ವಿಧಾನಸೌಧದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವ್ಯವಸ್ಥೆ ಮತ್ತು ದುರಂತ ಏಕಕಾಲದಲ್ಲಿ ತಲೆದೋರಿತು. ಇದಕ್ಕೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಸಂವಹನದ ಕೊರತೆಯೇ ಮೂಲ ಕಾರಣ
ಬೆಂಗಳೂರಿನಲ್ಲಿ ಬುಧವಾರ ಭಯಾನಕ, ಭೀಕರ, ಹೃದಯವಿದ್ರಾವಕ ಘಟನೆಯೊಂದು ನಡೆದುಹೋಗಿದೆ. ಸಂಭ್ರಮಿಸುತ್ತಿದ್ದ 11 ಜೀವಗಳು ಶವವಾಗಿವೆ. ಸಂಭ್ರಮದಲ್ಲಿದ್ದ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿದೆ. ದುಃಖ, ಶೋಕ ಮಡುಗಟ್ಟಿದೆ. ರಾಜ್ಯವೇ ಕಣ್ಣೀರು ಸುರಿಸುತ್ತಿದೆ. ಆರ್‌ಸಿಬಿ ಗೆಲುವು ಭೀಕರ ಸೋಲಾಗಿ ಮಾರ್ಪಟ್ಟಿದೆ. ಈ ಭೀಕರ ದುರಂತಕ್ಕೆ ಹೊಣೆ ಯಾರು- ಆರ್‌ಸಿಬಿಯೇ? ಸರ್ಕಾರವೇ? ಫ್ರಾಂಚೈಸಿಯೇ? ಪೊಲೀಸ್ ಇಲಾಖೆಯೇ? ಅಭಿಮಾನಿಗಳೇ?
ಐಪಿಎಲ್ ಟೂರ್ನಿಯಲ್ಲಿ 18 ವರ್ಷಗಳ ಬಳಿಕ ಕಪ್ ಗೆದ್ದ ‘ಆರ್‌ಸಿಬಿ’ ಸಂಭ್ರಮವನ್ನು ಬೇರೆಲ್ಲ ಸಂಭ್ರಮಗಳನ್ನು ಮೀರಿಸುವ ಆಚರಣೆಯಾಗಿ ಮಾಡಲು ಉದ್ದೇಶಿಸಲಾಗಿತ್ತು. ಬುಧವಾರ ಬೃಹತ್ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಕಪ್ ಗೆದ್ದ ತಮ್ಮ ಪ್ರೀತಿಯ ತಂಡಕ್ಕೆ ಭವ್ಯ ಗೌರವ ಸಲ್ಲಿಸಲು ಅಭಿಮಾನಿಗಳು ಬೆಂಗಳೂರಿನ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೆರೆದಿದ್ದರು. ಆದರೆ, ಅಲ್ಲಿ ಕಾಲ್ತುಳಿತ ಸಂಭವಿಸಿತು. ಆರ್‌ಸಿಬಿಯ ಗೆಲುವಿನ ರ್‍ಯಾಲಿಯ ದಿನವು ಭಯಾನಕ ದಿನವಾಗಿ ಮಾರ್ಪಟ್ಟಿತು. ಆಚರಣೆಯು ದುರಂತಕ್ಕೆ ಎಡೆ ಮಾಡಿತು. ನಾಲ್ಕು ಹದಿಹರೆಯದವರು ಸೇರಿದಂತೆ ಹನ್ನೊಂದು ಜೀವಗಳು ಬಲಿಯಾದವು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಕಾರಣವಾದ ಘಟನೆಗಳನ್ನು ಅವಲೋಕಿಸಿದಾಗ ಕಂಡುಬಂದದ್ದು ಉತ್ತಮ ಯೋಜನೆ ಮತ್ತು ಸಮನ್ವಯತೆಯ ಕೊರತೆ, ವಿಜಯೋತ್ಸವ ಮೆರವಣಿಗೆಗೆ ಅವಕಾಶ ನೀಡುವ ಬಗ್ಗೆ ಧ್ವಂಧ್ವ ನಿಲುವು ಹಾಗೂ ಉಚಿತ ಪಾಸ್‌ಗಳ ವದಂತಿಗಳು ಸಾವಿನ ಸರಪಳಿಯಾಗಿ ಮಾರ್ಪಟ್ಟವು ಎಂಬುದು ಸ್ಪಷ್ಟವಾಗಿ ಗೋಚರಿಸಿದೆ..
ವಿಧಾನಸೌಧದಲ್ಲಿ ತಂಡವನ್ನು ಸನ್ಮಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದುರ್ಘಟನೆ ಬಳಿಕ ಸುದ್ದಿಗೋಷ್ಠಿ ನಡೆಸಿ, ‘ಕ್ರೀಡಾಂಗಣದ ಹೊರಗೆ ನೆರೆದಿದ್ದ ಜನಸಂದಣಿಯ ಗಾತ್ರವನ್ನು ಅಂದಾಜು ಮಾಡಲು ಪೊಲೀಸರು ವಿಫಲರಾಗಿದ್ದಾರೆ’ ಎಂದು ಹೇಳಿದರು. ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನಿಸಿದ ವರದಿಗಾರರ ಮೇಲೆ ಹೌಹಾರಿದರು. ದುರ್ಘಟನೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನೇ (ಕೆಎಸ್‌ಸಿಎ) ಹೊಣೆ ಎಂದರು.
