ಲಿಟ್ಲ್‌ ಮಾಸ್ಟರ್‌ಗೆ ಡಾಕ್ಟರೇಟ್: ನೆಚ್ಚಿನ ಆಟಗಾರ ವಿಶ್ವನಾಥ್ ಕುರಿತು ಡಾ. ಕೆ. ಪುಟ್ಟಸ್ವಾಮಿ ಬರೆಹ

Date:

Advertisements
ಬೆಂಗಳೂರು ವಿಶ್ವವಿದ್ಯಾಲಯವು ಅಪ್ರತಿಮ ಕ್ರಿಕೆಟ್ ಆಟಗಾರ ಗುಂಡಪ್ಪ ರಂಗಪ್ಪ ವಿಶ್ವನಾಥ್ (ಜಿ ಆರ್ ವಿಶ್ವನಾಥ್) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸಾರ್ಥಕ ಕೆಲಸ ಮಾಡಿದೆ. ಜನಸಮೂಹದ ನೆಚ್ಚಿನ ಆಟಗಾರ ವಿಶ್ವನಾಥ್ ಅವರು ನನ್ನ ಹದಿಹರೆಯದ ದಿನಗಳಲ್ಲಿ ಮೂಡಿಸಿದ್ದ ಸಂಚಲನ ಮರೆಯುವಂಥದ್ದಲ್ಲ. 1983ರಲ್ಲಿ ವಿಶ್ವನಾಥ್ ಕ್ರಿಕೆಟ್‍ಗೆ ವಿದಾಯ ಹೇಳಿದರು. 1984ರಲ್ಲಿ ವಿಶ್ವನಾಥ್ ಅವರ ಆಟಕ್ಕೆ ಗೌರವ ಸಲ್ಲಿಸಲು ಬರೆದ ಲೇಖನ ಈ ದಿನದ ಓದುಗರಿಗಾಗಿ…

ಈತನ ಆಟದ ವ್ಯಕ್ತಿತ್ವಕ್ಕೆ ಅನೇಕ ಗುಣವಾಚಕಗಳಿವೆ. ಆಪದ್ಭಾಂದವ! ಲಿಟ್ಲ್ ಮಾಸ್ಟರ್! ಕ್ರಿಕೆಟ್ ಚಕ್ರವರ್ತಿ! ಕಲಾತ್ಮಕ ಆಟಗಾರ! ಇಲ್ಲ, ಇಲ್ಲ… ಮೈ ನವಿರೇಳಿಸುವ ಇಂತಹ ಯಾವ ಗುಣವಾಚಕಗಳೂ ಈತನ ವ್ಯಕ್ತಿತ್ವವನ್ನು ಹಿಡಿದಿಡಲಾರದು. ಆಟದ ಅಂಗಳದ ಕಲಾತ್ಮಕತೆಗೆ, ಕ್ರೀಡಾ ಮನೋಭಾವನೆಯ ವ್ಯಕ್ತಿತ್ವಕ್ಕೆ, ಅಸಾಮಾನ್ಯ ನಮ್ರತೆಗೆ ಈತ ಸಂಕೇತ. ನಾಮಪದವೊಂದು ಗುಣವಾಚಕವಾಗಿ ಮಾರ್ಪಡುವ ಅಪರೂಪದ ನಿದರ್ಶನ. ಪೆಲೆ ಎಂದರೆ ಫುಟ್‌ಬಾಲ್; ಧ್ಯಾನ್‌ಚಂದ್ ಎಂದರೆ ಹಾಕಿ; ಹಾಗೆಯೇ ನಮ್ಮ ಪಾಲಿಗೆ ವಿಶ್ವನಾಥ್ ಎಂದರೆ ಕ್ರಿಕೆಟ್.

ಗಂಡಪ್ಪ ರಂಗಪ್ಪ ವಿಶ್ವನಾಥ್ ಅವರಿಗಿಂತ ಹೆಚ್ಚು ಟೆಸ್ಟ್ ಆಡಿದವರಿದ್ದಾರೆ. ಅವರಿಗಿಂತಲೂ ಹೆಚ್ಚು ರನ್, ಶತಕ ಗಳಿಸಿದವರಿದ್ದಾರೆ. ಹೆಚ್ಚು ಬೌಲರ್‌ಗಳನ್ನು ಎದುರಿಸಿದವರಿದ್ದಾರೆ. ಹೆಚ್ಚಿನ ಸರಾಸರಿ ಗಳಿಸಿ ಉಳಿಸಿಕೊಂಡವರಿದ್ದಾರೆ. ಆದರೆ ದಾಖಲೆಗಳ ಸರಮಾಲೆಗಳ ಹಂಗಿಲ್ಲದೆ ಜನಮನದಲ್ಲಿ ಶಾಶ್ವತವಾಗಿ ಉಳಿದಿರುವರೆಂದರೆ ವಿಶ್ವನಾಥ್ ಒಬ್ಬರೇ!

ಆಡಿದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸಂಪಾದನೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಸಾಧನೆ. ಇಂಥ ಅಪರೂಪದ ನಿದರ್ಶನ ಬೇರೆಲ್ಲೂ ಕಾಣದು. ಅವರ ಬದುಕೇ ಅಂಥದ್ದು. ಇನ್ನೇನೂ ಪಂದ್ಯವೆಲ್ಲ ಭಾರತದ ಪಾಲಿಗೆ ಮುಗಿಯಿತು ಎನ್ನುವಾಗಲೇ ತನ್ನ ಬ್ಯಾಟನ್ನು ಮಂತ್ರದಂಡದಂತೆ ಬಳಸಿ ಎಷ್ಟೊಂದು ಪಂದ್ಯಗಳನ್ನು ಗೆಲ್ಲಿಸಿಲ್ಲ! ಆಟವನ್ನು ಸೋಲಿನ ದವಡೆಯಿಂದ ಡ್ರಾದೆಡೆಗೆ ಹೊರಳಿಸಿಲ್ಲಾ?
ಬ್ಯಾಟಿಂಗ್‌ನಲ್ಲಿ ಅವರದು ಅನುಪಮ ವಿಧಾನ. ಆಟದ ವೈಜ್ಞಾನಿಕ ನಿಯಮಗಳನ್ನು ಮೀರಿ ಕುಡಿಯೊಡೆದ ಕಲಾತ್ಮಕತೆ. ಬ್ಯಾಟ್ ಹಿಡಿದು ಚಿತ್ರಿಸುತ್ತಿದ್ದ ಅವರ ಆಟದಲ್ಲಿ ಎಲ್ಲಾ ರಂಗುಗಳ ಸಮತೋಲ ಮಿಶ್ರಣ. ದೃಢವಾದ ರೇಖೆಗಳು, ಮೃದುವಾದ ಸ್ಪರ್ಶಗಳಿಂದ ರಚಿತವಾದ ಸುಂದರ ಕಲಾಕೃತಿ. ಅವರ ಆಟ ಹಲವು ವಾದ್ಯಗಳ ಸಂಗಮದ ಕೇಳಿದಷ್ಟೂ ಹಿತವೆನಿಸುವ ಸುಮಧುರ ಸ್ವರಮೇಳ.

Advertisements

ಅವರ ಕೈಯಲ್ಲಿದ್ದುದು ಮಂತ್ರವಾದಿಯ ದಂಡ. ಕೆಲವೊಂದು ಬಾರಿ ಕತ್ತಿಯ ಅಲುಗಿನಂತೆ! ಪ್ರಸಿದ್ಧ ಕಲಾವಿದನ ಕುಂಚದಂತೆ! ಮಂತ್ರದಂಡವಾಗಲೀ, ಕತ್ತಿಯಾಗಲೀ, ಕುಂಚವಾಗಲೀ ನಿರ್ಜೀವ ವಸ್ತುಗಳು. ವ್ಯಕ್ತಿಯ ಪ್ರತಿಭಾ ಸಂಪತ್ತಿನ ಆಧಾರದ ಮೇಲೆ ಜೀವ ತುಂಬಿಕೊಳ್ಳುವ ಜಡವಸ್ತುಗಳು. ವಿಶ್ವನಾಥ್ ಹಿಡಿದ ಬ್ಯಾಟಿಗೆ ಜೀವ ಸಂಚಾರವಾಗುತ್ತಿತ್ತು. ಒಂದು ಕಾಲವಿತ್ತು, ಸ್ಕ್ವೇರ್‌ಕಟ್ ಮಾಡಬಲ್ಲ ಬಾಲನ್ನು ಸ್ಟ್ರೇಟ್‌ಡ್ರೈವ್‌ಗೆ ತಿರುಗಿಸಬಲ್ಲ, ಮನಸ್ಸಿಲ್ಲದಿದ್ದರೆ ಲೇಟ್‌ಕಟ್ ಆಗಿ ಪರಿವರ್ತಿಸಬಲ್ಲ, ಇಲ್ಲವೆ ಆನ್‍ ಡ್ರೈವ್ ಮಾಡಬಲ್ಲ ಅಥವಾ… ಇಲ್ಲ… ಕ್ರಿಕೆಟ್ ಪುಸ್ತಕದಲ್ಲಿ ನಮೂದಿಸಿರುವ ಯಾವುದೇ ಬಗೆಯ ಹೊಡೆತಕ್ಕೆ ಪರಿವರ್ತಿಸಬಲ್ಲ ಕೌಶಲ್ಯ ಇವರದಾಗಿತ್ತು. ವಿಶಿ ನಿರ್ಗಮನದಿಂದ ಅಂಥದ್ದೊಂದು ಪ್ರತಿಭೆ ಆಗಮಿಸಲೇ ಇಲ್ಲ.

