ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ಜಯಗಳಿಸಿದ್ದು ಹೇಗೆ? ಗೆಲುವಿಗೆ ತಂತ್ರ ರೂಪಿಸಿದ್ದು ಹೇಗಿತ್ತು?

Date:

Advertisements
ಸರಣಿಯು ಇಂಗ್ಲೆಂಡ್‌ ಕಡೆ ವಾಲಿರುವುದರಿಂದ ಮ್ಯಾಂಚೆಸ್ಟರ್‌ನ ನಾಲ್ಕನೇ ಟೆಸ್ಟ್‌ ಪಂದ್ಯ ಯಾವ ರೀತಿ ಇರಲಿದೆ ಹಾಗೂ ಆಂಗ್ಲರು ಮತ್ಯಾವ ತಂತ್ರವನ್ನು ಅನುಸರಿಸಲಿದ್ದಾರೆ ಎಂಬುದು ಎಲ್ಲರ ಕುತೂಹಲವಾಗಿದೆ...

ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಲಾರ್ಡ್ಸ್‌ನಲ್ಲಿ ನಡೆದ ತೆಂಡೂಲ್ಕರ್‌ – ಆಂಡರ್‌ಸನ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಗೆಲುವು ಅಷ್ಟು ಸುಲಭದ್ದಾಗಿರಲಿಲ್ಲ. ಗೆಲುವಿಗಾಗಿ ಭಾರತ ಹತ್ತಿರ ಬರುತ್ತಿದೆ ಎನ್ನುವಾಗಲೆ ಆಂಗ್ಲ ಆಟಗಾರರು ಹಲವು ತಂತ್ರಗಳನ್ನು ಪ್ರಯೋಗಿಸುತ್ತಾ ಬಂದರು. ಇದು ಕೇವಲ 4ನೇ ಇನಿಂಗ್ಸ್‌ ಮಾತ್ರವಲ್ಲ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಾಗಲೇ ತಮ್ಮ ತಂತ್ರಗಾರಿಕೆಯನ್ನು ಶುರು ಮಾಡಿದ್ದರು. ಈ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್ ತಂತ್ರವು ನಾಯಕ ಬೆನ್ ಸ್ಟೋಕ್ಸ್ ಮತ್ತು ಮುಖ್ಯ ಕೋಚ್‌ ಬ್ರೆಂಡನ್ ಮೆಕಲಮ್ ಹಿಂದಿನ ಪಂದ್ಯಗಳಿಗಿಂತ ಭಿನ್ನವಾಗಿತ್ತು. ಜೂನ್ 2022ರಿಂದ ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಜಗತ್ತಿಗೆ ಮಾದರಿಯಾಗಿತ್ತಾದರೂ, ಭಾರತದ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಆಂಗ್ಲರ ತಂಡ ತಾಳ್ಮೆಯಿಂದ, ನಿಧಾನವಾಗಿ ಆಡಿತು.

ಸಾಮಾನ್ಯವಾಗಿ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಇಂಗ್ಲೆಂಡ್ ತಂಡ ಈ ಬಾರಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಇದು ಕೇವಲ ಎರಡನೇ ಬಾರಿಗೆ ತವರಿನ ಟೆಸ್ಟ್‌ನಲ್ಲಿ ಈ ತಂತ್ರವನ್ನು ಅನುಸರಿಸಿತು. ಈ ಬದಲಾವಣೆಯು ಭಾರತದ ಬೌಲಿಂಗ್ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಲಾರ್ಡ್ಸ್‌ನ ವಿಶಿಷ್ಟ ಪಿಚ್‌ಗೆ ಹೊಂದಿಕೊಂಡಿತ್ತು. ಐದನೇ ದಿನದ ಕಠಿಣ ಪಿಚ್‌ನ ಪರಿಸ್ಥಿತಿಯಲ್ಲಿ 192 ರನ್‌ಗಳ ಸುಲಭ ಸವಾಲನ್ನು ರಕ್ಷಿಸಿಕೊಂಡು 22 ರನ್‌ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಲಾರ್ಡ್ಸ್‌ನಲ್ಲಿ ತಾಳ್ಮೆಯ, ಲೆಕ್ಕಾಚಾರದ ಆಟವನ್ನು ಆಡಿತು. ತವರಿನ ಟೆಸ್ಟ್‌ಗಳಲ್ಲಿ ಅಪರೂಪವಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಭಾರತದ ಬೌಲಿಂಗ್ ಶಕ್ತಿಯನ್ನು ಎದುರಿಸಲು ಮತ್ತು ಲಾರ್ಡ್ಸ್ ಪಿಚ್‌ನ ವಿಶಿಷ್ಟತೆಯನ್ನು ಬಳಸಿಕೊಳ್ಳಲು ತಂತ್ರ ರೂಪಿಸಿತು.