“ಕಾರ್ಯಕ್ರಮವನ್ನು ಆಯೋಜಿಸಿದ್ದು ಕೆಎಸ್‌ಸಿಎ. ನಾವು ಭದ್ರತೆಯನ್ನು ಮಾತ್ರ ಒದಗಿಸಿದ್ದೇವೆ” ಎಂದು ಸಿದ್ದರಾಮಯ್ಯ ಹೇಳಿದರು. ”ಸ್ಥಳೀಯ ಆಡಳಿತದ ಸಲಹೆಯ ಮೇರೆಗೆ ಕಾರ್ಯಕ್ರಮದ ರೂಪುರೇಷೆಯನ್ನು ತಕ್ಷಣವೇ ತಿದ್ದುಪಡಿ ಮಾಡಿದ್ದೇವೆ” ಎಂದು ಆರ್‌ಸಿಬಿ ಆಡಳಿತ ಮಂಡಳಿ ಹೇಳಿಕೊಂಡಿದೆ.
ವಿಜಯೋತ್ಸವ ಮೆರವಣಿಗೆಗೆ ಕರೆ
ಜೂನ್ 3 ರಂದು ಅಹಮದಾಬಾದ್‌ನಲ್ಲಿ ಟ್ರೋಫಿ ಗೆದ್ದ ಆರ್‌ಸಿಬಿ ತಂಡವು ಬೆಂಗಳೂರಿನಲ್ಲಿ ತೆರೆದ ಬಸ್‌ನಲ್ಲಿ ವಿಜಯ ಮೆರವಣಿಗೆ ನಡೆಸಲು ಬಯಸಿತ್ತು. ಆರ್‌ಸಿಬಿ ಫ್ರಾಂಚೈಸಿ ಮತ್ತು ಕೆಎಸ್‌ಸಿಎ ಅಧಿಕಾರಿಗಳು ಸರ್ಕಾರದ ಭಾಗವಾಗಿರುವವರಿಗೆ ಕರೆ ಮಾಡಿದ್ದರು. ತೆರೆದ ಬಸ್ ರ್‍ಯಾಲಿಗೆ ಮೌಖಿಕ ಅನುಮತಿಯನ್ನೂ ನೀಡಲಾಗಿತ್ತು ಎಂದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ಟಿಎನ್‌ಎಂ ವರದಿ ಮಾಡಿದೆ.
ಕಪ್ ಗೆದ್ದ ರಾತ್ರಿಯೇ (ಜೂನ್ 3) ನಡೆದ ಸಂಭ್ರಮದಲ್ಲಿ, ಲಕ್ಷಾಂತರ ಜನರು ಭಾಗಿಯಾಗುತ್ತಾರೆ, ಜನಸಂದಣಿಯನ್ನು ನಿಯಂತ್ರಿಸಲು ಬೃಹತ್ ಯೋಜನೆ ಬೇಕಾಗುತ್ತದೆ, ಬೆಂಗಳೂರು ಪೊಲೀಸರು ನಿದ್ರೆಯಿಲ್ಲದ ರಾತ್ರಿ ಕಳೆಯುವಂತಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆ ಪ್ರಮಾಣದಲ್ಲಿ ಲಕ್ಷಾಂತರ ಅಭಿಮಾನಿಗಳು ರಸ್ತೆಗಳು, ಶಾಪಿಂಗ್ ಮಾಲ್‌ಗಳು, ಪಬ್‌ಗಳು ಇತ್ಯಾದಿಗಳಲ್ಲಿ ವಿಜಯೋತ್ಸವವನ್ನು ಆಚರಿಸಲು ಇಳಿದಿದ್ದರು.
ಈ ವರದಿ ಓದಿದ್ದೀರಾ?: ಸಮೂಹ ಸನ್ನಿಯ ಬಿತ್ತಿ ಹಣದ ಬೆಟ್ಟವನ್ನೇ ಬಾಚುತ್ತಿರುವ ಐಪಿಎಲ್; ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿದೆ!
ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಡೆದ ಸಂಭ್ರಮಗಳ ನಡುವೆ, ಜೂನ್ 4ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಆರ್‌ಸಿಬಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ವಿಧಾನಸೌಧದಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತೆರೆದ ಬಸ್‌ನಲ್ಲಿ ರ್‍ಯಾಲಿ ಸಾಗಲಿದೆ’ ಎಂದು ಪೋಸ್ಟ್ ಮಾಡಿತು. ಆ ಸಮಯದಲ್ಲಿ ಆಗಷ್ಟೇ ಅಭಿಮಾನಿಗಳ ಬೀದಿಗಳಲ್ಲಿನ ಸಂಭ್ರಮ ಮುಗಿದಿತ್ತು. ನಗರ ಪೊಲೀಸರು ಗದ್ದಲದಿಂದ ಬಳಲಿದ್ದರು.
ಆ ನಂತರ, ತಂಡದ ಅಧಿಕಾರಿಗಳು ಬೆಳಗ್ಗೆ 10.30ರ ವೇಳೆಗೆ ಮುಖ್ಯಮಂತ್ರಿ ಕಚೇರಿಯನ್ನು ಭೇಟಿಯಾಗಬೇಕಿತ್ತು. ಆದರೆ, ಆ ಹೊತ್ತಿಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ತೆರೆದ ಬಸ್ ವಿಜಯೋತ್ಸವ ಮೆರವಣಿಗೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವಿಧಾನಸೌಧದಲ್ಲಿ ಒಂದು ಸನ್ಮಾನ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೊಂದು ಸನ್ಮಾನ – ಕೇವಲ ಎರಡು ಆಚರಣೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಒತ್ತಿ ಹೇಳಿದರು.
