ಕರುಣ್‌ ನಾಯರ್‌ಗೆ ಮತ್ತೊಂದು ಅವಕಾಶ ನೀಡಿದ ‘ಕ್ರಿಕೆಟ್’; ಮತ್ತೆ ತನ್ನ ಸಾಮರ್ಥ್ಯ ತೋರಿಸಿದ ಕನ್ನಡಿಗ

Date:

Advertisements
ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರನ ಅಗತ್ಯ ಖಂಡಿತಾ ತಂಡಕ್ಕಿದೆ. ಆದಕಾರಣ ದೇಸೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕರುಣ್‌ ಅವರನ್ನು ಟೀಂ ಇಂಡಿಯಾ ಸೇರಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ...

ಪ್ರತಿಭೆಯಿದ್ದರೂ ಯಾವುದೇ ಶಿಫಾರಸ್ಸು, ಪ್ರಭಾವಿ ಹಿನ್ನೆಲೆಯಿಲ್ಲದೆ ಕೆಲವು ವರ್ಷಗಳಿಂದ ಬಿಸಿಸಿಐ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ತಾತ್ಸಾರಕ್ಕೊಳಗಾಗಿದ್ದ ಬೆಂಗಳೂರಿನ ಹುಡುಗ ಕರುಣ್‌ ನಾಯರ್‌ ಮತ್ತೆ ಪುಟಿದೆದ್ದಿದ್ದಾರೆ. ಐಪಿಎಲ್ 2025ರ ಆವೃತ್ತಿಯ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 40 ಬಾಲ್‌ಗಳಲ್ಲಿ 12 ಆಕರ್ಷಕ ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳ ಮೂಲಕ 89 ರನ್‌ಗಳನ್ನು ಸ್ಫೋಟಿಸಿದರು. ಮೂರನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್ ನಾಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಇಂಡಿಯನ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಕರುಣ್ ಬರೋಬ್ಬರಿ 2,519 ದಿನಗಳ ಬಳಿಕ ಐಪಿಎಲ್​ನಲ್ಲಿ ಅರ್ಧಶತಕ ಬಾರಿಸಿದರು.

ಕರುಣ್ ನಾಯರ್ ಕೊನೆಯ ಬಾರಿಗೆ ಐಪಿಎಲ್​ನಲ್ಲಿ ಅರ್ಧಶತಕ ಬಾರಿಸಿದ್ದು 2018ರಲ್ಲಿ. ಆನಂತರದಲ್ಲಿ ಅವರಿಗೆ ಅವಕಾಶಗಳು ದೊರೆತಿರಲಿಲ್ಲ. ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ಐಪಿಎಲ್​ನಲ್ಲಿ ಅರ್ಧ ಶತಕ ಸಿಡಿಸುವಲ್ಲಿ ಕರುಣ್ ನಾಯರ್ ಯಶಸ್ವಿಯಾಗಿದ್ದಾರೆ. ಈ ಆಟದಲ್ಲಿ ಅವರ ಸ್ಟ್ರೈಕ್ ರೇಟ್ 222.50 ಆಗಿತ್ತು. ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 12 ರನ್‌ಗಳ ಕಡಿಮೆ ಅಂತರದಲ್ಲಿ ಸೋತಿರಬಹುದು, ಆದರೆ ಕರುಣ್ ನಾಯರ್ ಅವರ ಬ್ಯಾಟಿಂಗ್ ಎಲ್ಲರ ಹೃದಯ ಗೆದ್ದಿದೆ. ಸುಮಾರು ಮೂರು ವರ್ಷಗಳ ನಂತರ ಐಪಿಎಲ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಕರುಣ್ ನಾಯರ್ ತಮ್ಮ ‘ಕ್ರಿಕೆಟ್ ಆಟ’ ಇನ್ನು ಸೋತಿಲ್ಲ ಎಂದು ಸಾಬೀತುಪಡಿಸಿದರು.