ರನ್‌ಗಳಿಗಾಗಿ ಹರಸಾಹಸಪಟ್ಟರೂ ಕೂಡ ಇಂಗ್ಲಿಷ್ ಬ್ಯಾಟರ್‌ಗಳು ತಾಳ್ಮೆಯನ್ನು ತೋರಿದರು. ಈ ತರದ ಆಟವನ್ನು ಆಧುನಿಕ ಕ್ರಿಕೆಟ್‌ನಲ್ಲಿ ಪ್ರೇಕ್ಷಕರು ಹೆಚ್ಚಾಗಿ ಇಷ್ಟಪಡುವುದಿಲ್ಲ, ಅವರಿಗೆ ಹೊಡಿಬಡಿ ಹೆಚ್ಚಾಗಿ ಬೇಕು. ಆದರೂ ಇದು ಗೆಲುವನ್ನು ಪಡೆಯುವುದಾಗಿತ್ತು ಎಂಬುದನ್ನು ತೋರಿಸಿಕೊಟ್ಟರು. ಮೊದಲ ಇನಿಂಗ್ಸ್‌ನಲ್ಲಿ 112.3 ಓವರ್‌ಗಳಲ್ಲಿ 387 ರನ್‌ಗಳನ್ನು ಗಳಿಸಿದ ಇಂಗ್ಲೆಂಡ್, ರನ್‌ ಸರಾಸರಿ ಇದ್ದಿದ್ದು 3.44 ಮಾತ್ರ. ವೇಗವಾಗಿ ಆಡುವ ಸಮಯದಲ್ಲೂ ತವರಿನಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡಿದರು. ಇದು ಪರಿಸ್ಥಿತಿಗಳಿಗೆ ಮತ್ತು ಎದುರಾಳಿಗೆ ಹೊಂದಿಕೊಳ್ಳುವ ತಂಡದ ಸಾಮರ್ಥ್ಯವನ್ನು ಬಹಿರಂಗಪಡಿಸಿತು.

ಎರಡನೇ ಇನಿಂಗ್ಸ್‌ನಲ್ಲಿ 62.1 ಓವರ್‌ಗಳಲ್ಲಿ 3.08 ರನ್‌ರೇಟ್‌ ಆಧಾರದಲ್ಲಿ 192 ರನ್‌ಗಳನ್ನು ಗಳಿಸಿದ್ದು ಇನ್ನೂ ನಿಧಾನವಾಗಿತ್ತು. ಭಾರತದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೊದಲ ದಿನದಂದು ಶಿಸ್ತಿನ ಬೌಲಿಂಗ್‌ನೊಂದಿಗೆ ಇಂಗ್ಲೆಂಡ್‌ನ ಬ್ಯಾಟರ್‌ಗಳಿಗೆ ಸವಾಲು ಒಡ್ಡಿದರು. ಸತತ 28 ಎಸೆತಗಳಲ್ಲಿ ರನ್‌ಗಳಿಲ್ಲದಂತೆ ಓಲಿ ಪೋಪ್ ಮತ್ತು ಜೋ ರೂಟ್‌ಗೆ ಒತ್ತಡ ಹೇರಿದರು. ಸಿರಾಜ್‌ ಅವರ ”ಬಾಜ್, ಬಾಜ್, ಬಾಜ್‌ಬಾಲ್” ಮತ್ತು ಶುಭಮನ್ ಗಿಲ್‌ರ ”ನೀರಸ ಟೆಸ್ಟ್ ಕ್ರಿಕೆಟ್” ಎಂಬ ಗೇಲಿಯ ಹೊರತಾಗಿಯೂ, ಇಂಗ್ಲೆಂಡ್ ತನ್ನ ತಂತ್ರಕ್ಕೆ ಬದ್ಧವಾಗಿ, ಎದುರಾಳಿಯನ್ನು ಕಟ್ಟಿ ಹಾಕುವತ್ತ ಗಮನ ಕೇಂದ್ರೀಕರಿಸಿದ ಇಂಗ್ಲಿಷ್ ಆಟಗಾರರು ತಮ್ಮ ತಂತ್ರಕ್ಕೆ ಬದ್ಧರಾದರು.