7600 1486881856 1

ಕ್ರಿಕೆಟ್‍ನ ಅಂಕಿ-ಅಂಶಗಳು, ದಾಖಲೆಗಳು ಬೇರೆಯವರನ್ನು ಎಷ್ಟೋ ಎತ್ತರಕ್ಕೆ ಒಯ್ಯಬಹುದು. ಆದರೆ ಒಂದು ವಿಚಾರದಲ್ಲಂತೂ ವಿಶ್ವನಾಥ್ ಅವರನ್ನು ಬೇರೆ ಯಾರೂ ಸರಿಗಟ್ಟಲಾರರು. ವಿಶ್ವನಾಥ್ ಶತಕ ಬಾರಿಸಿದಾಗ ಭಾರತ ಗೆದ್ದಿದೆ. ಇಲ್ಲವೆ ಸೋಲಿನಿಂದ ಪಾರಾಗಿದೆ. ವಿಶ್ವನಾಥ್ ವಿಫಲರಾದಾಗ ಭಾರತ ಸೋತಿದೆ. ಅವರು ಗಳಿಸಿದ್ದು ಹದಿನಾಲ್ಕು ಶತಕ. ಅವರು ಶತಕ ಗಳಿಸಿದ ಯಾವುದೇ ಟೆಸ್ಟ್‌ನಲ್ಲಿ ಭಾರತ ಸೋತಿಲ್ಲ. 1974-75ರ ಸರಣಿಯಲ್ಲಿ ಕಲ್ಕತ್ತಾದಲ್ಲಿ 1978ರ ಸರಣಿಯಲ್ಲಿ ಮದರಾಸಿನಲ್ಲಿ 1976ರ ಸರಣಿಯ ಜಮೈಕಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ವಿಶ್ವನಾಥ್ ಶತಕ ಬಾರಿಸಿಯೇ ಜಯ ತಂದಿತ್ತರು. 1974-75ರಲ್ಲಿ ಆಂಡಿ ರಾಬರ್ಟ್ಸ್‌ನ ಬಿರುಗಾಳಿಯ ವಿರುದ್ಧ ಮದರಾಸಿನಲ್ಲಿ 97 ಗಳಿಸಿ ಔಟಾಗದೆ ಉಳಿದ ವಿಶ್ವನಾಥ್ ಆಟ ಭಾರತದ ವಿಜಯದಲ್ಲಿ ಪರಿವರ್ತಿತವಾದದ್ದು ಈಗ ಕ್ರಿಕೆಟ್ ಇತಿಹಾಸ. ತಂಡವೊಂದಕ್ಕೆ ಜಯ ತಂದಿತ್ತ ಜಗತ್ತಿನ ಸರ್ವಶ್ರೇಷ‍್ಠ ನೂರು ಬ್ಯಾಟಿಂಗ್‍ ಪಟ್ಟಿಯಲ್ಲಿ ಶತಕವಿಲ್ಲದ ಇನ್ನಿಂಗ್ಸ್ ಎಂದರೆ ವಿಶ್ವನಾಥ್ ಅವರ ಔಟಾಗದ 97!

ಆಸ್ಟ್ರೇಲಿಯಾದ ಮೆಕೆಂಜಿ, ಲಿಲಿ, ಥಾಂಸನ್, ವೆಸ್ಟ್‌ ಇಂಡೀಸ್‌ನ ಲಾನ್ಸ್‌ ಗಿಬ್ಸ್, ರಾಬರ್ಟ್ಸ್, ಮಾರ್ಷಲ್, ಪಾಕಿಸ್ತಾನದ ಸಫ್ರಾಜ್ ನವಾಜ್, ಇಮ್ರಾನ್‌ ಖಾನ್, ಇಂಗ್ಲೆಂಡ್‌ನ ಅಂಡರ್‌ವುಡ್, ವಿಲ್ಲಿಸ್, ಬಾಥಂ, ನ್ಯೂಜಿಲೆಂಡಿನ ಹ್ಯಾಡ್ಲಿ ಸೋದರರು, ಕಾಲಿಂಜ್ ಮುಂತಾದ ಸರ್ವಶ್ರೇಷ್ಠ ಬೌಲರ್‌ಗಳು ವಿಶ್ವನಾಥ್ ಅವರ ಬ್ಯಾಟಿನ ಮಾಂತ್ರಿಕ ಸ್ಪರ್ಶಕ್ಕೆ ಮಾರುಹೋಗಿದ್ದರು. ಆದರೂ ವಿಶ್ವನಾಥ್ ಎಂದೂ ಸಮೂಹ ಮಾಧ್ಯಮಗಳ ಕಣ್ಮಣಿಯಾಗಲಿಲ್ಲ. ಭಾರತದ ನಾಯಕತ್ವಕ್ಕೆ ಪೈಪೋಟಿಯಾಗಲಿಲ್ಲ, ಅಷ್ಟೇ ಏಕೆ ತೊಂಬತ್ತೊಂದು ಟೆಸ್ಟ್ ಆಡಿಯೂ ವಿಸ್ಡನ್ ಗ್ರಂಥದಲ್ಲಿ ಕಾಣಿಸಿಕೊಳ್ಳಲಿಲ್ಲ.

