ಗಲ್ಫ್ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆ ಮತ್ತು ವಿಮಾನ ಹಾರಾಟಗಳ ರದ್ದತಿಯಿಂದಾಗಿ ಕರ್ನಾಟಕದ ಮಾವು ವಲಯ ಈ ಬಾರಿ ಹೊಸ ಮಾರುಕಟ್ಟೆಗಳತ್ತ ಮುಖ ಮಾಡಿದೆ. ಸಾಂಪ್ರದಾಯಿಕ ಗಲ್ಫ್ ಮಾರುಕಟ್ಟೆಗಳಲ್ಲಿ ಎದುರಾಗಿರುವ ವ್ಯಾಪಾರ ಸಮಸ್ಯೆಗಳು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಬೆಳೆ ನಷ್ಟದ ನಡುವೆಯೂ, ಮಾವು ಬೆಳೆಗಾರರ ಕೈಹಿಡಿಯಲು ಸರ್ಕಾರವು ಅಮೆರಿಕ(US), ಬ್ರಿಟನ್(UK), ಆಸ್ಟ್ರೇಲಿಯಾ ಮತ್ತು ಯುರೋಪ್ ಮಾರುಕಟ್ಟೆಗಳ ಮೊರೆ ಹೋಗಿದೆ. ಈ ಬಾರಿ ರಾಜ್ಯದಿಂದ ಈಗಾಗಲೇ 183 ಟನ್‌ಗೂ ಅಧಿಕ ಮಾವನ್ನು ಈ ಪಾಶ್ಚಿಮಾತ್ಯ ದೇಶಗಳಿಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ.
ಈ ಐಷಾರಾಮಿ ಬ್ರ್ಯಾಂಡಿಂಗ್ ಮಾರುಕಟ್ಟೆಗಳಿಗೆ ಮಾವು ಪೂರೈಕೆ ಮಾಡಬೇಕಾದರೆ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ಯುರೋಪ್ ಮತ್ತು ಯುಕೆ ದೇಶಗಳಿಗೆ ರಫ್ತು ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದ್ದು, ಅಮೆರಿಕ ಹಾಗೂ ಆಸ್ಟ್ರೇಲಿಯಾ ದೇಶಗಳು ವಿಶೇಷ ಕೀಟ ಮುಕ್ತ ಪ್ರಕ್ರಿಯೆಯನ್ನು ಬಯಸುತ್ತವೆ. ಇದಕ್ಕಾಗಿ ಮಾವುಗಳನ್ನು ಪ್ಯಾಕ್ ಮಾಡಿದ ನಂತರ ವಿಶೇಷ ಕೇಂದ್ರಗಳಲ್ಲಿ ‘ಗಾಮಾ ವಿಕಿರಣ’ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಬಿ ಸಿ ಮುದ್ದು ಗಂಗಾಧರ್ ತಿಳಿಸಿರುವುದಾಗಿ ವರದಿಯಾಗಿದೆ.
“ಸದ್ಯ ಯುಕೆ ಮಾರುಕಟ್ಟೆಯಲ್ಲಿ ಮೆಕ್ಸಿಕೋ ಅಥವಾ ಚೀನಾದ ರುಚಿಯಿಲ್ಲದ ಮಾವುಗಳಿವೆ. ನಮ್ಮ ದೇಶದ ಅಲ್ಫಾನ್ಸೋ, ಮಲ್ಲಿಕಾ ಮತ್ತು ಕೇಸರ್ ತಳಿಗಳಿಗೆ ಅಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಯಿದೆ” ಎಂದು ಬಿ ಸಿ ಮುದ್ದು ಗಂಗಾಧರ್ ಹೇಳಿರುವುದನ್ನೂ ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಾವು ಬೆಳೆ ಗಣನೀಯ ಕುಸಿತ
ರಾಜ್ಯದಲ್ಲಿ ಈ ವರ್ಷ ಮಾವು ಉತ್ಪಾದನೆ ಕಳೆದ ವರ್ಷದ 12-14 ಲಕ್ಷ ಟನ್‌ಗಳಿಂದ 10-12 ಲಕ್ಷ ಟನ್‌ಗಳಿಗೆ ಕುಸಿದಿದೆ. ಆದಾಗ್ಯೂ, ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶವು 1,39,000 ಹೆಕ್ಟೇರ್‌ನಿಂದ 1,45,000 ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಇಬ್ರಾಹಿಂ ಮೈಗೂರ್ ಮಾಹಿತಿ ನೀಡಿದ್ದಾರೆ.
