ಇಂಗ್ಲೆಂಡ್ ವಿರುದ್ಧ ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ನೇತೃತ್ವದ ಬೌಲಿಂಗ್ ದಾಳಿಯಿಂದಾಗಿ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್ ಸಮಬಲ ಸಾಧಿಸಿವೆ.
ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ಯಾಪ್ಟನ್ ಆಲಿ ಪೋಪ್ ಟಾಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ 224 ರನ್‌ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 247 ರನ್ ಮಾಡಿದ್ದರಿಂದ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 396 ರನ್‌ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಇಂಗ್ಲೆಂಡ್ ಗೆಲುವಿಗೆ 374 ರನ್‌ಗಳ ಗುರಿಯನ್ನು ನೀಡಿತ್ತು. ಎರಡನೇ ದಿನದಾಟದ ಅಂತ್ಯದ ವೇಳೆಗೆ ನೈಟ್ ವಾಚ್‌ಮೆನ್ ಆಗಿ ಬ್ಯಾಟಿಂಗ್ ಮಾಡಲು ಬಂದಿದ್ದ ಬೌಲರ್ ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದರು. ಟೀಮ್ ಇಂಡಿಯಾ ಪರವಾಗಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆಗೆ ಮೂರನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನಡೆಸುವಲ್ಲಿ ಯಶಸ್ವಿಯಾಗಿದ್ದರು.
ಯಶಸ್ವಿ ಜೈಸ್ವಾಲ್ 2 ಸಿಕ್ಸ್ ಹಾಗೂ 14 ಬೌಂಡರಿಗಳ ನೆರವಿನಿಂದ ಶತಕ ಬಾರಿಸುವಲ್ಲಿ(118 ರನ್) ಸಫಲರಾಗಿದ್ದರು. ಜೈಸ್ವಾಲ್ ಔಟ್ ಆದ ಬಳಿಕ ರವೀಂದ್ರ ಜಡೇಜಾ ಅರ್ಧಶತಕ (53 ರನ್)ದ ಕೊಡುಗೆ ನೀಡಿದ್ದರು. ಎರಡನೇ ಇನ್ನಿಂಗ್ಸ್‌ನ ಕೊನೆಯಲ್ಲಿ ಉಳಿದಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಇಂಗ್ಲೆಂಡ್ ಗೆಲುವಿಗೆ 374 ರನ್‌ಗಳ ಗುರಿಯನ್ನು ನೀಡುವಲ್ಲಿ ಸಫಲರಾಗಿದ್ದರು.
ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ 50 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಭಾನುವಾರ ಬೆಳಗ್ಗೆ ಸಿರಾಜ್, ಆಕಾಶ್ ದೀಪ್ ಮತ್ತು ಪ್ರಸಿದ್ಧಕೃಷ್ಣ ಅವರು ಅಮೋಘ ಬೌಲಿಂಗ್ ಮಾಡಿದರು. ಇದರ ಫಲವಾಗಿ ಬೆನ್ ಡಕೆಟ್ ಮತ್ತು ಓಲಿ ಪೋಪ್ ಅವರ ವಿಕೆಟ್‌ಗಳನ್ನು ಕ್ರಮವಾಗಿ ಪ್ರಸಿದ್ಧ ಮತ್ತು ಸಿರಾಜ್ ಕಬಳಿಸಿದರು. ಇದರಿಂದಾಗಿ ಇಂಗ್ಲೆಂಡ್ ತಂಡವು 106 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರಿಂದ ಗಿಲ್ ಬಳಗವು ಜಯ ಸಾಧಿಸುವ ಉಮೇದಿನಲ್ಲಿತ್ತು. ಆದರೆ ಕ್ರೀಸ್‌ಗೆ ಬಂದ ಬ್ರೂಕ್ 19 ರನ್ ಮಾತ್ರ ಗಳಿಸಿದ್ದ ವೇಳೆ ಸಿರಾಜ್ ಜೀವದಾನ ನೀಡಿದ್ದರು. ಆ ಬಳಿಕ ಟಿ20 ಮಾದರಿಯ ಬ್ಯಾಟಿಂಗ್ ಪ್ರದರ್ಶಿಸಿದ ಅವರು, 111 ರನ್ ಗಳಿಸಿ ಟೀಮ್ ಇಂಡಿಯಾದ ಆಸೆಗೆ ತಣ್ಣೀರು ಹಾಕಿದ್ದರು.
