ಝೆನ್ ಜಾಡಿನಲ್ಲಿರುವ ಜೊಕೊವಿಕ್, ಸಂತನಾದರು ಬಹಳ ತಣ್ಣಗೆ ಪ್ರತಿಭಟಿಸುತ್ತಾನೆ, ತನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವರೊಡನೆ ನಿಲ್ಲುತ್ತಾನೆ, ವಿಚಲಿತನಾಗದೆ ತನ್ನ ಸಾಧನೆಗಳೇ ಮಾತನಾಡಲು ಬಿಟ್ಟು ಬಿಟ್ಟಿದ್ದಾನೆ...
ಒಮ್ಮೆ ಒಂದು ಹೆಬ್ಬಾವು ಹರಿದು ಹೋಗುತ್ತಿತ್ತಂತೆ. ಅಲ್ಲೇ ನೆಲದ ಮೇಲೆ ಬಿದ್ದಿದ್ದ ಹರಿತವಾದ ಗರಗಸವೊಂದಕ್ಕೆ ಹೆಬ್ಬಾವಿನ ದೇಹ ತಾಗಿ ತರಚಿದ ಪುಟ್ಟ ಗಾಯವಾಯಿತಂತೆ. ಗೋಪಗೊಂಡ ಹೆಬ್ಬಾವು ಗರಗಸವನ್ನು ಸುತ್ತಿ ಹಾಕಿಕೊಂಡು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿತಂತೆ. ಆದರೆ ಪಾಪ ಹೆಬ್ಬಾವಿನ ಮೈಯೆಲ್ಲಾ ಹರಿದು ಹೋಗಿ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿತಂತೆ… ಕ್ರೋಧ ನಮಗೆಷ್ಟು ಮಾರಕವಲ್ಲವೇ?
ಈ ಹೆಬ್ಬಾವಿನ ದುರಂತ ಕಥೆ ನೊವಾಕ್ ಜೊಕೊವಿಕ್‌ಗೆ ಬಲು ಪ್ರಿಯವಾದ ಕಥೆ. ನ್ಯಾಟೋ ಪಡೆಗಳು ಸೆರ್ಬಿಯಾದ ಬೆಲ್ಗ್ರೇಡ್ ಪಟ್ಟಣದ ಮೇಲೆ ಬಾಂಬಿನ ಸುರಿಮಳೆಗಯ್ಯುವಾಗ ಜೊಕೊವಿಕ್ ಇಡೀ ಕುಟುಂಬ ಇಲಿಗಳಂತೆ ಸುರಂಗಗಳಲ್ಲಿ ಕಾಲ ಕಳೆಯುತ್ತಿದ್ದರು. ನೂರಾರು ಮುಗ್ಧ ಸರ್ಬಿಯನ್ನರು ಪ್ರಾಣ ಬಿಟ್ಟರು. ಬೆಲ್ಗ್ರೇಡ್ ಪಟ್ಟಣದಲ್ಲೆಲ್ಲಾ “fuck Nato” ಎಂಬ ಗೋಡೆ ಬರಹಗಳು ಕಾಣುತ್ತಿದ್ದವು. ಆತ್ಮೀಯರ, ಗೆಳೆಯರ ಸಾವಿನ ಸುದ್ದಿ ಜೊಕೊವಿಕ್‌ನನ್ನು ಕ್ರೋಧದ ಕೂಪಕ್ಕೆ ತಳ್ಳುತ್ತಿದ್ದವು. ಈ ಕ್ರೋಧವನ್ನು ಬಹಳಷ್ಟು ದಿನ ತನ್ನ ಮನದಲ್ಲೇ ಹೊತ್ತು ಜೊಕೊವಿಕ್ ಸಾಗಿದ.
ಆದರೆ ಒಂದು ದಿನ ಅವನಿಗೆ ಅನ್ನಿಸಿತು ಕ್ರೋಧವನ್ನೇ ಹೊತ್ತು ಸಾಗಿದರೆ ಜೀವನದಲ್ಲಿ ಏನು ಸಾಧಿಸಬಲ್ಲೆನು? ಕ್ರೋಧದ ಹಿಡಿತಕ್ಕೆ ಸಿಕ್ಕಷ್ಟೂ ವಿಲ ವಿಲ ಒದ್ದಾಡಿ ನಾನೂ ಹೆಬ್ಬಾವಿನಂತೆ ಪ್ರಾಣಬಿಡಬೇಕಾಗುತ್ತದೆ ಅಷ್ಟೇ. ಕ್ರೋಧಕ್ಕಿಂತ ಕ್ಷಮೆ ದೊಡ್ಡದು, ಪ್ರೀತಿ ದೊಡ್ಡದು ಎಂದು ಅರಿತ ಜೊಕೊವಿಕ್ ತನ್ನ ಅಂತರಂಗದ ಭಾವನೆಗಳ ಬಗ್ಗೆ ಮನೋಮಗ್ನನಾದ. ಝೆನ್ ದಾರಿ ಹಿಡಿದ.