ಕರುಣ್ ಅವರ ಈ ಸ್ಫೋಟಕ ಬ್ಯಾಟಿಂಗ್ ನಂತರ, ಅವರ ಹಳೆಯ ಟ್ವೀಟ್‌ಗಳಲ್ಲಿ ಒಂದು ವೈರಲ್ ಆಗುತ್ತಿದೆ. ಬಿಸಿಸಿಐ ಕರುಣ್‌ ನಾಯರ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮೂಲೆಗುಂಪು ಮಾಡಿದಾಗ 2022ರ ಡಿಸೆಂಬರ್‌ 10ರಂದು ‘ಪ್ರೀತಿಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ನೀಡು’ (Dear cricket, give me one more chance) ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತುಂಬ ನೋವಿನಿಂದ ಬರೆದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಕರುಣ್‌ ಆಟಕ್ಕೆ ಬೆರಗಾಗಿರುವ ಕ್ರಿಕೆಟ್‌ ಆಡಳಿತ ಮಂಡಳಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಂದು ಅವಕಾಶ ನೀಡುವ ಬಗ್ಗೆ ಆಲೋಚಿಸುತ್ತಿದೆ. ಐಪಿಎಲ್ ಮಾತ್ರವಲ್ಲ, ಕರುಣ್ ಇತ್ತೀಚೆಗೆ ದೇಸೀ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ರನ್ ಗಳಿಸಿದ್ದಾರೆ. ಆದರೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ. ಆದರೂ ತಮ್ಮ ಸಾಧಿಸುವ ಛಲ ಬಿಡಲಿಲ್ಲ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಇದೇ ಪ್ರದರ್ಶನ ಮುಂದುವರಿಸಿದರೆ, ಆಯ್ಕೆದಾರರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಮತ್ತಷ್ಟು ಬದಲಾವಣೆಯಾಗುವ ಸಾಧ್ಯತೆಯಿದೆ.

Advertisements

ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ

ಈ ವರ್ಷದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ಅವರು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಟೂರ್ನಿಯಲ್ಲಿ ಕರುಣ್ ಅತಿ ಹೆಚ್ಚು ರನ್ ದಾಖಲಿಸಿದರು ಮತ್ತು ಏಕಾಂಗಿಯಾಗಿ ತಾವು ಪ್ರತಿನಿಧಿಸಿದ ತಂಡ ವಿದರ್ಭವನ್ನು ಫೈನಲ್‌ಗೆ ಕೊಂಡೊಯ್ದರು. ಆದರೆ, ಫೈನಲ್‌ನಲ್ಲಿ ಮಾತ್ರ ವಿದರ್ಭ ತಂಡ ಕರ್ನಾಟಕದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಕರುಣ್ ಎಂಟು ಇನಿಂಗ್ಸ್‌ಗಳಲ್ಲಿ 389.50ರ ಸರಾಸರಿಯಲ್ಲಿ ಮತ್ತು 124.04ರ ಸ್ಟ್ರೈಕ್ ರೇಟ್‌ನೊಂದಿಗೆ 779 ರನ್‌ಗಳನ್ನು ಗಳಿಸುವ ಮೂಲಕ ಟೂರ್ನಿಯಲ್ಲೇ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು ಒಂದು ಅರ್ಧಶತಕ ಸೇರಿವೆ. ಕರುಣ್‌ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಅಜೇಯ 163 ರನ್‌ಗಳಾಗಿತ್ತು.

ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಧೋನಿ

ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡವನ್ನು ಚಾಂಪಿಯನ್‌ ಮಾಡಿದ ಕರುಣ್

ಇಷ್ಟು ಮಾತ್ರವಲ್ಲ, ಕಳೆದ ಋತುವಿನಲ್ಲಿ ದೇಶದ ಅತ್ಯಂತ ಪ್ರತಿಷ್ಠಿತ ದೇಸೀಯ ರೆಡ್ ಬಾಲ್ ಟೂರ್ನಮೆಂಟ್ ರಣಜಿ ಟ್ರೋಫಿಯಲ್ಲಿ ಕರುಣ್ ನಾಯರ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿತ್ತು. ಅವರ ತಂಡ ವಿದರ್ಭ ಕೂಡ ರಣಜಿಯಲ್ಲಿ ಫೈನಲ್ ತಲುಪಿ ಕೇರಳವನ್ನು ಮಣಿಸಿವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡಿತು. ಕರುಣ್ ಟೂರ್ನಿಯಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಹಾಗೂ ವಿದರ್ಭ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಆಗಿದ್ದರು. ಕರುಣ್ 16 ಇನಿಂಗ್ಸ್‌ಗಳಲ್ಲಿ 53.93 ಸರಾಸರಿಯಲ್ಲಿ 863 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಇಷ್ಟೆಲ್ಲ ಸಾಧನೆ ಮಾಡಿದರೂ ಐಪಿಎಲ್ ಮೆಗಾ ಹರಾಜಿನಲ್ಲಿ ಕರುಣ್‌ ಅವರನ್ನು ಯಾರೂ ಖರೀದಿಸಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ಕರುಣ್ ಅವರನ್ನು ಮೂಲ ಬೆಲೆ 50 ಲಕ್ಷ ರೂ.ಗಳಿಗೆ ಖರೀದಿಸಿತು.