“ವಿಶೇಷವಾಗಿ ಕೊಪ್ಪಳದಲ್ಲಿ ಕೇಸರ್ ಮಾವು ಬೆಳೆ ಪ್ರದೇಶ 1,500 ರಿಂದ 2,500 ಹೆಕ್ಟೇರ್‌ಗೆ ವಿಸ್ತರಿಸಿದೆ. ಕೋಲಾರ ಮತ್ತು ರಾಮನಗರದಲ್ಲೂ ಮಾವಿನ ತೋಟಗಳು ಹೆಚ್ಚುತ್ತಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೋಲಾರ ಮತ್ತು ಚಿಕ್ಕಬಳ್ಳಾಪುರ(ರಾಜ್ಯದ ಶೇ.60ರಷ್ಟು ಮಾವು ಬೆಳೆಯುವ ಜಿಲ್ಲೆಗಳು) ಭಾಗದ ರೈತರಿಗಾಗಿ ಸರ್ಕಾರ ಉಚಿತ ಸ್ಟಾಲ್‌ಗಳನ್ನು ತೆರೆಯುತ್ತಿದೆ” ಎಂದು ಇಬ್ರಾಹಿಂ ಮೈಗೂರ್ ಹೇಳಿದ್ದಾರೆ.
“ರಫ್ತು ಸುಲಭಗೊಳಿಸಲು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಚಿಕ್ಕಬಳ್ಳಾಪುರದ ಮಡಿಕೆರೆ ಕೇಂದ್ರದಲ್ಲಿ ಈಗಾಗಲೇ 85 ಟನ್ ಮಾವಿನ ಹಣ್ಣುಗಳನ್ನು ರಫ್ತಿಗಾಗಿ ಸಂಸ್ಕರಿಸಲಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳಿಗೆ ಮಾವಿನ ಬಾರ್, ಪಲ್ಪ್ ಮತ್ತು ಉಪ್ಪಿನಕಾಯಿ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಭಾಗದ ರೈತರ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಚನ್ನಪಟ್ಟಣದ ಬೈರಪಟ್ಟಣದಲ್ಲಿ ಈ ವರ್ಷವೇ ನೂತನ ಪ್ಯಾಕಿಂಗ್ ಮತ್ತು ಸಂಸ್ಕರಣಾ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಭಾರತವು ಜಾಗತಿಕವಾಗಿ ಶೇ.45ರಷ್ಟು ಮಾವು ಉತ್ಪಾದಿಸುವ ಮೂಲಕ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದು, 2025ರ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನ ಪಡೆದಿದೆ” ಎಂದು ಮಾವು ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿಆರ್ ವೇದಮೂರ್ತಿ ತಿಳಿಸಿದ್ದಾರೆ.
