‘Dear cricket, give me one more chance.’ (ಪ್ರೀತಿಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ಕೊಡು) – 2022ರ ಡಿಸೆಂಬರ್ 10ರಂದು ಕರ್ನಾಟಕದ ಕ್ರಿಕೆಟಿಗ ಕರುಣ್ ನಾಯರ್ ತಮ್ಮ ಎಕ್ಸ್ ಖಾತೆಯಲ್ಲಿ ನೋವಿನಿಂದ ಬರೆದುಕೊಂಡ ಸಾಲು ಇದು. ಅವರ ಈ ಟ್ವೀಟ್ ಈಗ ಮತ್ತೆ ವೈರಲ್ ಆಗುತ್ತಿದೆ.
2025 ಜನವರಿ 18ರ ದಿನವು ಕರುಣ್ ನಾಯರ್ ಪಾಲಿಗೆ ದುರದೃಷ್ಟದ ದಿನವಾಗಿ ಪರಿಣಮಿಸಿತು. ಅವರ ನಾಯಕತ್ವದಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದ ವಿದರ್ಭ ತಂಡ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಎದುರು ಸೋಲು ಅನುಭವಿಸಿತು. ಮತ್ತೊಂದೆಡೆ ಈ ಬಾರಿಯಾದರೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬಹುದು ಎಂದು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕನ್ನಡಿಗನ ಕನಸಿಗೆ ಆಯ್ಕೆದಾರರು ತಣ್ಣೀರೆರಚಿದರು.
ಕ್ರಿಕೆಟ್ ಜಗತ್ತಿನಲ್ಲಿ ಕರುಣ್ ನಾಯರ್ ಕತೆ ಮುಗಿದೇ ಹೋಯಿತು ಎಂದು ಅಂದುಕೊಳ್ಳುವಾಗಲೇ, ಅವರು ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದಿದ್ದಾರೆ. ಈ ಸಲದ ‘ವಿಜಯ್ ಹಜಾರೆ ಟ್ರೋಫಿ’ ಟೂರ್ನಿಯಲ್ಲಿ ಕರುಣ್ ಸಮರ್ಥವಾಗಿ ವಿದರ್ಭ ತಂಡವನ್ನು ಮುನ್ನಡೆಸುವ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಆಡಿದ 8 ಇನ್ನಿಂಗ್ಸ್‌ನಲ್ಲಿ 779 ರನ್ ಗಳಿಸಿ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದರು. ಈ ಟೂರ್ನಿಯಲ್ಲಿ 5 ಶತಕ ಸಿಡಿಸಿರುವ ಅವರು, ಆರು ಇನ್ನಿಂಗ್ಸ್‌ಗಳಲ್ಲಿ ಔಟ್ ಆಗದೇ ಉಳಿದಿದ್ದರು.
𝐓𝐡𝐞 𝐊𝐚-𝐑𝐔𝐍 𝐦𝐚𝐜𝐡𝐢𝐧𝐞 ⚙️⚙️
— BCCI Domestic (@BCCIdomestic) January 16, 2025
Tough times 🤝 family support 🤝 hard work 🤝 success
Vidarbha captain Karun Nair tells a tale – 👍 👍 By @jigsactin#VijayHazareTrophy | @IDFCFIRSTBank | @karun126 pic.twitter.com/zmDqWzb69Y
ಕರುಣ್ ನಾಯರ್ ಅದ್ಭುತ ಪ್ರದರ್ಶನಕ್ಕೆ ದಿಗ್ಗಜ ಸಚಿನ್ ತೆಂಡೂಲ್ಕರ್, ಹರಭಜನ್ ಸಿಂಗ್ ಸೇರಿದಂತೆ ಭಾರತದ ಮಾಜಿ ಆಟಗಾರರು ಪ್ರಶಂಸೆ ಮಾಡಿದ್ದರು. ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ಆದರೆ ಅವರ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳದ ಬಿಸಿಸಿಐ ಮತ್ತೊಮ್ಮೆ ಅವರನ್ನು ಕಡೆಗಣಿಸಿದೆ.
ಈ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್‌ಕರ್ ಅವರನ್ನು ಪ್ರಶ್ನಿಸಿದಾಗ, ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಕ್ರಿಕೆಟ್ ತಂಡವು ಕೇವಲ 15 ಜನರ ತಂಡ. ಹಾಗಾಗಿ ಪ್ರಸ್ತುತ ತಂಡದಲ್ಲಿ ಎಲ್ಲರಿಗೂ ಅವಕಾಶ ನೀಡುವುದು ಕಷ್ಟ. ಯಾರಾದರೂ ಗಾಯಗೊಂಡರೆ ಅವರ ಹೆಸರನ್ನು ಪರಿಶೀಲಿಸುತ್ತೇವೆ ಎಂದು ಹೇಳಿ ಜಾರಿಕೊಂಡಿದ್ದಾರೆ.