ಇಂಗ್ಲೆಂಡ್‌ನ ತಂತ್ರಗಾರಿಕೆ ಕೇವಲ ರನ್‌ಗಳನ್ನು ಗಳಿಸುವುದರ ಬಗ್ಗೆ ಮಾತ್ರವಲ್ಲದೆ, ಭಾರತವನ್ನು ದೀರ್ಘಕಾಲ ಮೈದಾನದಲ್ಲಿ ಇರಿಸುವುದರ ಬಗ್ಗೆಯೂ ಈ ತಂತ್ರ ಅಡಗಿತ್ತು. 112.3 ಓವರ್‌ಗಳ ಬ್ಯಾಟಿಂಗ್ ಭಾರತದ ಬೌಲರ್‌ಗಳನ್ನು ಆಯಾಸಗೊಳಿಸಿತ್ತು, ಜೊತೆಗೆ ಲಂಡನ್‌ನ ಬಿಸಿಲಿನ ವಾತಾವರಣವು ಪಿಚ್‌ನಲ್ಲಿ ಬದಲಾವಣೆ ತಂದಿತು. ‘ಪಿಚ್‌ ಬದಲಾವಣೆಗೊಳ್ಳುತ್ತಿದೆ’ ಎಂದು ಮೆಕಲಮ್ ಮಾತುಗಳು ಕೂಡ ಫಲ ನೀಡಿತು. ಮೊದಲ ಮೂರು ದಿನಗಳಲ್ಲಿ ಪಿಚ್ ಶಾಂತವಾಗಿದ್ದರೂ, ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ಕರಾರುವಾಕ್ ಬೌನ್ಸ್, ವೇಗ ಮತ್ತು ಸ್ಪಿನ್‌ ಬೌಲಿಂಗ್‌ನಿಂದ ಬ್ಯಾಟಿಂಗ್ ಕಷ್ಟಕರವಾಯಿತು. ಇದು ಇಂಗ್ಲೆಂಡ್‌ಗೆ ಅನುಕೂಲವಾಯಿತು, ಏಕೆಂದರೆ ಭಾರತದ ಬೆನ್ನಟ್ಟುವಿಕೆ ಗುರಿಯು 192 ರನ್‌ಗಳಷ್ಟೇ ಆಗಿದ್ದರೂ, ಪಿಚ್‌ನ ಸ್ವರೂಪವು ರನ್ ಗಳಿಕೆಯನ್ನು ತಡೆಯಿತು.

ಇದನ್ನು ಓದಿದ್ದೀರಾ? ವಿಜೃಂಭಣೆಯ ಹೊಸ್ತಿಲಲ್ಲಿ ಟೆಸ್ಟ್‌ ಕ್ರಿಕೆಟ್: ಮತ್ತೆ ಮರುಕಳಿಸಲಿರುವ ಇತಿಹಾಸ  