ಆದಾಗ್ಯೂ, ವಿಜಯೋತ್ಸವ ಮೆರವಣಿಗೆ ನಡೆಸಲು ಅನುಮತಿ ಕೇಳಲು ಆರ್‌ಸಿಬಿ ಆಡಳಿತ ಮಂಡಳಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಗೆ ತೆರಳಿತ್ತು. ಆಗಲೂ ಪೊಲೀಸರು ನಿರಾಕರಿಸಿದರು. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ, ಬೆಂಗಳೂರು ಸಂಚಾರ ಪೊಲೀಸರು ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಣೆ ಮಾಡಿದರು. ಆದರೆ, ಆ ಹೊತ್ತಿಗಾಗಲೇ ತುಂಬಾ ತಡವಾಗಿತ್ತು. ಸಾಮಾಜಿಕ ಮಾಧ್ಯಮ ಪ್ರಕಟಣೆಗಳಿಂದ ಪ್ರೇರೇಪಿತರಾದ ಬೆಂಗಳೂರು ಮತ್ತು ಸುತ್ತಮುತ್ತಲಿನವರು ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಹೊರಟಿದ್ದರು.
ಮಧ್ಯಾಹ್ನ 3 ಗಂಟೆಗೆ, ಆರ್‌ಸಿಬಿ ಮತ್ತೆ ವಿಜಯೋತ್ಸವ ಮೆರವಣಿಗೆಯ ಬಗ್ಗೆ ಮತ್ತೊಂದು ಪೋಸ್ಟ್ ಹಂಚಿಕೊಂಡಿತು. ‘ವಿಜಯ ದಿನದಂದು ಉಚಿತ ಪಾಸ್ (ಪ್ರವೇಶ)’ ಎಂದು ದಪ್ಪ ಅಕ್ಷರಗಳಲ್ಲಿ ಪ್ರಕಟಿಸಿ, ‘ಸೀಮಿತ ಪ್ರವೇಶ’ ಎಂಬ ಪದವನ್ನು ಸಣ್ಣದಾಗಿ ಮುದ್ರಿಸಿತ್ತು. ಈ ಉಚಿತ ಪ್ರವೇಶದ ಸಂದೇಶವು ಮತ್ತಷ್ಟು ಜನರು ಕ್ರೀಡಾಂಗಣದ ಕಡೆಗೆ ದೌಡಾಯಿಸುವಂತೆ ಪ್ರೇರೇಪಿಸಿತು.
ವಿಮಾನ ನಿಲ್ದಾಣದಿಂದ ದೀರ್ಘ ಪ್ರವಾಸ
ತಂಡವು ಮಧ್ಯಾಹ್ನ 1.30ರ ಸುಮಾರಿಗೆ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಬಂದಿತು. HAL ವಿಮಾನ ನಿಲ್ದಾಣವು ನಗರದ ಪ್ರಮುಖ ವಿಮಾನ ನಿಲ್ದಾಣವಲ್ಲ ಮತ್ತು ವಿಐಪಿಗಳಿಗೆ ಮಾತ್ರ ಸೇವೆ ಒದಗಿಸುತ್ತದೆ. ಎಚ್‌ಎಎಲ್‌ನಿಂದ ತಂಡವು ಬೆಂಗಳೂರಿನ ಹೃದಯಭಾಗವಾದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಪ್ರಯಾಣಿಸಿತು. ಈ ಹೋಟೆಲ್ ಹಲವು ವರ್ಷಗಳಿಂದ ತಂಡದ ವಾಸಸ್ಥಾನವಾಗಿದೆ.
ವಿಜಯ ಮೆರವಣಿಗೆ ರದ್ದಾದ ಸುದ್ದಿ ಹರಿದಾಡಲು ಪ್ರಾರಂಭಿಸುತ್ತಿದ್ದಂತೆ, ಸಾವಿರಾರು ಅಭಿಮಾನಿಗಳು, ಎಲ್ಲಾ ವಯೋಮಾನದ ಜನರು ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಅವರ ತಂಡವನ್ನು ನೋಡಲು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ಆದರೆ, ಬಸ್ಸಿನ ಕಿಟಕಿಗಳಿಗೆ ಬಣ್ಣ ಬಳಿದಿದ್ದರಿಂದ ಆಟಗಾರರು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೂ, ಜನರು ರಸ್ತೆಗಳಲ್ಲಿ ಸೇರುತ್ತಲೇ ಇದ್ದರು, ನೃತ್ಯ ಮಾಡುತ್ತಿದ್ದರು, ಹಾಡುತ್ತಿದ್ದರು ಹಾಗೂ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಹೂವುಗಳನ್ನು ಎಸೆಯುತ್ತಿದ್ದರು.
ತಂಡವು HAL ವಿಮಾನ ನಿಲ್ದಾಣದಲ್ಲಿ ಇಳಿದ ಸಮಯದಿಂದಲೇ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ಎಚ್‌ಎಎಲ್ ರಸ್ತೆ, ದೊಮ್ಮಲೂರು ಫ್ಲೈಓವರ್ ಹಾಗೂ ಮುರುಗೇಶ್ ಪಾಳ್ಯದಲ್ಲಿ ಸಾವಿರಾರು ಜನರು ನೆರೆದಿದ್ದರು. ಬಸ್ ಮುಂದೆ ಸಾಗಿ ವಿಧಾನಸೌಧ ತಲುಪಬಹುದೆಂದು ನಾವು ಭಾವಿಸಿರಲಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಟಿಎನ್‌ಎಂ’ ವರದಿ ಮಾಡಿದೆ.