ಬುಮ್ರಾಗೆ ಬೆವರಿಳಿಸಿದ ಕರುಣ್

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕರುಣ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ 11 ನೇ ಅರ್ಧಶತಕವಾಗಿತ್ತು. ಅವರು ಸುಮಾರು ಏಳು ವರ್ಷಗಳ ನಂತರ ಈ ಟೂರ್ನಿಯಲ್ಲಿ ಅರ್ಧಶತಕ ಗಳಿಸಿದರು. ಕರುಣ್ ಕೊನೆಯ ಬಾರಿಗೆ ಹೀಗೆ ಆಡಿದ್ದು ಮೇ 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ. ಈ ಇನಿಂಗ್ಸ್‌ನಲ್ಲಿ ಕರುಣ್ ವಿಶ್ವದ ಅತ್ಯುತ್ತಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಕೂಡ ಬೆವರಿಳಿಸಿದ್ದಾರೆ. ವಿಶ್ವದ ಯಾವುದೇ ತಂಡದ ಘಟಾನುಘಟಿ ಬ್ಯಾಟರ್ ಕೂಡ ಬುಮ್ರಾ ಹಾಕುವ ಯಾರ್ಕರ್‌ ಬೌಲಿಂಗ್‌ನಲ್ಲಿ ರನ್‌ ಬಾರಿಸಲು ತಡಬಡಾಯಿಸುತ್ತಾನೆ. ಆದರೆ ಬುಮ್ರಾ ಬೌಲಿಂಗ್‌ನಲ್ಲಿ ಭರ್ಜರಿ 2 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಾನು ಯಾವುದೇ ಬೌಲರ್‌ ಎದುರು ಲೀಲಾಜಾಲವಾಗಿ ಆಡಬಲ್ಲೆ ಎಂಬುದನ್ನು ತೋರಿಸಿದರು. ಈ ವೇಗದ ಬೌಲರ್ ವಿರುದ್ಧ ಕರುಣ್ ಒಟ್ಟು ಒಂಬತ್ತು ಎಸೆತಗಳನ್ನು ಆಡಿ 26 ರನ್ ಗಳಿಸಿದರು. ಇದರೊಂದಿಗೆ, ಐಪಿಎಲ್‌ನಲ್ಲಿ ಬುಮ್ರಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು 2016 ರಲ್ಲಿ, ಮತ್ತೊಬ್ಬ ಭಾರತೀಯ ಆಟಗಾರ ಶಿಖರ್ ಧವನ್ ಐಪಿಎಲ್‌ನಲ್ಲಿ ಬುಮ್ರಾ ವಿರುದ್ಧ 16 ಎಸೆತಗಳಲ್ಲಿ 27 ರನ್ ಗಳಿಸಿದ್ದರು.

ತ್ರಿಶತಕ ಬಾರಿಸಿದರೂ ಕೈಬಿಡಲಾಗಿತ್ತು!

ಕರುಣ್‌ ನಾಯರ್‌ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಮೂರನೇ ಟೆಸ್ಟ್‌ ಪಂದ್ಯದಲ್ಲಿಯೇ ಅದ್ಭುತ ಸಾಧನೆ ಮಾಡಿದ್ದರು. 2016ರ ನವೆಂಬರ್‌ನಲ್ಲಿ ಮೊಹಾಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಡಿದ ಎರಡನೇ ಟೆಸ್ಟ್‌ನಲ್ಲೇ ತ್ರಿಶತಕ ಸಿಡಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು. ತ್ರಿಶತಕ ಗಳಿಸಿದ ನಂತರ ಅವರನ್ನು ಕೈಬಿಡಲಾಯಿತು. ಒಂದೆರಡು ಇನಿಂಗ್ಸ್‌ನಲ್ಲಿ ವಿಫಲರಾದ ಕಾರಣ ಆಯ್ಕೆ ಸಮಿತಿ ಮುಂದಿನ ಯಾವುದೇ ಸರಣಿಗೆ ಕರುಣ್‌ ಅವರಿಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ನೀಡಲಿಲ್ಲ. ಆದರೆ ಕರುಣ್‌ ಧೈರ್ಯ ಕಳೆದುಕೊಳ್ಳಲಿಲ್ಲ. ದೇಸೀ ಕ್ರಿಕೆಟ್‌ನಲ್ಲಿಯೇ ಮಿಂಚತೊಡಗಿದರು. ಅಂತಾರಾಷ್ಟ್ರೀಯ ಪಾದಾರ್ಪಣೆಗೂ ಮುನ್ನ 2013-14ರಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಕರುಣ್‌ ಪಾತ್ರ ಕೂಡ ದೊಡ್ಡದಿತ್ತು. ಫೈನಲ್‌ ಹಾಗೂ ನಾಕೌಟ್‌ನ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು. 2014 – 15ನೇ ಸಾಲಿನಲ್ಲೂ ಕರ್ನಾಟಕ ಮತ್ತೊಮ್ಮೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ತಮಿಳುನಾಡಿನ ವಿರುದ್ಧ ನಡೆದ ಈ ಫೈನಲ್‌ ಪಂದ್ಯದಲ್ಲಿ ತ್ರಿಶತಕ (328) ಬಾರಿಸಿ ಗೆಲುವಿನ ಶ್ರೇಯಕ್ಕೆ ಕರುಣ್ ಕಾರಣರಾಗಿದ್ದರು.

