ಐಪಿಎಲ್‌ನಲ್ಲಿ ಬ್ಯಾಟ್ ತಪಾಸಣೆ ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಕಳೆದ ಋತುವಿನವರೆಗೂ ಅದು ಡ್ರೆಸ್ಸಿಂಗ್ ಕೋಣೆಯೊಳಗೆ ಮಾತ್ರ ಸೀಮಿತವಾಗಿತ್ತು. ಪ್ರಸ್ತುತ ಐಪಿಎಲ್‌ನಲ್ಲಿ ಬ್ಯಾಟರ್‌ಗಳು ಆಡುವ ದೀರ್ಘ ಮತ್ತು ದೊಡ್ಡ ಹೊಡೆತಗಳನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಹೆಚ್ಚು ಜಾಗರೂಕರಾಗಿರಲು ನಿರ್ಧರಿಸಿದೆ.
ಐಪಿಎಲ್ 2025 ರ 18ನೇ ಆವೃತ್ತಿಯ ಭಾನುವಾರ(ಏ.13) ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ರಾಜಸ್ಥಾನ ರಾಯಲ್ಸ್ ತಂಡವನ್ನು ಅವರದೇ ನೆಲದಲ್ಲಿ 9 ವಿಕೆಟ್‌ಗಳಿಂದ ಮಣಿಸಿತ್ತು. ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಆದರೆ ಈ ಎರಡೂ ಪಂದ್ಯಗಳಲ್ಲಿ, ಕ್ರಿಕೆಟ್ ಮೈದಾನದಲ್ಲಿ ಅಪರೂಪಕ್ಕೆ ಕಂಡುಬರುವ ಒಂದು ವಿದ್ಯಮಾನ ನಡೆಯಿತು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ 28ನೇ ಪಂದ್ಯದಲ್ಲಿ, ಆನ್‌ಫೀಲ್ಡ್ ಅಂಪೈರ್‌ಗಳು ರಾಜಸ್ಥಾನ ತಂಡದ ಶಿಮ್ರಾನ್ ಹೆಟ್ಮೈರ್, ದೇವದತ್ ಪಡಿಕ್ಕಲ್ ಮತ್ತು ಆರ್‌ಸಿಬಿಯ ಫಿಲ್ ಸಾಲ್ಟ್ ಅವರ ಬ್ಯಾಟ್‌ಗಳನ್ನು ಪರೀಕ್ಷಿಸಿದರು. ಸಂಜೆ ನಡೆದ 29ನೇ ಪಂದ್ಯದಲ್ಲೂ ಇದೇ ರೀತಿ ಘಟನೆ ಕಂಡುಬಂದಿತು. ಅಲ್ಲಿಯೂ ಆನ್‌ಫೀಲ್ಡ್ ಅಂಪೈರ್‌ಗಳು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್‌ಅನ್ನು ಪರೀಕ್ಷಿಸಿದರು.
ಆಟಗಾರರ ಬ್ಯಾಟ್ ಪರಿಶೀಲನೆಯ ನಂತರ ಕ್ರೀಡಾಂಗಣದಲ್ಲಿ ನೆರೆದಿದ್ದ ಹಾಗೂ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಕೋಟ್ಯಂತರ ಪ್ರೇಕ್ಷಕರಲ್ಲಿ ಹಲವು ರೀತಿಯ ಪ್ರಶ್ನೆಗಳು ಕಾಡಿದ್ದು ಸುಳ್ಳಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಬ್ಯಾಟ್‌ಗಳನ್ನು ಪರಿಶೀಲಿಸುವುದು ಐಪಿಎಲ್ ಪ್ರೋಟೊಕಾಲ್‌ನ ಭಾಗವಾಗಿದೆ. ಆಟಗಾರರಿಗೆ ಅನಾನುಕೂಲತೆ ತಪ್ಪಿಸಲು ಆಟಗಾರರ ಯಾವುದೇ ಬ್ಯಾಟ್‌ಅನ್ನು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಪರಿಶೀಲಿಸಲು ಅಧಿಕಾರಿಗಳಿಗೆ ಬಿಸಿಸಿಐ ಅಧಿಕಾರ ನೀಡಿದೆ. ಅಂಪೈರ್‌ಗಳು ಬ್ಯಾಟ್ ಗೇಜ್(ಪರಿಶೀಲಿಸುವ ಸಾಧನ) ಹೊಂದಿರುತ್ತಾರೆ. ಆಟಗಾರರ ಬ್ಯಾಟುಗಳು ಬ್ಯಾಟ್ ಗೇಜ್ ಮೂಲಕ ಹಾದುಹೋದರೆ, ಅದನ್ನು ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತದೆ. ಡ್ರೆಸ್ಸಿಂಗ್ ರೂಮ್ ಒಳಗೆ ಇನಿಂಗ್ಸ್ ಪ್ರಾರಂಭವಾಗುವ ಮೊದಲು ಆನ್‌ಫೀಲ್ಡ್ ಅಂಪೈರ್‌ಗಳು ಬ್ಯಾಟ್ ತಪಾಸಣೆ ನಡೆಸುತ್ತಾರೆ.

ಆದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಂದು ಬ್ಯಾಟ್ ತಪಾಸಣೆ ಮಾಡಿದರೆ, ಮೈದಾನಕ್ಕೆ ಮತ್ತೊಂದು ಬ್ಯಾಟ್ ತರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಏಕೆಂದರೆ ಆಟಗಾರರ ಕಿಟ್‌ನಲ್ಲಿ ಅನೇಕ ಬ್ಯಾಟ್‌ಗಳು ಇರುತ್ತವೆ. ಇವುಗಳಲ್ಲಿ ತೂಕ, ಎತ್ತರ, ಅಗಲಗಳಲ್ಲಿ ವ್ಯತ್ಯಾಸವಿರುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಟಗಾರರ ಬ್ಯಾಟ್‌ಗಳ ತೂಕ, ಎತ್ತರ, ಅಗಲ ಮುಂತಾದವುಗಳು ನಿರ್ದಿಷ್ಟ ಮಿತಿಯಲ್ಲಿರಬೇಕು ಎಂದು ಮಾನದಂಡ ನಿಗದಿಪಡಿಸಿದೆ.
ಏಪ್ರಿಲ್ 13ರಂದು ನಡೆದ ಎರಡು ಪಂದ್ಯಗಳಲ್ಲಿ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೈರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್‌ಗಳನ್ನು ಅಂಪೈರ್‌ಗಳು ಪರಿಶೀಲನೆಗೊಳಪಡಿಸಿದರು. ಇವುಗಲ್ಲಿ ಗಾತ್ರದ ಮಿತಿಗಿಂತ ಹೆಚ್ಚಿದ್ದ ಬ್ಯಾಟ್‌ಗಳನ್ನು ಬದಲಿಸಲಾಗಿತು. ಹಾರ್ದಿಕ್ ಅವರ ಬ್ಯಾಟ್ ಐಸಿಸಿ ನಿಗದಿಪಡಿಸಿದ 4.25 ಇಂಚುಗಳ ಅಳತೆಯಲ್ಲೇ ಇತ್ತು. ಆದರೆ ಮತ್ತೊಂದು ಪಂದ್ಯದಲ್ಲಿ ಫಿಲ್ ಸಾಲ್ಟ್ ಮತ್ತು ಶಿಮ್ರಾನ್ ಹೆಟ್ಮೈರ್ ಅವರ ಬ್ಯಾಟ್‌ಗಳು ನಿಯಮಿತ ಅಳತೆಯಿಲ್ಲದ ಕಾರಣ ಬ್ಯಾಟ್ ಬದಲಾಯಿಸಲು ಅಂಪೈರ್‌ಗಳು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಸಿಎಸ್‌ಕೆ ತಂಡದಿಂದ ರುತುರಾಜ್ ನಿರ್ಗಮನ; ಪೂರ್ಣ ಟೂರ್ನಿಗೆ ಧೋನಿ ನಾಯಕ
ಇಷ್ಟು ಮಾತ್ರವಲ್ಲದೆ ಪ್ರಸಕ್ತ ಆವೃತ್ತಿಯಲ್ಲಿ ಸೂರ್ಯಕುಮಾರ್ ಸೇರಿದಂತೆ ಒಂದಿಷ್ಟು ಕ್ರಿಕೆಟಿಗರ ಬ್ಯಾಟ್‌ಅನ್ನು ಪರಿಶೀಲಿಸಲಾಗಿದೆ. ಪಾಂಡ್ಯ ಅವರಂತೆಯೆ ಸೂರ್ಯಕುಮಾರ್ ಅವರ ಬ್ಯಾಟ್ ಕೂಡ ಮಾನದಂಡದ ಅಳತೆಯನ್ನು ಮೀರಿಲ್ಲ ಎಂದು ಖಚಿತವಾಗಿದೆ. 18ನೇ ಐಪಿಎಲ್ ಆವೃತ್ತಿಯ ಕೆಲವು ಪಂದ್ಯಗಳಲ್ಲಿ ಆಟಗಾರರ ಬ್ಯಾಟ್‌ನ ಬಿರುಸು ಹೆಚ್ಚಾದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಬ್ಯಾಟ್‌ಗಳ ಗಾತ್ರ ಸೇರಿದಂತೆ ಪರೀಕ್ಷೆಯನ್ನು ಆರಂಭಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ.