ಇದನ್ನು ಓದಿದ್ದೀರಾ?: ಆಸ್ಟ್ರೇಲಿಯಾ ಓಪನ್: ಸೆಮಿಯಿಂದ ಹೊರ ಸರಿದ ಜೋಕೊವಿಚ್
ಸರ್ಬಿಯನ್ ಭಾಷೆಯಲ್ಲಿ inat ಎಂಬ ಪದವಿದೆ. ಅದಕ್ಕೆ ಸರಿಯಾದ ಇಂಗ್ಲಿಷ್ ಪದವಿಲ್ಲ. ಎಂತಹ ಕಠಿಣ ಸನ್ನಿವೇಶವನ್ನೂ ಸವಾಲಾಗಿ ಸ್ವೀಕರಿಸುವುದು, ಮೊಂಡುತನ, ಹಠ, ಪ್ರತಿಭಟನೆ, ಕಿಚ್ಚು, ಜನರ ಅನಿಸಿಕೆಗಳು ತಪ್ಪು ಎಂಬ ಅರಿವಿನಿಂದ ಹುಟ್ಟುವ ಕೋಪ ಮತ್ತು ಆ ಕೋಪವೇ ಜನರ ತಪ್ಪನ್ನು ತಪ್ಪು ಎಂದು ಸಾಬೀತು ಮಾಡಲು ಪ್ರೇರಣೆಯಾಗುವುದು ಸರ್ಬಿಯನ್ ಭಾಷೆಯ inat ಪದದ ವಿಸ್ತೃತ ಅರ್ಥವೆನ್ನಬಹುದು! ಈ inat ಪದಕ್ಕೆ ಮತ್ತೊಂದು ಹೆಸರೇ ನೊವಾಕ್ ಜೊಕೊವಿಕ್.
ನೊವಾಕ್ ಜೊಕೊವಿಕ್ಕನಿಗೆ ಸಲ್ಲಬೇಕಾದ ಯಾವ ಗೌರವವೂ ಸುಲಭವಾಗಿ ಸಿಕ್ಕಿಲ್ಲ. ಇಂದು ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದ ವೇಳೆಯಲ್ಲಿ ಜೊಕೊವಿಕ್ ಗಾಯಗೊಂಡು ಟೆನಿಸ್ ಅಂಗಳದಿಂದ ಹೊರನಡೆಯುವಾಗ ಪ್ರೇಕ್ಷಕರು ಆತನನ್ನ ಅವಮಾನಿಸಿದರು. ಕಳೆದ ಹದಿನೈದು ವರ್ಷಗಳಲ್ಲಿ ಹತ್ತು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಚಾಂಪಿಯನ್ ಒಬ್ಬನಿಗೆ ತೋರುವ ಗೌರವವಿದು!
ಕ್ವಾಟರ್ ಫೈನಲ್ ಪಂದ್ಯದಲ್ಲೇ ಆತ ಗಾಯಗೊಂಡಿದ್ದ. ಅಂದು ಆತ ತೆಗೆದುಕೊಂಡ ಬ್ರೇಕ್ ಕುರಿತು ಹಿರಿಯ ಟೆನಿಸ್ ಆಟಗಾರರು, ವಿಶ್ಲೇಷಕರು, ಜೊಕೊವಿಕ್ ನಾಟಕವಾಡುತ್ತಾನೆ, ಆತ ಮೋಸಗಾರ ಎಂಬೆಲ್ಲಾ ಹೇಳಿಕೆ ನೀಡಿದ್ದರು! ಯುರೋಪಿಯನ್ ದೇಶವಲ್ಲದ ಪುಟ್ಟ ಸರ್ಬಿಯನ್ ಅಪ್ರತಿಮನೊಬ್ಬ ಎದುರಿಸಬೇಕಾದ ಅವಮಾನವಿದು!
