ಟೆಸ್ಟ್ ಕ್ರಿಕೆಟ್‌ನಲ್ಲಿ ಮಂದಬೆಳಕಿನಿಂದಾಗಿ ಆಟ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಹೆಜ್ಜೆಯಿಟ್ಟಿದೆ. ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಿಗೆ ‘ಪಿಂಕ್ ಬಾಲ್’ (ಗುಲಾಬಿ ಚೆಂಡು) ಬಳಸುವ ವಿನೂತನ ಪ್ರಯೋಗಕ್ಕೆ ಐಸಿಸಿ ಮುಂದಾಗಿದೆ. 2015ರಿಂದ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ ಗುಲಾಬಿ ಚೆಂಡನ್ನು ಬಳಸಲಾಗುತ್ತಿದ್ದರೂ, ಕೆಂಪು ಚೆಂಡಿನ ಜೊತೆ ಅದಲು-ಬದಲಾಗಿ ಬಳಸುವ ನಿಯಮ ಈವರೆಗೆ ಇರಲಿಲ್ಲ. ಬಿಬಿಸಿ ವರದಿಯ ಪ್ರಕಾರ, ಈ ಹೊಸ ಪ್ರಯೋಗವನ್ನು ಐಸಿಸಿ ಇತ್ತೀಚೆಗೆ ಪ್ರಕಟಿಸಿದೆ.
ಈ ಹೊಸ ನಿಯಮದ ಪ್ರಕಾರ, ಮಂದಬೆಳಕಿನ ಸಂದರ್ಭದಲ್ಲಿ ಗುಲಾಬಿ ಚೆಂಡನ್ನು ಬಳಸಲು ಪಂದ್ಯವನ್ನಾಡುವ ಎರಡೂ ತಂಡಗಳು ಮೊದಲೇ ಒಪ್ಪಿಗೆ ಸೂಚಿಸುವುದು ಕಡ್ಡಾಯವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಲಾರ್ಡ್ಸ್‌ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ನಿಯಮ ಜಾರಿಯಲ್ಲಿರುವುದಿಲ್ಲ. ಈ ಪ್ರಯೋಗದ ರೂಪುರೇಷೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಐಸಿಸಿ ಜೊತೆ ಚರ್ಚೆ ನಡೆಸುತ್ತಿದೆ. ಫ್ಲಡ್‌ಲೈಟ್(ಕೃತಕ ಬೆಳಕು) ಸೌಲಭ್ಯವಿದ್ದರೂ ಕೇವಲ ಮಂದಬೆಳಕಿನ ಕಾರಣಕ್ಕಾಗಿ ಆಟ ನಿಲ್ಲಿಸುವುದು ಆಟಗಾರರು, ವೀಕ್ಷಕರು ಮತ್ತು ಪ್ರಸಾರಕರಿಗೆ ತೀವ್ರ ನಿರಾಸೆ ಮೂಡಿಸುತ್ತಿತ್ತು.
2024ರಲ್ಲಿ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಮಂದಬೆಳಕಿನಿಂದಾಗಿ ಮೊದಲ ದಿನದ ಅರ್ಧಕ್ಕೂ ಹೆಚ್ಚು ಆಟ ನಷ್ಟವಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಆಟವನ್ನು ಮುಂದುವರಿಸುವ ನಿಟ್ಟಿನಲ್ಲಿ ಐಸಿಸಿ ಈ ಪಿಂಕ್ ಬಾಲ್ ಬಳಕೆಯ ಪ್ರಯೋಗಕ್ಕೆ ಮುಂದಾಗಿದೆ. ಜೊತೆಗೆ, ಬೆಳಕಿನ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಲು ಎಂಸಿಸಿ ಜೊತೆಗೂ ಕೈಜೋಡಿಸಲಿದೆ.