ಬಿಸಿಸಿಐ ಬ್ಯಾಟ್‌ಗಳನ್ನು ಮೈದಾನದಲ್ಲಿ ಪರೀಕ್ಷಿಸಲು ಕಾರಣವೇನು?
2025ನೇ ಐಪಿಎಲ್ ಅವೃತ್ತಿಯಲ್ಲಿ ಬ್ಯಾಟರ್‌ಗಳಿಂದ ದೀರ್ಘ ಸಿಕ್ಸರ್‌ಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬಿಸಿಸಿಐಗೆ ಅನುಮಾನಗಳು ವ್ಯಕ್ತವಾಗಿರಬಹುದು. ಪ್ರೀಮಿಯರ್ ಲೀಗ್‌ನಲ್ಲಿ ಬಾರಿಸಲಾಗುವ ದೀರ್ಘ ಸಿಕ್ಸರ್‌ಗಳಿಗೆ ಅನುಗುಣವಾಗಿ, ಮೈದಾನದಲ್ಲಿರುವ ಅಂಪೈರ್‌ಗಳು ಸಂಪ್ರದಾಯವನ್ನು ಮುರಿದು ಬ್ಯಾಟರ್‌ಗಳ ಬ್ಯಾಟ್‌ನ ಗಾತ್ರದ ಪರಿಶೀಲನೆಯನ್ನು ಪ್ರಾರಂಭಿಸಿದ್ದಾರೆ. ಬ್ಯಾಟರ್‌ಗಳು ನಿಯಮಗಳನ್ನು ಮೀರಿ ತಾವೆ ಸಿದ್ಧಪಡಿಸಿಕೊಂಡ ಬ್ಯಾಟ್‌ಗಳ ಮೂಲಕ ರನ್‌ಗಳ ಪ್ರಯೋಜನಗಳನ್ನು ಪಡೆದು ಆಟದ ಘನತೆಗೆ ಕಪ್ಪು ಚುಕ್ಕೆ ಉಂಟು ಮಾಡುವುದನ್ನು ತಡೆಯುವುದು ಬ್ಯಾಟ್ ತಪಾಸಣೆಯ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
ಬ್ಯಾಟ್ ತಪಾಸಣೆ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಕಳೆದ ಋತುವಿನವರೆಗೂ ಅದು ಡ್ರೆಸ್ಸಿಂಗ್ ಕೋಣೆಯೊಳಗೆ ಮಾತ್ರ ಸೀಮಿತವಾಗಿತ್ತು. ಆದರೆ ಪ್ರಸ್ತುತ ಐಪಿಎಲ್‌ನಲ್ಲಿ ಬ್ಯಾಟರ್‌ಗಳು ಆಡುವ ದೀರ್ಘ ಮತ್ತು ದೊಡ್ಡ ಹೊಡೆತಗಳನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಹೆಚ್ಚು ಜಾಗರೂಕರಾಗಿರಲು ನಿರ್ಧರಿಸಿದೆ. ಇವೆಲ್ಲ ಕಾರಣದಿಂದ, ನೇರ ಪಂದ್ಯದ ಸಮಯದಲ್ಲಿ ಬ್ಯಾಟರ್‌ಗಳ ಬ್ಯಾಟ್‌ಗಳನ್ನು ಪರಿಶೀಲಿಸುವ ಹಕ್ಕನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆನ್ ಫೀಲ್ಡ್ ಅಂಪೈರ್‌ಗಳಿಗೆ ನೀಡಿದೆ. ಪಂದ್ಯದ ಸಮಯದಲ್ಲಿ ಬ್ಯಾಟರ್‌ನ ಬ್ಯಾಟ್ ನಿಗದಿತ ಗಾತ್ರಕ್ಕಿಂತ ದಪ್ಪ, ಅಗಲ ಮುಂತಾದವುಗಳು ವ್ಯತ್ಯಾಸವಾಗಿದೆ ಎಂದು ಅಂಪೈರ್‌ಗಳು ಭಾವಿಸಿದರೆ, ಅವರು ಪಂದ್ಯದ ಮಧ್ಯದಲ್ಲಿಯೇ ಅವರ ಬ್ಯಾಟ್ ಅನ್ನು ಪರಿಶೀಲಿಸಬಹುದು.

ಬ್ಯಾಟ್‌ನ ಗಾತ್ರವನ್ನು ಹೇಗೆ ಅಳೆಯಲಾಗುತ್ತದೆ, ಮಾನದಂಡವೇನು?