ಇದಕ್ಕೆಲ್ಲಾ ಅವರ ನಮ್ರತೆಯೇ ಕಾರಣ ಎನ್ನಲಾಗದು. ಕ್ರಿಕೆಟ್, ಇಂಗ್ಲಿಷ್ ಬಲ್ಲವರ, ಶ್ರೀಮಂತವರ್ಗದವರ ಸೊತ್ತಾಗಿರುವಾಗಲೇ ತನ್ನ ಅಪ್ರತಿಮ ಪ್ರತಿಭೆಯಿಂದ ಆಟದಂಗಳಕ್ಕೆ ಬಂದವರು ವಿಶ್ವನಾಥ್. ವಿಶ್ವವಿದ್ಯಾನಿಲಯದ ಸುಸಂಸ್ಕೃತ ಬದುಕಿನ ಸ್ವರ್ಶವೂ ಇಲ್ಲದ ಅವರು ಕ್ರಿಕೆಟ್‌ನ ನಾಗರಿಕ ಜಗತ್ತಿನ ನಡುವೆ ಪರಕೀಯರಾಗಿಯೇ ಉಳಿದರು. ಕ್ರಿಕೆಟ್ ಸಂಸ್ಕೃತಿಗೆ ಅಪರಿಚಿತ ನೆಂಟಿನಂತಿದ್ದ ವಿಶಿ ಹೋಟೆಲ್‌ನಿಂದ ಮೈದಾನಕ್ಕೆ ಬರುವಾಗಲೂ ಬಸ್ಸಿನ ಹಿಂದಿನ ಸೀಟಿನ ಖಾಯಂ ಗಿರಾಕಿ. ಕೇರಿಗೊಬ್ಬ ಒಳ್ಳೆಯ ಮನುಷ್ಯನಿರುವಂತೆ ವಿಶ್ವನಾಥ್ ಇದ್ದರು. ವಿಶ್ವನಾಥ್ ಇರುವಿಕೆ, ತಂಡಕ್ಕಷ್ಟೇ ಅಲ್ಲ ನಾಡಿಗೇ ಅಭಯ ಹಸ್ತದಂತಿತ್ತು. ಎಂದೂ ಯಾರೊಡನೆಯೂ ಜಗಳ ಕಾಯದ ಅವರು ವಿವಾದಗಳಲ್ಲಿ ಸಿಕ್ಕಿಕೊಳ್ಳಲಿಲ್ಲ.

ಕ್ರಿಕೆಟ್ ನಿಮಗೇನು ನೀಡಿದೆ ಎಂದರೆ ಬ್ಯಾಂಕ್ ಕೆಲಸ ಕೊಟ್ಟಿದೆ. ಈಗ ನಾನು ಅಧಿಕಾರಿಯಾಗಿ ಜೀವನದಲ್ಲಿ ಆರ್ಥಿಕವಾಗಿ ನೆಲೆಗೊಂಡಿದ್ದೇನೆ ಎಂದು ಬದುಕಿನ ಮೂಲಭೂತ ಅವಶ್ಯಕತೆ ಬಗ್ಗೆ ಮಾತನಾಡುವಷ್ಟು ಸರಳ ಮನಸ್ಸಿನವರಾಗಿದ್ದರು. ಜ್ಯೂಬಿಲಿ ಟೆಸ್ಟ್‌ನಲ್ಲಿ ಕ್ರೀಡಾ ಮನೊಧರ್ಮದ ಬಾವುಟವನ್ನು ಗರಿಗೆದರಿ ಹಾರಾಡುವಂತೆ ಮಾಡಿ, ಅಪರಾಧಿಯಾಗಿ ಶಾಶ್ವತವಾಗಿ ನಾಯಕತ್ವ ಕಳೆದುಕೊಂಡರು. ಬದುಕಿನಲ್ಲಿ ಯಶಸ್ಸು ಎಂದರೆ ಪ್ರಾಮಾಣಿಕತೆ, ಶ್ರಮ, ದುಡಿಮೆ, ಅಕೃತ್ರಿಮತೆ ಎಂದು ಸರಳವಾಗಿ ನಂಬಿದ್ದವರು. ಈಗಿನ ಕಾಲದ ಯಶಸ್ಸಿನ ಸೂತ್ರಗಳ ಗಂಧಗಾಳಿಯೂ ತಿಳಿಯದ ಮನುಷ್ಯ.