ಬ್ರೂಕ್ ಹಾಗೂ ಮಾಜಿ ನಾಯಕ ಜೋ ರೂಟ್ (105; 152 ಎಸೆತ) ಅವರಿಬ್ಬರೂ ಶತಕ ದಾಖಲಿಸಿದ್ದಲ್ಲದೇ 195 ರನ್‌ಗಳ ಜೊತೆಯಾಟವಾಡಿದ್ದರಿಂದ ಬಹುತೇಕ ಇಂಗ್ಲೆಂಡ್ ಗೆಲುವಿನ ಕಡೆಗೆ ಸಾಗಿತ್ತು.
ಪಂದ್ಯದ ನಾಲ್ಕನೇ ದಿನ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಗೆಲುವಿಗೆ 35 ರನ್‌ಗಳ ಅವಶ್ಯಕತೆ ಇತ್ತು. ಈ ನಡುವೆ ಮಂದ ಬೆಳಕಿನ ಕಾರಣ ಪಂದ್ಯವನ್ನು 5ನೇ ದಿನಕ್ಕೆ ಮುಂದೂಡಲಾಗಿತ್ತು. ಇಂಗ್ಲೆಂಡ್ ಕೈಯ್ಯಲ್ಲಿದ್ದ ಪಂದ್ಯವನ್ನು ಕನ್ನಡಿಗ ಬೌಲರ್ ಪ್ರಸಿದ್ಧ್ ಕೃಷ್ಣ ಹಾಗೂ ಟೀಮ್ ಇಂಡಿಯಾದ ಮಿಯಾ ಭಾಯ್ ಎಂದೇ ಪ್ರಸಿದ್ದರಾಗಿರುವ ಮೊಹಮ್ಮದ್ ಸಿರಾಜ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು ಇನ್ನೇನು ಗೆಲುವಿಗೆ ಹತ್ತಿರವಿರುವಾಗ ಅಟ್ಕಿನ್‌ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಪಂದ್ಯದ ‘ಹೀರೋ’ ಎನಿಸಿಕೊಂಡರು.
ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಲ್ಲದೇ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಪ್ರಸಿದ್ಧ್ ಕೃಷ್ಣ ಅವರ ಬಿಗಿ ಬೌಲಿಂಗ್ ದಾಳಿ ದಾಳಿಯೂ ಕೂಡ ಇಂಗ್ಲೆಂಡ್ ಆಟಗಾರರನ್ನು ಕಟ್ಟಿಹಾಕುವಲ್ಲಿ ನೆರವಾಯಿತು. ಐದನೇ ಟೆಸ್ಟ್‌ನಲ್ಲಿ ಕೂಡ ಪ್ರಸಿದ್ಧ್ ನಾಲ್ಕು ವಿಕೆಟ್ ಪಡೆದರು. ಸರಣಿಯ ಒಟ್ಟು ಮೂರು ಪಂದ್ಯಗಳಲ್ಲಿ ಆಡಿ 14 ವಿಕೆಟ್ ಪಡೆಯುವ ಮೂಲಕ, ಈ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಐವರ ಪಟ್ಟಿಯನ್ನು ಸೇರಿಕೊಂಡರು.
ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಎರಡರಲ್ಲಿ ಜಯ ಸಾಧಿಸಿತ್ತು. ಭಾರತ ಒಂದನ್ನು ಗೆದ್ದಿತ್ತು. ಮತ್ತೊಂದು ಪಂದ್ಯ ಡ್ರಾ ಆಗಿತ್ತು. ಈ ಟೆಸ್ಟ್ ಪಂದ್ಯವನ್ನು ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಗೆದ್ದ ಹಿನ್ನೆಲೆಯಲ್ಲಿ ಸರಣಿ 2-2 ಸಮಬಲ ಆಗಿದೆ.

you are in point of fact a excellent webmaster. The site loading pace is amazing. It kind of feels that you’re doing any distinctive trick. Also, The contents are masterpiece. you have done a great task in this matter!