ಪ್ರತಿಭೆ ಭಾರತ ತಂಡಕ್ಕೆ ಮತ್ತೆ ಕರೆದೊಯ್ಯಬಹುದೆ?

ಟೀಂ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಆಟವಾಡುತ್ತಿರುವ ಕರುಣ್ ನಾಯರ್ ಅವರ ಅನುಭವವನ್ನು ಮತ್ತೆ ಬಳಸಿಕೊಳ್ಳುವ ಸಾಧ್ಯತೆಯಿದ್ದು, ಮುಂದಿನ ಟೆಸ್ಟ್‌ ಸರಣಿಯಲ್ಲಿ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಭಾರತೀಯ ಟೆಸ್ಟ್ ತಂಡದಲ್ಲಿನ ಬದಲಾವಣೆಯ ಈ ಹಂತದಲ್ಲಿ, ಆಯ್ಕೆದಾರರು ಕರುಣ್ ಅವರನ್ನು ಮತ್ತೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಬಹುದು. ಇತ್ತೀಚಿಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋಲು ಕಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರನ ಅಗತ್ಯ ಖಂಡಿತಾ ತಂಡಕ್ಕಿದೆ. ಆದಕಾರಣ ದೇಸೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕರುಣ್‌ ಅವರನ್ನು ಟೀಂ ಇಂಡಿಯಾ ಸೇರಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿದೆ.

ಕಾಯಿಲೆ ಸುಧಾರಣೆಗಾಗಿ ಕ್ರಿಕೆಟ್‌ ಕಲಿಸಿದ್ದ ಪೋಷಕರು

ಕರುಣ್‌ ನಾಯರ್‌ ಮೂಲತಃ ಕೇರಳ ಮೂಲದವರಾದರೂ ಹುಟ್ಟಿದ್ದು ರಾಜಸ್ಥಾನದ ಜೋದ್‌ಪುರದಲ್ಲಿ. ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್‌ ಆಗಿದ್ದ ಕರುಣ್ ತಂದೆ ಕಲಾಧರನ್‌ ನಾಯರ್ ಕೆಲಸದ ವರ್ಗಾವಣೆಯ ಪ್ರಯುಕ್ತ ಕರುಣ್‌ ಸಣ್ಣ ವಯಸ್ಸಿನಲ್ಲಿ ಇದ್ದಾಗಲೇ ಬೆಂಗಳೂರಿಗೆ ಸ್ಥಳಾಂತರಗೊಂಡರು. ಚಿಕ್ಕಂದಿನಲ್ಲಿ ಕರುಣ್‌ಗೆ ಶ್ವಾಸಕೋಶದ ತೊಂದರೆಯಿದ್ದ ಕಾರಣ ಇದನ್ನು ಸುಧಾರಿಸುವ ಸಲುವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸುವಂತೆ ವೈದ್ಯರು ಕರುಣ್‌ ಪೋಷಕರಿಗೆ ಸಲಹೆ ನೀಡಿದ್ದರು. ವೈದ್ಯರ ಸಲಹೆಯನ್ನು ಪರಿಗಣಿಸಿದ ಕರುಣ್‌ ಅವರ ಪೋಷಕರು ಆತನನ್ನು ಸ್ಥಳೀಯ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಅಲ್ಲಿಂದ ಕ್ರಿಕೆಟ್ ಪಯಣ ಶುರುವಾಯಿತು. ಬೆಂಗಳೂರಿನ ಗಲ್ಲಿಗಳಲ್ಲಿ ಆಡಿದ ಹುಡುಗ ಹಲವು ಏಳುಬೀಳಿನ ಬಳಿಕ ಮತ್ತೆ ಟೀಂ ಇಂಡಿಯಾ ಕದ ತಟ್ಟುತ್ತಿದ್ದಾನೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X