ಇದನ್ನು ಓದಿದ್ದೀರಾ?: ಮೈದಾನದ ಮಣ್ಣು ಸವಿದ ಭಾವನಾತ್ಮಕ ಅನುಭವದ ಬಗ್ಗೆ ರೋಹಿತ್ ಶರ್ಮಾ ಮಾತು

ಆದರೆ ವಿಶ್ವನಾಥ್ ಅವರ ಆಟದ ಮೋಡಿಗೆ ಮರುಳಾದ ಅಭಿಮಾನಿಗಳ ಸಂಖ್ಯೆ ಅಪಾರ. ಸಮೂಹ ಮಾಧ್ಯಮಗಳ ಹುಯಿಲಾಟ, ಮೋಸ, ಕುತಂತ್ರಗಳು ಅಭಿಮಾನಿಗಳನ್ನು ಸೃಷ್ಟಿಸಲಾರವು. ವಿಶ್ವನಾಥ್‌ರನ್ನು ನೋಡದವರೂ ಕೂಡ ಆ ಹೆಸರಿನಿಂದ ರೋಮಾಂಚಿತರಾಗಿದ್ದರು. ಭಾರತ ತಂಡಕ್ಕೆ ಆಯ್ಕೆಯಾಗಿ ತರಬೇತಿಗೆ ಬಂದಾಗ ತಾನು ವಿಶ್ವನಾಥ್ ಅವರನ್ನು ಕಂಡಕೂಡಲೇ ರೋಮಾಂಚನಗೊಂಡು ಆಟೋಗ್ರಾಫ್ ಪಡೆದ ಸಂದರ್ಭವನ್ನು ಕಪಿಲ್‍ ದೇವ್ ನೆನೆಸಿಕೊಳ್ಳುತ್ತಾರೆ. ಮ್ಯಾಚ್ ಫಿಕ್ಸಿಂಗ್‍ನಲ್ಲಿ ಹೆಸರು ಕೆಡಿಸಿಕೊಂಡ ಭಾರತದ ಪ್ರತಿಭಾವಂತ ಆಟಗಾರರ ಮಹಮದ್ ಅಜರುದ್ದೀನ್‌ಗೂ ವಿಶ್ವನಾಥ್ ಅವರೇ ಸ್ಫೂರ್ತಿ. ಭಾವನೆಂಟ ಗಾವಸ್ಕರ್ ತನ್ನ ನೆಚ್ಚಿನ ಆಟಗಾರರಾದ ರೋಹನ್‍ ಕನ್ಹಯ್ಯ, ಜೈಸಿಂಹ ಮತ್ತು ಗುಂಡಪ್ಪ ವಿಶ್ವನಾಥ್ ಅವರ ಹೆಸರನ್ನು ಸಂಯೋಜಿಸಿಯೇ ರೋಹನ್ ಜೈವಿಶ್ವ ಗಾವಸ್ಕರ್ ಎಂದು ಇಟ್ಟು ಅಭಿಮಾನ ಮೆರೆದರು. ಅಂದಿನ ಮದ್ರಾಸಿನ ಚೆಪಾಕ್ ಮತ್ತು ಕೊಲ್ಕೊತ್ತಾದ ಈಡನ್ ಗಾರ್ಡನ್ ಮತ್ತು ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ವಿಶ್ವನಾಥ್ ಮೈದಾನ ಪ್ರವೇಶಿಸಿದರೆಂದರೆ ಅವರ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿದ್ದುದ್ದನ್ನು ರೇಡಿಯೋ ಕಾಮೆಂಟಿಗರು ರೋಮಾಂಚನಗೊಂಡು ತಾವೇ ಬಣ್ಣಿಸುತ್ತಿದ್ದರು. ವಿಶ್ವನಾಥ್ ಬಗ್ಗೆ ತಳೆದ ಅಭಿಮಾನ ಒತ್ತಾಯದ ಹೇರಿಕೆಯಲ್ಲ. ಅಪ್ರಜ್ಞಾಪೂರ್ವಕವಾಗಿ ಸ್ಫುರಣಗೊಂಡ ಪ್ರೀತಿ.

ಎಪ್ಪತ್ತರ ದಶಕದಲ್ಲಿ ಭಾರತದ ಬ್ಯಾಟಿಂಗ್ ಅನ್ನು ಡಾಮಿನೇಟ್ ಮಾಡಿದ ಗಾವಸ್ಕರ್ ಮತ್ತು ವಿಶ್ವನಾಥ್ ಅವರ ಶ್ರೇಷ್ಠತೆಯನ್ನು ನಿಕಷಕ್ಕೆ ಒಡ್ಡಲು ಬಹಳಷ್ಟು ಜನ ಹೆಣಗಿದ್ದಾರೆ. ಇವೆಲ್ಲಾ ತಮ್ಮ ಆರಾಧ್ಯಮೂರ್ತಿಗಳನ್ನು ವೈಭವೀಕರಿಸಲು ನಡೆಸಿದ ವಿಫಲ ಹಂಚಿಕೆಗಳು. ಆದರೆ ವಿಚಿತ್ರವೆಂದರೆ ಒಬ್ಬರ ಶ್ರೇಷ್ಠತೆಯನ್ನು ನಿರ್ಧರಿಸಲು ಮತ್ತೊಬ್ಬರೇ ಹೋಲಿಕೆಗೆ ಬೇಕಾಗಿದೆ ಎನ್ನುವುದು. ಆದರೆ ಒಂದಂತೂ ನಿಜ. ಗಾವಸ್ಕರ್ ಆಟ ಒಂದು ಮನಮೋಹಕ ಲಲಿತಗದ್ಯ. ಮತ್ತೊಂದು ಅನಂತ ಅರ್ಥಗಳನ್ನು ಸ್ಫುರಿಸುವ ಸುಮಧುರ ಕಾವ್ಯ. ಒಂದನ್ನೊಂದು ಹೋಲಿಸಲಾದೀತೆ? ಅಲ್ಲಿಗೇ ಅದನ್ನು ಬಿಡುವುದೊಳಿತು.