ಈ ವರದಿ ಓದಿದ್ದೀರಾ?: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ಮೃತಪಟ್ಟವರ ವಿವರ ಬಿಡುಗಡೆ ಮಾಡಿದ ಸರ್ಕಾರ
ದೊಮ್ಮಲೂರು ಫ್ಲೈಓವರ್‌ನಲ್ಲಿಯೇ ಬಸ್ ನಿಲ್ಲಬಹುದು. ಬಸ್ ಮುಂದೆ ಸಾಗಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಬಹುದು ಎಂಬಂತಾಗಿತ್ತು. ನಮಗೆ ತಂಡದ ಸುರಕ್ಷತೆಯೂ ಮುಖ್ಯವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೇಗೋ, ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ತಲುಪಿದ ನಂತರ, ತಂಡ ಪ್ರಯಾಣಿಸುವ ಬಸ್ ವಿಧಾನಸೌಧಕ್ಕೆ ತಲುಪಲು ರಸ್ತೆಯನ್ನು ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಹೋಟೆಲ್‌ನಿಂದ ಆರ್‌ಸಿಬಿ ಆಟಗಾರರು ಹೊರಡುತ್ತಿದ್ದಾರೆ ಎಂಬ ದೃಶ್ಯಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಲಕ್ಷಾಂತರ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ದೌಡಾಯಿಸಲಾರಂಭಿಸಿದರು.
ಸಮನ್ವಯದ ಕೊರತೆ
ಬೆಂಗಳೂರು ಸಂಚಾರ ಪೊಲೀಸರು ಸಾಮಾನ್ಯವಾಗಿ ಸಂಚಾರ ಸಲಹೆಗಳನ್ನು ಹಂಚಿಕೊಳ್ಳುವಲ್ಲಿ ನಿಪುಣರು. ಆದರೆ, ಜೂನ್ 4 ರಂದು ಯಾವುದೇ ವಿವರವಾದ ಸಲಹೆಗಳು ಅಥವಾ ಪರ್ಯಾಯ ಮಾರ್ಗಗಳನ್ನು ನೀಡಲಿಲ್ಲ. ಆದಾಗ್ಯೂ ಮಧ್ಯಾಹ್ನ 12 ಗಂಟೆ ಹೊತ್ತಿಗೆ, ‘ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ. ಹೀಗಾಗಿ, ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಲಾಗಿದೆ’ ಎಂದು ಮಾತ್ರವೇ ಒಂದು ಸಣ್ಣ ಸಂಚಾರ ಸಲಹೆಯನ್ನು ಪ್ರಕಟಿಸಿದರು. ಅದರಲ್ಲಿಯು, ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಪೊಲೀಸರ ಈ ಸಣ್ಣ ಸಲಹೆಯು ಕಾರ್ಯಕ್ರಮದ ಯೋಜನೆ ಮತ್ತು ಸಮನ್ವಯದ ಕೊರತೆಗೆ ಗಂಭೀರವಾದ ಪ್ರಮುಖ ಪುರಾವೆಯಾಗಿದೆ. ಇನ್ನು, ಜೂನ್ 3ರ ರಾತ್ರಿ ನಡೆದಿದ್ದ ಉದ್ರಿಕ್ತ ಆಚರಣೆಗಳನ್ನು ನೋಡಿದ್ದ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಸೆಂಟ್ರಿಗಳು ಮತ್ತು ಸ್ಟೇಷನ್ ಹೌಸ್ ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲ ಪೊಲೀಸ್ ಸಿಬ್ಬಂದಿಗಳೂ ಜನಸಂದಣಿ ನಿಯಂತ್ರಣಕ್ಕಾಗಿ ರಸ್ತೆಗಳಲ್ಲಿ ಇರಲು ಸೂಚಿಸಿದ್ದರು. ಆದರೆ, ಆ ಸಂಖ್ಯೆಯ ಪೊಲೀಸರು ಜನರ ಗುಂಪನ್ನು ನಿಯಂತ್ರಿಸಲು ಸಾಕಾಗುತ್ತಿರಲಿಲ್ಲ.
”ನಮ್ಮ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಯನ್ನು ರಸ್ತೆಗಳಲ್ಲಿ ಇರುವಂತೆ ಸೂಚಿಸಿದ್ದೆವು. ಆದರೆ, ಆ ಸಿಬ್ಬಂದಿಗಳ ಸಂಖ್ಯೆ ಸಾಕಾಗಲಿಲ್ಲ. ಸರಿಯಾದ ಸಭೆಗಳನ್ನು ನಡೆಸಿ ಮಾರ್ಗವನ್ನು ಅಂತಿಮಗೊಳಿಸುವುದು ಮತ್ತು ಬ್ಯಾರಿಕೇಡ್‌ಗಳನ್ನು ನಿಯೋಜಿಸುವುದು ಅಗತ್ಯವಾಗಿತ್ತು. ಆದರೆ, ಅದರ ಬದಲಾಗಿ, ಬಹಳಷ್ಟು ಗೊಂದಲಗಳು ಇದ್ದವು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಟಿಎನ್‌ಎಂ ವರದು ಮಾಡಿದೆ.