“ಭಾರತದಲ್ಲಿ ಕಾನೂನು ವ್ಯವಸ್ಥೆ ಇದ್ದರೂ ಹಣ್ಣುಗಳು ಮತ್ತು ತರಕಾರಿಗಳಲ್ಲಿ ರಾಸಾಯನಿಕಗಳನ್ನು ಅನಿಯಂತ್ರಿತವಾಗಿ ಬಳಸುತ್ತಾರೆ. ಇದು ರಫ್ತು ಮಾಡುವ ಹಣ್ಣುಗಳ ಮೇಲೆಯೂ ಪರಿಣಾಮ ಬೀರಬಹುದು” ಎಂದು ಪತ್ರಕರ್ತ ರವೀಶ್ ಕುಮಾರ್ ಜಪಾನ್, ಭಾರತದ ಮಾವಿನ ಹಣ್ಣುಗಳ ಆಮದನ್ನು ನಿಷೇಧಿಸಿರುವ ಕುರಿತು ಹೇಳಿದ್ದಾರೆ
“ಔಷಧ ಕಂಪನಿಯೊಂದು ನಕಲಿ ಕೆಮ್ಮು ಸಿರಪ್ ರಫ್ತು ಮಾಡಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ ಇಂತಹ ಕಂಪೆನಿಗೆ ಮತ್ತೆ ವ್ಯಾಪಾರ ಮಾಡಲು ಅನುಮತಿ ನೀಡಲಾಗುತ್ತದೆ. ಆ ದೇಶದಲ್ಲಿ ವಂಚನೆಯೇ ವ್ಯವಸ್ಥೆಯಾಗಿದ್ದರೆ ಆಶ್ಚರ್ಯವೇನು? ಇಂತಹ ದೇಶದಿಂದ ಮಾವು ಅಥವಾ 100 ಗ್ರಾಂ ಅಕ್ಕಿ ತೆಗೆದುಕೊಳ್ಳುವಾಗಲೂ ಎಲ್ಲರೂ ಎಚ್ಚರಿಕೆಯಿಂದ ಇರುತ್ತಾರೆ” ಎಂದಿದ್ದಾರೆ.
“ಹಾಗಾಗಿ, ಜಪಾನ್ ಎಚ್ಚರಗೊಂಡಿದ್ದು, ಭಾರತದ ಮಾವುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರಾಕರಿಸಿದೆ. ಇದರಿಂದಾಗಿ ನಮ್ಮ ದೇಶದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರ ಕಷ್ಟದೊಂದಿಗೆ ಆಟವಾಡುವವರಿಗೆ ಇದು ವ್ಯತ್ಯಾಸವನ್ನು ಉಂಟುಮಾಡದಿರಬಹುದು. ಆದರೆ ಅಕ್ಕಿ ಮತ್ತು ಮಾವು ರಫ್ತಿಗೆ ರೋಗಗಳ ಸುದ್ದಿ ಭಾರತೀಯ ಕೃಷಿಗೆ ಒಳ್ಳೆಯ ಸುದ್ದಿಯಲ್ಲ. ಮಾವಿನ ಸುದ್ದಿ ಭಾರತದ ಸ್ವಂತ ಹಣ್ಣು-ತರಕಾರಿ ಪರಿಶೀಲನಾ ವ್ಯವಸ್ಥೆ ಎಷ್ಟು ಕೆಟ್ಟುಹೋಗಿದೆ ಎಂಬುದನ್ನು ಬಯಲು ಮಾಡಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿದ್ದೀರಾ? ಕೋಕೋ ಬೆಳೆ ರೈತರಿಗೆ ಲಾಭದಾಯಕವಾಗಿದೆ!
“ಮಾವು ಆಮದು ಮಾಡಿಕೊಳ್ಳುವ ಮುನ್ನ ಜಪಾನೀ ಅಧಿಕಾರಿ ಭಾರತಕ್ಕೆ ಬಂದು ಮಾವುಗಳನ್ನು ಸರಿಯಾಗಿ ತೊಳೆದಿದ್ದಾರೆಯೇ, ಪ್ಯಾಕ್ ಮಾಡಿದ್ದಾರೆಯೇ ಎಂದು ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ದೋಷ ಕಂಡುಬಂದಾಗ ಭಾರತದಿಂದ ಮಾವು ಆಮದು ನಿಷೇಧಿಸಲಾಗಿದೆ. ಇದಕ್ಕೂ ಮುಂಚೆಯೂ ಜಪಾನ್ 20 ವರ್ಷಗಳ ಹಿಂದೆ ಮಾವು ಖರೀದಿ ನಿಷೇಧಿಸಿತ್ತು. 2006ರಿಂದ ಮತ್ತೆ ಅಮದು ಪ್ರಾರಂಭವಾಗಿತ್ತು. ಈಗ 20 ವರ್ಷಗಳ ನಂತರ ಮತ್ತೆ ಕೆಲವು ಕಾಲ ಮಾವು ಆಮದನ್ನು ನಿಷೇಧಿಸಿದೆ” ಎಂದು ತಿಳಿಸಿದ್ದಾರೆ.