ಸ್ವಿಸ್ ದೇಶದ ರೋಜರ್ ಫೆಡರರ್, ಸ್ಪೇನ್ ದೇಶದ ರಫಾಯಲ್ ನಡಾಲ್‌ರಂತಹ ದಿಗ್ಗಜರ ನಡುವೆ, ಟೆನ್ನಿಸ್ ಇತಿಹಾಸವೇ ಇಲ್ಲದ ಪುಟ್ಟ ಸರ್ಬಿಯನ್ ದೇಶದಿಂದ ಬಂದ ಜೊಕೊವಿಕ್ ತನ್ನ ಅಸ್ತಿತ್ವ ಸ್ಥಾಪಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಜೊಕೊವಿಕ್ ಆಟದ ವೈಖರಿ, ಆತನ inat ಅನ್ನು ಒಳಗೊಳಗೇ ಪ್ರಶಂಸಿಸುವ ಹಲವರು ಜೊಕೊವಿಕ್‌ನನ್ನು ಸಾರ್ವಕಾಲಿಕ ಶ್ರೇಷ್ಠನೆಂದು ಒಪ್ಪಲು ತಯಾರಿಲ್ಲ. ಟೆನಿಸ್ ಇತಿಹಾಸದಲ್ಲೇ ಅತ್ಯಧಿಕ ಇಪ್ಪತ್ನಾಲ್ಕು ಗ್ರ್ಯಾಂಡ್ ಸ್ಲಾಮ್ ಗೆದ್ದನಂತರವೂ ರೋಜರ್ ಮತ್ತು ನಡಾಲ್ ಅವರೊಂದಿಗೆ ಹೋಲಿಕೆ ಮಾಡುವ ಚಟಕ್ಕೆ ಇಂದಿಗೂ ಪೂರ್ಣ ವಿರಾಮ ಬಿದ್ದಿಲ್ಲ. ಜೊಕೊವಿಕ್ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ ಗೆದ್ದಿರಬಹುದು, ಆದರೆ ಆತನೊಬ್ಬ ಪರಮ ಕಪಟಿ. ರೋಜರ್ ಮತ್ತು ನಡಾಲ್‌ಗೆ ಸಮನಲ್ಲ ಎಂದು ಷರ ಬರೆಯಲು ಪಾಶ್ಚಿಮಾತ್ಯ ಮಾಧ್ಯಮಗಳು ಸತತ ಪ್ರಯತ್ನವನ್ನು ದಶಕಗಳಿಂದ ನಡೆಸಿವೆ. ಇಂದಿಗೂ ಪ್ರಯತ್ನ ಜಾರಿಯಲ್ಲಿದೆ.
ಜೊಕೊವಿಕ್ ಟೆನಿಸ್ ಆಡುವ ಕನಸು ಚಿಗುರಿದ್ದು ಆರನೇ ವಯಸ್ಸಿಗೆ. ಅಮೆರಿಕಾದ ಪೀಟ್ ಸಂಪ್ರಾಸ್ ಜೊಕೊವಿಕ್‌ಗೆ ಅಚ್ಚುಮೆಚ್ಚು. ಎಂತಹ ಸಂದಿಗ್ಧ ಗಳಿಗೆಯಲ್ಲೂ, ಅತಿಯಾದ ಒತ್ತಡದಲ್ಲೂ, ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೆ ಆಡಬಲ್ಲ ಅಂತರ್ಮುಖಿ ಪೀಟ್. ಅವನನ್ನು ನೋಡುತ್ತಲೇ ಟೆನಿಸ್ ಆಡಲು ಕಲಿತ ಜೊಕೊವಿಕ್ ಮಾತ್ರ ಅಂತರ್ಮುಖಿಯಲ್ಲ ಆದರೆ ಮಾನಸಿಕವಾಗಿ ಪೀಟ್ ಸಂಪ್ರಾಸ್‌ನನ್ನು ಮೀರಿಸುವ ಸದೃಢ ಪ್ರತಿಭೆಯಾಗಿ ಜೊಕೊವಿಕ್ ಬೆಳೆದಿದ್ದಾನೆ ಎಂಬುದು ಪಾಶ್ಚಿಮಾತ್ಯ ಮಾಧ್ಯಮಗಳಿಗೆ, ವಿಶ್ಲೇಷಕರಿಗೆ ಅರಗಿಸಿಕೊಳ್ಳಲಾಗದ ವಿಷಯ.
ಟೆನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠರಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ಕೊಡುವುದು ಕಷ್ಟದ ಕೆಲಸವೆಂಬುದು ಹಲವರ ಅನಿಸಿಕೆ. ನೀರಿನಲ್ಲಿ ಹಂಸ ತೇಲುವಂತೆ ಕೋರ್ಟಿನಲ್ಲಿ ಸಲೀಸಾಗಿ ಚಲಿಸುತ್ತಿದ್ದ ಮಾಂತ್ರಿಕ ರೋಜರ್ ಶ್ರೇಷ್ಠ ಎನ್ನುವವರು ಬಹಳಷ್ಟು ಮಂದಿ ಇದ್ದಾರೆ. ಒಮ್ಮೆ ಪ್ರಖ್ಯಾತ ಬರಹಗಾರ, ನೊಬೆಲ್ ವಿಜೇತ ಜೇ ಎಂ ಕಟ್ ಸೆ ರೋಜರ್ ಆಟವನ್ನು ನೋಡಿ “something like the human ideal made visible” ಎಂದು ಬರೆದಿದ್ದ. ಇನ್ನು ರಭಸದ ಹೊಡೆತಕ್ಕೆ, ಮಿಂಚಿನ ವೇಗಕ್ಕೆ ಪ್ರಸಿದ್ಧಿಯಾದ ನಡಾಲ್ ಅಭಿಮಾನಿಗಳು ಆತನೇ ಶ್ರೇಷ್ಠನೆಂದು ವಾದಿಸುತ್ತಾರೆ. ಆದರೆ ಇವರಿಬ್ಬರನ್ನು ಹಿಂದಿಕ್ಕಿ ಹೋದ ಜೊಕೊವಿಕ್‌ನನ್ನು ಇಂದಿಗೂ ಸ್ವೀಕರಿಸುವ ಮನಸ್ಥಿತಿ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ, ಟೆನಿಸ್ ಪರಿಣಿತರಲ್ಲಿಲ್ಲ.
ಇದನ್ನು ಓದಿದ್ದೀರಾ?: ಕ್ರಿಕೆಟ್ | ಟೀಂ ಇಂಡಿಯಾ ನಿದ್ದೆಗೆಡಿಸಿದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್!
ಜೊಕೊವಿಕ್ ಮೊದ ಮೊದಲು ಇದರ ಬಗ್ಗೆ ತಲೆ ಕೆಡಿಸಿಕೊಂಡು ಕ್ರೋಧದಿಂದ ಜಿದ್ದಿಗೆ ಬಿದ್ದ ಹಾಗೆ ಆಡುತ್ತಿದ್ದ ನಿಜ. ಆದರೆ ಬಹುಬೇಗ ಆತ ಝೆನ್ ಹಾದಿಯಲ್ಲಿ ಸಾಗಿ ಬದಲಾದ. ಹಾಸ್ಯ ಚಟಾಕಿಗಳನು ಹಾರಿಸುತ್ತ ಹೊಸಗಾಲದ ಆಟಗಾರರ ಅಚ್ಚುಮೆಚ್ಚಿನ ತಾರೆಯಾದ. ವಾದ ವಿವಾದಗಳನ್ನು ಮೀರಿದ ಸ್ಥಿತಪ್ರಜ್ಞನಾದ.
ಝೆನ್ ಸಂತನಾದರು ಆತ ಬಹಳ ತಣ್ಣಗೆ ಪ್ರತಿಭಟಿಸುತ್ತಾನೆ, ತನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವರೊಡನೆ ನಿಲ್ಲುತ್ತಾನೆ, GOAT ವಿಷಯದ ಕುರಿತು ವಿಚಲಿತನಾಗದೆ ತನ್ನ ಸಾಧನೆಗಳೇ ಮಾತನಾಡಲು ಬಿಟ್ಟು ಬಿಟ್ಟಿದ್ದಾನೆ. His records speaks. His action speaks. His humanitarian works speak. ಆತ ಕ್ರೋಧದಿ ಗರಗಸಕ್ಕೆ ಸುತ್ತಿಕೊಳ್ಳುವ ಹೆಬ್ಬಾವು ಆಗುವುದನ್ನು ಬಹಳ ಹಿಂದೆಯೇ ಮರೆತಿದ್ದಾನೆ. ಜೊಕೊವಿಕ್ ಎಂದೆಂದಿಗೂ ನಿಜ ಟೆನಿಸ್ ಪ್ರೇಮಿಗಳ ಮನದಲ್ಲಿ ಉಳಿಯುತ್ತಾನೆ.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