ಅಂಪೈರ್‌ಗಳು ನಿಗದಿತ ಬ್ಯಾಟ್ ಗಾತ್ರದ ಬ್ಯಾಟ್ ಗೇಜ್(ಅಳೆಯುವ ಸಾಧನ) ಅನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಬ್ಯಾಟರ್‌ಗಳ ಬ್ಯಾಟ್ ಈ ಗೇಜ್ ಮೂಲಕ ಹಾದು ಹೋದರೆ ಯಾವುದೇ ಸಮಸ್ಯೆ ಇಲ್ಲ. ಬ್ಯಾಟ್ ಅದರ ಮೂಲಕ ಹಾದು ಹೋಗದಿದ್ದರೆ ಬ್ಯಾಟ್‌ನ ಬ್ಲೇಡ್ ನಿಗದಿತ ಅಗಲಕ್ಕಿಂತ ಅಗಲವಾಗಿದೆ ಎಂದರ್ಥ. ನಿಯಮಗಳ ಪ್ರಕಾರ, ಬ್ಯಾಟ್‌ನ ಮಧ್ಯ ಭಾಗದ ಅಗಲ 2.64 ಇಂಚುಗಳಿಗಿಂತ ಹೆಚ್ಚಿರಬಾರದು. ಬ್ಯಾಟ್‌ನ ಬ್ಲೇಡ್ ಈ ಆಯಾಮಗಳನ್ನು ಮೀರಬಾರದು. ಅಗಲ: 4.25 ಇಂಚು/10.8 ಸೆಂಮೀ, ಆಳ: 2.64 ಇಂಚು/6.7 ಸೆಂಮೀ, ಅಂಚುಗಳು: 1.56 ಇಂಚು/4.0 ಸೆಂಮೀ ಇರಬೇಕು.ಇದಲ್ಲದೆ, ಯಾವುದೇ ಬ್ಯಾಟ್ ‘ಬ್ಯಾಟ್ ಗೇಜ್’ ಮೂಲಕವೇ ಹಾದುಹೋಗುವಂತಿರಬೇಕು. ಇಷ್ಟಿದ್ದರೆ ಯಾವುದೇ ಸಮಸ್ಯೆಯಿಲ್ಲ. ಇದರಲ್ಲಿ ಚೂರು ವ್ಯತ್ಯಾಸವಾದರೂ ಬ್ಯಾಟ್‌ಅನ್ನು ಬದಲಿಸಬೇಕಾಗುತ್ತದೆ.
ಆದರೆ ತೂಕದ ವಿಷಯದಲ್ಲಿ ನಿರ್ದಿಷ್ಟವಾದ ಮಿತಿಯಿಲ್ಲ. ಆದರೆ ಆಟಗಾರರು ಸಾಮಾನ್ಯವಾಗಿ ತಮಗೆ ಅನುಕೂಲವಾಗುವ ತೂಕವನ್ನು ಆಯ್ದುಕೊಳ್ಳುತ್ತಾರೆ. ಮೈದಾನದಲ್ಲಿರುವ ಅಂಪೈರ್‌ಗಳು ಇಲ್ಲಿಯವರೆಗೆ ಹೆಟ್ಮೈರ್, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಹಾರ್ದಿಕ್ ಪಾಂಡ್ಯ ಸೇರಿ ಒಂದಷ್ಟು ಆಟಗಾರರ ಬ್ಯಾಟ್‌ಗಳನ್ನು ಮಾತ್ರ ಪರಿಶೀಲಿಸಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದ ತಂಡಗಳ ಬ್ಯಾಟರ್‌ಗಳ ಬ್ಯಾಟನ್ನು ಪರಿಶೀಲಿಸಿಲ್ಲ. ಅಥವಾ ಡ್ರೆಸ್ಸಿಂಗ್ ರೂಮ್‌ನಲ್ಲಿ ತಪಾಸಣೆಗೊಳಪಡಿಸಲಾಗಿದೆಯೆ ಎಂಬುದನ್ನು ಕೂಡ ಇಲ್ಲಿಯವರೆಗೂ ಬಹಿರಂಗಪಡಿಸಿಲ್ಲ. ಇದಕ್ಕೆಲ್ಲ ಬಿಸಿಸಿಐ ಸ್ಪಷ್ಟ ಉತ್ತರ ನೀಡಬೇಕಿದೆ. ಒಟ್ಟಾರೆ ಆಟ ಕೂಡ ಪಾರದರ್ಶಕವಾಗಿ ನಡೆಯಬೇಕಲ್ಲವೆ?