ಈ ವರದಿ ಓದಿದ್ದೀರಾ?: ಕಾಲ್ತುಳಿತ | ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್
”ಯೋಜನೆಯ ಕೊರತೆಯು ಸಮಯದ ಅಭಾವದಿಂದ ಉಂಟಾಗಿಲ್ಲ. ಏಕೆಂದರೆ, ಬೆಂಗಳೂರು ಪೊಲೀಸರು ಈ ಹಿಂದೆ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಮತ್ತು ಅಂಬರೀಶ್ ಅವರ ಅಂತ್ಯಕ್ರಿಯೆಯ ಸಮಯದಲ್ಲಿ, ದೊಡ್ಡ ಹಠಾತ್ ಜನಸಂದಣಿಯನ್ನು ನಿರ್ವಹಿಸಿದ್ದರು. ಆಗಲೂ ನಮಗೆ ಅಂತ್ಯಂತ ಕಡಿಮೆ ಸಮಯವೇ ಇತ್ತು. ಆದರೆ, ಯೋಜನೆಯನ್ನು ಉತ್ತಮವಾಗಿ ರೂಪಿಸಲಾಗಿತ್ತು” ಎಂದು ಅವರು ಗಮನಸೆಳೆದರು.
ವಿಧಾನಸೌಧದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವ್ಯವಸ್ಥೆ ಮತ್ತು ದುರಂತ ಏಕಕಾಲದಲ್ಲಿ ತಲೆದೋರಿತು. ಇದಕ್ಕೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಸಂವಹನದ ಕೊರತೆಯೇ ಮೂಲ ಕಾರಣವೆಂದು ಪೊಲೀಸ್ ಮೂಲಗಳು ಹೇಳುತ್ತವೆ.
”21 ಪ್ರವೇಶ ದ್ವಾರಗಳನ್ನು ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲೆಡೆ ಗದ್ದಲ ಹೆಚ್ಚಾಗಿತ್ತು. ಆದರೆ, ಕ್ರೀಡಾಂಗಣಕ್ಕೆ ಜನರು ಪ್ರವೇಶಿಸಲು ಕೆಲವೇ ಕೆಲವು ಗೇಟ್‌ಗಳನ್ನು ಮಾತ್ರವೇ ತೆರೆಯಲಾಗಿತ್ತು. ಇದು ಅಡಚಣೆಯನ್ನು ಸೃಷ್ಟಿಸಿತು. ಎಲ್ಲ ಗೇಟ್‌ಗಳನ್ನು ಯಾಕೆ ತೆರೆಯಲಿಲ್ಲ? ಎಲ್ಲ ದ್ವಾರಗಳನ್ನು ತೆರೆದಿದ್ದರೆ, ಈ ಪ್ರಮಾಣದ ದುರಂತ ನಡೆಯುತ್ತಿರಲಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಅಧಿಕಾರಿ ಕ್ರೀಡಾಂಗಣದ ಒಳಗೆ ಒಂದು ದುರಂತವನ್ನು ತಪ್ಪಿಸಲಾಯಿತು ಎಂದು ಹೇಳಿದ್ದಾರೆ. ”ಕ್ರೀಡಾಂಗಣದಲ್ಲಿ ಜನರ ಸಂಖ್ಯೆಯು ಸ್ಟೇಡಿಯಂನ ಸಾಮರ್ಥ್ಯಕ್ಕಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚಾಗಿತ್ತು. ಕುರ್ಚಿಯಲ್ಲಿ ಕುಳಿತವರಿಗಿಂತ ನಿಂತಿದ್ದವರ ಸಂಖ್ಯೆ ಹೆಚ್ಚಾಗಿತ್ತು. ಮೊದಲ ಹಂತದ ಬ್ಯಾರಿಕೇಡ್ ಬಳಿಯಿದ್ದ ಜನರು ‘ನಮಗೆ ಸಹಾಯ ಮಾಡಿ’ ಎಂದು ಬರೆದ ಕಾಗದಗಳನ್ನು ಪೊಲೀಸರೆಡೆಗೆ ಎಸೆಯಲು ಪ್ರಾರಂಭಿಸಿದಾಗ, ಪರಿಸ್ಥಿತಿ ಹದಗೆಡುತ್ತಿದೆ ಎಂಬುದು ಗೊತ್ತಾಯಿತು” ಎಂದು ಅವರು ಹೇಳಿದ್ದಾರೆ.
ತಕ್ಷಣ, ಪೊಲೀಸರು ಮೊದಲ ಹಂತದ ನಿರ್ಗಮನ ದ್ವಾರಗಳಿಗೆ ತೆರಳಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಜನರನ್ನು ಹೊರಹೋಗುವಂತೆ ಒತ್ತಾಯಿಸಲು ಪ್ರಾರಂಭಿಸಿದರು. “ಮೊದಲ ಹಂತದ ಬ್ಯಾರಿಕೇಡ್ ಜನರ ಗುಂಪಿನ ಒತ್ತಡವನ್ನು ತಡೆದುಕೊಳ್ಳದೆ ಕುಸಿದು ಬಿದ್ದಿದ್ದರೆ, ಇನ್ನೂ ದೊಡ್ಡ ದುರಂತ ಸಂಭವಿಸುತ್ತಿತ್ತು” ಎಂದು ಅಧಿಕಾರಿ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 2-3 ಲಕ್ಷ ಜನರಿದ್ದರು. ಆದರೆ, ಕ್ರೀಡಾಂಗಣದ ಸಾಮರ್ಥ್ಯಕ್ಕೆ ಅನುಗುಣವಾಗಿ ಕೇವಲ 35,000 ಪಾಸ್‌ಗಳನ್ನು ಮಾತ್ರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆದಾಗ್ಯೂ, ವರದಿಗಳು ಹೇಳುವಂತೆ, ಕ್ರೀಡಾಂಗಣದ ಗೇಟ್‌ಗಳಲ್ಲಿ ಜನರ ಬೃಹತ್ ಗುಂಪುಗಳಿದ್ದವು. ಅವರಲ್ಲಿ, ಕೆಲವರು ಪಾಸ್‌ಗಳನ್ನು ಹಿಡಿದಿದ್ದರು. ಆದರೆ, ಅವರು ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪಾಸ್‌ಗಳಿಲ್ಲದ ಹಲವಾರು ಮಂದಿ ಕ್ರೀಡಾಂಗಣದ ಒಳಗೆ ಹೋಗಲು ಯತ್ನಿಸುತ್ತಿದ್ದರು. ಬ್ಯಾರಿಕೇಡ್‌ಗಳನ್ನು ಜಗ್ಗಿ, ಒಳಗೆ ಹೋಗಲು ಬಿಡುವಂತೆ ಕೇಳುತ್ತಿದ್ದರು.