DzMtRirX4AAjcsz

ವಿಶ್ವನಾಥ್ ಅವರ ಕ್ರೀಡಾ ಮನೋಭಾವನೆಯನ್ನು ಮೆಚ್ಚುವಷ್ಟೇ ಟೀಕಿಸುವ ಮಂದಿಯೂ ಇದ್ದಾರೆ. ಅವರ ಮನೋಧರ್ಮ ತಂಡದ ಗೆಲುವಿಗೆ ಮುಳುವಾಗುವುದೆಂಬ ಅಂಶವೇ ಈ ಟೀಕೆಗೆ ಕಾರಣ. ಆಟದ ಘನತೆಯನ್ನು ಮಾತ್ರ ನಂಬಿದ್ದವರು ಅವರು. ಆಟ ಈಗ ಯಾಂತ್ರಿಕತೆ, ವ್ಯಾಪಾರದ ಸಾಧನವಾಗಿ ಪರಿವರ್ತಿತವಾಗುತ್ತಿರುವ ಕಾಲದಲ್ಲಿ ಅಪ್ರಾಮಾಣಿಕತೆಗೆ ಮನ್ನಣೆ ಸಿಗುತ್ತಿದೆ.

ವಿಶ್ವನಾಥ್ ನಿವೃತ್ತಿ ಘೋಷಿಸಿದ ನಂತರ ಸ್ಪೋರ್ಟ್ಸ್ ಸ್ಟಾರ್‌ನಲ್ಲಿ ಅವರ ಬಗ್ಗೆ ಲೇಖನವೊಂದನ್ನು ಬರೆದಿರುವ ನಟ ಟಾಮ್ ಆಲ್ಟರ್ ಅವರ ಮಾತುಗಳನ್ನು ಇಲ್ಲಿ ನೆನೆಯುವುದು ಉಚಿತ.

ಆ ಲೇಖನದ ಕೊನೆಯಲ್ಲಿ ಅವರು ಹೇಳುತ್ತಾರೆ ʼʼಭವಿಷ್ಯದ ಯುಗ… ನಮ್ಮ ಮೊಮ್ಮಕ್ಕಳು ಟಿ.ವಿ. ನೋಡುತ್ತಿದ್ದಾರೆ. ಈಗ ತೀರಾ ಹೊಸದಾದ ಆಧುನಿಕ ಕ್ರಿಕೆಟ್. ತಂತ್ರಜ್ಞಾನದ ಸೋಪಜ್ಞತೆಯ ಮೆರುಗು ಅದಕ್ಕಿದೆ. ಕೃತಕ ಪಿಚ್ ಮೇಲೆ ಆಟ ಸಾಗುತ್ತಿದೆ. ಚೆಂಡು ಬ್ಯಾಟ್ ಮುಟ್ಟಿದ ತಕ್ಷಣ ಮಿನುಗುವ ಎಲೆಕ್ಟ್ರಾನಿಕ್ ದೀಪಗಳು. ಆದರೂ ಅಂಪೈರ್ ನೀಡಿದ ತೀರ್ಪನ್ನು ಪ್ರತಿಭಟಿಸುತ್ತಿರುವ ಆಟಗಾರರು. ಈ ವಿಚಿತ್ರ ಚಕಮಕಿಯನ್ನು ಮೊಮ್ಮಕ್ಕಳು ಅಚ್ಚರಿಯಿಂದ ನೋಡುತ್ತಿದ್ದಾರೆ.

ಇದನ್ನು ಓದಿದ್ದೀರಾ?: ರಾಷ್ಟ್ರಪತಿಗಳ ಭಾಷಣಕ್ಕೆ ಪ್ರಧಾನಿ ಮೋದಿ ಉತ್ತರ : ಖಾರಕ್ಕಿಂತ ‘ಕಹಿ’ಯೇ ಹೆಚ್ಚು

ʼʼಮೊಮ್ಮಕ್ಕಳಲ್ಲಿ ಶಾಂತವಾಗಿ ಕ್ರಿಕೆಟ್ ವೀಕ್ಷಿಸುತ್ತಿರುವ ಒಬ್ಬನನ್ನು ಆಚೆಗೆ ಕರೆದು ಅವನಿಗೆ ಹೀಗೆನ್ನುತ್ತೇನೆ. ನಿನಗೆ ಗೊತ್ತೇ? ಭಾರತದ ಪರ ನಾಯಕತ್ವ ವಹಿಸಿದ್ದ ವಿಶ್ವನಾಥ್ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗೆ ಔಟ್ ಕೊಟ್ಟರೂ ಒಪ್ಪದೆ ಹಿಂದಕ್ಕೆ ಕರೆಸಿದ. ಹಿಂದಕ್ಕೆ ಬಂದ ಆಟಗಾರ ತನ್ನ ತಂಡವನ್ನು ಗೆಲ್ಲಿಸುವಂಥ ಆಟವಾಡಿದ. ತಾನು ತೋರಿದ ಕ್ರೀಡಾಧರ್ಮದಿಂದ ಉಂಟಾದ ಸೋಲಿನ ಬಗ್ಗೆ ವಿಶ್ವನಾಥ್ ನನ್ನು ಕೇಳಿದಾಗ ʼಆ ಬಗ್ಗೆ ನನಗೇನೂ ವಿಷಾದವಿಲ್ಲʼ ಎಂದು ಹೇಳಿದ… ಈ ವಿಚಿತ್ರ ವಿವರವನ್ನು ಕೇಳಿದ ಮೊಮ್ಮಗ ಆಶ್ಚರ್ಯಚಕಿತನಾಗುತ್ತಾನೆ. ಆದರೂ ವಿಶ್ವನಾಥ್ ವರ್ತನೆ ಅವನ ಮೇಲೆ ಪರಿಣಾಮ ಬೀರಿರುವುದು ಕಾಣುತ್ತದೆ.ʼʼ