ಮೂರನೇ ದಿನದ ಕೊನೆಯಲ್ಲಿ ಎರಡೂ ತಂಡಗಳ ನಡುವಿನ ಉದ್ವಿಗ್ನತೆಯು ಆಟದ ರೋಮಾಂಚನವನ್ನು ಮತ್ತಷ್ಟು ಹೆಚ್ಚಿಸಿತು. ಇಂಗ್ಲೆಂಡ್‌ ತನ್ನ ಆಟದ ಸಮಯವನ್ನು ತಡವಾಗಿಸುವ ತಂತ್ರವು ಭಾರತಕ್ಕೆ ಕೋಪ ತರಿಸಿತು, ಆದರೆ ಕೊನೆಯ ಎರಡು ದಿನಗಳಲ್ಲಿ ಆಟವು ಕುತೂಹಲವನ್ನು ಇಮ್ಮಡಿಗೊಳಿಸಿತು. ಜೋ ರೂಟ್ (40, 96 ಎಸೆತ) ಮತ್ತು ಬೆನ್ ಸ್ಟೋಕ್ಸ್ (33, 96 ಎಸೆತ) ಎರಡನೇ ಇನಿಂಗ್ಸ್‌ನಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ 192 ರನ್‌ಗಳ ಗುರಿಯನ್ನು ನೀಡಿದರು. ಈ ಗುರಿಯು ದೊಡ್ಡದಾಗಿರದಿದ್ದರೂ, ಬದಲಾವಣೆಗೊಂಡ ಪಿಚ್ ಅದನ್ನು ಕಠಿಣವಾಗಿಸಿತು. ಭಾರತದ ಗುರಿ ಮುಟ್ಟುವಿಕೆ ವಿಫಲವಾಯಿತು, ರವೀಂದ್ರ ಜಡೇಜಾರ 61 ರನ್‌ಗಳ ಹೋರಾಟವು ಪಿಚ್‌ನ ಅನಿರೀಕ್ಷಿತತೆಯನ್ನು ಮೀರಲಾಗಲಿಲ್ಲ. ಕೊನೆಯ ಎರಡು ವಿಕೆಟ್‌ಗಳಲ್ಲಿ ಬುಮ್ರಾ ಹಾಗೂ ಸಿರಾಜ್‌ ಅವರ ರಕ್ಷಣಾತ್ಮಕ ಆಟವು ಫಲ ನೀಡಲಿಲ್ಲ. ಇಂಗ್ಲೆಂಡ್‌ ಸ್ಪಿನ್ನರ್ ಬಶೀರ್‌ ಎಸೆದ ಚೆಂಡು ಸಿರಾಜ್‌ ಬ್ಯಾಟಿಗೆ ತಗುಲಿ ಸ್ಟಂಪ್‌ಗೆ ತಾಕಿ ಬೇಲ್ ಬಿದ್ದಾಗ ಕ್ರಿಕೆಟ್‌ ಆಟ ತಂತ್ರಗಾರಿಕೆ, ಪರಿಶ್ರಮದ ಜೊತೆ ಕಾಕತಾಳೀಯ ಅಥವಾ ಅದೃಷ್ಟದ ಆಟ ಎಂಬುದನ್ನು ಜಗತ್ತಿಗೆ ತೋರಿಸಿತು. ಈ ಜಯ ಇಂಗ್ಲೆಂಡ್‌ನ ಒಗ್ಗಟಿನ ಆಟವೆಂದು ಒತ್ತಿಹೇಳಿತು. ತಮ್ಮ ಆಕ್ರಮಣಕಾರಿ ಶೈಲಿಯಿಂದ ಹೊರಗೆ ತಾಂತ್ರಿಕ ಆಟವಾಡಿದ ಆಂಗ್ಲರು ಯಶಸ್ಸು ಕಂಡರು.

ಕೈಗೂಡಿದ ಸ್ಟೋಕ್ಸ್‌, ಬ್ರೆಂಡನ್ ಮೆಕಲಮ್ ತಂತ್ರ

ಬೆನ್‌ ಸ್ಟೋಕ್ಸ್‌ನ ನಾಯಕತ್ವದಲ್ಲಿ ಇಂಗ್ಲೆಂಡ್ ತವರಿನ ಟೆಸ್ಟ್‌ಗಳಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ವಿರಳ. 2022ರ ಜೂನ್‌ನಿಂದ ಇಂಗ್ಲೆಂಡ್ ಕೇವಲ ಎರಡು ಬಾರಿ ಮಾತ್ರ ತವರಿನ ಟೆಸ್ಟ್‌ಗಳಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 2023ರ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ, ಮತ್ತೊಂದು ಈಗ ಲಾರ್ಡ್ಸ್‌ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯಗಳಲ್ಲಿ ಈ ನಿರ್ಧಾರವು ಕೇವಲ ಆಕಸ್ಮಿಕವಾಗಿರಲಿಲ್ಲ, ಪಿಚ್‌ನ ಸ್ವರೂಪ, ಲಂಡನ್‌ನ ತೀವ್ರ ಹವಾಮಾನ ಮತ್ತು ಭಾರತದ ಬೌಲಿಂಗ್ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಯಿತು. ಸ್ಟೋಕ್ಸ್ ಸ್ವತಃ, “ನಾವು ಒಂದೇ ರೀತಿಯ ಆಟಕ್ಕೆ ಸೀಮಿತವಾಗಿಲ್ಲ. ಎಡ್ಜ್‌ಬಾಸ್ಟನ್‌ನಲ್ಲಿ ಮೋಡಕವಿದ ವಾತಾವರಣದಿಂದಾಗಿ ನಾವು ಮೊದಲು ಬೌಲಿಂಗ್ ಆಯ್ಕೆ ಮಾಡಿದೆವು. ಆದರೆ ಲಾರ್ಡ್ಸ್‌ನಲ್ಲಿ ಸೂರ್ಯನ ಬಿಸಿಲು ಮತ್ತು ಪಿಚ್‌ನ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಿದೆವು” ಎಂದು ಸ್ಪಷ್ಟಪಡಿಸಿದ್ದರು. ಹಾಗೆಯೇ ಕೋಚ್‌ ಬ್ರೆಂಡನ್ ಮೆಕಲಮ್ ಪ್ರತಿದಿನವೂ ತಂಡದ ಆಟಗಾರರೊಂದಿಗೆ ಸಭೆ ನಡೆಸಿ ಭಾರತದ ಬೌಲಿಂಗ್‌ ಅಸ್ತ್ರಕ್ಕೆ ಯಾವ ರೀತಿ ಸಜ್ಜಾಗಬೇಕೆಂಬುದನ್ನು ತಮ್ಮ ಆಟಗಾರರಿಗೆ ಮನದಟ್ಟು ಮಾಡಿದರು. ಇವೆಲ್ಲವೂ ಅಂತಿಮ ಫಲಿತಾಂಶದಲ್ಲಿ ಫಲ ನೀಡಿತು.