ಇದನ್ನು ಓದಿದ್ದೀರಾ? BREAKING NEWS | ಈ ಬಾರಿಯೂ ‘ಕಪ್ ನಮ್ದೇ’ ಎಂದ ಆರ್‌ಸಿಬಿ: ಗುಜರಾತ್ ಮಣಿಸಿ ಸತತ 2ನೇ ಬಾರಿ IPL ಕಿರೀಟ
ಟೆಸ್ಟ್‌ನಲ್ಲಿ ಪಿಂಕ್ ಬಾಲ್ ಆಟದ ಇತಿಹಾಸವು 2015ರಲ್ಲಿ ಆರಂಭವಾಯಿತು. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮೊಟ್ಟಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್‌ನಲ್ಲಿ ಆಡಿಸಲಾಯಿತು. ಕೃತಕ ಬೆಳಕಿನಲ್ಲಿ ಕೆಂಪು ಚೆಂಡಿಗಿಂತ ಗುಲಾಬಿ ಚೆಂಡು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬ ಕಾರಣಕ್ಕೆ ಇದನ್ನು ಪರಿಚಯಿಸಲಾಯಿತು, ಮತ್ತು ಈಗ ಮಂದಬೆಳಕಿನ ಓವರ್‌ಗಳನ್ನು ಪೂರ್ಣಗೊಳಿಸಲೂ ಇದೇ ಕಾರಣಕ್ಕೆ ಬಳಸಲಾಗುತ್ತಿದೆ.
ಇದುವರೆಗೂ ಒಟ್ಟು 25 ಹಗಲು-ರಾತ್ರಿ ಪುರುಷರ ಟೆಸ್ಟ್ ಪಂದ್ಯಗಳನ್ನು ಆಡಿಸಲಾಗಿದೆ. ಇದರಲ್ಲಿ ಭಾರತ ಒಟ್ಟು 5 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ತವರಿನಲ್ಲಿ ನಡೆದ 3 ಪಂದ್ಯಗಳಲ್ಲಿ (ಬಾಂಗ್ಲಾದೇಶ, ಇಂಗ್ಲೆಂಡ್, ಶ್ರೀಲಂಕಾ ವಿರುದ್ಧ) ಭರ್ಜರಿ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಹಾಗೆಯೇ, ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾ ವಿರುದ್ಧ ಆಡಿದ ಏಕೈಕ ಪಿಂಕ್ ಬಾಲ್ ಪಂದ್ಯ ಡ್ರಾಗೊಂಡಿದೆ. ಇನ್ನುಳಿದಂತೆ, ಈ ಹಗಲು-ರಾತ್ರಿ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವು ಭಾರಿ ಪ್ರಾಬಲ್ಯ ಸಾಧಿಸಿದ್ದು, ತಾನಾಡಿದ 15 ಪಂದ್ಯಗಳ ಪೈಕಿ 14ರಲ್ಲಿ ಗೆದ್ದಿದೆ. ಮುಂದಿನ ವರ್ಷ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ 150ನೇ ವಾರ್ಷಿಕೋತ್ಸವದ ಟೆಸ್ಟ್ ಕೂಡ ಹಗಲು-ರಾತ್ರಿ ಪಂದ್ಯವಾಗಿರಲಿದೆ.
ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಬೋರ್ಡ್ ಸಭೆಯಲ್ಲಿ ಇತರ ಕೆಲವು ಮಹತ್ವದ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳ ‘ಡ್ರಿಂಕ್ಸ್ ಬ್ರೇಕ್’ ಸಮಯದಲ್ಲಿ ಮುಖ್ಯ ತರಬೇತುದಾರರು ಮೈದಾನಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಜೊತೆಗೆ, ವಿಶ್ವಾದ್ಯಂತ ಹೆಚ್ಚುತ್ತಿರುವ ಫ್ರಾಂಚೈಸಿ ಕ್ರಿಕೆಟ್‌ನಿಂದ ಉಂಟಾಗುತ್ತಿರುವ ಸವಾಲುಗಳನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲಾಗುತ್ತಿದೆ. ಗಂಭೀರ ನಿಯಮ ಉಲ್ಲಂಘನೆಗಾಗಿ ಕ್ರಿಕೆಟ್ ಕೆನಡಾದ ಐಸಿಸಿ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.





