದ ಘಟನೆಗೆ ಹೊಣೆಯ ಪಾಲನ್ನು ಕೆಎಸ್‌ಸಿಎ ಕೂಡ ಹೊರಬೇಕಾಗಿದೆ. ಕೆಎಸ್‌ಸಿಎಗೆ ಸಂಬಂಧಿಸಿದಂತೆ, ಚಿನ್ನಸ್ವಾಮಿ ಕ್ರೀಡಾಂಗಣದ ಜಾಗವು ಕರ್ನಾಟಕ ರಾಜ್ಯ ಸರ್ಕಾರದ ಒಡೆತನದಲ್ಲಿದೆ.
ಕೆಎಸ್‌ಸಿಎಗೆ ಲೋಕೋಪಯೋಗಿ ಇಲಾಖೆ 1969ರಲ್ಲಿ 99 ವರ್ಷಗಳ ಕಾಲ ಗುತ್ತಿಗೆಗೆ ನೀಡಿದೆ. 17 ಎಕರೆಗೂ ಹೆಚ್ಚಿರುವ ಜಾಗದಲ್ಲಿ ಕೆಎಸ್‌ಸಿಎ ರಾಜ್ಯ ಸರ್ಕಾರಕ್ಕೆ ಪಾವತ್ತಿಸುತ್ತಿರುವುದು ವರ್ಷಕ್ಕೆ 19 ಸಾವಿರ ರೂಗಳು ಮಾತ್ರ. ಅಂದರೆ ತಿಂಗಳಿಗೆ 1600 ರೂ. ಮಾತ್ರ ನೀಡುತ್ತಿದೆ. ಕ್ರಿಕೆಟ್‌ನಿಂದ ನೂರಾರು ಕೋಟಿ ಆದಾಯ ಆದಾಯ ಮಾಡಿಕೊಳ್ಳುತ್ತಿದ್ದರೂ ಸರ್ಕಾರಕ್ಕೆ ಮಾತ್ರ ಇಂದಿನ ಮಾರುಕಟ್ಟೆ ದರಕ್ಕೆ ತಕ್ಕಂತೆ ಬಾಡಿಗೆ ಹಾಗೂ ಗುತ್ತಿಗೆಯನ್ನು ಕೆಎಸ್‌ಸಿಎ ನೀಡುತ್ತಿಲ್ಲ. ಈ ಕ್ರೀಡಾಂಗಣವು ಆರ್‌ಸಿಬಿ ಪಂದ್ಯ ನಡೆಯುವ ತವರು ಮೈದಾನವಾಗಿದ್ದು, ಇಲ್ಲಿ ನಡೆಯುವ ಎಲ್ಲ ಪಂದ್ಯಗಳು ಹಾಗೂ ಕಾರ್ಯಕ್ರಮಗಳಿಗೆ ಕೆಎಸ್‌ಸಿಎಯ ಒಪ್ಪಿಗೆ ಅಗತ್ಯವಾಗಿರುತ್ತದೆ. ಆದರೆ, ಈ ಘಟನೆಯ ಸಂದರ್ಭದಲ್ಲಿ ಕೆಎಸ್‌ಸಿಎಯಿಂದ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿರಲಿಲ್ಲ. ಕ್ರೀಡಾಂಗಣದ ಸುತ್ತಮುತ್ತ ಜನಸಂದಣಿಯನ್ನು ನಿಯಂತ್ರಿಸಲು ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸರ್ಕಾರಕ್ಕೆ ಮನವಿ ಮಾಡಿರಲಿಲ್ಲ. ಹಾಗೆಯೇ ಜನರಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸಲಾಗಿರಲಿಲ್ಲ.
ದುರಂತಕ್ಕೆ ಪ್ರಮುಖ ಕಾರಣಕರ್ತನಾಗಿರುವ ಆರ್‌ಸಿಬಿ ತಂಡ ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿಹಾಕಿದೆ. ಆರ್‌ಸಿಬಿಯ ಮಾಲೀಕರಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಲಿಮಿಟೆಡ್ (ಆರ್‌ಸಿಎಸ್‌ಎಲ್) ತಾವು ಈ ಘಟನೆಯಲ್ಲಿ ತಪ್ಪಿತಸ್ಥರಲ್ಲ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿದೆ. ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸೀಮಿತ ಪಾಸ್‌ಗಳು ಲಭ್ಯವಿವೆ ಮತ್ತು ಪ್ರವೇಶಕ್ಕೆ ಮುಂಚಿತವಾಗಿ ನೋಂದಣಿ ಕಡ್ಡಾಯ ಎಂದು ಸ್ಪಷ್ಟವಾಗಿ ತಿಳಿಸಿದ್ದಾಗಿ ಹೇಳಿಕೊಂಡಿದೆ. ಇದರ ಜೊತೆಗೆ, ಕ್ರೀಡಾಂಗಣದ ದ್ವಾರಗಳನ್ನು ಮಧ್ಯಾಹ್ನ 1.45ಕ್ಕೆ ತೆರೆಯಬೇಕಿತ್ತಾದರೂ, ಮಧ್ಯಾಹ್ನ 3 ಗಂಟೆಯವರೆಗೆ ತೆರೆಯಲಾಗಿಲ್ಲ. ಇದು ಜನದಟ್ಟಣೆಗೆ ಕಾರಣವಾಯಿತು ಎಂದು ಆರೋಪಿಸಿದೆ.