ಬೆನ್‌ ಸ್ಟೋಕ್ಸ್‌ನ ನಾಯಕತ್ವವು ನಿರ್ಣಾಯಕವಾಗಿತ್ತು, ಅವರು ಕಟ್ಟುನಿಟ್ಟಿನ ಬದಲಾವಣೆ ಹೊಂದಾಣಿಕೆಗೆ ಒತ್ತು ನೀಡಿದರು. ಎಡ್ಜ್‌ಬಾಸ್ಟನ್‌ನಲ್ಲಿ ಬೌಲಿಂಗ್ ಆಯ್ಕೆ ಪರಿಸ್ಥಿತಿಗೆ ಸೂಕ್ತವಾಗಿತ್ತು, ಆದರೆ ಲಾರ್ಡ್ಸ್‌ನಲ್ಲಿ ಹವಾಮಾನ ಮತ್ತು ಪಿಚ್‌ನ ನಿರೀಕ್ಷೆಗಳ ಆಧಾರದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಲಾರ್ಡ್ಸ್‌ನ ಇತಿಹಾಸವು ಇಂಗ್ಲೆಂಡ್‌ನ ನಿಧಾನಗತಿಯ ಆಟಕ್ಕೆ ಪೂರಕವಾಗಿತ್ತು, ಏಕೆಂದರೆ ಈ ಪಿಚ್‌ 3.61 ರ ಸರಾಸರಿ ರನ್ ರೇಟ್‌ನೊಂದಿಗೆ ಇಂಗ್ಲೆಂಡ್‌ನ ಟೆಸ್ಟ್ ಮೈದಾನಗಳಲ್ಲಿ ಅತ್ಯಂತ ಕಡಿಮೆ ರನ್ ರೇಟ್ ಹೊಂದಿದೆ. ಲಾರ್ಡ್ಸ್‌ನ ವಿಭಿನ್ನ ಪಿಚ್‌ ಹಾಗೂ ಅಲ್ಲಿನ ಐತಿಹಾಸಿಕ ಮಹತ್ವವು ತಂಡಗಳನ್ನು ಎಚ್ಚರಿಕೆಯ ಆಟಕ್ಕೆ ಒತ್ತಾಯಿಸುತ್ತದೆ. ಈಗ, ಸರಣಿಯು ಇಂಗ್ಲೆಂಡ್‌ ಕಡೆ ವಾಲಿರುವುದರಿಂದ ಮ್ಯಾಂಚೆಸ್ಟರ್‌ನ ನಾಲ್ಕನೇ ಟೆಸ್ಟ್‌ ಪಂದ್ಯ ಯಾವ ರೀತಿ ಇರಲಿದೆ ಹಾಗೂ ಆಂಗ್ಲರು ಮತ್ಯಾವ ತಂತ್ರವನ್ನು ಅನುಸರಿಸಲಿದ್ದಾರೆ ಎಂಬುದು ಎಲ್ಲರ ಕುತೂಹಲವಾಗಿದೆ. ಈ ಗೆಲುವು ಇಂಗ್ಲೆಂಡ್‌ನ ಸುರಕ್ಷಿತ ವಲಯದಿಂದ ಹೊರಗಿರುವ ಗೆಲುವಿನ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ಅಲ್ಲದೆ ಅವರ ವಿಕಸನಗೊಳ್ಳುತ್ತಿರುವ ಟೆಸ್ಟ್ ಕ್ರಿಕೆಟ್‌ನ ನಿಜವಾದ ತತ್ವಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

Download Eedina App Android / iOS

X