ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮ ವೇಳೆ ಉಂಟಾದ ಕಾಲ್ತುಳಿತದಲ್ಲಿ11 ಅಭಿಮಾನಿಗಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ದುರಂತದ ಬಗ್ಗೆ ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಬೇಸರ ವ್ಯಕ್ತಪಡಿಸಿದ್ದಾರೆ.
“ಚಾಂಪಿಯನ್‌ಗಳಿಗೆ ಇದೊಂದು ಡೆಡ್ಲಿ ವೆಲ್‌ಕಮ್. ಒಂದು ಕಪ್ ಪಡೆಯಲು 18 ವರ್ಷ ಕಾದರು. ಆದರೆ, ಹರ್ಷೋತ್ಸವ ಮಾಡಲು ಇನ್ನೊಂದೆರಡು ದಿನ ಕಾಯಬಹುದಿತ್ತು. ವ್ಯವಸ್ಥಿತ ಕಾರ್ಯಕ್ರಮ ಆಯೋಜಿಸಿ ಆರ್‌ಸಿಬಿ ಹಿರೋಗಳನ್ನು ಸ್ವಾಗತಿಸಬಹುದಿತ್ತು” ಎಂದು ಹೇಳಿದ್ದಾರೆ.
“ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೆ ಭಾರಿ ದುರ್ಘಟನೆಯನ್ನು ತಡೆಯಬಹುದಿತ್ತು. ಸಮಯ ಹೊಂದಾಣಿಕೆ ಮಾಡಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದರೆ ಅಮಾಯಕರ ಜೀವ ಉಳಿಯುತ್ತಿದ್ದವು” ಎಂದಿದ್ದಾರೆ.
“ಆರ್‌ಸಿಬಿ ಅಭಿಮಾನಿಗಳ ಅಭಿಮಾನ ಹುಚ್ಚುತನಕ್ಕೆ ತಿರುಗಿರುವುದು ಸ್ಪಷ್ಟವಾಗಿದೆ. ಆರ್‌ಸಿಬಿ ಕಪ್ ಗೆದ್ದಾಗ ಬಂದಿರುವ ಅಭಿಮಾನಿಗಳು ಕರ್ನಾಟಕ ತಂಡ ರಣಜಿ ಟ್ರೋಪಿ ಗೆದ್ದಾಗ ಬರುತ್ತಾರೆಯೇ? ನಮ್ಮ ಕಾಲದಲ್ಲಿ ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳನ್ನು ನೋಡಲು ಸಾಧ್ಯವಿರಲಿಲ್ಲ. ಅದೂ ಸಹ ಇಂದಿನ ಐಪಿಎಲ್ ಅಭಿಮಾನಿಗಳ ಹುಚ್ಚು ವಿಪರೀತ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇಂತಹದ್ದೆಲ್ಲ ಆಗುತ್ತೆ ಎನ್ನುವುದನ್ನು ನೋಡಿದರೆ ನಮ್ಮ ಕಾಲದಲ್ಲಿ ಆಗ ಯಾವುದೇ ಟಿ.ವಿ ಮಾಧ್ಯಮಗಳ ಚೀತ್ಕಾರಗಳಿರಲಿಲ್ಲ, ಸಮೂಹ ಸನ್ನಿಗಳಿರಲಿಲ್ಲ. ಅದಕ್ಕೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ” ಎಂದು ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.
1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸೈಯದ್ ಕಿರ್ಮಾನಿ ತಂಡದ ಸದಸ್ಯರಾಗಿದ್ದರು. ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.