ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ಆಟಗಾರರು ಮತ್ತಷ್ಟು ಮೈಲಿಗಲ್ಲನ್ನು ತಲುಪಿದ್ದಾರೆ. ಟ್ರೋಫಿ ಜಯಿಸಲು ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಮುಂಚೆ ಮೊದಲ ಸ್ಥಾನದಲ್ಲಿದ್ದ ಶ್ರೀಲಂಕಾದ ವನಿಂದು ಹಸರಂಗ ಎರಡನೇ ಸ್ಥಾನಕ್ಕಿಳಿದಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದರು.
ಟೀಂ ಇಂಡಿಯಾದ ಉಪ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಜೂನ್ 29ರಂದು ಬಾರ್ಬೊಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ
ಭಾರತ ತಂಡ ನೀಡಿದ್ದ 177 ರನ್‌ಗಳ ಸವಾಲನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟುವ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಆಟವಾಡುತ್ತಿದ್ದ ಹೆನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಅವರ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗೆಲುವಿನ ಪ್ರಮುಖ ಕಾರಣಕರ್ತರಾಗಿದ್ದರು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ 8 ಪಂದ್ಯಗಳ 6 ಇನಿಂಗ್ಸ್‌ಗಳನ್ನು ಆಡಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ವಿಭಾಗದಲ್ಲಿ 151.57 ಸ್ಟ್ರೈಕ್ ರೇಟ್‌ನಲ್ಲಿ ಒಂದು ಅರ್ಧ ಶತಕದೊಂದಿಗೆ 144 ರನ್ ಬಾರಿಸಿದ್ದರು. ಅದೇ 8 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಅತ್ಯುತ್ತಮ ಬೌಲಿಂಗ್ 3/20 ಆಗಿತ್ತು.
ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಟೀಂ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಐಸಿಸಿ ಶ್ರೇಣಿಯಲ್ಲಿ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ ಬುಮ್ರಾ 15 ವಿಕೆಟ್‌ಗಳನ್ನು ಕಬಳಿಸಿದ್ದರು.