ಕ್ರೀಡಾಂಗಣಕ್ಕೆ ತೆರಳಲು ಉಚಿತ ಪಾಸ್‌ಗಳು ಲಭ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ರವಾನೆಯಾದ ನಂತರ ಸಾವಿರಾರು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣಕ್ಕೆ ಬರಲು ಶುರುವಾದರು. ಬಹಿರಂಗ ಮೆರವಣಿಗೆಗೂ ಆರ್‌ಸಿಬಿ ಅನುಮತಿ ಕೇಳಿತ್ತು. ಮತ್ತಷ್ಟು ಅನಾಹುತವಾಗುವ ಕಾರಣದಿಂದ ಸರ್ಕಾರ ಬಹಿರಂಗ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು. ಕ್ರೀಡಾಂಗಣಕ್ಕೆ ಹೆಚ್ಚು ಜನ ಸೇರುತ್ತಾರೆ ಎಂಬ ಮಾಹಿತಿಯಿದ್ದರೂ ಭದ್ರತಾ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಆರ್‌ಸಿಬಿ ಸಂಘಟಕರು ಕೈಗೊಳ್ಳಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಆರ್‌ಸಿಬಿಯಿಂದ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಉಚಿತ ಪಾಸ್ ಎಂದು ಹೇಳಿದರೆ ಏಕಕಾಲಕ್ಕೆ ಲಕ್ಷಾಂತರ ಜನ ಆಗಮಿಸಿದರೆ ಏನಾಗುತ್ತದೆ ಎಂಬ ಸಮಯ ಪ್ರಜ್ಞೆಯೂ ಆರ್‌ಸಿಬಿ ಸಂಘಟಕರಿಗೆ ಇರಲಿಲ್ಲ. ದುರಂತ ಸಂಭವಿಸುವ ಮುನ್ನೆಚ್ಚರಿಕೆಯನ್ನು ಆರ್‌ಸಿಬಿ ಆಡಳಿತ ಮಂಡಳಿ ತೆಗೆದುಕೊಳ್ಳಬಹುದಾಗಿತ್ತು. ಆದರೆ ಜನರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಪ್ಲಾಸ್ಟಿಕ್: ಮನ್ಸೂರ್ ಮಾತುಗಳನ್ನು ಸರ್ಕಾರ-ಜನ ಆಲಿಸುವರೇ?
ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ‘ಡಿಎನ್ಎ ಎಂಟರ್‌ಟೈನ್‌ಮೆಂಟ್ ಕಂಪನಿ’ ಕೂಡ ಕಾಲ್ತುಳಿತ ಪ್ರಕರಣದ ಆರೋಪಿಯಾಗಿದೆ. ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ಸಂಪೂರ್ಣ ಯೋಜನೆ, ವೇದಿಕೆ ವ್ಯವಸ್ಥೆ, ಭದ್ರತೆ ಮತ್ತು ಜನಸಂದಣಿ ನಿರ್ವಹಣೆಯ ಜವಾಬ್ದಾರಿಯನ್ನು ಡಿಎನ್ಎ ಕಂಪನಿ ವಹಿಸಿತ್ತು. ಆರ್‌ಸಿಬಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜೊತೆಗೆ ಸಹಯೋಗದೊಂದಿಗೆ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿತ್ತು. ಆದರೆ ಕಾರ್ಯಕ್ರಮವನ್ನು ಡಿಎನ್ಎ ಎಂಟರ್‌ಟೈನ್‌ಮೆಂಟ್ ಕಳೆಪೆಯಾಗಿ ನಿರ್ವಹಿಸಿತು. ಸೀಮಿತ ಪಾಸ್‌ಗಳ ಲಭ್ಯತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದರೂ, ಜನಸಂದಣಿಯನ್ನು ಸಮರ್ಥವಾಗಿ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಯಿತು. ವಿಧಾನಸೌಧದಲ್ಲಿ ಕಾರ್ಯಕ್ರಮ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿ ಎಂದು ಡಿಎನ್‌ಎ ಆಯೋಜಕರು ಧ್ವನಿವರ್ಧಕಗಳ ಮೂಲಕ ಘೋಷಿಸಿದ ನಂತರ ಜನರೆಲ್ಲ ಚಿನ್ನಸ್ವಾಮಿ ಕ್ರೀಡಾಂಗಣದತ್ತ ತೆರಳಿದರು. ಈಗಾಗಲೇ ಕ್ರೀಡಾಂಗಣದಲ್ಲಿ ಇದ್ದ ಸಾವಿರಾರು ಜನರ ಜೊತೆಗೆ ಮತ್ತಷ್ಟು ದೊಡ್ಡ ಸಂಖ್ಯೆಯ ಜನರು ಸೇರತೊಡಗಿದರು. ಅಗತ್ಯ ಭದ್ರತೆ ನೀಡುವಂತೆ ಪೊಲೀಸರಿಗೂ ಮೊದಲೇ ಮಾಹಿತಿ ನೀಡಿರಲಿಲ್ಲ. ಇದು ಕೂಡ ದುರಂತಕ್ಕೆ ಕಾರಣವಾಯಿತು.
ಆದರೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಕಂಪನಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. ಈ ಘಟನೆಗೆ ಪೊಲೀಸ್ ಇಲಾಖೆಯ ಜನಸಂದಣಿ ನಿರ್ವಹಣೆಯ ಕೊರತೆಯೇ ಕಾರಣ ಎಂದು ದೂಷಿಸಿದೆ. ಈವೆಂಟ್ ಆಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರೊಂದಿಗೆ ಮುಂಚಿತವಾಗಿ ಸಭೆ ನಡೆಸಿದ್ದಾಗಿ ತಿಳಿಸಿದೆ. ಐಸಿಸಿ, ಬಿಸಿಸಿಐ, ಐಪಿಎಲ್, ರಿಲಯನ್ಸ್‌ನಂಥ ಹಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳನ್ನು ಕ್ಲೈಂಟ್‌ಗಳನ್ನಾಗಿ ಹೊಂದಿರುವ ಡಿಎನ್‌ಎ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದೆ. ದುರಂತ ನಡೆದಾಗ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಈ ಸಂಸ್ಥೆ ಘಟನೆಗೆ ತಾನಲ್ಲ ಬೇರೆಯವರು ಕಾರಣ ಎನ್ನುತ್ತಿದೆ.
ಇವೆಲ್ಲವನ್ನು ಗಮನಿಸಿದರೆ ಕಾಲ್ತುಳಿತಕ್ಕೆ ಸರ್ಕಾರ, ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳು ತಾನು ಹೊಣೆಯಲ್ಲ ಎಂದು ಹೇಳುತ್ತಿವೆ. ಇವರೆಲ್ಲರ ಹೇಳಿಕೆಗಳನ್ನು ನೋಡಿದರೆ ಜನರೆ ದುರಂತಕ್ಕೆ ಕಾರಣ ಎನ್ನುವಂತಿದೆ. ಸರ್ಕಾರ ಹಾಗೂ ಶ್ರೀಮಂತ ಸಂಸ್ಥೆಗಳು ತಮ್ಮ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕಾನೂನು ಕ್ರಮಗಳಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿವೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಸಂಸ್ಥೆಗಳು ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಕೋರಿಕೆ ಸಲ್ಲಿಸಿವೆ. ಕೆಲವರು ತಾತ್ಕಾಲಿಕ ರಕ್ಷಣೆಯನ್ನೂ ಪಡೆದುಕೊಂಡಿದ್ದಾರೆ. ಅಧಿಕಾರ ಹಾಗೂ ಹಣವುಳ್ಳವರು ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ತಾವು ಮಾತ್ರ ಬಲಿಪಶುಗಳಾಗುತ್ತಿದ್ದೇವೆ ಎಂದು ಸಾಮಾನ್ಯ ಜನರಿಗೆ ಮತ್ತೆ ಮತ್ತೆ ಅನಿಸತೊಡಗಿದೆ.
ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಅಥವಾ ಕಾರ್ಪೊರೇಟ್ ಒತ್ತಡವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಯುವುದು ಅತ್ಯಗತ್ಯ. ಆದರೆ ಇದು ಸಾಧ್ಯವಾಗುವುದೇ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. ಕರ್ನಾಟಕ ಸರ್ಕಾರ, ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎಯಂಥ ಸಂಸ್ಥೆಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇದು ಕೇವಲ ಕಾನೂನಿನ ವಿಷಯವಲ್ಲ, ಜನರ ಜೀವ, ವ್ಯವಸ್ಥೆಗೆ ಹಾಗೂ ಭಾವನೆಗಳಿಗೆ ಗೌರವ ನೀಡುವ ವಿಷಯವಾಗಿದೆ. ಸತ್ತವರು ಕೆಟ್ಟವರು ಎನ್ನುವ ಗಾದೆ ಮಾತು ನಿಜವಾಗಬಾರದು…