ಕ್ರೀಡಾಂಗಣದ ಒಳ ಹೋಗಲು ಯಾವ ಗೇಟ್‌ಗಳು ತೆರೆದಿವೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಹೆಚ್ಚಿನ ಗೊಂದಲ ಉಂಟಾಯಿತು. ಯಾವುದೇ ಅಧಿಕೃತ ಪ್ರಕಟಣೆಗಳಿಲ್ಲದ ಕಾರಣ, ಜನರು ಒಳಹೋಗಲು ಒಂದು ಗೇಟ್‌ನಿಂದ ಇನ್ನೊಂದು ಗೇಟ್‌ಗೆ ಓಡುತ್ತಲೇ ಇದ್ದರು. ಅವರನ್ನು ಪದೇ ಪದೇ ಹಿಂದಕ್ಕೆ ಕಳುಹಿಸುತ್ತಿದ್ದಂತೆ, ಹತಾಶೆ ಹೆಚ್ಚಾಗಿ, ಹೆಚ್ಚಿನ ಜನರು ಗೇಟ್‌ಗಳನ್ನು ಎಳೆಯಲು ಆರಂಭಿಸಿದರು. ಅಲ್ಲಿ, ಗದ್ದಲ ಪ್ರಾರಂಭವಾಯಿತು.
ಲಿಂಕ್ ರಸ್ತೆಯಲ್ಲಿರುವ ಗೇಟ್ ಸಂಖ್ಯೆ 7 ಅತ್ಯಂತ ಮಾರಕ ಸ್ಥಳವಾಗಿ ಮಾರ್ಪಟ್ಟಿತು. ಕ್ವೀನ್ಸ್ ರಸ್ತೆಯ ಗೇಟ್‌ಗಳ ಮೂಲಕ ಒಳಹೋಗಲು ಸಾಧ್ಯವಾಗದ ಜನರು 7ನೇ ಗೇಟ್‌ಗೆ ಧಾವಿಸಿದ್ದರು. ಅಲ್ಲಿ ಉಂಟಾದ ಗದ್ದಲ, ಅವ್ಯವಸ್ಥೆಯಿಂದಾಗಿ ಹಲವಾರು ಜನರು ಬಿದ್ದು ಕಾಲ್ತುಳಿತಕ್ಕೊಳಗಾದರು. ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದರು. ಕನಿಷ್ಠ 50 ಜನರು ಗಾಯಗೊಂಡರು. ಕ್ರೀಡಾಂಗಣದ ಹೊರಗೆ ಪೊಲೀಸರು ಆಂಬ್ಯುಲೆನ್ಸ್‌ಗಳನ್ನು ಹುಡುಕಲು ಪರದಾಡಿದರು. ಪೊಲೀಸರು, ಕುಟುಂಬಸ್ಥರು, ಸ್ನೇಹಿತರು ಮತ್ತು ಪ್ರೇಕ್ಷಕರು ಗಾಯಾಳುಗಳನ್ನು ಹೊತ್ತುಕೊಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುವ ವಾಹನಗಳತ್ತ ಧಾವಿಸಿದರು. ಸಿಕ್ಕ ವಾಹನಗಳಲ್ಲಿ ಆಸ್ಪತ್ರೆಗೆ ಕೊಂಡೊಯ್ದರು.
ಕ್ರೀಡಾಂಗಣದ ಹೊರತು ಭೀಕರ ಸನ್ನಿವೇಶ ಸೃಷ್ಟಿಯಾಗಿದ್ದರೆ, ಒಳಭಾಗದಲ್ಲಿ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸುತ್ತಿದ್ದರು. ಸುಮಾರು ಎರಡು ದಶಕಗಳಿಂದ ತಂಡವು ಕಪ್ ಗೆಲ್ಲದಿದ್ದರೂ, ತಂಡದಲ್ಲಿಯೇ ಗಟ್ಟಿಯಾಗಿ ಉಳಿದಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗಾಗಿ ಜೋರಾದ ದೀರ್ಘ ಚಪ್ಪಾಳೆಯನ್ನು ತಟ್ಟುತ್ತಿದ್ದರು. ಬಹುಶಃ, ಅವರಿಗೆ ಗೇಟ್‌ಗಳ ಆಚೆ ನಡೆಯುತ್ತಿದ್ದ ಭಯಾನಕತೆಯ ಅರಿವಿರಲಿಲ್ಲ.