ʼʼಮತ್ತೆ ಹೇಳತೊಡಗುತ್ತೇನೆ. ತಾನು ಔಟ್ ಎಂದು ಗೊತ್ತಾದ ತಕ್ಷಣ ಅಂಪೈರ್ ನಿರ್ಣಯಕ್ಕೂ ಕಾಯದೆ ವಿಶ್ವನಾಥ್ ಹೊರ ನಡೆಯುತ್ತಿದ್ದ. ಹಾಗೆಯೇ ಎಂದೂ ಅಂಪೈರ್‌ನ ವಿವಾದಗ್ರಸ್ತ ತೀರ್ಪನ್ನು ಪ್ರಶ್ನಿಸುತ್ತಿರಲಿಲ್ಲ. ಒಮ್ಮೆ- ಅದೂ ಒಂದೇ ಒಂದು ಬಾರಿ- ಬಹುಶಃ ಅದು ಆತನ ಟೆಸ್ಟ್ ಜೀವನದ ಕೊನೆಯ ಇನ್ನಿಂಗ್ಸ್- ಪಾಕಿಸ್ತಾನದ ಸರ್‌ಫ್ರಾಜ್ ನವಾಜ್‌ನ ಬಾಲ್‌ಗೆ ಅಂಪೈರ್ ಎಲ್‌ಬಿ ಕೊಟ್ಟ. ಆ ಚೆಂಡು ಎಲ್‌ಬಿ ಆಗಲೂ ಸಾಧ್ಯವೇ ಇರಲಿಲ್ಲ. ತಪ್ಪು ನಿರ್ಣಯ ಕಂಡ ವಿಶಿ ಅಂಪೈರ್ ಕಡೆ ಒಂದು ಸೆಕೆಂಡ್ ಅರ್ಥಪೂರ್ಣ ನೋಟ ಬೀರಿದ. ಅನಂತರ ಹೊರ ನಡೆದ; ಮತ್ತೆ ಎಂದೂ ಟೆಸ್ಟ್ ಆಡಲು ಬರದಂತೆ”.

ಹೌದು. ಎಂದೂ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿದ, ಔಟೆಂದು ಅನಿಸಿದರೆ ತೀರ್ಪಿಗೆ ಕಾಯದ ಅವರ ಟೆಸ್ಟ್ ಜೀವನಕ್ಕೆ ಅಂಪೈರ್‌ನ ತಪ್ಪು ನಿರ್ಣಯವೊಂದು ಇತಿಶ್ರೀ ಹಾಡಿತು. ಭಾರತದ ಆಯ್ಕೆದಾರರೂ ಅಷ್ಟೇ ಕೃತಘ್ನರಾಗಿ ನಡೆದುಕೊಂಡರು. ಅಬ್ಬಾಸ್ ಆಲಿ ಬೇಗ್ ಮತ್ತು ಮೊಹಿಂದರ್ ಅಮರ್‌ನಾಥ್‌ರನ್ನು ಬಿಟ್ಟು ಬಿಟ್ಟು ಕರೆದ ಭಾರತದ ಆಯ್ಕೆ ಮಂಡಲಿ ಸದಸ್ಯರು ವಿಶ್ವನಾಥ್ ಅವರಿಗೆ ಮತ್ತೊಂದು ಅವಕಾಶವನ್ನೇ ಕೊಡಲಿಲ್ಲ.
ವಿಶ್ವನಾಥ್ ಅವರ ಅಬಿಮಾನಿಗಳೂ ಅವರಷ್ಟೇ ವಿನಯಶೀಲರು. ಅವರನ್ನು ಟೆಸ್ಟ್‌ಗೆ ಮರಳಿ ಕರೆತರುವಂತೆ ಒತ್ತಾಯಿಸಲಿಲ್ಲ; ಪ್ರತಿಭಟಿಸಲಿಲ್ಲ. ಆದರೆ ಅದೇ ವೇಳೆ ವಿಶಿಯ ಪ್ರತಿಭೆಯಲ್ಲಿ ತೃಣಮಾತ್ರವೂ ಇಲ್ಲದ, ಅವರ ಕಲಾತ್ಮಕ ಆಟದ ನೆರಳೂ ಸೋಂಕದ ಅನೇಕ ಆಟಗಾರರು ಭಾರತದ ಪರ ಆಡಿದರು. ಸ್ವತಃ ವಿಶ್ವನಾಥ್ ಇದರ ಬಗ್ಗೆ ಸೊಲ್ಲೆತ್ತಲಿಲ್ಲ. ಕ್ರಿಕೆಟ್ ಮೈದಾನದಲ್ಲಿ ಅಂಪೈರ್‌ಗಳ ನಿರ್ಣಯವನ್ನು ನಿರ್ಲಿಪ್ತವಾಗಿ ಸ್ವೀಕರಿಸುವ ರೀತಿಯಲ್ಲೇ ಆಯ್ಕೆಗಾರರ ತಿರಸ್ಕಾರವನ್ನು ಸ್ವೀಕರಿಸಿದರು. ಕರ್ನಾಟಕದ ಪರ ಆಡುತ್ತಿದ್ದಂತೆಯೇ ಒಂದು ದಿನ ನಿವೃತ್ತಿ ಘೋಷಿಸಿದರು. ನಮ್ಮ ನಡುವೆ ಆಡುತ್ತಿದ್ದ ವಿಶಿ, ಆಟದಿಂದ ಹೊರ ನಡೆದದ್ದೇ ಗೊತ್ತಾಗಲಿಲ್ಲ.