33 ವರ್ಷದ ಕರುಣ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 6 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಅವರು ಭಾರತದ ಪರವಾಗಿ ಆಡಿದ್ದಾರೆ. 2016ರ ನವೆಂಬರ್‌ನಲ್ಲಿ ಮೊಹಾಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಡಿದ ಎರಡನೇ ಟೆಸ್ಟ್‌ನಲ್ಲೇ ತ್ರಿಶತಕ ಸಿಡಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದರು.
Karnu nair 300 pic.twitter.com/jvHKOJ4yhk
— hanamanth koppada (@hanamanthk23667) January 19, 2025
2016ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಜಿಂಬಾಬ್ವೆ ವಿರುದ್ಧ 2 ಏಕದಿನ ಪಂದ್ಯಗಳನ್ನು ಆಡಿದರು. ನಂತರದ ಪಂದ್ಯಗಳಲ್ಲಿ ಫಾರ್ಮ್ ಉಳಿಸಿಕೊಳ್ಳುವಲ್ಲಿ ವಿಫಲವಾದರು. ಇದರಿಂದ ಮತ್ತೆ ತೆರೆಮರೆಗೆ ಸರಿದರು. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲೇ ನಡೆದ ಸರಣಿಯ ನಂತರ ಪ್ಲೇಯಿಂಗ್ 11ರಿಂದ ಅವರನ್ನು ಕೈಬಿಡಲಾಯಿತು.
2022ರಲ್ಲಿ ಅವರು ದೇಶೀ ಕ್ರಿಕೆಟ್‌ನಲ್ಲೂ ಫಾರ್ಮ್ ಕೊರತೆ ಅನುಭವಿಸಿದ್ದರು. ಇದರಿಂದ ಕರ್ನಾಟಕ ತಂಡದಿಂದಲೂ ಸ್ಥಾನ ಕಳೆದುಕೊಂಡರು. ನಂತರದ ಋತುವಿನಲ್ಲಿ ಅವರು ವಿದರ್ಭ ತಂಡಕ್ಕೆ ಸೇರ್ಪಡೆಯಾದರು. ನಾಯಕತ್ವದ ಹೊಣೆಯನ್ನೂ ವಹಿಸಿಕೊಂಡರು. ಈ ಬಾರಿ ಅದ್ಭುತ ಪ್ರದರ್ಶನ ನೀಡಿದ್ದರು. ಇದರ ಹೊರತಾಗಿಯೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಪ್ರದರ್ಶನ ತೋರಿದ ನಂತರ ಆಟಗಾರರ ಮೇಲೆ ಕ್ರಿಕೆಟ್ ಪ್ರೇಮಿಗಳು ಭಾರೀ ಆಕ್ರೋಶ ಪಡಿಸುತ್ತಿದ್ದಾರೆ.

ಆಟಗಾರರು ತಮ್ಮ ಫಾರ್ಮ್ ಅನ್ನು ಉತ್ತಮ ಪಡಿಸಿಕೊಳ್ಳಲು ದೇಶೀ ಕ್ರಿಕೆಟ್ ನಲ್ಲಿ ಆಡುವಂತೆ ಮಾಜಿ ಆಟಗಾರರು ಸಲಹೆಯನ್ನೂ ನೀಡಿದ್ದರು. ಆದರೆ ದೇಶೀ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಟಗಾರರನ್ನು ಆಯ್ಕೆ ಸಮಿತಿ ಪರಿಗಣಿಸದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಟಗಾರನ ಫಾರ್ಮ್ ಮತ್ತು ಪ್ರದರ್ಶನವನ್ನು ಆಧರಿಸಿ ಆಯ್ಕೆ ಮಾಡದಿದ್ದರೆ, ದೇಶೀಯ ಕ್ರಿಕೆಟ್ ನಲ್ಲಿ ಆಡುವುದರಲ್ಲಿ ಅರ್ಥವಿದೆಯೇ? ಎಂದು ಹರಭಜನ್ ಸಿಂಗ್ ಸೇರಿದಂತೆ ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಾದರೂ ಕನ್ನಡಿಗನಿಗೆ ಅವಕಾಶದ ಬಾಗಿಲು ತೆರೆಯುತ್ತಾ? ಕಾಲವೇ ಉತ್ತರಿಸಬೇಕು.