ಈ ವರದಿ ಓದಿದ್ದೀರಾ?: ಕಾಲ್ತುಳಿತ | ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು: ನಟ ಕಿಶೋರ್ ಆಗ್ರಹ
”ದುರಂತವನ್ನು ತಡೆಯಲು ಸರ್ಕಾರ, ಪೊಲೀಸ್ ಹಾಗೂ ಕೆಎಸ್‌ಸಿಎ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿತ್ತು. ಬೆಳಗ್ಗೆಯಿಂದಲೇ ಸ್ಪಷ್ಟವಾದ ಮಾಹಿತಿಗಳನ್ನು ಘೋಷಿಸಬೇಕಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧ ಮತ್ತು ಕ್ರೀಡಾಂಗಣಕ್ಕೆ ಬಾರದಂತೆ, ತಾವಿರುವಲ್ಲಿಯೇ ಟಿವಿ, ಮೊಬೈಲ್‌ಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಕೇಳಿಕೊಳ್ಳಬೇಕಿತ್ತು. ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಪ್ರವೇಶ ಎಂದು ಘೋಷಿಸಬೇಕಿತ್ತು. ಕ್ರೀಡಾಂಗಣದಲ್ಲಿ ಇನ್ನೂ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ನಿಯೋಜಿಸಬೇಕಿತ್ತು. ಕ್ರೀಡಾಂಗಣದ ಎಲ್ಲ ಗೇಟ್‌ಗಳನ್ನು ತೆರೆದಿಡಬೇಕಿತ್ತು. ಇದಾವುದನ್ನೂ ಮಾಡದೆ, ‘ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ’ ಎನ್ನುವುದರಲ್ಲಿ ಅರ್ಥವೇನು? ದಿನದ ಕೊನೆಯಲ್ಲಿ, ಎಷ್ಟೊಂದು ಜನರು ಸತ್ತರಲ್ಲ” ಎಂದು ದುರ್ಘಟನೆಯಿಂದ ಹತಾಶೆಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಬೇಸರ, ಅಸಮಾಧಾನ ವ್ಯಕ್ತಪಡಿಸಿದ್ದಾಗಿ ‘ಟಿಎನ್‌ಎಂ’ ವರದಿ ಮಾಡಿದೆ.
ಆರ್‌ಸಿಬಿ ಮತ್ತು ಬಿಸಿಸಿಐ ಪ್ರತಿಕ್ರಿಯೆ
ಏತನ್ಮಧ್ಯೆ, ಆರ್‌ಸಿಬಿ ಮತ್ತು ಕೆಎಸ್‌ಸಿಎ ಜಂಟಿ ಹೇಳಿಕೆ ನೀಡಿದ್ದು, ಜೀವ ಕಳೆದುಕೊಂಡವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿವೆ. “ಈ ದುರಂತ ಘಟನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಈ ಅತ್ಯಂತ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ… ಈ ಪರಿಹಾರವು ಮನುಷ್ಯನ ಜೀವ ಮೌಲ್ಯವನ್ನು ನಿರ್ಧರಿಸುವುದಕ್ಕಾಗಿ ಅಲ್ಲ. ಸವಾಲಿನ ಸಮಯವನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಬೆಂಬಲ ಮತ್ತು ಒಗ್ಗಟ್ಟಿನ ಸೂಚಕವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿವೆ.
ಪ್ರತ್ಯೇಕ ಹೇಳಿಕೆ ನೀಡಿರುವ ಆರ್‌ಸಿಬಿ, “ಇಂದು ಮಧ್ಯಾಹ್ನ ತಂಡದ ಬರುವಿಕೆಯ ನಿರೀಕ್ಷೆಯಲ್ಲಿ ಬೆಂಗಳೂರಿನಾದ್ಯಂತ ಸಾರ್ವಜನಿಕ ಗುಂಪುಗಳಿಗೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳಿಂದ ತಿಳಿದ ದುರದೃಷ್ಟಕರ ಘಟನೆಯಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯ. ದುರಂತಕಾರಿ ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ಬದಲಿಸಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ನಮ್ಮ ಎಲ್ಲ ಅಭಿಮಾನಿ ಬೆಂಬಲಿಗರು ದಯವಿಟ್ಟು ಸುರಕ್ಷಿತವಾಗಿರಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿದೆ.
ಇದೇ ಹೇಳಿಕೆಯನ್ನು ರೀ-ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ, “ಮಾತುಗಳು ಹೊರಡುತ್ತಿಲ್ಲ. ಕರುಳು ಹಿಂಡಿದಂತಾಗಿದೆ. ಸಂಪೂರ್ಣ ದುಃಖಿತನಾಗಿದ್ದೇನೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಕಾಲ್ತುಳಿತದಲ್ಲಿ 11 ಸಾವು, ಸುದ್ದಿ ಕೇಳಿ ಕರುಳು ಹಿಂಡುತ್ತಿದೆ: ವಿರಾಟ್ ಕೊಹ್ಲಿ ಸಂತಾಪ
ದುರ್ಘಟನೆ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಇದು ತುಂಬಾ ದುರದೃಷ್ಟಕರ. ಇದು ಜನಪ್ರಿಯತೆಯ ನಕಾರಾತ್ಮಕ ಬದಿ. ಜನರು ಕ್ರಿಕೆಟಿಗರ ವಿಚಾರದಲ್ಲಿ ಹುಚ್ಚರಾಗಿದ್ದಾರೆ. ಸಂಘಟಕರು ಇದನ್ನು ಉತ್ತಮವಾಗಿ ಯೋಜಿಸಬೇಕಾಗಿತ್ತು. ಮೃತರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲೆಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.