GR1

ಆದರೆ ವಿಶ್ವನಾಥ್ ನಿರ್ಗಮನದಿಂದ ಬದುಕು ರಸಹೀನವಾಗದು. ನಮ್ಮ ಮುಂದಿನ ಪೀಳಿಗೆಗೆ ಉತ್ಸಾಹದಿಂದ, ಸಂತೋಷದಿಂದ ಹೇಳುವಷ್ಟು ಆಟದ ರೋಮಾಂಚಕ ಘಟನೆಗಳನ್ನು ಬಿಟ್ಟು ಹೋಗಿದ್ದಾರೆ. ಮುಂದಿನ ಪೀಳಿಗೆಯು ಕುತೂಹಲದಿಂದ ಕೇಳುವಷ್ಟು ಸಂಗತಿಗಳು ಅಲ್ಲಿವೆ. ಬದುಕಿರುವಾಗ ಸಾಧಿಸುವುದು ದೊಡ್ಡದಲ್ಲ. ಸಾಧನೆ ಮುಂದಿನ ಪೀಳಿಗೆಗೆ ಹಸಿರಾಗಿ ಉಳಿಯುವುದೇ ದೊಡ್ಡದು. ಆ ವಿಚಾರದಲ್ಲಿ ವಿಶ್ವನಾಥ್ ಬಹಳಷ್ಟು ಸಾಧಿಸಿದ್ದಾರೆ. ಸಾವಿರಾರು ಪುಟದ ಅಂಕಿ-ಅಂಶಗಳ ವಿಸ್ಡೆನ್ ಗ್ರಂಥದಲ್ಲಿ ವಿಶ್ವನಾಥ್ ಎಂದೂ ಪ್ರಸ್ತಾಪವಾಗಲಿಲ್ಲ! ಆದರೆ ಭಾರತಕ್ಕೆ ಅದೆಷ್ಟು ಗೆಲುವು ತಂದಿತ್ತಿದ್ದಾರೆ! ತೊಂಭತ್ತೊಂದು ಟೆಸ್ಟ್‌ಗಳಲ್ಲಿ ಆಡಿ ಒಂದು ಬಾರಿ ಔಪಚಾರಿಕ ನಾಯಕತ್ವ ವಹಿಸಿದ್ದ ವಿಶ್ವನಾಥ್ ಆಟದ ನಿಯಮ, ಕುಟಿಲತೆಯನ್ನು ಮೀರಿ ಹೇಗೆ ವರ್ತಿಸಿದರು! ಕಲಾತ್ಮಕ ಆಟದಿಂದ ಅರ್ಪಣಾ ಮನೋಭಾವದಿಂದ ಎಷ್ಟೊಂದು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.

ವಿಶ್ವನಾಥ್ ಅವರ ನಮ್ರತೆ, ಆಟದ ಮೇಲಿನ ಹಿಡಿತ, ಸಮೂಹ ಮಾಧ್ಯಮಗಳಲ್ಲಿ ದಾಖಲೆಯಾಗದೇ ಇರಬಹುದು. ಆದರೆ ಜಾನಪದ ಕಾವ್ಯದಂತೆ ಅವರ ಗುಣಗಳು ಬಾಯಿಂದ ಬಾಯಿಗೆ, ಪೀಳಿಗೆಯಿಂದ ಪೀಳಿಗೆಗೆ ಸಾವಿನ ಹಂಗಿಲ್ಲದೆ ಹರಿಯುತ್ತಾ ಸಾಗುತ್ತವೆ. ವಿಶಿಷ್ಟ ಕಥೆಯಾಗಿ, ಹಲವೊಮ್ಮೆ ವ್ಯಥೆಯಾಗಿ ಎಲ್ಲರೆದೆಯ ಭಾವ ಭಿತ್ತಿಯಲ್ಲಿ ಬತ್ತದ ಚಿಲುಮೆಯಾಗಿ ಉಕ್ಕಿ ಹರಿಯುತ್ತಿವೆ.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X