”ಇಷ್ಟು ಬೃಹತ್ ವಿಜಯೋತ್ಸವವನ್ನು ಆಯೋಜಿಸಲು ನಿಖರವಾದ ಯೋಜನೆ ಮತ್ತು ಕಠಿಣ ಸುರಕ್ಷತಾ ಪ್ರೋಟೋಕಾಲ್‌ಗಳು ಬೇಕಾಗುತ್ತವೆ. ಎಲ್ಲೋ ಕೆಲವು ಲೋಪಗಳು ನಡೆದಿವೆ. ಐಪಿಎಲ್‌ನ ಅದ್ಭುತ ಅಂತ್ಯದ ನಂತರ, ಘೋರ ದುರ್ಘಟನೆ ನಡೆದುಹೋಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಇತರ ಕ್ರಿಕೆಟ್ ಸಂಭ್ರಮಾಚರಣೆಗಳ ಬಗ್ಗೆ ಮಾತನಾಡಿದರುವ ದೇವಜಿತ್, ”ಕಳೆದ ವರ್ಷ ಐಪಿಎಲ್ ಗೆಲುವಿನ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡೆಸಿದ ಶಾಂತಿಯುತ ಮೆರವಣಿಗೆ, 2024ರಲ್ಲಿ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ವಿಜಯ ಮೆರವಣಿಗೆಯಲ್ಲಿ ಜನಸಾಗರ ನೆರೆದಿತ್ತು. ಆದರೆ, ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಸುಗಮ ಮೆರವಣಿಗೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರು. ಮಂಗಳವಾರ ರಾತ್ರಿ ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್ ಸಮಯದಲ್ಲಿಯೂ ಸಹ, ಕ್ರೀಡಾಂಗಣದಲ್ಲಿ 1,20,000 ಜನರು ಇದ್ದರು. ಆದರೆ, ಆ ಜನಸಂಖ್ಯೆಯನ್ನು ನಿಭಾಯಿಸಲು ಬಿಸಿಸಿಐ ಸಮರ್ಪಕ ತಂಡವನ್ನು ಹೊಂದಿತ್ತು. ಬಿಸಿಸಿಐ ತಂಡವು ಪ್ರೇಕ್ಷಕರ ಸುರಕ್ಷತೆಗಾಗಿ ಸ್ಥಳೀಯ ಜಿಲ್ಲಾಡಳಿತ ಮತ್ತು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಯೋಜನೆ ರೂಪಿಸಿ, ಕೆಲಸ ಮಾಡಿದೆ” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ
ಇದೆಲ್ಲದರ ನಡುವೆ, ಜೂನ್ 4ರಂದು ಬೆಂಗಳೂರಿನಲ್ಲಿ ಯೋಜಿಸಲಾಗಿದ್ದ ತೆರೆದ ಬಸ್ ಮೆರವಣಿಗೆ ಅಥವಾ ಸನ್ಮಾನ ಸಮಾರಂಭಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳ ಬಗ್ಗೆ ಬಿಸಿಸಿಐಗೆ ತಿಳಿಸಲಾಗಿಲ್ಲ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ.
”ಬೆಂಗಳೂರಿನ ಕಾರ್ಯಕ್ರಮವನ್ನು ಯೋಜಿಸಿದ್ದಾರೆಂಬುದು ನಮಗೆ ತಿಳಿದಿರಲಿಲ್ಲ. ಕ್ರೀಡಾಂಗಣಕ್ಕೆ ಇಷ್ಟು ದೊಡ್ಡ ಜನಸಮೂಹ ಹೇಗೆ ಬಂದಿತು? ದುರಂತದ ವರದಿಗಳು ಹೊರಬರುವವರೆಗೂ ಕ್ರೀಡಾಂಗಣದೊಳಗಿನ ಅಧಿಕಾರಿಗಳಿಗೆ ಹೊರಗಿನ ಪರಿಸ್ಥಿತಿಯ ಬಗ್ಗೆ ತಿಳಿದಿರಲಿಲ್ಲ. ಇದು ಸಂಪೂರ್ಣ ಅವ್ಯವಸ್ಥೆ. ಘಟನೆಯು ತುಂಬಾ ದುಃಖಕರ ಮತ್ತು ದುರಂತ” ಎಂದು ಧುಮಾಲ್ ಹೇಳಿದ್ದಾರೆ.
”ಅಹಮದಾಬಾದ್‌ನಲ್ಲಿ ಜೂನ್ 3ರಂದು ಫೈನಲ್ ಮುಗಿಯುತ್ತಿದ್ದಂತೆಯೇ ಬಿಸಿಸಿಐ ತನ್ನ ಅಧಿಕೃತ ಐಪಿಎಲ್ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಿತು. ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಾಗ ನಾವು ಆರ್‌ಸಿಬಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿದೆವು. ಅವರು ಸಮಾರಂಭವನ್ನು ತ್ವರಿತವಾಗಿ ಮುಗಿಸುವುದಾಗಿ ಭರವಸೆ ನೀಡಿದರು” ಎಂದು ಧುಮಾಲ್ ತಿಳಿಸಿದ್ದಾರೆ.
ವರದಿ ಮೂಲ: ದಿ ನ್ಯೂಸ್ ಮಿನಿಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